Advertisement
ಅನಿವಾಸಿ ಆಸ್ಟ್ರೇಲಿಯಾ ಪತ್ರ

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಬೆಂಗಳೂರಿಗೆ ತನ್ನದೇ ಆದ ಆದಿಮ ಹಬ್ಬವೊಂದಿದೆ. ಪೂಜೆ ಜಾತ್ರೆ ಮತ್ತು ನೆನಪು ಎಲ್ಲವೂ ಸುತ್ತಿಕೊಂಡಿರುವಂತದು. ಬೆಂಗಳೂರಿನ ಮೂಲ ನಿವಾಸಿಗಳು ಈವತ್ತಿಗೂ ಉತ್ಸಾಹದಿಂದ ಎದೆಯುಬ್ಬಿಸಿಕೊಂಡು ನಡೆಸುವ ಹಬ್ಬ. ಸಂವತ್ಸರದ ಮೊದಲ ಹುಣ್ಣಿಮೆಯಂದು ಉತ್ತುಂಗಕ್ಕೇರುವ ಈ ಹಬ್ಬ ಹನ್ನೆರಡು ದಿನಗಳ ಆಚರಣೆ. ಹೇಗಿದ್ದ ಬೆಂಗಳೂರು ಹೇಗೇಗೋ ಆಗಿರುವುದಕ್ಕೆ ಸೂಕ್ತ ಪ್ರತಿಮೆಯೋ ಎಂಬಂತೆ ಕೂಡ ಈ ಹಬ್ಬ ಬೆಂಗಳೂರಿನ ಒಡಲಲ್ಲಿ ನಡೆಯುತ್ತದೆ. ಬೆಂಗಳೂರಿನ ಕರಗ ಶಕ್ತ್ಯೋತ್ಸವ ಬಹುಶಃ ಬೆಂಗಳೂರಿನ ಮೂಲದವರನ್ನು ಒಟ್ಟಿಗೆ ಹಿಡಿದಿರುವ ಒಂದೇ ಹಬ್ಬ. ಅಷ್ಟೇ ಅಲ್ಲದೆ ಬೆಂಗಳೂರಿನ ಭೌಗೋಲಿಕ ಚಹರೆಗಳನ್ನು ತನ್ನ ನೆನಪುಗಳ ಆಚರಣೆಗಳ ಮೂಲಕ ಜಾಗೃತಗೊಳಿಸುವ ಒಂದೇ ಹಬ್ಬವಿರಬೇಕು.

ಕೆಂಪೇಗೌಡನಿಗೆ ಬೆಂಗಳೂರಿನ ಕೋಟೆಯಲ್ಲಿ ತಂಗಿದ್ದ ತನ್ನ ಸೈನಿಕರ ಊಟಕ್ಕೆ ತರಕಾರಿ ಬೆಳೆಯಲು ಮಂದಿ ಬೇಕಾದಾಗ ಬಂದವರು ಇವರು. ತಮಿಳುನಾಡಿನ ಸೇಲಂ ಬಳಿಯಿಂದ. ಒಂದು ರೀತಿಯಲ್ಲಿ ಇವರು ಬೆಂಗಳೂರಿನ ಮೂಲವಾಸಿಗಳು. ಹಾಗಾಗಿಯೇ ಲಬ್‌ಡಬ್ ಎನ್ನುವ ಬೆಂಗಳೂರಿನ ಹೃದಯದಂತಿರುವ ತಿಗಳರ ಪೇಟೆ ಇವರ ಬೀಡು. ಅಲ್ಲಿಯ ಧರ್ಮರಾಯನ ಗುಡಿ ಈ ಹಬ್ಬದ ಕೇಂದ್ರ. ‘ಗಾರ್ಡನ್ ಸಿಟಿ’ ಅನ್ನಿಸಿಕೊಳ್ಳುವ ಬೆಂಗಳೂರಿನ ತೋಟಗಾರರು ಇವರೇ ಎಂದು ನನಗೆ ಹಲವು ಸಲ ಅನಿಸಿದೆ. ನನಗೂ ಈ ಜನರಿಗೂ ಬಾಲ್ಯದ ಸಂಬಂಧ – ಯಾವುದೇ ಒಡನಾಟವಿಲ್ಲದಿದ್ದರೂ ಕೂಡ.

ಸಿಡ್ನಿಯಲ್ಲಿ ಕೂತ ನನಗೆ ಒಂದೆರಡು ವರ್ಷಗಳ ಕೆಳಗೆ ಇವರ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಬೇಕು – ಆ ಮೂಲಕ ನನ್ನ ಬೆಂಗಳೂರು ಈವತ್ತು ಏನಾಗಿದೆ, ಹೀಗಾಗಿರುವ ಬೆಂಗಳೂರಿನಲ್ಲಿ ಇವರ ನೆನಪು-ಆಚರಣೆಯಲ್ಲಿ ಹೇಗೆ ಜಾಗೃತವಾಗಿ ಉಳಕೊಂಡಿದೆ ಎಂದು ಹುಡುಕುವ ಬಯಕೆ ಮೂಡಿತು. ಬೆಂಗಳೂರಿಗೆ ಬಂದು ಚಿತ್ರೀಕರಣ ಶುರುಮಾಡಿದೆ. ಕರಗದ ಒಂದು ವಾರದ ಮುನ್ನವಷ್ಟೆ. ಚಿತ್ರೀಕರಣ ಮುಗಿಸಿ ಬೆಳಗಿನ ಮೂರಗಂಟೆಯ ಹೊತ್ತಿಗೆ ಮನೆಗೆ ಸ್ಕೂಟರಿನಲ್ಲಿ ಹೊರಟಿದ್ದೆ. ಸ್ಕೂಟರಿನ ಹಿಂದಿನ ಸೀಟಲ್ಲಿ ನನ್ನ ಸೋದರಮಾವ ಕ್ಯಾಮೆರಾಮನ್ ರಾಮಚಂದ್ರ. ಚಿರಿಚಿರಿ ಮಳೆಯಲ್ಲಿ ಬೆಂಗಳೂರಿನ ಜಾರುವ ರಸ್ತೆಯ ಒಂದು ತಿರುವಿನಲ್ಲಿ ಅಪಫಾತವಾಯಿತು. ಚಿತ್ರೀಕರಣ ಮುಂದುವರಿಸಲು ಆಗಲೇ ಇಲ್ಲ. ಆ ಡಾಕ್ಯುಮೆಂಟರಿ ನನ್ನೊಳಗೇ ಉಳಿದು ಬಿಟ್ಟಿದೆ. ಯಾಕೆ ಹೇಳಿದೆನೆಂದರೆ, ಆಗ ನಾನು ಓದಿದ ಲೇಖನಗಳಲ್ಲಿ ಪುಸ್ತಕಗಳಲ್ಲಿ ಈ ಹಬ್ಬದ ಬಗ್ಗೆ ವಿಚಿತ್ರವಾದ ಒಳನೋಟಗಳು ನನಗೆ ಸಿಕ್ಕವು.

ರಾತ್ರಿಯಿಡೀ ಬುಸುಗುಡುವ ಕಾಲ್‌ಸೆಂಟರುಗಳ ಊರಾಗಿರುವ ಬೆಂಗಳೂರು – ರಾತ್ರಿಗಳಲ್ಲಿ ನಡೆಯುವ ಈ ಹಬ್ಬಕ್ಕೆ ಹೇಗೆ ತೆರೆದುಕೊಳ್ಳುತ್ತದೆ ಎನ್ನುವುದು ನನ್ನ ಕುತೂಹಲ. ಸಾಫ್ಟ್‌ವೇರಿನ ಅಂತರಾಷ್ಟ್ರೀಯ ಕಂಪನಿಗಳ ಊರಾಗಿರುವ ಬೆಂಗಳೂರು ಈ ಆದಿಮ ಜಾತ್ರೆಗೆ ಹೇಗೆ ಒಡ್ಡಿಕೊಳ್ಳುತ್ತದೆ ಎನ್ನುವುದು ನನ್ನ ಕುತೂಹಲ. ಹಲವಾರು ಊರುಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಮಂದಿ ಮತ್ತು ಬೆಂಗಳೂರು ತಮ್ಮದೆಂದು ಕೈ ಮುಷ್ಟಿ ಮಾಡುವ ಮಂದಿ ಈ ಹಬ್ಬ ತೆರೆದಿಡುವ ನೆನಪಿಗೆ ತೋರುವ ನಿರ್ಲಕ್ಷ್ಯ ನನ್ನ ಕುತೂಹಲ.

ಬೆಳಕು ಹರಿಯುವವರೆಗೆ ಹೇಳಿದರೂ ಮುಗಿಯದಷ್ಟು ಪುರಾಣದ ಕತೆಗಳು ಪಾತ್ರಗಳು ಘಟನೆಗಳು ಈ ಹಬ್ಬಕ್ಕೆ ಪ್ರಚೋದನೆ ಮತ್ತು ಸರಕು ಒದಗಿಸಿದೆ. ಆದರೆ ವಾಸ್ತವದಲ್ಲಿ ವಹ್ನಿಕುಲ ಕ್ಷತ್ರಿಯರೆಂದು ಕರೆದುಕೊಳ್ಳುವ ಈ ಮಂದಿಯ ಬದುಕಿಗೆ ಕನ್ನಡಿ ಹಿಡಿದಂತೆ ಇದೆ. ಕುಸ್ತಿಗರಡಿಗಳಲ್ಲಿ ತಯಾರಾದವರ ನಡುವೆ ಕರಗ ಹೊರಲು ನಡೆಯುವ ಪೈಪೋಟಿ, ಒಂದು ತಿಂಗಳಿಂದಲೂ “ಪರಿಶುದ್ಧ” ಆಚರಣೆಗಳಲ್ಲಿ ಉಳಿದು ಹಬ್ಬದ ದಿನಗಳಲ್ಲಿ “ದ್ರೌಪದಿ”ಯಾಗುವ ಕುಸ್ತಿಪಟು, ಅವನು ಹೊರುವ ಕರಗದ ಸುತ್ತ ಕತ್ತಿ ಹಿರಿದು ವೀರರಾಗುವ ಇವರು ಹಗಲಿನಲ್ಲಿ ಇಂಜಿನಯರೋ ಅಕೌಂಟೆಟೋ ಪ್ರೋಗ್ರಾಮರೋ ಆಗಿರುವ ಮಂದಿ, ರಾತ್ರೋ ರಾತ್ರಿ ನಾವು ಈ ಹಿಂದೆ ಹೋಗಿರದ ಎಡೆಗಳಿಗೆಲ್ಲಾ ನಮ್ಮನ್ನು ಕರೆದೊಯ್ಯುವ ಜನಸ್ತೋಮ ಕೂಗಾಟ ವೀರಾವೇಶ.

ಕೆರೆಗಳ ನಗರವಾಗಿದ್ದ ಬೆಂಗಳೂರು ಈಗ ಬೇರೇನಕ್ಕೋ ಹೆಸರಾಗಿದೆ. ಬೆಂಗಳೂರಿನ ನವೀಕರಣ ಮತ್ತು ಬೆಂಗಳೂರಿನ ಸಂಪ್ರದಾಯಗಳ ನಡುವೆ ಸದಾ ನಡೆಯುತ್ತಿರುವ ಈ ಘರ್ಷಣೆ ಒಂದು ದೊಡ್ಡ ನಗರದ ಮಹಾಚಹರೆ. ಅದನ್ನು ವಿವರಿಸಲು ಕರಗವಲ್ಲದೆ ಬೇರಾವ ಹಬ್ಬಕ್ಕೆ ಸಾಧ್ಯ ಎಂದು ಎಷ್ಟೋ ಸಲ ತೀವ್ರವಾಗಿ ಅನಿಸಿದೆ. ತಮ್ಮ ತೋಟಕ್ಕೆ ನೀರುಕೊಡುತ್ತಿದ್ದ ಬೆಂಗಳೂರಿನ ಕೆರೆಗಳನ್ನೆಲ್ಲಾ ಈಗಲೂ “ಗೋವಿಂದ! ಗೋವಿಂದ!” ಎನ್ನುತ್ತಾ ದುಮುದುಮು ನಡೆದು ಹೋಗಿ ಪೂಜಿಸುವುದು. ದರ್ಗಾಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುವುದು. ಒಂದು ಕಾಲಕ್ಕೆ ವಲಸಿಗರಾದ ಇವರು ತಮ್ಮ ಮೂಲದ ಊರಿನ ನೆನಪು, ಆಚರಣೆಯನ್ನು ಪಟ್ಟಾಗಿ ಹಿಡಿದಿಡುವ ಪರಿ. ಕರಗದ ಹಬ್ಬವನ್ನು ಹತ್ತಿರದಿಂದ ನೋಡಿದಾಗ, ಅದರ ಹಿಂದಿನ ಈ ಎಲ್ಲ ಒತ್ತಡ, ಸಂಭ್ರಮ, ನೆನಪನ್ನು ನಲ್ಮೆಯಿಂದ ಹುಡುಕಿದಾಗ ದಿಗ್ಭ್ರಮೆಯಾಗುವಷ್ಟು ಸಂಗತಿಗಳಿವೆ. ಅದನ್ನು ಇನ್ನಾವಾಗಲಾದರೂ ನಿಮ್ಮ ಜತೆ ಹಂಚಿಕೊಳ್ಳುತ್ತೇನೆ.

ನಾನು ಚಿಕ್ಕವನಿದ್ದಾಗ ಕರಗ ಬರುತ್ತದೆಂದು ರಾತ್ರಿ ಎಷ್ಟೋ ಹೊತ್ತಿನವರೆಗೂ ಎದ್ದಿದ್ದು ಅದು ಬರುವ ಹೊತ್ತಿಗೆ ನಿದ್ದೆ ಹೋಗಿರುತ್ತಿದ್ದೆ. ಆಗಾಗ ಜನ ಸುಮ್ಮನೆ “ಕರಗ ಬಂತು! ಕರಗ ಬಂತು!” ಎಂದು ನಿದ್ದೆಯ ಝಂಪಿನಲ್ಲಿರುವ ಜನರನ್ನು ಕೀಟಳೆ ಮಾಡಿ ಎಬ್ಬಿಸುತ್ತಾರೆ. ಅದೆಲ್ಲ ಗೊತ್ತಿರುವ ನನ್ನ ಚತುರ ಅಮ್ಮನೋ ಅಜ್ಜಿಯೋ ಹಾಗೆಲ್ಲಾ ಎಬ್ಬಿಸದೆ ಕರಗ ಬಂದಾಗಲೇ ಎಬ್ಬಿಸಿದಾಗ ಕಣ್ಣುಜ್ಜಿಕೊಂಡು ನಿದ್ದೆಯಲ್ಲೇ ಏನೋ ಗದ್ದಲ-ಗಲಭೆಯನ್ನು, ಯಾವುದೋ ಸಡಗರವನ್ನು ನೋಡಿ ಮತ್ತೆ ಮಲಗಿಬಿಡುತ್ತಿದ್ದೆ. ಈಗ ಯೋಚಿಸಿದರೆ, ನಾನು ಆ ನಿದ್ದೆಯಲ್ಲಿ ಕರಗ ನೋಡಿರುವುದು ದೊಡ್ಡ ಭ್ರಾಂತು ಅನಿಸುತ್ತದೆ. ಯಾವುದೋ ಕನಸಿನ ಒಂದು ವೇಷವನ್ನು ನೋಡಿ ಮತ್ತೆ ಮಲಗಿದ್ದೆನೇನೋ ಅಷ್ಟೆ ಎನಿಸುತ್ತದೆ. ಆದರೆ ಹುಣ್ಣಿಮೆಯ ರಾತ್ರಿಯ ಆಕಾಶದಲ್ಲಿ ತುಂಬಿದ ಚಂದ್ರನನ್ನು ನೋಡಿ ಕಣ್ಣುಜ್ಜಿಕೊಂಡದ್ದು ಮಾತ್ರ ಅಚ್ಚಳಿಯದ ನೆನಪಾಗಿ ಈವತ್ತಿಗೂ ಉಳಿದಿದೆ.

 

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ