ದಿನಪತ್ರಿಕೆ ಓದುತ್ತ ಕುಳಿತಿದ್ದವನೊಬ್ಬ ‘ಅಲ್ರೀ ಅವ್ರಿಗೆ ಕೆಲಸ ಮಾಡ್ರಿ ಅಂತೀರಿ.. ಕೆಲಸ ಯಾರು ಕೊಡ್ತರ‍್ರಿ? ನೋಡಿದ್ರಲಾ ಮ್ಯಾಲ್ ಮಲಗಿದ್ದ ಸಾಹೇಬ್ರು ಬರಿ ಮುಟ್ಟಿದ್ರೆ ಹೆಂಗ್ ಹೊಡ್ದು ಕಳಸಿದ್ರು’ ಎಂದು ಮತ್ತೆ ದಿನಪತ್ರಿಕೆ ಓದುವುದರಲ್ಲಿ ಮಗ್ನನಾದ. ನಂತರದಲ್ಲಿ ಯಾರೂ ಏನೂ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತರು. ಅವಳಿಗೆ ಹಾಗೆ ಹೊಡೆಯಬಾರದಿತ್ತೆನಿಸಿ, ನನ್ನ ಮೇಲೆ ನನಗೇ ಸಿಟ್ಟು ಬಂತು. ಅಕಸ್ಮಾತ್ ಅವಳು ತಿರುಗಿ ಹೊಡೆದಿದ್ದರೆ? ಅವಳು ನಗುತ್ತಲೇ ‘ಅದಕ್ಯಾಕ ಸಿಟ್ಟು ಮಾಡ್ಕೋತಿ ಮಾಮಾ.. ಮಲಗು ಮಲಗು’ ಎಂದು ನಗುನಗುತ್ತಲೇ ಹೋಗಿದ್ದು ಕಣ್ಮುಂದೆ ಬರುತ್ತಿತ್ತು.
ಅನಿಲ್ ಗುನ್ನಾಪೂರ ಹೊಸ ಕಥಾ ಸಂಕಲನ “ಸರ್ವೇ ನಂಬರ್-೯೭” ದ “ಗೋಲ್‌ಗುಂಬಜ್ ಎಕ್ಸ್‌ಪ್ರೆಸ್” ಕತೆ ನಿಮ್ಮ ಓದಿಗೆ
ರೈಲಿನ ಕಿಟಕಿಯಿಂದಾಚೆ, ಗಿಡಮರಗಳೆಲ್ಲ ಜಿದ್ದಿಗೆ ಬಿದ್ದಂತೆ ಹಿಮ್ಮುಖ ಚಲನೆಯಲ್ಲಿ ಓಡುತ್ತಿದ್ದಂತೆ ಕಾಣುತ್ತಿದ್ದವು. ಇಂಡಿಯಿಂದ ಆಲಮಟ್ಟಿ ರೈಲ್ವೆ ಸ್ಟೇಶನ್ ಬರುವ ಹೊತ್ತಿಗೆ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲು ಇರುವೆ ನುಸುಳದಷ್ಟು ರಶ್ಯಾಗಿತ್ತು. ನನಗಂತೂ ಒಂಟಿಗಾಲಿನ ಮೇಲೆ ನಿಂತು, ಸಾಕುಸಾಕಾಗಿತ್ತು. ‘ನಾಡದ್ದು ಎಕ್ಸಾಮ್ ಫೀಜ್ ಕಟ್ಟೋಕೆ ಲಾಸ್ಟ್ ಡೇಟ್.. ಬೇಗ ಬಾ ಅನಿಲ್. ಆಮೇಲೆ ಫೈನುಗೀನು ಅಂತ ಬೇಜಾನ್ ತಲೆತಿಂತಾನೆ ಈ ಪ್ರಿನ್ಸಿ..’ ಎಂದು ಚೇತನ್ ಹಿಂದಿನ ದಿನ ಕಾಲ್ ಮಾಡಿ ಭಯ ಹುಟ್ಟಿಸಿದಾಗಲೇ ಬೆಂಗಳೂರಿಗೆ ಹೊರಡಲು ತಯಾರಾಗಿದ್ದೆ. ಎಷ್ಟೋ ಸಲ ಇಂಜಿನೀಯರಿಂಗ್ ಯಾಕಾದರೂ ಮಾಡಿದೆನೋ ಎಂಬಂತಾಗಿತ್ತು. ಬರೀ ಇಂಟರ್ನಲ್ಸ್, ಪ್ರೊಜೆಕ್ಟ್, ವೈವಾ ಪದೇಪದೇ ಇದೇ ಒದ್ದಾಟ. ಬೆಂಗಳೂರಿನ ರಾಗಿಮುದ್ದೆ ಊಟ, ಒಂದೇ ಒಂದು ತುತ್ತೂ ಸೇರ್ತಾ ಇರಲಿಲ್ಲ. ಗಂಟಲಲ್ಲಿ ಸಿಕ್ಕು ನುಂಗಲೂ ಆಗದೇ, ಉಗುಳಲು ಆಗದೇ ಒದ್ದಾಡುತ್ತಿದ್ದೆ. ಆದಷ್ಟು ಬೇಗ ಡಿಗ್ರಿ ಹಣೆಪಟ್ಟಿ ತಗೊಂಡು ಕಾಲೇಜ್ ಕಿರಿಕಿರಿಯಿಂದ ಮುಕ್ತಿ ಹೊಂದಿದರಾಯಿತು ಎಂಬುದೇ ನನ್ನ ನಿತ್ಯದ ಯೋಚನೆಯಾಗಿತ್ತು.
ತುಂಬಿ ತುಳುಕುತ್ತಿದ್ದ ರೈಲಿನಲ್ಲಿ, ಹಾಗೋ ಹೀಗೋ ಮಾಡಿ ನಿಲ್ಲಲು ಜಾಗ ಗಿಟ್ಟಿಸಿಕೊಂಡಿರುವುದೇ ಮಹಾನ್ ಸಾಧನೆ ಅನ್ನಿಸಿತು. ಹೆಗಲಿಗೆ ಹೆಣಭಾರವಾಗಿದ್ದ ನನ್ನ ಬ್ಯಾಗ್‌ನ್ನು ಸರಳುಗಳ ಮೇಲೆ ಇರಿಸಿದಾಗ ಮೈಮೇಲೆ ಇದುವರೆಗೂ ಹೊತ್ತಿದ್ದ ಗುಡ್ಡ ಕೆಳಗಿಳಿಸಿದ ಸಮಾಧಾನ. ಮನೆಯಲ್ಲಿ ನಮ್ಮಮ್ಮ, ನಾ ವಲ್ಲೇ ವಲ್ಲೇ ಎಂದರೂ ನಸುಕಿನಲ್ಲಿ ಎದ್ದು ಶೇಂಗಾ ಹಿಂಡಿ ಕುಟ್ಟಿ, ನನಗಿಷ್ಟ ಎಂದು ಸಜ್ಜಿ ರೊಟ್ಟಿ ಮಾಡಿ ಕಟ್ಟಿದ್ದಳು. ಹೀಗಾಗಿ ನನ್ನ ಬ್ಯಾಗ್ ತುಂಬು ಗರ್ಭಿಣಿಯಂತೆ ಕಾಣುತ್ತಿತ್ತು.
ರಾತ್ರಿ ಹೊತ್ತಲ್ಲಿ ಮಿಣುಕುಹುಳಗಳು ಮಿಂಚಿದಂತೆ ದೂರದಲ್ಲಿ ಲೈಟಿನ ಬೆಳಕು ಕಣ್ಣುಕೋರೈಸುತ್ತಿತ್ತು. ಆಗಲೇ ಬಾದಾಮಿ ಸ್ಟೇಶನ್ ಬಂದಿತು. ಒಂದಿಬ್ಬರು ನನಗೆ ಒತ್ತಿಕೊಂಡು ಇಳಿದಿದ್ದಾರೆ ಎನ್ನುವಾಗಲೇ ಹತ್ತಾರು ಜನ ಪಾತ್ರೆ ಪಗಡೆ ಸರಂಜಾಮುಗಳನ್ನೆಲ್ಲ ತುಂಬಿಕೊಂಡು ಒಳಬರುತ್ತಿದ್ದರು. ಜೋರು ಗದ್ದಲ. ಯಾರಿಗೆ ಶಪಿಸುವುದು? ಸರಿಯಾಗಿ ನಿಲ್ಲಲು ಸಹ ಆಗುತ್ತಿಲ್ಲ. ಕಾಲು ಸೋತಿವೆ. ಮೊದಲೇ ಬೆಂಗಳೂರಿಗೆ ಹೋಗುವುದು ನಿಶ್ಚಯ ಮಾಡಿದ್ದರೆ, ರಿಸರ್ವೇಷನ್ ಆದ್ರೂ ಮಾಡಿಸುತ್ತಿದ್ದೆ. ಈ ಜನಜಂಗುಳಿಯ ನಡುವೆ ಸಿಲುಕಿ ನರಳಾಡುವ ಪಾಡಾದರೂ ತಪ್ಪುತ್ತಿತ್ತು. ಪುಟ್ಟ ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡು ಬಂದ ಹೆಣ್ಣುಮಗಳು ನನ್ನ ಕಾಲುಸಂಧಿಯಲ್ಲಿ ಜಾಗಮಾಡಿಕೊಂಡು ಕುಳಿತಳು. ಈ ತಾಯಿ ಮತ್ತು ಮಗುವಿನ ಸಂಕಟ ನೋಡಲಾಗದೆ ಪಾಪ! ಅವರಿಗೆ ಎಲ್ಲಿಯಾದರೂ ಸೀಟು ಮಾಡಿಕೊಡಬಹುದೇನೋ!? ಎನ್ನಿಸಿ ಕಂಬಕ್ಕೆ ಹಿಡಿದು ಇಣುಕಿ ನೋಡಿದೆ. ರೈಲು ಪೂರಾ ರಶ್ಯಾಗಿತ್ತು. ವ್ಯರ್ಥ ಪ್ರಯತ್ನ ಎನ್ನಿಸಿ, ಡಬ್ಬಿಗೆ ತಲೆ ಆನಿಸಿ ಸರಳುಗಳಿಗೆ ಕೈ ಹಿಡಿದು ನಿಂತೆ. ಕಣ್ಣಲ್ಲಿ ಇನ್ನೂ ನಿದ್ರೆಯ ಮಂಪರಿತ್ತು. ತಂಪಾದ ಗಾಳಿಯ ಜೊತೆಗೆ ರೈಲಿನ ಚುಕುಬುಕು ಸದ್ದು ಲಾಲಿಹಾಡಿದಂತಾಗಿ ನಿಂತಲ್ಲಿಯೇ ತೂಕಡಿಸತೊಡಗಿದೆ.
*****
ಆಹಾರದ ಪೊಟ್ಟಣಗಳು, ಬಿಸ್ಲೇರಿ ಬಾಟಲಿಗಳು, ಚಹಾ ಡಬ್ಬಿ ಹಿಡಿದು ಚಾಯ್… ಚಾಯ್.. ಎಂದು ಸಂಗೀತದ ಹೊಸ ಸ್ವರ ಅನ್ವೇಷಣೆ ಮಾಡಿದಂತೆ, ಹುಡುಗರಿಬ್ಬರು ಒಳಗೆ ಬಂದು ಅಡ್ಡಾದಿಡ್ಡಿಯಾಗಿ ಮಲಗಿದ್ದವರಿಗೆ ಕಾಲು ತಾಗದಂತೆ ನಾಜುಕಾಗಿ ಹೆಜ್ಜೆ ಇಡುತ್ತಾ ತಮ್ಮ ವ್ಯಾಪಾರ ಕುದುರಿಸುತ್ತಿದ್ದರು. ಇಡೀ ಊರಿಗೆ ಊರೇ ಗುಳೇ ಹೊರಟಂತಿರುವ ರೈಲಿನಲ್ಲಿ, ಹತ್ತಾರು ಬಗೆಯ ಬದುಕುಗಳಿದ್ದವು. ಕಣ್ತುಂಬ ಖುಷಿ ತುಂಬಿಕೊಂಡು ತವರು ಮನೆಗೆ ಹೊರಟ ಹೊಸದಾಗಿ ಮದುವೆಯಾದ ಹೆಣ್ಣುಮಗಳು. ಸುಕ್ಕುಗಟ್ಟಿದ ಮೊಗದಲ್ಲಿ ಬದುಕಿನ ಉತ್ಸಾಹ ತುಂಬಿಕೊಂಡು ಕೂತ ಹಿರಿಯ ಜೋಡಿ ಜೀವಗಳು, ಬದುಕಿನ ಕಷ್ಟಕೋಟಲೆಗಳು ಏನೆಂದು ಅರಿಯದ ತಾಯಿಯ ಎದೆತೊಟ್ಟು ಚೀಪುತ್ತಿರುವ ಮುದ್ದು ಕಂದಮ್ಮಗಳು, ಶಾಲೆ, ಕಾಲೇಜು, ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟವರು, ಪ್ರವಾಸಕ್ಕೆ ಹೊರಟವರೂ ಇದ್ದರು.
ನಮ್ಮ ಕಾಲೇಜ್ ಪ್ರಿನ್ಸಿ ರಜೆ ಕೊಡಲು ಸತಾಯಿಸಿ ಸಾಕುಸಾಕು ಮಾಡಿದ್ದ. ಅವರಿಗೆ ರಿಕ್ವೆಸ್ಟ್ ಮಾಡಿ ನಾಲ್ಕು ದಿನ ರಜಾ ಪಡೆದು ಊರಿಗೆ ಬಂದಿದ್ದ ನನಗೆ, ಅನಿರೀಕ್ಷಿತವಾಗಿ ಗೆಳೆಯ ಚೇತನ್ ಮಾಡಿದ ತುರ್ತು ಫೋನ್ ಕಾಲ್ ನನ್ನೆಲ್ಲಾ ಪ್ಲ್ಯಾನ್ ಉಲ್ಟಾ ಪಲ್ಟಾ ಮಾಡಿ ಬೆಂಗಳೂರಿಗೆ ಮತ್ತೆ ವಾಪಾಸು ಕೈಬೀಸಿ ಕರೆಸಿಕೊಳ್ಳುತ್ತಿತ್ತು.
*****
ಕಿಟಕಿ ಪಕ್ಕ ಕೂತು ಎಲೆ ಅಡಿಕೆ ಅಗಿಯುತಿದ್ದ ಚೂಪು ಮೀಸೆಯ ಅಜ್ಜ ಕಳ್ಳನನ್ನು ನೋಡಿದಂತೆ ನನ್ನನ್ನೇ ದುರುಗುಟ್ಟುತ್ತಿದ್ದ. ನಿಂತು ನಿಂತು ದಣಿದಿರುವ ಕಾಲುಗಳ ತಳಮಳ ಒಂದೆಡೆಯಾದರೆ, ಎದುರಿಗೆ ಕೂತ ಅಜ್ಜನ ಈ ಭಯಂಕರ ನೋಟ ಇನ್ನೊಂದೆಡೆ. ನಾನೇನು ಕಮ್ಮಿಯೇ? ನಾನೂ ಗುರಾಯಿಸಿ ನೋಡಲಾರಂಭಿಸಿದೆ. ನಮ್ಮಿಬ್ಬರ ದೃಷ್ಟಿಯುದ್ಧ ನೋಡಲು ರೈಲು ಡಬ್ಬಿಯಲ್ಲಿ ಯಾರೊಬ್ಬರಿಗೂ ಮನಸ್ಸಿದ್ದಂತೆ ಕಾಣಲಿಲ್ಲ. ಎಲ್ಲರೂ ತಮ್ಮತಮ್ಮದೇ ಲೋಕದಲ್ಲಿದ್ದರು.
ರೈಲು ಜೋರಾಗಿ ಹಾರ್ನ್ ಹಾಕುತ್ತಲೇ ಇತ್ತು. ಗದಗ ರೈಲ್ವೆ ನಿಲ್ದಾಣ ಹತ್ತಿರ ಬಂತು. ಅಲ್ಲೊಬ್ಬರು ಇಲ್ಲೊಬ್ಬರು ಮಿಸುಕಾಡುತ್ತ ಎದ್ದು ತಮ್ಮತಮ್ಮ ಬ್ಯಾಗುಗಳನ್ನು ಕೈಯಲ್ಲಿ ಹಿಡಿದು ಇಳಿಯಲು ತಯಾರಾದರು. ಅದೃಷ್ಟಕ್ಕೆ ಅಜ್ಜನ ಪಕ್ಕದಲ್ಲಿ ಕೂತಿದ್ದವನು ಇಳಿಯುತ್ತಿದ್ದ. ಜಾಗೃತಗೊಂಡ ಅಜ್ಜ ತನ್ನ ಕೈಕಾಲು ಸರಿಪಡಿಸಿಕೊಂಡು ಅರ್ಧಕರ್ಧ ಸೀಟು ತನ್ನದೇ ಪಿತ್ರಾರ್ಜಿತ ಆಸ್ತಿಯೆಂಬಂತೆ ಆಕ್ರಮಿಸಿಕೊಂಡ.
ಸಾವಕಾಶವಾಗಿ ಹೋಗಿ ಅಜ್ಜನ ಪಕ್ಕ ಕುಳಿತೆ. ಅನ್ಯಮನಸ್ಕನಂತೆ ಕಾಣುತ್ತಿದ್ದ ಅಜ್ಜ ಸಿಡಿಮಿಡಿಗೊಂಡು ತಿರುಗಿ ನೋಡಿದ. ನಾನು ‘ಸ್ವಲ್ಪ ಸರಕೊಂಡು ಕೂಡ್ರಿ’ ಎಂದು ದಬಾಯಿಸಿದಾಗ ತುಸು ಸರಿದು ಕೂತಂತೆ ಮಾಡಿದ. ಕಿಟಕಿ ತೆರೆದೇ ಇರುವುದರಿಂದ ತಣ್ಣಗೆ ಗಾಳಿ ಬರುತ್ತಿತ್ತು. ಜೊತೆಗೆ ಅಜ್ಜ ಬಾಯಲ್ಲಿ ಎಲೆ ಅಡಿಕೆ ಅಗಿಯುತ್ತ ಪಿಚಕ್.. ಪಿಚಕ್.. ಎಂದು ಉಗುಳುತ್ತಿದ್ದ. ಇದುವರೆಗೂ ನಿಂತು ಕಾಲು ನೋಯಿಸಿಕೊಂಡು ಉಸ್ಸಪ್ಪಾ! ಎಂದು ಕುಳಿತವನಿಗೀಗ ಚಳಿಯ ಕಿರಿಕಿರಿ. ಮೈಯೆಲ್ಲಾ ನಡುಗುತ್ತಿತ್ತು. ‘ರೀ ಮುತ್ಯಾರ, ತಣ್ಣಗ ಗಾಳಿ ಬರಾಕತ್ತದ ಕಿಟಕಿ ಮುಚ್ರಿ’ ಎಂದಾಗ, ಅಜ್ಜ ‘ನಿನಗ ಸೀಟ್.. ಬಿಟ್ಟಿದ್ದೇ ತಪ್ಪಾಯ್ತು ನೋಡು’ ಎಂದು ಸಿಟ್ಟು ಕಾರಿಕೊಂಡ. ‘ಈ ರೈಲೇನೂ ನಿಮ್ಮದಾದೇನ್ರಿ? ಸೀಟ್ ಮನೆಯಿಂದ ತಂದವರಂಗ ಆಡಬ್ಯಾಡ್ರಿ.. ತಿಳಿತಿಲ್ಲೋ’ ಎಂದು ಮಾರುತ್ತರ ಎಸೆದಾಗ ಒಂದಷ್ಟು ಗಾಬರಿಗೆ ಬಿದ್ದಂತೆ ಕಂಡ ಅಜ್ಜ ಮರುಮಾತನಾಡದೆ ಸುಮ್ಮನಾದ.
ಮಲಗಲು ಎಷ್ಟೇ ಹೊರಳಾಡಿದರೂ ನನ್ನ ಹತ್ತಿರ ನಿದ್ರೆ ಸುಳಿಯಲಿಲ್ಲ. ಬ್ಯಾಗಿನಲ್ಲಿದ್ದ ದಿನಪತ್ರಿಕೆ ತೆಗೆದು ಓದಲು ಪ್ರಯತ್ನಿಸಿದೆ. ಕೈಯಲ್ಲಿಯ ಪೇಪರ್ ಗಾಳಿಗೆ ಹಾರಾಡುತ್ತಿದ್ದರಿಂದ ಸುಭಾಷಿತ ಮಾತ್ರ ಓದಿದ್ದಾಯಿತು. ‘ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ.ʼ ಮಹಾತ್ಮ ಗಾಂಧೀಜಿ ಅವರು ನೀಡಿದ ಸಂದೇಶ. ಅಜ್ಜನಿಗೆ ಈ ಸುಭಾಷಿತ ಓದಿ ಬರೀ ವಯಸ್ಸಿನ ಬೆಳವಣಿಗೆಯಾದರೆ ಸಾಲದು ಸದ್ಗುಣನೂ ಆಗಬೇಕೆಂದು ಓದಿ ಹೇಳಬೇಕೆಂದುಕೊಂಡೆ. ನನ್ನ ಎದುರಿಗಿನ ಸೀಟಿನಲ್ಲಿ ಕೂತಿದ್ದ ಗುಳಿಕೆನ್ನೆಯ ದುಂಡು ಮೊಗದ ಹುಡುಗಿ, ದುಪ್ಪಟ್ಟಾ ತಲೆಗೆ ಸುತ್ತಿಕೊಂಡು ಪುಟ್ಟ ಮಕ್ಕಳಂತೆ ಗೋಣು ಅಲ್ಲಾಡಿಸುತ್ತ ಹಾಡು ಗುನುಗುತ್ತಿದ್ದಳು. ಅವಳ ಮುಂಗುರುಳು ಗಾಳಿಗೆ ಹಾರಾಡುತ್ತ ಆಗಾಗ ಗಲ್ಲದ ಮೇಲೆ ಕುಣಿದು ಕುಪ್ಪಳಿಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ನನ್ನ ಕಡೆ ನೋಡಿಯೂ ನೋಡದಂತೆ ನಿದ್ದೆಗೆ ಜಾರುತ್ತಿದ್ದಳು. ಕೈಲಿರುವ ವಾಚ್ ನೋಡಿಕೊಂಡೆ. ಕಾಲ ಓಡುತ್ತಿಲ್ಲವೋ.. ರೈಲು ಓಡುತ್ತಿಲ್ಲವೋ.. ಗೊತ್ತಾಗಲಿಲ್ಲ. ಸಮಯ ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಗದಗ ಸ್ಟೇಶನ್‌ನಲ್ಲಿ ಕೊಂಡುಕೊಂಡಿದ್ದ ಇಡ್ಲಿ-ವಡಾ ತಿಂದು ಮುಗಿಸಿದೆ. ನಿದ್ರೆ ಅಭಿಸಾರಿಕೆಯಂತೆ ಹುಡುಕಿಕೊಂಡು ಬಂತು. ನಿದ್ದೆಗಣ್ಣಲ್ಲಿ ನನ್ನ ತಲೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ವಾಲುತ್ತಿತ್ತು. ಒಂದೆರಡು ಸಲ ಬಾಜು ಕೂತ ಅಜ್ಜನ ಭುಜಕ್ಕೆ ನನ್ನ ತಲೆ ತಾಕಿದ್ದೇ ತಡ, ಅಜ್ಜ ಧ್ವನಿ ಎತ್ತರಿಸಿ ಬೈಯಲು ಶುರುಮಾಡಿದ. ನನಗೇನು ಮಾಡಬೇಕೆಂದು ತಿಳಿಯಲಿಲ್ಲ. ತಲೆ ತಗ್ಗಿಸಿ ಸುಮ್ಮನೆ ಕುಳಿತೆ. ಎದುರಿಗೆ ಕೂತಿದ್ದ ಹುಡುಗಿ ಅಯ್ಯೋ ಪಾಪ! ಎನ್ನುವಂತೆ ನನ್ನನ್ನೇ ನೋಡುತ್ತಿದ್ದಳು. ಅಜ್ಜನ ಬೈಗುಳಗಳಿಗಿಂತ ಅವಳ ಕನಿಕರದ ನೋಟ ನನಗೆ ಮತ್ತಷ್ಟು ಅವಮಾನ ಮಾಡಿತು. ಅಜ್ಜನಿಗೆ ಕ್ಷಮೆ ಕೇಳಿದರೂ ಬಹಳ ಹೊತ್ತಿನವರೆಗೂ ಆತ ವಟಗುಡುತ್ತಲೇ ಇದ್ದ. ಛೇ… ಎಂಥಾ ಪಾಡು ಮಾರಾಯ ಇದು.
ಮೇಲೆ ಕಂಬದ ಸರಳುಗಳ ಮೇಲೆ ಒಂದಷ್ಟು ಲಗೇಜುಗಳಿದ್ದವು. ಅದರ ನಡುವೆಯೇ ಕಾಲು ಮಡಚಿಕೊಂಡು ಮಲಗಿದವನೊಬ್ಬ ಮುಂದಿನ ನಿಲ್ದಾಣದಲ್ಲಿ ಇಳಿದುಹೋದ. ಒಂಟಿಗಾಲಿನಲ್ಲಿ ನಿಂತವರು, ಕೆಳಗೆ ಕೂತು ನಿದ್ದೆಗಣ್ಣಲ್ಲಿ ಜೋಲಿ ಹೊಡೆಯುತ್ತಿದ್ದವರೆಲ್ಲ ಆ ಸೀಟಿಗೆ ಹೊಂಚುಹಾಕಿದ್ದರು. ನಾನು ತಡಮಾಡದೆ ಮೇಲಿನ ಸೀಟು ಹಿಡಿಯಲು ಯಶಸ್ವಿಯಾದೆ. ಅಜ್ಜನ ಸಹವಾಸದಿಂದ ತಪ್ಪಿಸಿಕೊಂಡು ಮೇಲೆ ಹೋಗಿ ಅಂಗಾತ ಮಲಗಿದ್ದು ಮನಸ್ಸಿಗೆ ನಿರಾಳವೆನ್ನಿಸಿತು. ಮನುಷ್ಯ ನಿರಂತರವಾಗಿ ಒಂದಲ್ಲ ಒಂದು ಕೊರತೆ ನೀಗಿಸಿಕೊಳ್ಳುವ ಪ್ರಯತ್ನದಲ್ಲಿಯೇ ಖುಷಿ ಕಾಣುತ್ತಾನೆ ಎನಿಸುತ್ತದೆ. ಎಲ್ಲಾ ಅನುಕೂಲಗಳು ಇದ್ದಿದ್ದೇ ಆದರೆ ಸಂಬಂಧಪಡದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಾನೆ. ಮೊದಲು ಲಗೇಜು ಇಡಲು ಜಾಗ ಹುಡುಕಿ, ಸಮಾಧಾನ ಪಟ್ಟಿದ್ದಾಯಿತು. ನಂತರ.. ಕೂರಲು ಜಾಗ.. ಈಗ ಮಲಗಲು ಜಾಗ ಪಡೆದದ್ದಾಯಿತು. ಇನ್ನೂ…?
ನನ್ನೆದುರು ಕೂತಿದ್ದ ಹುಡುಗಿ ಈಗ ಅಜ್ಜನ ಬಾಜು ಬಂದು ಕುಳಿತಿದ್ದಳು. ಅಜ್ಜನ ಸಿಟ್ಟು ಇನ್ನೂ ಕಡಿಮೆಯಾದಂತೆ ಕಾಣಲಿಲ್ಲ. ಆಗಾಗ ತಲೆ ಮೇಲೆತ್ತಿ ನನ್ನನ್ನು ತಿನ್ನುವಂತೆ ನೋಡುತ್ತಲೇ ಇದ್ದ. ಒಂದಷ್ಟು ಹೊತ್ತು ಆದಮೇಲೆ ಇಡೀ ರೈಲು ಸದ್ದುಗದ್ದಲವಿಲ್ಲದೆ ಮಹಾಮೌನಿಯಾಗಿ ಓಡಲಾರಂಭಿಸಿತು. ಇಲ್ಲವೇ, ಅದರ ಸದ್ದಿಗೆ ನನ್ನ ಮನಸ್ಸು ಕಿವಿ ಹೊಂದಿಕೊಂಡಿರಬೇಕು. ಪ್ರಯಾಣಿಕರೆಲ್ಲ ನಿದ್ರಾಲೋಕಕ್ಕೆ ಜಾರುತ್ತಿದ್ದರು. ಅಜ್ಜನ ಭುಜಕ್ಕೆ ವಾಲಿಕೊಂಡು ಆ ಹುಡುಗಿ ಆರಾಮಾಗಿ ನಿದ್ರೆಗೆ ಜಾರಿದ್ದಳು. ಅಯ್ಯೋ!! ನಾನು ಒಂದೆರಡು ಸಲ ಭುಜ ತಾಕಿಸಿದ್ದೆ ತಡ ಅಜ್ಜ ಬೈದು ಅವಮಾನಿಸಿದ್ದ. ಅದೇ ಈಗ ಒಂದು ಚೆಂದದ ಹುಡುಗಿ ಇಷ್ಟು ಆರಾಮವಾಗಿ ಮಲಗಿದರೂ ಅಜ್ಜ ಏನೇನೂ ಗೊತ್ತೇ ಇಲ್ಲದಂತೆ ನಿದ್ರೆಗೆ ಜಾರಿದವನಂತೆ ನಟಿಸುತ್ತಿದ್ದ. ಅಬ್ಬಾ! ಈ ಅಜ್ಜ ಕಿಲಾಡಿಯೇ ಇರಬೇಕು.
ಹಿಂದೆ ಯಾರೋ ಜೋರಾಗಿ ಮಾತನಾಡುತ್ತಿದ್ದ ಧ್ವನಿ ಕೇಳಿಸಿತು. ಹೌದು ಇದು ಪರಿಚಿತ ಧ್ವನಿ. ಹಿಂದೆ ಎಲ್ಲೋ ಕೇಳಿದ… ತುಂಬಾ ಆತ್ಮೀಯರ ಧ್ವನಿಯ ಹಾಗೆಯೇ ಇದೆ. ತಡಬಡಿಸಿ ಎದ್ದು ಸರಳುಗಳ ಪಂಜರದ ನಡುವಿನಿಂದ ಇಣುಕಿ ನೋಡಿದೆ. ಹೆಣ್ಣುಮಗಳೊಬ್ಬಳು ಹುಡುಗನೊಬ್ಬನೊಂದಿಗೆ ತಮಾಷೆಯಲ್ಲಿ ತೊಡಗಿದ್ದಳು. ಪರಿಚಿತವಿದ್ದಂತಿರುವ ಈ ಧ್ವನಿಯನ್ನು ಎಷ್ಟೊಂದು ವರ್ಷಗಳ ನಂತರ ಕೇಳಿದ್ದು? ಈ ಧ್ವನಿ ಕೇಳಿದ ಬಳಿಕ ಮನಸಲ್ಲೇನೋ ಪುಳಕ. ಈ ಧ್ವನಿ ಯಾರ ಧ್ವನಿಯಂತಿದೆ? ಊಹ್ಞೂಂ.. ನೆನಪಾಗುತ್ತಿಲ್ಲ. ನೀತಾ? ಸಂಗೀತಾ.. ಸವಿತಾ.. ಲಕ್ಷ್ಮೀ.. ವಿಜಯಶ್ರೀ.. ಮಹೇಶ.. ಅಲ್ಲಲ್ಲ, ಇವರಾರು ಅಲ್ಲ. ಇದು ಥೇಟ್ ರಮೇಶನ ಧ್ವನಿಯಂತೆಯೇ ಇದೆ. ಪ್ರೈಮರಿ ಶಾಲೆಯಲ್ಲಿ ಓದುವಾಗ ರಮೇಶನಿಗೆ ನಾನೆಂದರೆ ಪಂಚಪ್ರಾಣ. ರಮೇಶನ ಅಮ್ಮ.. ‘ಅನಿಲ್ ನೀನು ಅದಿಯಂತ ಅವ್ನು ಸಾಲೀಗಿ ಬರ್ತಾನ…. ಅವನಿಗೆ ಛಲೋತೆಗೆ ಕಲಿಸುವ ಜವಾಬ್ದಾರಿ ನಿಂದೇ ನೋಡಪಾ’ ಎಂದು ಅಕ್ಕರೆಯಿಂದ ಹೇಳುತ್ತಿದ್ದಳು. ಮನೆಗೆ ಹೋದಾಗಲೆಲ್ಲ ನನ್ನ ಗುಣಗಾನ ಮಾಡಿ ನಮ್ಮಿಬ್ಬರ ಸ್ನೇಹದ ಸೇತುವೆಯನ್ನು, ಮತ್ತಷ್ಟು ಗಟ್ಟಿ ಮಾಡುತ್ತಿದ್ದಳು. ರಮೇಶನ ತಾಯಿಯ ಮಾತಲ್ಲಿ ಉತ್ಪ್ರೇಕ್ಷೆ ಅನ್ನಿಸುವಂತದ್ದು ಏನೂ ಇರಲಿಲ್ಲ. ರಮೇಶ ಯಾವಾಗಲೂ ಅಷ್ಟೇ, ನನ್ನ ಬಿಟ್ಟು ಒಂದು ಕ್ಷಣ ಇದ್ದವನಲ್ಲ. ‘ನನ್ ದೋಸ್ತಿ ಬಿಡಬ್ಯಾಡ ದೋಸ್ತ್’ ಎಂದು ಗೋಗರೆಯುತ್ತಿದ್ದ.
ಆಗ ನಾವಿಬ್ಬರು ಐದನೇ ತರಗತಿಯಲ್ಲಿ ಓದುತ್ತಿದ್ದೆವು. ಅವತ್ತೊಂದಿನ ನಮ್ಮ ಶಾಲೆಯ ಎದುರಿಗಿದ್ದ ದೊಡ್ಡದಾದ ಬೇವಿನ ಮರದ ಕೆಳಗೆ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಎಲ್ಲರೂ ಸಾಲಾಗಿ ಕುಳಿತಿದ್ದೆವು. ರಮೇಶ ನನ್ನ ಹಿಂದೆಯೇ ಕೂತಿದ್ದ. ಏರುಬೈತಲೆ ತೆಗೆದು ತಲೆ ತುಂಬಾ ಎಣ್ಣೆ ಹಚ್ಚಿಕೊಂಡು ಲಕಲಕ ಹೊಳೆಯುತ್ತಿದ್ದ. ಆಕಸ್ಮಾತಾಗಿ ನನ್ನ ಚೆಡ್ಡಿ ಕಿಸೆಯಿಂದ ಬಿದ್ದ ಎಂಟಾಣೆಯನ್ನು ನೋಡಿ ‘ನಿನ್ ರೊಕ್ಕ ಬಿದ್ದಾದ ತಗೋ’ ಎಂದು ನನ್ನ ಕೈಗೆ ಕೊಟ್ಟಿದ್ದ. ಆ ಎಂಟಾಣೆಯ ಸಲುವಾಗಿ ನಮ್ಮ ಮನೆಯಲ್ಲಿ ದೊಡ್ಡ ರಾಮಾಯಣವೇ ನಡೆದಿತ್ತು. ರೊಕ್ಕ ಕೊಟ್ಟರೆ ಮಾತ್ರ ಶಾಲೆಗೆ ಹೋಗ್ತೀನಿ ಎಂದು ಹಠ ಹಿಡಿದು ಕೂತಿದ್ದಾಗ.. ನಮ್ಮಮ್ಮ ‘ದಿನಾ ಸಾಲೀಗಿ ಹೋಗ್ಲಾಕ ರೊಕ್ಕ ಬೇಕಾ.. ರೊಕ್ಕ? ಮನ್ಯಾಗೇನು ರೊಕ್ಕದ ಗಿಡ ನೆಟ್ಯಾವೇನೊ? ಬೇಕೇನು ಲತ್ತಿ’ ಎಂದು ಮಂಗಳಾರತಿಯ ಜೊತೆಗೆ ಕಡಚಿಗೆಯಿಂದ ಪ್ರಸಾದ ಕೊಟ್ಟು ಕಳಿಸಿದ್ದಳು. ರಮೇಶ ರೊಕ್ಕ ಕೊಟ್ಟಾಗ ನನಗೆ ತುಂಬಾ ಖುಷಿಯಾಗಿತ್ತು. ಅವನ ಜಾಗದಲ್ಲಿ ಬೇರೆ ಯಾರೇ ಹುಡುಗರಿದ್ದರೂ ರೊಕ್ಕ ಸಿಕ್ಕ ಖುಷಿಯಲ್ಲಿ ತಮ್ಮ ಕಿಸೆಯೊಳಗೆ ತುರುಕಿಕೊಳ್ಳುತ್ತಿದ್ದರು. ಅದೇ ಖುಷಿಯಲ್ಲಿ ಮಧ್ಯಾಹ್ನ ರೆಸ್ಟಿಗೆ ಬಿಟ್ಟಾಗ ರಮೇಶನಿಗೆ ಒತ್ತಾಯದಿಂದ ಅಂಗಡಿಗೆ ಕರೆದುಕೊಂಡು ಹೋಗಿ ಇಬ್ಬರೂ ಕೂಡಿ ಪೆಪ್ಪರಮೆಂಟು ತಿಂದಿದ್ದೆವು. ಎಂಟಾಣೆಯಿಂದ ಚಿಗುರೊಡೆದ ಸ್ನೇಹ ಊಟಕ್ಕೆ ಹೋದರೂ, ಆಡಲು ಹೋದರೂ, ಉಚ್ಚೆ ಹೊಯ್ಯಲು ಹೋದರೂ ಜೊತೆಜೊತೆಯಲ್ಲಿಯೇ ಹೋಗುತ್ತಿದ್ದೆವು. ಅಂದಿನಿಂದ ನಮ್ಮಿಬ್ಬರ ಸ್ನೇಹ ಶಾಲೆಯಲ್ಲಿ ಇತರ ಹುಡುಗರು ಹೊಟ್ಟೆಕಿಚ್ಚು ಪಡುವ ಹಾಗೆ ಮುಂದುವರೆದಿತ್ತು. ಒಂದಿನವೂ ತಪ್ಪಿಸದಂತೆ ಅಕ್ಕಪಕ್ಕವೇ ಕುಳಿತಿರುತಿದ್ದೆವು. ಹೀಗಾಗಿ ನಮ್ಮಿಬ್ಬರನ್ನು ಜೋಡಿ ಹಕ್ಕಿಗಳು ಎಂದು ಕಾಡುತ್ತಿದ್ದರು.
ಅವತ್ತು ರಮೇಶ ಶಾಲೆಗೆ ಬಂದಿರಲಿಲ್ಲ. ಅವನನ್ನು ಕರೆದುಕೊಂಡು ಬಂದರಾಯಿತೆಂದು ಅವರ ಮನೆಗೆ ಹೋದೆ. ಮನೆಯ ಬಾಗಿಲು ಮುಚ್ಚಿತ್ತಾದರೂ ಹೊರಗಡೆಯ ಚಿಲಕ ಹಾಕಿರಲಿಲ್ಲ. ಕಟ್ಟೆ ಏರಿ ಕಿಟಕಿಯಿಂದ ಮನೆಯಲ್ಲಿ ಇಣುಕಿ ನೋಡಿದೆ. ರಮೇಶ ತನ್ನ ತಂಗಿಯ ಲಂಗ, ದಾವಣಿ ಹಾಕಿಕೊಂಡು, ಹಣೆಗೆ ಟಿಕಳಿ ಹಚ್ಚಿಕೊಂಡು ಕನ್ನಡಿಯ ಎದುರು ಕೂತು ಹುಡುಗಿಯರಂತೆ ನುಲಿಯುತ್ತಿದ್ದ. ನನಗೆ ನಗು, ನಾಚಿಕೆ ತಡೆಯಲಾಗದೆ ಅಲ್ಲಿಂದ ಓಡುತ್ತ ಶಾಲೆಗೆ ವಾಪಸಾದೆ.
ಮರುದಿನ ನಾನು ಶಾಲೆಗೆ ತಡವಾಗಿ ಹೋದೆ. ರಮೇಶ ತನ್ನ ಪಾಟಿಚೀಲದಿಂದ ಪುಸ್ತಕ ಹೊರತೆಗೆದಿರಿಸಿ ನಾನು ದಿನಾಲು ಕೂರುವ ಜಾಗದಲ್ಲಿ ಬೇರಾವ ಹುಡುಗರು ಕೂರದಂತೆ ನನಗಾಗಿ ಜಾಗ ಹಿಡಿದಿದ್ದ. ಆದರೆ, ನಮ್ಮ ಕ್ಲಾಸಿನ ಲೀಡರ್ ಆಗಿದ್ದ ಸೈಬಣ್ಣ ಬಂದು ರಮೇಶನನ್ನು ಹೊಡೆದು ಅಲ್ಲಿಂದ ಎಬ್ಬಿಸಿ ಆ ಜಾಗದಲ್ಲಿ ತಾನು ಕುಳಿತಿದ್ದ. ನಾನು ಬಂದಾಗ ರಮೇಶ ಅಳುತ್ತಲೇ ನಡೆದ ಘಟನೆ ತಿಳಿಸಿದ.
‘ಲೇ ರಮೇಶ ಎಲ್ಲಾದಕ್ಕೂ ಅಳ್ತಿಯಲ್ಲ.. ಒದಿಬೇಕಿಲ್ಲ? ನಿನಗಿಂತ ಅವನೇನು ದೊಡ್ಡಾಂವ ಅದಾನೇನು?’ ಎಂದಾಗ ರಮೇಶ ಸಿಟ್ಟಿನಲ್ಲಿ ತನ್ನ ಬೆರಳು ಲಟಕ್.. ಲಟಕ್.. ಮುರಿದು ಏನೇನೋ ಶಾಪ ಹಾಕಿ… ಅಲ್ಲಿಂದ ಎದ್ದು ಎಲ್ಲಕ್ಕಿಂತ ಹಿಂದೆ ಹೋಗಿ ಮುಖ ಊದಿಸಿಕೊಂಡು ಒಬ್ಬನೇ ಕುಳಿತ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ‘ಯಾಕೋ ರಮೇಶ ಮನ್ಯಾಗ ನಿಮ್ಮ ತಂಗಿ ಡ್ರೆಸ್ ಹಾಕೊಂಡು ಕುಣಿಯಾಕತ್ತಿದ್ದಿ’ ಎಂದಾಗ ಗಲಿಬಿಲಿಗೆ ಒಳಗಾದಂತೆ ಕಂಡ ರಮೇಶ ‘ನಾನೆಲ್ಲಿ ಹಾಗೆ ಮಾಡೀನಿ.. ಸುಳ್ಳು ಹೇಳ್ತಿ’ ಎಂದು ಮಾತು ಮರೆಸಲು ಪ್ರಯತ್ನಿಸಿದನಾದರೂ ಕೊನೆಗೆ ಸ್ವಾತಂತ್ರ‍್ಯ ದಿನಾಚರಣೆಗೆ ತನ್ನದು ಒಂದು ಡಾನ್ಸ್ ಇದೆ ಎಂದು ಹೇಳಿದ.
ಅವತ್ತು ರಮೇಶ ನಮ್ಮ ಮನೆಗೆ ಬಂದಿದ್ದ. ಅವನು ಹೋದ ಮೇಲೆ, ನಮ್ಮತ್ತೆ ನನ್ನನ್ನು ಕರೆದು ರಮೇಶನ ಬಗ್ಗೆ ಏನೇನೋ ಹೇಳಿದಳು. ಅವನ ಜೊತಿ ನೀ ಆಡಬ್ಯಾಡ. ಅಂವ ನಮ್ಮನೆಗೆ ಹಾಲು ಮಾರಲು ಬರ್ತಾನಲ್ಲ ರಾಜಣ್ಣನಂಗ ಹೆಂಗಸ್ಯಾ ಅದಾನ ಎಂದಿದ್ದಳು. ನಮ್ಮನೆಗೆ ಹಾಲು ಮಾರಲು ಬರ್ತಿದ್ದ ರಾಜಣ್ಣ ಎರಡು ಅಂಗೈ ಮುಂದೆ ಮಾಡಿ ಎದೆ ಉಬ್ಬಿಸಿಕೊಂಡು ಥೇಟ್ ಹೆಣ್ಮಕ್ಳ ಹಾಗೆ ಮಾತನಾಡುತ್ತಿದ್ದ. ಓಣಿಯಲ್ಲಿ ಎಲ್ಲರೂ ಅವನಿಗೆ ಹೆಂಗಸ್ಯಾ ರಾಜಣ್ಣ, ಹೆಂಗಸ್ಯಾ ರಾಜಣ್ಣ ಎನ್ನುತ್ತಿದ್ದರು. ರಾಜಣ್ಣನೂ ಅಷ್ಟೇ! ಅವನಿಗೆ ಯಾರೇ ಏನೇ ಅಂದರೂ ಎದುರುತ್ತರ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ. ಈಗ ನಮ್ಮತ್ತೆ ರಮೇಶನನ್ನು ರಾಜಣ್ಣನ ಹೋಲಿಕೆ ಮಾಡಿರುವುದು ನನಗೆ ಸರಿ ಕಾಣಲಿಲ್ಲ. ರಮೇಶನ ಅಪ್ಪ ಯಾವಾಗಲೂ ಮನೆಯಲ್ಲಿ ಹೊಡಿಯುತ್ತಾನೆಂದು ಅವತ್ತು ಉಚ್ಚೆ ಹೊಯ್ಯಲು ಶಾಲೆಯ ಹಿಂದೆ ಹೋಗಿದ್ದಾಗ ಮೈಮೇಲಿನ ಬಾಸುಂಡೆ ತೋರಿಸಿದ. ‘ನೀ ಯಾಕಾದ್ರು ನಮ್ಮ ಮನೆಯಲ್ಲಿ ಹುಟ್ಟಿದಿ? ನನ್ನ ಮರ್ಯಾದಿ ಕಳಿಯಾಕ’ ಎಂದು ನನ್ನೆದುರು ಬಿಕ್ಕಿ ಬಿಕ್ಕಿ ಅತ್ತಿದ್ದ. ನಮ್ಮ ಸ್ಕೂಲ್ ಮೇಷ್ಟ್ರು ಅಷ್ಟೇ ದಿನಕ್ಕೊಮ್ಮೆಯಾದರೂ ಅವನನ್ನು ಕಿಚಾಯಿಸಿ, ಮಾತನಾಡಿಸಿ ಮಜಾ ತೆಗೆದುಕೊಳ್ಳುತ್ತಿದ್ದರು. ಆಗ ಹುಡುಗರೆಲ್ಲ ಗೊಳ್ಳೆಂದು ನಗುತ್ತಿದ್ದರು. ಪಾಪ! ಸಂಭಾವಿತ ಹುಡುಗ ರಮೇಶನನ್ನು ಎಲ್ಲರೂ ಕಾಡುವವರೇ ಎನಿಸಿತು.
ಏಳನೇ ಕ್ಲಾಸಿಗೆ ಬರುವಷ್ಟರಲ್ಲಿ ರಮೇಶ ಶಾಲೆಗೆ ಬರುವುದು ಬಲು ಅಪರೂಪವಾಯಿತು. ಇತ್ತೀಚಿನ ಅವನ ನಡೆನುಡಿಗಳಲ್ಲಿ ಅತಿಯಾದ ಬದಲಾವಣೆ ಕಾಣುತ್ತಿತ್ತು. ಪಕ್ಕದಲ್ಲಿ ಕೂತಿರುತ್ತಿದ್ದ ಹುಡುಗರು ಅವನಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದರು. ಆಗಿನಿಂದ ರಮೇಶ ಸಣ್ಣಪುಟ್ಟ ವಿಷಯಗಳನ್ನೆಲ್ಲ ದೊಡ್ಡದು ಮಾಡಿ, ಒಬ್ಬನೇ ಅಳುತ್ತಾ ಯಾರೂ ಇರದ ಜಾಗದಲ್ಲಿ ಹೋಗಿ ಕೂರುತ್ತಿದ್ದ. ನನ್ನ ಪಕ್ಕ ಕೂತಿದ್ದಾಗಲೂ ಅಷ್ಟೇ ಪ್ರತಿ ಮಾತಿಗೂ ನನ್ನ ತೊಡೆ ಮುಟ್ಟಿ ಮುಟ್ಟಿ ಮಾತನಾಡಿಸುವುದು, ಅಂಟಿಕೊಂಡು ಕೂರುವುದು ಮಾಡುತ್ತಿದ್ದ. ಹೀಗೆಲ್ಲ ಮಾಡಬಾರದು ಅಸಹ್ಯ ಅನಿಸುತ್ತೆ, ಎಂದು ಹತ್ತಾರು ಸಲ ಹೇಳಿದ್ದರೂ ಅವನು ಕೇಳುತ್ತಿರಲಿಲ್ಲ. ಒಂದೆರಡು ಸಲ, ಹುಡುಗರು ಅವನೊಡನೆ ನನಗೂ ಹೋಲಿಕೆ ಮಾಡಿ ನಕ್ಕಿದ್ದರು. ಅಂದಿನಿಂದ ರಮೇಶ ನನ್ನೊಂದಿಗೆ ಕೂರದೆ ಹಿಂದೆ ಕೂರಲು ಪ್ರಾರಂಭಿಸಿದ್ದ. ‘ಹೊಯ್ಕೊಳ್ಳೋರಿಗೆ ಹನ್ನೆರಡು ತಿಂಗಳು ಹೋಳಿಹುಣ್ಣಿಮಿ.. ತಲೆ ಕೆಡಸ್ಕೋಬ್ಯಾಡ್ ಬಾ ಮಾರಾಯಾ ನಂಜೊತೆ ಕುಂದ್ರು’ ಎಂದರೂ ‘ನನ್ನಿಂದಾಗಿ ನಿನಗೇಕೆ ಅವಮಾನ ದೋಸ್ತ’ ಎನ್ನುತ್ತಿದ್ದ. ಎಲ್ಲ ಹುಡುಗರು ವ್ಯಂಗ್ಯವಾಗಿ ‘ರಮ್ಯಾ.. ರಮ್ಯಾ..’ ಎನ್ನುವಾಗ ನಾನು ಅದೆಷ್ಟೋ ಬಾರಿ ‘ಅವನ ಹೆಸರು ರಮೇಶ ಆದ.. ರಮ್ಯಾ.. ರಮ್ಯಾ.. ಅನಬ್ಯಾಡ್ರಿ’ ಎಂದು ಅವರಿಗೆ ವಾರ್ನ್ ಮಾಡಿದ್ದೆ. ಆಗವರು ನಾವು ಸಿನಿಮಾ ನಟಿ ರಮ್ಯಾಗೆ ಅನ್ನುತ್ತೇವೆ, ಇವನಿಗಲ್ಲ, ಎಂದು ಮಾತು ಬದಲಿಸುತ್ತಿದ್ದರು. ರಮೇಶ ‘ಇರ್ಲಿ ಬಿಡು.. ರಮೇಶ ಅನ್ನೋದಕ್ಕಿಂತ ರಮ್ಯಾ ಅಂದ್ರೆ ನನ್ಗೂ ಇಷ್ಟ.. ನೀನೂ ಹಾಗೆಯೇ ಅನ್ನು’ ಎಂದಿದ್ದ. ‘ಥೂ.. ವಿಚಿತ್ರ ಪ್ರಾಣಿ ಅದೀಲೆ ನೀನು’ ಎಂದು ಬೈದಿದ್ದೆ.
ಏಳನೆಯ ಕ್ಲಾಸ್‌ಗೆ ನಮಗೆ ಬೋರ್ಡ್ ಎಕ್ಸಾಮ್ ಇತ್ತು. ರಮೇಶ ಚೆನ್ನಾಗಿ ಓದಿಕೊಂಡಿದ್ದರೂ ಒಲ್ಲದ ಮನಸ್ಸಿನಿಂದ ಪರೀಕ್ಷೆ ಬರೆದು ಕೊನೆಗೆ ಒಂದು ವಿಷಯವನ್ನು ಪರೀಕ್ಷೆ ಬರೆಯದೇ ಫೇಲಾದ. ಕೊನೆಗೆ ‘ನಾ ಸಾಲೀ ಕಲಿಯಲ್ಲ. ಎಲ್ಲಾ ಹುಡ್ಗರು ನನ್ಗ ಕಾಡ್ತಾರ’ ಎಂದು ಏನೇನೋ ನೆಪ ಹೇಳಿ ಶಾಲೆಗೆ ಬರುವುದನ್ನೇ ಬಿಟ್ಟ. ಆಮೇಲೆ ನಾನು ಹೈಸ್ಕೂಲ್‌ಗೆಂದು ವಿಜಯಪುರಕ್ಕೆ ಹೋದೆ. ರಮೇಶ ತದನಂತರ, ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸಾಗಿ ಊರಿನ ಹೈಸ್ಕೂಲಿನಲ್ಲಿ ಅಡ್ಮಿಷನ್ ತೆಗೆದುಕೊಂಡ. ಅದಾದ ಮೇಲೆ ನಮ್ಮಿಬ್ಬರ ಭೇಟಿ ಅಷ್ಟಕ್ಕಷ್ಟೇ ಎಂಬಂತಾಯಿತು.
*****
ರಚ್ಚೆ ಹಿಡಿದು ಅಳುವ ಮಗುವಿನಂತೆ ರೈಲು ಒಂದೇ ಸಮನೇ ಕೂಗು ಹಾಕುತ್ತಲೇ ಇತ್ತು. ಅಷ್ಟರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣ ಬಂದಿತು. ಒಂದಷ್ಟು ಜನ ಇಳಿದಿದ್ದಾರೆ ಎನ್ನುವುದರೊಳಗೆ ಮತ್ತೊಂದಿಷ್ಟು ಜನ ಜೇನುಹುಳುಗಳಂತೆ ಮುಕುರುತ್ತಿದ್ದರು. ಎದ್ದು ಟಾಯ್ಲೆಟ್‌ಗೆ ಹೋಗಬೇಕಂದವನಿಗೆ ಕಾಲಿಡಲು ಜಾಗ ಇರಲಿಲ್ಲ. ಜನ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿದ್ದರು. ಕೆಲವರು ಕಂಬಿಯ ಸಹಾಯದಿಂದ ಮಂಗನಂತೆ ಟುಣುಕು.. ಟುಣುಕು.. ಜಿಗಿಯುತ್ತಾ ಟಾಯ್ಲೆಟ್‌ಗೆ ಹೋಗಿ ಹಗುರಾಗಿ ಬರುತ್ತಿದ್ದರು. ಮುಂದಿನ ಸ್ಟೇಶನ್ ಬರುವವರೆಗೂ ತಡೆದುಕೊಂಡರಾಯಿತೆಂದು ಮುಖ ಕಿವುಚುತ್ತ ಓದುತ್ತಿದ್ದ ದಿನ ಪತ್ರಿಕೆ ಮುಖದ ಮೇಲೆ ಹೊದ್ದು ಕಣ್ಮುಚ್ಚಿದೆ.
ಒಮ್ಮೆಲೇ ಮೈ ಜುಂ! ಎಂದಂತಾಯಿತು. ನರನಾಡಿಗಳಲ್ಲಿ ವಿದ್ಯುತ್ ಸಂಚಾರ. ಎದುರಿಗೆ ಎರಡು ಸರಳುಗಳನ್ನು ಹಿಡಿದು ನಡುವೆ ನಿಂತಿದ್ದ ಮಂಗಳಮುಖಿಯೊಬ್ಬಳು ತನ್ನ ಎಡಗೈಯಿಂದ ನನ್ನ ಎದೆಯ ಮೇಲೆ ಕೈಯಾಡಿಸುತ್ತ ‘ರೊಕ್ಕ ಕೊಡು ಮಾಮಾ’ ಎಂದಳು. ಮುಖದ ಮೇಲೆ ಹಾಕಿಕೊಂಡಿದ್ದ ಪೇಪರ್ ಸ್ವಲ್ಪ ಸರಿಸಿ ನೋಡಿದೆ. ಅವಳು ಮತ್ತೆ ‘ಕೊಡು ಮಾಮಾ.. ಮಾಮಾ ಕೊಡು’ ಎನ್ನುತ್ತಿದ್ದಳು. ಕೆಳಗೆ ಕೂತಿದ್ದವರೆಲ್ಲ ನನ್ನನ್ನೇ ನೋಡುತ್ತಿದ್ದರು. ಖಜಿಲ್ ಆದಂತಾಗಿ, ಒಮ್ಮೆಲೇ ಸಿಟ್ಟು ಬಂದು ಅವಳ ಕಪಾಳಕ್ಕೆ ಹೊಡೆದೆ. ಕೊಟ್ಟ ಏಟಿನ ರಭಸಕ್ಕೆ ರಫ್.. ಅಂತ ಶಬ್ದವಾಯಿತು. ‘ಆಯ್ತು ನನ್ ರಾಜ ಅದಕ್ಯಾಕ ಸಿಟ್ಟು ಮಾಡ್ಕೋತಿ ಮಲಗು.. ಮಲಗು’ ಎಂದು ಎದೆಯ ಮೇಲಿದ್ದ ಜಡೆಯನ್ನು ಹೊರಳಿಸಿ ಬೆನ್ನ ಮೇಲೆ ಹಾಕಿಕೊಂಡು ಮುಂದಿನ ಬೋಗಿಗೆ ನಡೆದಳು. ಅವಳು ಮುಡಿದಿದ್ದ ಮಲ್ಲಿಗೆಹೂವಿನ ಸುವಾಸನೆ ಬೋಗಿ ತುಂಬೆಲ್ಲ ಹರಡಿ ಒಂದು ಕ್ಷಣ ಮೈಮರೆಸಿತು.
ಅವಳು ಹೋಗಿ ಬಹಳ ಹೊತ್ತಾದರೂ, ಕೆಳಗೆ ಕುಳಿತವರು ಅದೇ ವಿಷಯ ಹಿಡಿದು ಇನ್ನೂ ಎಳೆದಾಡುತ್ತಿದ್ದರು. ಬಹುತೇಕರು ನಾ ಹೊಡೆದುದ್ದಕ್ಕೆ ‘ಛಲೊ ಮಾಡಿದ್ರಿ ನೀವು’ ಎಂದು ನನ್ನ ಪರ ಬ್ಯಾಟಿಂಗ್ ಮಾಡುತ್ತಿದ್ದರು. ಅದರಲ್ಲೊಬ್ಬನಿಗೆ ನಾನು ಹಾಗೆ ಹೊಡೆದು ಕಳಿಸಿದ್ದು ಸರಿ ಎನ್ನಿಸಿರಲಿಲ್ಲ ಅಂತ ಕಾಣುತ್ತೆ. ಅವನೇನು ನೇರವಾಗಿ ಹೇಳಲಿಲ್ಲವಾದರೂ ಅವರ ಚರ್ಚೆಯಲ್ಲಿ ಆ ಸುಳಿವು ನನಗೆ ಸಿಕ್ಕು ಮುಂದೆ ಏನು ಮಾತನಾಡುತ್ತಾರೆಂದು ಹೊರಳಿ ಮಲಗಿದೆ. ಒಬ್ಬ ‘ಅಲ್ರಿ ಇವ್ರಿಗೆ ದುಡುಕೊಂಡು ತಿನ್ನೋಕ ಏನ್ರಿ ಆಗ್ಯಾದ?’ ಅಂದಾಗ ಮತ್ತೊಬ್ಬ ‘ದಿನಕ್ ಸಾವಿರ ರೂಪಾಯಿ ಮ್ಯಾಲ್ ಗಳಸ್ತಾರ ನೋಡ್ರೀ’ ಎಂದ. ಮತ್ತೊಬ್ಬ ‘ಅದಕ್ ನಾ ಒಂದು ರೂಪಾಯಿ ಕೊಡಲ್ಲ ನೋಡ್ರಿ’ ಎಂದ. ಮತ್ತೊಬ್ಬ ‘ಒಬ್ಬೊಬ್ರು ಕೊಡಲಿಲ್ಲ ಅಂದ್ರ ಲಂಗ ಎತ್ತಿ ತೋರಿಸಿ ಅಸಹ್ಯ ಮಾಡ್ತಾರಿ..’ ಎಂದು ಮುಖ ಕಿವಿಚಿಕೊಂಡ. ದಿನಪತ್ರಿಕೆ ಓದುತ್ತ ಕುಳಿತಿದ್ದವನೊಬ್ಬ ‘ಅಲ್ರೀ ಅವ್ರಿಗೆ ಕೆಲಸ ಮಾಡ್ರಿ ಅಂತೀರಿ.. ಕೆಲಸ ಯಾರು ಕೊಡ್ತರ‍್ರಿ? ನೋಡಿದ್ರಲಾ ಮ್ಯಾಲ್ ಮಲಗಿದ್ದ ಸಾಹೇಬ್ರು ಬರಿ ಮುಟ್ಟಿದ್ರೆ ಹೆಂಗ್ ಹೊಡ್ದು ಕಳಸಿದ್ರು’ ಎಂದು ಮತ್ತೆ ದಿನಪತ್ರಿಕೆ ಓದುವುದರಲ್ಲಿ ಮಗ್ನನಾದ. ನಂತರದಲ್ಲಿ ಯಾರೂ ಏನೂ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತರು. ಅವಳಿಗೆ ಹಾಗೆ ಹೊಡೆಯಬಾರದಿತ್ತೆನಿಸಿ, ನನ್ನ ಮೇಲೆ ನನಗೇ ಸಿಟ್ಟು ಬಂತು. ಅಕಸ್ಮಾತ್ ಅವಳು ತಿರುಗಿ ಹೊಡೆದಿದ್ದರೆ? ಅವಳು ನಗುತ್ತಲೇ ‘ಅದಕ್ಯಾಕ ಸಿಟ್ಟು ಮಾಡ್ಕೋತಿ ಮಾಮಾ.. ಮಲಗು ಮಲಗು’ ಎಂದು ನಗುನಗುತ್ತಲೇ ಹೋಗಿದ್ದು ಕಣ್ಮುಂದೆ ಬರುತ್ತಿತ್ತು.
ಸ್ವಲ್ಪ ಹೊತ್ತಿನ ನಂತರ, ಮತ್ತೊಂದು ಸ್ಟೇಶನ್ ಬಂತು. ಕತ್ತಲಲ್ಲಿ ಯಾವ ಊರಿನ ಸ್ಟೇಶನ್ ಎಂಬುದು ಗೊತ್ತಾಗಲಿಲ್ಲ. ಅವಳನ್ನು ನೋಡಬೇಕೆಂದು ಗೋಣು ಹೊರಳಿಸಿ ಸುತ್ತಲೂ ನೋಡಿದೆ. ಅವಳು ಕಾಣಲಿಲ್ಲ. ಕ್ಷಮೆ ಕೇಳದಿದ್ದರೆ ಜೀವನಪೂರ್ತಿ ಈ ಪಾಪಪ್ರಜ್ಞೆಯಿಂದ ಹೊರಬರಲಾರೆ ಅನ್ನಿಸಿತು. ಈಗ ಉಚ್ಚೆ ಹೊಯ್ಯಲು ಹೋಗಲೇಬೇಕೆಂದು ತೀವ್ರವಾಗಿ ಅನ್ನಿಸಿತು. ಹರಸಾಹಸ ಮಾಡಿ ಕೆಳಗಿಳಿದು ಹೋಗಿ ಬಂದೆ. ಬಹಳ ಹೊತ್ತಿನವರೆಗೂ ವಾಸ್ತವಕ್ಕೆ ಬರಲಾಗಲಿಲ್ಲ. ಕೆಳಗಡೆ ಕೂತ ಅಜ್ಜ ಕಿಟಕಿಗೆ ಒರಗಿ ನಿದ್ರೆಗೆ ಜಾರಿದ್ದ. ಬಾಜು ಕುಳಿತ ಹುಡುಗಿ ಇಯರ್ ಪೋನ್ ಹಾಕಿಕೊಂಡು ಹಾಡು ಕೇಳುವುದರಲ್ಲಿ ಮಗ್ನಳಾಗಿದ್ದಳು.
ಯಶವಂತಪುರ ರೈಲು ನಿಲ್ದಾಣ ಬಂದಿದ್ದೇ ತಡ ಎಲ್ಲ ಪ್ರಯಾಣಿಕರು, ತಮ್ಮ ತಮ್ಮ ಲಗೇಜುಗಳನ್ನೆಲ್ಲ ಎತ್ತಿಕೊಂಡು ಇಳಿಯಲು ಸಾಲಾಗಿ ನಿಂತಿದ್ದರು. ರಾತ್ರಿಯೆಲ್ಲ ಒಂದು ಸೀಟಿಗಾಗಿ ಎಷ್ಟೊಂದು ಜಗಳಗಳು, ಜನ ಇಳಿಯುವಾಗ ಅದೇನೋ ತಾದ್ಯಾತ್ಮ್ಯ ಅವರ ಕಣ್ಣಲ್ಲಿ… ಇಳಿದು ಪುಟುಪುಟು ಹೆಜ್ಜೆ ಹಾಕುವ ಅವರ ನಡೆಯಲ್ಲಿ ಕಾಲದ ಜೊತೆಗೋಡುವ ಧಾವಂತ ಕಾಣುತ್ತಿತ್ತು. ಮುಖ ಒರೆಸಿಕೊಳ್ಳುತ್ತ ಮೈಮುರಿದು ಎದ್ದು ಕೂತು ಸರಳುಗಳ ಪಂಜರದಿಂದ ನೋಡಿದೆ. ಬೋಗಿಯ ಬಾಗಿಲ ಬಳಿಯಲ್ಲಿ ಅದೇ ಉದ್ದನೆಯ ನೀಳ ಜಡೆಯಲ್ಲಿ ಮಲ್ಲಿಗೆ ಹೂವು ಕಣ್ಣು ಕುಕ್ಕುತ್ತಿದ್ದವು. ಕುತೂಹಲ ತಡೆಯಲಾಗಲಿಲ್ಲ. ಎರಡೂ ಬದಿಯ ಸರಳುಗಳನ್ನು ಹಿಡಿದು ಬಡಬಡನೆ ಇಳಿದು ಜನರನ್ನು ತಳ್ಳಿಕೊಂಡು ಬಾಗಿಲು ಬಳಿಯಲ್ಲಿ ಹೋದೆ. ಅವಳು ಛಂಗನೆ ಜಿಗಿದು ಹೊರಟೇಬಿಟ್ಟಳು. ‘ರೀ…’ ಎಂದು ಕೂಗಿದೆ.. ನೋಡಲಿಲ್ಲ. ಜೋರಾಗಿ ‘ಹಲೋ….’ ಎಂದೆ! ತಿರುಗಿ ಎರಡು ಅಂಗೈ ಕೂಡಿಸಿ ಚಪ್ಪಾಳೆ ತಟ್ಟಿ.. ರೊಕ್ಕ ಕೊಡು ಎಂಬಂತೆ ಸನ್ನೆ ಮಾಡಿ ಹುಬ್ಬು ಹಾರಿಸಿದಳು.
ರೈಲು ಕೂಗುಹಾಕುತ್ತ ಹೊರಡಲಾರಂಭಿಸಿತು. ಕಿಸೆಯಿಂದ ಪರ್ಸ್ ತೆಗೆದೆ… ಅವಳು ಕೈಚಾಚಿ ಒಂದೆರಡು ಹೆಜ್ಜೆ ಮುಂದೆ ಬಂದಳು. ಪರ್ಸಿನಲ್ಲಿ ಎಲ್ಲ ನೂರರ ನೋಟುಗಳೇ ಇದ್ದವು. ಕೊಡಲು ಮನಸ್ಸಾಗಲಿಲ್ಲ. ಮತ್ತೊಮ್ಮೆ ದಿಟ್ಟಿಸಿ ನೋಡಿದೆ. ಪರಿಚಿತ ಮುಖ. ಹೌದು! ಈಗ ನನ್ನೆದುರಿಗೆ ಇರುವುದು ಬಾಲ್ಯದ ಗೆಳೆಯ ರಮೇಶ… ಮಾತು ಹೊರಡುತ್ತಿಲ್ಲ. ಕಣ್ಣು ನಂಬುತ್ತಿಲ್ಲ. ಸೀರೆಯಲ್ಲಿ ಹೆಣ್ಣುಮಕ್ಕಳೇ ನಾಚುವಷ್ಟು ಸುಂದರವಾಗಿ ಕಾಣುತ್ತಿದ್ದಾನೆ. ಗಡಿಬಿಡಿಯಲ್ಲಿ ನೂರರ ನೋಟು ತೆಗೆದು ಕೊಡಬೇಕೆಂದು ಕೈ ಮುಂದೆ ಹಿಡಿದೆ. ಮತ್ತೊಂದೆರಡು ಹೆಜ್ಜೆ ಓಡಿದ ರಮೇಶ ಅಲ್ಲಿಯೇ ಅಸಹಾಯಕ ನೋಟ ಬೀರಿ ಹಾಗೆಯೇ ನಿಂತು ಬಿಟ್ಟ. ರೈಲು ತನ್ನ ವೇಗ ಹೆಚ್ಚಿಸಿಕೊಂಡಿತು. ನನ್ನ ಕಣ್ಣಂಚಿನಲ್ಲಿದ್ದ ನೀರು ಹೊರಬಾರದೆ ಎದೆಭಾರವಾಗಿಸಿತು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ