Advertisement
ಎರೆನೆತ್ತಿ ಎಂಬ ಬಾಲ್ಯಕಾಲದ ನಿಗೂಢಗಳು….: ಎಸ್.ಗಂಗಾಧರಯ್ಯ

ಎರೆನೆತ್ತಿ ಎಂಬ ಬಾಲ್ಯಕಾಲದ ನಿಗೂಢಗಳು….: ಎಸ್.ಗಂಗಾಧರಯ್ಯ

ಹಿಂಗೆ ಪ್ರಾಣಿಗಳ ಕಾಟದ ಜೊತೆಗೆ ಎರೆನೆತ್ತಿಯ ಕಾಡಿನೊಳಕ್ಕೆ ಆಗಾಗ ದೂರದ ಊರುಗಳಿಂದ ದರೋಡೆಕೋರರು ಬಂದು ಸೇರಿಕೊಂಡುಬಿಡುತ್ತಿದ್ದರಂತೆ. ಆಗ ಅಪ್ಪಿತಪ್ಪಿಯೂ ಸುತ್ತಲ ಹಳ್ಳಿಗಳ ಜನರು ಅತ್ತ ಸುಳಿಯುತ್ತಿರಲಿಲ್ಲವಂತೆ. ಪೊಲೀಸರಿಗೆ ದೂರು ಕೊಟ್ಟರೂ ಅತ್ತ ಹೋಗಲು ಅವರೂ ಹಿಂಜರಿಯುತ್ತಿದ್ದರಂತೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಕಳ್ಳತನ ಮಾಡಿದ ಮೇಲೆ ಆ ದರೋಡೆಕೋರರು ಅವರಾಗಿಯೇ ಜಾಗ ಖಾಲಿ ಮಾಡುತ್ತಿದ್ದರಂತೆ. ಎರೆನೆತ್ತಿಯ ಬಗ್ಗೆ ಇಂಥ ಪುಕಾರುಗಳನ್ನು ನನ್ನ ಅಜ್ಜನಷ್ಟೇ ಅಲ್ಲ ಊರಿನ ಹಲವು ಹಿರಿಯ ತಲೆಗಳು ಹೇಳುತ್ತಿದ್ದುದರಿಂದ ಅದು ನನ್ನಂಥವರೊಳಗೆ ಒಂದು ನಿಗೂಢ ಲೋಕವಾಗಿ ಉಳಿದುಬಿಟ್ಟಿತ್ತು.
ಕಥೆಗಾರ ಎಸ್.‌ ಗಂಗಾಧರಯ್ಯ ಅವರ ಈತನಕದ ಕತೆಗಳ ಸಂಕಲನ “ಎರೆನೆತ್ತಿ”ಗೆ ಅವರೇ ಬರೆದ ಮಾತುಗಳು ಇಲ್ಲಿವೆ

ಎರೆನೆತ್ತಿ ಎಂಬ ಬಾಲ್ಯಕಾಲದ ನಿಗೂಢ, ಗಂಧದ ಬುಡ, ಕೆಮ್ಮಣ್ಣು ಜೀರಿಂಬೆ ಹಾಗೂ ಅಲೆಮಾರಿ ಗುಡಾರಗಳು   

ಬಾಲ್ಯಕಾಲದಲ್ಲಿ ನಡೆದ ಕೆಲವು ಸಂಗತಿಗಳು, ನಡೆದಾಡಿದ ಜಾಗಗಳು, ಕೇಳಿದ ಕಥೆಗಳು, ಅನುಭವಿಸಿದ ರೋಮಾಂಚನಗಳು-ಭಯಗಳು, ಉಂಡ ನೋವುಗಳು-ಕಂಡ ಕನಸುಗಳು, ತಿಂದ ತಿನಿಸುಗಳು-ಅವುಗಳ ಘಮಲುಗಳು, ಆಡಿದ ಆಟಗಳು-ಹುಡುಗಾಟಗಳು ಕಾಲದ ಹೊಡೆತಕ್ಕೆ ಸೆಡ್ಡು ಹೊಡೆದು ಸ್ಮೃತಿಯ ಕೋಶದೊಳಗೆ ಹಾಗೆಯೇ ಉಳಿದು ಆಗಾಗ ನೆನಪಿನ ಕಣ್ಣಿನಲ್ಲಿ ಪೊರೆ ಬಿಡುತ್ತಿರುತ್ತವೆ. ಬಾಲ್ಯಕಾಲದ ಕಾಡಿನಲ್ಲಿ ಅಲೆವ ಹೊತ್ತಲ್ಲಿ ಇವು ತೊಡರು ಬಳ್ಳಿಗಳಂತೆ ಮತ್ಮತ್ತೆ ಕಾಲಿಗೆ ತೊಡರಿಕೊಳ್ಳುತ್ತಿರುತ್ತವೆ. ಕಣ್ಮುಂದೆ ಬಂದು ಮಾತಿಗಿಳಿಯುತ್ತಿರುತ್ತವೆ. ಈ ಪೈಕಿ ಈ ಎರೆನೆತ್ತಿಯೂ ಒಂದು.

(ಎಸ್.‌ ಗಂಗಾಧರಯ್ಯ)

ಇದೊಂದು ಕೊಂಚ ಕಡಿದಾದ ಇಳುಕಲಿನ ದಿಬ್ಬ. ಮಲ್ಟಿ ಅಂದರೂ ನಡೆಯುತ್ತೆ. ಇದರ ನೆತ್ತಿ ಪೂರಾ ಫಲವತ್ತಾದ ಎರೆ ಮಣ್ಣಿನಿಂದ ಕೂಡಿರುವ ಕಾರಣಕ್ಕೋ ಕೊಂಚ ದೂರದಿಂದ ನಿಂತು ನೋಡಿದರೆ ಹುಲ್ಲೆಯ ಕೊಂಬೊಂದರಂತೆ ಚೂಪಾಗಿ ಕಾಣುವ ಕಾರಣಕ್ಕೋ ಇದಕ್ಕೆ `ಎರೆನೆತ್ತಿ’ ಅನ್ನುವ ಹೆಸರು ಬಂದಿರಬಹುದು. ಇದರ ಒಂದು ಬದಿಯಲ್ಲಿ ಚಿಕ್ಕೆರೆ ಹಳ್ಳ ಅಂತ ಕರೆಯಲ್ಪಡುವ ಹಳ್ಳ ಹರಿಯುತ್ತೆ. ಈಗ ಚಿಕ್ಕೆರೆ ಅನ್ನೋದು ಪೂರಾ ಮಂಗಮಾಯವಾಗಿದೆ. ಅದರ ಅಂಗಳ ಪೂರಾ ಗದ್ದೆ ಬಯಲಾಗಿದೆ. ಮಳೆಗಾಲದಲ್ಲಿ ಹರಿವ ಹಳ್ಳದ ನೀರು ಕೆರೆಯ ಅಂಗಳವನ್ನು ಸವರಿಕೊಂಡು ಅರೆ ಒಡೆದ ಕೆರೆಯ ಏರಿಯ ಮುಖೇನಾ ಹಿಂಬದಿಯ ಹೊಲಮಾಳ ಸೇರುತ್ತದೆ. ಮತ್ತೊಂದು ಬದಿಯಲ್ಲಿ ಒಂದು ಕಾಲದಲ್ಲಿ ಸುವರ್ಣಮುಖಿ ನದಿ ಹುಟ್ಟಿ ಹರಿಯುತ್ತಿದ್ದ ಬಯಲು. ಆ ಬಯಲಿನಲ್ಲಿ ಈಗ ತುಂಬಾನೇ ಅಪರೂಪವಾಗಿರುವ ಕಮರದ ವನವಿತ್ತಂತೆ. ಅದರಾಚೆಗೆ ವಚನಕಾರ ಸಿದ್ಧರಾಮ ಒಂದಷ್ಟು ದಿನ ತಂಗಿದ್ದ, ಅಂತೆಯೇ ಆಗ ಅವನೊಂದು ಕೆರೆಯನ್ನು ಕಟ್ಟಿದ್ದ ಅನ್ನುವ ಪ್ರತೀತಿ ಇರುವ ಪಟ್ಟದದೇವರ ಕೆರೆ. ಮತ್ತದರ ತಡಿಯಲ್ಲಿ ಸಿದ್ದಪ್ಪ ದೇವರ ಗುಡಿ. ಕೆರೆಯ ಆಚೆ ಬದಿಗೆ `ಆಚೆಬಾರೆ’ ಅಂತ ಕರೆಯಲ್ಪಡುವ ಈಗಲೂ ಕೊಂಚ ದಟ್ಟವಾಗಿರುವ ಬಯಲುಸೀಮೆಯ ಕಾಡು.

ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನೂರಾರು ಕುರಿಗಳನ್ನು ಸಾಕಿದ್ದರು. ಊರಾಚೆಯ `ಬಳ್ಸಾ ಕಟ್ಟೆ’ಯ ಬದಿಯ ದಿಬ್ಬದಲ್ಲಿ ಕುರಿ ಗೂಡಿತ್ತು. ಅದರ ಸುತ್ತಲೂ ಕಾರೆ, ಜಾಲಿ, ತರಾದ, ತೊಡರುಮುಳ್ಳು ಮುಂತಾದವುಗಳಿಂದ ಕೂಡಿದ್ದ ದಪ್ಪನೆಯ ಬೇಲಿಯಿತ್ತು. ಮಳೆಗಾಲದಲ್ಲಿ ಅಲ್ಲದೆ ಸತೊಂಭತ್ತು ಕಾಲವೂ ಈ ಕಟ್ಟೆಯಲ್ಲಿ ನೀರಿರುತ್ತಿತ್ತು. ಈ ಎರೆನೆತ್ತಿಗೂ ನಮ್ಮ ಕುರಿಗೂಡಿಗೂ ಒಂದೆರಡು ಫರ್ಲಾಂಗುಗಳ ದೂರವಿತ್ತು. ಸಂಜೆಗೇ ಊಟ ಮುಗಿಸಿಕೊಂಡು ಅಜ್ಜ ಕುರಿಗೂಡಿನ ಕಾವಲಿಗಾಗಿ ಹೋಗುತ್ತಿದ್ದ. ಕುರಿಗೂಡಿನ ಮಂಚಿಗೆಯಲ್ಲಿ ಮಲಗುವುದು, ಆ ಗೂಡಿನ ಕಮ್ಮನೆಯ ವಾಸನೆ, ಎಳೆಮರಿಗಳ ಚಿಣ್ಣಾಟ, ಮಂಚಿಗೆಯ ಮೇಲಿಂದ ಕಾಣುತ್ತಿದ್ದ ಇರುಳ ಮುಗಿಲು-ಹಿಂಗೆ ನನಗೆ ಅದೊಂದು ಬಲು ಇಷ್ಟದ ತಾಣವಾಗಿತ್ತು. ಹಂಗಾಗಿ ಕೆಲವೊಮ್ಮೆ ಅತ್ತೂಕರೆದು ಅಜ್ಜನೊಂದಿಗೆ ಅಲ್ಲಿಗೆ ನಾನೂ ಹೋಗುತ್ತಿದ್ದೆ. ಅಂಥ ಹೊತ್ತಲ್ಲಿ ಕೆಲವು ರೋಚಕ ಸಂಗತಿಗಳನ್ನು ಅಜ್ಜನ ಬಾಯಿಂದ ಕೇಳಿದ್ದೆ. ಅಂಥ ಸಂಗತಿಗಳಲ್ಲಿ ಈ ಎರೆನೆತ್ತಿಯೂ ಒಂದು.

ಅಜ್ಜ ಚಿಕ್ಕವನಿದ್ದಾಗ ಜನ ಎರೆನೆತ್ತಿಯವರೆಗೆ ಹೋಗಲು ಹೆದರುತ್ತಿದ್ದರಂತೆ. ಎರೆನೆತ್ತಿಯಿಂದಲೇ ಕಾಡು ಶುರುವಾಗುತ್ತಿತ್ತಂತೆ. ಆಗೆಲ್ಲಾ ಹುಲಿ ಚಿರತೆಗಳ ಕಾಟವಿತ್ತಂತೆ. ರಾತ್ರಿ ಹೊತ್ತು ಚಿರತೆಗಳು ನಾಯಿಗಳ ಬೇಟೆಗಾಗಿ ಕೆಲವೊಮ್ಮೆ ಊರೊಳಕ್ಕೇ ನುಗ್ಗುತ್ತಿದ್ದವಂತೆ. ಹಂಗಾಗಿ ಸಂಜೆಗೇ ಊರಿಗೂರೇ ಗಪ್ಪಾಗಿಬಿಡುತ್ತಿತ್ತಂತೆ. ತಿನ್ನಲು ಏನೂ ಸಿಗದಿದ್ದಾಗ ಚಿರತೆಗಳು ಏಕಾಏಕಿ ಕುರಿಗೂಡುಗಳಿಗೆ ನುಗ್ಗಿ ಬಿಡುತ್ತಿದ್ದವಂತೆ. ಆ ಕಾರಣಕ್ಕೇ ಕುರಿಗೂಡುಗಳ ಸುತ್ತಲೂ ಒಂದೆರಡು ಮಾರು ಅಗಲದ ಥರಾವರಿ ಕಾಡು ಮುಳ್ಳುಗಳಿಂದ ಕೂಡಿರುತ್ತಿದ್ದ ದಪ್ಪನೆಯ ಬೇಲಿ ಹಾಕುತ್ತಿದ್ದರಂತೆ. ಎಷ್ಟೋ ಸಾರ್ತಿ ಎರೆ ನೆತ್ತಿ ಈಚೆ ಬದಿಯಲ್ಲಿ ದನ ಕುರಿ ಮೇಸಲು ಹೋಗುತ್ತಿದ್ದವರ ಮೇಲೂ ಎರಗಿಬಿಡುತ್ತಿದ್ದವಂತೆ. ಇಷ್ಟೆಲ್ಲದರ ನಡುವೆಯೂ ಪಟ್ಟದ ದೇವರ ಕೆರೆಯ ತಡಿಯ ಸಿದ್ದಪ್ಪನ ಗುಡಿಗೆ ವರ್ಷದಲ್ಲಿ ಒಂದೆರಡು ಹಬ್ಬಗಳಲ್ಲಿ ಕಡ್ಡಾಯವಾಗಿ `ಎಡೆ’ತೆಗೆದುಕೊಂಡು ಹೋಗಬೇಕಿತ್ತಂತೆ. ಅಂಥ ಹೊತ್ತಲ್ಲಿ ಅಲ್ಲಿಗೆ ಹೋಗುವವರೆಲ್ಲಾ ಗುಂಪಾಗಿ ಹೋಗಿ ಗುಂಪಾಗೇ ಬರುತ್ತಿದ್ದರಂತೆ. ಹಿಂಗೆ ಪ್ರಾಣಿಗಳ ಕಾಟದ ಜೊತೆಗೆ ಎರೆನೆತ್ತಿಯ ಕಾಡಿನೊಳಕ್ಕೆ ಆಗಾಗ ದೂರದ ಊರುಗಳಿಂದ ದರೋಡೆಕೋರರು ಬಂದು ಸೇರಿಕೊಂಡುಬಿಡುತ್ತಿದ್ದರಂತೆ. ಆಗ ಅಪ್ಪಿತಪ್ಪಿಯೂ ಸುತ್ತಲ ಹಳ್ಳಿಗಳ ಜನರು ಅತ್ತ ಸುಳಿಯುತ್ತಿರಲಿಲ್ಲವಂತೆ. ಪೊಲೀಸರಿಗೆ ದೂರು ಕೊಟ್ಟರೂ ಅತ್ತ ಹೋಗಲು ಅವರೂ ಹಿಂಜರಿಯುತ್ತಿದ್ದರಂತೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಕಳ್ಳತನ ಮಾಡಿದ ಮೇಲೆ ಆ ದರೋಡೆಕೋರರು ಅವರಾಗಿಯೇ ಜಾಗ ಖಾಲಿ ಮಾಡುತ್ತಿದ್ದರಂತೆ. ಎರೆನೆತ್ತಿಯ ಬಗ್ಗೆ ಇಂಥ ಪುಕಾರುಗಳನ್ನು ನನ್ನ ಅಜ್ಜನಷ್ಟೇ ಅಲ್ಲ ಊರಿನ ಹಲವು ಹಿರಿಯ ತಲೆಗಳು ಹೇಳುತ್ತಿದ್ದುದರಿಂದ ಅದು ನನ್ನಂಥವರೊಳಗೆ ಒಂದು ನಿಗೂಢ ಲೋಕವಾಗಿ ಉಳಿದುಬಿಟ್ಟಿತ್ತು.

ನಾನು ಬೆಳೆದು ದೊಡ್ಡವನಾಗುವ ಹೊತ್ತಿಗೆ ಎರೆನೆತ್ತಿಯ ಕಾಡಿನ ಮರಗಳೆಲ್ಲಾ ಮಂಗಮಾಯವಾಗಿ ತರಾದ ಮುಳ್ಳಿನ ಗಿಡಗಳು ಬ್ಯಾಟೆ ಗಿಡದ ಗುತ್ತಿಗಳು ಬಂದ್ರೆ ಸೊಪ್ಪಿನ ಪೊದೆಗಳು ಆಳೆತ್ತರದ ಬ್ಯಾಟೆಗುತ್ತಿಗಳು ಮಾತ್ರ ಉಳುಕಂಡಿದ್ದವು. ಸೌದೆಗಾಗಿ ತಡಕಾಡುವಾಗ ಕೆಲವೊಮ್ಮೆ ನಮಗೆ ನೆಲಕತ್ನವಾಗಿರುತ್ತಿದ್ದ ಶ್ರೀಗಂಧದ ಬುಡಗಳು ಸಿಕ್ಕುತ್ತಿದ್ದವು. ಹೆಂಗೋ ಮಾಡಿ ಅವುಗಳ ಚಕ್ಕೆಗಳನ್ನು ಎಬ್ಬಿಕೊಂಡು ಸೌದೆಯ ಹೊರೆಯೊಳಕ್ಕೆ ಸೇರಿಸಿಕೊಂಡು ತಂದರೂ ಮನೆಗಳಲ್ಲಿ ಅರಣ್ಯ ಇಲಾಖೆಯವರಿಗೆ ಹೆದರಿ ಅವುಗಳನ್ನು ಒಲೆಗಳಿಗೆ ಇಡುತ್ತಿರಲಿಲ್ಲ. ಬದಲಿಗೆ ಕಲ್ಲಿನ ಮೇಲೆ ತೇದು ವಾರದ ದಿನ, ಹಬ್ಬ ಹರಿದಿನಗಳಲ್ಲಿ ಹಣೆಗೆ ಇಟ್ಟುಕೊಳ್ಳಲು ಬಳಸುತ್ತಿದ್ದರು. ಆ ಚೆಕ್ಕೆಗಳ ಘಮಲಿಗೆ ಮಾರುಹೋಗುತ್ತಿದ್ದ ನಾವುಗಳು ಅವರೆ ಅಥವಾ ಜೋಳದ ಹೊಲಗಳನ್ನು ಕಾಯುವ ಹೊತ್ತಲ್ಲಿ ದೊಡ್ಡವರಿಗೆ ಕಾಣದಂತೆ ಕದ್ದೊಯ್ದು ಅವುಗಳಿಗೆ ಬೆಂಕಿಕೊಟ್ಟು ಉರಿಸಿ ಘಮಲನ್ನು ಅನುಭವಿಸುತ್ತಿದ್ದೆವು. ಎರೆನೆತ್ತಿಯಲ್ಲಿ ಸಮೃದ್ಧವಾಗಿ ಬ್ಯಾಟೆ ಗಿಡಗಳಿದ್ದವು. ಅವುಗಳಲ್ಲಿ ಯಥೇಚ್ಛವಾಗಿ ಕೆಮ್ಮಣ್ಣು ಜೀರಿಂಬೆಗಳಿರುತ್ತಿದ್ದವು. ನನ್ನ ವಾರಿಗೆಯವರಿಗೆ ಎರೆನೆತ್ತಿ ಇಷ್ಟವಾಗಲು ಇದೂ ಒಂದು ಕಾರಣವಾಗಿತ್ತು. ಇದರ ಜೊತೆಗೆ ಮತ್ತೊಂದು ಕಾರಣವಿತ್ತು. ಅದೆಂದರೆ ಅಲ್ಲಿ ವರ್ಷದಲ್ಲಿ ಕೆಲವು ತಿಂಗಳುಗಳನ್ನು ಬಿಟ್ಟರೆ ಉಳಿದಂತೆ ಖಾಯಮ್ಮಾಗಿರುತ್ತಿದ್ದ ಅಲೆಮಾರಿ ಜನಾಂಗದವರ ಗುಡಾರಗಳು. ರಜೆ ದಿನಗಳಲ್ಲಿ ಕೆಮ್ಮಣ್ಣು ಜೀರಿಂಬೆಗಳಿಗಾಗಿ ಮನೆಯವರಿಗೆ ಗೊತ್ತಿಲ್ಲದಂತೆ ಎರೆನೆತ್ತಿಗೆ ಹೋಗುತ್ತಿದ್ದ ನಮಗೆ ಗುಡಾರಗಳಲ್ಲಿರುತ್ತಿದ್ದ ಸುಡುಗಾಡು ಸಿದ್ಧರು, ದೊಂಬಿದಾಸರು, ಹಕ್ಕಿಪಿಕ್ಕಿಗಳು ಮುಂತಾದವರ ವೇಷಭೂಷಣಗಳು, ಯಾವ ಸ್ಕೂಲುಗೀಲಿನ ಹಂಗಿಲ್ಲದೆ ಅದೂ ಇದೂ ಆಟವಾಡಿಕೊಂಡಿರುತಿದ್ದ ಮಕ್ಕಳು, ಅವರಾಡುತ್ತಿದ್ದ ನಮಗರಿಯದಿದ್ದ ಭಾಷೆ, ಗಿಡ ಮರಗಳ ಜೊತೆ ಒಂದಾಗಿ ಬದುಕುತ್ತಿದ್ದ ಅವರ ಜೀವನ ಕ್ರಮ, ಆ ವಯಸ್ಸಿನಲ್ಲಿ ನಮಗೆ ಏನು ಅಂತ ಅರ್ಥವಾಗದಿದ್ದರೂ ಅವರುಗಳ ಬಗ್ಗೆ ನಮ್ಮೊಳಗೆ ವಿಶೇಷ ಕುತೂಹಲವನ್ನು ಹುಟ್ಟಾಕುತ್ತಿದ್ದವು. ಹಂಗಾಗಿ ಒಂದೆರಡು ಜೀರಿಂಬೆಗಳು ಸಿಕ್ಕರೆ ಸಾಕು ಅವುಗಳನ್ನು ಹಿಡಿದು ಖಾಲಿ ಬೆಂಕಿಪೊಟ್ಟಣದೊಳಕ್ಕೆ ಕೂಡಾಕಿಕೊಂಡವರೇ ನಾವೆಲ್ಲಾ ಸೀದಾ ಹೋಗಿ ಅಲೆಮಾರಿ ಗುಡಾರಗಳ ಬಳಿ ಜಮಾಯಿಸುತ್ತಿದ್ದೆವು.

ಹಿಂಗೆ ಎಂಥದೋ ರೊಮಾಂಚನ ಹುಟ್ಟಿಸುತ್ತಿದ್ದ ಅವರ ಒಟ್ಟು ಬದುಕಿಗೆ ಅದೊಂದು ದಿನ ಸುತ್ತಲ ಹಳ್ಳಿಗರು ಸೇರಿಕೊಂಡು ಅಲೆಮಾರಿಗಳ ಮೇಲೆ ಕಳ್ಳತನಗಳ ಆರೋಪ ಹೊರಿಸಿ, ಮಕ್ಕಳು ಹೆಂಗಸರು ಅನ್ನದೆ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆಯುತ್ತಾ ಗುಡಾರಗಳಿಗೆಲ್ಲಾ ಬೆಂಕಿಯಿಟ್ಟು ಬೇಯಿಸುತ್ತಾ ವಿಕೃತಿ ಮೆರೆಯುವಂಥ ಹೊತ್ತಲ್ಲಿ ಮುಗಿಲು ಮಟ್ಟಿದ್ದ ಅವರುಗಳ ಆ ಅನಾಥ ಆಕ್ರಂದನ ನಮ್ಮನ್ನು ದಿಕ್ಕೆಡಿಸಿತ್ತು. ಆ ಆಕ್ರಂದನ, ಆ ನರಳಾಟ, ಆ ಬೆಂಕಿ ನನ್ನೊಳಗೆ ಇನ್ನೂ ಆರದಿರುವ ಕಾರಣಕ್ಕೆ ಒಂದೆರಡು ಕಥೆಗಳಲ್ಲಿ ಅದು ಮುಖ್ಯ ಧಾತುವಾಗಿ ಕಾಣಿಸಿಕೊಂಡಿದೆ.

ಅದಾದ ಮೇಲೆ ಮತ್ತೆ ಯಾವತ್ತೂ ಯಾವ ಅಲೆಮಾರಿಗಳ ಗುಂಪೂ ಅತ್ತ ಬರಲಿಲ್ಲ. ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆಲ್ಲಾ ಈಟೀಟೇ ಬೋಳಾಗತೊಡಗಿದ್ದ ಎರೆನೆತ್ತಿ ಈಗ ಪೂರಾ ಹೊಲಮಾಳವಾಗಿಬಿಟ್ಟಿದೆ. ಅಲ್ಲಲ್ಲಿ ಬಗರ್‌ಹುಕುಂ ಸಾಗುವಳಿದಾರರ ಮನೆಗಳಾಗಿವೆ. ಯಾವ ಕಾರಣಕ್ಕೋ ಏನೋ ಅಲ್ಲಲ್ಲಿ ಬ್ಯಾಟೆ ಗಿಡಗಳಿದ್ದರೂ ಕೆಮ್ಮಣ್ಣು ಜೀರಿಂಬೆಗಳಿರಲಿ ಮಾಮೂಲಿ ಪುಟಾಣಿ ಜೀರಿಂಬೆಗಳ ಸಂತತಿಯೂ ಕಣ್ಮರೆಯಾಗುತ್ತಿದೆ. ಆದರೆ ನನ್ನೊಳಗೆ ಈ ಎರೆನೆತ್ತಿ, ಈ ಗಂಧದ ಮರದ ಬುಡಗಳು, ಈ ಕೆಮ್ಮಣ್ಣು ಜೀರಿಂಬೆ ಹಾಗೂ ಅಲೆಮಾರಿಗಳು, ಅವರ ಗುಡಾರಗಳು ಆಗಾಗ ನನ್ನೊಳಗೆ ಆಗಿನ ಅದೇ ಸ್ಥಿತಿಯಲ್ಲಿ ಪ್ರತ್ಯಕ್ಷವಾಗುತ್ತಾ ರೋಮಾಂಚನವನ್ನೂ ಸಂಕಟವನ್ನೂ ದೂಡುತ್ತಿರುತ್ತವೆ. ಎರೆನೆತ್ತಿ ನೆನಪಾದರೆ ಮಿಕ್ಕವುಗಳು ತಂತಾನೇ ಎದುರು ನಿಲ್ಲುತ್ತವೆ. ಹಂಗಾಗಿ ಈ ಇವುಗಳೆಲ್ಲಾ ಒಟೈಸಿರುವ, ನನ್ನ ಸ್ಮೃತಿಯ ಒಂದು ಮುಖ್ಯ ಭಾಗವೇ ಆಗಿರುವ ಕಾರಣಕ್ಕೇ ಈ ತನಕದ ಕಥನಕ್ಕೆ `ಎರೆನೆತ್ತಿ’ಅಂತ ಕರೆದಿದ್ದೇನೆ.

(ಕೃತಿ: ಎರೆನೆತ್ತಿ (ಎಸ್.ಗಂಗಾಧರಯ್ಯ ಅವರ ಈ ತನಕದ ಕತೆಗಳು), ಲೇಖಕರು: ಎಸ್.ಗಂಗಾಧರಯ್ಯ, ಪ್ರಕಾಶಕರು: ಬಿಸಿಲ ಕೋಲು, ಬೆಲೆ: 500/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ