Advertisement
ಒಂದನೇ ಇಶ್ಯು ಆಗೋತನಕ ಇಷ್ಟ ಒಂದ ಇಶ್ಯು: ಪ್ರಶಾಂತ ಆಡೂರ್ ಅಂಕಣ

ಒಂದನೇ ಇಶ್ಯು ಆಗೋತನಕ ಇಷ್ಟ ಒಂದ ಇಶ್ಯು: ಪ್ರಶಾಂತ ಆಡೂರ್ ಅಂಕಣ

ಮೊನ್ನೆ ಪೂಣಾದಿಂದ ನಮ್ಮ ಸುಮ್ಮಕ್ಕನ ಫೋನ್ ಬಂದಿತ್ತ ,ಅಗದಿ ಭಾಳ ಖುಶಿಲೇ ತನ್ನ ಹೊಸಾ ಸೊಸಿ ‘ಹಂಗ ಇದ್ದಾಳ, ಹಿಂಗ ಇದ್ದಾಳ’ ಅಂತ ಒಂದ ತಾಸ ನಮ್ಮವ್ವನ ಮುಂದ ತನ್ನ ಸೊಸಿನ್ನ ಹೊಗಳಿದ್ದ-ಹೊಗಳಿದ್ದ. ನಮ್ಮವ್ವ ಅಕಿ ಹೇಳಿದ್ದಕ್ಕೆಲ್ಲಾ ‘ಹೂಂ..ಹೂಂ…ಹೌದಿನ್ವಾ’, ’ಭಾಳ ಪುಣ್ಯಾ ಮಾಡಿ ತೊಗೊ’, ’ಭಾಳ ಛಲೋ ಸೊಸಿ ಸಿಕ್ಕಾಳ’ ಅಂತೇಲ್ಲಾ ಕೆಟ್ಟ ಮಾರಿಕೊಂಡ ತನ್ನ ಸೊಸಿ ಕಡೆ ಅಂದರ ನನ್ನ ಹೆಂಡತಿಕಡೆ ನೋಡ್ಕೋತ ಹೇಳಿದ್ಲು, ಆದ್ರ ಇಕಿ ಬಾಯಾಗ ಒಂದ ಸರತೆನೂ ಬಾಯಿ ತಪ್ಪಿ ‘ನನ್ನ ಸೊಸಿನೂ ಹಂಗ ಇದ್ದಾಳವಾ’ ಅಂತ ಮಾತ್ರ ಬರಲಿಲ್ಲ. ಅಲ್ಲಾ ನಮ್ಮವ್ವಗ ಸೊಸಿ ಬಂದ ಹನ್ನೇರಡ ವರ್ಷಾತ ಬಿಡರಿ, ಎಷ್ಟಂತ ನನ್ನ ಹೆಂಡತಿ ಛಲೋ ಇದ್ದರು ಹಂಗ ವರ್ಷಾನಗಟ್ಟಲೇ ಹೋಗಳಲಿಕ್ಕ ಆಗತದ, ಎಷ್ಟ ಅಂದ್ರೂ ಅಕಿದೂ ಹೆಣ್ಣ ಜೀವನ ಅಲಾ.

ಮುಂದ ಹಂಗ ನಮ್ಮವ್ವಂದ ಸುಮಕ್ಕನ ಜೊತಿ ಮಾತ ಮುಂದವರದ “ಮತ್ತೇನರ ವಿಶೇಷ ಅದ ಏನವಾ ನಿನ್ನ ಸೊಸಿದು?” ಅಂತ  ಕೇಳಿದ್ಲು,
“ಏ, ಇಷ್ಟಲಗೂ ಯಾಕವಾ, ಪಾಪ ಹುಡಗುರು, ಇನ್ನೊಂದ ಸ್ವಲ್ಪ ದಿವಸ ಫ್ರೀ ಆಗಿ ಅಡ್ಯಾಡಲಿ ಅಂತ ಬಿಟ್ಟೇನಿ” ಅಂತ ಸುಮ್ಮಕ್ಕಾ ಅಂದ್ಲು. ಪಾಪಾ ನಮ್ಮ ಸುಮಕ್ಕಂದರ ಇನ್ನೂ ಸಣ್ಣ ವಯಸ್ಸು, ದಿವಸಾ ಬೆಳಗಹರದರ ತಲಿಗೆ ಕರೆ ಬಣ್ಣ ಹಚಗೊಂಡ ಊರ ತುಂಬ ಅಡ್ಯಾಡತಾಳ, ಇನ್ನ ನಾಳೆ ಅಕಿಗೆ ಏನರ ಮೊಮ್ಮಕ್ಕಳ ಆಗಿ ಬಿಟ್ಟರ ಮುಗದ ಹೋತ, ಈಡಿ ಪೂಣಾದಾಗ ಅಗದಿ  ‘ಯಂಗೇಸ್ಟ’ ಅಜ್ಜಿ ಅಂದರ ಈಕಿನ ಆಗತಾಳ. ಬಹುಶಃ ಈಕಿಗೆ ಇಷ್ಟ ಲಗೂನ ಅಜ್ಜಿ ಆಗೋದ ಲೈಕ ಇರಲಿಕ್ಕಿಲ್ಲಾ ಅದಕ್ಕ ಪಾಪಾ ಹುಡಗರನ ಕೈ ಬಿಟ್ಟ ಆಡಲಿಕ್ಕೆ ಬಿಟ್ಟಾಳ ಅನಸ್ತು.

ಹಂಗ ನಮ್ಮ ಮಂದಿ ಒಳಗ ನೋಡ್ರಿ ಮದುವಿ ಆಗಿ ಒಂದ ೫-೬ ತಿಂಗಳ ಆಗೋದ ತಡಾ ಹೋದಲ್ಲೆ- ಬಂದಲ್ಲೆ ಜನಾ ಶುರು ಮಾಡೆಬಿಡ್ತಾರ, “ಏನವಾ, ಏನರ ವಿಶೇಷದ ಏನ? ” ಅಂತ ಹುಡಗಿಗೆ ” ಮತ್ತೇನಲೆ, ಗದ್ಲಾ ಹಾಕಿ ಇಲ್ಲೊ ..? ಅಂತ ಹುಡಗಗ,  ಕಡಿಕೆ  “ಏನ ನಿಮ್ಮ ಸೊಸಿದ ಏನರ ಹೊಸಾ ಸುದ್ದಿ ” ಅಂತ ಆ ಹುಡಗಿ ಅತ್ತಿಗೆ ಕೇಳಿಲಿಲ್ಲಾಂದ್ರ ಈ ಮಂದಿಗೆ ಸಮಾಧಾನನ ಇರಂಗಿಲ್ಲಾ.  ಮತ್ತ ಹಿಂಗ ಕೇಳೋದು ಒಮ್ಮೆ ಶುರು ಆತಂದ್ರ ನಾವು ಒಂದ ಹಡೆಯೋ ಮಟಾ ಮುಗಿಯಂಗಿಲ್ಲಾ, ನಾವು ಅವರದೆಲ್ಲಾ ಬಾಯಿ ಮುಚ್ಚಸಬೇಕಂದ್ರ  ಒಂದಂತೂ ಹಡಿಲೇ ಬೇಕು, ನಮಗ ಬ್ಯಾಡಾಗಿದ್ರು ಮನಿ ಮಂದಿ ಸಲುವಾಗಿ ಇಲ್ಲಾ, ಬಳಗದವರ ಸಲುವಾಗ್ಯರ ಹಡಿಬೇಕು. ಹಂಗ ಒಂದ ವರ್ಷ ತನಕ ನಾವು ಅದು-ಇದು  ಹೇಳ್ಕೋತ  ಮುಂದ ಹಾಕೋತ ಹೋದವಿ ಅಂದರ ಕೆಲವೂಬ್ಬರು ಅಂದರ ಅಧಿಕ ಪ್ರಸಂಗಿ ಇದ್ದವರು “ಅಲ್ಲಾ, ಯಾವುದರ ಡಾಕ್ಟರ್ ಗೇ ತೊರಿಸಿರೇನು?”  ಅಂತ ಕೇಳ್ತಾರ, ಏನ ಮಾಡ್ತರಿ? ಅವರಿಗೆ ಒಂದ ಹುಡಗನ ಗಂಡಸ್ತನದ ಮ್ಯಾಲೆ ಡೌಟ  ಇರತದ  ಇಲ್ಲಾ ಆ ಹುಡಗಿಗೆ ಏನರ ಸಮಸ್ಯೆ ಇರಬೇಕ ಅಂತ ಗ್ಯಾರಂಟಿ ಆಗಿರ್ತದ, ಹಂತಾವರಿಗೆ ಹಿಡದ  ನಾವು ಎಂಗೇಜಮೆಂಟ್ ಆಗಿ ಮರುದಿವಸದಿಂದ ತೊಗೊಳಿಕತ್ತಿದ್ದ ‘ಕಂಟ್ರಾಸೆಪ್ಟಿವ್’ ಗುಳಿಗಿದ ಪಾಕೆಟ ಅಷ್ಟೂ ತೋರಿಸಿ ಬಾಯಿಮುಚ್ಚಸೋದ ಛಲೋ, ಇಲ್ಲಾಂದರ ಆಮೇಲೆ ಅವರ ನಮ್ಮವ್ವನ ಹತ್ರ ಹೋಗಿ “ನಿಮ್ಮ ಸೊಸಿಗೆ ಯಾವುದರ ಛಲೋ ಡಾಕ್ಟರ್ ಗೆ ತೋರಸರೆ ನಮ್ಮವ್ವಾ, ಯಾಕೊ ಭಾಳ ದಿವಸ ಆತು” ಅಂತ ಕಿಡ್ಡಿ ಮಾಡಿ ನಮ್ಮ ಅವ್ವನ ತಲ್ಯಾಗ ಏನರ ತುಂಬಿ ಹೋಗ್ತಾರ.

ಒಮ್ಮೆ ನಾವು ‘ಆತ ಒಂದ ಅಂತೂ ಹಡದ ಬಿಡೋಣ, ಅವನೌನ ಈ ಮಂದಿದು, ಮನ್ಯಾಗಿನವರದು ಎಲ್ಲಾ ಭಾಳ ಆತ’ ಅಂತ ಡಿಸೈಡ ಮಾಡಿದವಿ ಅಂತ ಇಟ್ಕೋರಿ. ಅವಾಗೇನ ಅದು ಇಮ್ಮಿಡಿಯೇಟ ಆಗ್ತದ, ಇಲ್ಲಾ….. ಹಂಗ ಸರಳ ಆಗೋ ಹಂಗ ಇತ್ತಂದರ ಇಷ್ಟ್ಯಾಕ ನಮಗ ಮಂದಿ ಕೈ ತೊಳ್ಕೊಂಡ ಬೆನ್ನಹತ್ತತಿದ್ದರು? ನಾ ಖರೆ ಹೇಳ್ತೇನಿ ಅವಾಗ ನೋಡ್ರಿ ನಮಗ ಅಂದರ ಹೊಸದಾಗಿ ಲಗ್ನ ಆದವರಿಗೆ ಟೆನ್ಶನ್ ಶುರು ಆಗೋದ.  ನಾವು ಒಂದ ಇಶ್ಯು ಆಗಿ ಬಿಡ್ಲಿ ಅಂತ ಡಿಸೈಡ ಮಾಡಿರತೇವಿ, ಅದ ನೋಡಿದ್ರ ಆಗ್ತಿರಂಗಿಲ್ಲಾ ಮತ್ತ ಹೋದಲ್ಲೆ -ಬಂದಲ್ಲೆ ಜನಾ ಎಲ್ಲಾ
“ಮತ್ತೇನಪಾ, ಯಾವಾಗ ಮರಿ ಹಾಕೊಂವಾ?” ಅಂತ ಪ್ರಶ್ನೆ ಕೇಳ್ತಾರ, ಅವಾಗಂತೂ ನಮ್ಮ ಬಿ. ಪಿ ಏರಲಿಕ್ಕ ಶುರು ಆಗ್ತದ, ಮೊದ್ಲ ಆದ್ರ ‘ನಾವ ಇಷ್ಟ ಲಗೂ ಯಾಕ ಅಂತ ಬಿಟ್ಟೇವಿ’, ’ನಾವು ಪ್ಲ್ಯಾನಿಂಗ್ ಮಾಡಲಿಕತ್ತೇವಿ’ ಹಂಗ -ಹಿಂಗ ಅಂತೆಲ್ಲಾ ಹೇಳ್ತಿದ್ವಿ. ಈಗ ಹಂಗ ಹೇಳಲಿಕ್ಕೂ ಸರಿ ಹೋಗಂಗಿಲ್ಲಾ, ಹಡದ ತೋರಿಸಲಿಕ್ಕೂ ಆಗವಲ್ತು, ಅದರಾಗ ಯಾರರ ‘ಡಾಕ್ಟರ್ ಗೆ ತೋರಿಸಿ ನೋಡ್ರಿ’ ಅಂದಾಗ ಖರೇನ ಒಂದ ಸರತೆ ತೋರಸಬೇಕಿನಪಾ, ಹಂಗ ತೋರಸs ಬೇಕಂದ್ರ ನನ್ನ ಮೊದ್ಲ ತೋರಸಬೇಕೋ ಇಲ್ಲಾ  ನನ್ನ ಹೆಂಡತಿನ ಮೊದ್ಲ ತೋರಸಬೇಕೊ, ಏನ ಇಬ್ಬರು ಒಮ್ಮೆ ಹೋಗಿ ತೊರಸಬೇಕೋ? ಅಂತ ವಿಚಾರ ಶುರು ಆಗ್ತದ. ಅಲ್ಲಾ ಅದ ಏನ ನಾವ ಹೂಂ ಅಂದ ಕೊಡಲೇನ ಆಗೋದ? ಎಲ್ಲಾದಕ್ಕೂ ಕಾಲ ಕೂಡಿ ಬರಬೇಕರಿಪಾ. ಹಂಗ ಏಳರಾಗ ಹುಟ್ಟಿದವರಗತೆ ಮಾಡಿದರ ಮಕ್ಕಳ ಹುಟ್ಟಬೇಕಲಾ?

ಆದ್ರ ಒಂದ ಅಂತೂ ಖರೆ, ಒಂದ ಇಶ್ಯು ಆಗೊಮಟಾ ಈಡಿ ಮನಿಮಂದಿ, ಬಂಧು – ಬಳಗಾ ಎಲ್ಲಾ ಹೆಂತಾ ದೊಡ್ಡ ಇಶ್ಯು ಮಾಡ್ತರಲಾ, ಇವರ ಸಂಬಂಧ  ಸಾಕ-ಸಾಕಾಗಿ ಹೋಗ್ತದ.  ಮನ್ಯಾಗ ಏನ ಸಣ್ಣ ಪುಟ್ಟ ಕಾರ್ಯಕ್ರಮ, ದೇವರು ದಿಂಡ್ರು ಇದ್ದಾಗ ನಮಸ್ಕಾರ ಮಾಡೋ ಹಂಗ ಇಲ್ಲಾ. ಅಡ್ಡ ಬಿದ್ದಕೂಡಲೇನ “ಅಷ್ಟ ಪುತ್ರ ಸೌಭಾಗ್ಯವತಿ ಭವ” ಅಂತ ನಮ್ಮ ಹೆಂಡತಿಗೆ, “ಗಂಡಸ ಮಗನ ತಂದೆ ಆಗ, ಭಾಗ್ಯವಂತ ಆಗ” ಅಂತ ನಮಗ ಪುಗಶೆಟ್ಟೆ ಆರ್ಶೀವಾದ ಮಾಡೆ ಬಿಡತಾರ, ಇಲ್ಲೇ ನಮಗ ಒಂದ ಹಡಿಯೋದ್ರಾಗ ಕುರಿ-ಕೋಣ ಬಿದ್ದಿರತದ ಇವರ ಎಂಟ ಮಕ್ಕಳಾಗಲಿ ಅಂತ ಆಶೀರ್ವಾದ ಮಾಡ್ತಾರ, ಅಲ್ಲಾ ಹಂಗ ಇವರ ಆರ್ಶೀವಾದ ಮಾಡಿದರ ಮಾಕ್ಕಳಾಗೋದ ಇತ್ತಂದ್ರ ಇಷ್ಟ್ಯಾಕ ಆಗ್ತಿತ್ತ ಬಿಡ್ರಿ.

ಅಕಸ್ಮಾತ ನಮಗ ಮಕ್ಕಳಾಗೋದು ನಮ್ಮ ಹೆಂಡತಿಗೂ ಮನಸ್ಸಿಲ್ಲಾ, ಆದ್ರ ನಾವ ಏನೋ ಊರ ಮಂದಿ ಕಾಟಕ್ಕ  ಇಲ್ಲಾ ನಮ್ಮವ್ವನ ಕಾಟಕ್ಕ ಒಂದ ಹಡಿಬೇಕು ಅಂತಿರತೇವಿ ಅಂತ ಅನ್ಕೋರ್ರಿ ಆವಾಗ ನಮ್ಮ ಹೆಂಡತಿದ ಒಂದ ಇಶ್ಯು ಶುರು ಆಗತದ. “ನಮಗ ಇಷ್ಟ ಲಗೂ ಇಶ್ಯೂ ಬ್ಯಾಡ ಮತ್ತ, ನೀನ ನಿಮ್ಮವ್ವಗ ಹೇಳಿ ಬಿಡ, ಅವರ ನಾ ನಮಸ್ಕಾರ ಮಾಡಿದಾಗೊಮ್ಮೆ, ಗಂಡಸ ಮಗನ ತಾಯಿ ಆಗವಾ ಅಂತ ಆಶೀರ್ವಾದ ಮಾಡ್ತಾರ” ಅಂತ  ಅಕಿ ಅನ್ನೋದ
“ಏ ಅಕಿ ಆಶೀರ್ವಾದ ಮಾಡಿದರ ಏನಾತು, ಅದಕ್ಕೇನ  ಮಕ್ಕಳಾಗತಾವ ಏನ, ನಾ ಮನಸ್ಸ ಮಾಡಬೇಕೊ ಬ್ಯಾಡೋ?” ಅಂತ ನಾವ ಅಂದ, ಪಾಪಾ ನಮ್ಮವ್ವನ ಆಶಾಕ್ಕಾ ನೀರ ಹಾಕತೇವಿ. ಹಂಗ ಖರೆ ನಮಗೂ ಬೇಕಾಗೇದ ಅಂತ ನಾವು ಹೆಂಡತಿ ಮುಂದ ಹೇಳೋ ಧೈರ್ಯ ಮಾಡಂಗಿಲ್ಲಾ. ಅಲ್ಲಾ ಅಲ್ಟಿಮೇಟಲಿ ಹಡಿಯೋಕಿ ಅಕಿನ ಅಲಾ, ಅಕಿ ನಮಗ ಗೊತ್ತಾಗಲಾರದ ವಾರಕ್ಕ  ಮೂರ ಸಲಾ ಪಪ್ಪಾಯಿ ಹಣ್ಣ ತಿಂದ ಬಿಟ್ಟರ ನಾವ ಎಷ್ಟ ಗುದ್ದಾಡಿದರರ ಏನ? ನಮ್ಮವ್ವ-ನಮ್ಮಜ್ಜಿ ಇಷ್ಟ ಏನ ಸಾಕ್ಷಾತ ಸಂತಾನ ಗೋಪಾಲಕೃಷ್ಣನ ವರಾ ಕೊಟ್ರು ಮಕ್ಕಳಾಗಂಗಿಲ್ಲಾ.  ಹಂಗ ಖರೇ ನಮ್ಮ ಕಡೆ ದಮ್ ಇದ್ದರ ನಾವು  “ನೋಡು, ತಡಾ ಮಾಡೋದ ಬ್ಯಾಡಾ.  ನಿನಗೂ ವಯಸ್ಸಾಗಲಿಕತ್ತದ, ನಮ್ಮವ್ವಗೂ ವಯಸ್ಸಾಗೇದ ಅಕಿ ತಾ ಇರೋದರಾಗ ಮೊಮ್ಮಕ್ಕಳ ಜೊತಿ ಒಂದ ಸ್ವಲ್ಪ ಆಡಲಿ, ಮೊದ್ಲ ಒಂದ ಹಡದ ಬಿಡೋಣ ಮುಂದ ಗಟ್ಟಿ ಇದ್ದರ ಎರಡನೇದ ಆಮೇಲೆ ವಿಚಾರ ಮಾಡಿದ್ರಾತು” ಅಂತ ಹೇಳಿ ಕನ್ವಿನ್ಸ ಮಾಡಿ, ಇಲ್ಲಾ ಜೋರ ಮಾಡಿ ಹೇಳೋ ಧೈರ್ಯ ನಮ್ಮ ಒಳಗ ಇರಬೇಕು. ಆವಾಗ ನಾವ ಖರೆ ಗಂಡಸರು. ಅದ ಗಂಡಸತನ ಮುಂದ ನಾವು ಹಡದನೂ ಪ್ರೂವ್ ಮಾಡಬೇಕ ಆ ಮಾತ ಬ್ಯಾರೆ.

ಹಂಗ ಮುಂದ ಒಂದ ಸರತೆ ನಮ್ಮವ್ವನ  ಆಶೀರ್ವಾದದಿಂದನೊ, ಇಲ್ಲಾ ಸಂತಾನ ಗೋಪಾಲಕೃಷ್ಣನ ವರದಿಂದನೊ  ಅಥವಾ ನಮ್ಮ ಪ್ರಮಾಣಿಕ ಪ್ರಯತ್ನದಿಂದನೊ ಹೆಂಡತಿ ಕೃಪಾ ಕಟಾಕ್ಷಕ್ಕ ಒಳಗಾಗಿ, ಅಕಿ ಸಮ್ಮತಿ, ಸಹಕಾರದಿಂದ ಒಂದ ಕೂಸ ಆತಂದರ ಮುಗದ ಹೋತ, ನಮ್ಮ ಹೆಂಡತಿನ ನಾವ ಅರ್ಧಕ್ಕ ಅರ್ಧಾ ಜೀವನ ಪರ್ಯಂತ ಮುಂದ ಕಳ್ಕೊಂಡಗ ಮತ್ತ, ಹೆಂಡತಿ ಅನ್ನೋಕಿ ತಾಯಿ ಆದ ಮೇಲೆ, ಗಂಡ ಅನ್ನೋವ ತಂದೆ ಆದ ಮೇಲೆ ಬದಲಾಗೋದಕ್ಕಿಂತ ಜಾಸ್ತಿ ಬದಲಾಗ್ತಾಳ ನೆನಪಿಡ್ರಿ. ಮಕ್ಕಳಾದ ಮೇಲೆ ಸಂಸಾರ ಬ್ಯಾರೆ ಟ್ರ್ಯಾಕ ಮೇಲೆ ಹೊರಡತದ. ಒಮ್ಮೆ ಒಂದ ಆತಲಾ ಎಲ್ಲಾ ಬಳಗದವರು ಬಾಯಿ ಮುಚ್ಚಿ ಬಿಡತಾರ. ಆ ಹುಟ್ಟಿದ್ದ ಕೂಸ ಒಂದ ಮುಂದ ೨೪ ತಾಸೂ ’ಹೊ…..’ ಅಂತ ಬಾಯಿ ತೆಗೆಯೋದ. ಮನ್ಯಾಗ – ಮಂದಿಗೆ ಇಷ್ಟ ದಿವಸ ಇದ್ದ ಒಂದ ದೊಡ್ಡ ಇಶ್ಯು ಕ್ಲೊಸ ಆದಂಗ. ಆದ್ರ ಹಡದವರಿಗೆ ಹೊಸಾ ಇಶ್ಯು ಶುರು ಆಗ್ತದ ಆ ಮಾತ ಬ್ಯಾರೆ.

ಈಗ ಲಗ್ನಾಗಿ ನಾ ಹನ್ನೇರಡ ವರ್ಷ ಆದಮ್ಯಾಲೆ ಎರಡ ಹಡದ, ಹೆಂಡತಿದ ಆಪರೇಶನ್ ಮಾಡಿಸಿ ಮಂದಿಗೆ ಒಂದನೇದ ಹಡಿಯೋದನ್ನ ಒಂದ ಇಶ್ಯು ಮಾಡಿ ಹೇಳೋದ ಏನ ದೊಡ್ಡಿಸ್ತನಾ ಅಂತ ಅನ್ಕೋಬ್ಯಾಡರಿ. ನಾ ಖರೆ ಹೇಳ್ತೇನಿ ಒಂದನೇದ ಆಗೋತನಕ ಮನ್ಯಾಗ ಇದ  ಒಂದ ದೊಡ್ಡ ಇಶ್ಯುನ.

ನಾ ಹಡಿಬೇಕಾರ, ಅಂದ್ರ ನನ್ನ ಹೆಂಡತಿ ಹಡಿಬೇಕಾರ, ನಾ ಮಂದಿ ಸಂಬಂಧ ಹಡಿಬೇಕೋ, ಇಲ್ಲಾ ನಮ್ಮ ಅವ್ವ-ಅಪ್ಪನ ಸಂಬಂಧ ಹಡಿಬೇಕೋ, ಇಲ್ಲಾ ಖರೇನ ನಮಗ ಬೇಕ ಅಂತ ಹಡಿಬೇಕೂ ಅನ್ನೊದ ಒಂದ ದೊಡ್ಡ ಕನಫ್ಯೂಸನ್ ಆಗಿತ್ತ. ಅಲ್ಲಾ ಹಂಗ ನಾ ಯಾರ ಮಾತು ಕೇಳಂಗಿಲ್ಲಾ ನನಗ ತಲ್ಯಾಗ ತಿಳದಿದ್ದ ಮಾಡೊಂವಾ ಆ ಮಾತ ಬ್ಯಾರೆ, ಆದ್ರು ಈ ಸಮಸ್ಯೆ ಎಲ್ಲಾ ಹೊಸದಾಗಿ ಮದುವಿ ಆದವರಿಗೆ  ಕಾಡೋದ ಅಂತೂ ಖರೆ. ಆದ್ರ ನಾ ಇದರ ಬಗ್ಗೆ ಭಾಳ ತಲಿ ಕೆಡಿಸಿ ಕೊಂಡಿದ್ದಿಲ್ಲಾ, ಆದಾಗ ಆಗ್ಲಿ ಊರ ಮಂದಿದ ಏನ ಅಂತ ಸುಮ್ಮನ ಬಿಟ್ಟಿದ್ದೆ, ಅದರಾಗ ನಮ್ಮ ದೋಸ್ತನ ಹೆಂಡತಿ ಒಬ್ಬೋಕಿ ಒಂದ ಸರತೆ, ‘ನೀವು, ನಿಮ್ಮ ಹೆಂಡತಿಗೆ ಸುಟ್ಟು-ಸುಡಗಾಡ ಗುಳಿಗೆ ಕೊಡ್ಲಿಕ್ಕೆ ಹೋಗಬ್ಯಾಡರಿ, ಆಮ್ಯಾಲೆ ಖರೇನ ನಿಮಗ ಬೇಕು ಅಂದಾಗ ಮಕ್ಕಳ ಆಗೋದ ಭಾಳ ತ್ರಾಸ ಆಗತದ, ದೇವರ ಇಚ್ಚೆ ಇದ್ದಾಗ ಆಗವಲ್ತಾಕ’ ಅಂತ ಹೆದರಿಸಿ ಬಿಟ್ಲು. ತೊಗೊ ಅವತ್ತಿನಿಂದ ನನ್ನ ಹೆಂಡತಿಗೆ “ರ್ರಿ, ನಾ ನಿನ್ನೆ ರಾತ್ರಿ ಗುಳಗಿ ತೊಗೊಳೊದ ಮರತ ಬಿಟ್ಟೇರಿ” ಅನ್ನೋದ ತಪ್ಪತು. ಅಲ್ಲಾ ಹಂಗ ವಾರದಾಗ ಅಕಿ ಮೂರ ಸರತೆ ಗುಳಗಿ ತೊಗೊಳೊದು ಮರತರು ಅಕಿ ‘ಡೇಟ್ ‘ ಮಾತ್ರ ತಿಂಗಳಿಗೆ ಒಮ್ಮೆ ಮರಿತಿದ್ದಿದ್ದಿಲ್ಲಾ ಆ ಮಾತ ಬ್ಯಾರೆ. ಆದ್ರೂ ಸುಳ್ಳ ಯಾಕ ರಿಸ್ಕ ಅಂತ ನಾನೂ ಭಾಳ ತಲಿ ಕೆಡಿಸಿಕೊಳ್ಳಲಾರದ, ಗುಳಗಿಗೆ ರೊಕ್ಕಾ ಹಾಕೋದ ಬಂದ ಮಾಡಿ ನನ್ನ ಪ್ರಯತ್ನ ಚಾಲು ಇಟ್ಟೆ, ಮುಂದ ಪ್ರತಿ ತಿಂಗಳ ಇಕಿದ ಏನರ ‘ಡೇಟ್’ ಒಂದೇರಡ ದಿವಸ ಮುಂದ ಹೋದರ ಸಾಕ ಟೆನ್ಶನ್ ಶುರು ಆಗೆ ಬಿಡ್ತಿತ್ತ. ಕಡಿಕೆ ಒಂದ ಸರತೆ ಕನಫರ್ಮ್ ಆಗಿ ಮುಂದ ಗಂಡಸ ಮಗನ ತಂದೆ ಆಗೋದರಾಗ  ಮದುವಿ ಆಗಿ ಎರಡ ವರ್ಷ ಆಗಿತ್ತ. ಹಂಗ ಎಂಗೇಜಮೆಂಟ ಡೇಟ್ ಇಲ್ಲಾ ನಾ ಕನ್ಯಾ ಹೂಂ ಅಂದಿದ್ದ ಡೇಟ್ ಹಿಡದ್ರ ಮೂರ – ಮೂರವರಿ ವರ್ಷನ ಅನ್ನರಿ.

ಆದ್ರೂ ನನಗೂ  ನಂದು ಅಂತ ಒಂದ ಆತು. ಏನೋ ಜೀವನದಾಗ ಒಂದ ದೊಡ್ಡ ಸಾಧನೆ ಮಾಡಿದಂಗ ಆತು ಅನಸ್ತು. ಆದರ ಒಮ್ಮೆ ಹಂಗ ವಿಚಾರ ಮಾಡಿದ್ರ ಇದು ಖರೇನ ಒಂದ ಸಾಧನೆನ ಅನಸ್ತದ. ಹಂಗ ಅಷ್ಟ ಸರಳ ಆಗೋ ಹಂಗ ಇದ್ದರ ಇದಕ್ಯಾಕ ಎಲ್ಲಾರು ಒಂದ ದೊಡ್ಡ ಇಶ್ಯು ಮಾಡತಿದ್ದರು  ಹೌದಿಲ್ಲೋ?

ಅದಕ್ಕ ನೀವ ಯಾರರ ಒಂದನೇದಕ್ಕ ಇನ್ನೂ ಮೀನಾ-ಮೇಷ ಮಾಡಲಿಕತ್ತಿದ್ದರ ಭಾಳ ವಿಚಾರ ಮಾಡಲಿಕ್ಕೆ ಹೋಗಬ್ಯಾಡರಿ, ಒಂದ ಹಡದ ಬಿಡ್ರಿ. ಅದೇನ ಹಂಗ ನೀವ ‘ಹೂಂ’ಅಂದಕೂಡಲೇನ ಆಗೋದು ಅಲ್ಲಾ, ನಿಮ್ಮ ಪ್ರಯತ್ನ ನೀವ ಮಾಡರಿ, ಮುಂದಿದ್ದ ಸಂತಾನ ಗೋಪಾಲಕೃಷ್ಣನ ಇಚ್ಚೆ. ಇಲ್ಲಾ ಅಂದ್ರ ಈ ಮಂದಿ ಇದನ್ನ ಒಂದ ಇಶ್ಯು ಮಾಡ್ತಾರ.

About The Author

ಪ್ರಶಾಂತ ಆಡೂರ

ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ