Advertisement
ಓಬಿರಾಯನ ಕಾಲದ ಕತೆ: ಮಾ. ವರ್ಧಮಾನ ಹೆಗ್ಡೆಯವರು ಬರೆದ ಕತೆ “ಸುಕುಮಾರ’ ಯಾ `ಅಣ್ಣೀ”

ಓಬಿರಾಯನ ಕಾಲದ ಕತೆ: ಮಾ. ವರ್ಧಮಾನ ಹೆಗ್ಡೆಯವರು ಬರೆದ ಕತೆ “ಸುಕುಮಾರ’ ಯಾ `ಅಣ್ಣೀ”

ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು. ಅಣ್ಣಿಯು ವಿವಾಹಕ್ಕೆ ಯೋಗ್ಯನಾಗಿರುವುದರಿಂದ ಶೀಘ್ರದಲ್ಲಿಯೇ ಮದುವೆ ಮಾಡಿದಲ್ಲಿ ಮನೆಯಲ್ಲಿ ಇದ್ದಿರಬಹುದೆಂದು ನಿಶ್ಚಯಿಸಿ ಆತನಿಗೆ ಯೋಗ್ಯಕುಮಾರಿಯನ್ನು ಹುಡುಕಲು ಹೊರಟರು.
ಡಾ.ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಮಾ. ವರ್ಧಮಾನ ಹೆಗ್ಡೆ ಯವರು ಬರೆದ ಕತೆ “ಸುಕುಮಾರ’ ಯಾ `ಅಣ್ಣೀ”. 

 

ಕನ್ನಡ ಜಿಲ್ಲೆಯ ಜೈನ ಜಮೀನ್ದಾರರಲ್ಲಿ ಉಂಡಾಡಿ ನಾಗಪ್ಪ ಆರಿಗರು ಗ್ರಾಮದ ಒಂದನೇ ಗುರಿಕಾರರೂ, ಪಠೇಲರೂ ಆದ್ದರಿಂದ ಅಲ್ಲಿನ ನಿವಾಸಿಗಳೆಲ್ಲರೂ ಅವರನ್ನು ರಾಜರಂತೆ ಕಾಣುತ್ತಿದ್ದರು. ಆರಿಗರು ಸುಮಾರು ಇಪ್ಪತ್ತು ಕೋರ್ಜಿ ಬತ್ತ ಬೆಳೆಯುವ ಜಮೀನಿನ ಸ್ವಾಮಿಗಳು. ಆದರೆ ಕೇವಲ ಹಸ್ತಾಕ್ಷರ ಮಾಡುವಷ್ಟೇ ವಿದ್ಯಾವಂತರಾದ್ದರಿಂದ ಮನೆಯ ಶ್ಯಾನುಭೋಗರೂ, ಆಳುಗಳೂ ಮನೆಯಲ್ಲಿ ಸಿಕ್ಕಿದ ವಸ್ತುಗಳನ್ನು ಗುಟ್ಟಾಗಿ ಕತ್ತರಿಸುತ್ತಿದ್ದರು. ಆರಿಗರು ಎಲ್ಲಾ ವಿಷಯಗಳಲ್ಲಿ ನಿಶ್ಚಿಂತೆಯಾಗಿದ್ದರು. ಕುಲದೀಪಕ, ವಂಶವರ್ಧಕ ಪುತ್ರರತ್ನದ ಅಭಾವದುಃಖವು ಆಗಾಗ್ಗೆ ಪೀಡಿಸುತ್ತಿತ್ತು. ಚಿತೆ, ಚಿಂತೆಗಳಲ್ಲಿ ಕೇವಲ ಅನುಸ್ವಾರ ಮಾತ್ರವೇ ಹೆಚ್ಚು ಕಡಿಮೆ. ಚಿತೆಯೂ ನಿಯತ ಸಮಯದಲ್ಲಿ ಉರಿಯುವುದು, ಆದರೆ ಚಿಂತೆ ಎಂಬ ಅಗ್ನಿಯು ಸದೈವ ಕಾಯವನ್ನು ಕೃಶಮಾಡುತ್ತಾ ನಷ್ಟಭ್ರಷ್ಟವಾಗಿ ಮಾಡುವುದು ದೈವದೇವರುಗಳಿಗೆಷ್ಟೋ ಹರಿಕೆ ಹೇಳಿಕೊಂಡ ನಂತರ ಆರಿಗರ ಧರ್ಮಪತ್ನಿ ಕುಸುಮಾಜಮ್ಮನು ಗರ್ಭಿಣಿಯಾದಳು.

ಆಪ್ತಬಂಧುಗಳ ಸಂತೋಷಕ್ಕೆ ಪಾರವಿಲ್ಲ. ಅವರು ಕಳುಹಿಸಿದ ಬಗೆಬಗೆಯ ಕಜ್ಜಾಯಗಳು ತಿನ್ನುವವರಿಲ್ಲದೆ ಆರಿಗರ ಮನೆಯಲ್ಲಿ ಕೊಳೆಯುತ್ತಿದ್ದವು. ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಯಾಗಿರಬಹುದು. ಅಮ್ಮನು ಗಂಡು ಶಿಶುವನ್ನು ಹೆತ್ತಳು. ಆರಿಗರು ಸಾಕ್ಷಾತ್ ದೈವದೇವರೇ ಶಿಶುವಿನ ರೂಪವಾಗಿ ಆವತರಿಸಿದರೆಂದು ಬಹಳವಾಗಿ ಹಿಗ್ಗಿ ದಾನಾದಿಗಳನ್ನು ಮಾಡಿದರು. ನಾಮಕರಣದ ದಿನ ಶಿಶುವಿಗೆ `ಸುಕುಮಾರ’ ನೆಂಬ ಶುಭನಾಮವನ್ನಿಟ್ಟರು. ಆದರೆ ನೆರೆಹೊರೆಯವರೂ, ಮನೆಯವರೂ `ಅಣ್ಣಿ’ ಎಂಬ ಉಪನಾಮದಿಂದ ಕರೆಯುತ್ತಿದ್ದುದರಿಂದ ನಾವು ಹಾಗೆಯೇ ಕರೆಯುವ.

ಅಣ್ಣಿಯು ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತಾ ಒಂಭತ್ತನೇ ವರ್ಷದವನಾದನು. ಆರಿಗರು ಅಣ್ಣಿಯನ್ನು ಗ್ರಾಮದ ಸ್ಕೂಲಿಗೆ ಕಳುಹಿಸಬೇಕೆಂದರು. ಅದನ್ನು ಕೇಳಿ ಆರಿಗರ ತಾಯಿ ಚೆಲುವಮ್ಮನವರು `ನಮ್ಮ ಅಣ್ಣಿಗೇನು ಕಮ್ಮಿ? ವಿದ್ಯಾವಂತನಾಗಿ ಕಲ್ಲೇಕಟ್ಟರ ಪದವಿಯನ್ನು ಪ್ರಾಪ್ತಮಾಡಿ ಜೀವಿಸಿರಬೇಕೆ? ಸಾಧಾರಣ ಮನೆಗೆ ಬಂದ ಕಾಗದ ಪತ್ರಗಳನ್ನು ಓದುವಷ್ಟು ಅಕ್ಷರಾಭ್ಯಾಸ ಮಾಡಿಸಿದರೆ ಸರಿ. ವಿದ್ಯಾಲಯಕ್ಕೆ ಕಳುಹಿಸಿ ಮಾಸ್ಟರರಿಂದ ನಮ್ಮ ಮುದ್ದು ಅಣ್ಣಿಗೆ ಹೊಡೆಯಿಸಬೇಕೇ? ಮನೆಯಲ್ಲಿಯೇ ಕಲಿಯಬಾರದೇ?

ಆರಿಗರು `ಮನೆಯಲ್ಲಿ ಕಲಿಯುವುದು ಗೊತ್ತೇ ಇದೆ’ ಎಂದು ಒತ್ತಾಯದಿಂದ ಅಣ್ಣಿಯನ್ನು ಶಾಲೆಗೆ ಕರೆದುಕೊಂಡು ಹೋದರು. ಮನೆಯಿಂದ ಒಂದು ಮೈಲು ದೂರವಿರುವ ಶಾಲೆಗೆ ಹೋಗುತ್ತಾ ನಾಲ್ಕೈದು ದಿನಗಳು ಕೂಡಾ ಆಗಲಿಲ್ಲ. ಆಗಲೇ ತನಗೆ ಸೈಕಲ್, ಕುದುರೆಗಾಡಿ ತೆಗೆಸಿಕೊಡಬೇಕೆಂದು ಅಣ್ಣಿಯು ಆರಿಗರೊಡನೆ ಹಟ ಮಾಡುತ್ತಿದ್ದನು. ಆರಿಗರು ಆತನನ್ನು ಹೆಗಲ ಮೇಲಿಟ್ಟು ಹೋಗಿ ಬರುವುದಕ್ಕೆ ಒಬ್ಬ ಆಳನ್ನು ನಿಯತಮಾಡಿದರು. ಹಾಗಿದ್ದರೂ ಮುದ್ದು ಅಣ್ಣಿಗೆ ಶಾಲೆಗೆ ಹೋಗುವುದಕ್ಕೆ ಇಚ್ಚೆಯಿಲ್ಲ. ಒತ್ತಾಯದಿಂದ ಎಷ್ಟೋ ಪ್ರಾರ್ಥನೆ ಮಾಡಿದ ನಂತರ ಸವಾರಿಯು ಹೋಗುತ್ತಿತ್ತು. ಶಾಲೆಗೆ ಹೋಗುತ್ತಾ ಆರು ತಿಂಗಳಾಯಿತು. ಅಕ್ಷರಮಾಲೆಯೇ ಇನ್ನೂ ಚೆನ್ನಾಗಿ ಬರಲಿಲ್ಲ. ಬರುವುದು ಹೇಗೆ? ಇಚ್ಛೆಯಿದ್ದರೆ ತಾನೇ? ಜರತಾರಿ ಟೊಪ್ಪಿ, ಮಕ್ ಮಲ್ ಅಂಗಿ, ಜರಿಯ ದೋತ್ರಗಳನ್ನು ಉಟ್ಟುಕೊಂಡು ಮದುಮಗನಂತೆ ಹೋಗುವ ಜರಬೇ ಹೊರತು, ಕಲಿತು ಯೋಗ್ಯ ವಿದ್ಯಾವಂತನಾಗಬೇಕೆಂಬ ಇಚ್ಚೆಯಿಲ್ಲ.

ಉಪಾಧ್ಯಾಯರು ಸ್ವಲ್ಪ ಗದರಿಸಿದರಂತೂ `ಶೃಂಗಾರ ರಾಮಣ್ಣ’ ನಮ್ಮ ಅಣ್ಣಿಗೆ ಕಣ್ಣೀರು ಬರುತ್ತಿತ್ತು. ಇನ್ನೂ ಸ್ವಲ್ಪ ಜೋರಾಗಿ ಗದರಿಸಿದರಂತೂ `ಅಯ್ಯಯ್ಯೋ! ಅಯ್ಯಯ್ಯೋ!’ ಎಂದು ಬೊಬ್ಬೆ ಹಾಕುತ್ತಿದ್ದನು. ಅಣ್ಣಿಯ ಆ ಪರಿಸ್ಥಿತಿಯನ್ನು ನೋಡಿ `ಲೆಕ್ಕಕ್ಕಾದರೂ ಬರುತ್ತಿರ’ ಲೆಂದು ಉಪಾಧ್ಯಾಯರು ಸುಮ್ಮನಿದ್ದರು.

ಅಣ್ಣಿಯು ಹದಿನೈದು ವರ್ಷ ಪ್ರಾಯದವನಾದನು. ಶಾಲೆಗೆ ಹೋಗುತ್ತಾ ಐದಾರು ವರ್ಷಗಳಾದುವು. ಪ್ರತಿ ವರ್ಷ ಫೈಲಾಗುತ್ತಾ ಹಾಗೂ ಹೀಗೂ ಎರಡನೇ ಕ್ಲಾಸಿನಲ್ಲಿ ನಾಮ ಮಾತ್ರಕ್ಕೆ ಓದುತ್ತಿದ್ದನು. ಈ ವಿದ್ಯಕ್ಕೆ ವ್ಯತಿರಿಕ್ತವಾಗಿ ಅಣ್ಣಿಯು ಇನ್ನೊಂದು ವಿದ್ಯದಲ್ಲಿ ಪ್ರವೀಣನಾದನು. ಅದಾವುದು? ಇನ್ನಾವುದಲ್ಲ. ಗ್ರಾಮದ ಶಾಲೆಯಲ್ಲಿ ಹುಡುಗಿಯರೂ ಓದುತ್ತಿದ್ದುದರಿಂದ ಅಣ್ಣಿಯ ದೃಷ್ಟಿಯು ಅವರ ಮೇಲೆ ಬೀಳುತ್ತಿತ್ತು. ಗುಪ್ತವಾಗಿ ಅದೆಷ್ಟೋ ಅತ್ಯಾಚಾರ ಮಾಡಿದ್ದನ್ನು ಕೇಳಿ ಉಪಾಧ್ಯಾಯರು ಅಣ್ಣಿಯನ್ನು ಶಾಲೆಗೆ ಬಾರದಂತೆ ಮಾಡಿದರು.

ಆರಿಗರು, `ಅಣ್ಣಿಯು ದೇಶಭಾಷೆ ಕನ್ನಡದಲ್ಲಿ ಮನೆಯ ಶ್ಯಾನುಭೋಗರಷ್ಟು ಕಲಿತಿರುವನು. ಇನ್ನು ಕೆಲವು ವರ್ಷ ಮಂಗಳೂರಲ್ಲಿ ಇಂಗ್ಲೀಷ್ ಕಲಿತರೆ ಸುಯೋಗ್ಯ ವಿದ್ಯಾವಂತನಾದಾನು’ ಎಂದು ವಿಚಾರಿಸುತ್ತ ಮಂಗಳೂರಿಗೆ ಕರಕೊಂಡು ಹೋಗಿ ಜೈನ ಹೊಟೇಲಿನಲ್ಲಿ ಊಟದ ಏರ್ಪಾಡು ಮಾಡಿ, ಹಾಯ್ ಸ್ಕೂಲಿನಲ್ಲಿ ಎರಡನೇ ಕ್ಲಾಸಿನಲ್ಲಿ ಸೇರಿಸಿ, ಐನೂರು ರೂಪಾಯಿ ಆತನ ಕೈಯಲ್ಲಿ ಕೊಟ್ಟು ಆಗಾಗ್ಗೆ ಕಾಗದ ಬರೆಯುತ್ತಿರು, ಬೇಕಾದಷ್ಟು ಕಳುಹಿಸುತ್ತೇನೆಂದೂ, ಚೆನ್ನಾಗಿ ಓದಿ ಪ್ರಸಿದ್ಧ ವಿದ್ಯಾವಂತನಾಗಬೇಕೆಂದೂ ಹೇಳಿ ಊರಿಗೆ ಬಂದರು.

ಅಣ್ಣಿಯ ಕ್ಲಾಸಿನಲ್ಲಿ ಆತನೊಬ್ಬನೇ ಶರೀರಪ್ರಾಯದಲ್ಲಿ ದೊಡ್ಡನಾದ್ದರಿಂದ ಬಾಕಿ ಸಣ್ಣ ಹುಡುಗರೆಲ್ಲರೂ ಹಾಸ್ಯ ಮಾಡುತ್ತಿದ್ದುದನ್ನು ನೋಡಿ ಅವನಿಗೆ ಸರಿಬೀಳಲಿಲ್ಲ. ಸರಿಯಾಗಿ ಪ್ರತಿದಿನ ಸ್ಕೂಲಿಗೆ ಹೋಗದಿದ್ದುದರಿಂದ ಉಪಾಧ್ಯಾಯರು ಆತನ ಹೆಸರನ್ನು ತೆಗೆದು ಹಾಕಿದರು.

ಅಣ್ಣಿಯು ಸಂಪೂರ್ಣ ಸ್ವತಂತ್ರನಾದನು. ಆ ವೇಳೆಗೆ ಸರಿಯಾಗಿ ಅವನಂತಹ ಕೆಲವು ಪೋಲಿ ಹುಡುಗರು ಅವನ ಜತೆಗೆ ಸೇರಿದರು. ಅಣ್ಣಿಯು ಕೇವಲ ಊಟಕ್ಕೆ ಹೊಟೇಲಿಗೆ ಹೋಗುತ್ತಿದ್ದನು. ಅಡಿಗೆಯವನೂ ಅಣ್ಣಿ ಹಗಲು ಸ್ಕೂಲಿಗೆ ಹೋಗುತ್ತಾ ರಾತ್ರೆ ಉಪಾಧ್ಯಾಯರ ಗೃಹದಲ್ಲಿ ಓದುತ್ತಿರಬಹುದೆಂದು ಯೋಚಿಸಿ ಸುಮ್ಮನಿದ್ದನು.

ಅಣ್ಣಿಯು ತನ್ನ ಮಿತ್ರರೊಡನೆ ರಾತ್ರಿ ದಿನ ಪೇಟೆಯ ಸಿನೆಮಾ ಮಂದಿರ, ನಾಟಕಗೃಹ, ವೇಶ್ಯಾ ಗೃಹದಲ್ಲಿಯೇ ತಿರುಗಾಡುತ್ತಿದ್ದನು. ಶಹರ್ ನಿವಾಸಿಗಳ ಪೈಕಿ ಹೆಚ್ಚು ಜನರು ಇಂಗ್ಲೀಷ್ ಮಾತನಾಡುವುದನ್ನು ಕಂಡು ಪ್ರಾಯಃ ವ್ಯವಹಾರದಲ್ಲಿ ಬರುವ ಐವತ್ತರವತ್ತು ಇಂಗ್ಲೀಷ್ ಶಬ್ದವನ್ನು ಕಂಠಸ್ತ ಮಾಡಿದನು. ತೀರ್ಥಸ್ಥಾನಗಳಿಗೆ ಹೋದವರು ಪ್ರಥಮ ಶಿರವನ್ನು ನುಣ್ಣಗೆ ಬೋಳಿಸುವಂತೆ ಅಣ್ಣಿಯು ಪೇಟೆಗೆ ಬಂದು ಕ್ರೊಪ್ ಕಟ್ಟಿಂಗ್ ಮಾಡಿಸಿದನು.

ಮಿತ್ರರು ಅಣ್ಣಿಯನ್ನು ಸಂಪೂರ್ಣ `ಜಂಟಲ್ಮೆನ್’ ಆಗುವಂತೆ ಆವಶ್ಯಕ ಸಾಮಗ್ರಿಗಳ ಹೆಸರನ್ನೆಲ್ಲಾ ವಿವರವಾಗಿ ಹೇಳಿದರು. ಆಗಲೆ ಕಾಲಿಗೆ `ಬೂಟ್’ ತಲೆಗೆ `ಹೆಟ್’ ಮೈಗೆ `ಕೋಟ್’, ಕಾಲಿಗೆ `ಪೆಂಟ್’, ಸೊಂಟಕ್ಕೆ `ಬೆಲ್ಟ್’, ಕುತ್ತಿಗೆಗೆ `ನೆಕ್ ಟಯಿ’, ಕಣ್ಣಿಗೆ `ಸ್ಪೆಕ್ಟಿಕಲ್’, ಕೈಗೊಂದು `ವಾಕಿಂಗ್ ಸ್ಟಿಕ್’ ಇತ್ಯಾದಿ ಸಾಮಗ್ರಿಗಳನ್ನು ಪಡೆದನು. ವ್ಯಾಪಾರಿಗಳು ಈತನು ಹಳ್ಳಿಯ ಬೆಪ್ಪ ಬೇತಾಳನೆಂದು ಒಂದಕ್ಕೆರಡರಷ್ಟು ಕ್ರಮ ವಸೂಲು ಮಾಡಿದರು.

ಆತನ ದಿನ ಕ್ರಮ (Time table) ಹೀಗಿತ್ತು. ಪ್ರಾತಃ ಕಾಲ 7 ಗಂಟೆವರೆಗೆ ವೇಶ್ಯೆಯ ಗೃಹದಲ್ಲಿ ಇದ್ದು, ನಂತರ ಎದ್ದು `ಮಹಾನಂದ ಕಾಫಿ ಕ್ಲಬ್ಬಿಗೆ’ ಪ್ರಯಾಣ. ಅಲ್ಲಿಂದ ಮಿತ್ರರ ಸಂಘದಲ್ಲಿ ಸೇರಿ ಹನ್ನೊಂದು ಗಂಟೆವರೆಗೆ ಹುಚ್ಚಾಬಟ್ಟೆ ಮಾತಾಡುತ್ತಿರುವುದು. ಆನಂತರ ಹೊಟೇಲಿಗೆ ಹೋಗಿ ಊಟಮಾಡಿ ಮಧ್ಯಾಹ್ನ ಅಲ್ಲಿಯೇ ಮಲಗಿದ್ದು ಸಾಯಂಕಾಲ ಐದು ಗಂಟೆಗೆ ಪುನಃ ಊಟ ಮಾಡಿ ಸಿನೆಮಾ ಗೃಹಗಳಿಗೆ ಆಗಮನ. ಅಲ್ಲಿಂದ ಸೀದಾ ಕಲಿಯುಗ ಕುಲದೇವಿಗಳಾದ ವೇಶ್ಯಾ ಗೃಹಗಳಿಗೆ ದಯಮಾಡುತ್ತಿದ್ದನು.

ಅಣ್ಣಿಯು ಮಂಗಳೂರಿಗೆ ಬಂದು ಮೂರು ನಾಲ್ಕು ತಿಂಗಳು ಕೂಡಾ ಪೂರಾ ಆಗಲಿಲ್ಲ. ಅಷ್ಟರೊಳಗೆ ಪಿತನಿಗೆ ಐದಾರು ಕಾಗದ ಬರೆದು ತಾನು ಮನೆಯಲ್ಲಿ ಮಾಸ್ಟರನ್ನು ಇಟ್ಟುಕೊಂಡು ಓದುತ್ತಿದ್ದೇನೆಂದು ಸುಳ್ಳು ಬರೆದು ಐನೂರು ರೂಪಾಯಿ ಪುನಃ ಪಡೆದು, ವ್ಯರ್ಥವಾದ ಕಾರ್ಯದಲ್ಲಿ ನೀರಿನಂತೆ ಹಣ ವ್ಯಯಮಾಡುತ್ತಿದ್ದನು. ಇದು ಸಾಲದೆ ಹೊಟೇಲಿನ ದರ್ಣಪ್ಪನಿಂದ ಇನ್ನೂರು ರೂಪಾಯಿ ಸಾಲ ಮಾಡಿದನು.

ಆತನ ಶರೀರ ಸ್ಥಿತಿಯನ್ನು ನೋಡಿ ಅಡಿಗೆಯವನಿಗೆ ಸಂಶಯವಾಯಿತು. ಗುಟ್ಟಾಗಿ ಆತನ ಹಿಂದೆ ಹೋಗುತ್ತಾ ಆತನ ದಿನಚರ್ಯವನ್ನು ತಿಳಿದು ಕೂಡಲೇ ಆರಿಗರು ಬಂದು ಆತನನ್ನು ಶೀಘ್ರ ಕರೆದುಕೊಂಡು ಹೋಗುವಂತೆ ಆತನ ದಿನಚರ್ಯಗಳನ್ನೂ, ಶರೀರಿಸ್ಥಿತಿಯನ್ನೂ ವಿಸ್ತಾರವಾಗಿ ಬರೆದನು. ಪತ್ರ ತಲುಪುತ್ತಲೇ ಆರಿಗರು ಶ್ಯಾನುಭೋಗರಿಂದ ಓದಿಸಿದರು. ಅದನ್ನು ಕೇಳಲು ತಲೆಯ ಮೇಲೆ ಸಿಡಿಲು ಬಡಿದಂತಾಯಿತು. ಅದೇ ದಿನ ಶ್ಯಾನುಭೋಗರನ್ನು ಮಂಗಳೂರಿಗೆ ಕಳುಹಿಸಿ ಅಣ್ಣಿಯನ್ನು ಶೀಘ್ರ ಕರೆದುಕೊಂಡು ಬರುವಂತೆ ಆಜ್ಞಾಪಿಸಿದರು.

ಮರುದಿನ ಸಾಯಂಕಾಲವೇ ಅಣ್ಣಿಯು ಮನೆಗೆ ಬಂದನು. ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು. ಅಣ್ಣಿಯು ವಿವಾಹಕ್ಕೆ ಯೋಗ್ಯನಾಗಿರುವುದರಿಂದ ಶೀಘ್ರದಲ್ಲಿಯೇ ಮದುವೆ ಮಾಡಿದಲ್ಲಿ ಮನೆಯಲ್ಲಿ ಇದ್ದಿರಬಹುದೆಂದು ನಿಶ್ಚಯಿಸಿ ಆತನಿಗೆ ಯೋಗ್ಯಕುಮಾರಿಯನ್ನು ಹುಡುಕಲು ಹೊರಟರು.

ಕೊಡಿಂಬಾಡಿ ಜಾರು ಪಕಳರಿಗೆ `ರತಿದೇವಿ’ ಎಂಬೊಬ್ಬಳೇ ರೂಪವತಿ, ವಿದ್ಯಾವತಿ, ಯವ್ವನವತಿ ಕನ್ಯೆಯಿದ್ದಾಳೆಂಬುದನ್ನು ಕೇಳಿ ಆರಿಗರು ಅಲ್ಲಿ ಹೋಗಿ ನಿಶ್ಚಯಿಸಿದರು.

ಆರಿಗರು `ಮನೆಯಲ್ಲಿ ಕಲಿಯುವುದು ಗೊತ್ತೇ ಇದೆ’ ಎಂದು ಒತ್ತಾಯದಿಂದ ಅಣ್ಣಿಯನ್ನು ಶಾಲೆಗೆ ಕರೆದುಕೊಂಡು ಹೋದರು. ಮನೆಯಿಂದ ಒಂದು ಮೈಲು ದೂರವಿರುವ ಶಾಲೆಗೆ ಹೋಗುತ್ತಾ ನಾಲ್ಕೈದು ದಿನಗಳು ಕೂಡಾ ಆಗಲಿಲ್ಲ. ಆಗಲೇ ತನಗೆ ಸೈಕಲ್, ಕುದುರೆಗಾಡಿ ತೆಗೆಸಿಕೊಡಬೇಕೆಂದು ಅಣ್ಣಿಯು ಆರಿಗರೊಡನೆ ಹಟ ಮಾಡುತ್ತಿದ್ದನು.

ಆರಿಗರ ಗೃಹದಲ್ಲಿ ಮದುವೆ ಚಪ್ಪರಾದಿ ಸಕಲ ಸನ್ನಾಹಗಳು ತಯಾರಾಗುತ್ತಿದ್ದವು. ಅತ್ತ ಮಿತ್ರರಿಗೆ ವಿವಾಹ ಪತ್ರಿಕೆಗಳು ತಲುಪುತಿದ್ದುವು. ಆರಿಗರು ತನ್ನ ನಿಕಟಮಿತ್ರರನ್ನು ಮನೆಯಲ್ಲಿಯೇ ಕೂಡಿಸಿ ವಿವಾಹದಲ್ಲೆಷ್ಟು ಖರ್ಚು ಮಾಡತಕ್ಕುದೆಂಬುದನ್ನು ಪ್ರಸ್ತಾಪಿಸಿದರು. ಒಬ್ಬರು ಒಂದು ಸಾವಿರವೆಂದೂ, ಇನ್ನೊಬ್ಬರು ಎರಡು ಸಾವಿರವೆಂದೂ ನಾನಾರೂಪವಾಗಿ ಹೇಳಿದರು. ಅಷ್ಟರಲ್ಲಿ ಆರಿಗರ ತಾಯಮ್ಮನು ಬಂದು `ನಮಗೇನು ನೂರಾರು ಮರಿಮಕ್ಕಳುಗಳು ಇದ್ದಾವೆ!

ಅಣ್ಣಿಯ ವಿವಾಹ ಬಹಳ ಸಂಭ್ರಮದಿಂದ ಇಷ್ಟರವರೆಗೆ ಯಾವ ಗುತ್ತಿನವನೂ ಇಷ್ಟು ಖರ್ಚು ಮಾಡಿ ವಿವಾಹ ಮಾಡಿಸಲಿಲ್ಲವೆಂಬಂತಿರಬೇಕು. ಮೂರು ನಾಲ್ಕು ಸಾವಿರ ರೂಪಾಯಿ ಖರ್ಚಾದರೂ ಚಿಂತೆಯಿಲ್ಲ’ ಎಂದರು. ಸಾಯಲಿಕ್ಕೆ ಹತ್ತಿರವಾದ ಮುದುಕರ ಮಾತನ್ನು ಮೀರುವುದು ಸರಿಯಲ್ಲವೆಂದು ಅವರು ಹೇಳಿದ್ದಷ್ಟೆ ಖರ್ಚು ಮಾಡತಕ್ಕುದೆಂದು ನಿಶ್ಚಯವಾಯಿತು.

ಕಲಿಯುಗ ಕುಲದೇವಿ ವೇಶ್ಯಾ ಸ್ತ್ರೀಯರಿಗೆ ಆಯಂತ್ರಣ ತಲುಪುತ್ತಲೇ ಮದುವೆಯ ಒಂದೆರಡು ದಿನಗಳ ಮುಂಚೆಯೇ ಸಂಘ ಸಹಿತ ಆರಿಗರ ಗೃಹಕ್ಕೆ ಚಿತ್ತೈಸಿದರು. ನೂರಾರು ಗರ್ನಲ್ ಇತ್ಯಾದಿ ತರತರದ ಸಿಡಿಮದ್ದುಗಳ ಗೋಣಿಗೋಣಿಗಳೇ ಒಂದು ಕಡೆ ರಾಶಿ ಹಾಕಲ್ಪಟ್ಟಿದ್ದುವು. ಸಮಯಕ್ಕೆ ಸರಿಯಾಗಿ ನಾಲ್ಕಾರು ಮೇಳ ಬೇಂಡ್, ವಾಲಗದವರು ಬಂದು; ಮದುಮಗಳನ್ನು ಕರಕೊಂಡು ಬರುವುದಕ್ಕೆ ಮಹಾ ಸಂಭ್ರಮದಿಂದ ದಿಬ್ಬಣ ಹೊರಟಿತು.

ದೇವಿದೇವತೆಗಳ ಭಕ್ತರು ತಂಡೋಪತಂಡವಾಗಿ ದೇವಿಯನ್ನು ಪೂಜಿಸುವರೆ ದೇವಸ್ಥಾನಕ್ಕೆ ಹೋಗುವಂತೆ ದಿಬ್ಬಣದಲ್ಲಿದ್ದ ಕುಲದೇವಿಗಳ ದರ್ಶನಕ್ಕೆ ಅಲ್ಲಲ್ಲಿ ಸಾವಿರಾರು ಭಕ್ತರು ಸುತ್ತುಕಟ್ಟಿಕೊಂಡು ಅವರ ಗಾನ, ನರ್ತನ, ಹಾವಭಾವಗಳನ್ನು ನೋಡಿ ತಮ್ಮನ್ನು ತಾವೆ ಮರೆಯುತ್ತಿದ್ದರು. ಸಿಡಿಮದ್ದುಗಳ ಆರ್ಭಟವು, ಬೇಂಡ್, ವಾಲಗಗಳ ಶಬ್ದವನ್ನು ಮಬ್ಬೊತ್ತಿತು. ಒಂದು ಗ್ರಾಮದ ಮಧ್ಯದಲ್ಲಿ ದಿಬ್ಬಣ ಹೋಗುತ್ತಿದ್ದಾಗ ಆಕಸ್ಮಾತ್ ಸಿಡಿಮದ್ದು ಹಾರಿ ಮೂರು ನಾಲ್ಕು ದೊಡ್ಡ ದೊಡ್ಡ ಒಣಹುಲ್ಲು ರಾಶಿಗಳಿಗೆ ತಗಲಿ ಜೋರಾಗಿ ಉರಿಯಲಿಕ್ಕೆ ಪ್ರಾರಂಭವಾಗಿ ಸ್ವಲ್ಪ ಕಾಲದಲ್ಲಿಯೇ ಭಸ್ಮವಾಯಿತು. ಮಾಲಿಕರು ಆರಿಗರ ಮುಂದೆ ಬಂದು ಅವರಿಗೆಷ್ಟೊ ಪೀಡಿಸಿ ಒಣಹುಲ್ಲಿನ ಮೌಲ್ಯರೂಪವಾಗಿ ನಾಲ್ಕು ನೂರು, ಐನೂರು ರೂಪಾಯಿ ಪಡೆದರು. ಹೇಗೂ ದಿಬ್ಬಣವು ಮದುಮಗಳನ್ನು ಆರಿಗರ ಗೃಹಕ್ಕೆ ಕರಕೊಂಡು ಬಂತು.

ವಿವಾಹ ಪ್ರಾರಂಭವಾಯಿತು. ಸಭೆಯಲ್ಲಿ ಸಾವಿರಾರು ಮಾನ್ಯ ಗೃಹಸ್ಥರು ಕೂತಿದ್ದರು. ಸಭೆಯ ಮಧ್ಯದಲ್ಲಿ ಕಲಿಯುಗ ಕುಲದೇವಿಗಳ ನರ್ತನ ಪ್ರಾರಂಭವಾಯಿತು. ಆರಿಗರು ದೇವಿಗಳ ಹರಿವಾಣದಲ್ಲಿ ಐವತ್ತು ರೂಪಾಯಿ ಪ್ರಥಮ ಹರಿಕೆ ಹಾಕಿ ಮಾನ್ಯ ಗೃಹಸ್ಥರಿಗೆಲ್ಲಾ `ದವಲತ್ ಜಾದ’ ಗಳಿಂದ ಸತ್ಕರಿಸಿದರು. ಕೂಡಲೇ ಸೇಮಿತರು ಭಂಗರಿಗೆ, ಹೆಗ್ಗಡೆಯವರು ಸೆಟ್ಟರಿಗೆ, ಚೌಟರು ಕಂಬಳಿಯವರಿಗೆ, ಅಜಿಲರು ಬಲ್ಲಾಳರಿಗೆ ಸ್ಪರ್ಧೆಯಿಂದ ದವಲಜ್ಜಾದಗಳನ್ನು ಮಾಡಿಸಿದರು. ಒಂದೆರಡು ಗಂಟೆಗಳವರೆಗೆ `ದವಲಜ್ಜಾದ’ ಮಳೆಯ ಹೊಡೆತವೊ ಎಂಬಂತೆ ಐನೂರಕ್ಕಿಂತಲೂ ಹೆಚ್ಚಾದ ರೂಪಾಯಿ ಸೇರಿತು. ಆ ಮಧ್ಯೆ ಶಿಕ್ಷಿತ ಮಹಾಶಯರೊಬ್ಬರು ಕೋಣಗಳ ಮುಂದೆ ಕಿನ್ನರಿ ಬಾರಿಸಿದಂತೆ `ಬಂಧುಗಳೇ! ಶಿಕ್ಷಿತ ಉತ್ತರ ಹಿಂದೂಸ್ಥಾನದ ಜೈನಬಂಧುಗಳೂ, ಈ ಕಡೆಯ ಶಿಕ್ಷಿತ ಜೈನೇತರರೂ ವೇಶ್ಯಾನರ್ತನದಿಂದಾಗುವ ಹಾನಿಯನ್ನು ಕಂಡು ನಿಲ್ಲಿಸಿರುವುದರಿಂದ ಕೂಡಲೇ ನರ್ತನವನ್ನು ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಶಿಕ್ಷಿತ ಸಮಾಜವು ಸಭಿಕರನ್ನು ಮಹಾಮೂರ್ಖರೆಂದು ನಿಂದಿಸದಿರದು’ ಎಂದು ಲೆಕ್ಚರ್ ಮಾಡಿದರು. ಅಷ್ಟರಲ್ಲಿ ಪೇಟೆಯ ಸೆಟ್ಟಿಗಳೂ, ಇನ್ನು ಕೆಲವು ಧೂರ್ತರೂ ತೋಳಗಳಂತೆ ಆ ಶಿಕ್ಷಿತರನ್ನು ಹೊಡೆಯಲು ಓಡಿದರು. ಅವರಂತು ಕೂಡಲೇ ಹೇಳದೆ ಕೇಳದೆ ಓಡಿಹೋದರು.

ವಿವಾಹ ಕಾರ್ಯಗಳೆಲ್ಲಾ ಸಮಾಪ್ತವಾಗುತ್ತಾ ಬಂದುವು. ಅಷ್ಟರಲ್ಲಿ ಮೈಸೂರು ಜೈನ ವಿದ್ಯಾವರ್ಧಕ ಸಂಘದ ಪ್ರಚಾರಕರೊಬ್ಬರೂ, ಮಂಗಳೂರಿನ ಅನಾಥಾಲಯದ ಕಾರ್ಯಕರ್ತರೊಬ್ಬರೂ ಆರಿಗರ ಮುಂದೆ ಬಂದು ಸಂಸ್ಥೆಗಳಿಗೆ ಉದಾರ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದರು. ಆರಿಗರು ಅದೆಷ್ಟೋ ಅಡ್ಡಿಗಳನ್ನು ಹೇಳಿ ಒಂದೆರಡು ತಿಂಗಳು ದಾಟಿದ ನಂತರ ಬರುವಂತೆ ಆಜ್ಞಾಪಿಸಿದರು. ಅವರೆಷ್ಟೋ ಪೀಡಿಸಿದ ನಂತರ ಎರಡು ಸಂಸ್ಥೆಗಳಿಗೆ ಎರಡೆರಡು ರೂಪಾಯಿ ಸಹಾಯ ಮಾಡಿದರು. ಮೂರ್ಖ ಶಿರೋಮಣಿ ಆರಿಗರೇ! ಕುಲದೇವಿಗಳಿಗೆ ನೂರಾರು ರೂಪಾಯಿ ಹರಿಕೆ ಹಾಕುವರೇ, ಕಿಂಚಿತ್ ಕೂಡ ಪ್ರಯೋಜನವಿಲ್ಲದ ಸಿಡಿಮದ್ದುಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವರೇ, ರೈತರಿಗೆ ನಾಲ್ಕು ನೂರು ರೂಪಾಯಿ ಐನೂರು ರೂಪಾಯಿ ಜುಲ್ಮಾನೆ ಕೊಡುವರೇ ನಿಮ್ಮಲ್ಲಿ ಯಥೇಷ್ಟ ರೂಪಾಯಿಗಳಿವೆ. ಆದರೆ ಸಾರ್ವಜನಿಕ ಸರ್ವೋಪಯೋಗ ಸಂಸ್ಥೆಗಳಿಗೆ ಉದಾರ ಸಹಾಯ ಮಾಡುವರೇ ನಿಮ್ಮಲ್ಲಿ ಹಣವಿಲ್ಲ. ಧಿಕ್ಕಾರ!

ರತಿದೇವಿಯನ್ನು ಮನ್ಮಥನ ರತಿಯಂತಿದ್ದರೂ, ಮೂರ್ಖ ಅಣ್ಣಿಯ ಕಣ್ಣಿಗೆ ಸರಿಬೀಳಲಿಲ್ಲ. ಅಂದಿನಿಂದ ಆಗಾಗ್ಗೆ ವೇಶ್ಯಾಗೃಹದ ಬಾಗಿಲಲ್ಲಿಯೇ ಬೀಳುತ್ತಿದ್ದನು. ಪತಿಯು ತನ್ನನ್ನು ಪ್ರೇಮದಿಂದ ಕಾಣದಿದ್ದುದರಿಂದ ಪಿತನ ಗೃಹದಲ್ಲಿದ್ದು, ಮಾನ್ಯ ಕೆಲವು ಮಹಾಶಯರಿಂದ ಗೃಹಕ್ಕೆ ಕರೆಯಿಸಿಕೊಂಡರೂ ಅಣ್ಣಿಯು ಒಂದೆರಡು ದಿನಗಳವರೆಗೆ ಮನೆಯಲ್ಲಿದ್ದು ಪುನಃ ಆ ವೇಶ್ಯೆಯರ ಗೃಹಕ್ಕೇನೆ ಹೋಗಿ ಬೀಳುತ್ತಿದ್ದನು. ಒಂದೆರಡು ತಿಂಗಳಲ್ಲಿಯೇ ಅಣ್ಣಿಯು ಅರವತ್ತು ವರ್ಷದ ಮುದುಕನಂತಾದನು. ಕೈಕಾಲುಗಳೆಲ್ಲ ಒಣ ಕಟ್ಟಿಗೆಯಂತಾದುವು. ಮುಖದಲ್ಲಿ ಯೌವನ ಕಾಂತಿಯು ನಷ್ಟವಾಗಿ ಎಲುಬುಗಳು ಕಾಣುತ್ತಿದ್ದವು. ತಲೆ ನರೆಯಿತು. ಬೆತ್ತವಿಲ್ಲದೆ ಸ್ವಲ್ಪ ದೂರ ನಡೆಯುವುದು ಅಶಕ್ಯವಾಯಿತು. ಸ್ವಲ್ಪ ಆಹಾರವನ್ನುಂಡು ಕರಗಿಸುವ ಮಾತು ಹಾಗಿರಲಿ, ಕುಡಿದ ಸ್ವಲ್ಪ ಹಾಲನ್ನು ಜೀರ್ಣಮಾಡುವ ಶಕ್ತಿಯಿಲ್ಲದೆ ಅಜೀರ್ಣವಾಗುತ್ತಿತ್ತು.

ಆರಿಗರ ಮಿತ್ರರೊಬ್ಬರು ಈ ದೃಶ್ಯವನ್ನು ನೋಡಿ ಅಣ್ಣಿಯನ್ನು ಆತನ ಗೃಹಕ್ಕೆ ಕರೆದುಕೊಂಡು ಹೋದರು. ಆರಿಗರ ಮನೆಯವರು ಅಣ್ಣಿಯ ಸ್ಥಿತಿಯನ್ನು ನೋಡಿ ಹಾಹಾಕಾರ ಮಾಡಲು ಪ್ರಾರಂಭಿಸಿದರು. ಆರಿಗರು ಅಣ್ಣಿಯು ಪತ್ನಿಯ ಗೃಹದಲ್ಲಿಯೇ ಇದ್ದಾನೆಂದು ಸುಮ್ಮನಿದ್ದುದರಿಂದ ಈ ವಿಷಯವು ಅವರಿಗೆ ಗೊತ್ತಿದ್ದಿಲ್ಲ. ಅಣ್ಣಿಯು ಬಹಳ ಕಾಯಿಲೆಯಲ್ಲಿದ್ದಾನೆಂದು ವರ್ತಮಾನ ತಲುಪುತ್ತಲೇ ಪಕಳರು ಮಗಳ ಸಹಿತ ಆರಿಗರ ಗೃಹಕ್ಕೆ ಬಂದರು.
ಅಣ್ಣಿಗೆ ಕ್ಷಯರೋಗ ಪ್ರಾರಂಭವಾಗಿದೆ, ಇನ್ನೇನು ಬದುಕುವುದು ಅಸಂಭವವೆಂದು ಎಷ್ಟೋ ಅನುಭವಿಗಳು ಹೇಳುತ್ತಿದ್ದರು. ಆರಿಗರು ಸಾವಿರಾರು ರೂಪಾಯಿ ಖರ್ಚು ಮಾಡಿ ಒಬ್ಬ ಪ್ರಸಿದ್ಧ ವೈದ್ಯರನ್ನು ಕರೆಯಿಸಿ ಔಷಧಿ ಕೊಡಿಸಿದರು. ರೋಗವು ವೃದ್ಧಿಯಾಗುತ್ತಾ ಅಂತಿಮ ಶೀಘ್ರ ಶ್ವಾಸೋಚ್ಛ್ವಾಸವು ಪ್ರಾರಂಭವಾಗುತ್ತಾ ಸ್ವಲ್ಪ ಕಾಲದಲ್ಲಿಯೇ ಅಣ್ಣಿಯು ಸರ್ವರನ್ನು ಬಿಟ್ಟು ಏಕಾಕಿಯಾಗಿ ಇಹಲೋಕವನ್ನು ತೊರೆದನು.

ಅಬಲೆ ರತಿದೇವಿಯ ಮತ್ತು ತಮ್ಮ ಜೀವನಕ್ಕಿಂತಲೂ ಹೆಚ್ಚಾಗಿ ಅಣ್ಣಿಯನ್ನು ಕಾಣುತ್ತಿದ್ದ ಆರಿಗರ ಸ್ಥಿತಿಯು ಹೇಗಿರಬೇಕೆಂಬುದನ್ನು ವಾಚಕರೇ ಊಹಿಸಲಿ. ಆ ಸುತ್ತಮುತ್ತಲಿನ ಹಾಹಾಕಾರವನ್ನು ಕೇಳುತಿದ್ದ ಎಂತಹ ಧೈರ್ಯಸ್ಥರ ಕಲ್ಲು ಹೃದಯವೂ ಕೂಡ ಕರಗುತಿತ್ತು.

ಅಶಿಕ್ಷಿತ ಆರಿಗರೂ, ಅವರ ಬಂಧುಗಳೂ ರತಿದೇವಿಯನ್ನು ಕುರಿತು, `ನಮ್ಮ ರತ್ನದ ಕೈಹಿಡಿದು ಒಂದು ವರ್ಷವೂ ಕೂಡ ಆಗಲಿಲ್ಲ. ಆಗಲೇ ಕೊಂದು ಬಿಟ್ಟೆ. ಮಹಾಪಾಪಿನಿಯೇ ನಮ್ಮಲ್ಲಿರಬೇಡ’ ಎಂದು ಮನೆಯಿಂದ ಹೊರಗೆ ಮಾಡಿದರು.

ರತಿದೇವಿ ತಂದೆಯ ಗೃಹದಲ್ಲಿದ್ದಳು. ಪಕಳರು ಮಗಳ ದುಃಖವನ್ನು ಸಹಿಸದೆಯೋ ಎಂಬಂತೆ ಒಂದೆರಡು ತಿಂಗಳಲ್ಲಿ ಸ್ವರ್ಗಸ್ಥರಾದರು. ಅವರಿಗೆ ಎರಡು ಜನ ಗಂಡು ಮಕ್ಕಳು; ರತಿಯೊಬ್ಬಳೇ ಹೆಣ್ಣು ಮಗಳು. ಆ ಇಬ್ಬರು ಪುತ್ರರಿಗೂ ಐದಾರು ಮಕ್ಕಳಿದ್ದರು.

ಆಗಾಗಲೇ ಆ ಧೂರ್ತರು `ವಿವಾಹಿತಳಾಗಿ ಒಂದು ವರ್ಷವೂ ಕೂಡ ಆಗಲಿಲ್ಲ, ಆಗಲೇ ಪತ್ನಿಯನ್ನೂ ಪಿತನನ್ನೂ ಕೊಂದುಬಿಟ್ಟೆ, ಮೂರನೆಯವರಾರನ್ನು ಕೊಲ್ಲುತ್ತೀ?’ ಇತ್ಯಾದಿ ಮಹಾಕ್ರೂರ ವಚನದಿಂದ ದೇವಿಯನ್ನು ನಿಂದಿಸಿದರು. ದೇವಿಯು ಕಣ್ಣೀರಿನಲ್ಲಿ ಕೈತೊಳೆಯುತ್ತಾ ಮನಸ್ಸಿನಲ್ಲಿಯೇ – `ಮೂರನೆಯವಳು ನಾನೇ ಆಗಿದ್ದೇನೆ’ ಎಂದಳು.

ಪತಿಗಳು ಈ ರೀತಿ ನಿಂದಿಸುವುದನ್ನು ಕಂಡು ಅವರ ಹೆಂಡತಿಯರೂ ಮಕ್ಕಳೂ ಸದೈವ ನಾರಕಿಗಳಂತೆ ಪೀಡಿಸುತ್ತಿದ್ದರು. ತನ್ಮಧ್ಯೆ ಧೂರ್ತ ಯುವಕರು ಸುತ್ತು ಮುತ್ತು ಸೇರಿ ದೇವಿಯ ಸತೀತ್ವವನ್ನು ನಷ್ಟ ಮಾಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ದೇವಿಯು ಧೈರ್ಯಸ್ಥಳಾಗಿ `ಸಹೋದರರೇ, ನಾನು ನಿಮ್ಮ ಭಗಿನಿಯಾಗಿರುವೆನು, ಕಾಮಾಂಧರಾಗಿ ಸ್ಪರ್ಶಿಸಿದರೆ ಈಗಲೇ ಆತ್ಮಹತ್ಯೆ ಮಾಡಿಕೊಂಡು ನಿಮಗೆಲ್ಲಾ ಜೈಲಿನ ಅನ್ನ ತಿನ್ನಿಸದಿರೆನು’ ಎಂದಳು.

ಅಮಾವಾಸ್ಯೆಯ ರಾತ್ರಿ ಸುಮಾರು ಒಂಭತ್ತು ಗಂಟೆಯಾಗಿರಬಹುದು. ಕಗ್ಗತ್ತಲು ಸರ್ವತ್ರ ವ್ಯಾಪಿಸಿತ್ತು. ನಾಲ್ಕು ಕಡೆಯ ತೀವ್ರ ಅಗ್ನಿ ಜ್ವಾಲೆಯ ಮಧ್ಯೆ ಸಿಕ್ಕಿದ ಅನಾಥ ಹರಿಣದಂತೆ ಅನಿರ್ವಚನೀಯ ದುಃಖಗಳ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ರತಿದೇವಿಯು ಏಕಾಕಿಯಾಗಿ ಬಾವಿಕಟ್ಟೆಯ ಸಮೀಪಕ್ಕೆ ಬಂದು, `ಹೇ! ಅಶಿಕ್ಷಿತ ಜೈನ ಸಮಾಜದ ಕರ್ಣಧಾರರೇ! ಇಂತಹ ನೂರಾರು ದೃಶ್ಯಗಳನ್ನು ನೋಡಿಯೂ ನಿಮ್ಮ ಕಣ್ಣಿನಲ್ಲಿ ನೀರು ಬರಲಿಲ್ಲವಲ್ಲಾ! ಒಂದು ಕಡೆ ಅವಿದ್ಯಾ, ಇನ್ನೊಂದು ಕಡೆ ಅಳಿಯಕಟ್ಟು ಸಮಾಜದ ಸಂತಾನಗಳನ್ನು ನಷ್ಟಭ್ರಷ್ಟವಾಗಿ ಮಾಡುತ್ತಿರುವುದನ್ನು ಕಣ್ಣಾರೆ ಕಂಡೂ ನಿಮ್ಮ ಹೃದಯ ಕರಗಲಿಲ್ಲವಲ್ಲಾ! ನಿಮ್ಮ ಸ್ವಾರ್ಥ ಜನ್ಮಕ್ಕೆ ಧಿಕ್ಕಾರವಿರಲಿ! ನನ್ನಂತಹ ಅನಾಥರ ದುಃಖಾಗ್ನಿಯು ನಿಮ್ಮ ಶಿರಸ್ಸಿನಲ್ಲಿ ಸದೈವ ಉರಿಯುತ್ತಿರಲೆಂದು’ ಹೇಳಿ, ಮನಸ್ಸಿನಲ್ಲಿ ಪಂಚ ನಮಸ್ಕಾರವನ್ನು ಚಿಂತಿಸುತ್ತಾ ಬಾವಿಗೆ ಧುಮುಕಿದಳು. ಕ್ರೂರ ಸಹೋದರರೂ `ಮಾರಿ ಹೋಯಿತೆಂದು’ ಸ್ವಲ್ಪ ಕಾಲದವರೆಗೆ ಸುಮ್ಮನಿದ್ದು, ನಂತರ ಹೆಣವನ್ನು ಮೇಲಕ್ಕೆ ತೆಗೆದು ಕಾಯಿಲೆಯಿಂದ ಸತ್ತಳೆಂದು ಹೇಳಿ ದಹನಕ್ರಿಯೆ ಮಾಡಿದರು.
(ಸುವಾಸಿನಿ, ಜುಲೈ, 1927)

About The Author

ಡಾ. ಬಿ. ಜನಾರ್ದನ ಭಟ್

ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ