Advertisement
ಅಭಿಷೇಕ್ ವೈ.ಎಸ್ ಬರೆದ ಮೂರು ಹೊಸ ಕವಿತೆಗಳು

ಅಭಿಷೇಕ್ ವೈ.ಎಸ್ ಬರೆದ ಮೂರು ಹೊಸ ಕವಿತೆಗಳು

ಒಂದು ಬಯಕೆ

ಕಳೆದೇ ಹೋದೆ
ಎನ್ನುವ ಮಬ್ಬುಗತ್ತಲ
ಸಂಜೆಯಲ್ಲಿ ಶಹರದ
ನಿಟ್ಟುಸಿರ ಮೌನವನ್ನು
ಕಟ್ಟು ಬಿಚ್ಚಿ ಹಾರಾಡಲು
ಬಿಟ್ಟಿರುವೆ;
ಗ್ಯಾರೆಂಟಿಯೇ ಇಲ್ಲದ
ನಾಳೆಗಳಿಗೆ ನಾನು
ಹೆದರುವುದಿಲ್ಲ..!

ಸಿಗರೇಟು ಸುಡಲಿಲ್ಲ,
ಥರಾವರಿ ಮದ್ಯವ ಕುಡಿಯಲಿಲ್ಲ,
ಎಯ್ಟೇನ್ ಪ್ಲಸ್ಸಿನ ಯಾವ
ಚಟಗಳಿಗೂ ನನ್ನನ್ನು
ಅರ್ಪಿಸಲಿಲ್ಲ..!
ಕಾದ ನೆನಪಿನ ಹೆಂಚಿನ
ಮೇಲೆ ದೋಸೆಯಂಥ
ನನ್ನೊಳಗೂ ತೂತುಗಳಿವೆಯೆಂದರೆ
ನಂಬಬಲ್ಲೆಯ?

ಕಂಬಳಿಯೊಳಗೆ ಮುದುರಿಕೊಂಡು
ಆಗಾಗ್ಗೆ ಬಿಸಿಯಾಗುವ ನನಗೆ
ಇಂಥದೇ ವ್ಯಾಪ್ತಿಯಿಲ್ಲ..
ಕನವರಿಕೆಗಳ ಸ್ವಪ್ನದಲ್ಲಿಯಾದರೂ
ನಿನ್ನ ಬಿಗಿಯಾದ
ಬಂಧದೊಳಗೆ ತೂರಿಕೊಳ್ಳಬೇಕು;
ಗವಾಕ್ಷಿಗಳಿಲ್ಲದ ನಿನ್ನೊಳಗಿನ
ಅಂತರಾಳದಲ್ಲಿ
ಸಮಾಧಿಯಾಗಬೇಕು..!

******

ಅಮೂರ್ತ ಕಾವ್ಯ

ತುಕ್ಕು ಹಿಡಿದ ಮೊಳೆಗೆ
ನೇಣು ಬಿಗಿಸಿಕೊಂಡ
ಅಂಗಿಯ ಸೆಂಟು
ಮೂಗಿಗೆ ಬಡಿಯುತ್ತಿದೆ.
ಕಳ್ಳಗಣ್ಣುಗಳ ಈ ವಯಸ್ಸಾದ
ಗೋಡೆಗಳು
ನಗ್ನ ರೂಪವನ್ನು ನುಂಗಿ
ನೊಣೆಯುತ್ತಿವೆ.
ಅಜ್ಞಾತ ಮುಖಗಳು
ಅರೆಜೀವವನ್ನು ಕೊರೆಯುತ್ತಿವೆ.

ನದಿಯ ತಟದಲ್ಲೇ
ಬೋರಲಾಗಿ
ಸತಾಯಿಸಿ ಹನಿಯುವ
ಮಳೆಗೆ ಸಿಕ್ಕ ತೆಪ್ಪದ
ಕಥೆಯ ಕೇಳುವವರಿಲ್ಲ;
ಒಣಮರದ ಶಿಲುಬೆಯಂಥ
ಕೊಂಬೆಯಲ್ಲಿ ಕೂತ
ಒಂಟಿ ಹಕ್ಕಿ ಧ್ಯಾನಿಸುತ್ತಿದೆ

ಮುಖಗವಸಿನ
ದಿನಗಳನ್ನು ಉಸಿರುಗಟ್ಟಿ
ಬದುಕುತ್ತಿರುವ ನನ್ನ
ಮುಖವೀಗ ನನಗೇ ಅಪರಿಚಿತ,
ಇಬ್ಬರ ತುಟಿಗಳಿಗೆ
ದೇಶ ದೇಶದ ಗಡಿಗಳಂತೆ
ಬೇಲಿ ಬಿದ್ದಿರುವ
ಈ ದುರಿತಕಾಲದಲ್ಲಿ
ಪ್ರೇಮ ಕಾವ್ಯವ ಹೇಗೆ ಹಾಡಲಿ?

******

ನನ್ನ ಪ್ರಾಣ ತೆಗೆದುಬಿಡಿ

ಏನಾದರೂ ಮಾಡಿ
ನನಗೆ ಗೊತ್ತಿಲ್ಲ;
ನಡು ರಸ್ತೆಯಲ್ಲೇ
ಇರಿದು ಇರಿದು ಕೊಲ್ಲಿ;
ಉಸಿಗಟ್ಟಿ ಸಾಯಿಸಿ;
ನಗುತ್ತಲೇ
ವಿಷವಿಕ್ಕಿಯಾದರೂ ಕೊಲ್ಲಬನ್ನಿ;
ಒಟ್ಟಿನಲ್ಲಿ ಹೇಗಾದರೂ
ಸರಿಯೆ ನನ್ನ ಪ್ರಾಣ ತೆಗೆದುಬಿಡಿ

ನಿಮ್ಮಿಂದ
ಆಗಾಗ್ಗೆ
ಕೊಲೆಯಾದರೆ ಮಾತ್ರ
ನನಗೆ ಮರು ಹುಟ್ಟು
ಇಲ್ಲವೆಂದರೆ
ಸತ್ತೇ ಇರುತ್ತೇನೆ…!

ಬೇಗ ಬನ್ನಿ……!

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ