Advertisement
“ಜೀವಾಮೃತ” ಘಳಿಗೆ ಬಂದೇಬಿಟ್ಟಿತು…

“ಜೀವಾಮೃತ” ಘಳಿಗೆ ಬಂದೇಬಿಟ್ಟಿತು…

ಶಂಭುಲಿಂಗ ಮಾವನ ಮನೆಯಲ್ಲಿ ಎರಡು ಹಸುಗಳಿದ್ದವು; ಆದರೆ ಅವು ನಾಟಿ ಆಗಿರಲಿಲ್ಲ. ಹೀಗಾಗಿ ನಾಟಿ ಹಸುಗಳ ಹುಡುಕಾಟ ಶುರು ಆಯ್ತು. ಮಲೆನಾಡು ಗಿಡ್ಡ ಎಂಬ ತಳಿ ಅಲ್ಲಿನ ನಾಟಿ ಹಸು. ಹಳ್ಳಿಯಲ್ಲಿ ಎಲ್ಲೋ ಒಂದು ಕಡೆ ಸಿಕ್ಕೆ ಸಿಗುತ್ತದೆ ಅಂದುಕೊಂಡಿದ್ದ ನನಗೆ ಹುಡುಕಿದ ಕಡೆಯೆಲ್ಲ ಅವುಗಳನ್ನು ಕಾಣದೆ ಭ್ರಮನಿರಸನವಾಯ್ತು. ವಿಚಿತ್ರ ಅಂದರೆ ಈಗ ಬೆಂಗಳೂರಿನಲ್ಲೇ ಬೇಕಾದಷ್ಟು ನಾಟಿ ಹಸುಗಳ ಹಾಲಿನ ಡೈರಿಗಳು ಇವೆ, ಆದರೆ ಹಳ್ಳಿಯಲ್ಲಿ ತುಂಬಾ ಅಪರೂಪ. ಇದೊಂದು ದುರಂತ ಅಂತ ನನಗೆ ಅನಿಸಿತು.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ

ಶಂಭುಲಿಂಗ ಮಾವನಿಗೆ ಜೀವಾಮೃತದ ಬಗ್ಗೆ ಹೇಳಿದ ಕೂಡಲೇ ಅವರು ಕಾರ್ಯಪ್ರವೃತ್ತರಾದರು. ಅದನ್ನು ತಯಾರಿಸಲು ಬರೋಬ್ಬರಿ ೫ ಕೆಜಿ ಸಗಣಿ ಹಾಗೂ ೫ ಲೀಟರ್ ಗೋಮೂತ್ರ ಬೇಕಿತ್ತು. ಅದೂ ನಾಟಿ ಹಸುವಿನದು. ಯಾಕೆಂದರೆ ಅದರ ಸಗಣಿಯಲ್ಲಿ ಇರುವಷ್ಟು ಜೀವಾಣುಗಳು ಬೇರೆ ಹಸು (ಜರ್ಸಿ/ HF) ವಿನಲ್ಲಿ ಇರುವುದಿಲ್ಲ. ಜೀವಾಮೃತ ಅಂದರೆ ಕೋಟಿಗಟ್ಟಲೆ ವಿವಿಧ ಬಗೆಯ ಜೀವಾಣುಗಳ ಸಮುಚ್ಚಯ ತಾನೇ. ಅದಕ್ಕೆ ಇರಬೇಕು, ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆ ಅಂತ ಸಾಂಕೇತಿಕವಾಗಿ ನಮ್ಮ ಹಿರಿಯರು ಹೇಳಿದ್ದು. ಅವರು ಹೇಳಿದ್ದನ್ನು ಅರ್ಥೈಸಿಕೊಳ್ಳದ ಈಗಿನ ಕೆಮಿಕಲ್ ಯುಗದ ನಾವು, ನಾಟಿ ಹಸುಗಳನ್ನು ಬಿಟ್ಟು ಹೆಚ್ಚು ಹಾಲು ಕೊಡುವ ಬೇರೆ ಹಸುಗಳ ಸಹವಾಸ ಮಾಡಿ ಭೂಮಿಗೆ ಹಾಗೂ ನಮ್ಮ ಹೊಟ್ಟೆಗೆ ಸೇರಬೇಕಿದ್ದ ಸತ್ವ ಇಲ್ಲದೆ ಎಲ್ಲವೂ ರೋಗರುಜಿನುಗಳ ಆಗರವಾಗಿರುವುದು.

ಶಂಭುಲಿಂಗ ಮಾವನ ಮನೆಯಲ್ಲಿ ಎರಡು ಹಸುಗಳಿದ್ದವು; ಆದರೆ ಅವು ನಾಟಿ ಆಗಿರಲಿಲ್ಲ. ಹೀಗಾಗಿ ನಾಟಿ ಹಸುಗಳ ಹುಡುಕಾಟ ಶುರು ಆಯ್ತು. ಮಲೆನಾಡು ಗಿಡ್ಡ ಎಂಬ ತಳಿ ಅಲ್ಲಿನ ನಾಟಿ ಹಸು. ಹಳ್ಳಿಯಲ್ಲಿ ಎಲ್ಲೋ ಒಂದು ಕಡೆ ಸಿಕ್ಕೆ ಸಿಗುತ್ತದೆ ಅಂದುಕೊಂಡಿದ್ದ ನನಗೆ ಹುಡುಕಿದ ಕಡೆಯೆಲ್ಲ ಅವುಗಳನ್ನು ಕಾಣದೆ ಭ್ರಮನಿರಸನವಾಯ್ತು. ವಿಚಿತ್ರ ಅಂದರೆ ಈಗ ಬೆಂಗಳೂರಿನಲ್ಲೇ ಬೇಕಾದಷ್ಟು ನಾಟಿ ಹಸುಗಳ ಹಾಲಿನ ಡೈರಿಗಳು ಇವೆ, ಆದರೆ ಹಳ್ಳಿಯಲ್ಲಿ ತುಂಬಾ ಅಪರೂಪ. ಇದೊಂದು ದುರಂತ ಅಂತ ನನಗೆ ಅನಿಸಿತು.

ಮಾವನ ತೋಟದ ಎದುರಿಗಿನ ರಸ್ತೆಯ ಅಂಚಿಗೆ ಒಬ್ಬ ಕ್ಷೌರಿಕ ಇದ್ದ. ಆ ಊರಿನ ಏಕೈಕ ಕ್ಷೌರಿಕ ಅಂತಲೋ ಏನೋ ಅವನಿಗೆ ತುಂಬಾ ಡಿಮ್ಯಾಂಡ್ ಇತ್ತು. ಹೀಗಾಗಿ ಚೆನ್ನಾಗಿ ದುಡ್ಡು ಗಳಿಸುತ್ತಿದ್ದ ಕೂಡ. ಆದರೆ ಗಳಿಸಿದ ಹೆಚ್ಚು ಕಡಿಮೆ ಅಷ್ಟೂ ಹಣ ಎಣ್ಣೆ ಅಂಗಡಿಗೆ ಸಮರ್ಪಿಸುತ್ತಿದ್ದ. ಯಾವಾಗ ಅವನ ಬಳಿ ಕ್ಷೌರಕ್ಕೆ ಹೋದರು ಕೂಡ ಎಣ್ಣೆಯ ಗಬ್ಬು ನಾತವೆ. “ಕೇಶಕ್ಷಾಮಿ”ಯಾದ ನಾನು ಅವನ ಕತ್ತರಿಗೆ ತಲೆ ಕೊಡುವ ಸಂದರ್ಭ ಬಂದಿರಲಿಲ್ಲವಾದರೂ ಅವನು ಎಣ್ಣೆಯ ದೊಡ್ಡ ಬ್ಯಾರಲ್ಲು ಎಂಬ ಸಂಗತಿಯನ್ನು ನಮಗೆ ಮಾವನೆ ಹೇಳಿದ್ದರು.

“ಅವಂಗೆ ಹೇಳಿ ಹೇಳಿ ಸಾಕಾತು ಮಾರಾಯ. ದುಡಿದಿದ್ದೆಲ್ಲ ಎಣ್ಣೆಗೇ ಸುರೀತಾ. ಹೆಂಡ್ತಿ ಮಕ್ಕಳಿಗೂ ಕೊಡ್ತ್ನಿಲ್ಲೆ. ಅವುಗಳ ಗತಿ ಎಂತದೋ ದೇವರಿಗೆ ಗೊತ್ತು” ಅಂತಿದ್ರು. ಅವನ ಮನೆಯಲ್ಲಿ ಒಂದು ನಾಟಿ ಹಸು ಇರುವುದು ಮಾವನಿಗೆ ಗೊತ್ತಿತ್ತು. ಅವತ್ತು ಸಂಜೆ ಕತ್ರಿಯಿಂದ ವಾಪಸ್ಸು ಬರುವಾಗ ಅವನ ಹೆಂಡತಿಗೆ “ಇವಕ್ಕೆ ಒಂದಿಷ್ಟು ಸಗಣಿ, ಗೋಮೂತ್ರ ಬೇಕಡ, ಹಿಡಿದು ಇಡು ಆಯ್ತಾ?” ಅಂತ ಹೇಳಿದರು. ಅವರು ನಮ್ಮನ್ನು ಯಾವುದೋ ಲೋಕದ ವಿಚಿತ್ರ ಪ್ರಾಣಿಗಳೇನೋ ಎಂಬಂತೆ ನೋಡುತ್ತಿದ್ದರು. ಅಲ್ವೇ ಮತ್ತೆ? ಹಸುಗಳು ಇರೋದು ಹಾಲು ಕೊಡಲು… ಸಗಣಿ ತೊಗೊಂಡು ಏನಪ್ಪಾ ಮಾಡ್ತಾರೆ ಎಂಬಂತಹ ಆಶ್ಚರ್ಯ ಅವರ ಮುಖದಲ್ಲಿತ್ತು.

ಆಮೇಲೆ ಕೆಲ ದಿನಗಳ ಬಳಿಕ ಎರಡು ಮೂರು ಸಲ ಕೇಳಿದರೂ ಅವರಿಂದ ಅವೆರಡು ಸಿಗುವ ಲಕ್ಷಣ ತೋರಲಿಲ್ಲ. ಸಗಣಿಯನ್ನು ಹೇಗೋ ಹಿಡಿದು ಕೊಡಬಹುದು ಆದರೆ ಗೋಮೂತ್ರ ಬೇಕು ಅಂದರೆ ಹಸುಗಳು ಮೂತ್ರಿಸುವಾಗ ಸಂಗ್ರಹಿಸಬೇಕು. ಅದು ಅಷ್ಟು ಸುಲಭವಲ್ಲ. ಹೀಗಾಗಿ ಗೋಮೂತ್ರ ಹಿಡಿದು ಕೊಡಿ ಅಂತ ಕೇಳಿದರೆ ಒಂದು ರೀತಿಯಲ್ಲಿ ನಾವು ಬೇರೆಯವರಿಗೆ ಕಷ್ಟ ಕೊಟ್ಟಂತೆಯೇ ಸರಿ. ಆದರೂ ನಮ್ಮ ಹುಡುಕಾಟ ಮುಂದುವರಿದಿತ್ತು. ಜೊತೆಗೆ ಹುಡುಗಾಟ ಕೂಡ!

ಅಷ್ಟರೊಳಗೆ ನಮ್ಮ ಹೊಲದಲ್ಲಿ ಒಂದು ಟೆಂಟ್ ಇದ್ದರೆ ಚಂದ ಅನಿಸಿತು. ಅಲ್ಲಿಗೆ ಹೋದಾಗ ಕೂಡಲು ಒಂದು ಜಾಗ ಬೇಕಿತ್ತು. ಅದೂ ಅಲ್ಲದೆ ಜೀವಾಮೃತದ ಡ್ರಮ್ಮು ಇಡಲೂ ನೆರಳು ಬೇಕಿತ್ತು.

“ನಾವೇ ಮಾಡೋಣ ಬಿಡಿ ಸರ್..” ಎಂಬ ನಾಗಣ್ಣನ ಉಮೇದಿಗೆ ಸೋತು ಓಕೆ ಅಂದೆ. ಒಂದಿಷ್ಟು ಕಟ್ಟಿಗೆಯ ಗಳಗಳನ್ನು ತಂದು, ಮೊಳೆ ಹೊಡೆದು, ಹಗ್ಗ ಕಟ್ಟಿ ಏನೋ ದೊಂಬರಾಟ ಮಾಡಿ ಒಂದು ಚಪ್ಪರ ತಯಾರಾಯ್ತಾದರೂ ಯಾವಾಗ ಬೀಳುತ್ತದೋ ಎಂಬಂತೆ ಇತ್ತು. ಜೀವನದಲ್ಲಿ ಮೊತ್ತ ಮೊದಲ ಸಾರಿ ಟೆಂಟ್ ನಿರ್ಮಿಸಿದ್ದ ನಾವು ಅದರಲ್ಲಿ ಹಲವಾರು ತಪ್ಪುಗಳನ್ನು ಮಾಡಿದ್ದೆವು. ಟೆಂಟ್‌ನ ಎತ್ತರ ಜಾಸ್ತಿ ಆಗಿತ್ತು. ತನ್ನ ಗುರುವಿಗೆ ಅಲ್ಲಿ ಯೋಗಾಸನ ಮಾಡಲು ಅನುವು ಮಾಡಿಕೊಡಬೇಕು ಅಂತ ಟೆಂಟ್ ಅನ್ನು ನಾಗಣ್ಣ ಸ್ವಲ್ಪ ಎತ್ತರಕ್ಕೆ ಮಾಡಿದ್ದರು. ಹೀಗಾಗಿ ಜೋರಾದ ಗಾಳಿ ಬೀಸುವಾಗಲೆಲ್ಲ ಅದು ಅಲುಗಾಡುತ್ತಿತ್ತು. ಮಳೆಯ ನೀರು ಬಿದ್ದಾಗ ಸಲೀಸಾಗಿ ಹರಿದು ಹೋಗುವಂತೆ ಮಾಡಿದ್ದ ಚಪ್ಪರದ ಇಳಿಜಾರು ಸರಿಯಾಗಿರಲಿಲ್ಲ. ಹೀಗಾಗಿ ಮಳೆಯಾದಾಗಲೆಲ್ಲ ಆ ಪ್ಲಾಸ್ಟಿಕ್ ಹಾಳೆಯ ಮೇಲೆ ನೀರು ನಿಲ್ಲುತ್ತಿತ್ತು. ಆ ನೀರನ್ನು ಕೋಲಿನಿಂದ ಎತ್ತಿ ಹೊರ ಚೆಲ್ಲಬೇಕಿತ್ತು. ಇಲ್ಲದಿದ್ದರೆ ಅದರ ಭಾರಕ್ಕೆ ಚಪ್ಪರವೇ ಕುಸಿದು ಬೀಳಬಹುದಿತ್ತು. ಸುತ್ತಲೂ ಇದ್ದ ಕೆಲವರು ನಾವು ಟೆಂಟ್ ಮಾಡುವಾಗೆಲ್ಲ ಬಂದು, ಹಾಗೆ ಮಾಡಿ, ಹೀಗೆ ಮಾಡಬೇಡಿ ಅಂತೆಲ್ಲ ಸಲಹೆ ಕೊಟ್ಟಿದ್ದರೂ ನಾವು ಕಿವಿಗೆ ಹಾಕಿಕೊಂಡಿರಲಿಲ್ಲ. ನಮ್ಮ ಹಿಂದಿನ ಕೆಟ್ಟ ಅನುಭವಗಳಿಂದ, ಹಳ್ಳಿಗರ ಯಾವುದೇ ಮಾತನ್ನೂ ನಾವು ಕೇಳಕೂಡದು ಅಂತ ಅಂದುಕೊಂಡಿದ್ದು ನಮ್ಮ ತಪ್ಪಾಗಿತ್ತು. ಬೆಳೆ ತೆಗೆಯುವ ವಿಷಯದಲ್ಲಿ, ಬೆಳೆಗಳಿಗೆ ಕೀಟನಾಶಕ ಬಳಸುವ ವಿಷಯದಲ್ಲಿ ತುಂಬಾ ತಪ್ಪುಗಳನ್ನು ಅವರು ಮಾಡುತ್ತಿರಬಹುದು, ಆದರೆ ಅಲ್ಲಿನ ಕೆಲವು ಸ್ಥಳೀಯ ವಿಷಯಗಳು ಅವರಿಗೇ ಹೆಚ್ಚು ಗೊತ್ತಿರುತ್ತವೆ. ಅವುಗಳಲ್ಲಿ ಎಲ್ಲವನ್ನೂ ಉಪೇಕ್ಷಿಸಬಾರದು. ಕೆಲವಾದರೂ ಕೇಳಬೇಕು ಎಂಬುದು ಆಗ ನಾನು ಕಲಿತ ಪಾಠ.

“ಕೇಶಕ್ಷಾಮಿ”ಯಾದ ನಾನು ಅವನ ಕತ್ತರಿಗೆ ತಲೆ ಕೊಡುವ ಸಂದರ್ಭ ಬಂದಿರಲಿಲ್ಲವಾದರೂ ಅವನು ಎಣ್ಣೆಯ ದೊಡ್ಡ ಬ್ಯಾರಲ್ಲು ಎಂಬ ಸಂಗತಿಯನ್ನು ನಮಗೆ ಮಾವನೆ ಹೇಳಿದ್ದರು.

ಸಧ್ಯಕ್ಕೆ ಹೊಲದಲ್ಲಿ ಒಂದು ಸೂರು ಸಿಕ್ಕಿತ್ತು. ಅದರೊಳಗೆ ಜೀವಾಮೃತ ತುಂಬಿದ ಪ್ಲಾಸ್ಟಿಕ್ ಡ್ರಮ್ ಹಾಗೂ ಇತರ ಕೆಲವು ಸರಂಜಾಮುಗಳನ್ನು ಇಟ್ಟುಕೊಳ್ಳಬಹುದು ಅಂತಾಯ್ತು. ಹೊಸದಾಗಿ ತಯಾರಾದ ಟೆಂಟ್ ಮುಂದೆ ನಿಂತು ಇಡೀ ಹೊಲವನ್ನೊಮ್ಮೆ ಸಿಂಹಾವಲೋಕನ ಮಾಡಿದೆ. ನಾಲ್ಕು ಎಕರೆಯಲ್ಲಿ ಏನೇನು ಮಾಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿರಲಿಲ್ಲ. ಹಲವು ಬಗೆಯ ಗಿಡ-ಮರಗಳು ತಲೆಯಲ್ಲಿದ್ದರೂ ಕರಾರುವಕ್ಕಾಗಿ ಇದನ್ನೇ ಮಾಡುವುದು ಎಂಬ ನಿರ್ಧಾರ ನಾನಿನ್ನೂ ಮಾಡಿರಲಿಲ್ಲ. ನೈಸರ್ಗಿಕವಾಗಿ, ಯಾವುದೇ ಹೊರಗಿನ ಗೊಬ್ಬರ ಬಳಸದೆ ಹೇಗೆ ಬೆಳೆಯುವುದು ಅಂತ ಪ್ರಯೋಗ ಮಾಡಿ ತಿಳಿಯುವುದು ನನ್ನ ಮೊದಲ ಆದ್ಯತೆಯಾಗಿತ್ತು. ಅದಕ್ಕಾಗಿ ಹೊಲದ ಮೂಲೆಯಲ್ಲಿದ್ದ ಸಣ್ಣ ಜಾಗವೊಂದನ್ನು ಆರಿಸಿಕೊಂಡೆ. ಅದೊಂದು ಹತ್ತು ಗುಂಟೆ ಇರಬಹುದು. ಒಂದು ಎಕರೆಗೆ ನಲವತ್ತು ಗುಂಟೆ (೪೪೦೦೦ ಚದುರ ಅಡಿ) ಇರುತ್ತದೆ. ಹೀಗಾಗಿ ನಾನು ಆರಿಸಿಕೊಂಡಿದ್ದು ಹೆಚ್ಚು ಕಡಿಮೆ ಕಾಲು ಎಕರೆ. ನಾನು ಮಾಡುವ ಅಷ್ಟು ತಪ್ಪುಗಳನ್ನು ಅಷ್ಟೇ ಜಾಗಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೆ. ತುಂಬಾ ಹೊಸದಾಗಿ ಮಾಡುವ ನಮ್ಮಂತಹ ರೈತಾನಂದರು ಏನಾದರೂ ಮಾಡುವಾಗ ಪೂರ್ತಿ ಹೊಲದಲ್ಲೆ ಮಾಡುತ್ತಾರೆ. ಸಿಕ್ಕಾಪಟ್ಟೆ ದುಡ್ಡು ಸುರಿಯುತ್ತಾರೆ, ಆಮೇಲೆ ಏನಾದರೂ ತಪ್ಪುಗಳಾದರೆ ಹಾಕಿದ ಅಷ್ಟೂ ದುಡ್ಡು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂಗೆ! ಇಂತಹ ಎಷ್ಟೋ ಕತೆಗಳನ್ನು ಕೇಳಿದ್ದೆ. ಹೀಗಾಗಿ ನಾನು ಹುಷಾರಾಗಿದ್ದೆ!

“ಸರ್ ಇಲ್ಲಿ ಯಾವ ಗಿಡ ಹಾಕೋಣ ಹೇಳಿ…” ನಾಗಣ್ಣ ಕೇಳಿದರು. ಅವರು ಒಂಥರಾ, ಕತೆಯಲ್ಲಿ ಬರುವ ಭೂತ ಇದ್ದಂಗೆ. ಒಂದು ಕೆಲಸ ಮುಗಿದ ಕೂಡಲೇ ಗುರುವೇ ಈಗ ಏನು ಕೆಲಸ ಅನ್ನೋರು! ಆಗಷ್ಟೇ ಟೆಂಟ್ ಕೆಲಸ ಮುಗೀತಲ್ಲ ಮುಂದೇನು? ಎಂಬುದು ಅವರ ಪ್ರಶ್ನೆ. ಈಗಾಗಲೇ Software company ಯಲ್ಲಿ ಹಗಲು ರಾತ್ರಿ ಒಂದಾದ ಮೇಲೆ ಒಂದು ಕೆಲಸ ಮಾಡಿ ಒಗ್ಗಿಹೋಗಿದ್ದ ಅವರಿಗೆ ಏನೋ ಒಂದು ಮಾಡುತ್ತಿರಬೇಕು ಅಷ್ಟೇ. ಇಂತಹ ಉತ್ಸಾಹಿ ರೈತ ಬಳಗ ಇದ್ದರೆ ಎಂತಹ ಬರಡು ಭೂಮಿಯನ್ನೂ ಹಸಿರಿನಿಂದ ಕಂಗೊಳಿಸಬಹುದು ಅಲ್ಲವೇ?

“ಇಲ್ಲಿ ಪಂಚತರಂಗಿಣಿ ಪದ್ಧತಿಯಲ್ಲಿ ತೆಂಗಿನ ಮಾದರಿ ಮಾಡೋಣ…” ಅಂದೆ.

“ಇನ್ನೊಮ್ಮೆ ಹೇಳಿ ಸರ್… ಹೇಗೆ ಮಾಡೋದು ಅಂತ.. ನನಗೆ ಮರೆತು ಹೋಯ್ತು“ ಅಗಾಧ ನೆನಪಿನ ಶಕ್ತಿಯುಳ್ಳ ನಾಗಣ್ಣರಿಗೆ ಮತ್ತೆ ಹೇಳಲು ನನಗೇನು ಬೇಜಾರು ಇರಲಿಲ್ಲ ಬಿಡಿ.

ಇದು ೩೬*೩೬ ಅಡಿಯ ಮಾಡೆಲ್. ಅಲ್ಲಿ ತೆಂಗು, ಅಡಿಕೆ ಮುಖ್ಯ ಬೆಳೆಗಳು. ಅವು ಹಲವು ವರ್ಷಗಳ ನಂತರ ಇಳುವರಿ ಕೊಡುತ್ತವೆ. ಅಲ್ಲಿಯವರೆಗೆ ನಮಗೆ ಒಂದು ಆದಾಯ ಬೇಕಲ್ಲ ಅದಕ್ಕೆ ಬಾಳೆಯನ್ನು ಮಧ್ಯದಲ್ಲಿ ಹಾಕ್ತೀವಿ. ಇನ್ನೂ ಮಧ್ಯದಲ್ಲಿ ಸಾರಜನಕ ಸ್ಥಿರೀಕರಣ (Nitrogen fixing) ಮಾಡುವ ಗಿಡಗಳು (ಗೊಬ್ಬರ ಗಿಡ, ಅಗಸೆ, ನುಗ್ಗೆ ಯಾವುದಾದರೂ ಆದೀತು). ಮುಖ್ಯ ಗಿಡಗಳು ಬೆಳೆದು ದೊಡ್ಡದಾಗುವ ತನಕ ಮಧ್ಯದಲ್ಲಿ ತರಕಾರಿ, ಅರಿಶಿಣ, ಶುಂಟಿ ಕೂಡ ಬೆಳೆಯಬಹುದು. ಒಟ್ಟಿನಲ್ಲಿ ಒಂದು ಕಾಡಿನ ತರಹದ ವಾತಾವರಣ ಅಲ್ಲಿ ಸೃಷ್ಟಿಯಾಗಬೇಕು.

ನಾಗಣ್ಣ ಹುರುಪಾದರು. ಮೊಳಕೆ ಬರಿಸಿದ ಒಂದು ವರ್ಷ ವಯಸ್ಸಿನ ಅಡಿಕೆ ಸಸಿಗಳು ಮಾವನ ಹತ್ತಿರ ಇದ್ದವು. ಇತರ ಸಸಿಗಳನ್ನು ಶಿರಸಿಯಿಂದ ತರೋಣ ಅಂತ ಹೇಳಿದೆ.

“ಜೀವಾಮೃತ ಎಲ್ಲಿ ಹಾಕೋದು ಸರ್” ಎಂಬ ತುಂಬಾ ಮುಖ್ಯ ಪ್ರಶ್ನೆ ಕೇಳಿದರು. ಅದನ್ನು ಗಿಡಗಳ ಸುತ್ತಮುತ್ತ ಹಾಕಬೇಕಿತ್ತು. ಶುರುವಿಗೆ ಹದಿನೈದು ದಿನಕ್ಕೊಮ್ಮೆ ಹಾಕಿದರೂ ಸಾಕಿತ್ತು. ಮಣ್ಣಿಗೆ ಹೊದಿಕೆಗೂ ವ್ಯವಸ್ಥೆ ಮಾಡಬೇಕಿತ್ತು. ತುಂಬಾ ಕೆಲಸ ಬಾಕಿ ಇದ್ದವು. ಆದರೆ ಇನ್ನೂ ಸಗಣಿ ಸಿಕ್ಕಿರಲಿಲ್ಲ! ಅದರಿಂದ ನಮ್ಮ ಕೆಲಸಗಳು ನಿಂತಿರಲಿಲ್ಲವಾದರೂ ಅದು ಬೇಕೇ ಬೇಕಿತ್ತು. ಮಾವ ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ನಾಟಿ ಹಸುವಿನ ಸಗಣಿ ಲಭ್ಯತೆಯ ಬಗ್ಗೆ ಊರಿನಲ್ಲಿ ಎಲ್ಲ ಕಡೆ ವಿಚಾರಿಸತೊಡಗಿದ್ದರು.

ಕೊನೆಗೂ ಇವರ ಹಳೆಯ ಪರಿಚಯದ ಒಬ್ಬರ ಬಳಿ ನಾಟಿ ಹಸು ಇವೆ ಅಂತ ಗೊತ್ತಾಗಿ ಅವರಿಗೆ ಫೋನ್ ಮಾಡಿ ಹೇಳಿದರು. ಅವರೂ ಒಂದು ದಿನ ಬನ್ನಿ ಅಂತ ಹೇಳಿ, ಮಾತಿಗೆ ತಪ್ಪದೆ ನಾವು ಕೇಳಿದಷ್ಟು ಸಗಣಿ, ಗೋಮೂತ್ರವನ್ನು ಕೊಟ್ಟರು. ಅದೆಂತಹ ಸಡಗರ.. ಅವತ್ತು ಕಾರಿನಲ್ಲೆಲ್ಲ ಅದರದೆ ಪರಿಮಳ! ಅದನ್ನು ಹೊಲಕ್ಕೆ ತೆಗೆದುಕೊಂಡು ಹೋಗಿ ನಿರ್ದಿಷ್ಟ ಪ್ರಮಾಣದಲ್ಲಿ ಸಗಣಿ, ಗೋಮೂತ್ರ, ಕಡಲೆಹಿಟ್ಟು, ಬೆಲ್ಲ ಹಾಗೂ ಹೊಲದ ಬದುವಿನಲ್ಲಿರುವ ಯಾರೂ ತುಳಿಯದೇ ಇರುವ ಒಂದು ಹಿಡಿ ಮಣ್ಣು ಎಲ್ಲವನ್ನೂ 100 ಲೀಟರ್ ನೀರಿನಲ್ಲಿ ಕಲಿಸಿ ಇಡಬೇಕಿತ್ತು. ಯಾರೂ ತುಳಿದಿರದ ಮಣ್ಣು ಯಾಕೆ ಅಂದರೆ ಅದು ಸ್ಥಳೀಯ ಸೂಕ್ಷ್ಮಾಣುಗಳನ್ನು ಒಳಗೊಂಡಿರುವ ಕಾರಣಕ್ಕೆ. ಈ culture ಇರುವ ಡ್ರಮ್ಮಿನಲ್ಲಿ ಒಂದು ಕೋಲಿನಿಂದ ದಿನಾಲೂ ಒಂದೆರಡು ಸಲ ತಿರುಗಿಸುತ್ತಾ ಇದ್ದರೆ ಒಂದು ವಾರದಲ್ಲಿ ಜೀವಾಣುಗಳು ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಆಗ ಅದು ನಮ್ಮ ಭೂತಾಯಿಯ ಮಡಿಲಿಗೆ ಸಿಂಪಡಿಸಲು ತಯಾರು. ದಿನವೂ ಹೊಲಕ್ಕೆ ಹೋದಾಗಲೊಮ್ಮೆ ಅದನ್ನು ಕೋಲಿನಿಂದ ಪ್ರದಕ್ಷಿಣೆ ದಿಕ್ಕಿನಲ್ಲಿ ತಿರುಗಿಸುತ್ತಿದ್ದೆವು. ಕೊನೆಗೂ ಅದು ತಯಾರಾಗಿತ್ತು. ಅದೊಂದು ಅಪೂರ್ವ ಅಮೃತ ಗಳಿಗೆಯೇ ಸರಿ. ಜೀವಾಮೃತವನ್ನು ಡ್ರಿಪ್ ಮೂಲಕ ಕೂಡ ಸಸ್ಯಗಳಿಗೆ ನೀಡಬಹುದು. ಅದಕ್ಕೂ ಮೊದಲು ಸೋಸಬೇಕು ಅಷ್ಟೇ. ಆದರೂ ಪ್ರತಿ ಬಾರಿ ಹೀಗೆ ಸಗಣಿ ಗೋಮೂತ್ರಕ್ಕೆ ಹುಡುಕಾಟ ಮಾಡುವುದು ತುಸು ಕಷ್ಟದ ಕೆಲಸ ಅನಿಸಿತು. ಜೀವಾಮೃತಕ್ಕೆ ಬೇರೆ ಏನಾದರೂ ಪರ್ಯಾಯ ಇದೆಯೇ ಅಂತಲೂ ಯೋಚಿಸಲು ಶುರು ಮಾಡಿದ್ದೆ…

(ಮುಂದುವರಿಯುವುದು…)
(ಹಿಂದಿನ ಸಂಚಿಕೆಗೆ ಕೊಂಡಿ: https://tinyurl.com/2p93e28m)

About The Author

ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ "ಡ್ರಾಮಾಯಣ" ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ