Advertisement
ಅಪ್ಪನ ಅಲ್ಸರ್ ಖಾಯಿಲೆ ಮತ್ತು ಅಂಕಗಳ ವ್ಯಾಮೋಹ

ಅಪ್ಪನ ಅಲ್ಸರ್ ಖಾಯಿಲೆ ಮತ್ತು ಅಂಕಗಳ ವ್ಯಾಮೋಹ

ಈಗಿನಂತೆ ಮೊಬೈಲ್ ಕಾಲವೂ ಅಲ್ಲ. ಊರಿಗೆ ಲ್ಯಾಂಡ್ ಫೋನ್‌ ಸಹ ಇರಲಿಲ್ಲ. ಅಪ್ಪನ ಜೊತೆಯಲ್ಲಿ ಹೋಗಿದ್ದ ಕೆಲವರು ಬೆಳಿಗ್ಗೆ ಬಂದು ಹೇಳಿದಾಗಲೆ ನಮಗೆ ತಿಳಿದಿದ್ದು. ಅಪ್ಪನಿಗೆ ‘ಅಲ್ಸರ್’ ಆಗಿದೆ ವಿಪರೀತ ಹಾಲ್ಕೋಹಾಲ್ ಸೇವನೆಯಿಂದ ಹೀಗಾಗಿದೆ ಎಂದು. ಬೆಳಗ್ಗೆಯಷ್ಟರಲ್ಲಿ ಶಸ್ತ್ರಚಿಕಿತ್ಸೆ ಮುಗಿದು, ಯಶಸ್ವಿಯಾಗಿತ್ತು. ಜೀವಕ್ಕೆ ಅಪಾಯವಿರಲಿಲ್ಲ. ಆದರೆ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕು ಎಂಬ ವಿಷಯವನ್ನು ತಿಳಿಸಿದ್ದರು. ರಾತ್ರಿ ಇಡೀ ನಿದ್ದೆಯಿಲ್ಲದೆ ಆತಂಕದಿಂದಲೇ ಕಳೆದಿದ್ದ ನಾವೆಲ್ಲ ನಿಟ್ಟುಸಿರು ಬಿಟ್ಟಿದ್ದೆವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಆರನೆಯ ಕಂತು ನಿಮ್ಮ ಓದಿಗೆ

ಕೋಪ ಬಂದಾಗ ಅಪ್ಪ ವಿಪರೀತ ಹೊಡೆಯುತ್ತಿದ್ದ. ಅದು ನನ್ನಲ್ಲಿ ಒಂದು ರೀತಿಯ ಭಯ, ಖಿನ್ನತೆಗೆ ಕಾರಣವಾಗಿತ್ತು. ಬಹುಶಃ ನಮ್ಮ ಮನೆಯಲ್ಲಿ ಅತಿ ಹೆಚ್ಚು ಹೊಡೆತ ತಿಂದವನೆಂದರೆ ನಾನೇ. ಓದಿನಲ್ಲಿ ಮಾತ್ರ ನಾನು ಯಾವಾಗಲೂ ಮುಂದೆ. ಅವಾಗೆಲ್ಲ ಇಂಗ್ಲೀಷ್ ವ್ಯಾಮೋಹ ಅಷ್ಟೊಂದಿರಲಿಲ್ಲ. ಅದಕ್ಕೆ ಇಂಗ್ಲೀಷ್ ಮಾಧ್ಯಮದ ಶಾಲೆಗಳು ಅಕ್ಕ ಪಕ್ಕ ಎಲ್ಲೂ ಇರಲಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಒಂದೆ ಒಂದು ಶಾಲೆ ಇತ್ತು. ಅಲ್ಲಿಗೆ ಕಳಿಸಿ ಓದಿಸುವ ಆರ್ಥಿಕ ಅನುಕೂಲತೆ ನಮ್ಮ ಕುಟುಂಬಕ್ಕೆ ಇರಲಿಲ್ಲ.

ದಿನಗೂಲಿ ಮಾಡಿ ಬದುಕು ಸಾಗಿಸುವ ನಮ್ಮಂಥ ಕುಟುಂಬಗಳೆ ಹೆಚ್ಚು. ಹಾಗಾಗಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಯುವವರೆ ಹೆಚ್ಚು. ಮನೆಯಲ್ಲಿಯೂ ಅಷ್ಟೇ ಓದಿ ವಿದ್ಯಾವಂತನಾದರೆ ಸಾಕು ಅನ್ನುವ ಧೋರಣೆಯಷ್ಟೆ. ಹೀಗೆ ಓದಬೇಕು ಇಷ್ಟೆ ಅಂಕ ಗಳಿಸಬೇಕು ಅನ್ನುವ ಯಾವ ಒತ್ತಡವನ್ನೂ ಆಗ ಮಕ್ಕಳ ಮೇಲೆ ಹಾಕುತ್ತಿರಲಿಲ್ಲ. ಹಾಗಾಗಿ ಯಾವ ಒತ್ತಡಗಳೂ ಇಲ್ಲದ ಸಮೃದ್ಧ ಬಾಲ್ಯ ನಮ್ಮದು ಅನ್ನುವುದೆ ಖುಷಿ. ಇಂದು ಅಂಕಗಳ ಹಿಂದೆ ಓಡುವ ವಿದ್ಯಾರ್ಥಿಗಳು ಡಾಕ್ಟ್ರೆ ಆಗಬೇಕೆನ್ನುವ ಪೋಷಕರ ಧಾವಂತ, ಓದಿ ಓದಿ ಬಸವಳಿಯುವ ಮಕ್ಕಳು, ಅದಕ್ಕಾಗಿ ನಾನಿಷ್ಟು ಖರ್ಚು ಮಾಡುತ್ತಿದ್ದೇನೆ ಅವರು ಅಷ್ಟು ಅಂಕ ಗಳಿಸದಿದ್ದರೆ ಹೇಗೆ? ನಾವು ಮಾಡುತ್ತಿರುವುದು ಅವನ ಅನುಕೂಲಕ್ಕೆ ಮುಂದೆ ಅವನೆ ಸುಖವಾಗಿರುತ್ತಾನೆ ಎಂದು ಕಾರಣ ಹೇಳುವ ತಂದೆ, ಅಂಕಗಳೆ ಹಣಕ್ಕೆ ದಾರಿ ಎನ್ನುವಂತೆ ಯೋಚಿಸುವ ಇಂಗ್ಲೀಷ್ ಶಾಲೆಗಳು, ಇವುಗಳನ್ನೆಲ್ಲಾ ನೋಡುತ್ತಿದ್ದರೆ ಜೀವನದ ಸಾರ್ಥಕತೆ ಇರುವುದು ಮೆಡಿಕಲ್ ಓದುವುದರಲ್ಲಾ, ದೊಡ್ಡ ಇಂಜಿನೀಯರ್ ಆಗುವುದರಲ್ಲಾ, ಅಥವಾ ವಿದೇಶಕ್ಕೆ ಹೋಗಿ ಚೆನ್ನಾಗಿ ಹಣ ಮಾಡುವುದರಲ್ಲಾ, ಯಾವುದರಲ್ಲಿ ಎನ್ನುವುದು ಇವತ್ತಿಗೂ ನನಗೆ ಅದೊಂದು ಯಕ್ಷ ಪ್ರಶ್ನೆಯೆ…!?. ನಮಗಂತೂ ಇವ್ಯಾವುದರ ಗೊಡವೆಯೆ ಇರಲಿಲ್ಲ. ಶಾಲೆಯಲ್ಲಿ ಕಾಂಪಿಟೇಷನ್ ಇರುವುದು ಸಹಜ ಆದರೆ ಇಂತಿಷ್ಟೆ ಅಂಕ ಗಳಿಸಬೇಕು ಎಂಬ ಯಾವ ಒತ್ತಡವು ನನಗೆ ಮನೆಯಲ್ಲಿ ಹಾಕುತ್ತಿರಲಿಲ್ಲ. ಹಾಗಂತ ಕೇಳಬಾರದೆಂದು ನನ್ನ ಅಭಿಪ್ರಾಯವಲ್ಲ. ಸಹಜವಾಗಿರಬೇಕೆಂಬುದಷ್ಟೆ. ಅಂತೂ ಪರೀಕ್ಷೆಗಳಲ್ಲಿ ಟೆಸ್ಟ್‌ನಲ್ಲಿ ಅಂಕ ಕಡಿಮೆ ಬಂದಾಗ ನಾನೆ ಆತಂಕಗೊಳ್ಳುತ್ತಿದ್ದೆ. ಅಯ್ಯೋ ಕಡಿಮೆಯಾಯಿತಲ್ಲ ಎಂದುಕೊಂಡು ಮುಂದೆ ಹೆಚ್ಚು ಅಂಕ ಗಳಿಸಬೇಕು ಅಂತ ಯೋಚಿಸುತ್ತಿದ್ದೆ.

ಐದನೆಯ ತರಗತಿಯಲ್ಲಿದ್ದಾಗ ವಿಜ್ಞಾನ ವಿಷಯದಲ್ಲಿ ಒಂದೆ ಒಂದು ಬಾರಿ ಕಡಿಮೆ ಅಂಕ ಪಡೆದಿದ್ದೆ. ಅದನ್ನು ಮಾತ್ರ ಕೇಳಿದ್ದರು. ಯಾಕೆಂತ ಗೊತ್ತಿಲ್ಲ. ಅದು ಯಾಕೆ ಸುದ್ದಿ ಆತು ಅಂತ ಸಂಬಂಧಿಯೊಬ್ಬರ ನಾಮಕರಣ ಸಮಾರಂಭಕ್ಕೆ ಹೋದಾಗಲೆ ನನಗೂ ತಿಳಿದದ್ದು. ನಮ್ಮ ಮನೆಯವರೆಲ್ಲರೂ ಊಟ ಮಾಡಿ ಎಲ್ಲರೂ ಒಟ್ಟಾಗಿ ಕುಳಿತು ಕ್ಷೇಮ ಸಮಾಚಾರಗಳನ್ನು ಮಾತನಾಡುವಾಗ ಮಧ್ಯದಲ್ಲಿ ನನ್ನ ಅಪ್ಪನ ಸಂಬಂಧಿಯೊಬ್ಬರು ನಾಮಕರಣದ ಸಮಾರಂಭವಾದ ಮೇಲೆ ಒಂದೊಂದೆ ವಿಷಯದ ಅಂಕಗಳನ್ನು ಕೇಳುತ್ತ ಬಂದರು. ಎಲ್ಲಾ ವಿಷಯದಲ್ಲೂ ಅತಿ ಹೆಚ್ಚು ಅಂಕಗಳೆ ಬಂದಿವೆ. ಆದರೆ ವಿಜ್ಞಾನ ವಿಷಯದಲ್ಲಿ ಮಾತ್ರ ಕಡಿಮೆ ಅಂಕಗಳು ಬಂದಿರುವುದನ್ನು ಪ್ರಸ್ತಾಪ ಮಾಡಿದ ನನ್ನದೆ ತರಗತಿಯ ಸ್ನೇಹಿತೆಗೆ ಹೆಚ್ಚು ಅಂಕ ಬಂದಿದ್ದವು. ಅದನ್ನು ಅವರಪ್ಪ ಸುದ್ದಿ ಮಾಡಿದ್ದ. ಅದೂ ಎಲ್ಲರಿಗೂ ತಿಳಿಯಬೇಕೆಂಬುದು ಆತನ ಇರಾದೆ. ನನಗೇನು ಕಡಿಮೆ ಅಂಕ ಬಂದಾಗ ಏನು ಅನ್ನಿಸಿರಲಿಲ್ಲ. ಅಲ್ಲಿ ಅಷ್ಟೊಂದು ಸಂಬಂಧಿಕರ ಮಧ್ಯೆ ಆ ವಿಷಯವನ್ನು ದೊಡ್ಡದು ಮಾಡಿ ಹೇಳಿದಾಗ ನಾನಂತು ಸಣ್ಣವನಾಗಿದ್ದೆ. ನನಗೇಕೆ ಕಡಿಮೆ ಅಂಕಗಳು ಬಂದಿವೆ ಅವಳಿಗೆ ಹೇಗೆ ಜಾಸ್ತಿ ಬಂದವು. ಪ್ರಶ್ನೆಗಳು ಕಷ್ಟಕರವಾಗಿಯೇ ಇದ್ದವು. ಅವಳಿಗೆ ಯಾರಾದರೂ ಸಹಾಯ ಮಾಡಿರಬಹುದು ಅಂದುಕೊಂಡು ಸುಮ್ಮನಾದೆ ಛೆ.. ಸೋತಾಗ ಈ ರೀತಿಯ ಕಾರಣಗಳನ್ನು ಹುಡುಕಬಾರದು. ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಓದಬೇಕು ಅಂತಲೂ ನಾನಾಗೇ ಅಂದುಕೊಂಡು ಸುಮ್ಮನಾದರೂ ಸಂಬಂಧಿಗಳ ಮುಂದೆ ನಾನು ಸಣ್ಣವನಾದೆನಲ್ಲ ಎಂಬ ಸಣ್ಣ ಕೀಳರಿಮೆ ನನ್ನನ್ನು ಕಾಡಿದ್ದು ನಿಜ. ಎಷ್ಟೊ ಸಂದರ್ಭದಲ್ಲಿ ಹೀಗಾಗುತ್ತದೆ ಸಹಜವಾಗಿ ಸ್ವೀಕರಿಸಬೇಕು ಅನ್ನುವುದು ನನ್ನ ಭಾವನೆ. ಮುಂದೆ ಯಾವತ್ತೂ ಅಂತಹ ಪ್ರಸಂಗಗಳು ಬರಲಿಲ್ಲ ವಿದ್ಯಾಭ್ಯಾಸ ಸರಾಗವಾಗಿಯೆ ಸಾಗಿತ್ತು.

ಶಾಲೆಯಲ್ಲಿ ಕಾಂಪಿಟೇಷನ್ ಇರುವುದು ಸಹಜ ಆದರೆ ಇಂತಿಷ್ಟೆ ಅಂಕ ಗಳಿಸಬೇಕು ಎಂಬ ಯಾವ ಒತ್ತಡವು ನನಗೆ ಮನೆಯಲ್ಲಿ ಹಾಕುತ್ತಿರಲಿಲ್ಲ. ಹಾಗಂತ ಕೇಳಬಾರದೆಂದು ನನ್ನ ಅಭಿಪ್ರಾಯವಲ್ಲ. ಸಹಜವಾಗಿರಬೇಕೆಂಬುದಷ್ಟೆ. ಅಂತೂ ಪರೀಕ್ಷೆಗಳಲ್ಲಿ ಟೆಸ್ಟ್‌ನಲ್ಲಿ ಅಂಕ ಕಡಿಮೆ ಬಂದಾಗ ನಾನೆ ಆತಂಕಗೊಳ್ಳುತ್ತಿದ್ದೆ. ಅಯ್ಯೋ ಕಡಿಮೆಯಾಯಿತಲ್ಲ ಎಂದುಕೊಂಡು ಮುಂದೆ ಹೆಚ್ಚು ಅಂಕ ಗಳಿಸಬೇಕು ಅಂತ ಯೋಚಿಸುತ್ತಿದ್ದೆ.

ದೇವರು ಬಡವರಿಗೆ ರೋಗಗಳನ್ನು ಕೊಡುತ್ತಾನೊ ಅನಿಸಿದ್ದಿದೆ. ಬದುಕಿನ ವಿಚಿತ್ರವೆ ಅಂತಹದು ಇನ್ನೇನು ಬದುಕು ಚಂದವಾಯಿತು ಅನ್ನುವಷ್ಟರಲ್ಲಿ ಯಾವುದೋ ಕಷ್ಟದ ಬಾಣವೊಂದು ಎದೆಗೆ ನಾಟಿ ಹೃದಯವನ್ನು ಗಾಯ ಮಾಡಿದಂತೆ, ಉಸಿರ ಅಲೆಯೊಂದು ಗಂಟಲೊಳಗೆ ಸಿಕ್ಕಿ ಉಸಿರು ಕಟ್ಟುವಂತೆ, ಬದುಕೆಂಬ ಜೀವದ ಬೇರೆ ಬೇರೆ ಕೊಂಬೆಗಳು ಮುರಿದು ಬೀಳುವ ಸಂದರ್ಭಗಳು ನಮಗೆ ಅರಿವಿಲ್ಲದೆ ನಮ್ಮನ್ನು ಇನ್ನಿಲ್ಲದೆ ಕಾಡುತ್ತದೆ. ದಿಗ್ಭ್ರಮೆಗೊಳಿಸುತ್ತದೆ. ಅಂತಹದೊಂದು ಆಘಾತ ಇಡೀ ಕುಟುಂಬವನ್ನು ಕಾಡಿತ್ತು. ಅನುಕೂಲ ಜಾಸ್ತಿಯಾದಂತೆ ಅಪ್ಪ ಒಂದು ಕಿರಾಣಿ ಅಂಗಡಿಯನ್ನು ಇಟ್ಟರು. ಊರಿನಲ್ಲಿ ಯಾವ ಅಂಗಡಿಗಳು ಇಲ್ಲದ್ದರಿಂದ ವ್ಯಾಪಾರವು ವೃದ್ಧಿಯಾಯಿತು. ಅಪ್ಪನಿಗೆ ಓರಗೆಯವರ ಗೆಳೆತನವು ಜಾಸ್ತಿಯಾಯಿತು. ಕುಡಿಯುವ ಚಟವು ಜಾಸ್ತಿಯಾಯಿತು. ನಾವೆಲ್ಲ ಚಿಕ್ಕವರಾದ್ದರಿಂದ ಅವರಿಗೆ ಬುದ್ಧಿ ಹೇಳುವಷ್ಟು ಪ್ರಬುದ್ಧತೆ ನಮಗೆಲ್ಲಿ ಬರಬೇಕು. ಅಪ್ಪನನ್ನು ಕಂಡರೆ ಭಯ ಬೀಳುತ್ತಿದ್ದ ನಾವು ಮುದುಡಿ ಮುದ್ದೆಯಂತಾಗುತ್ತಿದ್ದದ್ದೆ ಹೆಚ್ಚು. ತಿಂಗಳ ಚಟವಾಗಿ ಪ್ರಾರಂಭವಾದ ಅಪ್ಪನ ಕುಡಿತ ದಿನದ ಚಟವಾಗಿ ಬಹುಕಾಲವೆ ಆಗಿತ್ತು. ಈ ನಡುವೆ ಆಗಾಗ ಹೊಟ್ಟೆನೋವು ಎನ್ನುತ್ತಿದ್ದರು. ನೋವು ಬಂದಾಗ ಮನೆಯಲ್ಲಿ ಪಾನಕ ಕುಡಿದು ಶಮನಮಾಡಿಕೊಳ್ಳುತ್ತಿದ್ದರು. ಮುಂದೆ ಇದು ಜೀವಕ್ಕೂ ಕಂಟಕ ತರಬಹುದು ಎಂಬ ಯಾವ ಸಣ್ಣ ಸುಳಿವೂ ನಮಗಾಗಲೀ ಅವರಿಗಾಗಲಿ ಇರಲಿಲ್ಲ. ದಿನೆ ದಿನೆ ಹೊಟ್ಟೆ ನೋವು ಜಾಸ್ತಿಯಾಯಿತು. ಆದರೆ ಕುಡಿಯುವ ಚಟವನ್ನು ಮಾತ್ರ ಅಪ್ಪ ಬಿಟ್ಟಿರಲಿಲ್ಲ. ಅಮ್ಮನು ಆಗಾಗ ಬುದ್ಧಿ ಹೇಳುತ್ತಿದ್ದಳಾದರೂ ಅವಳ ಯಾವ ಮಾತನ್ನೂ ಅಪ್ಪ ಕೇಳಿಸಿಕೊಳ್ಳುತ್ತಿರಲಿಲ್ಲ. ಅಮ್ಮನು ಹೇಳಿ ಹೇಳಿ ಸುಮ್ಮನಾಗಿದ್ದಳು. “ಅತಿಯಾದ ಪ್ರತಿಯೊಂದು ಪ್ರಕೃತಿಗೆ ವಿರುದ್ಧ” ಅನ್ನುವಂತೆ ಅತಿಯಾದ ಕುಡಿತ ದೇಹಕ್ಕೆ ವಿರುದ್ಧವಾಯಿತು. ದೇಹವಾದರೂ ಎಷ್ಟು ಸಹಿಸಿಕೊಂಡಿತು ಒಂದು ದಿನ ಅದು ತನ್ನ ಅಸಹನೆಯನ್ನು ತೋರಿಸಿತು.

ಅದೊಂದು ರಾತ್ರಿ ಅಂಗಡಿಯನ್ನು ಮುಚ್ಚಿ ಮನೆಗೆ ಬಂದ ಅಪ್ಪ ವಿಪರೀತ ಹೊಟ್ಟೆನೋವೆಂದು ಹಾಸಿಗೆಯಲ್ಲಿ ಮಲಗಿದ್ದಾನೆ. ಅಮ್ಮ ಗಾಬರಿಯಿಂದ ಸಕ್ಕರೆ ಪಾನಕ ಮಾಡಿಕೊಟ್ಟಿದ್ದಾಳೆ. ಗ್ಯಾಸ್ಟ್ರಿಕ್ ಇನ್ನೂ ಬಲವಾಗಿ ಹೊಟ್ಟೆನೋವು ಅಧಿಕವಾಗಿದೆ. ಈ ಹಿಂದೆ ಹೊಟ್ಟೆನೋವು ಬಂದಾಗ ಒಂದಿಷ್ಟು ಕುಡಿದರೆ ಶಮನವಾಗುತ್ತದೆ ಎಂದು ಯಾರೋ ಹೇಳಿದ್ದ ಮಾತಿನಂತೆ ಕಾಕತಾಳಿಯವೋ ಎಂಬಂತೆ ನೋವು ನಿವಾರಣೆಯಾಗಿದ್ದು ತಿಳಿದಿದ್ದ ಅಪ್ಪ ಯಾರಿಗೂ ತಿಳಿಯದೆ ಇನ್ನೊಂದಿಷ್ಟು ಕುಡಿದಿದ್ದಾನೆ. ಹೊಟ್ಟೆಯೊಳಗಿನ ಕರುಳುಣ್ಣಿಗೆ ಹೀಗಾಗುತ್ತದೆ ಎಂಬುದನ್ನು ಅರಿಯದ ಆತನ ಕುಡಿತದಿಂದ ಹೊಟ್ಟೆಯೊಳಗಿನ ಗ್ಯಾಸ್ಟ್ರಿಕ್ ಅಧಿಕವಾಗಿ ಹೊಟ್ಟೆ ಊದಿಕೊಳ್ಳಲು ಪ್ರಾರಂಭಿಸಿದ್ದೇ ನೋವು ನೋವು ವಿರೀತ ಉಲ್ಬಣಿಸಿ ಉರುಳಾಡಲು ಪ್ರಾರಂಭಿಸಿದಾಗ ಎಲ್ಲರೂ ಗಾಬರಿಯಾಗಿ ಅಳುವುದಕ್ಕೆ ಪ್ರಾರಂಭಿಸಿದ್ದೆವು. ಆಗ ನಮ್ಮ ಚಿಕ್ಕಪ್ಪ ಮತ್ತು ಊರಿನ ಸ್ನೇಹಿತರು ಸೇರಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅವರು ಒಂದಿಷ್ಟು ಔಷಧಿ ಕೊಟ್ಟು ಕಳಿಸಿದರು. ಸ್ವಲ್ಪ ಹೊತ್ತು ಶಮನವಾದಂತೆ ಕಂಡರೂ ಹೊಟ್ಟೆ ಉಬ್ಬರವಾಗಲು ಪ್ರಾರಂಭವಾಯಿತು. ಅಷ್ಟೇನೂ ವಾಹನಗಳ ಅನುಕೂಲ ಇಲ್ಲದೆ ಇರುವ ಕಾಲವದು. ಕೊನೆಗೆ ಒಂದು ಟ್ರಾಕ್ಟರ್‌ನಲ್ಲಿ ತಾಲ್ಲೂಕು ಕೇಂದ್ರಕ್ಕೆ ಅಪ್ಪನನ್ನು ಕರೆದುಕೊಂಡು ಹೋದರು. ಅಲ್ಲಿಂದ ಒಂದು ಕಾರನ್ನು ಬಾಡಿಗೆಗೆ ಪಡೆದು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿಗಾಗಲೆ ಅಪ್ಪನ ಮುಖ ಕಾಣದಷ್ಟು ಊದಿಕೊಂಡಿತ್ತು. ತುಮಕೂರಿನ ಸಿದ್ಧಾರ್ಥ ಆಸ್ಪತ್ರೆ ಹೊಸದಾಗಿ ಪ್ರಾರಂಭವಾಗಿತ್ತು. ತುಂಬ ವ್ಯವಸ್ಥಿತವಾದ ಆಸ್ಪತ್ರೆ. ಈ ತರಹದ ಕೇಸ್ ಅವರಿಗೆ ಹೊಸದಾಗಿತ್ತು. ತಕ್ಷಣವೆ ಆಪರೇಷನ್ ಮಾಡ್ಬೇಕು ಇಲ್ಲದಿದ್ದರೆ ಉಳಿಯುವುದೆ ಕಷ್ಟ ಎಂದಿದ್ದಾರೆ. ಆಪರೇಷನ್ ಮಾಡಲು ರಕ್ತದ ಅವಶ್ಯಕತೆ ಇದೆ ಎಂದಾಗ ನಮ್ಮ ಚಿಕ್ಕಪ್ಪನ ರಕ್ತದ ಗುಂಪು ಅದೇ ಆಗಿದ್ದರಿಂದ ಅವರೇ ರಕ್ತವನ್ನು ಕೊಟ್ಟರು. ಇಡಿ ರಾತ್ರಿ ಶಸ್ತ್ರಚಿಕಿತ್ಸೆ ನಡೆದಿದೆ. ಉಳಿಯುವ ಸಾಧ್ಯತೆ ಕಡಿಮೆ ಇದೆ, ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ನಾವು ಗ್ಯಾರಂಟಿ ಕೊಡುವುದಿಲ್ಲ ಎಂದಾಗ ಅಮ್ಮನಿಗೆ ಉಳಿದಿದ್ದು ಅಳು ಮಾತ್ರ… ಅವಳಾಗ ರಾತ್ರಿಯೆಲ್ಲ ಅತ್ತಿದ್ದಾಳೆ… ಅಳುತ್ತಲೆ ದೇವರಿಗೊಂದು ಮೊರೆ ಬೇಡುವುದ ಮರೆತಿರಲಿಲ್ಲ. ನಾವು ಚಿಕ್ಕಮಕ್ಕಳು ಅನ್ನುವ ಕಾರಣಕ್ಕೆ ನಮ್ಮನ್ನೆಲ್ಲ ಮನೆಯಲ್ಲಿಯೆ ಬಿಟ್ಟುಹೋಗಿದ್ದರು. ಆದರೆ ನಮಗೆ ವಿಷಯ ತಿಳಿಸುವವರಾರು ಇರಲಿಲ್ಲ. ಚಡಪಡಿಕೆಗಳಷ್ಟೆ ನಮಗೆ ಉಳಿದಿದ್ದವು.

ಈಗಿನಂತೆ ಮೊಬೈಲ್ ಕಾಲವೂ ಅಲ್ಲ. ಊರಿಗೆ ಲ್ಯಾಂಡ್ ಫೋನ್‌ ಸಹ ಇರಲಿಲ್ಲ. ಅಪ್ಪನ ಜೊತೆಯಲ್ಲಿ ಹೋಗಿದ್ದ ಕೆಲವರು ಬೆಳಿಗ್ಗೆ ಬಂದು ಹೇಳಿದಾಗಲೆ ನಮಗೆ ತಿಳಿದಿದ್ದು. ಅಪ್ಪನಿಗೆ ‘ಅಲ್ಸರ್’ ಆಗಿದೆ ವಿಪರೀತ ಹಾಲ್ಕೋಹಾಲ್ ಸೇವನೆಯಿಂದ ಹೀಗಾಗಿದೆ ಎಂದು. ಬೆಳಗ್ಗೆಯಷ್ಟರಲ್ಲಿ ಶಸ್ತ್ರಚಿಕಿತ್ಸೆ ಮುಗಿದು, ಯಶಸ್ವಿಯಾಗಿತ್ತು. ಜೀವಕ್ಕೆ ಅಪಾಯವಿರಲಿಲ್ಲ. ಆದರೆ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕು ಎಂಬ ವಿಷಯವನ್ನು ತಿಳಿಸಿದ್ದರು. ರಾತ್ರಿ ಇಡೀ ನಿದ್ದೆಯಿಲ್ಲದೆ ಆತಂಕದಿಂದಲೇ ಕಳೆದಿದ್ದ ನಾವೆಲ್ಲ ನಿಟ್ಟುಸಿರು ಬಿಟ್ಟಿದ್ದೆವು. ಮುಂದೆ ಅಮ್ಮ ಅಪ್ಪನನ್ನು ಮಗುವಿನಂತೆ ಸಾಕಿದ್ದಳು. ನಂತರದಲ್ಲಿ ಅಪ್ಪ ಮೊದಲಿನಂತಾದ. ಅಂತೂ ಕುಡಿತವನ್ನು ಬಿಟ್ಟ. ಅವನ ಹಿಂದಿನ ವರ್ತನೆಗೆ ಕೋಪವಿದ್ದರೂ ಅಪ್ಪ ಜೀವಂತವಾಗಿ ಮನೆಗೆ ಬಂದಿದ್ದ. ಎಂಥವನಾದರೂ ಅಪ್ಪನೆನಿಸಿಕೊಂಡವನು ಇರಲೇಬೇಕು. ಯಾಕೆಂದರೆ ಆತ ನಮ್ಮ ಜನ್ಮದಾತ.

(ಮುಂದುವರಿಯುವುದು)

About The Author

ಮಾರುತಿ ಗೋಪಿಕುಂಟೆ

ಮಾರುತಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೋಪಿಕುಂಟೆ ಗ್ರಾಮದವರು. ಶ್ರೀ ಅಮ್ಮಾಜಿ ಗ್ರಾಮಾಂತರ ಪ್ರೌಢಶಾಲೆ ಹಾರೋಗೆರೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕತೆ-ಕವನಸಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಎದೆಯ ನೆಲದ ಸಾಲು" ಎಂಬ ಕವನ ಸಂಕಲನ ಅಚ್ಚಿನಲ್ಲಿದೆ.

1 Comment

  1. ಎಸ್. ಪಿ. ಗದಗ.

    ಅಂಕಗಳ ವ್ಯಾಮೋಹ ಮತ್ತು ಅಪ್ಪನ ಮನಸ್ಥಿತಿಯ ನೇರ ಬರಹ ಚೆನ್ನಾಗಿ ಮೂಡಿ ಬಂದಿದೆ ಸರ್.ಪೋಷಕರ ಅಂಕಗಳ ವ್ಯಾಮೋಹಕ್ಕೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ತಮ್ಮ ಬಾಲ್ಯದ ರುಚಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಅನಿಸುತ್ತಿದೆ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ