Advertisement
ಮನಕೆ ಮನೋಹರ ವಿ ಮನೋಹರ್

ಮನಕೆ ಮನೋಹರ ವಿ ಮನೋಹರ್

‘ಮನು ಅಣ್ಣ, ನಾನು …., ಒಂದು ಫಿಲ್ಮ್ ಮಾಡ್ತಿದೀನಿ, ಮ್ಯೂಸಿಕ್ ಡೈರಕ್ಟ್ರು… ಯಾರಿದ್ರೆ ಒಳ್ಳೇದು’ ಎಂದರು ಈ ಕಡೆಯಿಂದ.
‘ಒಳ್ಳೆದಾಗಲಿ, ಮಾಡಿ, ಇವತ್ತಿಗೆ… ಹರಿಕೃಷ್ಣ ಆಗಬಹುದು’ ಅಂದರು ವಿ.ಮನೋಹರ್ ಅತ್ತ ಕಡೆಯಿಂದ.

ಫಿಲ್ಮ್ ಮಾಡುತ್ತಿದ್ದವರು ರೇಖಾರಾಣಿ. ವಿ.ಮನೋಹರ್ ಲಂಕೇಶರ ಪತ್ರಿಕೆಗೆ ‘ಟಿ’ ಮರಿ ಎಂಬ ಪಾಕೆಟ್ ಕಾರ್ಟೂನ್ ಮಾಡುತ್ತಿದ್ದ ಕಾಲದಿಂದ, ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಹತ್ತಿರದ ಪರಿಚಯದ ಒಳ್ಳೆಯ ಸ್ನೇಹಿತರು. ಫಿಲ್ಮ್ ಮಾಡುತ್ತಿದ್ದ ರೇಖಾರಾಣಿಯವರಿಗೆ, ‘ಗೊತ್ತಿರುವ ನಮ್ಮ ವಿ.ಮನೋಹರ್ರೇ ಇದ್ದಾರಲ್ಲ, ಅವರೇ ಆಗಬಹುದಲ್ಲ’ ಎಂದು ಅನ್ನಿಸಲಿಲ್ಲ. ‘ಮ್ಯೂಸಿಕ್ ಡೈರೆಕ್ಟ್ರು ನಾನೇ ಇರುವಾಗ, ನನ್ನನ್ನು ಬಿಟ್ಟು, ಬೇರೆಯವರ ಬಗ್ಗೆ ನನ್ನನ್ನೇ ಕೇಳ್ತಾರಲ್ಲ’ ಎಂದು ವಿ.ಮನೋಹರ್‌ಗೂ ಅನ್ನಿಸಲಿಲ್ಲ. ಅವರು ಕೇಳಿದರು ಮನೋಹರ್ ಹೇಳಿದರು. ಮನೋಹರ್ ಅಂದರೆ ಹೀಗೆಯೇ… ಇದನ್ನು ಯಾವ ಪದ ಬಳಸಿ ಹೇಳುವುದು. ಎಂತಹ ಪದ ಬಳಸಿದರೂ ಮನೋಹರ್‌ರ ಮಗು ನಗುವಿನ ಮುಂದೆ ಮಂಕಾಗಿಹೋಗುತ್ತದೆ.

ತಿಪಟೂರಿನ ಕವಿ ಎನ್.ಕೆ.ಹನುಮಂತಯ್ಯ ಮತ್ತು ಶೈಲಜಾ ಪ್ರೀತಿಸಿ ಮದುವೆಯಾದರು. ಅಂತರ್ಜಾತಿ ವಿವಾಹವಾದ್ದರಿಂದ, ಹ್ಯಾಂಡ್ಲು ಮಾಡುವುದು ಸ್ವಲ್ಪ ಕಷ್ಟ ಅನ್ನಿಸಿದಾಗ, ಸ್ನೇಹಿತರೆಲ್ಲ ಸೇರಿ ಅವರಿಬ್ಬರನ್ನು ಮೈಸೂರಿನ ಸ್ವಾಮಿ ಆನಂದ್ ಮನೆಗೆ ಕಳುಹಿಸಿದರು. ತಾಯಿಪ್ರೀತಿಯ ಆನಂದ್ ಅವರನ್ನು ತಿಂಗಳುಗಟ್ಟಲೆ ಇಟ್ಟುಕೊಂಡು ನೋಡಿಕೊಂಡರು. ಅದಾದ ಕೆಲವು ವರ್ಷಗಳ ನಂತರ ಎನ್.ಕೆ.ಹನುಮಂತಯ್ಯ, ತಮ್ಮ ಒಂದು ಕವನ ಸಂಕಲನವನ್ನು ಪ್ರಕಟಿಸಿದರು. ಅದನ್ನು ಗೆಳೆಯ ಸ್ವಾಮಿ ಆನಂದ್‌ಗೆ ಅರ್ಪಿಸಿದರು. ಆನಂದನ ಪ್ರೀತಿಯನ್ನು ಎನ್‌ಕೆ ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಲಿಸಿದ್ದರು. ಅದು ನಿಜಕ್ಕೂ ಅದ್ಭುತ ರೂಪಕ. ಅಪರೂಪದ ತಾಣ ರಂಗನತಿಟ್ಟುವಿಗೆ ಪ್ರಪಂಚದ ಮೂಲೆಮೂಲೆಗಳಿಂದ ಬರುವ ಹಕ್ಕಿಗಳು, ತಮ್ಮ ಜೀವಿತದ ಅವಿಸ್ಮರಣೀಯ ಬೆಚ್ಚನೆ ಗಳಿಗೆಯಲ್ಲಿ ಮಿಂದೆದ್ದು, ಮರಿಗಳನ್ನು ಮಾಡಿಕೊಂಡು ಮತ್ತೆ ಸ್ವಸ್ಥಾನಕ್ಕೆ ಮರಳುತ್ತವೆ.

ಮನೋಹರರ ಬೆಂಗಳೂರು ಮನೆಯನ್ನು ನೋಡಿದಾಗಲೂ ನನಗೆ ಅದೇ ಅನುಭವವಾಗುತಿತ್ತು. ಮನೋಹರ್ ಮನೆ ಕೂಡ ರಂಗನತಿಟ್ಟು ಪಕ್ಷಿಧಾಮದಂತಹ ಸ್ಥಳವೇ ಆಗಿತ್ತು. ಆ ಮನೆಯಲ್ಲೂ ಅದೆಷ್ಟೋ ವಿಟ್ಲದ ಹುಡುಗರು, ದ.ಕ. ಮೂಲದ ಹಕ್ಕಿಗಳು ವರ್ಷಗಟ್ಟಲೆ ಇದ್ದು, ರೆಕ್ಕೆ ಬಲಿತ ನಂತರ ತಿಂದುಂಡು ಹಿಕ್ಕೆ ಹಾಕಿ ಹೋಗಿದ್ದುಂಟು. ಇಷ್ಟಾದರೂ ಮನೋಹರರ ಮನಸ್ಸಿನಲ್ಲಿ ಕಹಿ ಭಾವವಿಲ್ಲ, ಮುಖದಲ್ಲಿನ ಮಂದಹಾಸ ಮರೆಯಾಗಿಲ್ಲ.

ಕಾಶೀನಾಥ್‌ರ ‘ಅನುಭವ’ ಚಿತ್ರಕ್ಕೆ ‘ಹೋದೆಯ ದೂರ ಓ ಜೊತೆಗಾರ, ನಾ ಸೇರಲು ಬಂದಾಗ…’ ಎಂಬ ಅರ್ಥಪೂರ್ಣ ಹಾಡು ಬರೆಯುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದ ಊರಿದ ಮನೋಹರ್, ಉಪೇಂದ್ರರ ‘ತರ್ಲೆ ನನ್ಮಗ’ ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶಕರಾಗಿ ರೂಪಾಂತರ ಪಡೆದರು. ಅಲ್ಲಿಂದ ಇಲ್ಲಿಯವರೆಗೆ, ‘ತರ್ಲೆ ನನ್ಮಗ’ದಿಂದ ‘ನೀನ್ಯಾರೆ’ ಚಿತ್ರದವರೆಗೆ, ಅಂದರೆ ೧೫ ವರ್ಷಗಳ ಸುದೀರ್ಘ ಪಯಣದಲ್ಲಿ ಮಹೋಹರ್ ೧೦೦ ಚಿತ್ರಗಳಿಗೆ ಸಂಗೀತ ನೀಡಿ ದಾಖಲೆಯ ಪುಟ ಸೇರಿದ್ದಾರೆ. ಒಂದು ಚಿತ್ರಕ್ಕೆ ಕನಿಷ್ಠ ೧ ಲಕ್ಷ ಸಂಭಾವನೆ ಎಂದಿದ್ದರೂ, ೧೦೦ ಚಿತ್ರಗಳಿಗೆ ೧೦೦ ಲಕ್ಷ, ಅಂದರೆ ೧ ಕೋಟಿ ಹಣ ಇವತ್ತು ಮನೋಹರ್ ಹತ್ತಿರ ಇರಬೇಕಾಗಿತ್ತು. ಆದರೆ, ಇವತ್ತಿಗೂ ಮನೋಹರ್ ಬಾಡಿಗೆ ಮನೆಯಲ್ಲಿಯೇ ಬದುಕುತ್ತಿದ್ದಾರೆ. ಕನ್ನಡ ಚಿತ್ರರಂಗ ಮನೋಹರರ ಮಗುವಿನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಬಂದಿದೆ. ಮನೋಹರ್ ಕೂಡ ಮತ್ತೊಂದು ಮೋಸಕ್ಕೆ ಸಿದ್ಧರಾಗಿ ನಿಂತೇ ಇದ್ದಾರೆ.

ಹಾಲಿವುಡ್ ಚಿತ್ರ ಜಗತ್ತಿನಲ್ಲಿ ಒಬ್ಬ ತಂತ್ರಜ್ಞ, ಕಲಾವಿದ ಒಂದು ಚಿತ್ರದಲ್ಲಿ ಪಾಲ್ಗೊಂಡರೆ, ಆ ಚಿತ್ರ ಹಿಟ್ ಆದರೆ, ಆ ಚಿತ್ರ ನಡೆದಷ್ಟು ದಿನವೂ ಆ ತಂತ್ರಜ್ಞ-ಕಲಾವಿದನಿಗೆ ಲಾಭಂಶದ ಪಾಲು ಸಂದಾಯವಾಗುತ್ತಲೇ ಇರುತ್ತದೆ. ಆ ನಿಯಮ ಏನಾದರೂ ಕನ್ನಡ ಚಿತ್ರರಂಗದಲ್ಲಿದ್ದಿದ್ದರೆ, ಬರೀ ಹಾಡುಗಳಿಂದಲೇ ಒಂದು ವರ್ಷ ಓಡಿದ ‘ಜನುಮದ ಜೋಡಿ’ ಚಿತ್ರದಿಂದ ಬಂದ ಹಣ, ಬರಬೇಕಾಗಿದ್ದ ಲಾಭಾಂಶದಲ್ಲಿ ಇಂದು ಮನೋಹರ್ ಕೋಟ್ಯಾಧೀಶರಾಗಿರುತ್ತಿದ್ದರು. ‘ಜನುಮದ ಜೋಡಿ’ ಚಿತ್ರ ನಿರ್ಮಿಸಿದವರು ರಾಜ್‌ಕುಮಾರ್ ಕಂಪನಿಯ ವಜ್ರೇಶ್ವರಿ ಕಂಬೈನ್ಸ್‌ನವರು, ನಿರ್ದೇಶಿಸಿದವರು ನಾಗಾಭರಣ. ಈ ಚಿತ್ರಕ್ಕೆ ಹಾಡುಗಳನ್ನು ಬರೆದು, ಸಂಗೀತ ಸಂಯೋಜಿಸಿದವರು ವಿ.ಮನೋಹರ್. ಚಿತ್ರ ವರ್ಷಗಟ್ಟಲೆ ಓಡಿ, ಕೋಟಿಗಟ್ಟಲೆ ಹಣ ಮಾಡಿತು. ನಿರ್ಮಾಪಕರು ಸಂತೃಪ್ತರಾದರು. ನಿರ್ದೇಶಕರಿಗೆ ಅವಕಾಶಗಳು ಸಿಕ್ಕಿದವು. ಆದರೆ, ಮನೋಹರ್‌ಗೆ ಸಂಗೀತ ನಿರ್ದೇಶನಕ್ಕೆ ಸಿಗಬೇಕಾದ ಸಂಭಾವನೆ ಸಿಕ್ಕಿತೆ ಎನ್ನುವುದು ಮನೋಹರ್‌ಗಷ್ಟೇ ಗೊತ್ತಿರುವ ಸತ್ಯ.

ಇಲ್ಲಿ ಮನೋಹರರ ತಪ್ಪೂ ಇದೆ. ಮನೋಹರರಿಗೆ ತಮ್ಮ ಶ್ರಮ, ಪ್ರತಿಭೆ, ಕ್ರಿಯಾಶೀಲತೆಯನ್ನು ತಾವೆ ಅನುಮಾನಿಸುವ ಬುದ್ಧಿಯಿದೆ. ಸಿಕ್ಕಾಪಟ್ಟೆ ಸಂಕೋಚ, ಅಳುಕಿನ ಅಂಜಿಕೆ, ಮಗುವಿನ ಮುಗ್ಧತೆ ಮನೆ ಮಾಡಿಕೊಂಡಿದೆ. ಜೊತೆಗೆ ಗಾಂಧಿನಗರದವರ ಬುದ್ಧಿ ಗೊತ್ತಿದ್ದರೂ ಮತ್ತೆ ಮತ್ತೆ ಅವರನ್ನೇ ನಂಬುವ, ಅವರ ಜೊತೆಯೇ ಕೆಲಸ ಮಾಡುವ ಅನಿವಾರ್ಯತೆಯೂ ಇದೆ.

ಹಾಗಾಗಿ ಇವತ್ತಿಗೂ ಮನೋಹರ್, ಒಂದು ಕಣವೂ ಬದಲಾಗದೆ, ಹಾಗೆಯೇ ಇದ್ದಾರೆ. ಇನ್ನು ಮುಂದಾದರೂ ಬದಲಾಗಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ತನ್ನೆಲ್ಲ ಕುತಂತ್ರ, ಕುಯುಕ್ತಿಗಳ ವಿಜೃಂಭಣೆಯಲ್ಲಿರುವ ಗಾಂಧಿನಗರ ಹಾಗೇ ಇರಲಿ, ಮನೋಹರ್ ಹೀಗೇ ಇರಲಿ. ಮನೋಹರ್ ಹೀಗಿದ್ದರೇ ಮನೋಹರ್ ಆಗಿ ಉಳಿಯುವುದು, ಏನಂತೀರಾ?

About The Author

ಬಸವರಾಜು

ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ