Advertisement
ಅಣಶಿ ಎಂಬ ಮಳೆ ಹಾಡಿನ ಊರು

ಅಣಶಿ ಎಂಬ ಮಳೆ ಹಾಡಿನ ಊರು

ಕಾಳೀ ನದಿ ಎಂದರೆ ಕಪ್ಪು ಸುಂದರಿ. ಆಕೆಯದು ಸುಲಲಿತ ಸಲಿಲ ಹರಿವಲ್ಲ. ಏಳುಬೀಳು, ತಿರುವು ಮುರುವುಗಳ ನಡಿಗೆ.  ಸೂಪಾ, ಬೊಮ್ಮನಳ್ಳಿ, ಕೊಡಸಳ್ಳಿ, ಕದ್ರಾ ಅಣೆಕಟ್ಟೆಗಳನ್ನು ಆಕೆ ದಾಟಬೇಕು. 184 ಕಿಮೀ ಉದ್ದದ ನದಿ ಸರಸರನೇ ಹರಿದು ಹೋಗುವುದಕ್ಕೇ ಬಿಟ್ಟಿಲ್ಲವೆನಿಸುತ್ತದೆ.  ಉತ್ತರ ಕನ್ನಡ ಜಿಲ್ಲೆಯ ಜನರ ಕೃಷಿಗೆ ಜೀವನಾಡಿಯಾದವಳು. ಆಕೆ ಕೊಟ್ಟ ಅಂತರ್ಜಲದಿಂದಲೇ ಜೋಯಿಡಾ ತಾಲ್ಲೂಕಿನ ದಟ್ಟಕಾಡುಗಳು ಹೆಮ್ಮೆಯಿಂದ ನಿಂತಿವೆ.  ತನ್ನ ಪುಟ್ಟ ಪಯಣದಲ್ಲಿ ಆಕೆ ಪೋಷಿಸುವ ಸಮುದಾಯಗಳು ಅನೇಕ. ಅವರ ನಂಬಿಕೆಗಳು, ಪ್ರಕೃತಿಯೊಂದಿಗಿನ ಹೊಂದಾಣಿಕೆಗಳ ಕಥೆಗಳು ಸಾವಿರಾರು. ಕೆಂಡಸಂಪಿಗೆ ಓದುಗರಿಗಾಗಿ ಅಂತಹ ಕಥೆಗಳನ್ನು ಹೆಕ್ಕಿ  ಬರೆಯಲಿದ್ದಾರೆ ಲೇಖಕಿ  ಅಕ್ಷತಾ ಕೃಷ್ಣಮೂರ್ತಿ. ‘ಕಾಳಿಯಿಂದ ಕಡಲಿನವರೆಗೆ’ ಸರಣಿ ಇಂದಿನಿಂದ ಆರಂಭ

‘ಅಣಶಿʼ ಕಾಳಿ ತೀರದ ಪುಟ್ಟ ಹಳ್ಳಿ. ಹುಲಿ ಸಂರಕ್ಷಿತ ಪ್ರದೇಶ ಎಂದು ಕರ್ನಾಟಕದ ನಕಾಶೆಯಲ್ಲಿ ಗುರ್ತಿಸಿಕೊಂಡ ಊರು. ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಟ್ಟ ಕಡೆಯ ಹಳ್ಳಿ. ಅರಣ್ಯ ಇಲಾಖೆಯ ಬಿಗಿಯಲ್ಲಿರುವ ಈ ಅಣಶಿ ಎಂಬ ಊರನ್ನು ಕಾಡೆಂದರೆ ಸೂಕ್ತ. ಎತ್ತರೆತ್ತರ ಮರಗಳು ಕಡಿದಾದ ಕಣಿವೆಗಳು ವರ್ಷದಲ್ಲಿ ಆರೇಳು ತಿಂಗಳು (ಈಗ ನಾಲ್ಕೈದು ತಿಂಗಳು ಎಂದು ಬದಲಿಸಿಕೊಳ್ಳಬೇಕು) ಮಳೆಯನ್ನು ಒಳಗೊಂಡ ಪುಟ್ಟ ಊರು, ಸದಾ ತಂಪನ್ನು ಹೊತ್ತುಕೊಂಡೆ ಇರುತ್ತದೆ. ಕಾರವಾರದಿಂದ ಬೆಳಗಾವಿ ಕಡೆಗೆ ಹೊರಟರೆ ಕಾಳಿ ನದಿಯ ಸೊಬಗನ್ನು, ಕಾಳಿ ಸೃಷ್ಟಿಸಿದ ಅಗಾಧ ವನರಾಶಿಯನ್ನು, ಕಾಳಿ ತೀರವನ್ನು ನಾವು ಹಚ್ಚಿಕೊಳ್ಳುವಂತೆ ಕಾಣುತ್ತದೆ. ಜೊತೆಗೆ ಕಣಿವೆಯ ಸೌಂದರ್ಯ ಮನ ತುಂಬಿದಾಗ ಅಣಶಿ ಚೆಂದವಾಗಿ ಮನಮೋಹಿಸುತ್ತದೆ. ಅಣಶಿ ಘಟ್ಟದಲ್ಲಿ ಒಮ್ಮೆ ಪ್ರಯಾಣ ಮಾಡಿದರೆ ಜೀವನ ಪೂರ್ತಿ ಅಣಶಿಯನ್ನು ಮರೆಯಲಾಗದಷ್ಟು ಅಗಾಧವಾಗಿ ತನ್ನ ತಾ ತೆರೆದುಕೊಳ್ಳುವ ಊರು ಇದು.

ಇಂತಿರ್ಪ ಅಣಶಿಯಲ್ಲಿ ಮಳೆಗಾಲ ಅಂದರೆ ನಿತ್ಯ ನೂತನ ವರ್ಷೋತ್ಸವ. ಈ ಬಾರಿ ಕಾಳಿ ತೀರದ ಈ ಕಣಿವೆಗುಂಟ ಮುಂಗಾರು ಸ್ವಲ್ಪ ತಡವಾಗಿಯೇ ಆರಂಭವಾಗಿದೆ. ಮೇ ಕೊನೆಯ ವಾರದಲ್ಲಿ ಕಡಲಿನ ಸುತ್ತ ಸುರಿದ ಮಳೆ, ಕಾಳಿ ತೀರಕ್ಕೆ ಬಂದದ್ದು ಜೂನ್ ಎರಡನೇ ವಾರದಲ್ಲಿ. `ಎ ವರುಶ್ ಬರ್‍ಪೂರ್ ಪಾವೂಸ್ ಎತ್ತಾ’ ಎಂದು ಎಂದಿನ ನಂಬುಗೆಯಲ್ಲಿ ಮಳೆ ಕಾಯುತ್ತಿರುವ ಕುಣಬಿ ಬುಡಕಟ್ಟು ಜನಾಂಗದ ರತ್ನಾ ವೇಳಿಪ ತನ್ನ ಕೊಟ್ಟಿಗೆಯಲ್ಲಿ ಕಟ್ಟಿದ ದನಕರುಗಳ ಹಗ್ಗ ಬಿಡಿಸಿ ಕಾಡಿನ ಒಳಗೆ ದನ ಮೇಯಿಸಲು ಹೋದವಳು, ಮತ್ತೆ ನಮಗೆ ಕಾಣುವುದು ಮಧ್ಯಾಹ್ನದ ಮೂರು ಗಂಟೆಯ ನಂತರವೇ. ಮಳೆಯಿರಲಿ, ಚಳಿಯಿರಲಿ ವೇಳೆಯ ಗಡಿಬಿಡಿಯಿಲ್ಲದೆ ಮನೆ ತಲುಪುವ ಸಾವಧಾನದ, ಸಮಾಧಾನದ ಬದುಕು.

ಕುಣಬಿ ಬುಡಕಟ್ಟು ಜನಾಂಗದ ಜನರು ಹೆಚ್ಚಿರುವ ಈ ಹಳ್ಳಿಯಲ್ಲಿ ದೇಸಾಯಿ ಮನೆಗಳು ಕೂಡಾ ಬೆರಳೆಣಿಕೆಯಷ್ಟಿವೆ. ಪರಸ್ಪರ ಹೊಂದಿಕೊಂಡು ಪ್ರೀತಿಯಿಂದ ಬಾಳುವೆ ಮಾಡುವುದನ್ನು ನೋಡಿದರೆ ಬಹಳ ಖುಷಿ ಎನಿಸುತ್ತದೆ. ಜಾತಿ ಬೇಧವಿಲ್ಲದೆ ಅಕ್ಕರೆಯನ್ನೇ ನೆಚ್ಚಿಕೊಂಡು, ಅಪ್ಪಿಕೊಂಡು ಬದುಕುತ್ತಿರುವ ಸರಳ ಜೀವನ ಇವರದು. ಕುಣಬಿಗಳ ಪ್ರತಿ ಮನೆಯಲ್ಲೂ ದನಕರುಗಳಿಗೆ ಪ್ರತ್ಯೇಕವಾದ ಕೊಟ್ಟಿಗೆ ಇದೆ. ಆದರೆ ಈ ಕೊಟ್ಟಿಗೆಗಳು ಮನೆಯಿಂದ ದೂರದಲ್ಲೆಲ್ಲೋ ಇರುವುದಿಲ್ಲ. ಅಂಗಳಕ್ಕೆ ಹೊಂದಿಕೊಂಡೆ ಮನೆಯ ಒಂದು ಗೋಡೆಗೆ ತಾಗಿಯೇ ಇರುತ್ತವೆ. ಹೀಗಾಗಿ ದಿನವಿಡೀ ದನಕರುಗಳೊಂದಿಗೆ ಮಾತಾಡುತ್ತಲೆ ಇರುತ್ತಾರೆ.

ದನಕರುಗಳನ್ನು ಮೇಯಿಸಲು ಮನೆಯ ಒಬ್ಬ ಸದಸ್ಯ ಇದ್ದೇ ಇರುತ್ತಾನೆ. ಮಕ್ಕಳನ್ನು ಶಾಲೆಗೆ ಕಳಿಸುವುದರ ಮೂಲಕ ಒಂದಿಷ್ಟು ಗಂಟೆಗಳು ಅವರು ಮಕ್ಕಳಿಂದ ದೂರವಿರಬಹುದು. ಆದರೆ ದನಕರುಗಳನ್ನು ತಮ್ಮ ನಿಗಾ ಇಲ್ಲದೆ ಮೇಯಲು ಬಿಡಲಾರರು. ಹುಲಿ ಚಿರತೆಗಳು ದನಕರುಗಳ ಪ್ರಾಣಕ್ಕೆ ಆಪತ್ತು ತರಬಹುದೆಂಬ ಕಾರಣದಿಂದ ಕಾಯಲು ಒಬ್ಬನಿದ್ದೆ ಇರುತ್ತಾನೆ. ಅಕ್ಕಿ ರೊಟ್ಟಿಯ ಬುತ್ತಿ ಕಟ್ಟಿ ದನಕರುಗಳ ಹಿಂದೆ ಒಂದು ಊರುಗೋಲು ಹಿಡಿದು ಹೊರಟರೆ ಮತ್ತೆ ಅವರು ಮನೆಯನ್ನು ಹೊಕ್ಕುವುದು ಸಂಜೆಯದ ನಂತರವೇ.

ಅಣಶಿ, ದನಕರುಗಳಿಗೆ ಬಹಳ ಗೌರದವ ಸ್ಥಾನ ನೀಡುತ್ತದೆ. ದನಗಳ ಹಾಲು ಕರೆಯಲಾರರು ಇವರು. ತಾವು ದಿನವೂ ಕುಡಿವ ಚಹಾಕ್ಕೆ ಹಾಲು ಸೇರಿಸಿ ಕುಡಿಯರು. ಮನೆ ಮಕ್ಕಳಿಗೂ ಒಂದು ಲೋಟ ಆಕಳ ಹಾಲು ಹಿಂಡಿ ಕುಡಿಸುವುದಿಲ್ಲ. ಮನೆಗೆ ನೆಂಟರು ಬಂದರೂ `ಕಣ್ ಕರೂನ್ ದಿತ್ತಾ’ ಎಂದು ಚಾ ಡಿಕಾಕ್ಷನ್ ಮಾಡಿ ಕೊಡುತ್ತಾರೆ. ದನಗಳ ಹಾಲು ಕುಡಿಯುವುದು ಅವುಗಳ ಕರುಗಳ ಹಕ್ಕು ಎಂದೆ ಅವರು ನಂಬುತ್ತಾರೆ. ಆ ನಂಬಿಕೆ ಉಳಿಸಿಕೊಂಡಿದ್ದಾರೆ. ಜೊತೆಗೆ ಎಂದಿಗೂ ದನಕರುಗಳನ್ನು ಮಾರಾಟ ಮಾಡುವ ಯೋಚನೆ ಕೂಡ ಮಾಡಲಾರರು. ಈ ರೀತಿ ಪ್ರತಿ ಜೀವಿಯನ್ನು, ಜೀವನವನ್ನು ಪ್ರೀತಿಸುವ ಮುಗ್ಧ ಮಕ್ಕಳು ಈ ಬುಡಕಟ್ಟು ಮಕ್ಕಳು. ಇಲ್ಲಿನ ಎತ್ತುಗಳಿಗೂ ಖುಷಿಯೋ ಖುಷಿ. ತನ್ನ ಮಾಲೀಕನ ಹತ್ತಿಪ್ಪತ್ತು ಗುಂಟೆ ಗದ್ದೆ ಹೂಡಿದರೆ ಅದರ ಆ ವರ್ಷದ ಕೆಲಸ ಮುಗಿದಂತೆ.

(ಅಣಶಿ)

ಎಂದಿನ ನಂಬುಗೆಯಲ್ಲಿ ಮಳೆ ಕಾಯುತ್ತಿರುವ ಕುಣಬಿ ಬುಡಕಟ್ಟು ಜನಾಂಗದ ರತ್ನಾ ವೇಳಿಪ ತನ್ನ ಕೊಟ್ಟಿಗೆಯಲ್ಲಿ ಕಟ್ಟಿದ ದನಕರುಗಳ ಹಗ್ಗ ಬಿಡಿಸಿ ಕಾಡಿನ ಒಳಗೆ ದನ ಮೇಯಿಸಲು ಹೋದವಳು, ಮತ್ತೆ ನಮಗೆ ಕಾಣುವುದು ಮಧ್ಯಾಹ್ನದ ಮೂರು ಗಂಟೆಯ ನಂತರವೇ.

ಉಳಿದಂತೆ ಹಿತವಾಗಿ ಪ್ರಕೃತಿ ಜೊತೆ ಕಾಲ ಕಳೆಯುವ ಗಮ್ಮತ್ತು. ಅಣಶಿಯಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ನಾಲ್ಕು ಐದು ಗಂಟೆಗೆಲ್ಲ ಕತ್ತಲು ಆವರಿಸಿ ಬಿಡುತ್ತದೆ. ಕಾಡಿನ ಮೌನ, ಆಗಾಗ ಮಾತಾಡುವ ಗಾಳಿ, ಮಳೆ ಜೋರಾಯಿತೆಂದರೆ ಅಲ್ಲಲ್ಲೆ ಎದ್ದು ಬಿಡುವ ಹಳ್ಳಗಳ ರಭಸ, ಆಗಾಗ ಸುಳಿದಾಡುವ ಹುಲಿ ಚಿರತೆಗಳ ನೆರಳು ಕಾಡು ಗೊತ್ತಿಲ್ಲದವರಿಗೆ ಭಯ ಹುಟ್ಟಿಸುತ್ತದೆ.

(ನೆಲದ ಮುತ್ತುಗಳು)

ಮಳೆಗಾಲದಲ್ಲಿ ಅಣಶಿ ಬೇರೆಲ್ಲ ಕಾಲಗಳಿಗಿಂತ ತುಂಬಾ ಭಿನ್ನವಾಗಿ ಕಾಣುವುದಂತೂ ನಿಜ. ಇಲ್ಲಿ ಮಳೆ ಎಂದರೆ ಹರುಷ, ಒಂದು ಅಗೋಚರ ಸಂಭ್ರಮದ ವಾತಾವರಣ ಹುಟ್ಟುವ ಘಳಿಗೆ, ಕಾಳಿ ತೀರದುದ್ದಕ್ಕೂ ಕಾಣುವ ಹೊಸತನ, ಮಳೆಗೆ ಒಡ್ಡಿಕೊಂಡ ಹಂಚಿನ ಮನೆಗಳು ಪೂರ್ತಿಯಾಗಿ ಮಂಜಿನಲ್ಲಿ ಹುದುಗಿರುತ್ತದೆ. ಒಮ್ಮೆ ನೋಡಿದರೆ ಬೆಟ್ಟದ ಬುಡದಲ್ಲಿರುವ ಅಣಶಿಯ ಮನೆಗಳು ಕಾಣುವುದೇ ಇಲ್ಲ. ಪರಿಚಯವಿದ್ದವರು ಮಾತ್ರ ಅಂದಾಜಿಸಿ ಇದು ಕಾಜುವಾಡಾಕ್ಕೆ ಹೋಗುವ ರಸ್ತೆ, ಇದು ಅಣಶಿವಾಡಾಕ್ಕೆ ಹೋಗುವ ರಸ್ತೆ, ಇಲ್ಲೆ ಎಡಕ್ಕೆ ತಿರುಗಿದರೆ ಸಾತೇರಿ ದೇಗುಲ, ದೇಗುಲದ ಎಡಬದಿಗೆ ರೇಷನ್ ಅಂಗಡಿಯ ದಾರಿ, ಬಲಬದಿಗೆ ಹೊರಳಿದರೆ ಗಾಯಕ್ ಮನೆಯ ಚಾ ದುಕಾನು… ಮಂಜಿನಲ್ಲಿ ಹುದುಗಿರುವಂತೆ ತೋರುತ್ತದೆ. ಕಾರವಾರ ಜೋಯಿಡಾ ರಸ್ತೆಯಲ್ಲಿ ಆಗಾಗ ಸಂಚರಿಸುವ ಕಾರುಗಳು, ಬೈಕ್‌ಗಳ ಬೆಳಕುಗಳು ಮಂಜಿನಲ್ಲಿ ಮಿನುಗಿ ನಕ್ಷತ್ರದ ಹೊಳಪು ತಂದಿಟ್ಟು ರಸ್ತೆಯ ಶೋಭೆ ಹೆಚ್ಚಿಸುವುದುಂಟು.

ಅಣಶಿಗೆ ಮೊದಲ ಮಳೆ ಬಂದೊಡನೆ ಊರಿಗೆ ಊರೆ ಬದಲಾಗಿ ಬಿಡುತ್ತದೆ. ಕಾಡಿನ ಘಮದಲ್ಲಿ ಕಣ್ಣ ಮುಂದೆಯೆ ಅಣಬೆಗಳು ಏಳತೊಡಗುತ್ತವೆ. ಈ ಅಣಬೆಗಳದ್ದು ಹಲವು ರೂಪ. ಮೇ ತಿಂಗಳಿಂದ ಶುರುವಾದ ಈ ಅಣಬೆಗಳು ಬಹುರೂಪಿಯಾಗಿ ನಾಗರಪಂಚಮಿಯವರೆಗೂ ನಾಲಿಗೆಯಲ್ಲಿ ತನ್ನ ಸ್ವಾದ ಉಳಿಸುತ್ತವೆ. ಮೊದಲ ಮಳೆ ಬಿದ್ದೊಡನೆ ನೆಲದ ಮೇಲೆ ಮುತ್ತು ಚೆಲ್ಲಿದಂತೆ ಏಳುವ `ಶೃಂಗಾರ’, ಒಂದು ವಾರ ಮಳೆ ಬಿದ್ದು ಚೂರು ಬಿಸಿಲು ಮುಖ ತೋರಿದರೆ ಅರಳಿಕೊಳ್ಳುವ, ಅದರಲ್ಲಿಯೂ ಅಣಶಿಯ ದಟ್ಟಡವಿಯಲ್ಲಿ ಮಾತ್ರ ಸಿಗುವ `ಕೆಂಪಣಬೆ’, ಬಿಳಿಯ ಬಣ್ಣದ ಉದ್ದ ದೇಟಿನ `ರೌಣಾ’, ಚೂರು ಕಂದು ಮಿಶ್ರೀತ ಬಿಳಿ ಬಣ್ಣದ `ಕೋಡ್ವಾಳೋ’, `ಕಾನ್’, `ಚೊಚಾಳಿ’, `ಫೀಡ್ಗಾ’ ‘ಕಿಡಗ’, ಬೇಣದಲ್ಲಿ ಸಿಗುವ `ಕುಟಾಳೆʼ… ಎಲ್ಲವೂ ಅಣಶಿ ಕಾನನದೊಳಗಿನ ಸವಿರುಚಿಯ ಹಾಡುಗಳು. ಅಣಬೆಗಳು ಏಳುವ ಸಂಭ್ರಮದಲ್ಲಿ ಪಾಲ್ಗುಳ್ಳುವುದೆ ಒಂದು ನಮೂನಿ ಸುಖ. ಇದರ ಜೊತೆಗೆ ಕಣ್ಣಿಗೆ ಹಬ್ಬವನ್ನೀಯುವ ತಿನ್ನಲಾಗದ ಬಣ್ಣ ಬಣ್ಣದ ಅಣಬೆಗಳು ಹೂವರಳಿದಂತೆ ಕಣಿವೆಯ ನೆಲದ ಮೇಲೆಲ್ಲ ಎದ್ದೆದ್ದು ಹಬ್ಬವನ್ನುಂಟು ಮಾಡುತ್ತಿರುತ್ತವೆ. ಹೀಗಾಗಿಯೆ ಅಣಶಿಯ ಮಳೆಗಾಲ ಚಂದ ಕಂಪೆಬ್ಬಿಸುವ ತಪೋಭೂಮಿಯಾಗಿ ಮನದಲ್ಲಿ ಉಳಿದು ಬಿಡುತ್ತದೆ.

(ಶೃಂಗಾರ ಅಣಬೆ ಹೆಕ್ಕುವ ಸಂಭ್ರಮ)

ಕಣಿವೆಯ ಹೆರಿಗೆ ಮನೆಯಲ್ಲಿ ಅದ್ಯಾವುದ್ಯಾವುದೋ ಬಣ್ಣದಲ್ಲಿ, ಆಕಾರದಲ್ಲಿ ಎರಡೆಲೆಯ ಚಾಚಿ ನಗು ಬೀರುವ ನಗುವಿನೆಲೆಯ ಸಸಿ, ಬಗೆಬಗೆಯಾಗಿ ಕಣ್ಣಳತೆಗೂ ಸಿಗದೆ ಅಡಗುವ ಕೀಟಗಳ ಮಾರಾಶಿ, ನೀರಿನ ಹೊಂಡಗಳರಮನೆಯಲ್ಲಿ ಸುಸ್ವರ ಹೊರಳಿಸುವ ಕಪ್ಪೆಗಳ ಆಟ, ದಿನವೀಡಿ ಬಿಡದೇ ಸುರಿವ ಮಳೆಗೆ ಮರದ ಬುಡ ಹೊಕ್ಕುವ ದನಗಳ ಹಿಂಡು, `ಅಮ್ಚಿ ಗರವಾ’ ಎಂದು ಅಷ್ಟೇ ಪ್ರೀತಿಯಿಂದ ದನಗಳ ಹಿಂಡಿನ ನಡುವೆಯೆ ತಲೆ ಅಲ್ಲಾಡಿಸುತ್ತ ಕುಳಿತುಕೊಳ್ಳುವ ದನಗಾಯಿ ಶಾಬಲೋ ಗಾವಡಾ, ಅವನಿಗಂಟಿಕೊಂಡೆ ಕುಳಿತ ಅವನ ನಾಯಿ ಮರಿ ಎಲ್ಲವೂ ಮಳೆಯ ಚಂದ ನೋಡುತ್ತ ಕುಳಿತರೆ ಹೊತ್ತು ಜಾರುವುದು ತಿಳಿಯುವುದಿಲ್ಲ.

ಅಣಶಿಯಲ್ಲಿ ನಾಯಿಗಳ ಸರಾಸರಿ ಲೆಕ್ಕ ಹಾಕಿದರೆ ಬೆರಳೆಣಿಕೆಯಷ್ಟು ಮಾತ್ರ. ಯಾರದ್ದೋ ಮನೆಯಲ್ಲಿ ನಾಯಿಯ ಹೆರಿಗೆ ಆಗಿದೆ ಎಂದರೆ ಎಷ್ಟು ಮರಿ ಎಂದು ಲೆಕ್ಕ ಹಾಕಿ `ನನಗೊಂದು ನಿನಗೊಂದು’ ಎಂದೆ ಊರಿನ ಜನ ಒಯ್ದು ಬಿಡುತ್ತಾರೆ. ಮೊನ್ನೆ ತಾನೆ ಅಲ್ಕೇಶ ದೇಸಾಯಿ ಮನೆಯಿಂದ ಬಿಳಿ ಮತ್ತು ಕಪ್ಪು ಚುಕ್ಕಿಯ ನಾಯಿ ಮರಿಯೊಂದನ್ನು ತಂದ ದಿಗಂಬರ ಮಡಿವಾಳ ಇಂದು ಯಾಕೋ ನೋವಿನಲ್ಲಿ ಮುಖ ಹಿಂಡಿಕೊಂಡು ಅಣಶಿ ಬಸ್ ಸ್ಟಾಫಿನ ಕಟ್ಟೆಯ ಮೇಲೆ ಕುಳಿತಿದ್ದಾನೆ. ಬಾಡಿದ ಮುಖ ನೋಡಿ `ಏನಾಯಿತು..?’ ಎಂದೆ. ` ರಾತ್ರಿ ಮನೆ ಬಾಗಿಲ ಹತ್ತಿರ ನಮ್ ಚುಕ್ಕಿಯನ್ನು ಕಟ್ಟಿದ್ದೆ, ಬೆಳಗಾಗುವರೆಗೆ ಅದು ಇರಲಿಲ್ಲ. ರಾತ್ರಿ ಬೊಗಳಿದ ಹಾಗಾಯಿತು. ಎದ್ದು ಬಂದಿದ್ದರೆ ಉಳಿಯುತ್ತಿತ್ತೇನೋ… ಮಳೆ ಬೇರೆ, ಜೋರು ನಿದ್ದೆ . ಚಿರತೆಗೆ ಆಹಾರವಾಗಿತ್ತು ನನ್ನ ಚುಕ್ಕಿ’ ಎನ್ನುತ್ತಿದ್ದಂತೆ ಕಣ್ಣೆಲ್ಲ ಕಡಲಾಯಿತು.

About The Author

ಅಕ್ಷತಾ ಕೃಷ್ಣಮೂರ್ತಿ

ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ

10 Comments

  1. Syed faizulla

    ಚೆಂದ ಬರಹ…ಕಾಳಿ ನದಿಯ ನೋಡಬೇನಿಸುವಷ್ಟು….

    ಫೈಜ್ನಟ್ರಾಜ್

    Reply
    • Akshata krishnmurthy

      ಧನ್ಯವಾದ ಫೈಜ್ ಸರ್

      Reply
  2. ಮೋಹನ

    ಅಣಶಿಯ ಸೊಬಗು ನಿಜಕ್ಕೂ ಸುಂದರ.

    Reply
  3. ಮೋಹನ

    ಅಣಶಿಯು ನಿಸರ್ಗ ಸಂಪತ್ತು
    ನಮಗೆ ನಿಮ್ಮ ಬರಹವೆ ಸಂಪತ್ತು.

    Reply
  4. Shiddanna Gadag

    ಅಕ್ಷತಾ ಟೀಚರ, ಕುಣಬಿ ಬುಡಕಟ್ಟು, ಅವರ ಸರಳ ಜೀವನ, ಅವರ ಸಾವಧಾನದ ಸಮಾಧಾನದ ಬದುಕು,, ಅಣಬೆಗಳಲ್ಲಿ ಎಷ್ಟೊಂದು ಪ್ರಕಾರ , ಅವುಗಳನ್ನು ನೀವು ನೋಡುವ ಆಸಕ್ತಿ, ಪ್ರತಿ ದಿನ ಅಣಶಿಯ ಹಸಿರು ಪರಿಸರವನ್ನು, ಆ ಮಕ್ಕಳ ಒಡನಾಟವನ್ನು ಅನುಭವಿಸುವ ನಿಮ್ಮ ಶಿಕ್ಷಕ ವೃತ್ತಿಯ ಬದುಕು ನಿಜಕ್ಕೂ ಸಾರ್ಥಕ. ನಮಗೂ ಈ ದಿನದಲ್ಲಿ ಸಾತೆರಿಗೆ ಬಂದು ಗಾಯಕ್ ಮನೆಯ ಚಾ ದುಕಾನಿನಲ್ಲಿ ಚಾ ಕುಡಿಯಲು ಆಸೆ ಹುಟ್ಟಿಸಿದ್ದಿರಿ. ನಿಮ್ಮ ಬರವಣಿಗೆಗೆ ನಮ್ಮ ಧನ್ಯವಾದಗಳು.

    Reply
    • Akshata krishnmurthy

      ಖಂಡಿತ ಸರ್. ಗಾಯಕ್ ದುಕಾನು ಕಾದಿದೆ.

      ಧನ್ಯವಾದ .

      Reply
  5. ಎಂ.ಜಿ.ಚಂದ್ರಶೇಖರಯ್ಯ

    ಅಕ್ಷತಾ ಕೃಷ್ಣಮೂರ್ತಿ ಅವರು ಮೂಲತಃ ಕವಯಿತ್ರಿ, ಗದ್ಯ ಕೂಡ ಅವರ ಕೈಯಲ್ಲಿ ‌ಮಲ್ಲಿಗೆಯಂತೆ ಅರಳುತ್ತದೆ ಎಂಬುದಕ್ಕೆ ಸಾಕ್ಷಿ ಕೊಡಬೇಕಿಲ್ಲ- ಕಣ್ಣ ಮುಂದೆ ಇದೆ- ಕಾಳಿ ಎಂಬ ಕಪ್ಪು ಸುಂದರಿ ಲೇಖನ. ಅವರೊಂದಿಗೆ ಮಾತನಾಡುತ್ತಾ ಇದ್ದರೆ ಸಾವಿರಾರು ವರ್ಷಗಳಿಂದ ಪರಿಚಯದ ಆತ್ಮೀಯರೊಂದಿಗೆ ಮಾತನಾಡಿದ ಸುಖ.ಯಾವುದೇ ಹಮ್ಮುಬಿಮ್ಮು ಇಲ್ಲದ ಅಕ್ಷತಾರಿಂದ ಇನ್ನೂ ಇಷ್ಟೇ ಸುಂದರವಾದ ಲೇಖನ ಬರಲಿ.‌ ಖುಷಿ ಆಯ್ತು ಓದಿ.

    Reply
  6. Rajashekhar hesarur

    ಪೂರ್ಣ ಪುಸ್ತಕ ಬೇಕು

    Reply
    • Akshata krishnmurthy

      ಆಗಲಿ ಸರ್.
      ಧನ್ಯವಾದ

      Reply
  7. Nagaraj naik

    ತುಂಬಾ ಚೆನ್ನಾಗಿ ಬರೆದಿದ್ದೀರಾ ಮೇಡಂ?

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ