Advertisement
ಚೈತ್ರಾ ಶಿವಯೋಗಿಮಠ ಅನುವಾದಿಸಿದ ಎಡ್ನಾ ವಿನ್ಸನ್ಟ್ ಮಿಲ್ಲಾಯ್ ಕವಿತೆಗಳು

ಚೈತ್ರಾ ಶಿವಯೋಗಿಮಠ ಅನುವಾದಿಸಿದ ಎಡ್ನಾ ವಿನ್ಸನ್ಟ್ ಮಿಲ್ಲಾಯ್ ಕವಿತೆಗಳು

ವಿನ್ಸನ್ಟ್ ಮಿಲ್ಲಾಯ್ (1892-1950)
ದಿಟ್ಟ ಮತ್ತು ಅದ್ಭುತ ಕಲ್ಪನಾಶೀಲ ಅಮೆರಿಕಾದ ಕವಿ ಮತ್ತು ನಾಟಕಕಾರ್ತಿ. ಹುರುಪು ತುಂಬಿದ ಕಾಣ್ಕೆ, ಕಾವ್ಯದ ಮುಕ್ತ, ಸಿಡುಕಿನ ಧ್ವನಿ ಮತ್ತು ಅವಳ ಸಾಮಾಜಿಕ, ರಾಜಕೀಯ ನಿಲುವುಗಳಿಂದಾಗಿ ಯುವಜನತೆಯ ಆದರ್ಶವಾಗಿದ್ದಳು.

‘ಋತುಸಾರ್ವಭೌಮ’

ಅದ್ಯಾವ ದೊಡ್ಡ ಘನಂದಾರಿಗಾಗಿ
ಮತ್ತೆ ಮತ್ತೆ ಬರುವಿ ನೀ ಚೈತ್ರವೇ?
ಚೆಲುವಷ್ಟೇ ಸಾಕೆ?

ಇನ್ನೂ ಹಗೂರ
ಬಾಯ್ದೆರೆಯುವ ನಿನ್ನ
ಚಿಗುರೆಲೆಗಳ ಕೆಂಪಿನ ಕಂಪಿನಿಂದ
ನನ್ನ ಮುದಗೊಳಿಸಲಾರೆ

ಈಗ ತಿಳಿಯ
ಬೇಕಾದ್ದೆಲ್ಲವೂ ತಿಳಿದಿದೆ ನನಗೆ
ನೋಡ ನೋಡುತ್ತಲೇ
ಬಿಸಿಲು ಕುಕ್ಕುವುದು ಕೊರಳ ಇಳಿಜಾರನ್ನು

ಅದೇನೋ ಹಿತ
ಕ್ರೋಕಸ್ ಇರಿತ ಮಣ್ಣಿನ ಮೃದ್ಗಂಧ
ಸಾವೇ ಇಲ್ಲವೇನೋ ಎನಿಸುವುದು
ಇದಕ್ಕೆಲ್ಲಾ ಏನಿದೆ ಅರ್ಥ?

ಪಾತಾಳಕ್ಕಿಳಿದ ಮೆದುಳು
ಗೆದ್ದಲು ಹಿಡಿದಿರುವುದಷ್ಟೇ ಅಲ್ಲ
ಈ ಬದುಕೇ ಬಯಲಾಗದ ಶೂನ್ಯ
ಖಾಲಿ ಕಪ್ಪು
ರತ್ನಗಂಬಳಿಯಿಲ್ಲದ ಮೆಟ್ಟಿಲು!

ಓ… ಕುಸುಮಾಕರ

ವರುಷಕ್ಕೊಮ್ಮೆ ಸುಮ್ಮನೆ
ಎಬರೇಶಿಯಂಗ ಹೂವುಗಳನ್ನು ಎರಚುತ್ತಾ
ಪೆದ್ದು ಪೆದ್ದಾಗಿ ಅರಚುತ್ತಾ ಬರುವುದಲ್ಲ!

***

‘ಭವದ ಬೂದಿ’

ಪ್ರೀತಿ ಈಗ ಇಲ್ಲವಾಗಿದೆ
ಎಲ್ಲ ದಿನಮಾನಗಳೂ
ಒಂದೇ ಈಗ
ಉಣಬೇಕು ಉಣ್ಣುವೆ
ಮತ್ತೆ ಮಲಗುವೆ
ಈ ಬಿಕನಾಸಿ ಕಾರಿರುಳು ಬೇಗ ಬರಬಾರದೇ

ಒಹ್!
ನಿಧ ನಿಧಾನವಾಗಿ
ಕೈ ಸವರುವ ಗಡಿಯಾರದ
ಟಿಕ್ ಟಿಕ್ ಕೇಳುತ್ತ
ಸುಮ್ಮನೆ ಕಣ್ಣು ತೆರೆದೇ ಮಲಗಬೇಕು
ಮುಂಬೆಳಕು ಸರಿದು ಮತ್ತೆ ಬೆಳಗಾಗಬಾರದೇ

ಪ್ರೀತಿ ಈಗ ಇಲ್ಲವಾಗಿದೆ
ಅದು ಇದು ಯಾವುದೂ
ಎಲ್ಲವೂ ಈಗ ಒಂದೇ
ಶುರುವಾಗುವ ಮೊದಲೇ
ಎಲ್ಲವನ್ನೂ ಮುಗಿಸಿಬಿಡುವೆ
ಈಗೀಗ ಬದುಕಿನಲ್ಲಿ ಯಾವುದಕ್ಕೂ ಅರ್ಥವಿಲ್ಲ

ಪ್ರೀತಿ ಈಗ ಇಲ್ಲವಾಗಿದೆ
ಕಾಮಾಲೆಗಣ್ಣಿನ ನೆರೆ ಹೊರೆ
ಬಂದು ಬಂದು ಇಣುಕಿ ಹೋಗುವುದು
ಸುಮ್ಮನೆ ಕಟಕಟ ಕಟಕಟ
ಕಡಿಯುವ ಸೊಂಡಿಲಿಯ ಹಾಗೆ
ಬದುಕು ನಡಿಯುವುದು ಕಡಿಯುವುದು

ನಾಳೆ
ನಾಡಿದ್ದು
ಆಚೆ ನಾಡಿದ್ದು
ಈ ರಸ್ತೆ ಈ ಮನೆ
ಹೀಗೇ ನಿಲ್ಲುವವು ಅಲುಗದೆ

ಈಗ ಪ್ರೀತಿ ನನ್ನನ್ನು
ತೊರೆದು ಹೊರಟು ಹೋಗಿದೆ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ ಸಂದಿದೆ).
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. G S Kumar

    Wonderful translation with a desi touch. Even the selection of poems is excellent. Congrats

    Reply
  2. ಚೈತ್ರ

    ವರುಷಕ್ಕೊಮ್ಮೆ ಸುಮ್ಮನೆ
    ಎಬರೇಶಿಯಂಗ ಹೂವುಗಳನ್ನು ಎರಚುತ್ತಾ
    ಪೆದ್ದು ಪೆದ್ದಾಗಿ ಅರಚುತ್ತಾ ಬರುವುದಲ್ಲ!

    ಎಂಥ ಸುಂದರ ಸಾಲುಗಳು! ಥ್ಯಾಂಕ್ಸ್!‌
    ಎರಡನೆಯ ಪದ್ಯ ಕೂಡ ತುಂಬ ಚೆನ್ನಾಗಿದೆ! ಓದಿದ ಮೇಲೆ ಅರ್ಥಗರ್ಭಿತ ನಿರಾಳವೊಂದು ಆವರಿಸಿಕೊಳ್ಳುತ್ತದೆ. ಪ್ರೀತಿ ಈಗ ಇಲ್ಲವಾಗಿದೆ ಎನ್ನುವುದನ್ನ ಇಷ್ಟು ಚೆನ್ನಾಗಿ ಯಾರೂ ಹೇಳಿರಲಾರರು! ಥ್ಯಾಂಕ್ಸ್!‌ ಥ್ಯಾಂಕ್ಸ್!‌

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ