Advertisement
ಚಾಂದ್ ಪಾಷ  ಬರೆದ ಎರಡು ಹೊಸ ಕವಿತೆಗಳು

ಚಾಂದ್ ಪಾಷ ಬರೆದ ಎರಡು ಹೊಸ ಕವಿತೆಗಳು

ಬಣ್ಣ ಮಾಸುವ ಮುನ್ನ

ಪರದೆಗಳಾಚೆ ಕಡಲ ಚಿತ್ರ ಬರೆದು,
ಹೊನ್ನ ಕಿರಣವ ಹೊದಿಸಿದರು ಚಳಿಗಾಲ ಕಳೆಯಲೆ ಇಲ್ಲ,
ಅದೋ ಆ ಕಣ್ಣೊಳಗೆ ಕೋಟಿ ಕವಿತೆಯ ದೋಣಿ ತೇಲುತ್ತಲೇ ಇದೆ
ಅಲೆಗಳು ಮಾತ್ರ ಆಕಳಿಸುತ್ತಿದೆ.
ನೀ ಇರದ ರಾತ್ರಿ ಅದೇಕೆ ಅಷ್ಟು ಸುದೀರ್ಘ?

ನಿನ್ನ ಪಾದಗಳ ಹುಡುಕುತ್ತಾ ಬೀದಿಗೆ ಬಿದ್ದಿದ್ದೇನೆ,
ನೀ ಎಲ್ಲೋ ಕಳೆದು ಹೋದ ಸಂಗತಿ ಈಗಷ್ಟೇ ಗಾಳಿ ತಿಳಿಸಿದೆ.
ನೀರೋಳಗೆ ದಾರಿಯ ಕೊರೆದು ನಿಲ್ಲದೇ ಓಡುವ ಮೀನ ಮೈಯವಳೆ!
ಹೊಳೆ ಹೊಳೆವ ಕಣ್ಣ ಕನ್ನಡಿಯಲಿ ನನ್ನ ಮುಖ ನೋಡಲು ಅನುಮತಿಸು,
ಅರೆ ನಿಮಿಷವಾದರೂ ಜೀವ ಪಡೆವೆ!

ರೆಪ್ಪೆಗಳಾಚೆ ಆಕಾಶವು ಅಂಬೆಗಾಲಿಡಲು
ತಾರೆಗಳಿಗೆ ಕುಣಿತ ಕಲಿಸಿದ ನಿನ್ನ ನೆನಪಾಗುತಿದೆ.
ನಿನ್ನ ಕಣ್ಣ ನಂಬಿ ಕಾಡಿಗೆ ಕದಿಯ ಹೊರಟ ನನ್ನ ದೃಷ್ಟಿಯ ಬಂಧಿಯಾಗಿಸು,
ಇರುಳಿಳಿದು ಹಗಲು ಹುಟ್ಟುವ ಮೊದಲೆ ಕೂಸಾಗಿ ನಿನ್ನ ಕೆನ್ನೆ ಕಚ್ಚುವೆ, ನಿನಗೂ ತಿಳಿಸದೆ…

ಹೀಗೆಲ್ಲ ಬರೆದಾಗ ಪದಗಳಿಗೂ ಬಿಗುಮಾನ
ನಿನ್ನೊಲವ ಹೆಣೆದು ಕಣ್ಣು ಮುಚ್ಚಿರುವೆ,
ಚಂದ್ರ ಸೂರ್ಯರೂ ಕೂಡ ಇದ್ದಿಲಾಗುವ ಹೊತ್ತು,
ಕತ್ತಲು ಕಳೆವ ಮುನ್ನ ಮುಡಿಗೇರಿಸು ನನ್ನ.
ನವಿಲ ಗರಿ ಬಣ್ಣ ಮಾಸುವ ಮುನ್ನ!!

ಗಡಿಯಾರ ಬಿದ್ದಿದೆ!

ಬೆಳಕಿನ ಬೆನ್ನಿಗೆ ಬೆಂಕಿ ಬಿದ್ದು, ಬೂದಿಯಾಗುತ್ತಲೆ ಕತ್ತಲೆ ಉರಿದು ಹೋಯಿತು.
ಬಳಪದ ಹೆಜ್ಜೆ ಸರಿದಲ್ಲೆಲ್ಲ ಅಕ್ಷರಗಳು ಹುಟ್ಟುತ್ತಾ, ಅಜ್ಞಾನ ಸಾಯುವಾಗ ಪದವಿಗಳ ನಕಲು ತೆವಳಲು ಶುರು ಮಾಡಿತು.
ಇತ್ತ ಕನ್ನಡಿಯಲ್ಲೂ ಹುಬ್ಬು ತೀಡಿಸಿಕೊಂಡ ಕನಸು, ಎದೆ ಬಟ್ಟೆ ಬಿಗಿಯಾಗಲು ಜಡೆಯ ಹೂವು ಜಾರಿ ಬೀಳುತ್ತದೆ, ಅಂಗಳದ ಯೌವ್ವನದಲಿ!

ಸೆಕೆಂಡಿನ ಮುಳ್ಳು ಗಡಿಯಾರದ ಎದೆ ತಿವಿದ ಹಾಗೆಲ್ಲ,
ಚಪ್ಪಲಿ ಮುಡಿದ ಪಾದಗಳು ಬೀದಿಗಿಳಿಯುತ್ತವೆ!
ನಾಚಿಕೆಯಲಿ ನುಲಿಯುವ ಕಿರುಬೆರಳು ಬಟ್ಟೆ ತುದಿಗೆ ತಾಕುತ್ತಲೆ,
ದಾರಿಯ ಮೈ ಮೇಲೆ ಹೆಜ್ಜೆಯ ಚಿತ್ರಾಲಂಕಾರ
ಬೀದಿಗೂ ಸಂಭ್ರಮ ಹೂ ಮುಡಿದ ನಕ್ಷತ್ರ ನಡಿದಿರಲು,
ಹಗಲ ಕಣ್ಣೊಳಗೂ ಬೆಳದಿಂಗಳ ಸೇಂದಿ ವಾಸನೆ!

ನಿಮಿಷಗಳು ನಿಮಿರುವ ಹೊತ್ತಲಿ ಅಲ್ಲಲ್ಲಿ ತೇವದ ನೆರಳು,
ಬೇಡದ ಬರಗಾಲದಲ್ಲಿ ಹುಸಿ ಮಳೆಯ ಬಿಂಬ.
ಕಟ್ಟಡದೊಳಗೆ ಧೂಳಿನ ತೊಗಲ ಹೊದ್ದ ಗೋಡೆಯ ಮೇಲೆ ಪ್ರೇಮ ಸ್ಖಾಲಿತ್ಯ.
ಬದುಕಿಗೂ ಬಣ್ಣ ಬರುವ ಹೊತ್ತು ಮುಸ್ಸಂಜೆಗೂ ಮುಪ್ಪಿನ ಚಿಂತೆ!
ಬೆಳಕು ಸತ್ತರೆ ಕತ್ತಲೆಗ್ಯಾರು ಗತಿ?

ಗಂಟೆ ಗಡಿಯಾರದಿಂದ ಕೆಳಗಿಳಿಯಲು,
ಎದೆ ಬಡಿತದಲ್ಲೂ ಬೇನೆಯ ಬೇವಿನ ಮರ ಹುಟ್ಟಿತು.
ಕಾಡಿಯ ಬಳಿದುಕೊಂಡ ಕಿಟಕಿಯ ಗಾಜು ಕೂಡ ಗಾಯಗೊಂಡಿದೆ.
ಸವೆದ ಸಮಯದ ಪಾದ ಚಪ್ಪಲಿ ಕಳಿಯುವಷ್ಟರಲ್ಲಿ ಗಡಿಯಾರ ಬಿದ್ದಿದೆ.
ಮತ್ತವಳು ಬದುಕು ಕೂಡ !

 

ಚಾಂದ್ ಪಾಷ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು.
ಪ್ರಸ್ತುತ ಬೆಂಗಳೂರು ವಾಸಿ.
ಬೆಂಗಳೂರು ವಿ ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ ಎ ಮುಗಿಸಿದ್ದು,
ಸದ್ಯ ದಿ ಆಕ್ಸ್ಫರ್ಡ್ ಕಾಲೇಜ್ ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಮೌನದ ಮಳೆ” ಇವರ ಚೊಚ್ಚಲ ಕವನ ಸಂಕಲನ.

 

About The Author

ಚಾಂದ್ ಪಾಷ ಎನ್. ಎಸ್.

ಚಾಂದ್ ಪಾಷ ಮೂಲತಃ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು. ಸಧ್ಯ ಬೆಂಗಳೂರು ವಾಸಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು,  ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. "ಮೌನದ ಮಳೆ", "ಚಿತ್ರ ಚಿಗುರುವ ಹೊತ್ತು" ಮತ್ತು "ಒದ್ದೆಗಣ್ಣಿನ ದೀಪ" ಇವರ ಪ್ರಕಟಿತ ಕವನ ಸಂಕಲನಗಳು

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ