ಪೋರ್ಫಿರಿ ಪೆಟ್ರೊವಿಚ್ ಒಂದೆರಡು ಕ್ಷಣ ಯೋಚನೆಯಲ್ಲಿ ಮುಳುಗಿದ್ದ. ಆಮೇಲೆ ಮತ್ತೆ ಎಚ್ಚರಗೊಂಡು, ಕರೆಯದೆ ಬಂದಿದ್ದ ಸಾಕ್ಷಿಗಳನ್ನೆಲ್ಲ ಕೈ ಬೀಸಿ ಹೊರಕ್ಕೆ ಕಳಿಸಿದ. ತಟ್ಟನೆ ಎಲ್ಲರೂ ಹೊರನಡೆದರು. ಬಾಗಿಲು ಮುಚ್ಚಿಕೊಂಡಿತು. ಆಮೇಲೆ ಅವನು ರಾಸ್ಕೋಲ್ನಿಕೋವ್‌ನತ್ತ ನೋಡಿದ. ರಾಸ್ಕೋಲ್ನಿಕೋವ್ ಮೂಲೆಯಲ್ಲಿ ನಿಂತು ನಿಕೊಲಾಯ್‌ನನ್ನು ನೋಡುತ್ತಿದ್ದ. ಅವನ ಕಣ್ಣಲ್ಲಿ ಕಾಡು ಮೃಗದ ನೋಟವಿತ್ತು. ಪೋರ್ಫಿರಿ ಬಣ್ಣ ಹೊಡೆಯುವ ನಿಕೊಲಾಯ್‌ನತ್ತ ಒಂದು ಹೆಜ್ಜೆ ಇಟ್ಟು ಮತ್ತೆ ತಟ್ಟನೆ ನಿಂತ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು
ಭಾಗ ನಾಲ್ಕು: ಆರನೆಯ ಅಧ್ಯಾಯ
ಆನಂತರದ ದಿನಗಳಲ್ಲಿ ರಾಸ್ಕೋಲ್ನಿಕೋವ್ ಗೆ ಆ ಗಳಿಗೆ ಹೀಗೆ ನೆನಪಾಗುತ್ತಿತ್ತು:
ಪಕ್ಕದ ಕೋಣೆಯ ಗದ್ದಲ ಇದ್ದಕ್ಕಿದ್ದ ಹಾಗೆ ಜೋರಾಯಿತು. ಬಾಗಿಲು ಸ್ವಲ್ಪ ತೆರೆದುಕೊಂಡಿತು.
‘ಏನದೂ?’ ಪೋರ್ಫಿರಿ ಸಿಡುಕಿದ. ‘ಹೇಳಿರಲಿಲ್ಲವಾ ನಿಮಗೆ ನಾನು….’
ಆ ಬದಿಯಿಂದ ಒಂದು ಕ್ಷಣ ಉತ್ತರ ಬರಲಿಲ್ಲ. ಕೆಲವು ಜನ ಬಾಗಿಲಾಚೆ ಇದ್ದಾರೆ ಅನ್ನುವುದು ಗೊತ್ತಾಗುತ್ತಿತ್ತು, ಯಾರನ್ನೋ ಪಕ್ಕಕ್ಕೆ ದಬ್ಬುತ್ತಿರುವುದೂ ತಿಳಿಯುತ್ತಿತ್ತು.
‘ಏನು ನಡೀತಿದೆ ಅಲ್ಲಿ?’ ಪೋರ್ಫಿರಿ ಮತ್ತೆ ಕೇಳಿದ.
‘ನಿಕೊಲಾಯ್ ನ ಕರಕೊಂಡು ಬಂದಿದೇವೆ, ಜೈಲಿನಿಂದ,’ ಯಾರದೋ ದನಿ ಕೇಳಿಸಿತು.
‘ಇಲ್ಲಾ! ಹೋಗಿ! ಈಗಾಗಲ್ಲ!… ಅವನು ಹ್ಯಾಗೆ ಬಂದ ಇಲ್ಲಿಗೆ? ಏನಿದು ಗಲಾಟೆ?’ ಪೋರ್ಫಿರಿ ಬಾಗಿಲ ಹತ್ತಿರ ಧಾವಿಸುತ್ತ ಕೇಳಿದ.
‘ಆದರೇ, ಅವನೂ…’ ಅದೇ ಧ್ವನಿ ಏನೋ ಹೇಳುವುದಕ್ಕೆ ಹೊರಟು ತಟ್ಟನೆ ನಿಂತಿತು.
ಎರಡೇ ಎರಡು ಕ್ಷಣದಷ್ಟು ಹೊತ್ತು ಹೊರಗೆ ನಿಜವಾದ ಗುದ್ದಾಟ ನಡೆಯಿತು. ಆಮೇಲೆ ಯಾರೋ ಯಾರನ್ನೋ ಜೋರಾಗಿ ಪಕ್ಕಕ್ಕೆ ದಬ್ಬಿದ ಸದ್ದು, ಆಮೇಲೆ ತೀರ ತೀರ ಬಿಳಿಚಿಕೊಂಡ ಮುಖದ ಮನುಷ್ಯನೊಬ್ಬ ಪೋರ್ಫಿರಿಯ ಕಛೇರಿಯೊಳಕ್ಕೆ ಕಾಲಿಟ್ಟ. ವಿಚಿತ್ರವಾಗಿ ಕಾಣುತ್ತಿದ್ದ. ಯಾರನ್ನೂ ನೋಡುತ್ತಿಲ್ಲ ಅನ್ನುವ ಹಾಗೆ ನೇರವಾಗಿ ದುರುದುರು ನೋಡುತ್ತಿದ್ದ. ಕಣ್ಣಲ್ಲಿ ದೃಢನಿರ್ಧಾರವಿತ್ತು, ಮುಖದಲ್ಲಿ ಸಾವಿನ ಬಣ್ಣವಿತ್ತು—ನೇಣುಗಂಬದಿಂದ ನೇರ ಕರೆದುಕೊಂಡು ಬಂದವನ ಹಾಗೆ. ಪೂರಾ ಬಿಳುಪಾಗಿದ್ದ ತುಟಿ ಸ್ವಲ್ಪ ಕಂಪಿಸುತ್ತಿದ್ದವು.
ಈಗಿನ್ನೂ ಯೌವನಕ್ಕೆ ಕಾಲಿಟ್ಟಿದ್ದವನು, ಜನಸಾಮಾನ್ಯನ ಥರ ಬಟ್ಟೆ ತೊಟ್ಟಿದ್ದ. ಮಾಮೂಲಿ ಎತ್ತರ, ತೆಳ್ಳಗಿದ್ದ, ಬೋಗುಣಿಯ ಆಕಾರದಲ್ಲಿ ತಲೆಯ ಕೂದಲು ಕತ್ತರಿಸಿಕೊಂಡಿದ್ದ, ಒಣಗಿ ಬತ್ತಿದಂಥ ಭಾವ ಮುಖದಲ್ಲಿತ್ತು. ಗಾರ್ಡನ್ನು ತಟ್ಟನೆ ಪಕ್ಕಕ್ಕೆ ದಬ್ಬಿ ಒಳಕ್ಕೆ ಬಂದಿದ್ದ. ಗಾರ್ಡು ಕೂಡ ಹಿಂದೆಯೇ ಕಛೇರಿಯೊಳಕ್ಕೆ ನುಗ್ಗಿ ಬಂದು ಅವನ ತೋಳು ಹಿಡಿದ. ನಿಕೊಲಾಯ್ ಕೈ ಕೊಡವಿ ಮತ್ತೆ ಬಿಡಿಸಿಕೊಂಡು ನಿಂತ.
ಒಂದಷ್ಟು ಜನ ಬಾಗಿಲಲ್ಲಿ ಗುಂಪು ಸೇರಿ ನೋಡುತ್ತಿದ್ದರು. ಅವರಲ್ಲಿ ಕೆಲವರು ಒಳಕ್ಕೆ ಹೋಗಲು ಪ್ರಯತ್ನಪಟ್ಟರು. ಇಲ್ಲಿ ವಿವರಿಸಿರುವುದೆಲ್ಲ ನಡೆಯುವುದಕ್ಕೆ ಎರಡು ಕ್ಷಣಕ್ಕಿಂತ ಹೆಚ್ಚು ಸಮಯ ಬೇಕಾಗಲಿಲ್ಲ.
‘ಹೋಗು ನೀನು! ಹೀಗೆಲ್ಲ ಬರಬಾರದು, ಕರೆದಾಗ ಬರಬೇಕು! ಈಗಲೇ ಯಾಕೆ ಕರಕೊಂಡು ಬಂದಿರಿ ಇವನನ್ನ?’ ಪೋರ್ಫಿರಿ ಪೆಟ್ರೊವಿಚ್ ಗೊಣಗಿದ, ಸಮತೋಲ ತಪ್ಪಿದವನ ಹಾಗೆ ಕಿರಿಕಿರಿ ಮಾಡಿಕೊಂಡಿದ್ದ. ನಿಕೊಲಾಯ್ ಇದ್ದಕಿದ್ದ ಹಾಗೆ ಅವನ ಕಾಲಿಗೆ ಬಿದ್ದ.
‘ಏನಿದೆಲ್ಲಾ?’ ಪೋರ್ಫಿರಿ ಆಶ್ಚರ್ಯದಲ್ಲಿ ಕೇಳಿದ.
‘ನಾನು ತಪ್ಪು ಮಾಡಿದೇನೆ, ನಾನು ಪಾಪಿ, ನಾನು ಕೊಲೆಗಾರ!’ ಒಂದೇ ಉಸುರಿನಲ್ಲಿ ದೊಡ್ಡ ದನಿಯಲ್ಲಿ ಹೇಳಿದ ನಿಕೊಲಾಯ್.
ಹತ್ತು ಕ್ಷಣದಷ್ಟ ಹೊತ್ತು ಮೌನವಿತ್ತು. ಎಲ್ಲರೂ ಬೆರಗಿನಿಂದ ಕಂಬಗಳ ಹಾಗೆ ನಿಂತುಬಿಟ್ಟರು. ಗಾರ್ಡು ಕೂಡ ನಿಕೊಲಾಯ್‌ನ ಕೈ ಬಿಟ್ಟು ಹಿಂದೆ ಸರಿದು ಯಾಂತ್ರಿಕವಾಗಿ ಬಾಗಿಲ ಹತ್ತಿರ ಹೋಗಿ ನಿಶ್ಚಲವಾಗಿ ನಿಂತ.
‘ಏನಿದೆಲ್ಲಾ?’ ಬೇಗ ಸುಧಾರಿಸಿಕೊಂಡ ಪೋರ್ಫಿರಿ ಪೆಟ್ರೊವಿಚ್ ಕೇಳಿದ.
ನಿಕೊಲಾಯ್ ಸ್ವಲ್ಪ ಹೊತ್ತು ಮೌನವಾಗಿದ್ದು ಆಮೇಲೆ, ‘ನಾನು.. ಕೊಲೆಗಾರ….’ ಅಂದ.
‘ಏನು… ಏನು… ನೀನು… ಯಾರನ್ನ ಕೊಂದೆ?’
ನಿಕೊಲಾಯ್ ಒಂದು ಕ್ಷಣ ಮೌನವಾಗಿದ್ದ.
‘ಗಿರವಿಯ ಮುದುಕಿ ಅಲ್ಯೋನ ಇವಾನೋವ್ನಾ ಮತ್ತವಳ ತಂಗಿ ಲಿಝಾವೆಟಾರನ್ನ ಕೊಂದೆ. ಕೊಡಲಿಯಲ್ಲಿ ಹೊಡೆದು ಸಾಯಿಸಿದೆ… ನನಗೆ ಎಚ್ಚರ ತಪ್ಪಿ ಹೋಯಿತು…’ ತಟ್ಟನೆ ಹೇಳಿ ಮತ್ತೆ ಸುಮ್ಮನಾದ. ಪೋರ್ಫಿರಿಯ ಕಾಲಿಗೆ ಬಿದ್ದವನು ಇನ್ನೂ ಹಾಗೇ ಇದ್ದ.
ಪೋರ್ಫಿರಿ ಪೆಟ್ರೊವಿಚ್ ಒಂದೆರಡು ಕ್ಷಣ ಯೋಚನೆಯಲ್ಲಿ ಮುಳುಗಿದ್ದ. ಆಮೇಲೆ ಮತ್ತೆ ಎಚ್ಚರಗೊಂಡು, ಕರೆಯದೆ ಬಂದಿದ್ದ ಸಾಕ್ಷಿಗಳನ್ನೆಲ್ಲ ಕೈ ಬೀಸಿ ಹೊರಕ್ಕೆ ಕಳಿಸಿದ. ತಟ್ಟನೆ ಎಲ್ಲರೂ ಹೊರನಡೆದರು. ಬಾಗಿಲು ಮುಚ್ಚಿಕೊಂಡಿತು. ಆಮೇಲೆ ಅವನು ರಾಸ್ಕೋಲ್ನಿಕೋವ್‌ನತ್ತ ನೋಡಿದ. ರಾಸ್ಕೋಲ್ನಿಕೋವ್ ಮೂಲೆಯಲ್ಲಿ ನಿಂತು ನಿಕೊಲಾಯ್‌ನನ್ನು ನೋಡುತ್ತಿದ್ದ. ಅವನ ಕಣ್ಣಲ್ಲಿ ಕಾಡು ಮೃಗದ ನೋಟವಿತ್ತು. ಪೋರ್ಫಿರಿ ಬಣ್ಣ ಹೊಡೆಯುವ ನಿಕೊಲಾಯ್‌ನತ್ತ ಒಂದು ಹೆಜ್ಜೆ ಇಟ್ಟು ಮತ್ತೆ ತಟ್ಟನೆ ನಿಂತ. ಮತ್ತೆ ನಿಕೊಲಾಯ್‌ನನ್ನು ನೋಡಿದ. ಎತ್ತಲೋ ನೋಡಿ ಮತ್ತೆ ನಿಕೊಲಾಯ್‌ನ ಮೇಲೆ ಎರಗಿತು ಪೋರ್ಫಿರಿಯ ಮಾತು.
‘ಎಚ್ಚರ ತಪ್ಪಿ ಬಿದ್ದೆ ಅಂತ ಏನೇನೋ ಯಾಕೆ ಹೇಳತಿದ್ದೀಯ?’ ದ್ವೇಷದಿಂದ ಅನ್ನಿಸುವ ಹಾಗೆ ಗಟ್ಟಿಯಾಗಿ ಕೂಗಿದ. ‘ನೀನು ಎಚ್ಚರ ತಪ್ಪಿದೆಯಾ ಅಂತ ನಾನೇನಾದರೂ ಕೇಳಿದೆನಾ?… ಅವರನ್ನ ಕೊಂದೆಯಾ, ಹೇಳು.’
‘ನಾನು ಕೊಲೆಗಾರ… ಹೇಳಿಕೆ ಕೊಡತೇನಿ…’ ನಿಕೊಲಾಯ್ ಅಂದ.
‘ಹ್ಞೂಂ. ಯಾವ ಆಯುಧ ಬಳಸಿ ಕೊಂದೆ ಅವರನ್ನ?’
‘ಕೊಡಲಿಯಲ್ಲಿ. ಕೊಡಲಿ ತಗೊಂಡು ಹೋಗಿದ್ದೆ.’
‘ಮತ್ತೆ ಆತುರ! ಒಬ್ಬನೇನಾ?;
ಅರ್ಥ ಆಗಲಿಲ್ಲ ಅನ್ನುವ ಹಾಗೆ ನೋಡಿದ ನಿಕೊಲಾಯ್.
‘ಕೊಲೆ ನೀನೊಬ್ಬನೇ ಮಾಡಿದೆಯಾ?’
‘ಒಬ್ಬನೇ. ಮಿಟ್ಕಾಗೆ ಏನೇನೂ ಗೊತ್ತಿಲ್ಲ. ಅವನು ತಪ್ಪು ಮಾಡಿಲ್ಲ.’
‘ಮಿಟ್ಕಾ ಬಗ್ಗೆ ಹೇಳಕ್ಕೆ ಅಷ್ಟು ಅವಸರ ಬೇಡ! ಹ್ಞಾ!… ಹೇಗೆ ಹೇಗೆ ನೀನು ಮೆಟ್ಟಿಲಿಳಿದು ಓಡಿಹೋದೆ? ವಾಚ್‌ಮ್ಯಾನುಗಳು ನಿಮ್ಮಿಬ್ಬರನ್ನೂ ಕಂಡರು, ಅಲ್ಲವಾ?’
‘ಅದು ಕಣ್ಣು ತಪ್ಪಿಸಕ್ಕೆ ಹಾಗೆ ಮಾಡಿದೆ… ಅದಕ್ಕೇ… ಮಿಟ್ಕಾ ಜೊತೆ ಓಡಿಹೋದೆ,’ ನಿಕೊಲಾಯ್ ಉತ್ತರವನ್ನು ಬಾಯಿಪಾಠ ಮಾಡಿಕೊಂಡವನ ಹಾಗೆ ಆತುರವಾಗಿ ಹೇಳಿದ.
‘ಸರಿ, ಅದೇ ಮತ್ತೆ!’ ಪೋರ್ಫಿರಿ ಸಿಡುಕಿದ. ‘ಯಾರೋ ಹೇಳಿಕೊಟ್ಟಿದ್ದು ಹೇಳತಾ ಇದಾನೆ.’ ಗೊಣಗಿಕೊಂಡ, ಮತ್ತೆ ರಾಸ್ಕೋಲ್ನಿಕೋವ್‌ನನ್ನು ಗಮನಿಸಿದ.
ಪೋರ್ಫಿರಿಯು ನಿಕೊಲಾಯ್‌ನ ವಿಚಾರಣೆಯಲ್ಲೇ ಎಷ್ಟು ಮುಳುಗಿದ್ದನೆಂದರೆ ರಾಸ್ಕೋಲ್ನಿಕೋವ್‌ನನ್ನು ಪೂರಾ ಮರೆತೇಬಿಟ್ಟಿದ್ದ. ಇದ್ದಕಿದ್ದ ಹಾಗೆ ನೆನಪು ಮಾಡಿಕೊಂಡು, ಮುಜುಗರಪಡುತ್ತ ನೋಡಿದ.
‘ರೋಡಿಯಾನ್ ರೊಮಾನೊವಿಚ್, ಕ್ಷಮಿಸಿ,’ ಅನ್ನುತ್ತ ಅವನತ್ತ ಧಾವಿಸಿದ. ‘ಉಹ್ಞುಂ, ಆಗಲ್ಲ, ಆಗೋದೇ ಇಲ್ಲ, ಪ್ಲೀಸ್ ಸಾರ್… ಇಲ್ಲಿ ನೀವು ಇರುವ ಹಾಗಿಲ್ಲ… ನಾನೇ… ನೋಡಿ… ಎಂಥ ಆಶ್ಚರ್ಯ!… ದಯವಿಟ್ಟು ಹೊರಡಿ ಸಾರ್ ನೀವು!…’ ಅವನ ತೋಳು ಹಿಡಿದು ಬಾಗಿಲ ಹತ್ತಿರದವರೆಗೆ ಕರಕೊಂಡು ಹೋದ.
‘ನೀವೂ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಅಂತ ಕಾಣತ್ತೆ?’ ರಾಸ್ಕೋಲ್ನಿಕೋವ್ ಅಂದ. ಅವನಿಗೇನೂ ಅರ್ಥವಾಗದಿದ್ದರೂ ಧೈರ್ಯ ಮರಳುತ್ತಿತ್ತು.
‘ನೀವೂ ನಿರೀಕ್ಷೆ ಮಾಡಿರಲಿಲ್ಲ, ನೋಡಿ ನಿಮ್ಮ ಕೈ ನಡುಗುತ್ತಿದೆ! ಹ್ಹೆಹ್ಹೆ!’
‘ನೀವೂ ಅಷ್ಟೇ ಪೋರ್ಫಿರಿ ಪೆಟ್ರೊವಿಚ್!’
‘ಹೌದು! ನಾನು ಅಂದುಕೊಂಡಿರಲಿಲ್ಲ… ಹೀಗೆ…’
ಅವರು ಬಾಗಿಲಲ್ಲಿದ್ದರು. ರಾಸ್ಕೋಲ್ನಿಕೋವ್ ಬೇಗ ಹೋಗಲೆಂದು ಪೋರ್ಫಿರಿ ಅಸಹನೆಯಿಂದ ಕಾಯುತ್ತಿದ್ದ.
‘ನೀವು ಅದೇನೋ ಸರ್ಪೈಸ್ ಅಂದಿರಲ್ಲ, ಅದನ್ನ ತೋರಿಸಲ್ಲ ಹಾಗಾದರೆ?’ ರಾಸ್ಕೋಲ್ನಿಕೋವ್ ತಟ್ಟನೆ ಕೇಳಿದ.
‘ಹಲ್ಲು ಕಟಕಟ ಅನ್ನುತಿದ್ದರೂ ಹೀಗನ್ನುತ್ತಿದ್ದಾರೆ… ಹ್ಹೆಹ್ಹೆ! ಎಂಥ ತಮಾಷೆ ಮನುಷ್ಯರು ನೀವು! ಸರಿ, ಸರಿ, ಸದ್ಯಕ್ಕೆ ಗುಡ್‍ಬೈ, ಮತ್ತೆ ನೋಡೋಣ!’
‘ಬರೀ ಗುಡ್ ಬೈ ಹೇಳಿದರೆ ಸಾಲದೇ?’
‘ದೇವರ ಇಚ್ಛೆ ಹೇಗಿದೆಯೋ ಹಾಗೆ!’ ಪೋರ್ಫಿರಿ ಗೊಣಗಿದ, ಅವನ ನಗು ವಕ್ರವಾಗಿತ್ತು.
ಆಫೀಸನ್ನು ಹಾದು ಹೋಗುವಾಗ ಬಹಳ ಜನ ತನ್ನನ್ನೇ ಕುತೂಹಲದಿಂದ ನೋಡುತ್ತಿರುವುದನ್ನು ಗಮನಿಸಿದ ರಾಸ್ಕೋಲ್ನಿಕೋವ್. ಸಂದರ್ಶಕರ ಕೋಣೆಯಲ್ಲಿದ್ದ ಜನರ ನಡುವೆ ಅವನು ಆ ಮನೆಯ ಇಬ್ಬರು ಕಾವಲುಗಾರರನ್ನು ಗುರುತು ಹಿಡಿದ. ಆ ದಿನ ಅವನೇ ಒತ್ತಾಯ ಮಾಡಿ ಅವರನ್ನು, ಪೋಲೀಸರ ಹತ್ತಿರ ಕಳಿಸಿದ್ದ. ಅವರೀಗ ಇಲ್ಲಿ ಕಾಯುತ್ತ ನಿಂತಿದ್ದರು. ರಾಸ್ಕೋಲ್ನಿಕೋವ್ ಮೆಟ್ಟಿಲಿಳಿಯುತ್ತಿದ್ದ ಹಾಗೇ ಅವನ ಹಿಂದಿನಿಂದ ಪೋರ್ಫಿರಿಯ ಧ್ವನಿ ಕೇಳಿಸಿತು. ತಿರುಗಿ ನೋಡಿದರೆ ಅವನು ಧಾವಿಸಿ ಬರುತ್ತಿದ್ದ, ಏದುಸಿರು ಬಿಡುತ್ತಿದ್ದ.
‘ಒಂದೇ ಒಂದು ಮಾತು ಸಾರ್. ಮಿಕ್ಕಿದ್ದೆಲ್ಲ ಹಾಗಿರಲಿ, ದೇವರ ಇಚ್ಛೆ. ಒಂದೆರಡು ಸಂಗತಿಗಳನ್ನ ಕಾನೂನು ಪ್ರಕಾರ ನಿಮ್ಮನ್ನ ಕೇಳಬೇಕಾಗಿದೆ… ನಾವು ಮತ್ತೆ ಭೇಟಿ ಆಗಬೇಕಾಗಿ ಬರತ್ತೆ.’
ಪೋರ್ಫಿರಿ ಅವನ ಮುಂದೆ ನಗುತ್ತ ನಿಂತ.
ಇನ್ನೂ ಹೇಳುವುದು ಏನೋ ಇದೆ, ಹೇಳಲು ಆಗುತ್ತಿಲ್ಲ ಅವನಿಗೆ ಅನ್ನುವ ಹಾಗಿತ್ತು.
‘ನೀವು ನನ್ನ ಕ್ಷಮಿಸಬೇಕು, ಪೋರ್ಫಿರಿ ಪೆಟ್ರೊವಿಚ್. ಏನೇನು ಅಂದುಬಿಟ್ಟೆ ನಾನು. ಕೋಪಮಾಡಿಕೊಂಡು ಬಿಟ್ಟೆ’ ರಾಸ್ಕೋಲ್ನಿಕೋವ್ ತೀರ ಖುಷಿಯಾಗಿದ್ದ, ಒಂದು ಚೂರು ಬಡಿವಾರ ಮಾಡುವ ಆಸೆ ತಡೆಯಲು ಆಗಲಿಲ್ಲ.
‘ಪರವಾಗಿಲ್ಲ, ಪರವಾಗಿಲ್ಲ… ನಾನೂ ಸ್ವಲ್ಪ ವಕ್ರ ಬುದ್ಧಿಯವನು, ನನಗೆ ಗೊತ್ತು. ಸರಿ, ಮತ್ತೆ ಭೇಟಿ ಆಗಣ, ಸಾರ್. ದೇವರ ಇಚ್ಛೆ!’
‘ಕೊನೆಗೂ ಒಬ್ಬರನ್ನ ಒಬ್ಬರು ಚೆನ್ನಾಗಿ ತಿಳಿಯಬಹುದು ಅಲ್ಲವಾ?’ ರಾಸ್ಕೋಲ್ನಿಕೋವ್ ಅಂದ.
‘ಹ್ಞೂಂ ಕೊನೆಗೂ ಒಬ್ಬರನ್ನೊಬ್ಬರು ತಿಳಿಯಬಹುದು.’ ಪೋರ್ಫಿರಿ ಒಪ್ಪಿಗೆ ಸೂಚಿಸಿದ. ಕಣ್ಣು ಕಿರಿದು ಮಾಡಿ ರಾಸ್ಕೋಲ್ನಿಕೋವ್‌ನನ್ನು ನೋಡುತ್ತ, ‘ಹುಟ್ಟಿದ ಹಬ್ಬಕ್ಕೆ ಹೊರಟಿರಾ ಈಗ?’ ಕೇಳಿದ.
‘ಅಂತ್ಯ ಸಂಸ್ಕಾರಕ್ಕೆ, ಸಾರ್!’
‘ಹ್ಞಾ, ಅಂತ್ಯ ಸಂಸ್ಕಾರ, ಹೌದು! ನಿಮ್ಮ ಆರೋಗ್ಯ, ನಿಮ್ಮ ಆರೋಗ್ಯ ನೋಡಿಕೊಳ್ಳಿ, ಸಾರ್!’
‘ನಿಮಗೆ ಏನಂತ ವಿಶ್ ಮಾಡಲಿ, ತಿಳೀತಿಲ್ಲ!’ ಅಂದ ರಾಸ್ಕೋಲ್ನಿಕೋವ್. ಅವನು ಆಗಲೇ ಮೆಟ್ಟಿಲು ಇಳಿಯುತ್ತಿದ್ದ. ತಟ್ಟನೆ ಹಿಂದೆ ತಿರುಗಿ ನಿಮಗೆ ದೊಡ್ಡ ಯಶಸ್ಸು ಸಿಗಲಿ ಅಂತ ಅನ್ನಬೇಕು ಅನಿಸತ್ತೆ. ಆದರೆ ನಿಮ್ಮ ಉದ್ಯೋಗವೇ ತಮಾಷೆಯದ್ದು!’ ಅಂದ.
‘ಅದು ಹೇಗೆ ತಮಾಷೆ ಕೆಲಸ, ಸಾರ್?’ ವಾಪಸ್ಸು ಹೋಗುತ್ತಿದ್ದ ಪೋರ್ಫಿರಿಯ ಕಿವಿ ನೆಟ್ಟಗಾಗಿತ್ತು.
‘ಈ ಬಡಪಾಯಿ ನಿಕೊಲಾಯ್‌ನನ್ನು ನೀವು ನಿಮ್ಮದೇ ರೀತಿಯಲ್ಲಿ ದೈಹಿಕ ಹಿಂಸೆ, ಮಾನಸಿಕ ಹಿಂಸೆ ಕೊಟ್ಟು, ಅವನು ತಾನೇ ಅಪರಾಧಿ ಅಂತ ಒಪ್ಪಿಕೊಳ್ಳುವವರೆಗೆ ಪೀಡಿಸಿರುತ್ತೀರಿ. ಹಗಲೂ ರಾತ್ರಿ ನೀನೆ ಕೊಲೆಗಾರ, ನೀನೆ ಕೊಲೆಗಾರ ಅಂತ ಅವನ ತಲೆಗೆ ತುಂಬಿರತೀರಿ. ಈಗ ಅವನು ಬಂದು ತಪ್ಪು ಒಪ್ಪಿಕೊಂಡರೆ ಇದು ಯಾರೋ ಹೇಳಿಕೊಟ್ಟ ಮಾತು ಅಂತ ಮತ್ತೆ ಅವನ ಮೈಯ ಮೂಳೆ ಮೂಳೆ ಎಣಿಸುವುದಕ್ಕೆ ಶುರುಮಾಡುತ್ತೀರಿ. ನೀನು ಕೊಲೆಗಾರ ಅಲ್ಲ, ನೀನು ಕೊಲೆ ಮಾಡಿರಕ್ಕೆ ಸಾಧ್ಯವೇ ಇಲ್ಲ, ಯಾರೋ ಹೇಳಿಕೊಟ್ಟ ಹಾಗೆ ಹೇಳುತ್ತಿದ್ದೀ ಅನ್ನುತ್ತ ಅವನ ತಲೆ ತಿನ್ನುತ್ತೀರಿ. ಇದು ತಮಾಷೆ ಕೆಲಸ ಅಲ್ಲದೆ ಮತ್ತಿನ್ನೇನು?’
‘ಹ್ಹೆ ಹ್ಹೆ ಹ್ಹೇ! ಹಾಗಾದರೆ ನಾನು ನಿಕೊಲಾಯ್‌ಗೆ ಹೇಳಿದ್ದನ್ನು ಗಮನಿಸಿದ್ದಿರಿ?’
‘ಗಮನಿಸದೆ ಇರುವುದಕ್ಕೆ ಹೇಗೆ ಸಾಧ್ಯ?’
‘ಹ್ಹೆ ಹ್ಹೆ! ನಿಮ್ಮ ಬುದ್ಧಿ ಚುರುಕು, ಸಾರ್, ಬಹಳ ಚುರುಕು. ನೀವು ಎಲ್ಲಾ ಗಮನಿಸತೀರಿ! ಮತ್ತೆ ತಮಾಷೆ ಸ್ವಭಾವ! ಕಾಮಿಡಿಯ ನರ ಇದೆ ನಿಮ್ಮಲ್ಲಿ, ಹ್ಹೆಹ್ಹೆಹ್ಹೇ! ನಮ್ಮ ಲೇಖಕರಲ್ಲಿ ಇಂಥ ಬುದ್ಧಿ, ಇಂಥ ಸ್ವಭಾವ ಇದ್ದಿದ್ದು ಗೊಗೋಲ್‌ಗೆ ಅನ್ನತಾರೆ.ʼ
‘ಹೌದು, ಗೊಗೋಲ್.’
‘ಹೌದು, ಗೊಗೋಲ್, ಸಾರ್… ಮತ್ತೆ ಭೇಟಿಯಾಗೋಣ, ಸಾರ್.’
‘ಸರಿ, ಮತ್ತೆ ಭೇಟಿಯಾಗೋಣ.’
ಪೋರ್ಫಿರಿಯು ನಿಕೊಲಾಯ್‌ನ ವಿಚಾರಣೆಯಲ್ಲೇ ಎಷ್ಟು ಮುಳುಗಿದ್ದನೆಂದರೆ ರಾಸ್ಕೋಲ್ನಿಕೋವ್‌ನನ್ನು ಪೂರಾ ಮರೆತೇಬಿಟ್ಟಿದ್ದ. ಇದ್ದಕಿದ್ದ ಹಾಗೆ ನೆನಪು ಮಾಡಿಕೊಂಡು, ಮುಜುಗರಪಡುತ್ತ ನೋಡಿದ.
ರಾಸ್ಕೋಲ್ನಿಕೋವ್ ಸೀದಾ ಮನೆಗೆ ಹೋದ. ಅವನಿಗೆ ಎಷ್ಟು ಗೊಂದಲ, ಎಂಥ ದಿಗ್ಭ್ರಾಂತಿ ಆಗಿತ್ತೆಂದರೆ ಸೋಫಾದ ಮೇಲೆ ಧೊಪ್ಪನೆ ಕೂತ. ಕಾಲುಗಂಟೆಯಷ್ಟು ಹೊತ್ತು ಸುಮ್ಮನೆ ಕೂತಿದ್ದ. ದಿಕ್ಕು ತಪ್ಪಿ ಚೆಲ್ಲಾಪಿಲ್ಲಿಯಾಗಿದ್ದ ಯೋಚನೆಗಳನ್ನೆಲ್ಲ ಸವರಿ ನೇರ ಮಾಡಿಕೊಳ್ಳಲು ಪ್ರಯತ್ನಪಟ್ಟ. ನಿಕೊಲಾಯ್ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಸೋತು ಹೋದೆ ಅನಿಸಿ ಮಾತೇ ಹೊರಡದ ಹಾಗಾಗಿತ್ತು. ನಿಕೊಲಾಯ್ ಮಾಡಿಕೊಂಡ ತಪ್ಪೊಪ್ಪಿಗೆಯಲ್ಲಿ ವಿವರಿಸಲಾಗದ್ದು, ಆಶ್ಚರ್ಯ ಹುಟ್ಟಿಸುವಂಥದ್ದು, ಏನೋ ಇದೆ, ಈ ಕ್ಷಣದಲ್ಲಿ ಅದು ಅರ್ಥವಾಗುತ್ತಿಲ್ಲ ಅನಿಸುತ್ತಿತ್ತು. ಆದರೂ ನಿಕೊಲಾಯ್ ನ ತಪ್ಪೊಪ್ಪಿಗೆ ವಾಸ್ತವ ಸಂಗತಿ. ಈ ತಪ್ಪೊಪ್ಪಿಗೆಯ ಪರಿಣಾಮ ಬಲು ಬೇಗನೆ ಅವನಿಗೆ ಸ್ಪಷ್ಟವಾಯಿತು. ನಿಕೊಲಾಯ್ ಹೇಳಿದ ಸುಳ್ಳು ಬಯಲಾಗೇ ಆಗುತ್ತದೆ, ಆದರೆ ಅಮೇಲೆ ಅವನಿಗೆ ಹಿಂಸೆ ಕೊಡುವುದಕ್ಕೆ ಶುರುಮಾಡುತ್ತಾರೆ. ಕೊನೆಯ ಪಕ್ಷ ಅಲ್ಲಿಯವರೆಗೆ ಅವನು ಕ್ಷೇಮ. ಆದರೂ ಅಪಾಯ ಅನಿವಾರ್ಯ.
ಅಪಾಯ ಎಷ್ಟು ದೊಡ್ಡದಾಗಿರಬಹುದು? ಪೋರ್ಫಿರಿ ಭೇಟಿಯನ್ನು ನೆನಪು ಮಾಡಿಕೊಂಡರೆ ಸನ್ನಿವೇಶದ ಸ್ಥೂಲವಾದ ಹೊರ ರೇಖೆಗಳು ಸ್ಪಷ್ಟವಾಗುತ್ತಿದ್ದವು. ಭಯದಲ್ಲಿ ಮತ್ತೆ ಅವನ ಮೈ ಕಂಪಿಸಿತು. ಪೋರ್ಫಿರಿಯ ಉದ್ದೇಶಗಳೆಲ್ಲ ಗೊತ್ತಿರಲಿಲ್ಲ ನಿಜ; ಅವನ ಲೆಕ್ಕಾಚಾರಗಳೆಲ್ಲ ಅರ್ಥವಾಗುತ್ತಿರಲಿಲ್ಲ, ಅದೂ ನಿಜ. ಆದರೂ ಆಟದ ಗುಟ್ಟು ಸ್ವಲ್ಪ ತಿಳಿಯುತ್ತಿತ್ತು. ಪೋರ್ಫಿರಿಯ ಆಟದ ಇತ್ತೀಚಿನ ‘ನಡೆ’ ಎಷ್ಟು ಭಯಂಕರವಾದದ್ದು ಅನ್ನುವುದು ರಾಸ್ಕೋಲ್ನಿಕೋವ್‌ಗಲ್ಲದೆ ಇನ್ನಾರಿಗೆ ಅರ್ಥವಾಗಲು ಸಾಧ್ಯ? ಆಟ ಇನ್ನಷ್ಟು ಮುಂದುವರೆದಿದ್ದರೆ ರಾಸ್ಕೋಲ್ನಿಕೋವ್ ಪುರಾವೆ ಸಹಿತ ಸಿಕ್ಕಿಬಿದ್ದಿರುತ್ತಿದ್ದ.
ಅವನ ಸ್ವಭಾವದ, ರೋಗದ ಅರಿವಿರುವ ಫೋರ್ಫಿರಿ ಮೊದಲ ನೋಟದಲ್ಲೇ ಸರಿಯಾಗಿ ತಿಳಿದುಕೊಂಡುಬಿಟ್ಟಿದ್ದ, ಸ್ವಲ್ಪ ಹೆಚ್ಚೇ ಅನಿಸುವ ಆತ್ಮವಿಶ್ವಾಸದಲ್ಲಿ ಮುಂದುವರೆದಿದ್ದ. ಇವತ್ತಂತೂ ರಾಸ್ಕೋಲ್ನಿಕೋವ್ ಸಿಕ್ಕಿಬಿದ್ದುಬಿಡುತಿದ್ದ ಹೇಳಬೇಕಾದುದಕ್ಕಿಂತ ಹೆಚ್ಚು ಹೇಳಿದ್ದ ಅನ್ನುವುದರಲ್ಲಿ ಸಂಶಯವಿರಲಿಲ್ಲ. ಆದರೂ ಪೋರ್ಫಿರಿ ಹೇಳಿದ್ದೆಲ್ಲವೂ ಬಹಳ ಮಟ್ಟಿಗೆ ಸಾಂದರ್ಭಿಕ ಸಾಕ್ಷ್ಯದ ಥರ ಇದ್ದವೇ ಹೊರತು ಪಕ್ಕಾ ಪುರಾವೆಗಳಾಗಿರಲಿಲ್ಲ. ಆದರೆ ಹೀಗೆ ಅಂದುಕೊಳ್ಳುವುದು ಸರಿಯೆ? ತಪ್ಪು ತಿಳಿದಿಲ್ಲವೇ? ಇವತ್ತು ಪೋರ್ಫಿರಿ ಏನು ಮಾಡಬೇಕೆಂದಿದ್ದ? ಏನೇನು ಸಿದ್ಧತೆ ಮಾಡಿಕೊಂಡಿದ್ದ? ಏನೋ ಆಗುತ್ತದೆಂದು ನಿರೀಕ್ಷಿಸಿದ್ದನಾ? ಇಲ್ಲವಾ? ಏನು ಆಗುವುದಿತ್ತು? ನಿಕೊಲಾಯ್‍ನ ಅನಿರೀಕ್ಷಿತ ಘಟನೆ ನಡೆಯದಿದ್ದಿದ್ದರೆ ಅವರಿಬ್ಬರೂ ಹೇಗೆ ಪರಸ್ಪರ ಬೀಳ್ಗೊಳ್ಳುತ್ತಿದ್ದರೋ?
ಪೋರ್ಫಿರಿ ತನ್ನಾಟದ ಎಲೆಗಳನ್ನೆಲ್ಲ ಬಹಳ ಮಟ್ಟಿಗೆ ತೋರಿಸಿಬಿಟ್ಟಿದ್ದ. ಹಾಗೆ ತೋರಿಸಿ ರಿಸ್ಕು ತಗೊಂಡಿದ್ದ. ರಾಸ್ಕೋಲ್ನಿಕೋವ್‌ಗೆ ಅನ್ನಿಸಿದ ಹಾಗೆ ಇನ್ನೂ ಏನಾದರೂ ಇದ್ದಿದ್ದರೆ ಅದನ್ನೂ ತೋರಿರುತ್ತಿದ್ದ. ಅವನು ಹೇಳಿದ ಸರ್ಪ್ರೈಸ್ ಏನು? ಅಣಕಿಸುತ್ತಿದ್ದನಾ? ಹಾಗಂದಿದ್ದಕ್ಕೆ ಏನಾದರೂ ಅರ್ಥ ಇತ್ತಾ? ಪುರಾವೆಯಂಥದ್ದು ಏನಾದರೂ ಬಚ್ಚಿಟ್ಟುಕೊಂಡಿದ್ದನಾ? ನೇರ ಆಪಾದನೆ ಹೊರಿಸುವುದಿತ್ತಾ? ನಿನ್ನೆ ಕಂಡಿದ್ದನಲ್ಲಾ ಅವನು ಎಲ್ಲಿ ಮಾಯವಾದ? ಇವತ್ತು ಎಲ್ಲಿದ್ದ? ಪೋರ್ಫಿರಿಯ ಹತ್ತಿರ ನಿಜವಾಗಿ ಏನಾದರೂ ಪುರಾವೆ ಇದ್ದರೆ ಅದಕ್ಕೂ ನಿನ್ನೆ ಕಂಡವನಿಗೂ ಸಂಬಂಧ ಇರಲೇಬೇಕು.
ರಾಸ್ಕೋಲ್ನಿಕೋವ್ ಸೋಫಾ ಮೇಲೆ ಕೂತಿದ್ದ. ತಲೆ ತಗ್ಗಿಸಿದ್ದ. ಮೊಳಕೈಗಳನ್ನು ಮೊಳಕಾಲುಗಳ ಮೇಲಿಟ್ಟುಕೊಂಡಿದ್ದ. ಮುಖವನ್ನು ಕೈಯಲ್ಲಿ ಮುಚ್ಚಿಕೊಂಡಿದ್ದ. ಮೈಯೆಲ್ಲ ಕಂಪಿಸಿತು. ಕೊನೆಗೂ ಎದ್ದ. ಕ್ಯಾಪು ತೆಗೆದುಕೊಂಡ. ಯೋಚನೆ ಮಾಡಿದ. ಬಾಗಿಲತ್ತ ಹೆಜ್ಜೆ ಹಾಕಿದ.
ಕೊನೆಯ ಪಕ್ಷ ಇವತ್ತು ಯಾವ ಅಪಾಯವೂ ಇರಲ್ಲ, ಕ್ಷೇಮವಾಗಿ ಇರತೇನೆ ಎಂದು ಅದು ಹೇಗೋ ಬಲವಾಗಿ ಅನ್ನಿಸಿತ್ತು. ಇದ್ದಕಿದ್ದ ಹಾಗೆ ಮನಸಿನಲ್ಲಿ ಸಂತೋಷ ತುಂಬಿತು. ಬೇಗ ಕ್ಯಾತರಿನ ಇವಾನೋವ್ನಾ ಮನೆಗೆ ಹೋಗಬೇಕು ಅನಿಸಿತು. ನಿಜವಾಗಿ ಹೇಳಬೇಕೆಂದರೆ ಅಂತ್ಯಸಂಸ್ಕಾರಕ್ಕೆ ಹೋಗುವ ಹೊತ್ತು ಮೀರಿತ್ತು, ಆದರೆ ಊಟಕ್ಕೆ ಹೋಗಲು ಸಮಯವಿತ್ತು. ಅಲ್ಲಿ ಸೋನ್ಯಾಳನ್ನ ನೋಡಬಹುದು ಅನಿಸಿತು.
ನಿಂತ. ಯೋಚನೆ ಮಾಡಿದ. ತುಟಿಯ ಮೇಲೆ ಕಂಡ ನಗುವಿಗೆ ರೋಗ ಹಿಡಿದ ಹಾಗಿತ್ತು.
‘ಇವತ್ತು! ಇವತ್ತು! ಹೌದು, ಇವತ್ತು! ಆಗಲೇಬೇಕು…’ ಅಂದುಕೊಂಡ.
ಬಾಗಿಲು ತೆರೆಯುವುದರಲ್ಲಿದ್ದ. ಇದ್ದಕ್ಕಿದ್ದ ಹಾಗೆ ಬಾಗಿಲು ತಾನಾಗೇ ತೆರೆದುಕೊಂಡಿತು. ಅವನು ಹೆದರಿ ಹಿಂದೆ ಸರಿದ. ಬಾಗಿಲು ನಿಧಾನ, ನಿಶ್ಶಬ್ದ ತೆರೆದುಕೊಂಡು, ನಿನ್ನೆಯ ದಿನ ಕಂಡಿದ್ದ ಮನುಷ್ಯ ನೆಲದಿಂದ ಎದ್ದು ಬಂದವನ ಹಾಗೆ ಬಾಗಿಲಲ್ಲಿ ಕಾಣಿಸಿಕೊಂಡ.
ಹೊಸ್ತಿಲ ಮೇಲೆ ನಿಂತ. ಮೌನವಾಗಿ ರಾಸ್ಕೋಲ್ನಿಕೋವ್‌ನನ್ನು ನೋಡಿದ. ರೂಮಿನೊಳಕ್ಕೆ ಹೆಜ್ಜೆ ಇಟ್ಟ. ನಿನ್ನೆ ಹೇಗಿದ್ದನೋ ಹಾಗೇ ಇದ್ದ. ಅದೇ ಆಕಾರ, ಅದೇ ರೂಪ. ಮುಖ, ಕಣ್ಣು ಮಾತ್ರ ತೀರ ಬದಲಾಗಿದ್ದವು. ಹೇಗೋ ಯಾಕೋ ದುಃಖದಲ್ಲಿರುವವನ ಹಾಗೆ ಕಾಣುತ್ತಿದ್ದ. ಸ್ವಲ್ಪ ಹೊತ್ತು ಸುಮ್ಮನೆ ನಿಂತಿದ್ದು ಆಳವಾದ ನಿಟ್ಟುಸಿರು ಬಿಟ್ಟ. ಅವನು ಅಂಗೈಯನ್ನು ಕೆನ್ನೆಗೊತ್ತಿಕೊಂಡು ಸ್ವಲ್ಪ ಒಂದು ಪಕ್ಕಕ್ಕೆ ಬಾಗಿದ್ದರೆ ಪುರಾ ರೈತರ ಹೆಂಗಸರ ಹಾಗೆ ಕಾಣುತ್ತಿದ್ದ.
‘ಏನು ಬೇಕು?’ ರಾಸ್ಕೋಲ್ನಿಕೋವ್ ಕೇಳಿದ, ಜೀವವೇ ಇಲ್ಲದವನ ಹಾಗೆ.
ಬಂದಿದ್ದವನು ತಟ್ಟನೆ ಅವನ ಕಾಲಿಗೆ ಬಿದ್ದ. ಬಲಗೈಯ ಬೆರಳಲ್ಲಿ ನೆಲ ಮುಟ್ಟಿ ನಮಸ್ಕಾರ ಮಾಡಿದ.
‘ಏನಿದು?’ ರಾಸ್ಕೋಲ್ನಿಕೋವ್ ಗಟ್ಟಿಸಿ ಕೇಳಿದ.
‘ತಪ್ಪು ಮಾಡಿದೇನೆ,’ ಬಂದವನು ಮೆಲ್ಲಗೆ, ಮೃದುವಾಗಿ ಹೇಳಿದ.
‘ಏನು ತಪ್ಪು?’
‘ಕೆಟ್ಟ ಯೋಚನೆ ಮಾಡಿದೇನೆ.’
ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿದರು.
‘ನನಗೆ ರೇಗಿತ್ತು. ನೀನು ಆಗ ಅಲ್ಲಿಗೆ ಬಂದಿದ್ದೆಯಲ್ಲ, ಕುಡಿದಿದ್ದೆ ಅಂತ ಕಾಣತ್ತೆ, ವಾಚ್‌ಮ್ಯಾನುಗಳಿಗೆ ಪೋಲೀಸಿನವರ ಹತ್ತಿರ ಹೋಗಿ ಅಂತ ಹೇಳಿದೆ, ರಕ್ತದ ಬಗ್ಗೆ ಕೇಳಿದೆ. ನನಗೆ ಕಟ್ಟೆನಿಸಿತು. ಯಾಕೆಂದರೆ ಏನೂ ಆಗಲಿಲ್ಲ, ನಿನ್ನ ಕುಡುಕ ಇರಬಹುದು ಅಂದುಕೊಂಡು ಸುಮ್ಮನಾಗಿಬಿಟ್ಟರು. ಎಷ್ಟು ಕೆಟ್ಟೆನಿಸಿತು ಅಂದರೆ ರಾತ್ರಿ ನಿದ್ರೆ ಬರಲೇ ಇಲ್ಲ. ವಿಳಾಸ ಜ್ಞಾಪಕ ಇತ್ತು, ನಿನ್ನೆ ಇಲ್ಲಿಗೆ ಬಂದು ವಿಚಾರಿಸಿದೆ…’
‘ಯಾರು ಬಂದಿದ್ದು?’ ರಾಸ್ಕೋಲ್ನಿಕೋವ್ ಮಾತನ್ನು ತಡೆದು ಕೇಳಿದ. ಕ್ಷಣದಲ್ಲಿ ಅವನಿಗೆ ನೆನಪಾಗಿತ್ತು.
‘ಅಂದರೆ ನಾನೇ ಬಂದೆ. ನಿನಗೆ ಏನಾದರೂ ಮಾಡಬೇಕು ಅಂತ.’
‘ನೀನು ಹಾಗಾದರೆ ಆ ಮನೆಯವನು?’
‘ಆವಾಗ ನಾನು ಗೇಟಿನ ಹತ್ತಿರ ಅವರ ಜೊತೆ ನಿಂತಿದ್ದೆ. ಜ್ಞಾಪಕ ಇಲ್ಲವಾ? ನಾವು ಕುಸುರಿ ಕೆಲಸದವರು, ವ್ಯಾಪಾರಿಗಳು. ಮನೆಯಲ್ಲೇ ಕೆಲಸ ಮಾಡತೇವೆ. ಏನಂದರೆ ನನಗೆ ಬಹಳ ಕೆಟ್ಟನಿಸಿತ್ತು…’
ಎರಡು ದಿನಗಳ ಹಿಂದೆ ಆ ಮನೆಯ ಗೇಟಿನ ಹತ್ತಿರ ನಡೆದ ಆ ಇಡೀ ಸನ್ನಿವೇಶ ತಟ್ಟನೆ ರಾಸ್ಕೋಲ್ನಿಕೋವ್‌ಗೆ ನೆನಪಾಯಿತು.
ಕಾವಲುಗಾರರಲ್ಲದೆ ಇನ್ನೂ ಹಲವು ಜನ ಅಲ್ಲಿ ನಿಂತಿದ್ದರು, ಹೆಂಗಸರೂ ಇದ್ದರು. ರಾಸ್ಕೋಲ್ನಿಕೋವ್‌ನನ್ನು ಪೋಲೀಸ್ ಸ್ಟೇಶನ್ನಿಗೆ ಕರೆದುಕೊಂಡು ಹೋಗಿ ಎಂದು ಯಾವುದೋ ದನಿ ಹೇಳಿತ್ತು. ಹಾಗಂದವನ ಮುಖ ನೆನಪಿಗೆ ಬರಲಿಲ್ಲ, ಈಗಲೂ ಬಂದಿದ್ದವನ ಗುರುತು ಸಿಗಲಿಲ್ಲ, ಆದರೆ ಆ ಮಾತು ಅದಕ್ಕೆ ತಾನು ಅತ್ತ ತಿರುಗಿ ಕೊಟ್ಟ ಉತ್ತರ ಎರಡೂ ನೆನಪಾದವು.
ನಿನ್ನೆ ಅನುಭವಿಸಿದ ಭಯಕ್ಕೆಲ್ಲ ಉತ್ತರ ಇಲ್ಲಿದೆ. ಆ ಭಯಕ್ಕಿಂತ ಭಯಂಕರವೆಂದರೆ ಇವತ್ತು ತನ್ನನ್ನು ತಾನೇ ಹಾಳುಮಾಡಿಕೊಳ್ಳುವವನಿದ್ದೆ, ನನ್ನನ್ನೇ ನಾಶಮಾಡಿಕೊಳ್ಳುವವನಿದ್ದೆ. ಕ್ಷುದ್ರವಾದೊಂದು ಸನ್ನಿವೇಶ ಅದಕ್ಕೆ ಕಾರಣವಾಗುತ್ತಿತ್ತು. ಹಾಗಾದರೆ ನಾನು ಮನೆಯನ್ನು ಬಾಡಿಗೆಗೆ ಕೇಳಿದ್ದು, ರಕ್ತದ ಬಗ್ಗೆ ವಿಚಾರಿಸಿದ್ದು ಬಿಟ್ಟರೆ ಈ ಮನುಷ್ಯನಿಗೆ ಬೇರೆ ಏನೂ ಗೊತ್ತಿಲ್ಲ, ಮತ್ತಿನ್ನೇನೂ ಹೇಳಲಾರ. ಪೋರ್ಫಿರಿಗೆ ಈ ಸನ್ನಿಯೊಂದನ್ನು ಬಿಟ್ಟರೆ ಬೇರೆ ಪುರಾವೆ ಇಲ್ಲ, ಏನಿದ್ದರೂ ಎಲ್ಲಾ ಬರೀ ಸೈಕಾಲಜಿ. ಅದು ಎರಡು ಅಲಗಿನದು, ಏನೂ ಖಚಿತವಲ್ಲ. ಅಂದರೆ ಯಾವ ನಿಜವೂ ಹೊರಬಿದ್ದಿಲ್ಲ (ಹೊರಬೀಳಬಾರದು, ಹೊರಬೀಳಲೇ ಬಾರದು!) ಪೋರ್ಫಿರಿ ಏನು ತಾನೇ ಮಾಡಲು ಸಾಧ್ಯ? ಅಕಸ್ಮಾತ್ ಬಂಧಿಸಿದರೂ ಏನು ಸಾಬೀತು ಮಾಡಲು ಸಾಧ್ಯ ಅವರಿಗೆ? ಹಾಗಿದ್ದರೆ ಪೋರ್ಫಿರಿಗೆ ಅಪಾರ್ಟ್‌ಮೆಂಟಿನ ಬಗ್ಗೆ ಗೊತ್ತಾಗಿದ್ದು ಮೊದಲೇ ಅಲ್ಲ, ನಿನ್ನೆ, ಮೊನ್ನೆ.
‘ಪೋರ್ಫಿರಿಗೆ ಇವತ್ತು ಅದನ್ನ ಹೇಳಿದ್ದು, ನಾನು ಅಲ್ಲಿ ಹೋಗಿದ್ದೆ ಅಂತ ಹೇಳಿದ್ದು, ನೀನೇನಾ?’ ಹೊಸ ವಿಚಾರ ಹೊಳೆದು ಜೋರಾಗಿ ಕೇಳಿದ.
‘ಯಾವ ಪೋರ್ಫಿರಿ?’
‘ಪೋಲೀಸು ಪತ್ತೇದಾರ.’
‘ಹ್ಞೂಂ, ನಾನೇ. ವಾಚ್‌ಮ್ಯಾನು ಹೋಗಲಿಲ್ಲ ಅವತ್ತು. ಹಾಗಾಗಿ ನಾನೇ ಹೋದೇ.‘
‘ಇವತ್ತು?’
‘ನೀನು ಬರುವುದಕ್ಕೆ ಒಂದು ನಿಮಿಷ ಮೊದಲು ಅಲ್ಲಿದ್ದೆ. ಎಲ್ಲಾನೂ ಕೇಳಿಸಿಕೊಂಡೆ. ನಿನಗೆ ಯಾವ ಥರ ಹಿಂಸೆ ಕೊಟ್ಟ ಅನ್ನುವುದೂ ಗೊತ್ತು.’
‘ಎಲ್ಲಿ? ಏನು? ಯಾವಾಗ?’
‘ಪಾರ್ಟಿಶನ್ ಗೋಡೆಯ ಬಾಗಿಲ ಹಿಂದೆ, ನೀನು ಅಲ್ಲಿದ್ದಷ್ಟೂ ಹೊತ್ತು ನಾನು ಬಾಗಿಲ ಹಿಂದೆ ಕೂತಿದ್ದೆ.’
‘ಅವನು ಹೇಳಿದ ಸರ್ಪ್ರೈಸ್ ನೀನು! ಹೇಗಾಯಿತು ಇದೆಲ್ಲ? ಪ್ಲೀಸ್, ಹೇಳು.’
‘ವಾಚ್‌ಮ್ಯಾನುಗಳು ನನ್ನ ಮಾತು ಕೇಳಿ ಪೋಲೀಸರ ಹತ್ತಿರ ಹೋಗಲ್ಲ ಅನ್ನುವುದು ಗೊತ್ತಾಯಿತು. ಲೇಟಾಗಿದೆ, ಹೊತ್ತಲ್ಲದ ಹೊತ್ತಲ್ಲಿ ಬಂದಿದೇವೆ ಅಂತ ಪೋಲೀಸರು ಬೈಯಬಹುದು, ಅಂತೆಲ್ಲ ಅಂದರು. ನನಗೆ ನಿದ್ದೆ ಬರಲಿಲ್ಲ. ನಿನ್ನ ಬಗ್ಗೆ ವಿಷಯ ತಿಳಿದುಕೊಂಡೆ. ನಿನ್ನೆ ನನಗೆಲ್ಲ ತಿಳಿದಮೇಲೆ ಇವತ್ತು ಪೋಲೀಸರ ಹತ್ತಿರ ಹೋದೆ. ಮೊದಲು ಹೋದಾಗ ಅವನಿರಲಿಲ್ಲ. ಅಲ್ಲಿಲ್ಲಿ ಸುತ್ತಾಡಿ ಒಂದು ಗಂಟೆ ಹೊತ್ತು ಕಳೆದು ಮತ್ತೆ ಹೋದೆ. ಆವಾಗ ನೋಡಕ್ಕಾಗಲ್ಲ ಅಂದರು. ಮೂರನೆಸಾರಿ ಹೋದಾಗ ಒಳಕ್ಕೆ ಬಿಟ್ಟರು. ಇದ್ದಿದ್ದು ಇದ್ದ ಹಾಗೆ ವರದಿ ಒಪ್ಪಿಸಿದೆ. ರೂಮಲ್ಲೆಲ್ಲ ಧಪಧಪ ಓಡಾಡಿದ, ಎದೆ ಬಡಿದುಕೊಂಡ, ನೀವೆಲ್ಲ ಸ್ಕೌಂಡ್ರಲ್‌ಗಳು. ನನಗೇನು ಮಾಡಬೇಕು ಅಂತ ಇದೀರಿ ಅಂತೆಲ್ಲ ಬೈದ. ಮೊದಲೇ ಗೊತ್ತಾಗಿದ್ದಿದ್ದರೆ ಪೋಲೀಸರನ್ನ ಕಳಿಸಿ ಅವನನ್ನ ಕರಕೊಂಡು ಬನ್ನಿ ಅನ್ನುತ್ತಿದ್ದೆ, ಅಂದ. ಯಾರನ್ನೋ ಕರೆದ. ಮೂಲೆಗೆ ಹೋಗಿ ಅವನ ಜೊತೆ ಏನೋ ಮಾತಾಡಿದ. ಮತ್ತೆ ನನ್ನ ಹತ್ತಿರ ವಾಪಸ್ ಬಂದ. ಪ್ರಶ್ನೆ ಕೇಳಿದ, ನನ್ನ ಬೈದ. ತಮಾಷೆ ಮಾಡಿದ, ಮತ್ತೆ ಬಹಳ ಬೈದ.
ಎಲ್ಲಾ ವಿಚಾರ ಹೇಳಿದೆ. ನಾನು ನಿನ್ನೆ ನನ್ನ ಕಂಡೆಯಲ್ಲ ಆಗ ನನ್ನ ಯಾವ ಮಾತಿಗೂ ನೀನು ಉತ್ತರ ಕೊಡಲಿಲ್ಲ, ನೀನು ನನ್ನ ಗುರುತು ಹಿಡಿಯಲಿಲ್ಲ ಅಂದೆ. ಅವನು ಮತ್ತೆ ರೂಮೆಲ್ಲ ಸುತ್ತು ಹಾಕಿದ, ಎದೆ ಗುದ್ದಿಕೊಂಡ. ಸಿಟ್ಟು ಮಾಡಿಕೊಂಡ, ಮತ್ತೆ ಅತ್ತ ಇತ್ತ ಹೆಜ್ಜೆ ಹಾಕಿದ. ನೀನು ಬಂದಿದ್ದೀಯ ಅಂತ ಸುದ್ದಿ ಬಂದಾಗ ಬಾಗಿಲ ಹಿಂದೆ ಕುರ್ಚಿ ಮೇಲೆ ಕೂತಿರು, ನೀನು ಏನೇ ಕೇಳಿಸಿಕೊಂಡರೂ ಮಾತಾಡಬೇಡ, ಅಲ್ಲಾಡಬೇಡ ಅಂದ. ಅವನೇ ಕುರ್ಚಿ ತಂದು ಹಾಕಿ, ಬಾಗಿಲಿಗೆ ಬೀಗ ಹಾಕಿ ನನ್ನ ಕೂಡಿಹಾಕಿದ. ನಿನ್ನ ನಾನು ಕರೆದರೂ ಕರೀಬಹುದು, ಆಗ ಬಾ ಅಂದ. ಅವರು ನಿಕೊಲಾಯ್‌ನ ಕರಕೊಂಡು ಬಂದರಲ್ಲ, ನಿನ್ನ ಕಳಿಸಿಬಿಟ್ಟನಲ್ಲ ಆಮೇಲೆ ನನ್ನ ಹೊರಕ್ಕೆ ಕರೆದ. ಮತ್ತೆ ನಿನ್ನ ವಿಚಾರಣೆ ಮಾಡಬೇಕು, ಈಗ ನೀನು ಹೋಗು ಅಂತ ಕಳಿಸಿದ.’
‘ನೀನು ಅಲ್ಲಿದ್ದಾಗ ಅವನು ನಿಕೊಲಾಯ್‌ನ ಏನಾದರೂ ಕೇಳಿದನಾ?’
‘ನಿನ್ನ ಕಳಿಸಿದ ತಕ್ಷಣ ನನ್ನೂ ಕಳಿಸಿಬಿಟ್ಟ. ನಿಕೊಲಾಯ್‍ನ ಪ್ರಶ್ನೆ ಕೇಳಕ್ಕೆ ಶುರುಮಾಡಿದ.’
ವ್ಯಾಪಾರಿ ತಟ್ಟನೆ ಮಾತು ನಿಲ್ಲಿಸಿದ. ದಿಢೀರನೆ ಮತ್ತೆ ನೆಲ ಮುಟ್ಟಿ ನಮಸ್ಕಾರ ಮಾಡಿದ.
‘ನಾನಾಡಿದ ಚಾಡಿಮಾತು, ನನ್ನ ದುಷ್ಟತನ ಕ್ಷಮಿಸಿಬಿಡು,’ ಅಂದ.
‘ದೇವರು ಕ್ಷಮಿಸತಾನೆ,’ ಅಂದ ರಾಸ್ಕೋಲ್ನಿಕೋವ್. ಅವನು ಹಾಗಂದ ತಕ್ಷಣ ವ್ಯಾಪಾರಿ ಮತ್ತೆ ನಮಸ್ಕಾರ ಮಾಡಿದ, ಈ ಬಾರಿ ಸೊಂಟ ಬಾಗಿಸಿ ನಮಸ್ಕಾರ ಮಾಡಿದನೇ ಹೊರತು ನೆಲ ಮುಟ್ಟಲಿಲ್ಲ. ನಿಧಾನವಾಗಿ ಹಿಂದಕ್ಕೆ ತಿರುಗಿದ, ಹೊರಟು ಹೋದ.
‘ಎಲ್ಲಾ ಎರಡು ಅಲುಗಿನವು, ಎಲ್ಲಾನೂ,’ ಅಂದಕೊಳ್ಳುತ್ತ ರಾಸ್ಕೋಲ್ನಿಕೋವ್ ಮೊದಲಿಗಿಂತ ಹೆಚ್ಚು ಸಂತೋಷ ಚಿತ್ತನಾಗಿ ರೂಮಿನಿಂದಾಚೆಗೆ ಹೆಜ್ಜೆ ಹಾಕಿದ.
ಮೆಟ್ಟಲಿಳಿಯುತ್ತಾ ‘ಹೋರಾಟ ಇನ್ನೂ ಮುಗಿದಿಲ್ಲ,’ ಹಲ್ಲು ಕಡಿಯುತ್ತ ಹೇಳಿಕೊಂಡ. ಅವನ ಮೇಲೆ ಅವನೇ ಸಿಟ್ಟುಮಾಡಿಕೊಂಡಿದ್ದ, ತನ್ನ ದುರ್ಬಲ ಹೃದಯದ ಬಗ್ಗೆ ತಾನೇ ನಾಚುತ್ತಿದ್ದ.
ಅಪರಾಧ ಮತ್ತು ಶಿಕ್ಷೆ: ಭಾಗ ನಾಲ್ಕು ಮುಕ್ತಾಯ
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.