Advertisement
ಇದ್ದಲ್ಲೇ ಅದೃಶ್ಯವಾದವರು ಉಳಿಸಿ ಹೋಗುವ ಬೇನೆ

ಇದ್ದಲ್ಲೇ ಅದೃಶ್ಯವಾದವರು ಉಳಿಸಿ ಹೋಗುವ ಬೇನೆ

ಇನ್ನು ನಿಮ್ಮನ್ನ ಓದಿಸೋಕಾಗಲ್ಲ. ಈ ವರ್ಷದಿಂದ ನೀವು ಶಾಲೆಗೆ ಹೋಗೋದು ಬೇಡ. ಪಕ್ಕದೂರಿನ ಒಂದು ಮನೆಯಲ್ಲಿ ಕೆಲಸಕ್ಕೆ ಜನ ಹುಡುಕುತ್ತಿದ್ದರು. ನಾಳೆಯಿಂದ ನೀವಿಬ್ಬರೂ ಬರುತ್ತೀರಿ ಅಂತ ಆ ಮನೆಯ ಮಾಲಿಕರಿಗೆ ಹೇಳಿ ಬಂದಿದ್ದೇನೆ” ಎಂದು ಒಂದು ದಿನ ತಾಯಿ ಹೇಳಿದಾಗ ಡೆಸರೆ ಆ ಸುದ್ದಿಯನ್ನು ತಣ್ಣಗೆ ಸ್ವೀಕರಿಸುತ್ತಾಳೆ. ಆದರೆ ಸ್ಟೆಲ್ಲಾಳಿಗೆ ಮಾತ್ರ ಆಘಾತವಾಗುತ್ತದೆ.
ಕಾವ್ಯಾ ಕಡಮೆ ಬರೆಯುವ ‘ಬುಕ್‌ ಚೆಕ್‌ʼ ನಲ್ಲಿ ಈ ವಾರ ‘ದಿ ವ್ಯಾನಿಶಿಂಗ್ ಹಾಫ್ ‌’ ಕಾದಂಬರಿ

 

ಊರಲ್ಲೆಲ್ಲಾ ಅವರನ್ನು ಕರೆಯುವುದು ಟ್ವಿನ್‍ ಗಳು ಎಂದೇ. ಡೆಸರೆ ಮತ್ತು ಸ್ಟೆಲ್ಲಾ ಎಂದು ಪ್ರತ್ಯೇಕವಾಗಿ ಅವರ ಹೆಸರು ಹಿಡಿದು ಮಾತನಾಡುವುದು ಅಪರೂಪವೇ. ಅದಕ್ಕೆ ಕಾರಣ ಹಾಗೆಲ್ಲ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಯಾವ ಸಾಹಸಕ್ಕೂ ಕೈಹಾಕಿದವರಲ್ಲ ಈ ಅವಳಿಗಳು. ಶಾಲೆ, ಜಾತ್ರೆ, ಮನೆ ಕೆಲಸ, ತಿರುಗಾಟ… ಎಲ್ಲಿದ್ದರೂ ಒಬ್ಬರಿಗೆ ಇನ್ನೊಬ್ಬರ ಸಾಥ್ ಬೇಕೇ ಬೇಕು. ಭೂಕಕ್ಷೆಯ ಮೇಲೆಲ್ಲೂ ಕಾಣಲು ಸಿಗದ ಮಲಾರ್ಡ್ ಎನ್ನುವ ಪುಟ್ಟ ಗ್ರಾಮದಲ್ಲಿ ಇವರ ವಾಸ. ಅದೆಷ್ಟು ಪುಟ್ಟ ಹಳ್ಳಿ ಎಂದರೆ ಇರುವ ಎಂಟ್ಹತ್ತು ಮನೆಗಳಲ್ಲಿ ಎಲ್ಲರಿಗೂ ಎಲ್ಲರ ವಿಷಯವೂ ಗೊತ್ತು. ಬರೀ ಮೇಲುಮೇಲಿನ ವಿಚಾರಗಳಲ್ಲ, ಪ್ರತಿಯೊಬ್ಬರ ಮನಸ್ಸಿನ ಆಲೋಚನೆಗಳನ್ನೂ ಈ ಊರಿನಲ್ಲಿ ತಮ್ಮೊಳಗೇ ಕಾಪಾಡಿಕೊಳ್ಳುವುದು ದುಃಸಾಧ್ಯ.

ಹೀಗಿದ್ದಾಗ ಜಾತ್ರೆಯ ಮಾರನೆಯ ದಿನ ಊರು ಮುಂಜಾವಿಗೆ ಕಣ್ತೆಗೆಯುವಾಗ ಈ ಟ್ವಿನ್‍ ಗಳು ಇದ್ದಲ್ಲೇ ಅದೃಶ್ಯರಾದರು ಅಂತ ತಿಳಿದಾಗ ಅಲ್ಲಿನವರಿಗೆ ಹೇಗಾಗಬೇಡ! ಬೆರಗಿನ ಸಂಗತಿಯೆಂದರೆ ಹೀಗೆ ಈ ಅವಳಿಗಳು ಪದೇ ಪದೇ ಮಾಯವಾಗುವುದು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ.

ಅಮೆರಿಕನ್ ಕಾದಂಬರಿಗಾರ್ತಿ ಮೂವತ್ತೊಂದು ವರ್ಷದ ಬ್ರಿಟ್ ಬೆನೆಟ್ ತಮ್ಮ ‘ದಿ ವ್ಯಾನಿಶಿಂಗ್ ಹಾಫ್’ ಕಾದಂಬರಿಯಲ್ಲಿ ತೆರೆದು ತೋರಿಸುವುದು ಈ ಅವಳಿಗಳ ಕಥನವನ್ನು. ಅವರ ಸುಖಗಳು, ಸಂಕಟಗಳು, ತುಮುಲಗಳು, ಅಸ್ಮಿತೆಯ ಹುಡುಕಾಟ, ಸಿಕ್ಕೇಬಿಟ್ಟಿತು ಅಂದುಕೊಂಡರೂ ನುಸುಳಿ ಕೈಜಾರಿ ಹೋಗುವ ಸಂಬಂಧದ ಎಳೆಗಳು… ಎಲ್ಲವೂ ಮುನ್ನೂರೈವತ್ತು ಪುಟಗಳ ಈ ಬರಹದಲ್ಲಿ ಅನಾವರಣಗೊಂಡಿವೆ. ಇದು ಬ್ರಿಟ್‍ ರ ಎರಡನೆಯ ಕಾದಂಬರಿ. ಅವರ ಮೊದಲ ಪುಸ್ತಕ ‘ದಿ ಮದರ್ಸ್’ ಕೂಡ ಹೆಸರು ಮಾಡಿತ್ತು. ಆದರೆ ಅವರನ್ನು ಸಮಕಾಲೀನ ಬರಹಗಾರರ ಮೊದಲ ಪಂಕ್ತಿಯಲ್ಲಿ ಕೂರಿಸಿದ್ದು ಈ ಹೊಸ ಕಾದಂಬರಿ ವ್ಯಾನಿಶಿಂಗ್ ಹಾಫ್.

(ಬ್ರಿಟ್ ಬೆನೆಟ್)

ಈ ಅವಳಿಗಳ ವ್ಯಕ್ತಿತ್ವಕ್ಕೇ ಅಂಟಿಕೊಂಡ ಇನ್ನೊಂದು ಗುಣವಿದೆ. ಅದೇನೆಂದರೆ ಇವರಿಬ್ಬರೂ ಆಫ್ರಿಕನ್-ಅಮೆರಿಕನ್ ಮೂಲಕ್ಕೆ ಸೇರಿದ್ದರೂ ಇವರಿಬ್ಬರ ಬಣ್ಣ ಮಾತ್ರ ಯೂರೋಪಿಯನ್ನರಂತೆ ಬಿಳಿ. ಪೀಳಿಗೆಗಳ ಹಿಂದೆ ಇವರ ಪೂರ್ವಜರಲ್ಲಿ ಎಲ್ಲಿಯೋ ಬಿಳಿಯ ತಳಿ ಸೇರಿಹೋಗಿ, ಆ ಬಣ್ಣದ ಪಳಿಯುಳಿಕೆಗಳು ಅಲ್ಲಲ್ಲಿ ಕಂಡುಬಂದು ಇವರಲ್ಲಿ ಮಾತ್ರ ಹೀಗೆ ಬಿಳಿಯರೇ ಎಂದು ಕರಾರುವಕ್ಕಾಗಿ ಹೇಳುವಂತೆ ಕಾಣಿಸಿಕೊಂಡಿದೆ.

ಕಥೆ ಶುರುವಾದಾಗ ಹದಿಹರೆಯದ ಹುಡುಗಿಯರು ಇವರು. ಡೆಸರೆಯದು ಬಹಿರ್ಮುಖಿ ವ್ಯಕ್ತಿತ್ವ. ಈ ದರಿದ್ರ ಹಳ್ಳಿ ಬಿಟ್ಟು ಹೋಗೋಣ, ಇಲ್ಲಿ ನಮಗೇನು ಉಳಿದಿದೆ ಅಂತ ಸ್ಟೆಲ್ಲಾಳ ಬಳಿ ಬಹಳ ಸರ್ತಿ ತೋಡಿಕೊಂಡಿದ್ದಾಳೆ. ಅಷ್ಟಿದ್ದರೆ ನೀನೊಬ್ಬಳೇ ಹೋಗಬಹುದಲ್ಲ ಅಂದ ತಂಗಿಗೆ ಹಾಗೆಲ್ಲ ನಿನ್ನನ್ನು ಬಿಟ್ಟು ಹೇಗೆ ಹೋಗಲಿ ಅಂತ ಎದುರಾಡಿದ್ದಾಳೆ. ಸಂಗಾತಿಯನ್ನು ಕಳೆದುಕೊಂಡು ಒಂಟಿಯಾಗಿರುವ ತಾಯಿಯ ಜೊತೆಗಿರುವ ಇವರಿಬ್ಬರೂ ಊರು ಬಿಡಲು ಸರಿಯಾದ ಸಮಯಕ್ಕೆ ಒಳಗೊಳಗೇ ಕಾಯುತ್ತಿದ್ದಾರೆ. ಡೆಸರೆಗಿಂಥ ಸ್ಟೆಲ್ಲಾ ಓದಿನಲ್ಲಿ ಜಾಣೆ, ಅಂತರ್ಮುಖಿ. ಕಾಣಲು ಒಂದೇ ಥರ ಇದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ವ್ಯಕ್ತಿತ್ವದಲ್ಲೇ ಸೇರಿಹೋಗಿರುವ ಸಂಕೋಚದಿಂದ ಸ್ಟೆಲ್ಲಾಳನ್ನು ಬೇರ್ಪಡಿಸಿ ಹೇಳಬಹುದು.

“ಇನ್ನು ನಿಮ್ಮನ್ನ ಓದಿಸೋಕಾಗಲ್ಲ. ಈ ವರ್ಷದಿಂದ ನೀವು ಶಾಲೆಗೆ ಹೋಗೋದು ಬೇಡ. ಪಕ್ಕದೂರಿನ ಒಂದು ಮನೆಯಲ್ಲಿ ಕೆಲಸಕ್ಕೆ ಜನ ಹುಡುಕುತ್ತಿದ್ದರು. ನಾಳೆಯಿಂದ ನೀವಿಬ್ಬರೂ ಬರುತ್ತೀರಿ ಅಂತ ಆ ಮನೆಯ ಮಾಲಿಕರಿಗೆ ಹೇಳಿ ಬಂದಿದ್ದೇನೆ” ಎಂದು ಒಂದು ದಿನ ತಾಯಿ ಹೇಳಿದಾಗ ಡೆಸರೆ ಆ ಸುದ್ದಿಯನ್ನು ತಣ್ಣಗೆ ಸ್ವೀಕರಿಸುತ್ತಾಳೆ. ಆದರೆ ಸ್ಟೆಲ್ಲಾಳಿಗೆ ಮಾತ್ರ ಆಘಾತವಾಗುತ್ತದೆ. “ನಾನಿನ್ನೂ ಓದಬೇಕು. ಓದಿ ದೊಡ್ಡ ಕೆಲಸ ಹಿಡಿಯಬೇಕು. ಅಮ್ಮನಂತೆಯೇ ಇಡೀ ಜೀವನ ಇನ್ನೊಬ್ಬರ ಮನೆಯಲ್ಲಿ ದುಡಿದೇ ಹಣ್ಣಾಗಲು ಇಷ್ಟವಿಲ್ಲ ನನಗೆ” ಅಂತ ನೊಂದುಕೊಳ್ಳುತ್ತಾಳೆ. “ಕ್ಷಮಿಸಿ ಮಕ್ಕಳೇ, ನನ್ನೊಬ್ಬಳ ದುಡಿಮೆ ಈ ಕುಟುಂಬಕ್ಕೆ ಸಾಲುತ್ತಿಲ್ಲ. ನೀವು ದುಡಿಯಲು ಶುರು ಮಾಡದೇ ವಿಧಿಯಿಲ್ಲ” ಎನ್ನುತ್ತಾಳೆ ತಾಯಿ. ಹೈಸ್ಕೂಲು ಬಿಟ್ಟು ಮನೆಕೆಲಸದವರಾಗಿ ಈ ಹುಡುಗಿಯರು ದುಡಿಯಲು ಅಣಿಯಾಗುವುದು ಹೀಗೆ.

ಹೀಗಿದ್ದಾಗ ಆ ಮನೆಯ ಮಾಲಿಕ ಸ್ಟೆಲ್ಲಾಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಾನೆ. ಮೌನವಾಗಿರುವ ಸ್ಟೆಲ್ಲಾ ಇಂಥ ವಿಷಯಗಳನ್ನೆಲ್ಲ ಯಾರೊಂದಿಗೂ ಹೇಳಲಾರಳು ಎನ್ನುವ ಧೈರ್ಯ ಆತನಿಗೆ. ರಾತ್ರಿ ಡೆಸರೆಯೊಂದಿಗೆ ಮಾತ್ರ ಅಳುತ್ತ ಅವಲತ್ತುಕೊಂಡಾಗ ಇನ್ನು ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ, ಈ ನರಕದಿಂದ ಅದೃಶ್ಯರಾಗುವುದೇ ಉಳಿದಿರುವ ದಾರಿ ಎಂದು ಈ ಸಹೋದರಿಯರು ನಿರ್ಣಯಿಸುತ್ತಾರೆ. ಜಾತ್ರೆಯೊಂದರ ಮಾರನೆಯ ದಿನ, ಇಡೀ ಊರು ರಾತ್ರಿಯ ನಶೆಯಲ್ಲಿ ಇನ್ನೂ ಮಲಗಿರುವಾಗ, ನಸುಕಿನಲ್ಲೆದ್ದು ಇವರು ಮನೆ ಬಿಡುತ್ತಾರೆ.

ಹಾಗೆ ಊರು ಬಿಟ್ಟು ಇವರು ತಲುಪುವುದು ನ್ಯೂ ಆರ್ಲಿನ್ಸ್ ಎಂಬ ಪಟ್ಟಣವನ್ನು. ಅಲ್ಲಿನ ಲಾಂಡ್ರಿಯೊಂದರಲ್ಲಿ ಬಟ್ಟೆ ಮಡಿಸುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕೆಲ ತಿಂಗಳುಗಳ ನಂತರ ಇಬ್ಬರೂ ಸಿಟಿಯ ಬದುಕನ್ನು ಇಷ್ಟಪಡಲು ತೊಡಗುತ್ತಾರೆ. ನಿಧಾನವಾಗಿ ಹೊಸತನಕ್ಕೆ ತಮ್ಮನ್ನು ತೆರೆದುಕೊಳ್ಳುತ್ತ ಅರಳತೊಡಗಿದ್ದಾರೆ. ಸ್ಟೆಲ್ಲಾ ಸಿಟಿಯ ದೊಡ್ಡ ಕಾರ್ಪೋರೆಟ್ ಆಫೀಸುಗಳಲ್ಲಿ ಸೆಕರೆಟ್ರಿಯ ಕೆಲಸಕ್ಕೆ ಅರ್ಜಿ ಹಾಕಿ ಒಂದೆಡೆ ನೌಕರಿಗೂ ಸೇರಿಕೊಳ್ಳುತ್ತಾಳೆ. ತಂಗಿಯ ಸಾಧನೆಯ ಬಗೆಗೆ ಡೆಸರೆಗೆ ಹೆಮ್ಮೆ. ಜೊತೆಗೆ ತಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಿದ್ದಕ್ಕೆ ಒಳಗೊಳಗೇ ಖುಷಿ.

ಆ ಖುಷಿಯನ್ನು ಒಳಗೆಳೆದುಕೊಳ್ಳುತ್ತಿದ್ದಾಗಲೇ ಡೆಸರೆಗೆ ಇನ್ನೊಂದು ಆಘಾತ ಕಾಯುತ್ತಿದೆ. ಯಾವಾಗಲೂ ಡೆಸರೆಯ ನೆರಳಿನಂತೆಯೇ ಇದ್ದ ಸ್ಟೆಲ್ಲಾ ಒಮ್ಮೆ ಇಷ್ಟು ದಿನ ಅವಳು ಇದ್ದಿದ್ದೇ ಸುಳ್ಳೇನೋ ಎಂಬಂತೆ ಕಾಣೆಯಾಗಿಬಿಡುತ್ತಾಳೆ. ಯಾವ ಸುಳಿವನ್ನೂ ಬಿಡದೇ, ಹಿಂದೆ ತನ್ನ ಒಂದೇ ಒಂದು ಬಟ್ಟೆಯನ್ನೂ, ಕಾಗದಪತ್ರವನ್ನೂ ಬಿಟ್ಟುಹೋಗದೇ ಮಾಯವಾಗುವ ಸ್ಟೆಲ್ಲಾ ತನ್ನ ಅನೂಹ್ಯ ಗುಣದಿಂದಲೇ ದೂರವಾಗುತ್ತಾಳೆ ಡೆಸರೆಯಿಂದ. ಇದು ಒಂದೇ ದಿನ ನಿರ್ಧರಿಸಿ ಎದ್ದು ಹೋಗಿದ್ದಲ್ಲ, ಪ್ರತಿ ದಿನವೂ ಒಂದೊಂದೇ ಸಾಮಾನನ್ನು ಹೊರಗೆ ಸಾಗಿಸುತ್ತ, ತಿಂಗಳುಗಟ್ಟಲೇ ಯೋಚಿಸಿ ತೆಗೆದುಕೊಂಡ ಕವಲು ಇದು ಎಂಬುದನ್ನು ಗುರುತಿಸುವಂತಿದೆ. ಒಂದೇ ಒಂದು ಪುಟ್ಟ ಪತ್ರದಲ್ಲಿ “ಕ್ಷಮಿಸು ಹನಿ, ನಾನು ಹೋಗಲೇ ಬೇಕು. ನಿನ್ನನ್ನು ಕರೆಯೊಯ್ಯಲು ಸಾಧ್ಯವಿಲ್ಲ” ಎಂಬ ಬರಹ ಮಾತ್ರ ದೆಸರೆಯ ಪಾಲಿಗೆ ಉಳಿಯುವ ಸ್ಟೆಲ್ಲಾಳ ನಿಶಾನೆ.

ಭೂಕಕ್ಷೆಯ ಮೇಲೆಲ್ಲೂ ಕಾಣಲು ಸಿಗದ ಮಲಾರ್ಡ್ ಎನ್ನುವ ಪುಟ್ಟ ಗ್ರಾಮದಲ್ಲಿ ಇವರ ವಾಸ. ಅದೆಷ್ಟು ಪುಟ್ಟ ಹಳ್ಳಿ ಎಂದರೆ ಇರುವ ಎಂಟ್ಹತ್ತು ಮನೆಗಳಲ್ಲಿ ಎಲ್ಲರಿಗೂ ಎಲ್ಲರ ವಿಷಯವೂ ಗೊತ್ತು.

ಆಮೇಲಿನದ್ದೆಲ್ಲ ಡೆಸರೆಯ ಕಥೆಯೇ. ಅವಳು ರಾಜಧಾನಿ ವಾಶಿಂಗ್ಟನ್ ಡಿ.ಸಿಯಲ್ಲಿ ಬೆರಳಚ್ಚು ಗುರುತಿಸುವ ಕೆಲಸಕ್ಕೆ ಸೇರಿ, ಸ್ಯಾಮ್ ಎಂಬುವವನನ್ನು ಮದುವೆಯಾಗಿ ಜೂಡ್ ಎಂಬ ಹೆಣ್ಣು ಮಗುವಿನ ತಾಯಿಯಾಗುತ್ತಾಳೆ. ಕೌಟುಂಬಿಕ ಕಲಹ ಹೆಚ್ಚಾಗಿ ಒಮ್ಮೆ ಸ್ಯಾಮ್ ಕೈಯೆತ್ತಿದಾಗ ಡೆಸರೆ ಮಗಳು ಜೂಡ್‍ ಳೊಂದಿಗೆ ಮನೆ ಬಿಡುತ್ತಾಳೆ. ಲೋಕದ ಉದ್ದಂಡ ಉಪೇಕ್ಷೆ ಮತ್ತು ಏಕಾಕಿತನದ ಕ್ರೌರ್ಯ ಆಕೆಯನ್ನು ಪುನಃ ತನ್ನ ತವರೂರಾದ ಮಲಾರ್ಡಿಗೆ ಕರೆತರುತ್ತದೆ. ವರ್ಷಗಳ ಹಿಂದೆ ಅವಳಿಯೊಂದಿಗೆ ಮಾಯವಾಗಿ ಈಗ ಮಗಳೊಟ್ಟಿಗೆ ಆಗಮಿಸಿದ ಡೆಸರೆಯನ್ನು ತಾಯಿ ಅಡೆಲ್ ಅನಾದರದಿಂದಲೇ ಸ್ವಾಗತಿಸುತ್ತಾಳೆ.

“ಟ್ವಿನ್‍ ಗಳು ವಾಪಸ್ಸಾಗಿದ್ದಾರಂತೆ” ಎಂದು ಸುದ್ದಿ ಬೀಳುತ್ತದೆ ಮಲಾರ್ಡಿನಲ್ಲಿ. “ಇಬ್ಬರೂ ಅಲ್ಲವಂತೆ. ಒಬ್ಬಳು ಮಾತ್ರ ಬಂದಿದ್ದಾಳಂತೆ. ಮಗಳನ್ನೂ ಕರೆತಂದಿದ್ದಾಳಂತೆ” ಎಂದು ತಿದ್ದುತ್ತಾರೆ ತುಸು ತಿಳಿದವರು. ನಡುವೊಮ್ಮೆ ಡೆಸರೆಯ ಗಂಡ ಸ್ಯಾಮ್ ಹೆಂಡತಿ ಮಗಳನ್ನು ಹುಡುಕಲು ವ್ಯರ್ಥ ಪ್ರಯತ್ನ ಮಾಡುತ್ತಾನೆ. ಮಲಾರ್ಡ್ ಎಂಬ ಊರು ಭೂಪಟದಲ್ಲೆಲ್ಲೂ ಕಾಣಸಿಗದೇ ಅವನು ಸೋಲುವಂತಾಗುತ್ತದೆ.

ಹತ್ತಿರದ ರೆಸ್ಟೂರೆಂಟ್ ಒಂದರಲ್ಲಿ ವೇಟ್ರೆಸ್ ಆಗಿ ಕೆಲಸಮಾಡುತ್ತ, ಬಾಲ್ಯದ ಗೆಳೆಯನ ಜೊತೆಗೆ ಸಹಜೀವನ ನಡೆಸುತ್ತ, ವಯಸ್ಸಾದ ತಾಯಿಯ ಆರೈಕೆ ಮಾಡುತ್ತ, ತಾನು ಮತ್ತು ಸ್ಟೆಲ್ಲಾ ಅರ್ಧಕ್ಕೆ ಬಿಟ್ಟ ಅದೇ ಊರಿನ ಶಾಲೆಗೆ ಮಗಳನ್ನು ಕಳಿಸುತ್ತ ಮಾಗುತ್ತಿದ್ದಾಳೆ ಡೆಸರೆ. ನಿಧಾನಕ್ಕೆ ಕೂದಲು ನೆರೆಯುತ್ತಿದೆ, ಊರೂ ಕೂಡ ಟ್ವಿನ್‍ ಗಳ ವಿಷಯ ಮರೆತು ಡೆಸರೆ ಮತ್ತವಳ ಮಗಳನ್ನು ತನ್ನ ತೆಕ್ಕೆಯಲ್ಲಿ ಸ್ವೀಕರಿಸಿದೆ.

ಈ ಎಲ್ಲದರ ಮಧ್ಯೆ ಸ್ಟೆಲ್ಲಾಳ ನೆನಪು ಉಳಿದೇ ಹೋಗಿದೆ ಡೆಸರೆಯ ಎದೆಯಲ್ಲಿ. ಮಗಳು ಜ್ಯೂಡ್‍ ಳ ಬಳಿಯೂ ಸ್ಟೆಲ್ಲಾಳ ಬಗ್ಗೆ ತೋಡಿಕೊಂಡಿದ್ದಾಳೆ. “ನೋಡಲು ನನ್ನ ಹಾಗೇ ಇದ್ದವಳು, ಎಲ್ಲ ಕಡೆಗೂ ಜೊತೆಗೇ ನಡೆದವಳು, ಅದ್ಹೇಗೆ ತನ್ನದೇ ದಾರಿಯನ್ನು ಕಂಡುಕೊಂಡಳು. ಮತ್ತದರಲ್ಲಿ ನನ್ನನ್ನು ಬರಕೊಡದಂತೆ ಹೇಗೆ ಬೇಲಿ ಹಾಕಿದಳು” ಎಂಬ ಮಾತುಗಳನ್ನು ಜ್ಯೂಡ್ ತಾಯಿಯ ಬಳಿ ಕೇಳುತ್ತಲೇ ಬೆಳೆದಿದ್ದಾಳೆ.

ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‍ ನ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದ ಜ್ಯೂಡ್ ಅಂಥ ದುಬಾರಿ ಪಟ್ಟಣದಲ್ಲಿ ಖರ್ಚು ತೂಗಿಸಲು ಸಂಜೆ ತರಗತಿ ಮುಗಿದ ಮೇಲೆ ಸಣ್ಣ ಪುಟ್ಟ ಕೆಲಸ ಮಾಡುತ್ತಿರುತ್ತಾಳೆ. ಒಮ್ಮೆ ಕೇಟರಿಂಗ್ ಗುಂಪಿನ ಜೊತೆ ದೊಡ್ಡ ಬಂಗಲೆಯೊಂದಕ್ಕೆ ಹೋಗಿದ್ದಾಗ ಜ್ಯೂಡ್‍ಳ ಳಿಗೆ ವೈನನ್ನು ಗ್ಲಾಸಿನಲ್ಲಿ ಬಗ್ಗಿಸುವ ಕೆಲಸ ಕೊಡಲಾಗಿದೆ. ಮಾತುಕತೆಯಲ್ಲಿ ಅದೊಂದು ಪಾರ್ಟಿ ಎನ್ನುವುದು ತಿಳಿಯುತ್ತದೆ. ಸ್ಯಾಂಡರ್ಸ್ ಎನ್ನುವವನು ದೊಡ್ಡ ಹುದ್ದೆಯೊಂದಕ್ಕೆ ಆಯ್ಕೆಯಾಗಿರುವುದಕ್ಕೆ ಕೊಡುತ್ತಿರುವ ಪಾರ್ಟಿ ಅದು. ಎಲ್ಲರೂ ಸ್ಯಾಂಡರ್ಸ್‍ ನ ಹೆಂಡತಿಯ ಹಾದಿ ಕಾಯುತ್ತಿದ್ದಾರೆ.

ಸ್ವಲ್ಪ ಸಮಯ ಬಿಟ್ಟು ಒಬ್ಬಳು ಹೆಂಗಸು ದುಬಾರಿ ಗೌನು ಮತ್ತು ಕೋಟು ತೊಟ್ಟು ಬಂದಾಗ ಓಹ್ ಸ್ಯಾಂಡರ್ಸ್‍ ನ ಹೆಂಡತಿ ಬಂದಳೆಂದು ಸುದ್ದಿಯಾಗುತ್ತದೆ. ವೈನನ್ನು ಕಲಾತ್ಮಕ ಗ್ಲಾಸಿನಲ್ಲಿ ಅತಿಥಿಗಳಿಗೆ ಬಗ್ಗಿಸಿ ಕೊಡುತ್ತಲೇ ಜ್ಯೂಡ್ ಒಮ್ಮೆ ಬಂದ ಹೆಂಗಸಿನತ್ತ ಕಣ್ಣು ಹಾಯಿಸುತ್ತಾಳೆ. ಕೋಟು ತೆಗೆದು ತಿರುಗಿದ ಹೆಂಗಸನ್ನು ಕಂಡು ಜ್ಯೂಡ್‍ ಳ ಕೈಲಿದ್ದ ವೈನಿನ ಬಾಟಲ್ಲು ಧಣಾರನೆ ನೆಲಕ್ಕೆ ಬಿದ್ದು ಅಲ್ಲೆಲ್ಲ ಗದ್ದಲ ಏರ್ಪಡುತ್ತದೆ.

ಬೆಲೆಬಾಳುವ ಬಟ್ಟೆ, ಮೇಕಪ್ಪು, ಕೇಶವಿನ್ಯಾಸದ ಹಿಂದಿನ ಚಹರೆಯಲ್ಲಿ ತನ್ನ ತಾಯಿ ಡೆಸರೆಯ ಪ್ರತಿರೂಪವನ್ನೇ ಕಂಡು ಬಿಡುತ್ತಾಳೆ ಜ್ಯೂಡ್. ತನ್ನ ಚಿಕ್ಕಮ್ಮನಾದ ಸ್ಟೆಲ್ಲಾಳನ್ನು ಮೊದಲು ಕಂಡುಹಿಡಿಯುವುದು ಹೀಗೆ ಅವಳು. ಹಾಗಾದರೆ ಸ್ಟೆಲ್ಲಾ ಇಷ್ಟು ವರ್ಷ ಎಲ್ಲಿದ್ದಳು, ಏನೇನು ಮಾಡಿದಳು, ಅವಳ ಪ್ರಯಾಣದ ಕಥೆಯೇನು ಎಂಬ ಬಗ್ಗೆ ಕುತೂಹಲ ಕೆರಳುವುದು ಸಹಜವೇ. ಆದರೆ ಆ ಕಥೆಯನ್ನು ಇಲ್ಲಿ ಹೇಳುವುದಿಲ್ಲ. ಬೇಕಿದ್ದವರು ಪುಸ್ತಕ ಓದಿ ಈ ಬಿಟ್ಟ ಸ್ಥಳಗಳನ್ನು ತುಂಬಿಕೊಳ್ಳಬಹುದು.

ಕಾದಂಬರಿಯಲ್ಲಿ ಎರಡು ದೋಷಗಳು ಕಂಡುಬಂದವು. ಮೊದಲನೆಯದು ಕಥೆಯಲ್ಲಿ ಕೇಂದ್ರದ ಕೊರತೆಯಿರುವುದು. ಪ್ರತಿಯೊಂದು ಪಾತ್ರವನ್ನೂ ಸೊಗಸಾಗಿ, ಆಳವಾಗಿ ಚಿತ್ರಿಸುವ ಬ್ರಿಟ್ ಬೆನೆಟ್, ಎಲ್ಲ ಪಾತ್ರಗಳಿಗೂ ಸಮಾನ ಬೆಳಕು ಚೆಲ್ಲಲು ಹೋಗಿ ಕಾದಂಬರಿಯಲ್ಲಿ ಬಹುಮುಖ್ಯವಾದ ಕಥಾಹಂದರವನ್ನು ಕೆಲವೊಮ್ಮೆ ನಿರ್ಲಕ್ಷಿಸುತ್ತಾರೆ. ಡೆಸರೆ ಮತ್ತು ಸ್ಟೆಲ್ಲಾರ ಸಂಬಂಧ, ಸ್ನೇಹ, ಅಗಲಿಕೆಗಳು ಇಲ್ಲಿ ಪ್ರಮುಖ ಎಳೆಗಳು. ಅದು ಮುನ್ನಲೆಗೆ ಬಂದು ಉಳಿದ ಎಲ್ಲ ಸೂತ್ರಗಳೂ ಹಿನ್ನಲೆಯಲ್ಲಿದ್ದರೆ ಕಥನ ಇನ್ನೂ ಸಾಂದ್ರವಾಗುತ್ತಿತ್ತೇನೋ.

ಎರಡನೆಯ ಐಬು ಕಾದಂಬರಿಯ ಕೊನೆಯ ಭಾಗದ ಕುರಿತಾದದ್ದು. ಡೆಸರೆ ಮತ್ತು ಸ್ಟೆಲ್ಲಾರಿಂದ ಶುರುವಾದ ಕಥನ ಅವರಿಬ್ಬರೂ ಮತ್ತೆ ಸಂಧಿಸಿದ ಕ್ಷಣವೇ ಮುಗಿದುಹೋಗಿದ್ದರೆ ಅಂತ್ಯ ಸಮಂಜಸವಾಗಿರುತ್ತಿತ್ತು. ಆದರೆ ಕಥನ ಡೆಸರೆಯ ಮಗಳು ಜೂಡ್ ಮತ್ತು ಅವಳ ಪ್ರಿಯಕರ ರೀಸ್‍ ರ ಕಡಲ ವಿಹಾರದ ಜೊತೆಗೆ ಮುಗಿಯುತ್ತದೆ. ಎಷ್ಟು ಬಾರಿ ಯೋಚಿಸಿದರೂ ಈ ಕೊನೆಯ ಭಾಗ ಕಾದಂಬರಿಯಲ್ಲಿ ಮಿಳಿತವಾಗಿಲ್ಲ ಅನ್ನಿಸುವುದು.

ನಮ್ಮ ಆರ್.ಕೆ ನಾರಾಯಣ್‍ ರ ಮಾಲ್ಗುಡಿಯಂತೆಯೇ ಬ್ರಿಟ್ ಸೃಷ್ಟಿಸುವ ಮಲಾರ್ಡ್ ಕೂಡ ಕಾಲ್ಪನಿಕ ಊರು. ಅಲ್ಲಿನ ವಿಶಾಲ ಬೆಟ್ಟಗುಡ್ಡಗಳು, ಜನ, ಮನೆಗಳು, ಕೊಟ್ಟಿಗೆಗಳು, ಶಾಲೆಯ ಆವರಣ ಎಲ್ಲ ಕಣ್ಣಿಗೆ ಕಟ್ಟುವಂತೆ ಮೂಡಿ ಬಂದಿದೆ. ಮನುಷ್ಯರ ಒಳಗನ್ನು ಕಾಣಿಸುತ್ತಲೇ ಊರಿನ ಆತ್ಮವನ್ನೂ ಹಿಡಿದಿಡುವಲ್ಲಿ ಬ್ರಿಟ್ ಬೆನೆಟ್ ಯಶಸ್ವಿಯಾಗಿದ್ದಾರೆ. ಜೊತೆಗೆ ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲೂ ಕಥೆ ಚಾಚಿಕೊಂಡಿದೆ. ಮುನ್ನೂರೈವತ್ತೇ ಪುಟದಲ್ಲಿ ಸುಮಾರು ಏಳುನೂರು ಪುಟಗಳ ಸರಕು ತುಂಬಿದ್ದಾರಲ್ಲ ಈಕೆ ಎಂದು ಆಶ್ಚರ್ಯವಾಗುವುದು, ಅವರ ಪ್ರತಿಭೆಗೆ ಬೆರಗಾಗುವುದು.

ಕಣ್ಮುಂದೆಯೇ ಇದ್ದವರು ದಿಢೀರನೆ ಅದೃಶ್ಯವಾಗಿ ಹೋದರೆ ಅವರುಳಿಸುವ ನೋವು ಸಹಿಸಲಸಾಧ್ಯವಾದುದು. ಆ ಬೇನೆಯ ನಾನಾರೂಪಗಳ ಮಿಶ್ರ ಚಿತ್ರಣ ಈ ವ್ಯಾನಿಶಿಂಗ್ ಹಾಫ್. ಪೂರ್ಣದ ಅರ್ಧವೊಂದು ಕಳೆದು ಹೋಗುತ್ತಲೇ ಇದ್ದರೆ ಇಡಿಯನ್ನು ವ್ಯಾಖ್ಯಾನಿಸುವುದು ಹೇಗೆ? ಆ ಸಂಕಟಕ್ಕೆ ಎಷ್ಟು ಮುಖಗಳು? ಉತ್ತರ ಬೇಕಿದ್ದರೆ “ಅ ಪರ್‍ಫೆಕ್ಟ್ ನಾವೆಲ್” ಎಂದು ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿರುವ ಈ ಕಾದಂಬರಿಯನ್ನು ಓದಬಹುದು.

About The Author

ಕಾವ್ಯಾ ಕಡಮೆ

ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ