Advertisement
ಕೆ.ವಿ. ತಿರುಮಲೇಶ್‌ ಅನುವಾದಿಸಿದ ಇಂಗ್ಲಿಷ್‌ ಕವಿ ಹೆರಾಲ್ಡ್‌ ಮೊನ್ರೋನ ಒಂದು ಕವಿತೆ

ಕೆ.ವಿ. ತಿರುಮಲೇಶ್‌ ಅನುವಾದಿಸಿದ ಇಂಗ್ಲಿಷ್‌ ಕವಿ ಹೆರಾಲ್ಡ್‌ ಮೊನ್ರೋನ ಒಂದು ಕವಿತೆ

ಬೆಕ್ಕಿಗೆ ಹಾಲು

ಇಂಗ್ಲಿಷ್ ಮೂಲ: Milk for the Cat by the English poet Harold Monro (1879-1932)

ಐದು ಗಂಟೆಯ ಚಾ ಬಂದು ಬೆಟ್ಟದಂಥ ಪರದೆಗಳೆಲ್ಲಾ
ಇಳಿಬಿಟ್ಟು ಕುಳಿತಿರುವಾಗ ನಮ್ಮ ಪುಟ್ಟ ಕರಿ ಬೆಕ್ಕು
ಇಷ್ಟರ ವರೆಗೆ ಎಲ್ಲಿತ್ತೊ ಈಗ ಅಲ್ಲಿ ಪ್ರತ್ಯಕ್ಷ
ನೋಡಿರದರ ಕಣ್ಣುಗಳ ರೆಪ್ಪೆಯೇರಿಸಿ ನಿಂತಿವೆ

ಮೊದಲದು ನಟಿಸುವುದು, ಕೆಲಸವಿಲ್ಲದೆ ಸುಮ್ಮನೆ
ಈ ಕಡೆ ಬಂದ ಹಾಗೆ, ಕಟ್ಟೆಗೆ ಬೆನ್ನ ಉಜ್ಜುವುದಕೆ
ಆದರೆ ಚಾ ಸ್ವಲ್ಪ ತಡವಾದರೂ ಅಥವ ಹಾಲು ಒಡೆದಿದ್ದರೂ
ಸಮಯ ಎಂದೂ ತಪ್ಪದು ಅದು

ನೋಡ್ತ ನೋಡ್ತ ಅದರ ವಜ್ರಾದಪಿ ಕಣ್ಣುಗಳು
ಮೆತ್ತಗಾಗ್ತವೆ ದೊಡ್ಡದಾಗ್ತವೆ
ಅವಕ್ಕೆ ಹಾಲಿನ ಮಬ್ಬು ಬರ್ತದೆ

ಮತ್ತದರ ಸ್ವತಂತ್ರ ಅನಿರ್ದಿಷ್ಟ ಯಥಾವತ್ ದೃಷ್ಟಿಯೊಂದು
ಕಠಿಣ ಏಕೋಭಾವದ ಬೃಹತ್ ನೆಡುನೋಟ ತಳೆಯುತ್ತದೆ

ಆಮೇಲದು ಉಗುರುಗಳ ಊರುತ್ತದೆ
ಅಥವ ಬಾಲ ಮೇಲೆತ್ತುತ್ತದೆ
ಕದಲಲು ತೊಡಗುತ್ತದೆ
ಎಲ್ಲೀ ತನಕ ಎಂದರೆ
ಅದರ ಮೆತ್ತಗಿನ ಮೈ ಥಟ್ಟನೆ
ಒಂದು ಉಸಿರಾಡುವ ನಡುಗುವ
ರೋಮಾಂಚನ ತಾನಾಗುವವರೆಗೆ

ಮಕ್ಕಳು ತಿಂತವೆ ಕೊಸರಾಡುತ್ತವೆ
ನಗ್ತವೆ.
ಇಳಿವಯಸ್ಸಿನ ಮಹಿಳೆಯರಿಬ್ಬರು
ತಮ್ಮ ರೇಶಿಮೆ ಉಡುಪನ್ನು
ನೇವರಿಸುತ್ತ ಇದ್ದಾರೆ.
ಆದರೆ ಪುಚ್ಚೆ ಬಯಕೆಯಿಂದ ಬಡಕಲಾಗಿದೆ
ಮತ್ತು ಚಿಕ್ಕದಾಗಿದೆ, ಬದಲಾಗಿದೆ
ಅದು ನಿದ ನಿಧಾನ ನೆತ್ತಿಗೇರುವ ಹಾಲಿನ ವ್ಯಾ-
ಮೋಹವಾಗಿ.

ಕೊನೆಗೂ
ಮೇಲಿನ ಮೇಜಿನ ಮೋಡಗಳಿಂದ
ಕೆಳಗಿಳಿಯುವುದು ಬಿಳಿ ಪಿಂಗಾಣಿ ತಟ್ಟೆ
ಒಂದಾನೊಂದು ಪೂರ್ಣಚಂದ್ರನ ಹಾಗೆ.
ಬೆಕ್ಕು ನಿಡುಸುಯ್ಯುತ್ತದೆ, ಕನವರಿಸುತ್ತದೆ,
ಆನಂದತುಂದಿಲ ಮತ್ತು ಜ್ವಲಂತ,
ಪ್ರೀತಿಯಿಂದ ಸಂಪೂರ್ಣ ರೂಪಾಂತರಗೊಂಡು.

ಹೊಳೆವ ಹಾಲಿನ ಬಳೆಯ ಮುದ್ದಾಡುತ್ತದೆ,
ಕ್ಷೀರ ಸಾಗರದಲ್ಲಿ ಗದ್ದ ಅದ್ದುತ್ತದೆ. ಬಾಲ ಬಲು ಬಲಹೀನವಾಗಿ
ಜೋತು ಬೀಳುತ್ತದೆ. ಬಾಗುವ ಒಂದೊಂದೂ ಮೊಣಕಾಲ ಕೆಳಗೆ
ಪ್ರತಿಯೊಂದು ಪಂಜ ಎರಡಾಗಿದೆ.

ಅಸ್ಪಷ್ಟ ಅತಿ ದೀರ್ಘ ಆನಂದವೊಂದು
ಅದರ ಬದುಕ ಹಿಡಿದು ನಿಂತಿದೆ.
ಲೋಕ ಆಕಾರರಹಿತ ಅನಂತ ಶ್ವೇತ, ಅದರ ನಾಲಿಗೆ
ಕೊನೆಯ ಪವಿತ್ರ ಬಿಂದುವ ಸುರುಳಿ ಸುತ್ತುವ ವರೆಗೆ.
ನಂತರ ಮರಳಿ ಕತ್ತಲಲ್ಲಿ.

ದೈತ್ಯ ಐಶಾರಾಮ ಕುರ್ಚಿಯಲ್ಲಿ ತನ್ನ ನಿದ್ರಾವಿಷ್ಠ ನರಗಳ
ಒಂದೆಡೆ ಒಟ್ಟಿಡಲು
ದೇಹವನೆಳೆದು ಹೂಳುತ್ತದೆ,
ಮಲಗುತ್ತದೆ ಸೋತು ಸಮಾಧಿಗೊಂಡು
ಮೂರೋ ನಾಲ್ಕೋ ಗಂಟೆಗಳ ಕಾಲ
ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲಿ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ