Advertisement
ಇಲ್ಲದ ಸಲ್ಲದ ಭ್ರಮೆಗಳು ಮತ್ತು ಸ್ವಯಂ ಚಿಕಿತ್ಸೆ ತಂದೊಡ್ಡುವ ಆಪತ್ತುಗಳು

ಇಲ್ಲದ ಸಲ್ಲದ ಭ್ರಮೆಗಳು ಮತ್ತು ಸ್ವಯಂ ಚಿಕಿತ್ಸೆ ತಂದೊಡ್ಡುವ ಆಪತ್ತುಗಳು

ಟಿವಿಯಲ್ಲಿ ಕೆಲವು ಖಾಯಿಲೆಯ ಕುರಿತಾಗಿ ಬರುವ ಮಾತುಗಳನ್ನು, ಪೇಪರಿನಲ್ಲಿ ಬರುವ ವಿಷಯಗಳನ್ನು ಓದಿ ಮತ್ತು ಗೂಗಲ್ ಸರ್ಚ್‌ನಲ್ಲಿ ಬರುವ ವಿವರಗಳನ್ನು ನೋಡಿಕೊಂಡು ತಮಗೆ ಆ ಕಾಯಿಲೆ ಇದೆ ಮತ್ತು ಈ ರೋಗ ಇದೆ ಎಂದು ತಪ್ಪಾಗಿ ನಿಶ್ಚಯಿಸಿಬಿಡುವ ಬೃಹಸ್ಪತಿಗಳು ಕೂಡ ನಮ್ಮಲ್ಲಿ ಇದ್ದಾರೆ. ಹೀಗೆ  ಸ್ವಯಂ ನಿರ್ಧಾರ ಮಾಡುವುದರಿಂದ, ಅವರು ಮಾನಸಿಕವಾಗಿಯೂ  ಕುಗ್ಗಿ ಹೋಗುತ್ತಾರೆ.   ಅಷ್ಟೇ ಅಲ್ಲ, ಕೆಲವೊಮ್ಮೆ ಕಾಯಿಲೆಗಳಿಗೆ ಸ್ವಯಂ ಔಷಧಿ ಸೇವಿಸುವ ಪರಿಪಾಠ  ಇತ್ತೀಚೆಗೆ ಹೆಚ್ಚಾಗಿದೆ.  ಅದರ ಪರಿಣಾಮ ಕೂಡ ಬಹಳ ಕೆಟ್ಟದ್ದು.  ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ  ಡಾ. ಕೆ.ಬಿ. ಸೂರ್ಯಕುಮಾರ್ ಬರಹ 

  

 

ಮನುಷ್ಯನಿಗೆ ಏನೂ ತಿಳಿಯದೇ ಇದ್ದಾಗ ಒಂದು ರೀತಿಯ ತೊಂದರೆ. ಆದರೆ ಅರ್ಧಂಬರ್ಧ ತಿಳಿದು, ತಾನು ತಿಳಿದಿದ್ದೇ ಸತ್ಯ ಎಂದು ಭಾವಿಸುವವರಿಂದ ಇನ್ನೂ ಅನೇಕ ತೊಂದರೆ.  ಎರಡನೇ ವರ್ಗದವರು, ಹಲವು ಬಾರಿ ಕಷ್ಟಗಳನ್ನು ಅನುಭವಿಸಿ, ತಮ್ಮದೇ ಜೀವನವನ್ನು ದುಃಸ್ಥಿತಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಬಹಳ ಇರುತ್ತದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಾಣುವ ಒಂದು ಕೆಟ್ಟ ಅಭ್ಯಾಸ, ಜನ ತಮ್ಮ ಮೊಬೈಲ್‌ನಲ್ಲಿ, ಗೂಗಲ್‌ನಲ್ಲಿ, ತಮಗೆ ಕಾಣುತ್ತಿರುವ ಒಂದೆರಡು ರೋಗ ಲಕ್ಷಣಗಳನ್ನು ಹುಡುಕಿ, ಅಲ್ಲಿ ಕಾಣುವ ಯಾವುದೋ ಅಪರೂಪದ ಕಾಯಿಲೆಯನ್ನು ‘ತಮ್ಮದು’ ಎಂದು  ನಿರ್ಧರಿಸಿಕೊಳ್ಳುವುದು. ಗೂಗಲ್ ಎನ್ನುವುದು ಬಹಳ ಉಪಯೋಗಕಾರಿ ಹೌದು. ಆದರೆ ಅದನ್ನು ಎಷ್ಟು ನೋಡಬೇಕು, ನಂಬೇಕು ಹಾಗೂ ಎಷ್ಟು ನೋಡಬಾರದು ಎನ್ನುವುದರ ಮೇಲೆ ಹಿಡಿತವಿಲ್ಲದ ಕೆಲವರು, ತಮ್ಮ ಜೀವನವನ್ನು ಕಷ್ಟಕರ ಮಾಡಿಕೊಂಡಿರುವುದನ್ನು ನಾನು ನೋಡಿದ್ದೇನೆ. ಸಣ್ಣ ಒಂದು ತಲೆನೋವಿನ ಬಗ್ಗೆ ಗೂಗಲ್‌ನಲ್ಲಿ ನೋಡಿ, ತಲೆಯ ಸ್ಕ್ಯಾನಿಂಗ್ ಬೇಕು ಎಂದು ಬರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಸಣ್ಣ ಕೆಮ್ಮು ಬಂದರೂ ‘ಎದೆಯಲ್ಲಿ ಏನೋ ಕಟ್ಟಿದೆ, ಎಕ್ಸ್ ರೇ ತೆಗೆಯಿರಿ’ ಎಂದು ಕೇಳುವವರು ಇನ್ನು ಕೆಲವರು. ರಕ್ತ ಪರೀಕ್ಷೆ ಮಾಡುವಂತೆ ಕೇಳುವವರ ಸಂಖ್ಯೆ ಮಿತಿಮೀರಿ ಹೋಗಿದೆ. ಯಾವುದೇ ಒಬ್ಬ ರೋಗಿಯನ್ನು ಪರೀಕ್ಷಿಸಿ ವೈದ್ಯ ಒಂದಷ್ಟು ರಕ್ತ ಪರೀಕ್ಷೆಗೆ ಬರೆದು ಕೊಡದಿದ್ದರೆ ಆ ಡಾಕ್ಟರ್ ಯೂಸ್ಲೆಸ್ ಫೆಲೋ. ಉಪಯೋಗ ಇಲ್ಲದ ಹಳೇ ತಲೆಮಾರಿನವರು  ಎಂದು ಜನರು ಭಾವಿಸುತ್ತಾರೆ.

ಅದೇ ರೀತಿ ಯಾವುದೋ ಒಂದು ಹೊಟ್ಟೆನೋವು, ಎದೆ ನೋವು, ಬೆನ್ನು ನೋವು, ಕೆಲವೊಮ್ಮೆ ಮೈ ಕೈ ನೋವು ಬಂದರೆ, ಕೆಲವರು ಹೇಳುವ ಒಂದೇ ಶಬ್ದ ‘ಗ್ಯಾಸ್ಟ್ರಿಕ್ ಇದೆ’ ಅಂತ. ಗ್ಯಾಸ್ಟ್ರಿಕ್ ಅಂದರೆ ಇಂಗ್ಲಿಷ್‌ನಲ್ಲಿ ಹೊಟ್ಟೆ ಎಂಬ ಅರ್ಥ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆಯನ್ನು ಗ್ಯಾಸ್ಟ್ರಿಕ್ ಅನ್ನಬಹುದು, ಗ್ಯಾಸ್, ಗ್ಯಾಸ್ಟ್ರಿಕ್ ಅಲ್ಸರ್, ಆಮ್ಲ ಜಾಸ್ತಿ ಆಗಿ ಬರುವ ಉರಿ ಮತ್ತು ಗಾಳಿ ತುಂಬುವಿಕೆ ಎಲ್ಲವೂ ಇದೇ ವ್ಯಾಪ್ತಿಗೆ ಬರುತ್ತದೆ.

ಅದೇ ರೀತಿ ಇನ್ನೊಂದು ವಿಶೇಷ ಶಬ್ಧ ಕೆಲವು ಜನರ ಬಾಯಲ್ಲಿ ಸದಾ ಕಾಣಬರುತ್ತದೆ. ಅದು ವಾಯು. ‘ನನಗೆ ವಾಯು ಇದೆ’ ಎನ್ನುವರು. ಹೊಟ್ಟೆಯಲ್ಲಿ ತುಂಬಿದ ಗಾಳಿಯನ್ನು ಗ್ಯಾಸ್ ಎನ್ನುವವರು ಕೆಲವರಾದರೆ, ಮೈ ಕೈಯಲ್ಲಿ ಬರುವ ಗಂಟಿನ ನೋವನ್ನು ವಾಯು ಎಂದು ಹೇಳುವವರು ಇನ್ನಿತರರು. ವಾಯು ಎಂದರೆ ಒಂದರ್ಥದಲ್ಲಿ ಗಾಳಿ. ಹಾಗೆ ಇಂಗ್ಲಿಷಿಗೆ ಒಮ್ಮೆಲೆ ಅದನ್ನು ಅವರು ಗ್ಯಾಸ್, ಗ್ಯಾಸ್ಟ್ರಿಕ್ ಎಂದು ತರ್ಜುಮೆ ಮಾಡಿಬಿಡುತ್ತಾರೆ. ಗ್ಯಾಸ್ ಟ್ರಿಕ್ ಎನ್ನುವ ಶಬ್ದದಲ್ಲಿ ಗ್ಯಾಸ್ ಎನ್ನುವ ಪದ ಇರಬಹದು. ಆದರೆ ಅವೆರಡೂ ಒಂದೇ ಅಲ್ಲಾ. ಇದು ಹೇಗೆಂದರೆ ರಾಜ ಕುಮಾರ ಎನ್ನುವ ಹೆಸರಿನಲ್ಲಿ ಮೊದಲು ಬರುವ ಶಬ್ದ ರಾಜ ಎಂದು ಇದ್ದಾಗ್ಯೂ ಯಾರೊಡನೆಯೋ ಜಗಳಾಡುವ ಬದಲಿಗೆ,  ಇನ್ಯಾರೋ ಕುಮಾರನ ಜೊತೆಗೆ ಜಗಳ ಕಾಯ್ದಂತೇ.!!

ಸಾಧಾರಣವಾಗಿ ಗಂಟು ನೋವಿಗೆ ಕೊಡುವ ಮಾತ್ರೆಗಳು ಅನೇಕ ಬಾರಿ ಹೊಟ್ಟೆಯಲ್ಲಿ ಉರಿಯನ್ನು ಉಂಟುಮಾಡುತ್ತವೆ. ಆದರೆ ಇದನ್ನು ಸರಿಯಾಗಿಯೇ ತಿಳಿಯದ ಜನ, ಹೊಟ್ಟೆ ನೋವು ಇದ್ದಾಗ ಅದನ್ನೂ ವಾಯು ಎಂದು ಶಬ್ದಾಂತರಿಸಿ, ಕೆಲವು ಮೆಡಿಕಲ್ ಅಂಗಡಿಗಳಿಗೆ ಹೋಗಿ ವಾಯು ಮಾತ್ರೆ ಬೇಕೆಂದು ಹೇಳಿ, ಅಲ್ಲಿ ಕೊಡುವ ನೋವಿನ ಮಾತ್ರೆ ನುಂಗುತ್ತಾರೆ.

ಮಾತ್ರೆ ತೆಗೆದುಕೊಂಡ ಒಂದು ಗಂಟೆಯ ಒಳಗೆ ಹೊಟ್ಟೆಯಲ್ಲಿ ಉರಿ, ನೋವು ಜಾಸ್ತಿಯಾಗಿ ಬೊಬ್ಬೆ ಹೊಡೆದುಕೊಳ್ಳುವುದು ಉಂಟು.  ಆದರೂ ಜನ ಬುದ್ಧಿ ಕಲಿಯುವುದಿಲ್ಲ. ಯಾವಾಗಲೂ ಸೀದಾ ಹೋಗಿ ಮೆಡಿಕಲ್ ಅಂಗಡಿಯಲ್ಲಿ ಮಾತ್ರೆ ತೆಗೆದುಕೊಂಡು, ತಾವೇ ಚಿಕಿತ್ಸೆ ಮಾಡುವವರು ಬಹಳ ಜನ ಇದ್ದಾರೆ. ಕೆಲವು  ಮೆಡಿಕಲ್ ಅಂಗಡಿಯಲ್ಲಿ ಮಾತ್ರ ಬಿ. ಫಾರ್ಮಾ ಅಥವಾ ಡಿ. ಫಾರ್ಮಾ ಮಾಡಿದವರು ಇದ್ದು, ಅವರಿಗೆ ಸರಿಯಾದ ಔಷಧಗಳ ಮಾಹಿತಿ ಇರುತ್ತದೆ. ಆದರೆ ಅನೇಕ ಮೆಡಿಕಲ್ ಶಾಪ್ ನಲ್ಲಿ  ಸ್ನೇಹಿತರ, ಸಂಬಂಧಿಕರ ಡಿಗ್ರಿ ಸರ್ಟಿಫಿಕೇಟ್ ಅಥವಾ ಕೆಲವು ವರ್ಷ ಕಂಪೌಂಡರ್ ಆಗಿದ್ದವರ ( ಕ್ಯೂ.ಪಿ.ಹೋಲ್ಡರ್ಸ್, ಕ್ವಾಲಿಫೈಡ್ ಫಾರ್ಮಸಿಸ್ಟ್) ವಿವರ ತೋರಿಸಿ, ಲೈಸೆನ್ಸ್ ಅಥವಾ ಅನುಮತಿ ಪಡೆದು, ಅಂಗಡಿಯನ್ನು ಇನ್ನೂ ಯಾರೋ ನಡೆಸುತ್ತಿರುತ್ತಾರೆ. ಇವರಿಗೆ ಔಷಧಿಯ ಪರಿಣಾಮಗಳ ಗಂಧ ಗಾಳಿ ಕೂಡಾ ಇರುವುದಿಲ್ಲ. ಆದರೂ ಜನ ಇವರನ್ನು ನಂಬುತ್ತಾರೆ!

ಅಂಗಡಿಗೆ ಬರುವ ಮೆಡಿಕಲ್ ರೆಪ್ರೆಸೆಂಟೆಟಿವ್ ಅಥವಾ ಔಷಧ ವಿತರಕರು ಹೇಳುವ, ಕೆಲವು ಶಬ್ದಗಳನ್ನು, ಮಾತ್ರೆಯ ಹೆಸರನ್ನು ನೋಡಿಕೊಂಡು, ಇಲ್ಲಿ ಇರುವ ಕೆಲವರು ತಾವು ಬುದ್ಧಿವಂತರೆಂದು ನಂಬಿಕೊಂಡಿರುತ್ತಾರೆ. ನಮ್ಮ ಹಳ್ಳಿ ಜನ ಇನ್ನೂ ಚತುರರು. ವೈದ್ಯರ ಬಳಿ ಹೋಗಿ ಅವರಿಗೆ ತಪಾಸಣೆಯ ಚಾರ್ಜ್ ಯಾಕೆ ಕೊಡುವುದು ಎಂದು, ಈ ವ್ಯಕ್ತಿಗಳ ಬಳಿ ತಮ್ಮ ಕಾಯಿಲೆಯನ್ನು ಹೇಳಿ ಔಷಧಿ ಕೊಡುವಂತೆ ಕೇಳಿಕೊಳ್ಳುತ್ತಾರೆ. ಆಗ ಅಲ್ಲಿರುವವರು ಹಿಂದೂ ಮುಂದೂ ನೋಡದೆ ತಮಗೆ ತೋಚಿದ ಮಾತ್ರೆಗಳನ್ನು ಕೊಡುತ್ತಾರೆ.

ಶೀತ, ಜ್ವರದಂತಹ ಅನೇಕ ಕಾಯಿಲೆಗಳು ಸೆಲ್ಫ್ ಲಿಮಿಟಿಂಗ್ ಕಾಯಿಲೆಗಳು. ಅಂದರೆ ಕೆಲವು ದಿವಸಗಳಲ್ಲಿ ತಾವಾಗಿಯೇ ಗುಣ ಆಗುವ ರೋಗಗಳು. ಏಷ್ಟೋ ಬಾರಿ ನಾನು ಹೇಳುವುದು ಉಂಟು. ಚಿಕಿತ್ಸೆ ಮಾಡಿದ ಶೀತ ಒಂದು ವಾರದಲ್ಲಿ ಗುಣ ಆಗುತ್ತದೆ, ಚಿಕಿತ್ಸೆ ಮಾಡದೇ ಇರುವ ಶೀತ ಏಳು ದಿನದಲ್ಲಿ ಗುಣವಾಗುತ್ತದೆ ಎಂದು. ಇಂಥ ಪರಿಸ್ಥಿತಿಯಲ್ಲಿ ಜನರ ನಂಬಿಕೆ ಅಂಗಡಿಗಳ ಮೇಲೆ ಹೆಚ್ಚಾಗುತ್ತಾ ಹೋಗುತ್ತದೆ. ಹೀಗೆ ಔಷಧಿ ಅಂಗಡಿಯ ಮೊರೆ ಹೋಗುವುದರಿಂದ, ಚಿಕಿತ್ಸೆ ವಿನಾ ಕಾರಣ ವಿಳಂಬಗೊಂಡು, ಅನೇಕ ಬಾರಿ ರೋಗ ಉಲ್ಬಣಗೊಂಡ ನಂತರ ವೈದ್ಯರಲ್ಲಿಗೆ ಬರುತ್ತಾರೆ.

ಇನ್ನೊಂದು ವಿಶೇಷವಾದ ಶಬ್ದ ಊರಿನಲ್ಲಿ ಪ್ರಚಲಿತದಲ್ಲಿ ಇರುವುದು ಮೈಗ್ರೇನ್. ತಲೆನೋವು ಇರುವ ಯಾವುದೇ ಕಾಲೇಜು, ಹೈಸ್ಕೂಲ್ ವಿದ್ಯಾರ್ಥಿಗಳು ನನ್ನಲ್ಲಿಗೆ ಬಂದು ವಿಷಯಗಳನ್ನು ವಿವರಿಸುವುದರ ಮೊದಲೇ ಹೇಳುವುದು ‘ನನಗೆ ಮೈಗ್ರೇನ್ ಇದೆ’ ಎಂದು.

ಸಣ್ಣ ಕೆಮ್ಮು ಬಂದರೂ ಎದೆಯಲ್ಲಿ ಏನೋ ಕಟ್ಟಿದೆ, ಎಕ್ಸ್ ರೇ ತೆಗೆಯಿರಿ ಎಂದು ಕೇಳುವವರು ಇನ್ನು ಕೆಲವರು. ರಕ್ತ ಪರೀಕ್ಷೆಗೆ ಕೇಳುವವರ ಸಂಖ್ಯೆ ಮಿತಿಮೀರಿ ಹೋಗಿದೆ. ಯಾವುದೇ ಒಬ್ಬ ರೋಗಿಯನ್ನು ಪರೀಕ್ಷಿಸಿ ವೈದ್ಯ ಒಂದಷ್ಟು ರಕ್ತ ಪರೀಕ್ಷೆಗೆ ಬರೆದು ಕೊಡದಿದ್ದರೆ ಆ ಡಾಕ್ಟರ್ ಯೂಸ್ಲೆಸ್ ಫೆಲೋ.!!

ಮೈಗ್ರೇನ್ ಎಂಬುದು ಒಂದು ರೀತಿಯ ತಲೆ ನೋವು ನಿಜ. ಆದರೆ ಎಲ್ಲಾ ತಲೆ ನೋವು ಅದೇ ಆಗಿರಬೇಕೆಂದು ಇಲ್ಲ. ತಲೆ ನೋವಿಗೆ ಬೇಕಾದಷ್ಟು ಕಾರಣಗಳು ಇವೆ. ಮೊಬೈಲ್, ಟಿ ವಿ.ಯನ್ನು ಸಮೀಪದಿಂದ ನೋಡಿದಾಗ ಆಗುವ ಕಣ್ಣಿನ ಸುತ್ತಲಿನ ಮಾಂಸಖಂಡದ ಸೆಳೆತ, ದೃಷ್ಟಿ ದೋಷ, ಹಣೆಯ ಒಳಬಾಗದಲ್ಲಿ ಇರುವ ಸೈನಸ್ ಗಳಲ್ಲಿ ಕೀವು ಕಟ್ಟುವಿಕೆ, ಕತ್ತಿನ ಮಾಂಸ ಖಂಡದ ಸೆಳೆತ, ಶೀತ ಜ್ವರ, ಮಾನಸಿಕ ಒತ್ತಡ, ಖಿನ್ನತೆ ಇತ್ಯಾದಿ ಇತ್ಯಾದಿ… ಆದರೆ ಕೆಲವು  ಯುವಜನತೆಯಲ್ಲಿ ಈ ಮೈಗ್ರೈನ್ ಶಬ್ದ ಹಾಸು ಹೊಕ್ಕಾಗಿ ಹೋಗಿ, ತಾವೇ ರೋಗ ನಿರ್ಣಯ ಅಥವಾ ಡೈಯಾಗೋನೈಸ್ ಮಾಡಿ, ಅಂಗಡಿಗೆ ಹೋಗಿ ಅದಕ್ಕೆ ಇರುವ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಔಷಧಿಯಲ್ಲಿ ಕೂಡಾ ಅನೇಕ ಅಡ್ಡ ಪರಿಣಾಮಗಳು ಇದ್ದು, ಅದು ಅವರ ಗಮನಕ್ಕೆ ಬರುವಾಗ ಸಮಯ ಮೀರಿರುತ್ತದೆ, ಐದು ಕೆಜಿ  ತೂಕ ಜಾಸ್ತಿಯಾಗಿರುತ್ತಾರೆ.

ಇದೇ ರೀತಿ ಟಿವಿಯಲ್ಲಿ ಕೆಲವು ಖಾಯಿಲೆಯ ಕುರಿತಾದ  ಮಾತುಗಳನ್ನು, ಪೇಪರಿನಲ್ಲಿ ಬರುವ ವಿಷಯಗಳನ್ನು ಓದಿ ಮತ್ತು ಗೂಗಲ್ ಸರ್ಚ್‌ನಲ್ಲಿ ಬರುವ ವಿವರಗಳನ್ನು ನೋಡಿಕೊಂಡು ‘ತಮಗೆ ಆ ಕಾಯಿಲೆ ಇದೆ ಮತ್ತು ಈ ರೋಗ ಇದೆ’ ಎಂದು ನಿಶ್ಚಯಿಸಿಬಿಡುವ ಬೃಹಸ್ಪತಿಗಳು ಕೂಡಾ ನಮ್ಮಲ್ಲಿ ಇದ್ದಾರೆ.

ನಾನು ಈಗ ಹೇಳುವುದು ಜೀವನದಲ್ಲಿ ನಾನು ಕಂಡಂತ ಒಂದು ನೈಜ ಘಟನೆ, ಕಥೆ ಅಲ್ಲಾ.

ನಾನಾಗ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ರಜೆಯಲ್ಲಿ ಮನೆಗೆ ಬಂದಾಗಲೆಲ್ಲ ನನ್ನ ಮಿತ್ರನ ಮನೆಗೆ ಹೋಗುವುದು ಸಾಮಾನ್ಯ. ಅವನ ಮನೆಯಲ್ಲಿ ಇದ್ದವರು ಅವನ ತಂದೆ, ತಾಯಿ, ಅಕ್ಕ, ತಂಗಿ. ಅವನ ತಂಗಿಗೆ ಸುಮಾರು ಹದಿನೈದು ವರ್ಷ ವಯಸ್ಸು. ಆಗಷ್ಟೇ ಮೈ ನೆರೆದಿದ್ದಳು. ಹಾಗಾಗಿ ಶರೀರದ ಎಲ್ಲಾ ಭಾಗಗಳಲ್ಲಿ ಬದಲಾವಣೆಗಳು ಆಗಿದ್ದವು.

ಒಂದು ದಿನ ಸ್ನಾನಕ್ಕೆ ಹೋದ ಅವಳಿಗೆ ಎದೆಗೆ ಸೋಪ್ ಹಾಕಿ ಉಜ್ಜುವಾಗ ಕೈಗೆ ಒಂದು ಗಂಟು ಸಿಕ್ಕಿದೆ. ಹುಡುಗಿಗೆ ಗಾಬರಿಯಾಗಿದೆ. ಆದರೆ ಅದನ್ನು ಯಾರ ಬಳಿಯೂ ಹೇಳದೆ, ತಾನೆ ಇದು ಏನೋ ಇರಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು, ಆಗಿನ ಕೆಲವು ಪತ್ರಿಕೆಗಳನ್ನು ತಿರುವಿ ಹಾಕಿ, ವಾರಪತ್ರಿಕೆಗಳಲ್ಲಿ ಬಂದ ಕೆಲವು ಲೇಖನಗಳನ್ನು ಕೂಡ ನೋಡಿದ್ದಾಳೆ.

ಅದೆಲ್ಲ ನೋಡಿದ ನಂತರ ಅವಳ ತಲೆಗೆ ಬಂದದ್ದು ಒಂದೇ ಒಂದು ವಿಷಯ. ‘ತನಗೆ  ಕ್ಯಾನ್ಸರ್ ಗಡ್ಡೆ ಇದೆ’  ಎಂದು ನಂಬಿದಳು. ಇದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ತನ್ನಷ್ಟಕ್ಕೆ ತಾನೇ ಕೊರಗುತ್ತಾ ಹೋದ ಹುಡುಗಿ ಬಡವಾದಳು.  ದಿನ ಕಳೆದಂತೆ ಶರೀರದ ತೂಕ ಕಡಿಮೆಯಾಗುತ್ತಾ ಬಂತು. ತೂಕ ಕಡಿಮೆಯಾಗುವುದು ಕ್ಯಾನ್ಸರಿನ ಒಂದು ಲಕ್ಷಣ ಎಂಬುದನ್ನು ತಿಳಿದಿದ್ದ ಆಕೆಗೆ, ತನಗೆ ಅದೇ ರೋಗ ಇದೆಯೆಂದು ಖಾತ್ರಿಯೆನಿಸಿ, ಗಾಬರಿಬಿದ್ದಳು.  ಯಾರೊಂದಿಗೂ ಹೇಳದೆ ತನ್ನಲ್ಲಿಯೇ ಇದನ್ನ ಇಟ್ಟುಕೊಂಡು, ಆಕೆ ಕೊನೆಗೆ ಯೋಚಿಸಿದ್ದು ಹೀಗೆ. ‘ಇನ್ನು ನಾನು ಬದುಕಿದ್ದು ಪ್ರಯೋಜನವಿಲ್ಲ. ನರಳಿ ಸಾಯುವುದಕ್ಕಿಂತ ಆತ್ಮಹತ್ಯೆಯೇ ದಾರಿ’ ಎಂದು ತಪ್ಪು ತಪ್ಪಾಗಿ ಯೋಚಿಸಿದಳು.

ಆ ಸಮಯದಲ್ಲಿ ಪ್ರಕಟವಾಗುತ್ತಿದ್ದ  ಪ್ರಜಾಮತ ಎಂಬ ವಾರ ಪತ್ರಿಕೆಯಲ್ಲಿ ಡಾಕ್ಟರ್ ಅನುಪಮ ನಿರಂಜನ ಅವರ ಲೇಖನಗಳು, ಮತ್ತು ವೈದ್ಯಕೀಯ ಸಲಹೆ ಎಂಬ ಒಂದು ಕಾಲಂ ಬರುತ್ತಿತ್ತು. ಅದನ್ನು ನೋಡಿದ ಈ ಹುಡುಗಿ ಕೊನೆಯ ಪ್ರಯತ್ನ ಎಂಬಂತೆ ಅವರಿಗೆ ಒಂದು ವಿವರವಾದ ಪತ್ರ ಬರೆಯುತ್ತಾ ತನ್ನ ಆತ್ಮಹತ್ಯೆಯ ಯೋಚನೆಯನ್ನು ವಿವರಿಸಿದಳು. ಅದನ್ನು ನೋಡಿದ ಡಾಕ್ಟರ್ ಅನುಪಮ ನಿರಂಜನ, ಕೂಡಲೇ ಅವಳಿಗೆ ಒಂದು ಉತ್ತರವನ್ನು ಬರೆದರು.  ‘ಇದು ಸಾಧಾರಣವಾಗಿ ಇರುವಂತಹ ಒಂದು ಗಡ್ಡೆ.  ನೀನು ಸರಿಯಾದ ಆಹಾರ ಸೇವನೆ ಮಾಡದೇ ನಿನ್ನ ತೂಕ ಕಡಿಮೆಯಾಗುತ್ತಾ ಬಂದಿದೆ. ಇದರ ಬಗ್ಗೆ ನಿಮ್ಮಲ್ಲಿ ಯಾರಾದರೂ ಡಾಕ್ಟರಿಗೆ ಕೂಡಲೇ ತೋರಿಸಿಬಿಡು. ಆತ್ಮಹತ್ಯೆ ಮಹಾ ಪಾಪ. ಯಾವುದೇ ಕಾರಣಕ್ಕೆ ಆ ದುಸ್ಸಾಹಸಕ್ಕೆ ಮಾತ್ರ ಹೋಗಬೇಡ’ ಎಂಬ ಧೈರ್ಯವನ್ನು, ಸಾಂತ್ವನವನ್ನು ಹೇಳಿದರು.

ಇಷ್ಟು ಆದಾಗ ಹುಡುಗಿಗೆ ಒಂದು ಸಣ್ಣ ಧೈರ್ಯ ಬಂದು,  ಅಕ್ಕನೊಂದಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಆಗ ಅವರಿಗೆ ಮೈಸೂರಿನಲ್ಲಿ ಇದ್ದ ನಾನು  ನೆನಪಾದೆ.  ನಾನಂತೂ ಇನ್ನೂ ಡಾಕ್ಟರ್ ಆಗಿರದಿದ್ದರೂ ಕೊನೆಯ ವರ್ಷದಲ್ಲಿ ಕಲಿಯುತ್ತಿದ್ದೆ. ಮಿತ್ರನನ್ನು ನೋಡಲು ಅವನ ಮನೆಗೆ ಬಂದಾಗ, ಅಕ್ಕ ನನ್ನನ್ನು ಕರೆದು, ಗುಪ್ತವಾಗಿ ಈ ವಿಷಯವನ್ನು ಹೇಳಿದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆ ಬಹಳ ಕಡಿಮೆ ಇದ್ದದ್ದು ನನಗೆ ಓದಿ ಗೊತ್ತಿತ್ತು. ಕೂಡಲೇ ನನಗೆ ನೆನಪಾಗಿದ್ದು ಫೈಬ್ರೆಡಿನೋಮ ಎಂಬ ಕ್ಯಾನ್ಸರ್ ಅಲ್ಲದ ಮಾಂಸದ ಗಡ್ಡೆ. ಅದರ ಬಗ್ಗೆ ಅವರಿಬ್ಬರಿಗೂ ವಿವರವಾಗಿ ತಿಳಿಸಿದೆ.  ಅದಕ್ಕೆ ಸುಲಭವಾಗಿ ಸಿಗುವಂತಹ ವಿಟಮಿನ್ “ಈ” ಮಾತ್ರೆಯನ್ನು ತೆಗೆದುಕೊಳ್ಳಬೇಕು ಎಂದೆ. ಆದರೂ ಅವರಿಗೆ ಸಮಾಧಾನ ಆಗಿರಲಿಲ್ಲ.  ಯಾವುದಕ್ಕೂ ಒಮ್ಮೆ ಸ್ತ್ರೀ ರೋಗ ತಜ್ಞರಿಗೆ ತೋರಿಸಿ ಎಂದು ಸಲಹೆ ಕೊಟ್ಟೆ.

ಕೊನೆಗೂ, ಆಕೆ ನಾನು ಹೇಳಿದ ಮಾತ್ರೆಗಳನ್ನು ಸೇವಿಸಲು ತೊಡಗಿದಳು. ಹಾಗೂ-ಹೀಗೂ ಕೆಲವೇ ದಿನಗಳ ಸಮಯದಲ್ಲಿ ಗಡ್ಡೆ ಕರಗುತ್ತಾ ಹೋಗಿ, ಕೊನೆಗೆ ಸಂಪೂರ್ಣ ಮಾಯವಾಗಿತ್ತು.

ಕೆಲವರು, ಯಾವುದೋ ಪತ್ರಿಕೆಯಲ್ಲಿ, ಸೋಶಿಯಲ್ ಮೀಡಿಯಾ, ಅಥವಾ ಟಿ. ವಿ.ಯಲ್ಲಿ ಬರುವ ವಿಷಯಗಳನ್ನು ಓದಿ, ಕೇಳಿ, ಅಥವಾ ರೋಗಗಳ ಬಗ್ಗೆ ಏನೂ ತಿಳಿಯದಿರುವ ತನ್ನ ಜೊತೆಗಾರರೊಂದಿಗೆ ಚರ್ಚಿಸಿ, ಯಾವುದನ್ನೂ ಪೂರ್ತಿ ಅರ್ಥಮಾಡಿಕೊಳ್ಳದೆ, ಹಾದಿ ತಪ್ಪುತ್ತಾರೆ. ಆ ರೋಗಗಳು ಇಲ್ಲದಿದ್ದರೂ, ತನ್ನಲ್ಲಿ ‘ಆ ರೋಗ ಇದೆ’ ಎಂದು ಭಾವಿಸಿ ದುಡುಕುವುದು ತುಂಬಾ ತಪ್ಪು.

 

About The Author

ಡಾ. ಕೆ.ಬಿ. ಸೂರ್ಯಕುಮಾರ್

ಡಾ.ಕೆ.ಬಿ. ಸೂರ್ಯಕುಮಾರ್ ಅವರು ಹಿರಿಯ ವಿಧಿವಿಜ್ಞಾನ ತಜ್ಞರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷ ವಿಧಿವಿಜ್ಞಾನ ಪರಿಣತರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿಯೂ ವಿಧಿವಿಜ್ಞಾನ ತಜ್ಞರಾಗಿ ತಮ್ಮ ತಜ್ಞ ಸಲಹೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದ ಪ್ರೊಫೆಸರ್. 'ವೈದ್ಯ ಕಂಡ ವಿಸ್ಮಯ' ಅವರು ಬರೆದ ಕೃತಿ.

17 Comments

  1. Vijaya Rao

    It’s been our experience too, you have articulated well.

    Reply
  2. ಲೋಕನಾಥ್ ಅಮಚೂರು.

    ಈ ಸಮಯದಲ್ಲಿ ಬಹಳ ಅಗತ್ಯ ಇರುವ ಲೇಖನ ಬರೆದಿರುವಿರಿ. ವಾತಾವರಣದಲ್ಲಿ ಏರುಪೇರು ಆಗುವಾಗ ಶೀಥ,ನೆಗಡಿ ಜ್ವರ,,ಕೆಮ್ಮುಬರುವುದು ಸಹಜ. ಆದರೆ ಈಗಿನ ಕೊರೋನ, ಒಮಿಕ್ರೊನ್ ಭಯದಿಂದ ಬಹಳಷ್ಟು ಮಂದಿ ಆಸ್ಪತ್ರೆಗೆ ಹೋಗದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದನ್ನು ಕಾಣಬಹುದು. ಇಂತಹ ಲೇಖನಗಳು ನಿಮ್ಮಿಂದ ಕಾಲಕಾಲಕ್ಕೆ ಬರುತ್ತಿರಲಿ.ಬಹಳ ಉಪಯುಕ್ತ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಸರ್.

    Reply
  3. ಮಹಾದೇವ ಎನ್ ಟಿ

    ಹೌದು ಸರ್ 100% ನಿಜ, ಹಣ ಉಳಿಸೋದಿಕ್ಕೆ ಮೆಡಿಕಲ್ ಶಾಪ್ ಅವರ ಹತ್ತಿರ ಹೋಗಿ ಮಾತ್ರೆ ಕೇಳಿ ತಗೆದುಕೊಂಡು ಆಮೇಲೆ ಪಜೀತಿ ಪಡೋದು ಆಗಿದೆ..

    ಮಹದೇವ್ ಎನ್. ಟಿ.

    Reply
  4. Kishanpooovaiah

    ತುಂಬಾ ಚನ್ನಾಗಿ ಮೂಡಿದೆ ವಾಸ್ತವ ವನ್ನು ತಿಳಿಸಿ ದಿರಾ ಇಂತಇಂತ ಲೇಖನ ಪ್ರತಿಕೆ ಯಲ್ಲಿ ಬಂದರೆ ಜನರಿಗೆ ಮುಟ್ಟುತ್ತೆ

    Reply
  5. PUSHPa

    ಕತೆ ಓದುವಾಗ ಹಿಂದೆ ನಡೆದ ಒಂದು ಘಟನೆ ನೆನಪಾಯ್ತು:
         ನಮ್ಮ ಅಡಿಗೆಯವಳು ಪರ ಊರಿನಿಂದ ಬಂದವಳು ನಮ್ಮಲ್ಲೇ ಉಳಿದು ಕೊಳ್ಳುತ್ತಿದ್ದ‌ ಆಕೆಗೆ ವಿರಾಮದ ಕಾಲದಲ್ಲಿ ಓದಲಿ ಎಂದು ಸುಧಾ, ತರಂಗ ಇತ್ಯಾದಿ ಪುಸ್ತಕಗಳನ್ನು ತರಿಸುತ್ತಿದ್ದೆವು. ಕ್ರಮೇಣ ಆಕೆಯದು ದಿನಕ್ಕೊಂದು ರೀತಿಯ ಅನಾರೋಗ್ಯದ ಬಗ್ಗೆ ಪುಕಾರು ಶುರುವಾಯಿತು. ವೈದ್ಯರ ಸಲಹೆಯಂತೆ, ರಕ್ತ ಪರೀಕ್ಷೆ ಮಾಡಿಸಿದಾಗ ಯಾವ ತೊಂದರೆಯೂ ಇರಲಿಲ್ಲ. ಸುಮ್ಮನೆ ಅವಳ ಸಮಾಧಾನಕ್ಕೆ, ಏನೋ ಒಂದು ಮಾತ್ರೆಕೊಟ್ಟು ಕಳುಹಿಸಿದ್ದರು. ಅದು ಮುಗಿಯುತ್ತಲೇ ಅದೇ ವೈದ್ಯರ ಬಳಿ ಮತ್ತೆ ಸವಾರಿ! ನಂತರ ಆ ಡಾಕ್ಟರಮ್ಮ ಸರಿ ಇಲ್ಲ ಅಂದಾಂಗ ಹೋಮಿಯೋಪತಿ ವೈದ್ಯರ ಬಳಿ, ನಮ್ಮ ಪಕ್ಕದ ಮನೆಯವರು ಕರೆದೊಯ್ದಿದ್ದರು. ಅವರದೇನೋ ಗುಳಿಗೆ ಕೊಟ್ಟು ಚಾ, ಕಾಫಿ ಕುಡಿಬೇಡ ಅಂದಾಗ ಹಾಲು ಕುಡಿಯ ಬಹುದಾ ಅಂತ ಹೇಳಿದ್ದಾಳೆ. ಅವರು ಅನುಕೂಲ ಇದ್ದರೆ ಕುಡಿಯ ಬಹುದು  ಅಂದದ್ದೇ ತಡ, ಹಾಲು ತರಿಸಿ ಕೊಡಿ ಅಂದಾಗ, ಅರ್ಧ ಲೀಟರ್ ಕೂಪನ್ನು ಜಾಸ್ತಿ ತರಿಸಿದ್ದಾಯ್ತು. ಅದು ಪೂರಾ ಆಕೆ ಬೇರೆಯೇ ಕಾಯಿಸಿ ಕುಡಿಯತೊಡಗಿದಾಗ ಹೊಟ್ಟೆ ಉಬ್ಬರ ಕಾಣಿಸಿಕೊಂಡು, ಅದಕ್ಕೆ ಮತ್ತೆ ಆಯುರ್ವೇದದ ಮಾತ್ರೆ ಕೊಂಡದ್ದಾಯ್ತು.
         ಒಂದು ದಿನ,  ಆಕೆ ಏನು ಓದುತ್ತಾಳೆ ಅಂತ ವಿಚಾರಿಸಿ ನೋಡಿದಾಗ, ಆರೋಗ್ಯ ವಿಭಾಗ ಬಿಟ್ಟು‌ ಮತ್ತೇನೂ ಓದುತ್ತಿಲ್ಲ ಅಂತ ಗೊತ್ತಾಯ್ತು. ಸರಿ, ಇವಳಿಗೆ ಬಂದ ಕಾಯಿಲೆ ಏನು ಅಂತ ಗೊತ್ತಾಗಿ ಪುಸ್ತಕ ತರಿಸುವುದು ನಿಲ್ಲಿಸಿ, “ಹಾಲಿನ ಕೂಪನ್ ಮುಗಿದ ಮೇಲೆ, ಬೇಕಿದ್ದರೆ, ನೀನೇ ತರಿಸಿಕೋ” ಅಂದಾಗ, ನೀರು ಸೇರಿಸಿ ಕಾಯಿಸಿ ಮೂರು ನಾಲ್ಕು ದಿನಕ್ಕೊಮ್ಮೆ ಹಾಲು ತೆಗೆದು,  ಕೂಪನ್ ಮುಗಿಯುವ ತನಕ  ಹಾಲು ಕುಡಿದು ಸುಮ್ಮನಾಗಿದ್ದಳು.

    Reply
  6. Dr.L.S Prasad

    This has come well, written nicvely. You have explained the problem of self medication due to various reasons and after effects of that insimple way, with a very good true last experience..
    Early introduction though bit elaborate, may be needed for non medical people
    Keep going all the best

    Reply
  7. K B RATHANBABU

    Very good information. Public health need to educate the young ones in schools and colleges.

    Reply
  8. Anantha Shayana

    ವಾಸ್ತವ ಹಾಗೂ ಅರಿಯಬೇಕಾದ ವಿಷಯ ಪ್ರಸ್ತುತಿ ಸುಂದರವಾಗಿದೆ ಡಾಕ್ಟರ್.

    Reply
  9. Dr KRISHNASWAMY KRISHNAPPA

    ನಮಸ್ಕಾರ ಚಿಕ್ಕ ಮಾವ ನವರಿಗೆ, ನಿಮ್ಮ ಈ ಲೇಖನ ಓದಿದೆ, ಮೆಚ್ಚಿದೆ, ತುಂಬಾ ಅರ್ಥ ಘರ್ಬಿತ ವಾಗಿವೆ, ಈ ರೀತಿಯ ಲೇಖನಗಳನ್ನು ಬರೆದಿರುವ ನಿಮ್ಮ ಅನುಭವ ಮತ್ತು ಜ್ಞಾನ ಪರಿಪೂರ್ಣತೆ ಯಿಂದ ಕೂಡಿದೆ. ಧನ್ಯವಾದಗಳು

    Reply
  10. Kanchana

    ಇತ್ತೀಚೆಗಂತು ಇಂಟರ್ನೆಟ್ ನೋಡಿಕೊಂಡು ಎಲ್ಲರೂ ಡಾಕ್ಟರ್ ಆಗುತ್ತಿದ್ದಾರೆ. ಯೂ ಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಲು ಹೋಗಿ ಪ್ರಾಣಕ್ಕೆ ಸಂಚಕಾರವಾದ ಸುದ್ದಿ ಓದಿದ್ದು ಕೂಡ ನೆನಪಾಯ್ತು. ಉತ್ತಮ ವಿಷಯದ ಲೇಖನ.

    Reply
  11. ಉಷಾ .ಎಸ್

    ಬರೆದಿದ್ದು ಸರಿಯಾಗಿದೆ ಇಂಟರ್ನೆಟ್ ನಿ೦ದ ಯೋಚನೆ ಮಾಡಲು ಮಾರ್ಗವಾಗಿದೆ ಹಾಗೆಯೇ ವಿಷಯ ತಿಳಿಯುತ್ತದೆ

    ಅವರವರು ಹೇಗೆ ಸಾಧ್ಯವೋ ಹಾಗೇ ಅರ್ಥ ಮಾಡಿಕೊಂಡು
    ವಿಚಾರ ಪಡುತ್ತಾರೆ Congratulations Surya . continue your literary work.

    Reply
  12. Chummy Devaiah

    ಉತ್ತಮ ಬರವಣಿಗೆಗೆ,ಇಂದಿನ ಯುವ ಪೀಳಿಗೆಗೆ ಒಂದು ಎಚ್ಚರಿಕೆಯ ಘಂಟೆ… ಮೊಬೈಲ್ ಮೂಲಕ ಗೂಗಲ್ ಸರ್ಚ್ ನಿಂದ ಸೆಲ್ಫ್ ಮೆಡಿಕೇಷನ್ ತೆಗೆದುಕೊಳ್ಳುವುದು ನಿಜವಾಗಿಯೂ ಅಪಯಕಾರಿ

    Reply
  13. Govind hebbar

    This is an exception to the rule of “Self help is the best help”. On the contrary, this kind of self help can be dangerous. Well written article ??

    Reply
  14. Ashika Poovappa

    Thank you dr Mama…Very informative Dr mama???

    Reply
  15. Udaya

    The adverse effects of self medication is very well explained. Alesson for many to learn.

    Reply
  16. Usha Vasan

    This is a good read for the common man. “A little knowledge is a dangerous thing “. Yes, this is one of the drawbacks of Online search engines.

    It is too easy for people to buy many medications in India, without a prescription. There should me more restrictions placed on this practice.

    Reply
  17. Ramitha

    Super sir…. your writing inspires me ?

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ