Advertisement
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’ ಇಂದಿನಿಂದ…

ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’ ಇಂದಿನಿಂದ…

ಬ್ರಿಟನ್ನಿನ ಜನಕ್ಕೆ ಆರೋಗ್ಯವಿಮೆ ಇಲ್ಲ. ಕೆಮ್ಮು, ನೆಗಡಿ, ರಸ್ತೆ ಅಪಘಾತದಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆ, ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಪ್ರತಿಯೊಂದು ರೋಗ ಮತ್ತು ಶಸ್ತ್ರಚಿಕಿತ್ಸೆ ಸಂಪೂರ್ಣ ಫ್ರೀ. ಆದ್ದರಿಂದ ಕೊರೊನಾದ ಎರಡನೇ ಅಲೆ ಎದುರಿಸಲು ಎಲ್ಲ ವಿಭಾಗಗಳೂ ಸಜ್ಜಾಗಿದ್ದವು. ಹಾಗಂತ ಭಾರತದ ಭಾರತದ ಜನಸಾಂದ್ರತೆ ಮತ್ತು ಆರ್ಥಿಕ ವ್ಯವಸ್ಥೆಗೆ ಬ್ರಿಟನ್ ನ ವ್ಯವಸ್ಥೆಯನ್ನು ಅನ್ವಯಿಸಿ ಮಾತನಾಡುವುದು ಸಾಧ್ಯವಾಗದು.
ಬ್ರಿಟನ್ನಿನಲ್ಲಿ ವೈದ್ಯರಾಗಿರುವ ಕೇಶವ ಕುಲಕರ್ಣಿ ಇನ್ನುಮುಂದೆ ತಿಂಗಳಿಗೆರಡು ಇಂಗ್ಲೆಂಡ್ ಪತ್ರವನ್ನು ಕೆಂಡಸಂಪಿಗೆಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

 

ಬ್ರಿಟನ್ನಿನಲ್ಲಿ ಕೊರೊನಾದ ಎರಡನೇ ಅಲೆ ಬಂದಾಗಲೂ ಬ್ರಿಟನ್ನಿನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರು ಮತ್ತು ನರ್ಸುಗಳು ಇಷ್ಟು ಭಯಗೊಂಡಿರಲಿಲ್ಲ.ಆದರೆ ಭಾರತದ ಎರಡನೇ ಅಲೆಯನ್ನು ನೋಡಿ ಕಂಗಾಲಾಗಿ ಕೂತಿದ್ದೇವೆ.

ಇಂಗ್ಲೆಂಡಿನ ಆರೋಗ್ಯ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲದವರಿಗೆ ಈ ಮುಂದಿನದನ್ನು ಓದಿ ಆಶ್ಚರ್ಯವಾಗಬಹುದು. ಅಮೇರಿಕದಲ್ಲಿ ಇರುವಂತೆ ಬ್ರಿಟನ್ನಿನ ಜನಕ್ಕೆ ಆರೋಗ್ಯವಿಮೆ ಇಲ್ಲ. ಕೆಮ್ಮು, ನೆಗಡಿ, ರಸ್ತೆ ಅಪಘಾತದಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆ, ಕಿಡ್ನಿ ಟ್ರಾನ್ಸ್ಪ್ಲಾಂಟ್ವರೆಗೆ ಪ್ರತಿಯೊಂದು ಜಡ್ಡು, ರೋಗ, ರುಜಿನ ಮತ್ತು ಶಸ್ತ್ರಚಿಕಿತ್ಸೆ ಸಂಪೂರ್ಣ ಫ್ರೀ – ಪುಗಸಟ್ಟೆ. ಭಾರತದಲ್ಲಿ ಆಗುವಂತೆ ದುಡ್ಡು ವ್ಯಯಿಸಬೇಕಿಲ್ಲ, ಹಣವನ್ನು ವೃದ್ಧಾಪ್ಯದ ರುಗ್ಣಗಳಿಗೆ ಕೂಡಿಡಬೇಕಾಗಿಲ್ಲ, ಇರುವ ಹೊಲ ಮನೆ ಮಾರಬೇಕಾಗಿಲ್ಲ, ಒಂದೇ ಒಂದು ಪೈಸೆಯನ್ನೂ ಯಾರೂ ಖರ್ಚು ಮಾಡಬೇಕಿಲ್ಲ. ಏಕೆಂದರೆ ಬ್ರಿಟನ್ನಿನ ಪ್ರತಿ ಪ್ರಜೆಯ ಪ್ರತಿ ಕಾಯಿಲೆಯ ಸಂಪೂರ್ಣ ಜವಾಬ್ದಾರಿ ಸರಕಾರದ್ದು. ಅಷ್ಟೇ ಅಲ್ಲ, ಯಾವುದೇ ಮುಂದುವರಿದ ರಾಷ್ಟ್ರದಲ್ಲಿ ಸಿಗುವಂಥ ವೈದ್ಯಕೀಯ ಸೌಲಭ್ಯಗಳು ಮತ್ತು ಚಿಕಿತ್ಸೆ ಬಡವ ಬಲ್ಲಿದನೆಂಬ ಭೇದವಿಲ್ಲದೇ, ಬಿಳಿಯ ಕರಿಯ ಎಂಬ ಭಿನ್ನತೆಯಿಲ್ಲದೇ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ. ಕೊರೊನಾದ ಮೊದಲನೇ ಅಲೆ ಬಂದಾಗ ಸರಕಾರ, ಎಲ್ಲ ಆಸ್ಪತ್ರೆಗಳು, ಎಲ್ಲ ಆರೋಗ್ಯ ಸಿಬ್ಬಂದಿಗಳು ತಬ್ಬಿಬ್ಬಾದದ್ದು ನಿಜ, ಆದರೆ ಎರಡನೇ ಅಲೆ ಬರುವ ವೇಳೆಗೆ ಎಲ್ಲ ವಿಭಾಗಗಳೂ ಸಜ್ಜಾಗಿದ್ದವು, ಎಡ್ಮಿಷನ್ನುಗಳು ಕಡಿಮೆಯಾದವು, ಸಾವುಗಳು ಕಡಿಮೆಯಾದವು. ಅದೇ ಸಮಯಕ್ಕೆ ಇಡೀ ಪ್ರಪಂಚದಲ್ಲೇ ಮೊದಲ ಬಾರಿಗೆ ಲಸಿಕೆಯನ್ನೂ ಅನುಮೋದಿಸಿದ ಬ್ರಿಟನ್ ವಯಸ್ಸಾದವರಿಗೆ, ಆರೋಗ್ಯ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಕೊಡಲು ಆರಂಭಿಸಿತು.

ಅದೇ ಸಮಯದಲ್ಲಿ ಭಾರತದಲ್ಲೂ ಕೊರೊನಾ ಕೇಸುಗಳು ಗಣನೀಯವಾಗಿ ಕಡಿಮೆಯಾಗಲು ಶುರುವಾಗಿದ್ದವು. ಕಳೆದ ಒಂದು ವರ್ಷದಿಂದ ಭಾರತಕ್ಕೆ ಹೋಗಲು ಸಾಧ್ಯವಾಗದೇ ಒದ್ದಾಡಿದ್ದ, ಲಸಿಕೆಯನ್ನು ಈಗಾಗಲೇ ಪಡೆದಿದ್ದ ಭಾರತೀಯರು ಭಾರತಕ್ಕೆ ಹೋಗಿ ತಮ್ಮ ಬಂಧುಮಿತ್ರರನ್ನು ನೋಡಿಕೊಂಡು ಬರಲು ಸಜ್ಜಾಗುತ್ತಿದ್ದರು. ಆದರೆ ಅದೇ ಸಮಯಕ್ಕೆ ತ್ಸುನಾಮಿಯಂತೆ ಕೋವಿಡ್ನ ಎರಡನೇ ಅಲೆಯು ಭಾರತದಲ್ಲಿ ಊಹಿಸಲಾಗದ ಪ್ರಮಾಣದಲ್ಲಿ ವ್ಯಾಪಿಸಲು ಆರಂಭವಾಯಿತು. ಟ್ವಿಟರ್, ವಾಟ್ಸಾಪ್, ಫೇಸ್ಬುಕ್, ಟಿವಿ ಚಾನಲ್ಗಳು ದಿಲ್ಲಿ, ಮುಂಬೈ, ಬೆಂಗಳೂರಿನಲ್ಲಿ ಜನರ ಹಾಹಾಕಾರ, ಬೆಡ್ಡು, ವೆಂಟಿಲೇಟರ್ ಮತ್ತು ಆಕ್ಸಿಜನ್ಗಳ ಕೊರತೆ, ಮತ್ತು ಸಾಲಾಗಿ ನಿಂತಿರುವ ಮೃತ ದೇಹಗಳನ್ನು ತೋರಿಸಹತ್ತಿದವು. ಇಲ್ಲಿಯೇ ಎರಡನೇ ಅಲೆ ಬಂದಾಗ ಧೃತಿಗೆಡದ ಬ್ರಿಟನ್ನಿನಲ್ಲಿರುವ ಭಾರತೀಯರು, ಭಾರತದ ಎರಡನೇ ಅಲೆಯಿಂದಾಗಿ ಮತ್ತೊಮ್ಮೆ ಕಂಗೆಟ್ಟಿದ್ದಾರೆ.

ಬ್ರಿಟನ್ನಿನ ಕನ್ನಡದ ಸಂಘ ಸಂಸ್ಥೆಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿವೆ. ಉದಾಹರಣೆಗೆ ಕನ್ನಡ ಬಳಗ (ಯು.ಕೆ) ಈಗಾಗಲೇ 28 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕರ್ನಾಟಕಕ್ಕೆ ಕೊಟ್ಟಿದೆ, ಅದೇ ತರಹ ಬೇರೆ ಕನ್ನಡ ಸಂಘಗಳೂ ಕಾರ್ಯತತ್ಪರವಾಗಿವೆ. ಕೆಲವು ವೈದ್ಯರು ಆನ್ಲೈನ್ನಲ್ಲಿ ರೋಗಿಗಳ ಸಮಾಲೋಚನೆಯನ್ನು ಮಾಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ ಎಂದು ಕೈಚೆಲ್ಲಿ ಕೂತಿದ್ದಾರೆ. ವಯಸ್ಸಾದ ಪಿತೃಗಳ, ಬಂಧುಗಳ, ಗೆಳೆಯ-ಗೆಳತಿಯರ ಪಿತೃಗಳ ಸಾವನ್ನು ದೂರದಿಂದಲೇ ನೋಡುತ್ತ ಭಾರತಕ್ಕೆ ಹೋಗಲಾಗದೇ ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರವನ್ನೋ, ರಾಜ್ಯ ಸರಕಾರವನ್ನೋ ದೂರತ್ತ, ಕೆಟ್ಟುಹೋದ ಸರಕಾರೀ ಆರೋಗ್ಯ ವ್ಯವಸ್ಥೆಯನ್ನು ಬಯ್ಯುತ್ತ, ಲಂಗುಲಗಾಮಿಲ್ಲದ ಆಸ್ಪತ್ರೆಗಳನ್ನು ನಿಂದಿಸುತ್ತ, ಟಿವಿಯಲ್ಲಿ, ಪೇಪರಿನಲ್ಲಿ ಬರುವ ಯಾವ್ಯಾವುದೋ ಔಷಧಿಯನ್ನು ಸೇವಿಸುತ್ತ, ವಾಟ್ಸಾಪಿನಲ್ಲಿ ಬರುವ ಸುದ್ದಿಗಳಲ್ಲಿ ತಮಗೆ ಬೇಕಾದುದನ್ನು ನಂಬುತ್ತ, ಕೊನೆಗೆ ದೇವರ ಮೇಲೆ ಭಾರಹಾಕುತ್ತ ಕೂತ ಗೆಳೆಯರು ಮತ್ತು ಬಂಧುಗಳು ಅಸಹಾಯಕರಾಗಿ ಕೋಪದಲ್ಲಿ ಮಾತಾಡುವಾಗ ಟೆಕ್ಸ್ಟ್ ಮಾಡಿದಾಗ ಗಮನವಿಟ್ಟು ಕೇಳಿಸಿಕೊಳ್ಳುತ್ತೇನೆ, ಓದುತ್ತೇನೆ. ಇಲ್ಲಿ ದೂರದ ಬ್ರಿಟನ್ನಿನಲ್ಲಿ ಕೂತು ನಾನು ನೂರಾರು ಉಪದೇಶಗಳನ್ನು ಕೊಡಬಹುದು, ಇಲ್ಲಿನ ಆರೋಗ್ಯ ವ್ಯವಸ್ಥೆಯ ಪಾಠ ಮಾಡಬಹುದು, ಆದರೆ ಅವ್ಯಾವವೂ ಭಾರತದ ಜನಸಾಂದ್ರತೆಗೆ, ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ತುರ್ತಾಗಿ ಹೊಂದಲಾರವು ಮತ್ತು ತುರ್ತಿನ ಪರಿಹಾರವಾಗಲಾರವು ಎಂದು ಸುಮ್ಮನಾಗುತ್ತೇನೆ. ಸಾಂತ್ವನದ ಭರವಸೆಯ ಎರಡು ಮಾತು ಹೇಳಿ, ಯಾವ ನೆಪವನ್ನೂ ನೀಡದೇ ದಯವಿಟ್ಟು ಲಸಿಕೆಯನ್ನು ತೆಗೆದುಕೊಳ್ಳಿ ಎನ್ನುವ ವಿನಂತಿಯನ್ನು ಮಾತ್ರ ತಪ್ಪದೇ ಮಾಡುತ್ತೇನೆ.

‘ಅನಿವಾಸಿ‘ಗಳ ಈ-ಜಗುಲಿ:

ಬ್ರಿಟನ್ನಿನಲ್ಲಿರುವ ಸಾಹಿತ್ಯಾಸಕ್ತ ಹಲವು ಕನ್ನಡಿಗರು ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ‘ ಎನ್ನುವ ಹೆಸರಿನಲ್ಲಿ ‘ಅನಿವಾಸಿ‘ ಎನ್ನುವ ಜಾಲಜಗುಲಿಯನ್ನು ನಡೆಸಿಕೊಂಡು ಬಂದಿದ್ದೇವೆ. ಯುಗಾದಿ ಮತ್ತು ದೀಪಾವಳಿಗೆ ಇಲ್ಲಿಯ ಕನ್ನಡ ಬಳಗವು ಪ್ರತಿ ಸಲವೂ ಕರ್ನಾಟಕದ ಯಾರಾದರೂ ಹೆಸರಾಂತ ಸಾಹಿತಿಗಳನ್ನೋ ರಂಗಕಲಾವಿದರನ್ನೋ ಕರೆದಾಗ, ಸಾಹಿತ್ಯದ ಸಂಬಂಧದ ಗೋಷ್ಠಿಗಳನ್ನು ನಡೆಸಿಕೊಂಡು ಬಂದಿದ್ದೇವೆ. ಆದರೆ ಕೊರೊನಾ ಎಂಬ ಜಾಗತಿಕ ಸಾಂಕ್ರಾಮಿಕ ಶುರುವಾದಾಗಿನಿಂದ ಅದೆಲ್ಲ ನಿಂತು ಹೋಯಿತು. ಹಾಗಾಗಿ ಆನ್ಲೈನ್ನಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಚುವಲ್ ಮೀಟ್ ಮಾಡುತ್ತಿದ್ದೇವೆ, ಅದಕ್ಕೆ ‘ಈ-ಜಗುಲಿ‘ ಎಂದು ಹೆಸರುಕೊಟ್ಟು. ಆಗಾಗ ಕರ್ನಾಟಕದಿಂದ ಸಾಹಿತಿಗಳನ್ನು, ಕಲಾವಿದರನ್ನು ಕರೆಸಿ ಅವರಿಂದ ಕೆಲವು ವಿಷಯಗಳನ್ನು ಕಲಿಯುತ್ತೇವೆ. ಕೆಲವು ತಿಂಗಳ ಹಿಂದೆ ಜಯಂತ್ ಕಾಯ್ಕಿಣಿಯವರು ಬಂದು ಕತೆ ಬರೆಯುವ ಪ್ರಕ್ರಿಯೆಯ ಬಗ್ಗೆ ಮಾತಾಡಿದ್ದರು.

ಯಾವುದೇ ಮುಂದುವರಿದ ರಾಷ್ಟ್ರದಲ್ಲಿ ಸಿಗುವಂಥ ವೈದ್ಯಕೀಯ ಸೌಲಭ್ಯಗಳು ಮತ್ತು ಚಿಕಿತ್ಸೆ ಬಡವ ಬಲ್ಲಿದನೆಂಬ ಭೇದವಿಲ್ಲದೇ, ಬಿಳಿಯ ಕರಿಯ ಎಂಬ ಭಿನ್ನತೆಯಿಲ್ಲದೇ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ.

ಇತ್ತೀಚೆಗೆ ಎಪ್ರಿಲ್ 25 ರಂದು ನಮ್ಮ ನಾಲ್ಕನೆಯ ಈ-ಜಗುಲಿಗೆ ಹೆಸರಂತ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಮಣ್ಯ ಅವರನ್ನು ವರ್ಚುವಲ್ ಆಗಿ ಕರೆಸಿದ್ದೆವು. ಕಾವ್ಯವನ್ನು ಹೇಗೆ ಆಸ್ವಾದಿಸಬೇಕು ಎಂದು ನವೋದಯ ಮತ್ತು ನವ್ಯದ ಕವಿಗಳ ಕವಿತೆಗಳನ್ನು ನಿರರ್ಗಳವಾಗಿ ಉಲ್ಲೇಖಿಸಿದರು. ಬೇಂದ್ರೆ, ಕುವೆಂಪು, ಜಿಎಸ್ಎಸ್, ಅಡಿಗರು ಬರೆದ ಕವನಗಳ ಪ್ರಮುಖ ಸಾಲುಗಳನ್ನು ಬಿಡಿಸಿ ಹೇಳಿದರು. ಕನ್ನಡ ಕವನಗಳನ್ನು ಓದಲು ಆರಂಭಿಸುವವರಿಗೆ, ಇನ್ನೂ ಹೆಚ್ಚು ಓದಲು ಆಸಕ್ತಿ ಇರುವವರೆಗೆ ತುಂಬ ಉಪಯುಕ್ತವಾಯಿತು.

ಒಂದೇ ಒಂದು ಪ್ರಚಲಿತ ಕವಿಗಳ ಹೆಸರು ಅವರ ಬಾಯಿಂದ ಬರಲಿಲ್ಲ! ಅದನ್ನೇ ನೆಪವಾಗಿಟ್ಟು, ಕನ್ನಡದ ಆಧುನಿಕ/ನವ್ಯ ಕಾವ್ಯದ ಪ್ರವೇಶಕ್ಕೆ ಆಗಿನ ಕಾಲಕ್ಕೆ ಲಂಕೇಶ್ ಅವರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ‘ ಆಕರ ಗ್ರಂಥವಾಗಿತ್ತು, ಈಗಿನ ಪೀಳಿಗೆಯ ಕವಿಗಳನ್ನು ಓದಲು ಅಂಥ ಯಾವುದಾದರೂ ಪುಸ್ತಕವಿದೆಯೇ ಎಂದು ಪ್ರಶ್ನೋತ್ತರ ಸಮಯದಲ್ಲಿ ನಾನು ನರಹಳ್ಳಿಯವರನ್ನು ಕೇಳಿದೆ. ಅವರ ಪ್ರಕಾರ ಅಂಥ ಯಾವ ಪುಸ್ತಕಗಳೂ ಇಲ್ಲ ಎಂದರು. ಅಂಥ ಪುಸ್ತಕಗಳ ನಿರೀಕ್ಷೆಯಲ್ಲಿ ನಾನಿದ್ದೇನೆ.

ಈಗಿನ ತಲೆಮಾರಿನ ಸುಮಾರು ಜನ ಕನ್ನಡದ ಕತೆಗಾರನ್ನು ನಾನು ಓದಿ ಬಲ್ಲೆ, ಆದರೆ ಇಪ್ಪತ್ತರಿಂದ ನಲವತ್ತು ವಯಸ್ಸಿನೊಳಗೆ ಇರುವ, ಎಚ್ಎಸ್ವಿ, ಕಾಯ್ಕಿಣಿ ಮತ್ತು ಬಿಆರ್ ಅವರ ಸ್ಥಾನವನ್ನು ತುಂಬಬಲ್ಲ ಒಂದೇ ಒಂದು ಕವಿಯ ಹೆಸರೂ ನನಗೆ ಗೊತ್ತಿಲ್ಲ. ಇದು ನಾನು ಬ್ರಿಟನ್ನಿಗೆ ಬಂದು ಕನ್ನಡದಿಂದ ಅಷ್ಟು ದೂರಾದ ಫಲವೋ ಅಥವಾ ಕನ್ನಡದಲ್ಲಿ ಕವನದ ಕೃಷಿ ಮಾಡುವವರ ಬರವೋ ನನಗೆ ಗೊತ್ತಿಲ್ಲ. ಕನ್ನಡದ ವೆಬ್ ಪೋರ್ಟಲ್ (ಅವಧಿ, ಕೆಂಡಸಂಪಿಗೆ)ಗಳಲ್ಲಿ, ಕನ್ನಡದ ದಿನ ಪತ್ರಿಕೆಗಳಲ್ಲಿ ಕವನಗಳನ್ನು ಓದುತ್ತೇನೆ. ಯಾವುದೂ ತಾಕುವುದಿಲ್ಲ, ಯಾವುದೂ ಹುತ್ತಗಟ್ಟಿ ಚಿತ್ತ ಕೆತ್ತಿದ ಕವನದಂತೆ ಕಾಣುವುದಿಲ್ಲ. ಸಿಕ್ಕ ನಾಕು ನಿಮಿಷದಲ್ಲಿ ವಾಕ್ಯಗಳನ್ನು ತುಂಡರಿಸಿ ಬರೆದಂತಿರುತ್ತವೆ. ನವೋದಯ ಆದ ಮೇಲೆ ನವ್ಯಕಾವ್ಯ ಬಂದಿತು, ನಂತರ ಬಂಡಾಯ, ಬಂಡಾಯದ ನಂತರ ಏನು ಬಂತು? ಫೇಸ್ಬುಕ್/ಇನ್ಸ್ಟಾ ಕಾವ್ಯ ಅನ್ನಬಹುದೇ?

ದಿ ಇಂಜಿನಿಯರ್ಸ್ ಪಿಕ್:

ಹಾಗಂತ ಒಂದು ಯು-ಟ್ಯೂಬ್ ಚಾನೆಲ್ ಇರುವದು ಕನ್ನಡದ ಬಹಳಷ್ಟು ಸಂಗೀತಪ್ರಿಯರಿಗೆ ಗೊತ್ತಿರಲು ಸಾಕು. ಸೌಂಡ್ ಇಂಜಿನಿಯರ್ ಆಗಿರುವ ಅನೀಶ್ ಪೊನ್ನಣ್ಣ ಎನ್ನುವವರ ಚಾನೆಲ್ ಇದು. ಅತ್ಯಂತ ಕಡಿಮೆ ವಾದ್ಯಗಳನ್ನು ಇಟ್ಟುಕೊಂಡು, ಉತ್ಕೃಷ್ಟ ಮಟ್ಟದ ಸಂಗೀತವನ್ನು ಮತ್ತು ಅಷ್ಟೇ ಸುಂದರವಾದ ವಿಡಿಯೋವನ್ನು ನಮಗೆ ಈ ಚಾನೆಲ್ನಲ್ಲಿ ನೋಡಲು ಸಿಗುತ್ತದೆ. ಇಲ್ಲಿಯ ವೈಶಿಷ್ಟ್ಯವೆಂದರೆ ಯಾವ ಹಾಡುಗಳೂ ಸಿನೆಮಾ ಸಂಗೀತವಲ್ಲ. ಈಗಾಗಲೇ 65 ಸಾವಿರಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಈ ಚಾನೆಲ್ನಲ್ಲಿ ಕನ್ನಡದ ಸುಂದರ ಹಾಡುಗಳಿವೆ. ಅನನ್ಯಾ ಭಟ್, ಬಿಂದುಮಾಲಿನಿ, ಕವಿತಾ ಗಂಗೂರ್, ವಾರಿಜಾಶ್ರೀ, ಐಶ್ವರ್ಯಾ ರಂಗರಾಜನ್, ಎಂ ಡಿ ಪಲ್ಲವಿ ಮತ್ತು ಶಿಲ್ಪಾ ಮುಡ್ಬಿಯವರ ಅದ್ಭುತ ಹಾಡುಗಳಿವೆ.

ಕೊರೊನಾದ ಚಾನೆಲ್ ನೋಡಿ ಬೇಸರವಾಗಿದ್ದರೆ, ವಾಟ್ಸಾಪ್ ಮೆಸೇಜುಗಳನ್ನು ಓದಿ ಎಲ್ಲ ಮುಗಿದಿದ್ದರೆ, ಈ ಯುಟ್ಯೂಬ್ ಚಾನೆಲ್ನಲ್ಲಿರುವ ಇದುವರೆಗಿನ ಎಲ್ಲ ಹಾಡುಗಳನ್ನು ನೋಡಿ. ಭಾರತದ ಶಾಸ್ತ್ರೀಯ, ಸುಗಮ ಸಂಗೀತ ಮತ್ತು ಜಾನಪದ ಸಂಗೀತದ ಮೈದುಂಬಿ ಹಾಡಿದ ಹಾಡುಗಳಿವೆ. ಮನಸ್ಸಿಗೆ ಕಣ್ಣಿಗೆ ನೆಮ್ಮದಿ ತರುವುದರಲ್ಲಿ ಯಾವ ಸಂಶಯವೂ ಇಲ್ಲ.

About The Author

ಕೇಶವ ಕುಲಕರ್ಣಿ

ಹುಟ್ಟಿ ಬೆಳೆದು ಓದಿದ್ದು ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಮೈಸೂರು. ವೃತ್ತಿಯಿಂದ ವೈದ್ಯ - ರೇಡಿಯಾಲಾಜಿ. ಸಾಹಿತ್ಯ, ಸಂಗೀತ ಮತ್ತು ಸಿನೆಮಾಗಳಲ್ಲಿ ಆಸಕ್ತಿ. ೨೦೦೪ರಿಂದ ಇಂಗ್ಲೆಂಡ್ ನಿವಾಸಿ, ವಾಸ ಇಂಗ್ಲೆಂಡಿನ ಬರ್ಮಿಂಗ್-ಹ್ಯಾಮ್ ನಗರ. ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಇಂಗ್ಲೆಂಡ್ ಕನ್ನಡಿಗರ `ಅನಿವಾಸಿ` ಎಂಬ ಜಾಲತಾಣದಲ್ಲಿ ಸಕ್ರಿಯ.

5 Comments

  1. Gurunath Mujumdar

    Excellent article. Size of our country is very big. Nowadays Govt Hospitals are giving good service at vey nominal charges. But due to hype of this Mediclaim, people are reluctant to go govt Hospitals. I think people mind set should change.

    Reply
  2. Shrivatsa Desai

    ಕೇಶವ ಕುಲಕರ್ಣಿಯವರ ’ಇಂಗ್ಲೆಂಡ್ ಪತ್ರ’ಕ್ಕೆ ಸ್ವಾಗತ. ಸ್ವಾರಸ್ಯಕರ, ಸ್ವಾಗತಾರ್ಹ ಮತ್ತು ಆಶ್ಚರ್ಯಕರ ಎಂದು ಅನ್ನಬಹುದಾದ ಸುದ್ದಿಗಳೂ ಇವೆ ಈ ಪತ್ರದಲ್ಲಿ. ಹುಡುಕಿದರೂ ಮೂಲೆಯಲ್ಲಿ ’ಕ್ಷೇಮ’ ಅಂದು ನಾನು ಬರೆಯುತ್ತಿದ್ದ ಪದ ಕಾಣಿಸಲಿಲ್ಲ! ಓಹೋ, ಕೋರೋನಾ ಇರಬೇಕು. ಮುಂದಿನ ಕ್ಪತ್ರವನ್ನು ಎದುರು ನೋಡುವಾ! ಶ್ರೀವತ್ಸ ದೇಸಾಯಿ

    Reply
  3. Vijay

    Excellent and honest write up

    Reply
  4. Dr.Poornimaa

    ಅದ್ಭುತವಾದ ಬರವಣಿಗೆ, ಸಾವಿರಾರು ಮೈಲಿ ದೂರದಲ್ಲಿದ್ದು ಭಾರತದ ಸಮಸ್ಯೆಗಳನ್ನು ಬಿಡಿ ಬಿಡಿಯಾಗಿ ತಿಳಿಸಿ , ಪರಿಹಾರ ಹೇಗೆ ಎಂದು ತುಂಬ ಸೊಗಸಾಗಿ ತಿಳಿಸಿರುವೆ . ತುಂಬ ಹೆಮ್ಮೆ ಎನಿಸುತ್ತದೆ . ಸಂಗೀತದ ಬಗ್ಗೆ ಇರುವ ಅರಿವು , ಮಾಹಿತಿಗಳು ಖುಷಿ ಕೊಡುತ್ತವೆ. ????

    Reply
  5. Rakesh

    Nicely written Keshav. Keep writing more.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ