Advertisement
ಕನ್ನಡ ಕಾವ್ಯಮಾಲೆಯ ಕುಸುಮ: ಗೋಲ ಗುಮ್ಮಟ

ಕನ್ನಡ ಕಾವ್ಯಮಾಲೆಯ ಕುಸುಮ: ಗೋಲ ಗುಮ್ಮಟ

ದುಂಡಪ್ಪ ಸಿದ್ದಪ್ಪ ಕರ್ಕಿಯವರು ೧೫-೧೧-೧೯೦೭ ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಜನಿಸಿದರು. ಇವರ ತಂದೆ ಸಿದ್ದಪ್ಪ, ತಾಯಿ ದುಂಡವ್ವ. ಪ್ರಾರಂಭಿಕ ಶಿಕ್ಷಣ ಬೆಲ್ಲದ ಬಾಗೇವಾಡಿಯಲ್ಲಿ ಮಾಡಿದ ನಂತರ ಧಾರವಾಡದ ಕರ್ನಾಟಕ ಕಾಲೇಜಿನಿಂದ ಪದವಿ ಪಡೆದರು. ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿ ಗಳಿಸಿದ ನಂತರದಲ್ಲಿ ಪ್ರೊ. ಕೆ.ಜಿ.ಕುಂದಣಗಾರರ ಮಾರ್ಗದರ್ಶನದಲ್ಲಿ ‘ಕನ್ನಡ ಛಂದಸ್ಸಿನ ವಿಕಾಸ’ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಬಿ.ಟಿ. ಪದವಿ ಪಡೆದರು. ‘ನಕ್ಷತ್ರಗಾನ’ ಇವರ ಮೊದಲ ಕವನ ಸಂಕಲನವಾಗಿದ್ದು ನಾಡಿನ ಮಹಾನ್ ವ್ಯಕ್ತಿಗಳ ಕುರಿತಾದ ಕವನಗಳು ‘ಕರಿಕೆ-ಕಣಗಲು’ ಕವನ ಸಂಗ್ರಹದಲ್ಲಿ ಪ್ರಕಟವಾಗಿದೆ. ತನನತೋಂ, ಬಣ್ಣದ ಚೆಂಡು (ಕವನ ಸಂಕಲನಗಳು). ‘ಕನ್ನಡ ಛಂದೋವಿಕಾಸ’ ಇವರ ಪಿಎಚ್.ಡಿ. ಮಹಾಪ್ರಬಂಧವೂ ಪ್ರಕಟಿತ. ಜೀವನ ಪ್ರಕೃತಿ (ಕಥಾ ಸಂಕಲನ). ಬೇಜುಬರುವಾ ಇವರ ಅನುವಾದಿತ ಕೃತಿ. ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ, ಅವರು ಬರೆದ “ಗೋಲ ಗುಮ್ಮಟ” ಕವನ ಇಂದಿನ ಓದಿಗಾಗಿ.

ಗೋಲ ಗುಮ್ಮಟ


ಗೋಲ ಗುಮ್ಮಟ ಬೋಲ ಗುಮ್ಮಟ
ಗುಮ್ಮ ಗೂಢವಿದು ಗುಮ್ಮಟ
ಬಯಲ ಬೊಮ್ಮದ ಸುಳುದೋರಿಹುದು
ನೆಟ್ಟ ದಿಟ್ಟೆಗಿದು ಗುಮ್ಮಟ.

ಗೆದ್ದು ನಿಂತಿಹುದು ಎಲ್ಲ ಗುಮ್ಮಟವ
ವಿಜಯಪುರದ ಈ ಗುಮ್ಮಟ
ಕಂಬಗಿಂಬಗಳ ಹಂಗ ಹರಿದು ಬಯ-
ಲನ್ನೆ ಅಪ್ಪಿಹುದು ಗುಮ್ಮಟ

ಅನ್ಯ ಸಂಸ್ಕೃತಿಯ ಮಾನ್ಯ ಕಾಣ್ಕೆ ಕೃತಿ –
ಗಿಳಿಯೆ ಮೂಡಿತಿದು ಗುಮ್ಮಟ
ಸರ್ವ ಧರ್ಮದಲಿ ಒಂದೆ ಮರ್ಮವನು
ಸೂಚ್ಯಗೈದಿಹುದು ಗುಮ್ಮಟ.

ರೂಪಬ್ರಹ್ಮದಲಿ ಶಬ್ದ ಬ್ರಹ್ಮವನು
ತುಂಬಿಕೊಂಡಿಹುದು ಗುಮ್ಮಟ
ಬೆರಗಿನೊಡನೆ ನಿಬ್ಬೆರಗ ನೆಯ್ದಿಹುದು
ತನ್ನ ಗರ್ಭದಲಿ ಗುಮ್ಮಟ

ಶಬ್ದ ಮಾಯೆಯಲಿ ಸಪ್ತಛಾಯೆಗಳ-
ನಿಟ್ಟು ಆಡಿಸಿದೆ ಗುಮ್ಮಟ
ಸುಳಿದ ಶಬ್ದ ನಿಶ್ಯಬ್ದಗೊಳಿಸುವುದು
ಗೂಢದೊಡಲಿನಲಿ ಗುಮ್ಮಟ.

ಬಯಲ ಬಗೆದು ನೋಡಲ್ಲಿ ಮುಗಿಲ ನೆಲ
ವನ್ನು ತಬ್ಬಿದೆಡೆ ಗುಮ್ಮಟ
ಏಕಮೇವ ಆಕಾರದಲ್ಲಿ ಸಾ-
ಕ್ಷಾತ್ತಿಗೈದಿಹುದು ಗುಮ್ಮಟ.

ಜಗದ ಪೀಠದಲಿ ಗಗನ -ದೇವ ನೆಲೆ-
ಗೊಂಡ ಪರಿಯೊಳಿದೆ ಗುಮ್ಮಟ
ಕಾಲ ದೇಶ ಮತ ಪಂಥದಾಚೆಗಿಹ
ಸ್ಪೂರ್ತಿಜನ್ಯವಿದು ಗುಮ್ಮಟ.
*

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ