Advertisement
‘ಕಾವ್ಯಾ ಓದಿದ ಹೊತ್ತಿಗೆʼ: ಇನ್ನು ಮುಂದೆ ತಿಂಗಳಿಗೆರೆಡು ಬುಕ್‌ ಚೆಕ್

‘ಕಾವ್ಯಾ ಓದಿದ ಹೊತ್ತಿಗೆʼ: ಇನ್ನು ಮುಂದೆ ತಿಂಗಳಿಗೆರೆಡು ಬುಕ್‌ ಚೆಕ್

ಒಬಾಮಾ ಅಧ್ಯಕ್ಷರಾದರು ಅಂದ ತಕ್ಷಣ ಅಮೆರಿಕದಲ್ಲಿ ಕಪ್ಪು ಜನರ ಕಷ್ಟಗಳೆಲ್ಲ ಮುಗಿಯಿತು ಅಂತ ಅರ್ಥವಲ್ಲ. ಇದೊಂಥರಾ ಇಂದಿರಾ ಪ್ರಧಾನಿಯಾಗಿದ್ದರು ಎಂದು ಭಾರತದ ಹೆಂಗಸರಿಗೆಲ್ಲ ತಮ್ಮ ಕೋಟಲೆಗಳಿಂದ ಮುಕ್ತಿ ಸಿಕ್ಕಿಬಿಟ್ಟಿತು ಎಂದ ಹಾಗಾಗುತ್ತದೆ. ಇಂದಿನ ದಿನಮಾನ ನೋಡಿದರೆ ಬರಾಕ್ ಮತ್ತು ಮಿಶೆಲ್ ನಿರ್ಮಿಸಿದ ಕಾಲುದಾರಿ ಹೆದ್ದಾರಿಯಾಗಲು ಇನ್ನೂ ಬಹಳ ಸಮಯವಿದೆ ಎಂಬುದಂತೂ ಖಚಿತ. ಆದರೆ ಮುಂದೆಂದೋ ನಿರ್ಮಾಣವಾಗಬೇಕಿರುವ ಮಹಲಿಗೆ ಮೊದಲ ಇಟ್ಟಿಗೆ ಇಟ್ಟವರು ಇವರು ಎಂಬ ಸತ್ಯವಂತೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.
ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಲೇಖಕಿ ಕಾವ್ಯಾ ಕಡಮೆ ತಾವು ಓದಿದ ಪುಸ್ತಕಗಳ ಕುರಿತು ತಿಂಗಳಿಗೆರೆಡು ಸಲ ಬರೆಯುತ್ತಾರೆ

 

ಮಿಶೆಲ್ ಮತ್ತು ಬರಾಕ್ ನಿರ್ಮಿಸಿದ ಕಾಲುದಾರಿ

“ನೀನು ಗಮನಿಸಿದ್ದೀಯಾ? ಒಂದು ಸುಲಭದ ಹಾದಿ, ಇನ್ನೊಂದು ಕಷ್ಟದ ಹಾದಿ ಇದ್ದರೆ, ನೀನು ಯಾವತ್ತಿಗೂ ದುರ್ಗಮವಾದುದನ್ನೇ ಆಯ್ದುಕೊಳ್ಳುತ್ತೀ.” ಪಾರ್ಕಿನಲ್ಲಿ ಕೈಕೈಹಿಡಿದು ನಡೆಯುತ್ತ ತಮ್ಮ ಭವಿಷ್ಯದ ಕನಸುಗಳ ಬಗ್ಗೆ ಮಾತನಾಡುತ್ತಿದ್ದಾಗ ತನ್ನ ಪ್ರಿಯಕರ ಬರಾಕ್‍ ರನ್ನು ಮಾತಿನ ಮಧ್ಯೆ ನಿಲ್ಲಿಸಿ ಅವರ ಕೆನ್ನೆಯನ್ನು ಬೊಗಸೆಯಲ್ಲಿ ತುಂಬಿಕೊಂಡು ಮಿಶೆಲ್ ನುಡಿದ ಮಾತುಗಳಿವು. ಆಗಿನ್ನೂ ಮಿಶೆಲ್ ರಾಬಿನ್‍ಸನ್ ಮತ್ತು ಬರಾಕ್ ಒಬಾಮಾ ಚಿಕಾಗೋದ ಲಾ ಫರ್ಮ್‍ ವೊಂದರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. ಆತನ ಸೋಗಿಲ್ಲದ ಪ್ರಾಮಾಣಿಕತೆ, ಆಕೆಯ ನೋ ನಾನ್‍ಸೆನ್ಸ್ ದಿಟ್ಟತನ ಪರಸ್ಪರರನ್ನು ಆಕರ್ಷಿಸಿ ಇಷ್ಟು ಹತ್ತಿರಕ್ಕೆ ತಂದು ನಿಲ್ಲಿಸಿತ್ತು.

ಅಮೆರಿಕದ ಮೊದಲ ಆಫ್ರಿಕನ್-ಅಮೆರಿಕನ್ ಅಧ್ಯಕ್ಷರಾಗಿ 2008ರಲ್ಲಿ ಆಯ್ಕೆಯಾದ ಬರಾಕ್ ಒಬಾಮಾ ತಮ್ಮ ಅವಧಿಯ ಎರಡು ವರ್ಷದ ಕೊನೆಗೆ ತಮ್ಮ ಮತ್ತು ಮಿಶೆಲ್‍ ರ ನಡುವೆ ಆಳವಾಗುತ್ತಿರುವ ಅಂತರವನ್ನು ಅಸಹಾಯಕರಾಗಿ ನೋಡುತ್ತಾರೆ. “ಸಂಜೆ ಹೆಂಡತಿ- ಮಕ್ಕಳೊಡನೆ ಊಟ ಮಾಡಿ ಹೋದವನು ಎಲ್ಲ ಕೆಲಸ ಮುಗಿಸಿ ಓವಲ್ ಆಫೀಸಿನಿಂದ ಪುನಃ ಮನೆಗೆ ಮರಳುವಾಗ ರಾತ್ರಿ ಹನ್ನೊಂದೋ ಹನ್ನೆರಡೋ ಆಗಿರುತ್ತಿತ್ತು. ಬೇಗನೆ ಏಳುವ ಅಭ್ಯಾಸವಿಟ್ಟುಕೊಂಡಿದ್ದ ಮಿಶೆಲ್ ಊಟವಾದ ತಕ್ಷಣವೇ ತನ್ನ ಸ್ಟಡಿಗೆ ಹೋಗಿಬಿಡುತ್ತಿದ್ದಳು. ರಾತ್ರಿ ನಾನು ಮರಳಿದಾಗ ಆಗಲೇ ಅವಳ ಅರ್ಧ ನಿದ್ದೆ ಆಗಿರುತ್ತಿತ್ತು. ಆಗೆಲ್ಲ ಅನ್ನಿಸಿದ್ದಿದೆ, ಮೊದಲು ನಮ್ಮಿಬ್ಬರ ಸಂಬಂಧದಲ್ಲಿ ಒಂದು ಬಗೆಯ ಹಗುರವಿತ್ತಲ್ಲ, ಈ ಗದ್ದಲದಲ್ಲಿ ಅದೆಲ್ಲಿ ಕಳೆದುಹೋಯಿತು ಎಂದು ಖೇದವಾಗಿದ್ದಿದೆ” ಎನ್ನುತ್ತಾರೆ.

ಅಧ್ಯಕ್ಷೀಯ ಅವಧಿ ಪೂರ್ಣವಾದ ಮೇಲೆ ಅಮೆರಿಕದ ಮಾಜಿ ಪ್ರೆಸಿಡೆಂಟಿಗೂ, ಫಸ್ಟ್ ಲೇಡಿಗೂ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳು ಪೈಪೋಟಿಗೆ ಬಿದ್ದು ‘ಬುಕ್ ಡೀಲ್’ಗಳನ್ನು ನೀಡುತ್ತವೆ. ನಾಲ್ಕು ಅಥವಾ ಎಂಟು ವರ್ಷಗಳ ಅವಧಿಯಲ್ಲಿ (ಎರಡು ಟರ್ಮ್‍ ನ ನಂತರ ಮತ್ತೆ ಚುನಾವಣೆಗೆ ನಿಲ್ಲುವ ಹಾಗಿಲ್ಲ) ಗಳಿಸಿದ ಅನುಭವಗಳ, ಕೈಗೊಂಡ ನಿರ್ಧಾರಗಳ ಕಥನವನ್ನು ಸ್ವತಃ ಮಾಜೀ ಅಧ್ಯಕ್ಷರ ಮಾತಿನಲ್ಲೇ ಕೇಳುವ ಉತ್ಸಾಹದಿಂದ ಲಕ್ಷಾಂತರ ಜನ ಈ ಪುಸ್ತಕಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ. ಅಂಥವೇ ಎರಡು ಪುಸ್ತಕಗಳು ಕಳೆದ ವರ್ಷ ಪ್ರಕಟವಾದ ಬರಾಕ್‍ ರ ‘ಅ ಪ್ರಾಮಿಸ್ಡ್ ಲ್ಯಾಂಡ್’ ಮತ್ತು 2018ರಲ್ಲಿ ಹೊರಬಂದ ಮಿಶೆಲ್‍ ರ ‘ಬಿಕಮಿಂಗ್.’

ಚಿಕಾಗೋ ಪಟ್ಟಣದ ದಕ್ಷಿಣ ಭಾಗ ಎಂದೊಡನೆ ಮೂಗು ಮುರಿಯುವವರೇ ಎಲ್ಲ. ಒತ್ತೊತ್ತಾಗಿ ನಿಂತ ಮನೆಗಳು, ಅಲ್ಲಿ ವಾಸಿಸುವ ಆಫ್ರಿಕನ್-ಅಮೆರಿಕನ್ ಕುಟುಂಬಗಳು, ಬಂದೂಕು- ಮಾದಕ ವಸ್ತು- ಕೊಲೆಗಳ ಕುರಿತಾದ ವರದಿಗಳು ಈ ಭಾಗವನ್ನು ರಾಜಕಾರಣಿಗಳು ಮತ್ತು ಮೀಡಿಯಾದವರು ಅಸಡ್ಡೆಯಿಂದ ಕಾಣುವಂತೆ ಮಾಡಿವೆ. ಅದೇ ಕಾರಣಕ್ಕಾಗಿ ಮಿಶೆಲ್ ಒಬಾಮ “ನಾನು ಚಿಕಾಗೋದ ಸೌತ್ ಸೈಡ್‍ ನಲ್ಲಿ ಬೆಳೆದವಳು” ಎಂದು ಎಲ್ಲ ಸಂದರ್ಭಗಳಲ್ಲೂ ಒತ್ತಿ ಹೇಳುವುದಕ್ಕೆ ಮಹತ್ವವಿದೆ. ಮಕ್ಕಳನ್ನು ಸರಿದಾರಿಗೆ ಹಚ್ಚಲೇ ಬೇಕು ಎಂದು ಹಟತೊಟ್ಟ ತಾಯಿ ಮತ್ತು ಕಾಯಿಲೆಯ ನಡುವೆಯೂ ನಿರಂತರ ದುಡಿದ ತಂದೆಯ ಬಗ್ಗೆ ಆದ್ರವಾಗಿ ಬರೆಯುತ್ತ ಇಂದಿನ ಅಮೆರಿಕದಲ್ಲೂ ಕಪ್ಪುವರ್ಣೀಯರ ಏಳ್ಗೆಗೆ ಎಷ್ಟು ತಡೆಗೋಡೆಗಳಿವೆ ಎಂಬುದನ್ನು ಮಿಶೆಲ್ ನಿರೂಪಿಸುತ್ತಾರೆ.

ಅದಕ್ಕೆ ತದ್ವಿರುದ್ಧವಾಗಿ ಬರಾಕ್ ಹುಟ್ಟಿ ಬೆಳೆದದ್ದೆಲ್ಲ ಹವಾಯಿ ಎಂಬ ಅಮೆರಿಕನ್ ದ್ವೀಪದಲ್ಲಿ. ತಂದೆ- ತಾಯಿಯರ ವಿಚ್ಛೇದನದ ನಂತರ ಹವಾಯಿಯ ಅಜ್ಜ-ಅಜ್ಜಿಯ ಮನೆಯಲ್ಲಿ ಬೆಳೆದವರು. ಅವರಿಂದ “ಟೂಟ್” ಎಂದು ಕರೆಸಿಕೊಳ್ಳುತ್ತಿದ್ದ ಅಜ್ಜಿಯ ಬಗ್ಗೆ, ತಾಯಿಯ ಸ್ವತಂತ್ರ್ಯ ಮನೋಗುಣದ ಬಗ್ಗೆ ಸಂಕ್ಷಿಪ್ತವಾಗಿಯೂ, ಸಾಂದ್ರವಾಗಿಯೂ ಬರಾಕ್ ಬರೆಯುತ್ತಾರೆ. “ನಿನಗೆ ಗೊತ್ತಾ ಬ್ಯಾರಿ (ಇದು ಬರಾಕ್‍ ರನ್ನು ಮನೆಯವರೆಲ್ಲ ಕರೆವ ಹೆಸರು,) ವಯಸ್ಸಾದಾಗ ಹೆಚ್ಚೇನೂ ಬದಲಾಗುವುದಿಲ್ಲ. ಒಳಗೆ ನಾವು ಹಳೆಯ ನಾವೇ ಆಗಿರುತ್ತೇವೆ, ದೇಹಕ್ಕೆ ಮಾತ್ರ ವಯಸ್ಸಾಗಿರುತ್ತದೆ” ಎಂದ ಅಜ್ಜಿಯ ಮಾತನ್ನು ನೆನಪು ಮಾಡಿಕೊಳ್ಳುತ್ತಾರೆ.

ಮಿಶೆಲ್‍ ರ ಪುಸ್ತಕ ‘ಬಿಕಮಿಂಗ್’ ಚಿಕಾಗೋ ಸೌಥ್ ಸೈಡಿನ ಮನೆಯೊಂದರಲ್ಲಿ ಅವರು ಬೆಳೆದ ಬಗ್ಗೆ, ಚಿಕ್ಕಂದಿನಿಂದಲೂ ಓದುವುದರಲ್ಲಿ ಮುಂದಿದ್ದು ನಂತರ ಪ್ರಿನ್ಸ್‍ಟನ್ ಮತ್ತು ಹಾರ್ವರ್ಡ್‍ ಗಳಲ್ಲಿ ಕಲಿತ ಬಗ್ಗೆ, ನಂತರ ಚಿಕಾಗೋಗೆ ಮರಳಿ ವಕೀಲಿ ವೃತ್ತಿ ಕೈಗೊಂಡು, ಸ್ವಲ್ಪ ವರ್ಷಕ್ಕೆ ‘ಕಾರ್ಪೊರೆಟ್ ಲಾ’ದಿಂದ ಬೇಸತ್ತು ಸಮುದಾಯ ಸಂಘಟಕಿಯಾಗಿ ಅವರು ಕೆಲಸ ಮಾಡಿದ ಬಗ್ಗೆ ವಿವರವಾದ ಚಿತ್ರವಿದೆ. ಮೊದಲನೆಯ ದಿನವೇ ಕೆಲಸಕ್ಕೆ ತಡವಾಗಿ ಬಂದ ಬರಾಕ್‍ ರನ್ನು ಗಮನಿಸಿದ್ದು, ಐಸ್ರ್ಕೀಮ್ ಮೆಲ್ಲುತ್ತ ಪ್ರಥಮ ಬಾರಿ ಮುತ್ತಿಟ್ಟಿದ್ದು, “ಇವನು ಎಂದಿಗೂ ಹಣದ ಬೆನ್ನತ್ತಿ ಹೋಗುವ ಮನುಷ್ಯನಲ್ಲ” ಎಂದು ಕಂಡುಕೊಂಡಿದ್ದು, ಆ ನಂತರ ಮದುವೆ, ಮಲಿಯಾ- ಸಾಶಾ ಹುಟ್ಟಿದ್ದು, ಗಂಡ ಕೆಲಸದ ನಿಮಿತ್ತ ವಾರಗಟ್ಟಲೆ ಪರವೂರಿನಲ್ಲಿ ಇರಬೇಕಾದಾಗ ಒಬ್ಬರೇ ಮನೆಯನ್ನೂ, ಮಕ್ಕಳನ್ನೂ, ತಮ್ಮ ಕೆಲಸವನ್ನೂ ನಿಭಾಯಿಸಿದ್ದು ಎಲ್ಲದರ ಕುರಿತು ವಿವರವಾಗಿ ಬರೆದುಕೊಂಡಿದ್ದಾರೆ.

ಮದುವೆಯ ಮೊದಲು ಒಮ್ಮೆ ಮಧ್ಯರಾತ್ರಿ ಎಚ್ಚರಾದಾಗ ಬರಾಕ್ ಜಂತಿಯ ಮೇಲೆ ಕಣ್ಣು ನೆಟ್ಟು ನಿಂತಿದ್ದನ್ನು ಕಂಡು ಮಿಶೆಲ್ ಗಾಬರಿಯಾಗುತ್ತಾರೆ. “ಏನಾಯ್ತು? ಮಾಳಿಗೆಯೇನಾದರೂ ಸೋರುತ್ತಿದೆಯೇ? ಯಾವುದಾದರೂ ಹುಳವನ್ನು ಕಂಡೆಯಾ?” ಎಂಬ ಅವರ ಪ್ರಶ್ನೆಗೆ ಬರಾಕ್‍ ರಿಂದ “ಒಹ್, ಏನು? ಇಲ್ಲ ಇಲ್ಲ. ನಾನು ಇನ್‍ಕಮ್ ಇನ್‍ಇಕ್ವಾಲಿಟಿಯ ಬಗ್ಗೆ ಯೋಚಿಸುತ್ತಿದ್ದೆ” ಎನ್ನುವ ಉತ್ತರ ಬರುತ್ತದೆ. ಸದಾಕಾಲ ಏಕಾಂತ ಬಯಸುವ, ಓದುತ್ತ ಯೋಚಿಸುತ್ತ ನಡೆವ ಈ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಬಹಳ ಸಮಯವೇ ಹಿಡಿಯಿತು ಎನ್ನುತ್ತಾರೆ ಮಿಶೆಲ್.

ರೆಸ್ಟೋರೆಂಟಿನಲ್ಲಿ ಒಮ್ಮೆ ಊಟ ಮಾಡುತ್ತ ಬರಾಕ್ “ಯಾಕೆ ಎಲ್ಲರೂ ಈ ಮದುವೆ ಎಂಬುದರ ಹಿಂದೆ ಬಿದ್ದಿದ್ದಾರೆ. ನನಗಂತೂ ಅದರಲ್ಲಿ ನಂಬಿಕೆಯಿಲ್ಲ” ಎಂದು ಮಿಶೆಲ್‍ ರನ್ನು ಕೆಣಕಲೆಂಬಂತೆ ಚರ್ಚೆಗೆಳೆಯುತ್ತಾರೆ. ಮಿಶೆಲ್ ಕೂಡ ಲಾಯರ್ ಆದ ಕಾರಣ ಮದುವೆ ಏಕೆ ಮುಖ್ಯ ಎಂಬ ಬಗ್ಗೆ ಪಾಯಿಂಟ್ ಮೇಲೆ ಪಾಯಿಂಟ್ ಹಾಕುತ್ತಾರೆ. ಚರ್ಚೆಯ ಬಿಸಿಯೇರುತ್ತ ಹೋಗಿ ಇಬ್ಬರ ನಡುವೆ ಅಂದು ದೊಡ್ಡ ವಾಕ್‍ ಸಮರವೇ ನಡೆಯುತ್ತದೆ. ಇನ್ನೇನು ಅದು ಉತ್ತುಂಗಕ್ಕೇರುತ್ತದೆ ಎಂದಾಗ ಊಟ ಮುಗಿದು ಕೊನೆಯ ಸಿಹಿತಿಂಡಿ ಬರುತ್ತದೆ. ಸಿಹಿಯ ಜೊತೆ ವ್ಹೇಟರ್ ಉಂಗುರವಿರುವ ಪುಟ್ಟ ಪೆಟ್ಟಿಗೆಯನ್ನು ತಂದಿದ್ದಾನೆ. ಮಿಶೆಲ್‍ ಗೆ ಶಬ್ದಗಳೇ ನಿಲುಕುತ್ತಿಲ್ಲ. “ಸದ್ಯ ಇದಾದರೂ ನಿನ್ನನ್ನು ಸುಮ್ಮನಾಗಿಸಿತಲ್ಲ” ಅಂತಂದು ಬರಾಕ್ ಮಿಶೆಲ್‍ ರ ಮುಂದೆ ಒಂಟಿ ಮಂಡಿಯೂರಿ “ಮಿಶೆಲ್ ರಾಬಿನ್‍ಸನ್, ವಿಲ್ ಯೂ ಮ್ಯಾರಿ ಮೀ?” ಎಂದು ಮದುವೆಗೆ ಪ್ರಪೋಸ್ ಮಾಡುತ್ತಾರೆ.

ಮಕ್ಕಳನ್ನು ಸರಿದಾರಿಗೆ ಹಚ್ಚಲೇ ಬೇಕು ಎಂದು ಹಟತೊಟ್ಟ ತಾಯಿ ಮತ್ತು ಕಾಯಿಲೆಯ ನಡುವೆಯೂ ನಿರಂತರ ದುಡಿದ ತಂದೆಯ ಬಗ್ಗೆ ಆದ್ರವಾಗಿ ಬರೆಯುತ್ತ ಇಂದಿನ ಅಮೆರಿಕದಲ್ಲೂ ಕಪ್ಪುವರ್ಣೀಯರ ಏಳ್ಗೆಗೆ ಎಷ್ಟು ತಡೆಗೋಡೆಗಳಿವೆ ಎಂಬುದನ್ನು ಮಿಶೆಲ್ ನಿರೂಪಿಸುತ್ತಾರೆ.

ಅಧ್ಯಕ್ಷರಾದ ಬಳಿಕ ವೈಟ್‍ ಹೌಸಿನಲ್ಲಿ ವಾಸಿಸಿದ ಬಗ್ಗೆ ಬರಾಕ್ ಮತ್ತು ಮಿಶೆಲ್ ಇಬ್ಬರೂ ಆಪ್ತವಾಗಿ ಬರೆಯುತ್ತಾರೆ. “ನಮ್ಮನ್ನು ಪ್ರೀತಿಸುವ ಜನರ ಮಧ್ಯೆ ಇರಲು ಎಷ್ಟು ಪುಣ್ಯ ಮಾಡಿದ್ದೆವೋ” ಎಂದು ವೈಟ್‍ ಹೌಸಿನ ಸಿಬ್ಬಂದಿಯನ್ನು ಕೊಂಡಾಡುತ್ತಾರೆ. 135 ಕೋಣೆಗಳ ಈ ಅಪೂರ್ವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್, ಥಿಯೆಟರ್ ಮುಂತಾದ ಎಲ್ಲ ಸೌಲಭ್ಯಗಳಿವೆ. ಸುಸಜ್ಜಿತ ಕಿಚನ್ನಿನಲ್ಲಿ ಜಗತ್ತಿನ ಯಾವ ಖಾದ್ಯ ಬೇಕಿದ್ದರೂ ತಯಾರಿಸಿಕೊಡುವ ಶೆಫ್‍ ಗಳಿದ್ದಾರೆ.

ಈ ದಂಪತಿ ವೈಟ್‍ ಹೌಸ್ ಪ್ರವೇಶಿಸಿದಾಗ ಅವರ ಮಕ್ಕಳು ಇನ್ನೂ ಚಿಕ್ಕವರಿದ್ದರು. ಹತ್ತು ವರ್ಷದ ಮಲಿಯಾ ಮತ್ತು ಆರು ವರ್ಷದ ಸಾಶಾರನ್ನು ಮೀಡಿಯಾದಿಂದ ಕಾಯ್ದುಕೊಳ್ಳುವುದೇ ನನಗೆ ದೊಡ್ಡ ಚಿಂತೆಯಾಗಿತ್ತು ಎನ್ನುತ್ತಾರೆ ಮಿಶೆಲ್. ಅಮೆರಿಕದ ಪ್ರೆಸಿಡೆಂಟ್ ಮತ್ತು ಫಸ್ಟ್ ಲೇಡಿ ಆದ ದಿನದಿಂದ ನಿರಂತರ ಪ್ರಯಾಣ ಕೈಗೊಳ್ಳುವುದು ಇದ್ದೇ ಇರುತ್ತಿತ್ತು. ಹೀಗಾದಾಗ ಮಕ್ಕಳಿಗೆ ಸಹಜ ಬಾಲ್ಯ ಕೊಡುವುದು ಹೇಗೆ ಎಂಬ ಕುರಿತು ಬಹಳ ಯೋಚಿಸಿದ್ದೆವು ಎಂದು ನೆನಪಿಸಿಕೊಳ್ಳುತ್ತಾರೆ. “ಮಿಶೆಲ್‍ ರ ತಾಯಿ ಮರಿಯನ್ ಎಂಟೂ ವರ್ಷ ನಮ್ಮ ಜೊತೆ ವೈಟ್‍ ಹೌಸಿನಲ್ಲಿದ್ದು ಮೊಮ್ಮಕ್ಕಳ ದೇಖರೇಕಿ ನೋಡಿಕೊಂಡು ಉಪಕರಿಸಿದ್ದಾರೆ” ಎನ್ನುತ್ತಾರೆ ಬರಾಕ್.

ಮಿಶೆಲ್‍ ರ ಪುಸ್ತಕ ‘ಬಿಕಮಿಂಗ್’ ಬಾಲ್ಯದಿಂದ ಅವರು ನಡೆದು ಬಂದ ದಾರಿಯ ಬಗೆಗಿದ್ದರೆ ಬರಾಕ್‍ ರದ್ದು ಅವರ ಅಧ್ಯಕ್ಷೀಯ ಅವಧಿಯ ರಾಜಕೀಯ ಪ್ರಯಾಣದ ಕುರಿತಾಗಿದೆ. ಅದಕ್ಕೆ ಕಾರಣ ತಮ್ಮ ಬಾಲ್ಯದ ಬಗ್ಗೆ, ತಂದೆಯ ಬಗ್ಗೆ ಬರಾಕ್ ಈ ಮೊದಲೇ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ‘ಅ ಪ್ರಾಮಿಸ್ಡ್ ಲ್ಯಾಂಡ್’ ಅವರು ಅಧ್ಯಕ್ಷರಾದ ಮೊದಲ ಮೂರೂವರೆ ವರ್ಷಗಳ ಕತೆಯನ್ನು ಮಾತ್ರ ಹೇಳುತ್ತದೆ. ಚುನಾವಣಾ ಪ್ರಚಾರದಿಂದ ಶುರುವಾಗಿ ಓಸಾಮಾ ಬಿನ್ ಲಾಡನ್‍ ನನ್ನು ಹಿಡಿಯಲು ರಹಸ್ಯ ಮಿಷನ್ನನ್ನು ಯಶಸ್ವಿಯಾಗಿ ನಿರ್ವಹಿಸಿದ ತನಕವಷ್ಟೇ ಈ ಪುಸ್ತಕ ಮಾತನಾಡುತ್ತದೆ. ಎರಡನೆಯ ಭಾಗ ಸದ್ಯದಲ್ಲೇ ಹೊರ ಬರಲಿದೆ.

‘ಅ ಪ್ರಾಮಿಸ್ಡ್ ಲ್ಯಾಂಡ್’ನಲ್ಲಿ ಬರಾಕ್ ಜಗತ್ತಿನ ಬೇರೆ ಬೇರೆ ನೇತಾರರ ಬಗ್ಗೆ ಆಸಕ್ತಿಕರವಾಗಿ ಟಿಪ್ಪಣಿ ಮಾಡುತ್ತಾರೆ. ರಶ್ಯಾದ ವ್ಲಾಡಿಮರ್ ಪುಟಿನ್‍ ರನ್ನು ಕಂಡೊಡನೆ “ಈತನಿಗೆ ಅಧಿಕಾರದಲ್ಲಿರುವುದು ರೂಢಿಯಾಗಿಬಿಟ್ಟಿದೆ ಎಂಬುದನ್ನು ಅವನ ಚಲನವಲನಗಳಿಂದಲೇ ಹೇಳಬಹುದಾಗಿತ್ತು” ಎನ್ನುತ್ತಾರೆ. ಕ್ಯಾನಡಾದ ಜಸ್ಟಿನ್ ಟ್ರೂಡೋ ಜೊತೆಗಿನ ಸ್ನೇಹ, ಜರ್ಮನಿಯ ಅಂಗಲಾ ಮಾರ್ಕೆಲ್ ಫ್ರಾನ್ಸಿನ ಅಧ್ಯಕ್ಷ ಸರ್ಕೋಜಿಯನ್ನು ಹಿರಿಯಕ್ಕನಂತೆ ಕಣ್ಣಲ್ಲೇ ನಿಯಂತ್ರಿಸುತ್ತಿದ್ದುದು, ಸೌದಿ ರಾಜಮನೆತನಗಳ ವೈಭವಗಳ ಕುರಿತು ವಿವರವಾಗಿ ವರ್ಣಿಸುತ್ತಾರೆ. ನಮ್ಮ ಮನಮೋಹನ್ ಸಿಂಗ್, ಸೋನಿಯಾ, ರಾಹುಲ್ ಮತ್ತಿತರರ ಜೊತೆ ಔತಣ ಸೇವಿಸಿದ ಬಗ್ಗೆಯೂ, ಮುಂಬೈ ಭೇಟಿಯ ಬಗ್ಗೆಯೂ ಸವಿವರ ಮಾಹಿತಿಯಿದೆ. ಆಗ ಮುಂದಿನ ಪ್ರಧಾನಿಯೆಂದು ಬಿಂಬಿಸಲಾಗುತ್ತಿದ್ದ ರಾಹುಲ್‍ ರ ಬಗ್ಗೆ ಮೊದಲ ನೋಟದಲ್ಲಿ ತಮ್ಮ ನಿಲುವೇನಾಗಿತ್ತು ಎಂಬುದನ್ನೂ ಬರಾಕ್ ದಾಖಲಿಸಿದ್ದಾರೆ.

ಈಗ ಅಮೆರಿಕದ ಅಧ್ಯಕ್ಷರಾಗಿರುವ ಜೋ ಬೈಡನ್ನರು ಒಬಾಮಾ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷರಾಗಿದ್ದರು. 2008ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಲ್ಲಿ ಒಬ್ಬರನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಎದುರಾಳಿಯಾಗಿ ನಿಲ್ಲಿಸುವ ಮೊದಲು, ಪಕ್ಷದ ಒಳಗೇ ನಡೆಸುವ ಸ್ಪರ್ಧೆಯಲ್ಲಿ ಜೋ ಬೈಡನ್ ಒಬಾಮಾರ ಪ್ರತಿಸ್ಪರ್ಧಿಯಾಗಿದ್ದರು. ಆ ಸ್ಪರ್ಧೆಯಲ್ಲಿ ಆಗ ಹಿಲರಿ ಕ್ಲಿಂಟನ್ನರೂ ಇದ್ದರು. ಆದರೆ ಒಬಾಮಾರ ವ್ಯಕ್ತಿತ್ವ ಮತ್ತು ವಾಕ್‍ ಚಾತುರ್ಯ ದೇಶದಾದ್ಯಂತ ಸಂಚಲನವನ್ನುಂಟು ಮಾಡಿ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ, ನಂತರ ಅಧ್ಯಕ್ಷೀಯ ಸ್ಥಾನಕ್ಕೇರಿಸಿತ್ತು. ‘ಜೋ’ನಲ್ಲಿ ಸ್ನೇಹಿತನನ್ನು, ಮಾರ್ಗದರ್ಶಿಯನ್ನು, ಅಣ್ಣನನ್ನು ಕಂಡುಕೊಂಡೆ ಎಂದು ಬರಾಕ್ ಪ್ರೀತಿಯಿಂದ ಬರೆಯುತ್ತಾರೆ.

ಅಮೆರಿಕದ ಚರಿತ್ರೆಯಲ್ಲಿ ಫಸ್ಟ್ ಲೇಡಿಯನ್ನು ‘ಸ್ಟೈಲ್ ಐಕಾನ್ʼ ಆಗಿ ಕಾಣಲು ಜನರೆಲ್ಲ ಬಯಸುತ್ತಾರೆ. ಫಸ್ಟ್ ಲೇಡಿ ಯಾವ ವಿನ್ಯಾಸಕಾರರು ಡಿಸೈನ್ ಮಾಡಿದ ಬಟ್ಟೆ ಧರಿಸಿದ್ದರು, ಕೂದಲಿಗೆ ಯಾವ ಬಗೆಯ ಕೇಶವಿನ್ಯಾಸವಿತ್ತು, ಅದೇಕೆ ಹಾಗೆ ಇರಬಾರದಿತ್ತು ಎಂಬ ಬಗ್ಗೆ ಮೀಡಿಯಾಗಳಲ್ಲಿ ಎಲ್ಲೆ ಇರದ ಚರ್ಚೆ ನಡೆಯುತ್ತದೆ. ಇತಿಹಾಸದಲ್ಲೇ ಮೊದಲ ಬಾರಿ ಕಪ್ಪು ಮಹಿಳೆಯೊಬ್ಬರು ತಮ್ಮ ಫಸ್ಟ್ ಲೇಡಿಯಾಗಿದ್ದು ಬಹಳಷ್ಟು ಜನರಿಗೆ ನುಂಗಲಾರದ ತುತ್ತಾಗಿತ್ತು. ಮಿಶೆಲ್‍ ರ ಕುರಿತಾಗಿ ಅವಮಾನಕಾರೀ ಹೇಳಿಕೆಗಳು ಬಲಪಂಥೀಯ ಮೀಡಿಯಾ ಚಾನಲ್‍ ಗಳಲ್ಲೂ, ಅಂತರ್ಜಾಲ ಸೈಟುಗಳಲ್ಲೂ ಹರಿದಾಡುತ್ತಲೇ ಇತ್ತು. ಇಲ್ಲಿನ ಫಾಕ್ಸ್ ಎಂಬ ವಾರ್ತಾಚಾನಲ್ ಅಂತೂ ಗಂಡನನ್ನು ನಿಯಂತ್ರಿಸುವ “ಒಬಾಮಾರ ಬೇಬಿ ಮಾಮಾ” ಎಂದು ಮಿಶೆಲ್‍ ರನ್ನು ಕರೆದು ನಂತರ ಕ್ಷಮೆ ಕೇಳಿತ್ತು.

ಆದರೆ ಬರಾಕ್‍ ರ ಅಧ್ಯಕ್ಷೀಯ ಅವಧಿಯ ಕೊನೆಕೊನೆಗೆ ಮಿಶೆಲ್ ಓಬಾಮಾ ತಮ್ಮ ನೇರ ನುಡಿಗಳಿಂದ, ಎಂಥವರನ್ನೂ ಸೆಳೆಯುವ ಗತ್ತಿನಿಂದ, ದೇಶದ ಮಕ್ಕಳ ಬಗೆಗಿರುವ ನಿಜವಾದ ಕಾಳಜಿಯಿಂದ ಎಷ್ಟು ಜನಪ್ರಿಯರಾಗಿದ್ದರು ಎಂದರೆ “ನೀವೂ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುತ್ತೀರಾ?” ಎಂದು ಹೋದಲ್ಲೆಲ್ಲ ಟೀವಿ ನಿರೂಪಕರೂ, ಅಭಿಮಾನಿಗಳೂ ಕೇಳುತ್ತಲೇ ಇರುವಷ್ಟು. ಮಿಶೆಲ್ ತಮ್ಮ ಪುಸ್ತಕದಲ್ಲಿ ಈ ಪ್ರಶ್ನೆಗೆ ಹೀಗೆ ಕೊನೆಯ ಶರಾ ಬರೆದಿದ್ದಾರೆ. “ನಾನು ಎಂದಿಗೂ ಚುನಾವಣೆಗೆ ನಿಲ್ಲುವುದಿಲ್ಲ. ಅದೆಂಥ ಮುಳ್ಳಿನ ಹಾಸಿಗೆಯೆಂದು ಹತ್ತಿರದಿಂದ ಕಂಡ ನನಗೆ ಆ ಆಸೆಯೂ ಇಲ್ಲ. ಇನ್ನೇನಿದ್ದರೂ ಸಮುದಾಯದ ಒಟ್ಟಿಗೇ ನಿಂತು ದುಡಿಯುವುದು, ಯುವಜನರಲ್ಲಿ ಸ್ಫೂರ್ತಿ ತುಂಬುವುದೇ ನನ್ನ ಸದ್ಯದ ಮತ್ತು ಭವಿಷ್ಯದ ಕನಸಾಗಿದೆ” ಎಂದು ಸ್ಪಷ್ಟವಾಗಿ ಊಹೆಗಳಿಗೆಲ್ಲ ಪರದೆಯೆಳೆದಿದ್ದಾರೆ. ಈ ದಂಪತಿ ಈಗ ಒಬಾಮಾ ಫೌಂಡೇಶನ್ನಿನ ಮೂಲಕ ಜನಪರ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ.

ಒಬಾಮಾ ಅಧ್ಯಕ್ಷರಾದರು ಅಂದ ತಕ್ಷಣ ಅಮೆರಿಕದಲ್ಲಿ ಕಪ್ಪು ಜನರ ಕಷ್ಟಗಳೆಲ್ಲ ಮುಗಿಯಿತು ಅಂತ ಅರ್ಥವಲ್ಲ. ಇದೊಂಥರಾ ಇಂದಿರಾ ಪ್ರಧಾನಿಯಾಗಿದ್ದರು ಎಂದು ಭಾರತದ ಹೆಂಗಸರಿಗೆಲ್ಲ ತಮ್ಮ ಕೋಟಲೆಗಳಿಂದ ಮುಕ್ತಿ ಸಿಕ್ಕಿಬಿಟ್ಟಿತು ಎಂದ ಹಾಗಾಗುತ್ತದೆ. ಇಂದಿನ ದಿನಮಾನ ನೋಡಿದರೆ ಬರಾಕ್ ಮತ್ತು ಮಿಶೆಲ್ ನಿರ್ಮಿಸಿದ ಕಾಲುದಾರಿ ಹೆದ್ದಾರಿಯಾಗಲು ಇನ್ನೂ ಬಹಳ ಸಮಯವಿದೆ ಎಂಬುದಂತೂ ಖಚಿತ. ಆದರೆ ಮುಂದೆಂದೋ ನಿರ್ಮಾಣವಾಗಬೇಕಿರುವ ಮಹಲಿಗೆ ಮೊದಲ ಇಟ್ಟಿಗೆ ಇಟ್ಟವರು ಇವರು ಎಂಬ ಸತ್ಯವಂತೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.

About The Author

ಕಾವ್ಯಾ ಕಡಮೆ

ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ