Advertisement
ಕಾಶಿಗೆ ಹೋಗಲೂ ಚೌಕಾಶಿಯೇ: ಡಾ. ಚಂದ್ರಮತಿ ಸೋಂದಾ ಸರಣಿ

ಕಾಶಿಗೆ ಹೋಗಲೂ ಚೌಕಾಶಿಯೇ: ಡಾ. ಚಂದ್ರಮತಿ ಸೋಂದಾ ಸರಣಿ

ಕೆಲವು ಬಾರಿ ಮನೆಯ ತಾಪತ್ರಯವಿದ್ದಾಗ ಸುಗ್ಗಿ ಮಾಡಲು ಕಷ್ಟ ಅಂತ ಫಸಲುಗುತ್ತಿಗೆ ಅಂತ ಕೊಡುವ ರೂಢಿಯಿತ್ತು. ಬೆಳೆಯ ಅಂದಾಜು ಮಾಡಿ ಇಂತಿಷ್ಟು ಹಣ ಅಂತ ನಿಗದಿಮಾಡಿ ಒಟ್ಟಾಗಿ ಹಣವನ್ನು ಸಂದಾಯ ಮಾಡುತ್ತಿದ್ದರು. ಆ ವರ್ಷ ಬೆಳೆ ಅಂದಾಜಿಗಿಂತ ಹೆಚ್ಚಾದರೆ ಅಥವಾ ಇವರ ಬೆಳೆಗೆ ಒಳ್ಳೆಯ ದರ ಬಂದರೆ ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ʻಅಯ್ಯೋ! ಅನ್ಯಾಯವಾಗಿ ದುಡ್ಡು ಕಳಕಂಡೆ. ಕೈಗೆ ಬಂದ ತುತ್ತು ಬಾಯ್ಗಿಲ್ಲ ಅನ್ನ ಹಂಗಾತು.ʼ ಅಂತ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎರಡನೆಯ ಬರಹ

ʻಹತ್ತು ರುಪಾಯಿಗೆ ಎರಡು ಕೊತ್ತಂಬರಿ ಸೊಪ್ಪುʼ ಎನ್ನುವ ಕೂಗು ಕೇಳಿಸಿದ್ದೆ ಅಡಿಗೆ ಮನೆಯಿಂದ ಹೆಬ್ಬಾಗಿಲಿಗೆ ಓಡಿದೆ. ಬೆಳಗಿನಿಂದ ಕೊತ್ತಂಬರಿ ಸೊಪ್ಪು ಎನ್ನುವ ಕೂಗಿಗಾಗಿ ಕಾದಿದ್ದೆ. ʻಮೊನ್ನೆ ಮೊನ್ನೆವರೆಗೆ ಹತ್ತು ರುಪಾಯಿಗೆ ಮೂರು ಕೊಡ್ತಿದ್ದೋರು ಇವತ್ಯಾಕೆ ಎರಡು ಅಂತಿದೀರಿ?ʼ ಎಂದು ಸೊಪ್ಪಿನವನನ್ನು ಕೇಳಿದೆ. ʻಎರಡ್ಮೂರು ದಿನಗಳಿಂದ ಮಳೆ ಬರ್ತಿದೆಯಲ್ಲ. ಹಂಗಾಗಿ ರೇಟು ಜಾಸ್ತಿಯಾಗಿದೆ ಅವ್ವʼ ಎಂದ. ʻಆಯ್ತು ಕೊಡಿʼ ಎಂದು ಕೊತ್ತಂಬರಿಸೊಪ್ಪನ್ನು ತೊಗೊಂಡೆ. ವರ್ಷಾನುಗಟ್ಲೆಯಿಂದ ಕೊತ್ತಂಬರಿ ಕಂತೆಗೆ ಐದು ರುಪಾಯಿಯೇ. ಯಾರೋ ಪುಣ್ಯಾತ್ಮ ಕೆಲವು ದಿನಗಳಿಂದ ಹತ್ತು ರುಪಾಯಿಗೆ ಮೂರು ಕಂತೆ ಕೊಡ್ತಿದ್ದ. ಈಗ ಕಂತೆಗೆ ಐದು ರುಪಾಯಿ ಅಂದ್ರೆ ಯಾಕೆ ಜಾಸ್ತಿ ಅಂತ ಅನಿಸುತ್ತದೆ. ನಾವೇನಾದ್ರೂ ಚೌಕಾಸಿ ಮಾಡಿ ಆತ ಕಡಿಮೆಗೆ ಕೊಟ್ಟರೆ ನಮಗೆ ಖುಶಿಯೋ ಖುಶಿ.
ಈ ಚೌಕಾಶಿ ಇದೆಯಲ್ಲ ಅದು ಮನೆಯೆದುರಿಗೆ ಕೊಳ್ಳುವ ಪದಾರ್ಥಗಳಿಗೆ ಅಂತಲ್ಲ ಎಲ್ಲಕಡೆ ಅನುಭವಕ್ಕೆ ಬರುತ್ತದೆ. ನಮ್ಮ ಬದುಕಿನ ಭಾಗವಾಗಿ ಗೋಚರಿಸುತ್ತದೆ. ಕೊತ್ತಂಬರಿಸೊಪ್ಪಿನಿಂದ ಹಿಡಿದು ಮನೆಯನ್ನು ಕೊಳ್ಳುವವರೆಗೆ, ವರದಕ್ಷಿಣೆಯಿಂದ ಶುರುವಾಗಿ ಉಚಿತ ಕೊಡುಗೆಯವರೆಗೆ ಚೌಕಾಶಿಯ ವ್ಯಾಪಕತೆ. ಮಾರುವವರ ಮತ್ತು ಕೊಳ್ಳುವವರ ನಡುವಿನ ವ್ಯವಹಾರ ಎನ್ನುತ್ತದೆ ಅದನ್ನು ಕುರಿತ ವ್ಯಾಖ್ಯಾನ. ವ್ಯಾಪಾರ, ವಾಣಿಜ್ಯ ಎಲ್ಲ ಕಡೆ ಚೌಕಾಶಿಯ ಕಾರುಬಾರು. ಚೌಕಾಶಿ ಎನ್ನುವುದು ಕೇವಲ ಸ್ಥಳೀಯ ವ್ಯವಹಾರ ಮಾತ್ರವಲ್ಲ, ಅದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು, ಶಿಕ್ಷೆ ಎಲ್ಲವನ್ನೂ ಒಳಗೊಳ್ಳುತ್ತದೆ. ನಮಗೆ ಪ್ರಸ್ತುತವಾಗುವುದು ದಿನನಿತ್ಯದ ವ್ಯವಹಾರದ ಚೌಕಾಶಿಯ ವೈವಿಧ್ಯತೆ.
ನಾವು ಚಿಕ್ಕವರಿರುವಾಗ ಹಲವು ವಸ್ತುಗಳನ್ನು ಮಾರುವ ಕೊಳ್ಳುವ ವ್ಯವಹಾರಗಳು ಮನೆಯ ಮುಂದೆ ನಡೆಯುತ್ತಿದ್ದವು. ಬಟ್ಟೆ, ಪಾತ್ರೆ, ದನಕರುಗಳು, ಬಳೆ ಮಾರುವವರು, ಅಡಿಕೆ, ಮೆಣಸು, ಏಲಕ್ಕಿ ಮುಂತಾದ ಉತ್ಪನ್ನಗಳನ್ನು ಕೊಳ್ಳುವವರು ಹೀಗೆ. ಮಲೆನಾಡಿನ ಕುಗ್ರಾಮವಾಗಿದ್ದರೂ ಹನುಮಂತಪ್ಪ ಎನ್ನುವ ಮಟ್ಟೆಜವಳಿ ವ್ಯಾಪಾರಿ ಒಬ್ಬ ಪ್ರತಿವರ್ಷ ಬರುತ್ತಿದ್ದ. ಊರಿನ ಮಹಿಳೆಯರು ಅವನಿಂದ ಸೀರೆಗಳನ್ನು ಕೊಳ್ಳುತ್ತಿದ್ದರು. ಅವನು ಹತ್ತುರುಪಾಯಿ ಎಂದು ಹೇಳಿದ ಸೀರೆಗೆ ಚೌಕಾಶಿ ಮಾಡಿ ಎಂಟು ರುಪಾಯಿಗೆ ಹೊಂದಿಸುತ್ತಿದ್ದರು. ʻಈ ಸೀರೆ ಚೆನ್ನಾಗಿದೆ. ಆದ್ರೆ ಕೆಂಪಿಗೆ ಬದಲು ಹಸಿರು ಸೆರಗು ಇದ್ದಿದ್ರೆ ಹತ್ತು ರುಪಾಯಿ ಕೊಡಬಹುದಿತ್ತುʼ ಎಂದೋ ʻಮಾವಿನಕಾಯಿ ಅಂಚಿಗೆ ಬದಲು ರುದ್ರಾಕ್ಷಿ ಅಂಚಾಗಿದ್ರೆ ನೀ ಹೇಳಿದಷ್ಟು ಕೊಡ್ತಿದ್ದೆʼ ಅಂತಲೋ ಹೇಳಿ ಅವನನ್ನು ಒಪ್ಪಿಸುತ್ತಿದ್ದರು. ನಾಕಾರು ಸೀರೆಗಳ ಖರೀದಿ ನಡೆಯುತ್ತಿತ್ತು. ಅವನು ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಅವನ ಊಟ, ಬಾಯಾರಿಕೆ ಎಲ್ಲವೂ ಇಲ್ಲಿ ಮುಗಿಯುತ್ತಿದ್ದವು. ಮುಂದಿನ ಸುಗ್ಗಿ ಮುಗಿಯುತ್ತಿದ್ದಂತೆ ಅವನ ಆಗಮನವಾಗುತ್ತಿತ್ತು. ಇದೆಲ್ಲ ಅಮ್ಮಂದಿರ ವಿಭಾಗ. ಆದರೆ ಬಳೆಗಾರನ ವಿಷಯ ಹಾಗಲ್ಲ. ಅವನ ಬಳೆಗಂಟು ಕಂಡುಬಂತು ಅಂದರೆ ನಮಗೆಲ್ಲ ಸಂಭ್ರಮವೋ ಸಂಭ್ರಮ, ಬಣ್ಣಬಣ್ಣದ ಬಳೆಗಳನ್ನು ತೊಡಬಹುದು ಅಂತ. ಆಗೆಲ್ಲ ಮಣ್ಣಿನ ಬಳೆಗಳಿಗೆ ಬಹಳ ಕಡಿಮೆ ದುಡ್ಡು. ಡಝನ್‌ ಬಳೆಗಳ ಲೆಕ್ಕ. ʻಈ ವರ್ಷ ಬಳೆಗಳ ಬೆಲೆ ಏರೈತೆʼ ಅನ್ನೋ ಮುನ್ನುಡಿಯಿಂದ ವ್ಯಾಪಾರ ಶುರು. ಬಳೆಗಾರ ಹೇಳಿದ ಬೆಲೆಯನ್ನು ಕೊಡುವಷ್ಟು ದಡ್ಡರೇ ನಮ್ಮೂರ ಮಹಿಳೆಯರು. ʻಇಂಥ ಹಸಿರು ಬಳೆ ಮತ್ತೆಲ್ಲೂ ನಿಮ್ಗೆ ಸಿಗಲ್ಲʼ ಅನ್ನೋ ಅವನ ಮಾತನ್ನು ತುಂಡರಿಸಿ ʻಆ ಕೆಂಪು ಬಳೆಗೆ ಎಷ್ಟಪ್ಪʼ ಅಂತ ಒಬ್ಬರು ಕೇಳಿದ್ರೆ ʻಯಾಕೆ ಈ ಸರಿ ಒಳ್ಳೆ ಸಾಣಿ ಬಳೆಗಳೇ ಬಂದಿಲ್ಲʼ ಅಂತ ಇನ್ನೊಬ್ಬರು ಉವಾಚ. ʻಆ ಚುಕ್ಕಿ ಬಳೆಗೆ ಹ್ಯಾಂಗೆ?ʼ ʻಓ ಅದಾ? ಒಂದು ರುಪಾಯಿಗೆ ಡಝನ್‌ʼ ʻಮೊದ್ಲೆಲ್ಲ ಪೆಟ್ಗೆ ಬಳೆಗೆ ಹೇಳ್ತಿದ್ದ ಬೆಲೆ ಈಗ ಇದುಕ್ಕಾ?ʼ ಅಂತೂ ಅಳೆದು ಸುರಿದೂ ಎಲ್ಲರ ಕೈಯಲ್ಲೂ ಬಳೆಗಳು ಝಣಝಣಿಸುತ್ತಿದ್ದವು. ತಮ್ಮ ವಸ್ತುಗಳನ್ನು ಹೇಗೆ ಮಾರಬೇಕು ಎನ್ನುವ ಚಾಲಾಕಿತನ ಅವರಲ್ಲಿ ಇರುತ್ತಿತ್ತು. ʻಈ ಹುಡುಗಿ ಬಿಳಿಕೈಗೆ ಇದೇ ಈ ಹಸ್ರು ಬಳೆ ಇಟ್ರೆ ಎಂಥ ಪಸಂದ್‌ ಕಾಣ್ತೈತಿ ಅಮʼ ಅಂದ್ರೆ ಮಗಳಿಗೆ ಅದನ್ನು ಇಡಿಸದೆ ಇರಲು ಅಮ್ಮಂದಿರಿಗೆ ಹೇಗೆ ಸಾಧ್ಯ?
ಇವೆಲ್ಲ ಮಹಿಳೆಯರ ವ್ಯಾಪಾರದ ವೈಖರಿಯಾದರೆ ಗಂಡಸರ ವ್ಯಾಪಾರದ ನಮೂನೆಯೇ ಬೇರೆ. ಬಹಳ ವಿಶೇಷ ಎನ್ನಿಸೋದು ದನಕರುಗಳ ಖರೀದಿ. ಮಾರುವವರು ಕೊಳ್ಳುವವರು ಒಂದುಕಡೆ  ಕುಳಿತು ಒಬ್ಬರ ಕೈಯನ್ನು ಇನ್ನೊಬ್ಬರು ಮುಟ್ಟಿ ಗುರುತಿಸುವ ಮೂಲಕ. ಆ ಕೈಗಳನ್ನು ಒಂದು ಚೌಕದಿಂದ (ಟವೆಲ್‌) ಮುಚ್ಚುತ್ತಿದ್ದರು. ದರನಿಗದಿ ಮಾಡುವುದು ಬೆರಳಿನ ಮೂಲಕ. ʻಇಷ್ಟಾದರೆ ಕೊಡ್ತೇನೆʼ ಅಂತ ಒಬ್ಬರು ಹೇಳಿದರೆ ಇನ್ನೊಬ್ಬರು ʻಅದು ಜಾಸ್ತಿಯಾಯ್ತು ಇದ್ರಕಿಂತ ಜಾಸ್ತಿ ಆದ್ರೆ ಬ್ಯಾಡʼ ಎನ್ನುತ್ತಿದ್ದರು. ನಮಗೆ ಬಹಳ ಕುತೂಹಲ, ಹಾಗೆಂದರೆ ಎಷ್ಟು ಅಂತ. ಒಬ್ಬರ ಬೆರಳನ್ನು ಇನ್ನೊಬ್ಬರು ಎಷ್ಟು ಎಂದು ಗುರುತಿಸುವ ಮೂಲಕ ಬೆಲೆ ನಿಗದಿ ಮಾಡುವ ರೀತಿ. ಕೆಲವೊಮ್ಮೆ ಗುರುತಿಸುವಲ್ಲಿ ತಪ್ಪಾಗಿ ಒಪ್ಪಿದ ಮೇಲೆ ತಕರಾರು ಎತ್ತುವುದೂ ಇತ್ತು. ಒಮ್ಮೊಮ್ಮೆ ಮೂರನೆ ವ್ಯಕ್ತಿ ಇಬ್ಬರ ನಡುವೆ ಸೇತುವೆಯಾಗಿ ಬೆಲೆಯನ್ನು ನಿರ್ಧರಿಸುವುದೂ ಇತ್ತು.
ಹಿಂದೆಲ್ಲ ಅಡಿಕೆ, ಏಲಕ್ಕಿ, ಮೆಣಸು ಮುಂತಾದ ತೋಟದ ಬೆಳೆಗಳನ್ನು ಕೆಲವರಷ್ಟೆ ಮಂಡಿಗೆ ಒಯ್ದು ಮಾರುತ್ತಿದ್ದರು. ಈಗಿನಂತೆ ಸಹಕಾರಿ ಸಂಘಗಳು ಇರಲಿಲ್ಲ. ಹೆಚ್ಚಿನವರು ಮನೆಯ ಹತ್ತಿರ ಬರುತ್ತಿದ್ದ ವ್ಯಾಪಾರಿಗಳಿಗೆ ಕೊಡುತ್ತಿದ್ದರು. ಬೆಳೆಗಳ ಉತ್ಕೃಷ್ಟತೆ, ಸಾಧಾರಣ ಅಥವಾ ಕಳಪೆ ಎನ್ನುವುದರ ಮೇಲೆ ಬೆಲೆಯ ನಿರ್ಧಾರ. ʻಏನೇ ಹೇಳಿ, ಕಳ್ದವರ್ಷಕ್ಕೆ ಈ ವರ್ಷದ ಬೆಳೆನ ಹೋಲಿಸೋ ಹಂಗಿಲ್ಲʼ ಅನ್ನೋ ಪೀಠಿಕೆ ಬಂತು ಅಂದ್ರೆ ದರ ಕಡಿಮೆ ಮಾಡುವ ವ್ಯಾಪಾರದ ಚಾಲೂಕು ಅಂತ ಅರ್ಥ. ʻಕೈಯಲ್ಲಿ ಮುಟ್ಟಿನೋಡಿ ಸ್ವಾಮಿ, ಕಳೆದ ಬಾರಿಗಿಂತ ಚೆನ್ನಾಗಿಯೇ ಇದೆʼ ಅನ್ನುವುದು ಬೆಳೆಗಾರರ ಅಂಬೋಣ. ಅಳೆದೂ ಸುರಿದೂ ಇಬ್ಬರಿಗೂ ಒಪ್ಪಿಗೆ ಆಗುವ ರೀತಿಯಲ್ಲಿ ಒಂದು ದರ ನಿಗದಿಯಾಗುತ್ತಿತ್ತು. ಹೀಗಿದ್ದರೂ ಕೊನೆಗೆ ಬೆಳೆಗಾರರಿಗೆ ಕಡಿಮೆ ದರ ಸಿಕ್ತು ಅನ್ನುವ ಅತೃಪ್ತಿ, ಕೊಂಡವರಿಗೆ ದರ ಜಾಸ್ತಿಯಾಯ್ತೆನೋ ಎನ್ನುವ ಅನುಮಾನ. ಹೀಗೆ ಮನೆಹತ್ತಿರ ಬರುವವರು ಕೆಲವೊಮ್ಮೆ ಗಂಡಸರು ಇಲ್ಲದ ಹೊತ್ತಿನಲ್ಲಿ ಬಂದು ಹೆಂಗಸರಿಂದ ತೀರ ಕಡಿಮೆ ದರದಲ್ಲಿ ಕೊಳೆ ಅಡಿಕೆಯನ್ನು ಕೊಳ್ಳುವುದಿತ್ತು. ʻಈ ಕೊಳೆ ಅಡಿಕೆ ಯಾರು ಒಯ್ತಾರೆ ಅಮ? ನಾನಾಗಿದ್ದಕ್ಕೆ ಇಷ್ಟು ದುಡ್ಡುಕೊಡಕ್ಕೆ ಒಪ್ಗಂಡಿದೀನಿʼ ಅಂದು ಅದರಲ್ಲಿ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರು.

ಕೆಲವು ಬಾರಿ ಮನೆಯ ತಾಪತ್ರಯವಿದ್ದಾಗ ಸುಗ್ಗಿ ಮಾಡಲು ಕಷ್ಟ ಅಂತ ಫಸಲುಗುತ್ತಿಗೆ ಅಂತ ಕೊಡುವ ರೂಢಿಯಿತ್ತು. ಬೆಳೆಯ ಅಂದಾಜು ಮಾಡಿ ಇಂತಿಷ್ಟು ಹಣ ಅಂತ ನಿಗದಿಮಾಡಿ ಒಟ್ಟಾಗಿ ಹಣವನ್ನು ಸಂದಾಯ ಮಾಡುತ್ತಿದ್ದರು. ಆ ವರ್ಷ ಬೆಳೆ ಅಂದಾಜಿಗಿಂತ ಹೆಚ್ಚಾದರೆ ಅಥವಾ ಇವರ ಬೆಳೆಗೆ ಒಳ್ಳೆಯ ದರ ಬಂದರೆ ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ʻಅಯ್ಯೋ! ಅನ್ಯಾಯವಾಗಿ ದುಡ್ಡು ಕಳಕಂಡೆ. ಕೈಗೆ ಬಂದ ತುತ್ತು ಬಾಯ್ಗಿಲ್ಲ ಅನ್ನ ಹಂಗಾತು. ಇನ್ನಷ್ಟು ಚೌಕಾಶಿ ಮಾಡಿದ್ರೆ ಸ್ವಲ್ಪ ಜಾಸ್ತಿ ದುಡ್ಡು ಸಿಗ್ತಿತ್ತುʼ ಅಂತ. ʻಬಿದ್ದಂವಗೆ ಮೇಲಿಂದ ಒಂದು ಗುದ್ದುʼ ಅನ್ನೋ ಹಾಗೆ ಅಕ್ಕಪಕ್ಕದೋರಿಂದ ʻಅಲ್ಲ ಮಾರಾಯ, ಈ ವರ್ಷ ಅಡಕೆಗೆ ಒಳ್ಳೆದರ ಬರ್ಬಹುದು ಅಂತ ಎಲ್ಲ ಕಡೆ ಮಾತಾಡಿದ್ನ ನೀನು ಕೇಳಿಸ್ಕಳಲಿಲ್ವಾ? ಯಾಕೆ ಅಂತ ಫಸಲುಗುತ್ತಿಗೆ ಕೊಟ್ಟೆ?ʼ ಅನ್ನೋ ಒಗ್ಗರಣೆ.

ʻಇಂಥ ಹಸಿರು ಬಳೆ ಮತ್ತೆಲ್ಲೂ ನಿಮ್ಗೆ ಸಿಗಲ್ಲʼ ಅನ್ನೋ ಅವನ ಮಾತನ್ನು ತುಂಡರಿಸಿ ʻಆ ಕೆಂಪು ಬಳೆಗೆ ಎಷ್ಟಪ್ಪʼ ಅಂತ ಒಬ್ಬರು ಕೇಳಿದ್ರೆ ʻಯಾಕೆ ಈ ಸರಿ ಒಳ್ಳೆ ಸಾಣಿ ಬಳೆಗಳೇ ಬಂದಿಲ್ಲʼ ಅಂತ ಇನ್ನೊಬ್ಬರು ಉವಾಚ. ʻಆ ಚುಕ್ಕಿ ಬಳೆಗೆ ಹ್ಯಾಂಗೆ?ʼ ʻಓ ಅದಾ? ಒಂದು ರುಪಾಯಿಗೆ ಡಝನ್‌ʼ ʻಮೊದ್ಲೆಲ್ಲ ಪೆಟ್ಗೆ ಬಳೆಗೆ ಹೇಳ್ತಿದ್ದ ಬೆಲೆ ಈಗ ಇದುಕ್ಕಾ?ʼ ಅಂತೂ ಅಳೆದು ಸುರಿದೂ ಎಲ್ಲರ ಕೈಯಲ್ಲೂ ಬಳೆಗಳು ಝಣಝಣಿಸುತ್ತಿದ್ದವು.

ಕೆಲವರಿಗೆ ಚೌಕಾಶಿ ಮಾಡದಿದ್ದರೆ ನಾವು ಹೆಚ್ಚಿಗೆ ಕೊಟ್ಟುಬಿಟ್ಟೆವು ಅಂತಲೋ ದುಂದುಗಾರ ಅಂತಲೋ ಅನಿಸುವುದಿದೆ. ʻನೀನು ಕೇಳಿದಷ್ಟು ಕೊಟ್ಟುಬರ್ತೀಯೆ. ಎಲ್ಲಕಡೆ ಹೀಗೆ ಮಾಡಿದ್ರೆ ಮನೆಮಾರು ಮಾಡಿಕ್ಯಂಡು ಹೋದಾಂಗೆʼ ಅನ್ನುವ ಬೈಗುಳ ಉದುರುತ್ತದೆ.  ಚೌಕಾಶಿ ಅಂದಾಗ ಒಂದು ವಿಷಯ ನೆನಪಾಗುತ್ತದೆ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ಒಬ್ಬ ಹಣ್ಣಿನ ವ್ಯಾಪಾರಿ ತಲೆಯಲ್ಲಿ ಬುಟ್ಟಿಹೊತ್ತು ಬೀದಿಗಳಲ್ಲಿ ಮಾರುತ್ತಿದ್ದ. ನಾವು ಅವನ ಖಾಯಂ ಗಿರಾಕಿಗಳು. ಬೀದಿಯಲ್ಲಿ ಮಾರುವವರ ಹತ್ತಿರ ಚೌಕಾಶಿ ಮಾಡುವುದಕ್ಕೆ ಅಣ್ಣ ವಿರೋಧಿ. ʻದೊಡ್ಡದೊಡ್ಡ ಅಂಗಡಿಗೆ ಹೋಗಿ ಅವ್ರು ಹೇಳ್ದಷ್ಟು ರೇಟು ಕೊಟ್ಟು ಬಾಯ್ಮಚ್ಗೊಂಡು ಬರ್ತೇವೆ. ಹೊಟ್ಟೆಪಾಡಿಗೆ ಬೀದಿಲ್ಲಿ ಮಾರೋ ಸೊಪ್ಪಿನೋರು, ಹಣ್ಣಿನೋರ ಹತ್ರ ಎಂಥ ಚೌಕಾಶಿʼ ಅಂತ ಚೌಕಾಶಿ ಮಾಡಿದ್ರೆ ಬೈತಿದ್ದ. ಹಾಗಾಗಿ ಆ ಹಣ್ಣು ಮಾರುವವ ನಮ್ಮನೆಗೆ ಹಣ್ಣು ಹಾಕಿಯೇ ಹೋಗುವ ರೂಢಿ. ಒಮ್ಮೆ ಅಣ್ಣಮನೆಯಲ್ಲಿ ಇರಲಿಲ್ಲ. ಆದ್ರೂ ಹಣ್ಣು ಇಟ್ಟು ಹೊರಟ. ʻಬ್ಯಾಡಪ್ಪ ನಿಮ್‌ ಸ್ವಾಮೇರು ಮನೆಯಲ್ಲಿಲ್ಲ. ನಮ್ಗೆ ರೇಟು ಗೊತ್ತಾಗಲ್ಲ. ಆಮೇಲೆ ಬಾʼ ಅಂತ ಅತ್ಗೆ ಎಷ್ಟೇ ಬೇಡ ಅಂದ್ರೂ ಕೇಳ್ದೆ ʻನಾ ದುಡ್ಡು ಕೊಡಿ ಅಂದ್ನೇ? ಇನ್ನೊಂದಿನ ಬಂದಾಗ ಸ್ವಾಮೇರ್‌ ತಾವನೇ ದುಡ್ಡು ತಕತ್ತೀನಿʼ ಅಂತ ಹಣ್ಣು ಇಟ್ಟೇಹೋದ. ಚೌಕಾಶಿ ಮಾಡದಿದ್ದಕ್ಕೆ ಅವನು ಹೆಚ್ಚಿಗೆ ರೇಟು ಹೇಳ್ತಿರಲಿಲ್ಲ, ಕಳಪೆ ಮಾಲೂ ಹಾಕ್ತಿರಲಿಲ್ಲ. ಪಕ್ಕದ ಮನೆಯವರು ಹೇಳೋರು. ʻನಾವು ಚೌಕಾಶಿ ಮಾಡ್ತೀವಿ ಅಂತ ಹೆಚ್ಚಿಗೆ ರೇಟು ಹೇಳ್ತಾನೆʼ ಅಂತ.
ಚೌಕಾಶಿ ಎನ್ನೋದು ವ್ಯಾಪಾರಕ್ಕಷ್ಟೆ ಸೀಮಿತವಲ್ಲ. ಕೃಷಿ ಕೂಲಿಕಾರರಿಗೆ ಸಂಬಳ ನಿಗದಿ ಮಾಡುವಾಗ ಇಬ್ಬರ ನಡುವೆ ಚೌಕಾಶಿ ನಡೆಯುತ್ತದೆ. ʻನಾ ಕೊಡೆ ನೀ ಬಿಡೆʼ ಅಂತ. ಒಮ್ಮೆ ಯಾರಾದ್ರೂ ಹೆಚ್ಚಿಗೆ ಕೊಟ್ಟರೆ ʻಊರಿಗೊಂದು ದಾರಿಯಾದ್ರೆ ಪೋರಂಗೊಂದು ದಾರಿʼ ಅಂತ ಊರಿಗಿಲ್ಲದ ಕೂಲಿ ಕೊಟ್ಟು ನೀನು ಅವರನ್ನು ಹೆಚ್ಚಿಸಿದೀಯೆʼ ಅನ್ನುವ ತಕರಾರು ಮಾಮೂಲು. ಇನ್ನು ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವಿನ ಚೌಕಾಶಿ ಸರ್ವವ್ಯಾಪಕ. ವಾಹನ ದುರಸ್ತಿ ಮಾಡುವ ಗರಾಜಿನಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ. ಹೆಚ್ಚು ಕೌಶಲ್ಯ ಇರುವ ಕ್ಷೇತ್ರವಾದರೆ ಅದರ ರೀತಿಯೇ ಬೇರೆ. ಉದ್ಯೋಗಿಯ ಮಾತಿಗೆ ಎದುರಾಡುವಂತಿಲ್ಲ. ಈತ ಕೇಳಿದಷ್ಟು ಸಂಬಳ ಕೊಡಲು ಒಪ್ಪದಿದ್ದರೆ ಒಮ್ಮೆ ಬಿಟ್ಟುಹೋದರೆ ಇನ್ನೊಬ್ಬನನ್ನು ಎಲ್ಲಿಂದ ಹುಡುಕಿ ತರುವುದು ಎಂದು.
ಕೆಲವೊಮ್ಮ ಅನಿವಾರ್ಯ ಪ್ರಸಂಗ ಎದುರಾಗುವುದಿದೆ. ಒಮ್ಮೆ ಹೀಗಾಯ್ತು. ನಮ್ಮ ಮನೆಯ ಹತ್ತಿರ ಒಬ್ಬರ ಮನೆಯ ಡ್ರೈನೇಜ್‌ ಕಟ್ಟಿಹೋಗಿತ್ತು. ಎಲ್ಲೆಲ್ಲಿಯೋ ಹುಡುಕಿ ಒಬ್ಬನನ್ನು ಕರೆತಂದರು. ಅವನು ಊರಿಗಿಲ್ಲದ ಕೂಲಿ ಕೇಳಿದ್ದ. ಮನೆಯ ಯಜಮಾನ ಬಾರೀ ಕಂಜೂಸಿ. ಕುಂಯ್‌ ಪಿಂಯ್‌ ಎನ್ನುತ್ತಿದ್ದ. ಇದನ್ನು ಕಂಡು ಆತನ ಹೆಂಡತಿ ʻಆಯ್ತಪ್ಪ, ಕೆಲ್ಸ ಮಾಡು ನೀನು ಹೇಳಿದಷ್ಟೆ ದುಡ್ಡು ಕೊಡ್ತೀನಿʼ ಅಂದಳು. ನಮಗೆ ನಿರಾಳವಾಯಿತು. ಇಲ್ಲದಿದ್ದರೆ ನಾವೂ ಆ ವಾಸನೆಯ ಭಾಗಿಗಳಾಗಬೇಕಿತ್ತು. ಇವರು ಕುಶಲಕರ್ಮಿಗಳಲ್ಲ, ಆದರೆ ಅವರ ಸೇವೆ ನಮಗೆ ಅನಿವಾರ್ಯ.
ಈ ಚೌಕಾಶಿ ಈಗೀಗ ಹೊಸ ರೂಪದಲ್ಲಿ ಇನ್ನಷ್ಟು ವಿಜೃಂಭಿಸುತ್ತಿದೆ. ಉಚಿತ ಕೊಡುಗೆ ಅಂದರೆ ಸಾಕು ಬೇಕಿರಲಿ ಇಲ್ಲದಿರಲಿ, ಜನ ಮುಗಿಬಿದ್ದು ಕೊಳ್ಳುತ್ತಾರೆ. ನಾವಾಗಿ ಕಡಿಮೆ ಬೆಲೆಯಲ್ಲಿ ಕೊಡಿ ಎಂದು ಕೇಳಬೇಕಾಗಿಲ್ಲ ಅಂತ. ಒಂದು ಕೊಂಡರೆ ಇನ್ನೊಂದು ಉಚಿತ ಎನ್ನುವುದನ್ನು ಕೆಲವು ಕಿಡಿಗೇಡಿಗರು ತಮಾಶೆ ಮಾಡುವುದಿದೆ. ʻಅಕ್ಕನನ್ನು ಮದುವೆಯಾದರೆ ತಂಗಿ ಉಚಿತವೇ?ʼ ಎಂದು. ಅದಕ್ಕೆ ಉತ್ತರ ಕೊಡುವವರೂ ಅಷ್ಟೇ ತುಂಟರು. ʻಆ ಹುಡುಗಿ ಒಬ್ಬಳೇ ಮಗಳು. ಅವಳನ್ನು ಮದುವೆಯಾದರೆ ಅವಳ ಅಪ್ಪ, ಅಮ್ಮ ಉಚಿತʼ ಅಂತ.
 ಹಳ್ಳಿಗಳಲ್ಲಿ ಮನೆ ಕಟ್ಟುವವರು ಮರ ಕಡಿಯಲು ಸರಕಾರದ ಅನುಮತಿ ಕೇಳುತ್ತಾರೆ. ತಮಗೆ ಬೇಕಿರುವುದಕ್ಕಿಂತ ಹೆಚ್ಚಿಗೆ ಮರಮಟ್ಟುಗಳಿಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸುತ್ತಾರೆ. ಸಾಕಷ್ಟು ಚೌಕಾಶಿ ನಡೆದು (ಯಾವ ರೀತಿಯ ಚೌಕಾಶಿ ಗೊತ್ತಲ್ಲ) ಕೊನೆಯಲ್ಲಿ ಅಂತೂ ಇಂತೂ ಬೇಕಿರುವಷ್ಟು ಮರ ಕಡಿಯಲು ಅನುಮತಿ ಪಡೆಯುತ್ತಾರೆ. ʻಮನೆಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಗಾದೆ ಮಾತಿದೆ. ಮದುವೆ ಕೂಡ ಸಂಬಂಧಕ್ಕಿಂತ ಹೆಚ್ಚಾಗಿ ವ್ಯವಹಾರದ ರೂಪ ಪಡೆದಿದೆ. ಅಲ್ಲಿಯೂ ಈ ಚೌಕಾಶಿ ನಡೆಯುತ್ತದೆ. ʻನಮಗೆ ಏನೂ ಬೇಡ, ನಿಮ್ಮ ಅಳಿಯನ ಕುತ್ತಿಗೆಗೆ ಒಂದು ದಪ್ಪಚೈನು, ಮಗಳಿಗೆ ಒಂದಿಷ್ಟು ಒಡವೆ  ಹಾಕಿ ಚೆನ್ನಾಗಿ ಮದ್ವೆಮಾಡಿಕೊಟ್ಟರೆ ಸಾಕುʼ ಎನ್ನುತ್ತಾರೆ. ʻಮಗಳ ಮದುವೆ ಮಾಡುವಾಗ ಚೌಕಾಶಿ ಮಾಡೋದು ಸರಿಯಲ್ಲʼ ಅಂದುಕೊಳ್ಳುವ ಹೆತ್ತವರ ಸಂದಿಗ್ಧವನ್ನು ಅರಿತೇ ಈ ರೀತಿಯ ನಡವಳಿಕೆ.  ಮಗಳ ಮದುವೆ ವಿಷಯದಲ್ಲಿ ಹೆತ್ತವರು ಅನುಮಾನಿಸಿದರೆ ಅದು ಚೌಕಾಶಿ. ಗಂಡಿನವರು ಪರೋಕ್ಷವಾಗಿ ಕೇಳುವುದು ಚೌಕಾಶಿಯ ಪರಿಧಿಗೆ ಬರುವುದೋ ಇಲ್ಲವೋ? ಅನುಮಾನ.
ಇನ್ನೊಂದು ವಿಶಿಷ್ಟ ಸಂಗತಿ ಏನಂದ್ರೆ ಕಾಶಿಗೆ ಹೋದವರು ತಮಗೆ ಪ್ರಿಯವಾದುದನ್ನು ಬಿಟ್ಟು ಬರಬೇಕು ಅನ್ನುವುದು ಒಂದು ಸಂಪ್ರದಾಯ. ಅದಕ್ಕೆ ಇಲ್ಲೊಬ್ಬರು ಹೇಳುತ್ತಿದ್ದರು. ಕಾಶಿಗೆ ಹೋಗಿ ನನ್ನ ಪ್ರೀತಿಯದು ಇದು ಅಂತ ಏನಾದ್ರೂ ಬಿಟ್ಟರೆ ಹೆಂಡತಿ ಕೇಳ್ತಾಳೆ ʻನನಗಿಂತ ನಿಮ್ಗೆ ಅದೇ ಪ್ರೀತಿನ?ʼ ಅಂತ. ಇರೋ ಒಬ್ಬಳೇ ಹೆಂಡತಿನ ಈ ವಯಸ್ಸಲ್ಲಿ ಹ್ಯಾಗೆ ಬಿಡೋದು? ಅದ್ಕೆ ನಾನು ಕಾಶಿಗೆ ಹೋಗಲ್ಲʼ ಎನ್ನುತ್ತಿದ್ದರು. ಕಾಶಿಗೆ ಹೋಗಲೂ ಚೌಕಾಶಿಯೇ..
ಚೌಕಾಶಿ ವಿಷಯ ಎಷ್ಟು ಹೇಳ್ತೀರಿ ಅನ್ನುವ ಚೌಕಾಶಿಗೆ ಮೊದಲು ನಮಸ್ಕಾರ.

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ