Advertisement
ಕೊರಿಯನ್ ಹೆಣ್ಣುಗಳ ಇಂಗ್ಲಿಷ್ ಸಾಹಸ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ಕೊರಿಯನ್ ಹೆಣ್ಣುಗಳ ಇಂಗ್ಲಿಷ್ ಸಾಹಸ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ನಾನು ಆಸ್ಟ್ರೇಲಿಯಕ್ಕೆ ಬಂದ ಹೊಸತರಲ್ಲಿ ಕೆಲಸ ಸಿಕ್ಕದೆ ಪರದಾಡುತ್ತಿದ್ದೆ. ದಿನಾಲೂ ಸರ್ಕಾರದ ಕಾಮನವೆಲ್ತ್ ಎಂಪ್ಲಾಯ್‌ಮೆಂಟ್ ಸರ್ವೀಸಿನ ಆಫೀಸಿಗೆ ಹೋಗೋದು, ಅಲ್ಲಿ ಬೋರ್ಡಿನ ಚೀಟಿಗಳಲ್ಲಿ ಏನಾದರೂ ಕೆಲಸ ಇದೆಯಾ ಎಂದು ಹುಡುಕೋದು ನಮ್ಮ ದೈನಂದಿಕವಾಗಿತ್ತು. ಬರುಬರುತ್ತಾ ಸಿಟ್ಟು ಅಸಹಾಯಕತೆ ಜಾಸ್ತಿ ಆಗ್ತಿತ್ತು. ಹೀಗಿದ್ದರೆ ಆಗದು ಅಂತ ಹೋಗಿ ಕಾಲೇಜಿಗೆ ಸೇರಿಕೊಂಡೆ. ಕಂಪ್ಯೂಟರ್‍ ಕೆಲಸ ಗೊತ್ತಿದ್ದರೂ ಮತ್ತೆ ಕಂಪ್ಯೂಟರ್‍ ಕೋರ್ಸು ಮಾಡೋದು ಒಳ್ಳೇದು ಅನಿಸಿತು. ಇದು ತೊಂಬತ್ತರ ಮೊದಮೊದಲ ವರ್ಷಗಳು. ಇನ್ನೂ ಇಂಡಿಯಾದಲ್ಲಿ ಐಟಿ ಯುಗ ಶುರುವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲೂ ಆಗ “ಕಮರ್ಷಿಯಲ್ ಡಾಟಾ ಪ್ರೋಸಸಿಂಗ್” ಅಂತನೇ ಕೋರ್ಸಿನ ಹೆಸರು!

ಅವೆಲ್ಲಾ ಇರಲಿ. ಹೇಳಹೊರಟಿದ್ದು ಕಾಲೇಜಿನ ನಮ್ಮ ಕ್ಲಾಸಿನಲ್ಲಿದ್ದ ಕೊರಿಯಾದ ಒಂದಿಬ್ಬರು ಹುಡುಗಿಯರ ಬಗ್ಗೆ. ಪುಟ್ಟ ಪುಟ್ಟ ಆಕೃತಿಯ, ಪುಟಪುಟನೆ ಒಳಹೊರಗೆ ಓಡಾಡುತ್ತಿದ್ದವರು. ಇಬ್ಬರೂ ಒಬ್ಬರಿಗೊಬ್ಬರು ಸದಾ ಅಂಟಿಕೊಂಡಿರುತ್ತಿದ್ದರು. ನನ್ನಂತೆ ಆಗ ತಾನೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಏನೋ ಎತ್ತೋ ಎಂಬಂತೆ ಸುತ್ತಮುತ್ತ ಕಣ್ಣಿರುತ್ತಿತ್ತು. ಅವರದೂ, ನನ್ನದೂ.

ನಮಗೂ ಅವರಿಬ್ಬರಿಗೂ ಒಂದು ವ್ಯತ್ಯಾಸವಿತ್ತು. ಅವರಿಗೆ ಕೊಂಚವೂ ಇಂಗ್ಲೀಷು ಬರುತ್ತಿರಲಿಲ್ಲ. ಬರೇ, ಐ-ಯು, ಕಮ್-ಗೋ, ಹಿಯರ್- ದೇರ್‍… ಇಷ್ಟೆ. ಕಾಲೇಜಿನ ನೋಟೀಸ್ ಬೋರ್ಡಿನ ಮುಂದೆ ತುಂಬಾ ಹೊತ್ತು ನಿಂತು ಇಬ್ಬರೂ ಚರ್ಚಿಸುತ್ತಿದ್ದುದು ನೋಡುತ್ತಿದ್ದೆ. ಚರ್ಚೆ ಏನಿರಬಹುದು ಅನ್ನೋ ಕುತೂಹಲ. ಹೋಗಿ ಮಾತಾಡಿಸೋಕೆ ಹಿಂಜರಿಕೆ. ಕಾಲೇಜಿನ ಯಾವುದೋ ಮ್ಯಾಗಜೀನೋ, ಬಿಟ್ಟಿ ಕಮ್ಯುನಿಟಿ ಪೇಪರೋ ಹಿಡಿಕೊಂಡು ಕಾಲೇಜಿನ ಅಂಗಳದಲ್ಲಿ ಇಬ್ಬರೂ ದೀರ್ಘವಾಗಿ ಮಾತಾಡುತ್ತಿದ್ದರು. ಒಮ್ಮೆ ಕ್ಲಾಸಿನ ಹೊರಗೆ ಕೊರಿಯನ್ ಭಾಷೆಯ ಪೇಪರ್ ಹಿಡಿಕೊಂಡು, ಅದರಲ್ಲಿದ್ದ ಸಿನೆಮಾ ನಟನ ಫೋಟೋ ನೋಡತಾ, ತಮ್ಮ ಕನಸುಗಳಿಗೆ ತಾವೇ ನಕ್ಕೊಂಡು ಖುಷಿಯಾಗಿದ್ದರು. ಆದರೆ ಕ್ಲಾಸು ಹೊಕ್ಕೊಡನೆ ಗಂಭೀರವಾಗಿ ಬಿಡುತ್ತಿದ್ದರು. ಪುಸ್ತಕ ತೆರೆದಿಟ್ಟುಕೊಂಡು ಎಡೆಬಿಡದೆ ಬರೆದುಕೊಳ್ಳುತ್ತಿದ್ದರು. ಇವೆಲ್ಲಾ ನನಗೆ ಸೋಜಿಗವಾಗಿ ಕಾಣುತ್ತಿತ್ತು.

ಕ್ಲಾಸಿನಲ್ಲಿ ನಾನು ಟೀಚರಿನೊಡನೆ ಕೊಂಚ ಜಗಳ ಆಡುತ್ತಿದ್ದೆ, ಹಾಗಾಗಿ ಕ್ಲಾಸಿನ ಉಳಿದವರಲ್ಲಿ ನನ್ನ ಜತೆ ಒಂದು ತರ ಸಲಿಗೆ. ನನಗೂ ಅವರ ಹಿನ್ನೆಲೆ ಕತೆ ಕೇಳುವ ಹುಚ್ಚು. ಆದರೆ, ಈ ಹುಡುಗಿಯರು ಮಾತ್ರ ದೂರದಿಂದ ನಗುತ್ತಿದ್ದರೇ ಹೊರತು ಎಂದೂ ಬಂದು ಮಾತಾಡಿಸಿದವರಲ್ಲ. ಒಂದು ದಿನ ಅವರನ್ನು “ನೀವು ಎಲ್ಲಿಂದ ಬಂದವರು?” ಅಂತ ಕೇಳಿದೆ. “ಕೋರಿಯಾ” ಅಂತ ಒಬ್ಬಳು ಹೇಳಿದಳು. ನಾನು “ನಾರ್ತ, ಸೌತ?” ಎಂದು ಕೇಳಿದೆ. ಇದೆಂತಹ ಪೆದ್ದು ಪ್ರಶ್ನೆ ಅನ್ನುವಂತೆ “ಅಫ್ ಕೋರ್ಸ್ ಸೌತ್!” ಅಂತಂದು ಇಬ್ಬರೂ ನಕ್ಕೊಂಡು ಹೊರಟು ಹೋದರು. ನಾನು ಕೇಳಿದ ಪ್ರಶ್ನೆ ಅವರಿಗೆ ಏಕೆ ಹಾಗೆ ಕಂಡಿತು ಅಂತ ತಿಳೀಲಿಲ್ಲ. ನನಗೆ ಅವರು ಒಂದು ಬಗೆಯ ವಿಸ್ಮಯ.

ಒಂದೆರಡು ತಿಂಗಳು ಕಳಿದಿತ್ತು. ಕ್ಲಾಸಿನವರಿಗೆಲ್ಲಾ ತಮ್ಮಲ್ಲೇ ತುಸು ಸಲುಗೆ ಹುಟ್ಟಿಕೊಂಡಿತ್ತು. ಆದರೂ ಆ ಇಬ್ಬರು ಕೊರಿಯನ್ ಹುಡುಗಿಯರು ಮಾತ್ರ ಕ್ಲಾಸಿನಲ್ಲಿ ಇನ್ನೂ ಗಂಭೀರವಾಗಿಯೇ ಇದ್ದರು. ಹೊರಗೆ ತಮ್ಮಷ್ಟಕ್ಕೆ ನಗುತ್ತಾ ಇರುತ್ತಿದ್ದರು. ಒಂದು ದಿನ ಕಾಲೇಜಿನ ಅಂಗಳದ ಹುಲ್ಲಿನ ಮೇಲೆ ಇಬ್ಬರೂ ಕೂತಿದ್ದರು. ಏನೋ ಬಿಸಿ ಬಿಸಿ ಚರ್ಚೆ ನಡೆದಿತ್ತು. ಪಕ್ಕದಲ್ಲೇ ಹೋಗುತ್ತಿದ್ದ ನನ್ನನ್ನು ನೋಡಿ ಅವಳಲ್ಲೊಬ್ಬಾಕೆ ತಟ್ಟನೆ ಹತ್ತಿರ ಬಂದು “ಎಕ್ಸೂಸ್ ಮಿ” ಎಂದಳು. ಏನೆಂದು ಕೇಳಿದೆ. ಕೈಯಲ್ಲಿದ್ದ ಪುಟ್ಟ ಪುಸ್ತಕದಲ್ಲಿ ಏನೋ ಓದಿ ಯಾವುದೋ ಇಂಗ್ಲಿಷ್ ಪದದ ಅರ್ಥ ಕೇಳಿದಳು. ಹೇಳಿದೆ. ಮಿಕಿಮಿಕಿ ನೋಡಿದಳು. ಒಂದು ಚೂರು ವಿವರಿಸಿದೆ. ಹಾ ಎಂದು ತಲೆಹಾಕಿ ಥ್ಯಾಂಕ್ಸ್ ಹೇಳಿ ಓಡಿದಳು.

ಅವರಿಬ್ಬರು ಕೂತಿದ್ದ ಕಡೆಗೆ ಹೋದೆ. ಏನು ಮಾಡ್ತಾ ಇದ್ದಾರೆ ಅಂತ ನೋಡಿದೆ, ಅವರ ಪುಸ್ತಕದ ತುಂಬಾ ಒಂದು ಚೂರು ಜಾಗ ಇಲ್ಲದ ಹಾಗೆ ಕೊರಿಯನ್‌ ಅಕ್ಷರದಲ್ಲಿ ಬರಕೊಂಡಿದ್ದರು. ಕ್ಲಾಸಲ್ಲಿ ಪಾಠ ಕೇಳೋವಾಗ ಬರಕೊಂಡಿದ್ದು ಅಂತ ಗೊತ್ತಾಯ್ತು. ಎನಿದು ಅಂತ ಕೇಳಿದೆ. ಪಕ್ಕದಲ್ಲಿದ್ದ ಇಂಗ್ಲಿಷ್ ಕೊರಿಯನ್ ಡಿಕ್ಷನರಿ ತೋರಿಸಿ “ಮೀನಿಂಗ್ಸ್” ಅಂದಳು. ಪಾಠ ಮಾಡುವಾಗ ಕೇಳಿದ ಆದರೆ ಅರ್ಥವಾಗದ ಇಂಗ್ಲೀಷ್ ಪದಗಳನ್ನು ಕೊರಿಯನ್‌ನಲ್ಲಿ ಗೀಜಿಕೊಳ್ಳುತ್ತಿದ್ದರು. ಆಮೇಲೆ ಅದನ್ನು ಡಿಕ್ಷನರಿಯಲ್ಲಿ ನೋಡಿ, ಕ್ಲಾಸಿನಲ್ಲಿ ಹೇಳಿದ್ದನ್ನು ಅರ್ಥೈಸಿಕೊಂಡು ಮತ್ತೊಂದು ಪುಸ್ತಕದಲ್ಲಿ ನೋಟ್ಸ್ ಬರಕೊಳ್ಳುತ್ತಿದ್ದರು. ಹೀಗೆ ಎಲ್ಲಾ ಕ್ಲಾಸಿನಲ್ಲೂ ಕೇಳಿದ್ದನ್ನು ಕೊರಿಯನ್‌ನಲ್ಲಿ ಗೀಚಿಕೊಂಡು ನಂತರ ನೋಟ್ಸ್ ಮಾಡಿಕೊಳ್ತಾ ಇದ್ದರು. ತಡೆತಡೆದು “ಸ್ಲೋಲಿ… ಇಟ್ ಬಿಕಂಸ್ ಈಸಿ” ಅಂದು ನಕ್ಕಳು. ಪುಟದ ತುಂಬಾ ಇದ್ದ ಪದಗಳಿಗೆ ಇವರು ಅರ್ಥ ನೋಡಿಕೊಳ್ಳೋಕೆ ಬಿಟ್ಟು ನಾನು ಅಲ್ಲಿಂದ ಹೊರಟೆ.

ಕಾಲೇಜು ಶುರುವಾಗಿ ಸುಮಾರು ಆರು ತಿಂಗಳಲ್ಲಿ ನಾವೆಲ್ಲಾ ಒಂದು ಪ್ರೆಸೆಂಟೇಷನ್ ಕೊಡಬೇಕಿತ್ತು. ಕ್ಲಾಸಿನಲ್ಲಿ ಕಲಿತದ್ದನ್ನೇ ರಿಸರ್ಚ್ ಮಾಡಿ ಇನ್ನಷ್ಟು ವಿಸ್ತರಿಸಿ ಹೊಸ ವಿಷಯಗಳನ್ನು ಹೇಳಬೇಕಿತ್ತು. ಆ ಇಬ್ಬರ ಇಂಗ್ಲಿಷ್ ಪರದಾಟ ಗೊತ್ತಿದ್ದ ನಾನು ಕುತೂಹಲ ಮತ್ತು ಆತಂಕದಿಂದ ಅವರ ಸರದಿಗೆ ಕಾದೆ. ಆದರೆ ಅವರು ಇಂಗ್ಲೀಷಿನಲ್ಲಿ ಸರಳವಾಗಿ ತಪ್ಪಿಲ್ಲದಂತೆ ಪ್ರೆಸೆಂಟೇಷನ್ ಕೊಟ್ಟರು. ತಾವು ಆರಿಸಿಕೊಂಡ ಸಂಗತಿಯ ಬಗ್ಗೆ ಮಹತ್ವಪೂರ್ಣವಾದ ಒಳನೋಟ ಕೊಟ್ಟರು. ಟೀಚರಿಗಾಗಲೀ, ಉಳಿದವರಿಗಾಗಲೀ ಅವರ ಇಂಗ್ಲೀಷಿನ ಕಷ್ಟ ಗೊತ್ತೂ ಆಗದಂತಿತ್ತು!

ಕನ್ನಡ ಮೀಡಿಯಮ್ಮಿನಲ್ಲಿ ಓದಿ ಇಂಗ್ಲಿಷ್ ಕಲಿಯಬೇಕಾದವರ ಪಾಡು ನನಗೆ ಗೊತ್ತಿತ್ತು. ಹಾಗೆಯೇ, ಇಂಗ್ಲಿಷ್‌ಮಯವಾದ ಇಂಡಿಯಾದಿಂದ ಇಲ್ಲಿಗೆ ಬಂದು ತಪ್ಪು ತಪ್ಪು ಇಂಗ್ಲಿಷ್ ಮಾತಾಡುವುದೂ ಗೊತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇಂಗ್ಲಿಷಿನ ಬಗ್ಗೆ ನಾನೇ ಎಚ್ಚರವಹಿಸುವಂತೆ, ತಪ್ಪು ಮಾಡಿ ಸಬೂಬು ಹೇಳದಂತೆ ಆಯಿತು. ಅದಕ್ಕೆ ಆ ಇಬ್ಬರು ಕೊರಿಯನ್ ಹುಡುಗಿಯರು ಕಾರಣ ಎಂದರೆ ತಪ್ಪಾಗಲಾರದು. ಈಗ ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ಪುಣ್ಯಾತಗಿತ್ತೀರು!

 

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ