Advertisement
ಒಂದು ದೇಹದಾನದ ಕಥೆ: ಅಬ್ದುಲ್ ರಶೀದ್ ಅಂಕಣ

ಒಂದು ದೇಹದಾನದ ಕಥೆ: ಅಬ್ದುಲ್ ರಶೀದ್ ಅಂಕಣ

ಹದಿನೇಳನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಹಾಲೇರಿ ವಂಶದ ಮುದ್ದುರಾಜ ಮಡಿಕೇರಿಯಲ್ಲಿ ಕಟ್ಟಿದ ಕೋಟೆಯೊಳಗೆ ಈಗ ಜಿಲ್ಲಾದಿಕಾರಿಗಳ ಖಚೇರಿಯೂ, ನ್ಯಾಯಾಲಯಗಳ ಸಂಕೀರ್ಣವೂ ಕಾರ್ಯನಿರ್ವಹಿಸುತ್ತಿದೆ. ತೀರ ಇತ್ತೀಚಿನವರೆಗೆ ಜಿಲ್ಲಾ ಕಾರಾಗೃಹವೂ ಇಲ್ಲೇ ಇತ್ತು. ಜೈಲಿನಲ್ಲಿ ಖೈದಿಗಳಾಗಿರುವ ತಮ್ಮ ಗಂಡನನ್ನೋ, ತಂದೆಯನ್ನೋ, ಮಗನನ್ನೋ ಕಾಣಲು ಬಂದ ಅನಧಿಕೃತ ಸಂದರ್ಶಕರು ಕೋಟೆಯ ಎತ್ತರದ ಒಂದು ಪಾಳಿಯನ್ನು ಏರಿ ಕೆಳಕ್ಕೆ ನೋಡುತ್ತ ಕೈಬಾಯಿ ಸಂಜ್ಞೆಯಲ್ಲಿ ಅವರೊಡನೆ ಕಷ್ಟಸುಖಗಳನ್ನು ಹೇಳಿಕೊಳ್ಳುವುದನ್ನು ನೋಡಲು ನಾನೂ ಆಗಾಗ ಕೋಟೆಯ ಪಾಳಿ ಹತ್ತಿ ಕೂತಿರುತ್ತಿದ್ದೆ.

ನಾನಾ ಕಾರಣಗಳಿಗಾಗಿ ಜೈಲು ಸೇರಿರುವ ಖೈದಿಗಳು ಬೀಡಿ ಸೇದುತ್ತಲೋ, ಸ್ನಾನ ಮಾಡುತ್ತಲೋ ನಡುನಡುವೆ ತಮ್ಮನ್ನು ನೋಡಲು ಯಾರಾದರೂ ಬಂದಿರುವರೇ ಎಂದು ತಲೆಯೆತ್ತಿ ಮೇಲೆ ನೋಡಿ ಮತ್ತೆ ತಮ್ಮತಮ್ಮ ಜೇಲಿನ ಕೆಲಸಗಳಲ್ಲಿ ಮುಳುಗುತ್ತಿದ್ದರು. ಪುಟ್ಟ ಕಂದಮ್ಮಗಳನ್ನು ಹೊತ್ತುಕೊಂಡ ತಾಯಂದಿರು, ತುಂಬು ಹೊಟ್ಟೆಯ ಬಸುರಿ ತರುಣಿಯರು ಪಡಬಾರದ ಕಷ್ಟ ಪಟ್ಟು ಕೋಟೆಯ ಪಾಳಿಯನ್ನು ಏರಿ ಕೆಳಗೆ ಜೇಲಿನಲ್ಲಿ ಓಡಾಡುತ್ತಿರುವವರಲ್ಲಿ ತಮ್ಮ ಗಂಡ ಯಾರು, ಮಗುವಿನ ತಂದೆ ಯಾರು ಎಂದು ಊಹಿಸಿಕೊಂಡು ಕೈ ಬಾಯಿ ಸಂಜ್ಞೆಯಲ್ಲಿ ಅವರೊಡನೆ ಕಷ್ಟ ಪಟ್ಟು ಸಂವಹಿಸುತ್ತಾ ಮುಂದಿನ ಇದೇ ವಾರ ಇದೇ ಸಮಯದಲ್ಲಿ ಮತ್ತೆ ಇದೇ ಜಾಗದಿಂದ ಅವರನ್ನು ಕಾಣಲು ಬರುವುದಾಗಿ ಹೇಳಿಕೊಳ್ಳುವುದೂ, ಅದನ್ನು ಅರಿತವರಂತೆ ಆ ಖೈದಿಗಳು ತಲೆಯಾಡಿಸಿ ಸಮ್ಮತಿಸುವುದೂ ಇದೆಲ್ಲ ನೋಡಿದರೆ ಒಂಥರಾ ಕರುಳು ಕಲಸಿದಂತಾಗಿ ಇನ್ನು ಮುಂದೆ ಇಲ್ಲಿ ಬರಲೇಬಾರದೆಂದು ತೀರ್ಮಾನಿಸಿಬಿಟ್ಟಿದ್ದೆ. ಅದಕ್ಕೆ ಸರಿಯಾಗಿ ಈ ಕಾರಾಗೃಹವೂ ಊರಿಂದ ಬಲುದೂರಕ್ಕೆ ಸ್ಥಳಾಂತರವಾಗಿ ಆನಂತರ ಕೋಟೆಯ ಕಡೆ ನಾನು ಹೋಗುವುದೇ ಕಡಿಮೆಯಾಗಿತ್ತು.

ಆದರೆ ಕಳೆದ ಮಂಗಳವಾರ ಇದ್ದಕ್ಕಿದ್ದಂತೆ ಕೋಟೆಯೊಳಕ್ಕೆ ಹೋಗಲೇಬೇಕಾಗಿ ಬಂತು. ಕಳೆದ ಮೂವತ್ತು ವರ್ಷಗಳಿಂದ ಕೋಟೆಯೊಳಗಿನ ನ್ಯಾಯಾಲಯದ ಕಟ್ಟಡದ ಹಿಂದುಗಡೆಯ ಶೆಡ್ಡಿನಲ್ಲಿ ಜಾಬ್ ಟೈಪಿಸ್ಟಳಾಗಿ ಕೆಲಸ ಮಾಡುತ್ತಿರುವ ಶ್ರೀಮತಿ ಚಂದುರ ಶಾಂತಿ ರಾಜಾ ಅವರನ್ನು ಆವತ್ತು ಯಾಕೋ ನೋಡಬೇಕೆನಿಸಿತ್ತು. ಚಂದುರ ಶಾಂತಿ ತೀರಿಹೋದ ತಮ್ಮ ಗಂಡನ ಮೃತ ದೇಹವನ್ನು ಒಂದು ವಾರದ ಹಿಂದೆ ಹತ್ತಿರದ ವೈದ್ಯಕೀಯ ಕಾಲೇಜೊಂದಕ್ಕೆ ಸಂಶೋಧನೆಯ ಉದ್ದೇಶಕ್ಕಾಗಿ ಉಚಿತವಾಗಿ ದಾನ ಮಾಡಿದ್ದರು. ಆದರೆ ಮುಗ್ದರಾದ ಅಜ್ಞಾನಿಗಳು ಯಾರೋ ಈಕೆ ತೀರಿಹೋದ ತನ್ನ ಗಂಡನ ದೇಹವನ್ನೂ ಹಣಕ್ಕಾಗಿ ಮಾರಿಕೊಂಡಿದ್ದಾಳೆ ಎಂದು ಸುದ್ದಿ ಹಬ್ಬಿಸಿ ಮೊದಲೇ ಜರ್ಜರಿತರಾಗಿದ್ದ ಚಂದುರ ಶಾಂತಿ ಭೂಮಿಯೊಳಕ್ಕೆ ಕುಸಿದು ಹೋದಂತಾಗಿದ್ದರು. ಅವರನ್ನು ಸಂತೈಸಿದ ಹಾಗೂ ಆಯಿತು ಹಾಗೂ ಬರೀ ಫೋನಲ್ಲಿ ಮಾತಾಡಿ ಗೊತ್ತಿದ್ದ ಅವರನ್ನು ನೋಡಿದಂತೆಯೂ ಆಯಿತು ಎಂದು ಹೋಗಿ ನೋಡಿದರೆ ನ್ಯಾಯಾಲಯದ ಹಿಂದೆ ಜಾಬ್ ಟೈಪಿಸ್ಟರಿಂದ ಕಿಕ್ಕಿರಿದು ತುಂಬಿ ಹೋಗಿದ್ದ ಶೆಡ್ಡಿನ ಒಂದು ಮೂಲೆಯಲ್ಲಿ ವಯಸ್ಸಾಗಿರುವ ಗುಬ್ಬಚ್ಚಿಯಂತೆ ಕಣ್ಣಿಗೊಂಡು ಕನ್ನಡಕ ಏರಿಸಿಕೊಂಡು ಕೂತಿದ್ದ ಶಾಂತಿಯವರು ಮೊದಲೇ ಗೊತ್ತಿದ್ದವರ ಹಾಗೆ ಮುಗುಳ್ನಕ್ಕರು. ಅವರು ನನಗೆ ಗೊತ್ತಿರುವವರೇ ಆಗಿದ್ದರು.

ಮಡಿಕೇರಿಯ ಬೀದಿಗಳಲ್ಲಿ ಗಂಭೀರವಾಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದ ಅವರನ್ನು ನಾನು ಹಲವು ಬಾರಿ ಗಮನಿಸಿದ್ದೆ. ತಮ್ಮ ಬಾಬ್ ಕಟ್ ಕೂದಲನ್ನು ಓರಣವಾಗಿ ಬಾಚಿಕೊಂಡು ರಸ್ತೆಯ ಎಡಬಲವನ್ನು ಸರಿಯಾಗಿ ಗಮನಿಸಿಕೊಂಡು, ಯಾವ ತಿರುವಿನಲ್ಲಿ ಎಷ್ಟನೆಯ ಗೇರನ್ನು ಹಾಕಬೇಕೆಂದು ಮೊದಲೇ ತೀರ್ಮಾನಿಸಿದ್ದವರಂತೆ ಗೇರು ಬದಲಿಸುತ್ತಾ, ನಡುವಲ್ಲಿ ಎದುರಾಗುವ ಟ್ರಾಫಿಕ್ ಪೋಲೀಸಿನವರಿಗೆ ಒಂದು ಒಳ್ಳೆಯ ಮಂದಹಾಸವನ್ನು ತೋರಿ ಎಡಬಲಕ್ಕೆ ತಿರುಗುವುದಕ್ಕಿಂತ ಬಹಳ ಮೊದಲೇ ಅದಕ್ಕೆ ತಕ್ಕ ಹಾಗಿರುವ ಸಿಗ್ನಲ್ ದೀಪವನ್ನು ತೋರಿಸುತ್ತಾ ಸಾಗುತ್ತಿದ್ದ ಅವರು ಸಹಜವಾಗಿಯೇ ನನ್ನ ಕುತೂಹಲ ಕೆರಳಿಸಿದ್ದರು.

ಇವರು ಬಹುಶಃ ಯಾರೋ ಕಾಫೀ ಪ್ಲಾಂಟರೋ, ನಿವೃತ್ತ ನ್ಯಾಯಾದೀಶೆಯೋ ಅಥವಾ ಸಮಾಜ ಸೇವಕಿಯೋ ಎಂದು ಅಂದುಕೊಂಡಿದ್ದ ನನಗೆ ಇವರೇ ತನ್ನ ಗಂಡನ ಮೃತದೇಹವನ್ನು ಒಳ್ಳೆಯ ಮನಸಿನಿಂದ ವೈದ್ಯಕೀಯ ಕಾಲೇಜಿಗೆ ಒಪ್ಪಿಸಿ ಅದರಿಂದ ಉಂಟಾಗಿರುವ ಅಪಪ್ರಚಾರದಿಂದ ನೊಂದು ಹೋಗಿರುವ ಚಂದುರ ಶಾಂತಿ ಎಂದು ಅರಿವಾದಾಗ ಕರುಳು ಕಿತ್ತ ಹಾಗಾಯಿತು. ಆದರೆ ಅವರು ಅದು ಯಾವುದೂ ಲೆಕ್ಕಕ್ಕೇ ಇಲ್ಲವೆಂಬಂತೆ ತಮ್ಮ ವೈಧವ್ಯದ ಸಂಕೇತವಾಗಿ ಹೆಗಲ ಮೇಲೆ ಒಂದು ಬಿಳಿ ಮುಂಡನ್ನು ಏರಿಸಿಕೊಂಡು ತಮ್ಮ ಹಳೆಯ ಕಾಲದ ಟೈಪ್ ರೈಟರನ್ನು ಕುಟ್ಟುತ್ತಿದ್ದರು.

ಅವರ ಎದುರಲ್ಲಿ ಕುಳಿತುಕೊಂಡು ಟೈಪು ಮಾಡಿಸುತ್ತಿದ್ದ ಮನುಷ್ಯನೂ ಇದು ಯಾವುದೂ ಗೊತ್ತಿಲ್ಲದವನಂತೆ ತನ್ನ ಹಳೆಯ ಕಾಲದ ಆಸ್ತಿವ್ಯಾಜ್ಯದ ವಿವರಗಳನ್ನು ಇವರಲ್ಲಿ ಅರುಹುತ್ತಾ ದೂರೊಂದನ್ನು ಸಿದ್ದಪಡಿಸುತ್ತಿದ್ದ. ‘ಶಾಂತಿಯವರೇ ನಿಮ್ಮ ಕೆಲಸವನ್ನು ನೀವು ಮುಂದುವರಿಸಿ, ನನ್ನ ಕೆಲಸವನ್ನು ನಾನು ಮುಂದುವರಿಸುವೆ. ಆಮೇಲೆ ಸಂಜೆಯ ಹೊತ್ತು ನಿಮ್ಮ ಪೂರ್ತಿ ಕಥೆಯನ್ನು ಕೇಳುವೆ’ ಎಂದು ನಾನು ಅವರ ಫೋಟೋಗಳನ್ನು ಕ್ಲಿಕ್ಕಿಸತೊಡಗಿದೆ. ಉಳಿದ ಜಾಬ್ ಟೈಪಿಸ್ಟರೂ, ಟೈಪುಮಾಡಿಸಿಕೊಳ್ಳಲು ಬಂದವರೂ ನಮ್ಮಿಬ್ಬರನ್ನು ಕುತೂಹಲದಿಂದಲೂ ಅನುಮಾನದಿಂದಲೂ ನೋಡುತ್ತಿದ್ದರು.
ಇತ್ತೀಚೆಗೆ ಭೂಹಗರಣಗಳೂ ನಕಲಿ ದಾಖಲೆಗಳೂ ಹೇರಳವಾಗಿ ಸುದ್ದಿಮಾಡುತ್ತಿರುವುದರಿಂದ ಅದರ ಕುರಿತಾಗಿ ನಾನು ಫೋಟೋ ತೆಗೆಯುತ್ತಿರಬಹುದೆಂದು ಅವರಲ್ಲಿ ಕೆಲವರ ಅನುಮಾನವಾಗಿತ್ತು.

ಚುಟುಕಾಗಿ ಹೇಳುವುದಾದರೆ ಅರವತ್ಮೂರು ವರ್ಷದ ಶಾಂತಿಯವರು ಸುಮಾರು ಮೂವತ್ತೆಂಟು ವರ್ಷಗಳ ಹಿಂದೆ ರಾಜಾ ಅವರನ್ನು ಮದುವೆಯಾಗಿದ್ದರು. ಮದುವೆಗಿಂತ ಬಹಳ ಮೊದಲೇ ಸಣ್ಣವಳಿರುವಾಗಲೇ ಶಾಂತಿಯವರಿಗೆ ಗಂಡಸರು ಅಂದರೆ ಬಹಳ ಹೆದರಿಕೆಯಿತ್ತು. ಗಂಡು ಹುಡುಗರ ಮೊಣಗಂಟು ತಾಗಿದರೂ ಸಾಕು ಮಕ್ಕಳಾಗಿಬಿಡುತ್ತದೆ ಎಂದು ಶಾಂತಿಯವರನ್ನು ಅವರ ಅಜ್ಜಿ ಹೆದರಿಸಿದ್ದರು. ಹಾಗಾಗಿ ಶಾಲೆಗೆ ಹೋಗುವಾಗಲೂ ಬಸ್ಸಿನಲ್ಲಿ ಗಂಡು ಹುಡುಗರ ಮೊಣಕೈ ತಾಗದ ಹಾಗೆ ಸರ್ಕಸ್ಸು ಮಾಡಿಕೊಂಡು ನಿಲ್ಲುವುದು ಶಾಂತಿಯವರಿಗೆ ಬಹಳ ಕಷ್ಟವಾಗುತ್ತಿತ್ತಂತೆ.

ಅವರ ಶಾಲೆಯ ಹೆಡ್ಮಾಸ್ಟರು ನೋಡಲು ಭೀಮನ ಹಾಗೆ ಇದ್ದರಂತೆ. ತಪ್ಪು ಮಾಡದಿದ್ದರೂ ಹುಡುಗಿಯರ ಕೈಯ್ಯ ಮಣಿಗಂಟಿಗೆ ಸ್ಕೇಲಿನಿಂದ ಹೊಡೆಯುವುದು ಅವರ ಹವ್ಯಾಸವಾಗಿತ್ತಂತೆ. ಎಲ್ಲ ಹುಡುಗಿಯರ ಮೊಣಗಂಟೂ ಯಾವಾಗಲೂ ಊದಿಕೊಂಡಿರುತ್ತಿತ್ತಂತೆ.
ಹಾಗಾಗಿ ಲೇಟಾದ ಮೇಲೆ ಬಸ್ಸು ಸಿಗದೆ ಶಾಲೆಗೆ ಹೋಗದಿರಲು ಶಾಂತಿಯವರು ಗುಡಿಸಿದ ಅಂಗಳವನ್ನು ಮತ್ತೆಮತ್ತೆ ಗುಡಿಸುತ್ತಿದ್ದರಂತೆ. ಅದು ಅವರ ಅಪ್ಪನಿಗೆ ಗೊತ್ತಾಗಿ ಅವರೂ ಹೊಡೆಯುತ್ತಿದ್ದರಂತೆ. ಆಗಲೂ ಗುಬ್ಬಚ್ಚಿಯ ಹಾಗೆ ಇದ್ದ ಚಂದುರ ಶಾಂತಿಯವರು ಯಾವಾಗಲೂ ಬಸ್ಸಿನ ಡ್ರೈವರನ ಹಿಂದಿನ ಸೀಟಲ್ಲೇ ಕುಳಿತುಕೊಳ್ಳಲು ಹೆಣಗುತ್ತಿದ್ದರಂತೆ. ಆ ಬಸ್ಸಿನ ಡ್ರೈವರು ಬಸ್ಸು ಬಿಡುವುದನ್ನೂ, ಗೇರು ಬದಲಿಸುವುದನ್ನೂ ಕೂತಲ್ಲಿಂದಲೇ ನೋಡಿ ಕಲಿಯುತ್ತಿದ್ದ ಶಾಂತಿಗೆ ತಾನೂ ಒಬ್ಬಳು ದೊಡ್ಡ ಡ್ರೈವರಳಾಗಿ ಲೋಕವನ್ನೆಲ್ಲ ಸುತ್ತಬೇಕೆಂಬ ಬಯಕೆ ಇತ್ತಂತೆ. ಆದರೆ ಅದು ಕೈಗೂಡುವ ಮೊದಲೇ ಮದುವೆ ಮಾಡಿಬಿಟ್ಟರಂತೆ.

ಹಾಗೆ ಮದುವೆಯಾದ ಅವರ ಗಂಡ ಚಂದುರ ರಾಜ ಬಹಳ ಒಳ್ಳೆಯ ಮನುಷ್ಯ. ಆದರೆ ಸಿಕ್ಕಾಪಟ್ಟೆ ನಿಸ್ವಾರ್ಥಿ. ತನಗೆ ಹೆಂಡತಿಗೆ ಮಕ್ಕಳಿಗೆ ಎಂದು ಏನೂ ಮಾಡಿಕೊಳ್ಳಲಿಲ್ಲ. ಹಾಗಾಗಿ ಶಾಂತಿಯವರು ಕಳೆದ ಮೂವತ್ತು ವರ್ಷಗಳಿಂದ ಮಡಿಕೇರಿಯ ನ್ಯಾಯಾಲಯದ ಹಿಂದಿನ ಶೆಡ್ಡಿನಲ್ಲಿ ಜಾಬ್ ಟೈಪಿಸ್ಟಳಾಗಿ ದುಡಿದು ಸಮಾಜದಲ್ಲಿ ತಕ್ಕಮಟ್ಟಿಗೆ ಮುಂದೆ ಬಂದಿದ್ದಾರೆ. ಉಳಿದವರಿಗೂ ಸಹಾಯಮಾಡಿದ್ದಾರೆ. ಗಂಡಹೆಂಡತಿಯರಿಬ್ಬರೂ ಎಷ್ಟು ಒಳ್ಳೆಯವರು ಅಂದರೆ ತೀರಿಹೋದಮೇಲೆ ತಮ್ಮ ದೇಹ ಸುಟ್ಟು ಬೂದಿಯಾಗುವುದು ಬೇಡ, ಡಾಕ್ಟರ್ ವಿದ್ಯೆ ಕಲಿಯುವ ಮಕ್ಕಳು ತಮ್ಮಿಬ್ಬರ ದೇಹವನ್ನು ಕೊಯಿದು ಕಲಿಯಲಿ ಎಂದು ಇಬ್ಬರೂ ಸ್ವಂತ ಇಚ್ಚೆಯಿಂದ ದೇಹದಾನದ ಉಯಿಲು ಬರೆದಿದ್ದಾರೆ.

`ಮೊದಲು ಗಂಡ ತೀರಿಹೋಗಿದ್ದಾರೆ. ಅದಕ್ಕೆ ಅವರ ದೇಹವನ್ನು ಕೊಟ್ಟು ಬಂದೆ.ಇನ್ನು ನನ್ನ ಸರದಿ.ಅದಕ್ಕಾಗಿ ಕಾಯುತ್ತಿದ್ದೇನೆ’ ಅಂದು ಶಾಂತಿಯವರು ನಕ್ಕರು. `ನಿಮ್ಮ ಗಂಡನ ದೇಹವನ್ನು ಬಿಟ್ಟು ಬರುವಾಗ ಅದರೊಡನೆ ಏನು ಹೇಳಿ ಬಂದಿರಿ’ ಎಂದು ಕೇಳಿದೆ ‘ಚೆನ್ನಾಗಿರು ಗೆಳೆಯ, ಮೆಡಿಕಲ್ ಕಲಿಯುವ ಒಳ್ಳೆಯ ಹುಡುಗ ಹುಡುಗಿಯರು ನೋವಾಗದ ಹಾಗೆ ನೋಡಿಕೊಳ್ಳುತ್ತಾರೆ,ಬಾಯ್ ಬಾಯ್ ಟಾಟಾ’ ಎಂದು ಹೇಳಿಬಂದೆ ಎಂದು ಶಾಂತಿಯವರು ನಿರ್ವಿಣ್ಣರಾಗಿ ನಕ್ಕರು.

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ