Advertisement
ಒಮ್ಮೆ ಓದಬಹುದಾದ ಬುಕ್ಕು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಒಮ್ಮೆ ಓದಬಹುದಾದ ಬುಕ್ಕು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಕೆಂಡಸಂಪಿಗೆಯ ಸಂಪಾದಕರ,
ಮಡಕೇರಿ/ಮೈಸೂರು/ಬೆಂಗಳೂರಿನ ಬೃಹತ್‌ ಡೆಸ್ಕಿಗೆ,

ಅನಿವಾಸಿಯಾಗಿ ಬರೆಯುವ,
ಸಿಡ್ನಿಯ ಪುಟ್ಟಮಣೆಯಂಥ ಲ್ಯಾಪ್‌ಟಾಪಿಂದ,

ಸಾರ್,
ಅರವಿಂದ ಅಡಿಗ ಬರೆದ ‘ದ ವೈಟ್‌ ಟೈಗರ್’ ಓದಿದೆ. ಏನು ಬರದಿದಾನೆ ಅಂತೀರ ಬಡ್ಡಿಮಗ! (ಬರಿಯೋರಿಗೆ ಹೀಗೆಲ್ಲಾ ಅನ್ನಬಾರದು ಅಂತೀರೇನೋ. ಅದೆಲ್ಲಾ ಹಳೇ ಕಾಲದ ಮಾತು ಸಾರ್, ಇದು 21st century!) ಬುಕ್ ಮಾತ್ರ ಸಕತ್ ಫಾಸ್ಟಾಗಿ ಓದಿಸಿಕೊಂಡು ಹೋಯಿತು. ಅದರಲ್ಲಿ ಬರೋ ಡ್ರೈವರು ತುಂಬಾ ಗೊತ್ತಿರೋನು ಅನ್ನಿಸಿಬಿಡ್ತು, ಹಂಗಾಗಿ… ಇರಲಿ ಅದಕ್ಕೆ ಆಮೇಲೆ ಬರ್ತೀನಿ.

ಈ ಬುಕ್ ಕೊಂಡುಕೊಳ್ಳೋಕೆ ಅಂತ ಸಿಡ್ನಿ ಬುಕ್ಕಿನಂಗಡಿಗೆ ಹೋಗಿದ್ದೆ ಸಾರ್. ಅಂಗಡಿಯ ಹಿಂದೆಲ್ಲೋ ಬಿದ್ದಿದ್ದ ಈ ಬುಕ್ಕಿಗೆ “ಬುಕ್ಕರ್ ಪ್ರೈಜ್” ಬಂದಿದ್ದೇ ಹೆಬ್ಬಾಗಿಲಿಗೆ ಬಂದುಬಿಟ್ಟಿತ್ತು! ಅದರ ಪಕ್ಕ ನಿಂತಿದ್ದ ಬಿಳಿಗಡ್ಡದ ಅಂಗಡಿಯೋನು ನನ್ನ ಮುಖ ನೋಡಿ “ಬೆಂಗಳೂರಲ್ಲಿ ನಡೆಯೋದು” ಅಂದ. ಬುಕ್ಕಿನ ಬಗ್ಗೆ ಅಲ್ಲಿ ಇಲ್ಲಿ ಕೊಂಚ ಓದಿದ್ದ ನಾನು “ಅಲ್ಲಯ್ಯ ಗೂಬಡ್… ಡೆಲ್ಲಿ, ಧನ್‌ಬಾದ್” ಅನ್ನಣ ಅಂತ ಇದ್ದೋನು “ಹೂಂ, ಅದು ನನ್ನ ಹುಟ್ಟೂರು” ಅಂತ ಹಲ್ಕಿರಿದು ಕೊಂಡ್ಕೊಂಡು ಬಂದೆ.

ನೋಡಿ ಸಾರ್, ಬುಕ್ ಕೈಯಲ್ಲಿ ಹಿಡಕೊಂಡು ಬರ್ತಾ ಇದ್ದಾಗ ಬೇರೇನೋ ನೆನಪಾಯ್ತು. ನಾಕೈದು ವರ್ಷದ ಕೆಳಗೆ ಇನ್ನೊಂದು ಬುಕ್ಕಂಗಡಿಯ ಕನ್ನಡಕದ ಹೆಂಗಸು “ಈಗೀಗ ತುಂಬಾ ಜನ ಬಂದು ಇಂಡಿಯನ್ ರೈಟರ್ಸ್ ಬುಕ್ ಕೇಳ್ತಾರೆ. ನೀನು ಬರೆಯೋ ಹಾಗಿದ್ರೆ, ಈಗೊಂದು ನಾವೆಲ್ ಬರೆಯೋದಕ್ಕೆ ಕರೆಕ್ಟ್ ಟೈಮ್!” ಅಂತಂದಿದ್ಳು. “ಅಯ್ಯೋ, ಹೋಗವ್ವ. ನಾವೆಲ್‌ ಅಂತೆ. ನನ್ನ ತಲೆ ಕಿಚಡಿಯಾಗಿದೆ” ಅಂತ ಗೊಣಗಿಕೊಂಡು ಬಂದಿದ್ದೆ. ಈ ಅರವಿಂದ ಅಡಿಗನಿಗೂ ಆಯಮ್ಮ ಹಂಗೇ ಹೇಳಿರಬೌದು ಅನ್ನೋ ಅನುಮಾನ ನನಗೀಗ. ಯಾಕೆಂದರೆ, ಎರಡು ವರ್ಷ ಸಿಡ್ನಿ ಸ್ಕೂಲಲ್ಲಿ ಓದಿದ್ದ ಅರವಿಂದನ್ನ “ಆಸ್ಟ್ರೇಲಿಯಾದಲ್ಲಿ ಬೆಳೆದವನು” ಅಂತ ಕೊಚ್ಕೊಂಡು ಇಲ್ಲಿ ಪೇಪರಿನಲ್ಲೆಲ್ಲಾ ಬರೀತಾ ಇದ್ದಾರೆ. ಅರವಿಂದಾನೋ ಮಂಗಳೂರು, ಸಿಡ್ನಿ, ಯುಎಸ್, ಯುಕೆ ಅಂತ ಊರೆಲ್ಲಾ ಅಲೆದು ಈಗ ಮುಂಬೈನಲ್ಲಿರೋನು. ಆದರೂ ರೈಟರ್ ಪ್ರೈಜ್ ಗೆದ್ದುಬಿಟ್ಟರೆ ಅವನಿಗೂ ನಮಗೂ ಕೊಂಡಿ ಹುಡುಕಿಕೊಳ್ಳೋದನ್ನ ನಾಚಿಕೆ ಬಿಟ್ಟು ಮಾಡ್ತೀವಿ. ಅದಕ್ಕೇ ಸಾರ್, ಹುಟ್ಟೂರು ಬೆಂಗಳೂರು ಅಂತ ಹಲ್ಕಿರಿದಿದ್ದು ನಾನು.

ಬುಕ್ ಬಗ್ಗೆ ಹೇಳೋದಾದರೆ, ನಾನೀಗ ನಿಮಗೆ ಬರೀತಿರೋ ಹಂಗೇನೆ, ಕತೇನೂ ಶುರು ಆಗತ್ತೆ ಸಾರ್. ಇಂಗ್ಲೀಷ್ ಬರದ ಬುಕ್ಕಿನ ಹೀರೋ, ಇಂಗ್ಲೀಷ್‌ ಬರದ ಚೈನಾದ ಪ್ರೈಮ್ ಮಿನಿಸ್ಟರಿಗೆ ಕಾಗದ ಬರೀತಾನೆ. ನೋಡಿದರೆ, ಇಡೀ ಬುಕ್ಕೇನೆ ಅವನು ಏಳು ರಾತ್ರಿ ಹೇಳ್ಕೊಳ್ಳೋ ತನ್ನ ಕತೆ. ಇಂಡಿಯಾದ ಪ್ರೈಮ್‌ ಮಿನಿಸ್ಟರಿಗೋ, ಅಮೇರಿಕದ ಪ್ರೆಸಿಡೆಂಟ್ಗೊ ಬರೀದೇನೆ ಚೈನಾದ ದೊರೆಗೆ ಯಾಕೆ ಅಂತ ಕ್ವೆಶ್ಚನ್ ಏಳತ್ತೆ. ಓದ್ತಾ ಓದ್ತಾ ಅದಕ್ಕೊಂತರ ಉತ್ತರಾನೂ ಸಿಗತ್ತೆ ಅಂತಿಟ್ಕೊಳ್ಳಿ.

ರಾಮನ ಸೈಡ್‌ಕಿಕ್ ಲಕ್ಷ್ಮಣನ ಹೆಸರಿರೋ ಲಕ್ಷ್ಮಣಗಂಜ್‌ನಲ್ಲಿ ಕತೆ ಶುರು ಆಗೋದು. ಬರೀ ಮುನ್ನ ಅಂತ ಹೆಸರಿರೋ ಹುಡುಗನಿಗೆ ಅವನ ಸ್ಕೂಲು ಟೀಚರು ಕೃಷ್ಣ ಅಂತ ಹೆಸರಿಡೋ ಬದಲು ಕೃಷ್ಣನ ಸೈಡಕಿಕ್ ಬಲರಾಮನ ಹೆಸರ ಇಡ್ತಾರೆ. ಮುಂದೆ ಆ ಹುಡುಗನ ಮಾಲೀಕ ಆಗೋನ ಹೆಸರು ಬುದ್ಧನ ಸೈಡ್‌ಕಿಕ್ ಅಶೋಕ ಅಂತ. ಇವನ್ನೆಲ್ಲಾ ನೋಡಿ, ಚೈನಾ ಅಮೇರಿಕಾದ ಸೈಡ್‌ಕಿಕ್ ಅಂತ ಹೇಳ್ತಿರಬಹುದಾ ಅನ್ನಿಸ್ತು… ಇಲ್ಲ, ಇಲ್ಲ, ಇಂಗ್ಲೀಷ್ ಬರದಿರೋ ಲೋಕದ ಕತೆ ಅಂತಿರಬೌದು ಅನ್ನಿಸ್ತು ಅತ್ವಾ ಎಲ್ಲಾರ ಕಣ್ಣೂ ಚೈನಾ ಮೇಲಿರೋವಾಗ ಅಲ್ಲಿಯೋರಿಗೆ ಹೇಳಿದರೆ ಎಲ್ಲಾ ಕೇಳ್ತಾರೆ ಅಂತಿರಬೌದು…ಅತ್ವಾ ಏನೋ ಗೊತ್ತಿಲ್ಲ ಸಾರ್. ಆದರೆ ಸೈಡ್‌ಕಿಕ್ಸ್‌ಗಳಂತೂ ಬುಕ್ಕಲ್ಲಿ ಅಲ್ಲಲ್ಲಿ ಬರ್ತಾರೆ.

ಈ ಬಲರಾಮ ಹಲ್ವಾಯಿ ಇಂಡಿಯಾದ “ಡಾರ್ಕ್‌ನೆಸ್” ಭಾಗದಿಂದ ಬಂದೋನು. ಧನ್‌ಬಾದಿನ ಕಡು ಬಡವ. ಇದ್ದಲು ಗಣಿಯ ಕಪ್ಪಿನಿಂದ ಹೊರಬಿದ್ದ “ಬಿಳಿಯ ಹುಲಿ”. ಮುಜುಗರ ಇಲ್ಲದೆ ಮಾಲೀಕನ ಕಾಲೊತ್ತಿ ಮಸಾಜ್ ಮಾಡೋನು. ಅವನು ಕಾಲಿಟ್ಟ ನೀರಿನ ಬಾಣಲಿಯಲ್ಲಿ ತೇಲುವ ಮಾಲೀಕನ ಕೂದಲನ್ನು, ತನ್ನ ಕೈಗಂಟಿದ ಅವನ ಚರ್ಮದ ವಾಸನೆಯನ್ನು ಸಹಜವಾಗಿ ವಿವರಿಸೋನು. ಡ್ರೈವ್ ಮಾಡದೇ ಇದ್ದಾಗ ಬೇರೆಲ್ಲ ಬಗೆಯ ಸೇವೆಯನ್ನು ಮಾತೆತ್ತದೆ ಮಾಡೋನು. ಸೇವಕನಾಗಿರುವುದು ತನ್ನ ಮೆದುಳಿನ ಮೂಲೆಯಲ್ಲಿ ಅಚ್ಚೊತ್ತಿದೆ ಎಂದು ವಿಚಲಿತನಾಗದೆ ಹೇಳೋನು.

ಆ ಡಾರ್ಕ್‌ನೆಸಿಂದ ಹೊರಟು, ಲೈಟಂತಿರೋ ಡೆಲ್ಲಿಗೆ ಡ್ರೈವರ್‍/ಸೇವಕನಾಗಿಯೇ ಬರ್ತಾನೆ. ಹತ್ತಾರು ಮಹಡಿಯ ಬಿಲ್ಡಿಂಗಿನ ಮನೆಯವರ ಸೇವಕನಾಗಿ, ಬಿಲ್ಡಿಂಗಿನ ನೆಲಮಾಳಿಗೆಯಲ್ಲಿ ಸೊಳ್ಳೆ, ಜಿರಲೆ, ಹಲ್ಲಿಗಳ ನಡುವೆ ಇರ್ತಾನೆ. ಅವರು ಬೆಳಗಿನ ವಾಕಿಂಗ್ ಸುತ್ತುವಾಗ, ನೀರಿನ ಬಾಟಲು, ಟವಲ್ಲು ಹಿಡಿದು ನಿಲ್ಲುತ್ತಾನೆ. ಮಾಲೀಕನಿಗೆ ಅಪ್ಪಟ ಸೇವಕನಾಗಿ ಇರಬಲ್ಲ ಇವನ ಎದೆಯೊಳಗೆ ಕೊರಿಯೋ ಒಂದು ಸಂಗತಿ – ತಾನು ಮಾಲೀಕನಿಗೆ ಏನು ಕಡಿಮೆ? ತಾನೂ ಅವನಂತೆ ಆಗಬೇಕು ಅನ್ನೋದು. ಮಾಲೀಕರು ತನ್ನನ್ನು ನಡೆಸಿಕೊಳ್ಳೋದರ ಬಗ್ಗೆ ತಿರುಗಿ ಬೀಳದೆ ಇರ್ತಾನೆ. ಅವರನ್ನ ನೋಡ್ತಾ ನೋಡ್ತಾ ಅವರ ಎಲ್ಲಾ ಕೆಟ್ಟ ನಡೆವಳಿಕೇನ ತಾನೂ ಮೈಗೂಡಿಸಿಕೊಳ್ತಾ ಹೋಗ್ತಾನೆ. ಅವರ ನುಡಿಗಟ್ಟುಗಳನ್ನ ತಾನೂ ಕಲ್ತು ಆಡುತಾನೆ. ಮನುಷತ್ವ ಕಳಕೋತಾ ಹೋಗ್ತಾನೆ. ಆದರೂ, ಯಾವುದಕ್ಕೂ ನೈತಿಕತೆ ಅವನಿಗೆ ಅಡ್ಡ ಬರಲ್ಲ. ಇದು ಕೆಲವರಿಗೆ ಇರುಸುಮುರಸಾಗಬಹುದು. ಆದರೆ ಸಾರ್, ಇದೇ ಮನುಷತ್ವ, ಇದೇ ನೈತಿಕತೆ, ಒದ್ದಾಡೋರು ಹೀಗಿರಬೇಕು ಹಾಗಿರಬೇಕು ಅಂತ ಹೇಳ್ಕೊಂಡು ಬರೆಯೋರ ಕಾಲಾನ ಇದು? ಇವನ ಕತೆ ಜಗಮಗ ಲೈಟಿನ ಜಾಗಕ್ಕೆ ಬೆಸೆದುಕೋತಾ ಹೋದಂತೆ, ಅವನೇ ಹೇಳೋ ಹಾಗೆ ಅವನ ಕತೆ ಕಾಳವಾಗ್ತಾ, ಕರಾಳವಾಗ್ತಾ ಹೋಗತ್ತೆ. ಇವನ ಮನುಷತ್ವ ಹಾಗು ನೈತಿಕತೆ ಒಂದು ಸವಾಲು ಹೌದೆಂದರೆ ಹೌದು, ಅಲ್ಲ ಅಂದರೆ ಅಲ್ಲ.

ಓರಗೆಯ ಡ್ರೈವರುಗಳೆಲ್ಲಾ “ಮರ್ಡರ್ ವೀಕ್ಲಿ” ಓದ್ತಾ ಮಾಲೀಕರಿಗೆ ಕಾಯೋವಾಗ ಇವನು ಚಿಂತಿಸೋಕೆ ಶುರು ಮಾಡ್ತಾನೆ ಸಾರ್. ಅವನೇ ಒಂದು ಕಡೆ ಹೇಳೋ ಹಾಗೆ, ಡ್ರೈವರುಗಳು ಮರ್ಡರ್ ಕತೆ ಓದ್ತಾರೆ ಅಂತ ಮಾಲೀಕರು ಹೆದರೋದು ಬೇಡ, ಅವರೇನಾದರೂ ಗಾಂಧಿ, ಬುದ್ಧ ಓದಿದರೆ ಬಂತು ತೊಂದರೆ ಅನ್ನಕೋಬೇಕು ಅಂತ. ಮಾಲೀಕನಿಗೆ ಇವನಿಂದ ಕುತ್ತು ಬರೋದು ಹಾಗೇನೆ. ಕೊಲೆ ಮಾಡಿ ತಲೆ ಮರೆಸಿಕೊಂಡಿರೋವಾಗ ಇವನು ಹೇಳೋ ಹಾಗೆ, ಅವನ ಪೋಲೀಸ್ ಫೋಟೋ ಇಂಡಿಯಾದ ಅರ್ಧ ಜನರ ತರ ಕಾಣತ್ತೆ ಅಂತ. ಹಾಗಂತ ಇದು ಎಲ್ಲರ ಕತೆ ಅಲ್ಲ. ಮಾಲೀಕರ ಹಾಗೆ ತಾನೂ ಆಗಬೇಕು ಅಂತ ಹೊರಡೋರ ಕತೆ. ಆ ಏಳು ರಾತ್ರಿಲಿ ಅವನು ಹೇಳೋದೇ – ಆ ಕೊಲೆಗೆ ಬಂದು ನಿಲ್ಲೋ ಕತೆ, ಆಮೇಲೆ ಒಂದು ಚೂರು ರೆಸ್ಪೆಟ್. ಆ ರೆಸ್ಪೆಟ್ಟಲ್ಲಿ ಇಷ್ಟೆಲ್ಲಾ ಆಗೀನೂ ಒಂದು ಚೂರು ಉಳಕೊಂಡಿರೋ ಅವನ ಮನುಷ್ಯತ್ವ ವಿವರಿಸೋ ಘಟನೆ ಬರತ್ತೆ. ಆದರೆ ಅಷ್ಟೊತ್ತಿಗೆ ಅದೇನು ವಿಶೇಷ ಅನಿಸಲ್ಲ, ಬರೇ ವ್ಯವಹಾರ ಅನ್ನಿಸಿಬಿಡತ್ತೆ. ಬಲರಾಮ ಕಂಪ್ಲೀಟ್ ಮಾಲೀಕ ಆಗೋಗಿರ್ತಾನೆ ಸಾರ್.

ನಮ್ಮೆಲ್ಲರ ಕಣ್ಣೆದುರೇ ಕಣ್ಣು ತಪ್ಪಿಸಿ, ನಮ್ಮ ನೆನಪಲ್ಲಿ ಚೂರೂ ಉಳಿಯದ ಹಾಗೆ ಬದುಕೋ, ಆಸೆ ಅದುಮಿಟ್ಟುಕೊಳ್ಳೋದನ್ನ ಕರಗತ ಮಾಡ್ಕೊಂಡಿರೊ ಇವರ ಪ್ರಶ್ನೆಗಳನ್ನು ಉತ್ತರಿಸೋಕೆ ಹೊರಟರೆ ನಮ್ಮ ಬದುಕೇ ಬುಡದವರೆಗೂ ಅಲ್ಲಾಡಬಹುದು. ಆದರೆ ಈ ನಾವೆಲ್ಲು ಆ ತರಹ ಆಳದಲ್ಲಿ ಕಲಕಬೇಕೂಂತ ಹೊರಡಲ್ಲ ಅನ್ನಿಸತ್ತೆ. ಅದಕ್ಕೆ ಎಂತೆಂತ ಗಂಭೀರದ ಸಂಗತೀನೂ ಹಗುರವಾಗಿ ಅರವಿಂದ ಹೇಳೋದು ಸಕತ್ತಾಗಿದೆ ಸಾರ್. ಯಾವ ಯಾವುದೋ ನೆಲದಲ್ಲಿ ಕಾಲೂರಿ, ಎಲ್ಲೆಲ್ಲೋ ಬೇರು ಬಿಟ್ಟು ಹೇಗೇಗೋ ಬದುಕ್ತಿರೋ ನಮ್ಮನ್ನ ಆಳದಲ್ಲಿ ಕಲಕೊ ಶಕ್ತಿ ಈವತ್ತು ಬರೆಯೋನಿಗೆ ಇದೆಯ ಅನ್ನೋದೆ ಪ್ರಶ್ನೆಯಾಗಿಬಿಟ್ಟಿದೆ, ಅಲ್ವಾ ಸಾರ್?

ಆದರೂ ಈ ಬುಕ್ಕನ್ನ ಒಂದು ಸಲ ಓದಬಹುದು ಸಾರ್. ಒಂದು ಕತೆ ಅಷ್ಟೆ ಅಂತ ನಿಟ್ಟುಸಿರಿಟ್ಟು ಮುಚ್ಚಿಡಬಹುದು. ಸದ್ಯದಲ್ಲೇ ಸಿನೆಮಾನೂ ಆಗಬಹುದು, ಅದಕ್ಕೆ ಕಾಯ್ತೀನಿ ಅಂದರೆ ಅದೂ ಪರವಾಗಿಲ್ಲ.

ಆದರೆ ನಾನು ಹೇಳಿದೆ ಅಂತ ಯಾಕೆ, ನೀವೇ ಒಂದು ಸಲ ತಪ್ಪದೆ ಓದಿ ನೋಡಿ ಸಾರ್.

 

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ