Advertisement
ಅವನೊಬ್ಬ ಹುಚ್ಚ.., ಇನ್ನೊಬ್ಬ ಸಂತ: ಅಬ್ದುಲ್ ರಶೀದ್ ಅಂಕಣ

ಅವನೊಬ್ಬ ಹುಚ್ಚ.., ಇನ್ನೊಬ್ಬ ಸಂತ: ಅಬ್ದುಲ್ ರಶೀದ್ ಅಂಕಣ

ಈತ ತನ್ನ ಹೆಸರನ್ನು ಔಲಿಯಾ ಷರೀಫ್ ಎಂದು ಹೇಳುತ್ತಾನೆ. ಔಲಿಯಾ ಅಂದರೆ ಸಂತ. ಷರೀಫ್ ಅಂದ್ರೆ ಶ್ರೀಮಂತ. ಆದರೆ ತಾನು ನಿಜವಾದ ಸಂತನಲ್ಲ ಮತ್ತು ಅಸಲಿಗೆ ಮೈಸೂರಿನಲ್ಲಿ ಕಾಸು ಬೇಡುತ್ತಿರುವ ಬಿಕ್ಷುಕ ಅನ್ನುತ್ತಾನೆ. ತನ್ನ ಮುತ್ತಜ್ಜ ಒಂದು ಕಾಲದಲ್ಲಿ ಸಂತನಾಗಿದ್ದ ಹಾಗಾಗಿ ನನಗೂ ಈ ಹೆಸರು ಬಂದು ಬಿಟ್ಟಿದೆ. ಸಂತನಾಗಿದ್ದ ಆ ಮುತ್ತಜ್ಜನಿಗೆ ಅಂದಿನ ಅರಸರು ಒಂದಿಷ್ಟು ಒಣಭೂಮಿಯನ್ನೂ ಉಂಬಳಿ ಕೊಟ್ಟಿದ್ದರು. ಹಾಗಾಗಿ ಸ್ವಲ್ಪ ಷರೀಫನೂ ಆಗಿದ್ದೆ. ಆದರೆ ನಾನೀಗ ಕುಂಟನೂ ಕುರುಡನೂ ಆಗಿರುವುದರಿಂದ ನನ್ನ ಹೆಸರು ಮಾತ್ರ ಔಲಿಯಾ ಷರೀಫ್ ಉಳಿದಂತೆ ನಾನೊಬ್ಬ ಗರೀಬೀ ಫಕೀರ್ ಎಂದು ನಗುತ್ತಾನೆ.

‘ನೈಜ ಸಂತರ ಕಾಲ ಯಾವತ್ತೋ ಮುಗಿದೇ ಹೋಗಿದೆ. ಈ ಪ್ರಳಯದಂತಹ ಕಾಲದಲ್ಲೂ ನನ್ನನ್ನು ಸಂತನೆಂದು ಹುಡುಕಿಕೊಂಡು ಅಲೆಯುತ್ತಿರುವ ನಿನ್ನ ಅವಸ್ಥೆಯನ್ನು ಕಂಡು ನನಗೆ ನಗುವೂ ಬರುತ್ತಿದೆ’ ಎಂದು ತನ್ನ ಮೂರುಚಕ್ರದ ಅಂಗವಿಕಲರ ಯಂತ್ರಚಾಲಿತ ಗಾಡಿಯನ್ನು ಪುರ್ರನೆ ಚಾಲಿಸಿಕೊಂಡು ಕತ್ತಲಲ್ಲಿ ಮರೆಯಾಗುತ್ತಾನೆ. ಈತ ನನ್ನಿಂದ ತಪ್ಪಿಸಿಕೊಂಡು ಮೈಸೂರು ಅರಮನೆಯ ಮುಂದಿನ ಕತ್ತಲೆಯಲ್ಲಿ ಗಾಡಿ ಓಡಿಸಿಕೊಂಡು ಹೋಗುವ ಪರಿಗೆ ನನಗೂ ನಗು ಬರುತ್ತದೆ. ಈ ಐತಿಹಾಸಿಕ ನಗರದಲ್ಲಿ ಒಬ್ಬ ವಾಸನಾಮಯ ಬಿಕ್ಷುಕನಂತೆ ಮೂರು ಚಕ್ರಗಳ ಈ ಗಾಡಿಯನ್ನೇ ಅರಮನೆಯನ್ನಾಗಿ ಮಾಡಿಕೊಂಡು ಇತಿಹಾಸದಿಂದಲೂ ವರ್ತಮಾನದಿಂದಲೂ ತಪ್ಪಿಸಿಕೊಂಡು ಚಲಿಸುತ್ತಿರುವ ಮುದುಕ. ಆತನನ್ನು ಅರಸಿಕೊಂಡು ಅಬ್ಬೇಪಾರಿಯಂತೆ ಅಲೆಯುತ್ತಿರುವ ನಾನು. ನಮ್ಮಿಬ್ಬರ ನಡುವೆ ನೆರಳುಗಳನ್ನು ಬೆಳೆಸುತ್ತಾ ಕತ್ತಲೆಗೆ ಮರಳುವ ಈ ನಗರ ಮತ್ತು ತಮಗೆ ಕಳೆದ ನೂರಾರು ವರ್ಷಗಳಿಂದ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಚಲಿಸುತ್ತಿರುವ ಜನಸಂದಣಿ.

ಈ ಎಲ್ಲದರ ನಡುವೆ ನಯಾಪೈಸೆ ಲೆಕ್ಕಕ್ಕೂ ಇಲ್ಲದ ನಮ್ಮಿಬ್ಬರ ನಡುವಿನ ಕಳ್ಳ ಪೋಲೀಸ್ ಆಟ. ಒಂದಲ್ಲಾ ಒಂದು ದಿನ ನೀನು ನಿಜ ಹೇಳಲೇಬೇಕಾಗಬಹುದು ಮುದುಕಾ ಎಂದು ಹುಡುಕುತ್ತಿರುವ ನಾನು! ನಿಜ ಅನ್ನುವುದೇ ಒಂದು ದೊಡ್ಡ ಸುಳ್ಳು ಎಂಬಂತೆ ಬದುಕುತ್ತಿರುವ ಈ ಮುದುಕ! ಒಂದು ವಾರದ ಹಿಂದೆ ನನಗೆ ಮೂರನೇ ಸಲ ಈ ಮುದುಕನ ದರುಶನವಾಗಿತ್ತು.

ಒಂದು ತಿಂಗಳ ಹಿಂದೆ ಎರಡನೇ ಸಲ ಬೇಟಿಯಾದಾಗ ಈ ಮುದುಕ ಒಂದು ಎಲುಬು ಗೂಡಿನಂತಹ ಕುದುರೆ ಗಾಡಿಯನ್ನು ಓಡಿಸಿಕೊಂಡು ನಡು ಮಧ್ಯಾಹ್ನದ ಹೊತ್ತಲ್ಲಿ ಹಾಸನದ ಕಡೆಯಿಂದ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ. ಒಂದು ಕಾಲದಲ್ಲಿ ಒಂದು ಒಳ್ಳೆಯ ಕುದುರೆಯಂತೆ ಇದ್ದಿರಬಹುದಾದ ಆ ಗಾಡಿಯ ಕುದುರೆ ಈ ಮುದುಕನ ಚಾಟಿಯ ಏಟು ಮತ್ತು ಕೆಟ್ಟ ಬೈಗುಳಗಳಿಗೆ ಬಲಿಯಾಗಿ ಒಂದು ಬಡಕತ್ತೆಯಂತೆ ಆ ಗಾಡಿಯನ್ನು ಮನಸಿಲ್ಲದೆ ಎಳೆಯುತ್ತಾ ಟಾರು ರಸ್ತೆಯಲ್ಲಿ ಕುಂಟುತ್ತಾ ಹೆಜ್ಜೆ ಹಾಕುತ್ತಿತ್ತು. ಹಿಂದೆ ಎಲ್ಲೋ ನೋಡಿದಂತಿದ್ದ ಮುದುಕ. ‘ನೀನೇ ಅಲ್ಲವೇ ಆವತ್ತು ಮೈಸೂರಿನ ಗಾಂಧಿ ವೃತ್ತದ ಬಳಿ ಕೊಳಕು ಬಿಕ್ಷುಕನಂತೆ ನನಗೆ ಸಿಕ್ಕು ಆಮೇಲೆ ಸಿಗುತ್ತೇನೆಂದು ಯಾಮಾರಿಸಿ ಹೋದ ಸೂಫಿ ಸಂತ’ ಅಂತ ಆ ಬಿಸಿಲಲ್ಲಿ ಆತನನ್ನು ತಡೆದು ನಿಲ್ಲಿಸಿ ಕೇಳಿದ್ದೆ.
‘ನೀನು ಹುಚ್ಚ ಇರಬೇಕು. ಅದಕ್ಕೆ ನಿನಗೆ ಕಂಡಕಂಡವರೆಲ್ಲ ಸೂಫಿಸಂತರ ಹಾಗೆ ಕಾಣಿಸುತ್ತಾರೆ. ಈಗ ನನಗೆ ದಾರಿ ಬಿಡು.” ಎಂದು ಆತ ನನ್ನ ದೂಡಿ ಹೋಗಲು ನೋಡಿದ್ದ.

ಹೋಗಲಿ ಬಿಡು ಸಂಜೆ ಎಲ್ಲಿ ಸಿಗುತ್ತೀಯಾ’ ಎಂದು ಕೇಳಿದ್ದೆ. ‘ದೊಡ್ಡ ಮೈದಾನದ ಬಳಿ ಇರುವ ಖಬರಸ್ಥಾನದಲ್ಲಿ’ ಎಂದು ಆತ ನಕ್ಕಿದ್ದ. ಖಬರಸ್ಥಾನ ಅಂದರೆ ಮುಸಲ್ಮಾನರ ಸ್ಮಶಾನ. ಆದರೆ ಮೈಸೂರಲ್ಲಿ ದೊಡ್ಡಮೈದಾನದ ಬಳಿ ಖಬರಸ್ಥಾನ ಇರುವುದು ನನಗಂತೂ ಗೊತ್ತಿರಲಿಲ್ಲ. ‘ನಿಜ ಹೇಳು ಯಾವ ಖಬರಸ್ಥಾನ’ ಎಂದು ಕೇಳಿದರೆ ‘ನನ್ನ ಗುರುವಿನ ಗೋರಿ ಇರುವ ಖಬರಸ್ಥಾನ” ಅಂದಿದ್ದ. “ನಿನ್ನ ಗುರುವಿನ ಹೆಸರೇನು ಅಂದರೆ ‘ ನನ್ನ ಗುರುವಿನ ಹೆಸರು ಹೇಳುವ ಯೋಗ್ಯತೆ ನನಗೂ ಇಲ್ಲ ಕೇಳುವ ಯೋಗ್ಯತೆ ಹುಚ್ಚನಾದ ನಿನಗೆ ಮೊದಲೇ ಇಲ್ಲ’ ಎಂದು ಆ ಬಡ ಕುದುರೆಗೆ ಅಶ್ಲೀಲವಾಗಿ ಬೈದು ಮಾಯವಾಗಿದ್ದ.

ಸುಮಾರು ಹತ್ತು ವರ್ಷಗಳ ಹಿಂದೆ ಮೈಸೂರಿನ ಗಾಂಧಿಚೌಕದ ಎದುರಿಗಿರುವ ಪ್ರಖ್ಯಾತ ಮಾಂಸಾಹಾರಿ ಹೋಟೆಲಿನ ಎದುರಿನ ಬೀಡಾ ಅಂಗಡಿಯ ಎದುರು ನಿಂತಿದ್ದಾಗ ಈ ಮುದುಕ ಮೊದಲ ಬಾರಿ ನೋಡಲು ಸಿಕ್ಕಿದ್ದ.
ನನ್ನನ್ನು ತದೇಕಚಿತ್ತನಾಗಿ ನೋಡುತ್ತಿದ್ದ ಈತನ ಕೈಯಲ್ಲಿ ಕೊಳೆತ ಒಂದು ಸೇಬು ಹಣ್ಣಿತ್ತು. ಅದನ್ನು ತಿಂದು ಮುಗಿಸಲೋ ಇಲ್ಲಾ ಹಾಗೇ ಉಳಿಸಲೋ ಎಂಬಂತಹ ದ್ವಂದ್ವದಲ್ಲಿ ಸಿಲುಕಿಕೊಂಡಿದ್ದಂತೆ ಕಾಣಿಸುತ್ತಿದ್ದ ಆತನ ಕಣ್ಣಿನ ಹಸಿವು. ನನ್ನನ್ನೇ ನೋಡುತ್ತಿದ್ದವನು ‘ಇಲ್ಲಿ ಬಾ’ ಎಂದು ಕರೆದಿದ್ದ. ಪಕ್ಕದಲ್ಲೇ ಬಿದ್ದಿದ್ದ ಒಂದು ಕೊಳಕು ಚೀಲವನ್ನು ತೋರಿಸಿ ‘ಇದು ನನ್ನ ಚೀಲ. ಸ್ವಲ್ಪ ಹೊತ್ತು ನೋಡಿಕೋ. ಹತ್ತು ನಿಮಿಷದಲ್ಲಿ ಬರುತ್ತೇನೆ’ ಎಂದು ಹೋದವನು ಹತ್ತು ನಿಮಿಷದಲ್ಲೇ ಬಂದಿದ್ದ. ‘ಹತ್ತು ನಿಮಿಷ ನಿನ್ನ ಕೊಳಕು ಚೀಲವನ್ನು ಕಾದದ್ದಕ್ಕೆ ನನಗೇನು ಕೂಲಿ?’ ಎಂದು ಕೇಳಿದ್ದೆ. ಕೂಲಿ ಕೇಳಿದ್ದಕ್ಕೆ ಆತ ತನ್ನ ಬಲಗೈಯ ಹೆಬ್ಬೆರಳನ್ನು ನನ್ನ ಮೂಗಿನ ಬಳಿ ತಂದು ಮೂಸಲು ಹೇಳಿದ್ದ. ಮೂಸಿ ನೋಡಿದರೆ ಇದುವರೆಗೆ ಈ ಜನ್ಮದಲ್ಲಿ ನಾನು ಮೂಸಿರದ ಅಧ್ಬುತ ಸುಗಂದ!.

ನನ್ನ ಅರಳಿದ ಮುಖವನ್ನು ನೋಡಿದ ಆತ ನಗುತ್ತ ಅಲ್ಲಿಂದ ಹೊರಟಿದ್ದ. ನೀನು ಮತ್ತೆ ಎಲ್ಲಿ ಸಿಗುತ್ತೀಯಾ ಎಂದು ಕೇಳಿದರೆ ಇದೇ ರೀತಿ ‘ದೊಡ್ಡ ಮೈದಾನದ ಬಳಿ ಇರುವ ಖಬರಸ್ಥಾನದಲ್ಲಿ’ ಎಂದು ಮಾಯವಾಗಿದ್ದ. ಈ ಹತ್ತು ವರ್ಷಗಳಲ್ಲಿ ಆತನನ್ನು ನಾನು ಮರೆತೇ ಬಿಟ್ಟಿದ್ದೆ. ಆದರೆ ಆ ಬಡಕಲು ಕುದುರೆ ಗಾಡಿಯಲ್ಲಿ ಕಂಡ ನಂತರ ಮತ್ತೆ ಹುಡುಕಲು ಶುರು ಮಾಡಿದ್ದೆ. ಹಾಗೆ ಹುಡುಕುತ್ತಾ ಬನ್ನಿ ಮಂಟಪದ ಕಡೆ ಮೈಚಾಚಿರುವ ಸ್ಮಶಾನದ ಬಳಿ ಹೋಗಿದ್ದೆ. ಈ ಸ್ಮಶಾನದ ಒಳಗೆ ಸಂತನೊಬ್ಬನ ಗೋರಿ ಇದೆ. ಈ ಗೋರಿಯ ಎದುರುಗಡೆ ಒಂದು ಮಹಲ್ ಇದೆ. ಸುಲ್ತಾನನೊಬ್ಬ ಮಲಬಾರಿನ ಕಡೆಯ ಬ್ರಾಹ್ಮಣ ಸುಂದರಿಯೊಬ್ಬಾಕೆಯನ್ನು ವರಿಸಿ ತಂದು ಇಲ್ಲಿ ಇರಿಸಿದನೆಂದೂ ಆಕೆಗಾಗಿ ಈ ಮಹಲನ್ನು ಕಟ್ಟಿಸಿದನೆಂದೂ ಕಥೆ ಹೇಳುತ್ತಾರೆ. ಇನ್ನೊಂದು ಕಥೆ ಬೇರೆಯೇ ಇದೆ. ಹೋಗಲಿ ಬಿಡಿ. ಹಳೆಯ ಕಥೆಗಳು ಕೇಳಲು ಅಷ್ಟೇನೂ ಚೆನ್ನಾಗಿರುವುದಿಲ್ಲ.

ಕಳೆದ ಗುರುವಾರ ಇರುಳು ಸಣ್ಣಗೆ ಮಳೆ ಸುರಿಯುತ್ತಿರುವಾಗ ನಾನು ಇಲ್ಲಿ ನಿಂತುಕೊಂಡಿದ್ದೆ. ಅಂಗವಿಕಲ ಮುದುಕನೊಬ್ಬ ತನ್ನ ಮೂರುಚಕ್ರಗಳ ಗಾಡಿಯನ್ನು ಕತ್ತಲೆಯಲ್ಲಿ ನಿಲ್ಲಿಸಿಕೊಂಡು ಗಾಡಿಯಿಂದ ಇಳಿದು ನೆಲದಲ್ಲಿ ತೆವಳುತ್ತಾ ಹೋಗಿ ಒಂದು ಕಡೆ ಕೂತುಕೊಂಡು ಉಚ್ಚೆಹುಯ್ಯಲು ಕಷ್ಟಪಡುತ್ತಿದ್ದ. ಆತನ ಕಷ್ಟ ನೋಡುತ್ತಾ ಬೇರೇನೂ ಸಹಾಯ ಮಾಡಲಾಗದೆ ನಾನೂ ನೋಡುತ್ತಿದ್ದೆ.

ಆತ ಹುಯ್ದುಮುಗಿಸಿ ಮತ್ತೆ ತೆವಳುತ್ತಾ ಬಂದು ಗಾಡಿ ಹತ್ತಿದಾಗ ಆತನ ಮುಖ ಕಾಣಿಸಿತ್ತು. ಅದೇ ಮುದುಕ ಮತ್ತೆ ಮೂರನೇ ಬಾರಿ ನನ್ನಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದ. ‘ಸರಿ, ಹೋಗು. ಹಗಲು ಹೊತ್ತು ಎಲ್ಲಿ ಸಿಗುತ್ತೀಯಾ ಹೇಳು. ನಿನ್ನ ಕಥೆ ಏನೂ ಕೇಳುವುದಿಲ್ಲ. ಸುಮ್ಮನೆ ಭಿಕ್ಷೆ ಬೇಡುವುದು ಹೇಗೆ ಎಂಬುದನ್ನಾದರೂ ಕಲಿಸು’ ಎಂದು ಕೇಳಿದ್ದೆ. ‘ನಾಳೆ ಶುಕ್ರವಾರ ಸಂಜೆ ಅರಮನೆಯ ಮುಂದೆ ಭಿಕ್ಷೆ ಬೇಡುತ್ತಿರುತ್ತೇನೆ. ಅಲ್ಲಿ ಸಿಗುತ್ತೇನೆ’ ಅಂದಿದ್ದ ನಿನ್ನೆ ಸಂಜೆ ಮತ್ತೆ ಅಲ್ಲಿಂದಲೂ ತಪ್ಪಿಸಿಕೊಂಡಿದ್ದ. ನಾನು ಈ ಸಂಜೆ ಮತ್ತೆ ಅವನನ್ನು ಹುಡುಕುತ್ತ ಹೊರಟಿರುವೆ.

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ