Advertisement
ಕನ್ನಡವೆಂದರೆ ಕುಣಿದಾಡುವುದೆನ್ನೆದೆ..

ಕನ್ನಡವೆಂದರೆ ಕುಣಿದಾಡುವುದೆನ್ನೆದೆ..

ಚಿತ್ರ ಬಿಡಿಸುವ ಮಕ್ಕಳನ್ನು ಚಿತ್ರಕಲಾ ಶಾಲೆಗೆ ಸೇರಿಸಬೇಕು ಎನ್ನುವ ಜ್ಞಾನ ಈಗಲೂ ಬಹುತೇಕ ಪಾಲಕರಿಗೆ ಇಲ್ಲ. ಆದರೆ ಚಿತ್ರಕಲೆ ಗೊತ್ತಿದ್ದವರನ್ನು ಸೈನ್ಸ್ ವಿಭಾಗಕ್ಕೆ ಸೇರಿಸುವುದಕ್ಕೆ, ಇಮಾಮ್ ಸಾಬಿ ಮತ್ತು ರಾಮನವಮಿಯ ಸಂಬಂಧ ಎನ್ನಬಹುದು. ಅದೇ ರೀತಿಯಲ್ಲಿ ಇತ್ತೀಚಿನ ಕರ್ನಾಟಕದ ಬಹುತೇಕ ಪಾಲಕರು ಇಂಗ್ಲೀಷ್ ಭಾಷೆಯ ಕಲಿಕೆಯ ಮೇಲೆ ಮಕ್ಕಳ ಜ್ಞಾನವನ್ನು ಅಳಿಯುತ್ತಾರೆ.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

ಕಳೆದೆರೆಡು ವಾರದಿಂದ ಉತ್ತರ ಅಮೇರಿಕಾದಲ್ಲಿ ಕನ್ನಡ ಶಾಲೆಗಳ ಈ ವರ್ಷದ ಕಲರವ ಶುರುವಾಗಿದೆ. ಸುಮಾರು ವರ್ಷಗಳಿಂದ ಭಾರತದಿಂದ ದೂರವಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಮಾತೃಭಾಷೆ ಮರೆಯಬಾರದೆಂದು ಮತ್ತು ತಮ್ಮ ಮಕ್ಕಳಿಗೂ ಕನ್ನಡವೇ ಮಾತೃಭಾಷೆಯಾಗಿ ಉಳಿಯಲೆಂದು ಅವಿರತ ಪ್ರಯತ್ನ ಮುಂದುವರೆಸಿದ್ದಾರೆ.

ಕನ್ನಡವೆನ್ನುವುದು, ಕರ್ನಾಟಕದಲ್ಲಿ ಹುಟ್ಟಿ, ಕನ್ನಡದಲ್ಲೆ ಓದಿದ ವ್ಯಕ್ತಿಗಳಿಗೆ ಒಂದು ‘ಆತ್ಮ’. ಕನ್ನಡಕ್ಕೆ ದ್ರೋಹಬಗೆದರೆ, ಆತ್ಮಕ್ಕೆ ದ್ರೋಹ ಬಗೆದಂತೆ ಭಾಸವಾಗುತ್ತದೆ. ಕನ್ನಡ ಭಾಷೆಯ, ಕನ್ನಡದ ಸೊಗಡಿನ ಮೇಲೆ ಬರೆದಂತ ಯಾವುದೇ ಹಾಡು ಕೇಳಿದರು ಮೈ ರೋಮಾಂಚನವಾಗುತ್ತದೆ. ಅಂಥಹ ಕನ್ನಡಿಗರಿಗೆ, ಕರ್ನಾಟಕದಿಂದಷ್ಟೆ ಅಲ್ಲದೆ ಭಾರತದಿಂದ ದೂರಾದಾಗ ಕನ್ನಡದ ಪ್ರೀತಿ ಗುಣಾಕಾರದಂತೆ ಹೆಚ್ಚುತ್ತಲೇ ಹೋಗುತ್ತದೆ. ಅಷ್ಟು ದಿಟ್ಟ ಕನ್ನಡ ಪ್ರೇಮಿಗಳ ಮಕ್ಕಳು ಬೇರೆ ದೇಶದಲ್ಲಿ, ಬೇರೆ ಭಾಷೆಯಲ್ಲಿ ಓದಲು ಕಲಿತು, ಕನ್ನಡವನ್ನು ಕಣ್ಣೆತ್ತಿಯೂ ನೋಡದಿದ್ದಾಗ ಎಷ್ಟು ನೋವಾಗಬಹುದು. ಕನ್ನಡವನ್ನು ಸ್ವತಃ ಪ್ರೀತಿಸಿ, ಉಳಿದವರಿಗೂ ಕನ್ನಡದ ಬಗ್ಗೆ ಹೇಳುವಾಗ, ತಮ್ಮ ಮಕ್ಕಳೇ ಕನ್ನಡವನ್ನು ಕಲಿಯಲಾಗುತ್ತಿಲ್ಲವಲ್ಲ ಎಂದು ಕೊರಗುವ ಪರಿವಾರಕ್ಕೆ ಪರಿಹಾರವಾಗಿ ಬಂದದ್ದೆ ಕನ್ನಡ ಶಾಲೆಗಳು.

ಸುಮಾರು ದಶಕಗಳಿಂದ ಕನ್ನಡ ಶಾಲೆಗಳನ್ನು ಪ್ರಪಂಚದಾದ್ಯಂತ ಪಸರಿಸಿದ ಕೀರ್ತಿ ಈ ಶಾಲೆಗಳಿಗೆ ಸಲ್ಲಬೇಕು. ಉತ್ತರ ಅಮೇರಿಕಾದಲ್ಲಿ ಕನ್ನಡ ಕಲಿ ಮತ್ತು ಕನ್ನಡ ಕಲಿಕೆ ಎಂಬ ಹೆಸರಿನಲ್ಲಿ ಕನ್ನಡವನ್ನು ಸುಲಭವಾಗಿ ಕಲಿಸುತ್ತಿದ್ದಾರೆ. ಮುಂದೊಂದು ದಿನ ಈ ಶಾಲೆಗಳಲ್ಲಿ ಕಲಿತ ಮಕ್ಕಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕೈಜೋಡಿಸಿದರೂ ಆಶ್ಚರ್ಯವಿಲ್ಲ.

ಪ್ರಪಂಚದ ಎಲ್ಲಾ ಭಾಷೆಗಳಂತೆ ಕನ್ನಡವೂ ಒಂದು ಭಾಷೆ. ಪ್ರತಿಯೊಂದು ಭಾಷೆಗೂ ಅದರದೇ ಆದ ವಿಶೇಷತೆ ಇರುತ್ತದೆ. ಕನ್ನಡವನ್ನು ಮಾತೃಭಾಷೆಯಾಗಿ ಕಲಿತ ನಮಗೆ ಕನ್ನಡ ಮಾತೃ ಸಮಾನ. ಹಾಗಾಗಿ ಕನ್ನಡಕ್ಕೆ ನಮ್ಮ ಹೃದಯ ಹೆಚ್ಚು ಬಡಿಯುತ್ತದೆ. ಕನ್ನಡಲ್ಲೆ ನಾವು ನಗುತ್ತೇವೆ, ಕನ್ನಡದಲ್ಲೆ ಉಸಿರಾಡುತ್ತೇವೆ, ಕನ್ನಡದಲ್ಲೆ ಕನಸು ಕಾಣುತ್ತೇವೆ, ಹೀಗೆ ಜೀವನದ ಪ್ರತೀ ಹೆಜ್ಜೆಯೂ ಕನ್ನಡದಲ್ಲೆ ಇಡುತ್ತೇವೆ. ಆದರೆ ನಮ್ಮ ಮುಂದಿನ ಪೀಳಿಗೆಯವರು ಕನ್ನಡವನ್ನು ಕಲಿಯದಿದ್ದರೆ, ಅವರ ಜೀವನದಲ್ಲಿ ಕನ್ನಡ ಕೇವಲ ಒಂದು ಭಾಷೆಯಾಗುತ್ತದೆ ಹೊರತು ಅದು ಜೀವನವಾಗುವುದಿಲ್ಲ. ಎಲ್ಲಿಯ ತನಕ ಭಾಷೆ ನಮ್ಮ ಜೀವನದ ಹಾಸುಹೊಕ್ಕಾಗುವುದಿಲ್ಲವೋ ಅಲ್ಲಿಯ ತನಕ ಆ ಭಾಷೆಗೆ ನಾವು ಜೀವವಾಗುವುದಿಲ್ಲ. ಪ್ರತಿಯೊಂದು ಭಾಷೆ ಉಳಿಯುವುದು ಮತ್ತು ಬೆಳೆಯುವುದು ಅದನ್ನು ಬಳಸುವುದರಿಂದ ಮತ್ತು ಅದನ್ನು ಮುಂದಿನ ಪೀಳಿಗೆಗೆ ಕಲಿಸುವುದರಿಂದ. ಹೊರದೇಶದಲ್ಲಿನ ಕನ್ನಡಿಗರ ಮಕ್ಕಳು, ಶಾಲೆಯಲ್ಲಿ ಇಂಗ್ಲೀಷ್ ಕಲಿಯುತ್ತಾರೆ, ಸ್ನೇಹಿತರೊಡನೆ ಕನ್ನಡೇತರ ಭಾಷೆಯನ್ನು ಉಪಯೋಗಿಸುತ್ತಾ ಬೆಳೆಯುತ್ತಾರೆ, ಜೀವನದಲ್ಲಿ ಆರ್ಥಿಕವಾಗಿ ಮುಂದುವರೆದು ಯಶಸ್ವಿಯಾಗುತ್ತಾರೆ. ಆದರೆ ನಮ್ಮ ಕಣ್ಣೆದುರಿಗೆ ಆತ್ಮದಂತಿದ್ದ ಭಾಷೆ, ಮಾತೃ ಹೃದಯದ ಭಾವ ನಶಿಸಿಹೋಗುತ್ತದೆ.

ಕನ್ನಡ ಭಾಷೆಯ, ಕನ್ನಡದ ಸೊಗಡಿನ ಮೇಲೆ ಬರೆದಂತ ಯಾವುದೇ ಹಾಡು ಕೇಳಿದರು ಮೈ ರೋಮಾಂಚನವಾಗುತ್ತದೆ. ಅಂಥಹ ಕನ್ನಡಿಗರಿಗೆ, ಕರ್ನಾಟಕದಿಂದಷ್ಟೆ ಅಲ್ಲದೆ ಭಾರತದಿಂದ ದೂರಾದಾಗ ಕನ್ನಡದ ಪ್ರೀತಿ ಗುಣಾಕಾರದಂತೆ ಹೆಚ್ಚುತ್ತಲೇ ಹೋಗುತ್ತದೆ.

ಉತ್ತರ ಅಮೇರಿಕಾದಲ್ಲಿ ಕನ್ನಡವನ್ನು ಕಲಿಸುವ ಹಿರಿಯರು ಮತ್ತು ಕಲಿಯುವ ಮಕ್ಕಳನ್ನು ನೋಡಿದಾಗ ಕನ್ನಡದ ಜೀವ ಹೆಚ್ಚಿದಂತೆ ಕಾಣುತ್ತದೆ. ಪ್ರಪಂಚದ ಎಲ್ಲಾ ಭಾಷೆಗಳು ನಮಗೆ ಸಂವಹನದ ಸಾಧನೆಗಳಾದರೆ ಮಾತೃ ಭಾಷೆ ನಮಗೆ ಜೀವ. ಎಲ್ಲಾ ಜೀವಿಗಳಿಗೂ ಅವರವರ ಮಾತೃ ಭಾಷೆ ಶ್ರೇಷ್ಠವಾಗಲೇಬೇಕು.

ವಿಪರ್ಯಾಸವೆಂಬಂತೆ ಅನೇಕ ಕನ್ನಡಿಗರಿಗೆ ಇಂಗ್ಲೀಷ್ ಜ್ಞಾನದ ಮಾಪನವಾಗಿದೆ. ಯಾವ ಮಕ್ಕಳು ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಾರೋ ಆ ಮಕ್ಕಳು ಬುದ್ಧಿವಂತರೆಂದು ತಿಳಿದಿದ್ದಾರೆ. ಇದು ಹೇಗೆಂದರೆ, ಸಾವಿರದ ಎಂಬತ್ತನೆಯ ಇಸವಿಯ ಒಂದು ಸಂಗತಿ, ನನ್ನ ಅಕ್ಕನ ಸ್ನೇಹಿತೆಯರು ಮನೆಗೆ ಬಹಳ ಬರುತ್ತಿದ್ದರು. ಹತ್ತನೆ ತರಗತಿ ಮುಗಿಸಿ ಅವರೆಲ್ಲ ಪದವಿ ಪೂರ್ವ ಕಾಲೇಜಿಗೆ ಹೋಗಬೇಕಿತ್ತು. ಕೆಲವರು ಕಾಮರ್ಸ್ ತಗೆದುಕೊಳ್ಳುತ್ತೇನೆ ಎಂದರೆ, ಇನ್ನು ಕೆಲವರು ಆರ್ಟ್ಸ್, ಮತ್ತೆ ಕೆಲವರು ಸೈನ್ಸ್. ಮಗ್ಗಿ ಚೆನ್ನಾಗಿ ಬರುತ್ತಿದ್ದವರು ಕಾಮರ್ಸ್ ಎಂದು ನಿರ್ಧರಿಸಿದ್ದರು, ಸಮಾಜ ವಿಷಯದಲ್ಲಿ ಹೆಚ್ಚು ಬುದ್ಧಿವಂತವರಿದ್ದವರು ಆರ್ಟ್ಸ್. ಆದರೆ ಸೈನ್ಸ್ ತೆಗೆದುಕೊಳ್ಳುವವರ ಕಾರಣ ನನಗೆ ಈಗಲೂ ಜಿಜ್ಞಾಸೆಗೆ ಬೀಳಿಸಿದೆ. ಇದು ಕೇವಲ ಮಕ್ಕಳ ಕಾರಣವಲ್ಲ, ಅವರ ಪಾಲಕರೂ ಕೂಡ ಅದೇ ಕಾರಣ ಹೇಳುತ್ತಿದ್ದರು. ಯಾವ ಮಕ್ಕಳು ಚಿತ್ರವನ್ನು ಚೆನ್ನಾಗಿ ಬಿಡಿಸುತ್ತಾರೊ ಆ ಮಕ್ಕಳು ಸೈನ್ಸ್ ತೆಗೆದುಕೊಳ್ಳುತ್ತಿದ್ದರು. ಏಕೆಂದರೆ ವಿಜ್ಞಾನದಲ್ಲಿ ಪ್ರಾಣಿಗಳ ಮತ್ತು ಸಸ್ಯಗಳ ಚಿತ್ರ ಬಿಡಿಸಬೇಕಾಗುತ್ತದೆ, ಹಾಗಾಗಿ ಚಿತ್ರ ಬಿಡಿಸಲು ಬಂದರೆ ಅವರನ್ನು ಸೈನ್ಸ್ ಗೆ ಸೇರಿಸುತ್ತಿದ್ದರು.

ಚಿತ್ರ ಬಿಡಿಸುವ ಮಕ್ಕಳಿಗೆ ಚಿತ್ರಕಲಾ ಶಾಲೆಗೆ ಸೇರಿಸಬೇಕು ಎನ್ನುವ ಜ್ಞಾನ ಈಗಲೂ ಬಹುತೇಕ ಪಾಲಕರಿಗೆ ಇಲ್ಲ. ಆದರೆ ಚಿತ್ರಕಲೆ ಗೊತ್ತಿದ್ದವರನ್ನು ಸೈನ್ಸ್ ವಿಭಾಗಕ್ಕೆ ಸೇರಿಸುವುದಕ್ಕೆ, ಇಮಾಮ್ ಸಾಬಿ ಮತ್ತು ರಾಮನವಮಿಯ ಸಂಬಂಧ ಎನ್ನಬಹುದು. ಅದೇ ರೀತಿಯಲ್ಲಿ ಇತ್ತೀಚಿನ ಕರ್ನಾಟಕದ ಬಹುತೇಕ ಪಾಲಕರು ಇಂಗ್ಲೀಷ್ ಭಾಷೆಯ ಕಲಿಕೆಯ ಮೇಲೆ ಮಕ್ಕಳ ಜ್ಞಾನವನ್ನು ಅಳಿಯುತ್ತಾರೆ.

ಮಾತನಾಡುವಾಗ ಮಧ್ಯೆ ಮಧ್ಯೆ ಇಂಗ್ಲೀಷ್ ಉಪಯೋಗಿಸಿದರೆ ಬುದ್ಧಿವಂತರೆಂದು ಗುರುತಿಸಿಕೊಳ್ಳುತ್ತಾರೆ. ಹಾಗಾಗಿ ಬೆಂಗಳೂರಿಗರ ಕನ್ನಡದಲ್ಲಿ ಕನ್ನಡವನ್ನು ಭೂತಗನ್ನಡಿ ಹಾಕಿ ಹುಡುಕಬೇಕು ಎಂದು ಕೆಲವರು ಕುಹುಕವಾಡುತ್ತಾರೆ. ಇತ್ತೀಚಿಗೆ ಆ ಮಾತು ಬೆಂಗಳೂರನ್ನು ಮೀರಿ ಕರ್ನಾಟಕದ ಸಣ್ಣ ಸಣ್ಣ ಊರುಗಳಿಗೂ ಅನ್ವಯಿಸುತ್ತಿರುವುದು ವಿಪರ್ಯಾಸ.

ಕರ್ನಾಟಕದ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡುವ ಉತ್ಸಾಹ ಹೆಚ್ಚಾದಂತೆ, ಹೊರದೇಶದ ಮಕ್ಕಳಿಗೆ ಕನ್ನಡ ಕಲಿಸುವ ಉತ್ಸಾಹ ಹೆಚ್ಚಾಗುತ್ತಿದೆ. ಕನ್ನಡಿಗರಿಗೆ, ‘ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಮನಃ ಕುಣಿಯುವುದು’. ಹಾಗೆಯೆ ಮತ್ತೊಬ್ಬ ಕವಿವಾಣಿಯಂತೆ ‘ಎಲ್ಲಾದರೂ ಇರು, ಎಂಥಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.’

(ಚಿತ್ರಗಳು: ಸಾಂದರ್ಭಿಕ)

About The Author

ಪ್ರಶಾಂತ್‌ ಬೀಚಿ

ಪ್ರಶಾಂತ್‌ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ