Advertisement
ಜೈಲಿಗೆ ಹೋಗಲು ಸಕಲ ತಯಾರಿ!: ಕೆ.‌ ಸತ್ಯನಾರಾಯಣ ಸರಣಿ

ಜೈಲಿಗೆ ಹೋಗಲು ಸಕಲ ತಯಾರಿ!: ಕೆ.‌ ಸತ್ಯನಾರಾಯಣ ಸರಣಿ

ನನಗೆ ಒಂದು ಮಾನವೀಯ ಜವಾಬ್ದಾರಿಯೂ ಇದೆ. ಒಮ್ಮೆ ಭೇಟಿ ಮಾಡುವೆ ಎಂದು ಕೋರಿದೆ. ಮೊದಲ ಕೋರಿಕೆಗೇ ಒಪ್ಪಲಿಲ್ಲ. ಇಂತಹ ಕೋರಿಕೆ ಇದುವರೆಗೆ ನಮಗೆ ಬಂದಿಲ್ಲ, ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ವಾದಿಸಿದರು. ಕೊನೆಗೆ ನನ್ನ ವಯಸ್ಸು, ಹಿರಿತನ, ಕಳಕಳಿಪೂರ್ಣ ಮನವಿಗೆ ಕ್ಷೀಣವಾಗೆಂಬಂತೆ ಸ್ಪಂದಿಸುತ್ತಾ, ಸರಿ, ಎರಡು ನಿಮಿಷ ನೋಡಲು ಬಿಡ್ತೀವಿ, ಕೇಸ್‌ ವಿಷಯ ಮಾತನಾಡಕೂಡದು, ನೀವು ಅವರನ್ನು ಭೇಟಿ ಮಾಡುವಾಗ ನಾವು ಕೂಡ ಒಬ್ಬರು ಜೊತೆಗೇ ಇರ‍್ತೀವಿ ಎಂದರು. ಸರಿ ಎನ್ನುತ್ತಾ ಅವರಲ್ಲಿ ಒಬ್ಬರೊಡನೆ ನಾನು ಮೇಡಂ ಕೋಣೆ ಪ್ರವೇಶಿಸಿದೆ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಎರಡನೇ ಬರಹ ನಿಮ್ಮ ಓದಿಗೆ

ಮೇಡಂ ಮೇಟ್‌ಲ್ಯಾಂಡ್‌ರವರು ಯಾರ ಪೈಕಿ, ಯಾವ ಪ್ರಭಾವದ ಪೈಕಿ ಎಂದು ವಿವರಿಸುವುದು ಕಷ್ಟ. ಗೋವಾದ ಕಡೆಯವರಾದ ಇವರ ಬಂಧುಗಳಲ್ಲಿ ಪೋರ್ಚುಗೀಸರು, ರಾಣಾ ಮನೆತನದವರು, ಸಾರಸ್ವತರು, ಮೊಗವೀರರು, ಎಲ್ಲರೂ ಇದ್ದರು. ಜೊತೆಗೆ ಮೇಟ್‌ಲ್ಯಾಂಡ್‌ರವನ್ನು ಒಂದೊಂದು ಕೋನದಿಂದ ನೋಡಿದಾಗ ಒಂದೊಂದು ಜನಾಂಗಕ್ಕೆ ಸೇರಿದವರಂತೆ ಕಾಣುತ್ತಿದ್ದುದು ಕೂಡ ಗೊಂದಲಕ್ಕೆ ಕಾರಣವಾಗುತ್ತಿತ್ತು. ಹಣೆಯ ಎಡಭಾಗದಲ್ಲಿದ್ದ ಹಚ್ಚೆ, ತಲೆಯ ಕೂದಲು ತೆಳ್ಳಗಾಗಿ ಕಂದು ಬಣ್ಣಕ್ಕೆ ತಿರುಗಿರುವುದು ಮಾತ್ರ ಎಲ್ಲರಿಗೂ ಗೊತ್ತಾಗಿ ಒಂದು ಒಪ್ಪುವ ಸಂಗತಿಯಾಗಿತ್ತು. ಮಾತು-ಕತೆಯ ನಡುವೆ ನಾವು ಯಾರಾದರೂ ಗಣ್ಯರ ಹೆಸರನ್ನು ಪ್ರಸ್ತಾಪಿಸಿದರೆ, ಅವರು ನಮ್ಮವರೆಂದು ತಟಕ್ಕನೇ ಹೇಳಿಬಿಡುತ್ತಿದ್ದರು. ಈ ಮೇಡಂಗೆ ಊರೆಲ್ಲ ನೆಂಟರು, ಜಾತಿಯಿಲ್ಲ, ಜನಿವಾರವಿಲ್ಲ ಎಂಬುದೇ ನಮ್ಮೆಲ್ಲರ ಅಂತಿಮ ತೀರ್ಮಾನವಾಗಿತ್ತು.
ಇಪ್ಪತೆಂಟು ವರ್ಷಗಳ ಹಿಂದೆ ಕಾಮರ್ಸ್‌ ಡಿಪ್ಲೊಮಾವನ್ನು ಅಂಚೆಯಲ್ಲಿ ಮಾಡಿಕೊಂಡು, ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿ, ಗೆಜೆಟೆಡ್‌ ಹಂತವನ್ನು ತಲುಪಿದ್ದರು ಮತ್ತು ಸದ್ಯ ನನ್ನ ವಿಭಾಗದಲ್ಲಿ ಕಿರಿಯ ಸಹೋದ್ಯೋಗಿಯಾಗಿದ್ದರು. ಕಛೇರಿಗೆ ಬರುವ ನಾಗರಿಕರಿಗೆಲ್ಲ ನಾನಾ ರೀತಿಯ ಕಿರುಕುಳ ನೀಡುತ್ತಿದ್ದರು. ನಾಗರಿಕರಿಗೆ ಕಾನೂನು ಪ್ರಕಾರವಾಗಿ ಮಾಡಿಕೊಡಲೇಬೇಕಾದ ಕೆಲಸಗಳಿಗಾಗಿ ದುಡ್ಡು ಕೇಳುವುದು, ಕೇಸಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಅದು ಬೇಕು, ಇದು ಬೇಕು ತಗೊಂಬನ್ನಿ ಅಂತ ಹತ್ತಾರು ಸಲ ತಿರುಗಿಸುವುದು, ಹಾಗೆ ದಾಖಲೆ ಪತ್ರಗಳನ್ನು ಸಲ್ಲಿಸಿದ ಮೇಲೂ ಕೆಲಸ ಮಾಡಿಕೊಡಲು ಸತಾಯಿಸುವುದು, ಭಕ್ಷೀಸು ಪಡೆದಾಗ ಊರಿನವರಿಗೆಲ್ಲ ಗೊತ್ತಾಗುವಂತೆ ವದನಾರವಿಂದವನ್ನು ಅರಳಿಸಿ, ಮುಖದಲ್ಲಿ ನಗೆ ಚಲ್ಲುವುದು, ಇವೆಲ್ಲ ಅವರ ನಿರಂತರ ಸಾಮಾನ್ಯ ಕಾರ್ಯತಂತ್ರಗಳಾಗಿದ್ದವು. ಸಾರ್ವಜನಿಕರು ರೇಗಿದರು, ದೂರು ಕೊಟ್ಟರು, ಸಹೋದ್ಯೋಗಿಗಳು ಸಾಮಾಜಿಕ ಬಹಿಷ್ಕಾರ ಹಾಕಿದರು, ಮೂರು ಕಾಸೂ ಪ್ರಯೋಜನವಾಗಲಿಲ್ಲ. ಸದ್ಯ ನಿವೃತ್ತರಾದರೆ ಸಾಕು, ಬೀಳ್ಕೊಡುಗೆ ಸಮಾರಂಭ ಮಾಡಿ ಕೈತೊಳೆದುಕೊಳ್ಳಬಹುದು ಎಂದು ಎಲ್ಲರೂ ದಿನ ಎಣಿಸುತ್ತಿದ್ದೆವು.
ಸಾರ್ವಜನಿಕರಿಂದ ದುಡ್ಡು ಕೇಳಿ, ಹಿಂಸಿಸಿ ಪಡೆಯುತ್ತಿದ್ದರೂ, ಅದರಲ್ಲೂ ಒಂದು ರೀತಿ-ರಿವಾಜು, ಅಂತಸ್ತು-ಮರ್ಯಾದೆ ಯಾವುದನ್ನೂ ಮೇಡಂ ಅನುಸರಿಸುತ್ತಿರಲಿಲ್ಲ. ಜವಾನರು ಕೂಡ ನಾಚಿಕೆ ಪಡುವಷ್ಟು ಸಣ್ಣ ಮೊತ್ತವನ್ನು ಕೇಳುತ್ತಿದ್ದರು. ಕೊಡುವುದಿಲ್ಲ, ಕೊಡಲಾರೆವು ಎಂದವರನ್ನೆಲ್ಲಾ ಜವಾನರ ಮೂಲಕ, ಗುಮಾಸ್ತರ ಮೂಲಕ, ಸ್ಥಳದಲ್ಲೇ ಶೋಧಿಸಿ ಜೇಬಿನೊಳಗೆ ಇದ್ದ ದುಡ್ಡನ್ನೆಲ್ಲಾ ಟೇಬಲ್‌ ಮೇಲಿಡಿಸಿ, ಲೆಕ್ಕ ಹಾಕಿ ಪರ್ಸ್‌ಗೆ ಸೇರಿಸುತ್ತಿದ್ದರು.
ಇದೊಂದು, ಇವರದೊಂದು ಬದಲಾಗದ ಮಾನಸಿಕ ಗೀಳಿನ ಕೇಸು ಎಂದು ನಾವೆಲ್ಲ ಒಪ್ಪಿಕೊಂಡು ಹತಾಶೆಯಿಂದ, ಬೇಸರದಿಂದ ನಿಟ್ಟುಸಿರು ಬಿಡುವುದನ್ನು ಕೂಡ ನಿಲ್ಲಿಸಿಬಿಟ್ಟಿದ್ದೆವು. ಆದರೆ ಇವರ ಜೀವನ ವಿನ್ಯಾಸ ಇದ್ದಕ್ಕಿದ್ದಂತೆ ಒಂದು ದಿನ ಬೇರೆ ಹಾದಿ ಹಿಡಿಯುವಂತೆ ಕಂಡಿತು. ಇದುವರೆಗೆ ಮಾಡಿದ ಎಲ್ಲ ತಪ್ಪು-ಒಪ್ಪುಗಳಿಗೆ, ಪಾಪ-ಪುಣ್ಯಕ್ಕೆ, ಶಿಕ್ಷೆ-ಅಶಿಕ್ಷೆಗೆ ಪ್ರತಿಫಲವೋ ಎಂಬಂತೆ ವಿಶ್ವವಿದ್ಯಾಲಯದ ಒಬ್ಬ ಭೌತಶಾಸ್ತ್ರದ ಪ್ರಾಚಾರ್ಯರ ತೆರಿಗೆ ಪ್ರಕರಣವನ್ನು ಪರಿಶೀಲಿಸುವಾಗ ಆರು ಸಾವಿರ ರೂಪಾಯಿಗಳನ್ನು ಕೇಳಿದರು. ಇದಕ್ಕೆ ಸಂಬಂಧಪಟ್ಟ ಪ್ರಸ್ತಾಪ, ಚೌಕಾಶಿ, ವಾದವಿವಾದ, ಅಂತಿಮ ಮೊತ್ತದ ನಿಗದಿ ಎಲ್ಲವೂ ದೂರವಾಣಿಯ ಮೂಲಕವೇ ನಡೆದುಹೋಯಿತು. ದೂರವಾಣಿಯಲ್ಲಿ ಮೇಡಂ, ಪ್ರಾಚಾರ್ಯರನ್ನು ಅಸಹ್ಯವಾಗಿ ಗದರಿದ್ದರು, ಹೀಯಾಳಿಸಿದ್ದರು. ಇಷ್ಟು ಪ್ರಸಿದ್ಧವಾದ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಚಾರ್ಯರಾಗಿರುವ ನೀವು ತುಂಬಾ ಸತಾಯಿಸುತೀರಿ, ನಿಮ್ಮಷ್ಟು ಚೌಕಾಶಿ ಮಾಡುವವರನ್ನು ನಾನು ಸರ್ವೀಸಿನಲ್ಲೇ ನೋಡಿಲ್ಲ ಎಂದು ಕೀರಲು ಧ್ವನಿಯಲ್ಲಿ ಕೂಗಾಡಿದ್ದರು. ಪ್ರಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರಾದ ಪಟವರ್ಧನರ ಮನೆತನದವರು. ನೀತಿ, ನ್ಯಾಯ, ನಿಯತ್ತು, ದೇಶಪ್ರೇಮ, ಇಂತಹ ಪದಗಳನ್ನು ಯಾವಾಗಲೂ ನಾಲಿಗೆ ತುದಿಯಲ್ಲಿ ಮಾತ್ರವಲ್ಲ, ಮೂಗಿನ ತುದಿಯಲ್ಲೂ ಇಟ್ಟುಕೊಂಡವರು. ನಾಗರಿಕರ ಹಕ್ಕು, ಕರ್ತವ್ಯಗಳ ಬಗ್ಗೆ ಕಾಳಜಿಯುಳ್ಳವರು. ಮೇಡಂ ಮೇಟ್‌ಲ್ಯಾಂಡ್‌ರವರ ಬಗ್ಗೆ ಮಾತ್ರವಲ್ಲ, ಕಮಿಷನರ್‌, ಸೆಕ್ರೆಟರಿಗಳ ಬಗ್ಗೆಯೂ ಮೂಗರ್ಜಿ ಮಾತ್ರವಲ್ಲ, ದಾಖಲೆ ಸಮೇತ ದೂರು ಕೊಡಬಲ್ಲವರು. ಇಂಗ್ಲಿಷ್‌ ಮತ್ತು ಮರಾಠಿ ಎರಡೂ ಭಾಷೆಯ ಮೇಲೆ ಪ್ರಭುತ್ವವುಳ್ಳವರು. ಹಾಗಾಗಿ, ದೆಲ್ಲಿಗೂ ಕೂಡ ಆಗಾಗ್ಗೆ ದೂರು ಸಲ್ಲಿಸುತ್ತಿದ್ದರು. ಇನ್ನು ಮುಂಬೈ, ಪುಣೆ, ಕೊಲ್ಹಾಪುರ, ಇವೆಲ್ಲಾ ಅವರಿಗೆ ಯಾವ ಲೆಕ್ಕಕ್ಕೆ!
ಮೇಡಂ ಮೇಟ್‌ಲ್ಯಾಂಡ್‌ರ ಕೇಸಿನಲ್ಲೂ ಕೇಂದ್ರ ತನಿಖಾ ಮಂಡಳಿಗೆ ದೂರು ಕೊಟ್ಟರು. ದೂರು ಮಾತ್ರವಲ್ಲ, ಮೇಡಂರ ಜೀವನಚರಿತ್ರೆಯನ್ನು ಕೂಡ ಸವಿವರವಾಗಿ ಸಲ್ಲಿಸಿದರು. ತನಿಖಾ ಮಂಡಳಿಯವರಿಗೆ ಇದೊಂದು ಜುಜುಬಿ ಕೇಸು; ಮಂತ್ರಿ ಮಾಗಧರನ್ನು, ಆಯುಕ್ತರನ್ನು, ನಿರ್ದೇಶಕರನ್ನು, ಕುಲಪತಿ, ರಿಜಿಸ್ಟ್ರಾರ್‌ಗಳನ್ನು ಹಿಡಿದು ಶಿಕ್ಷಿಸುವುದಕ್ಕೇ ಅವರ ಮಂಡಳಿಯಲ್ಲಿ ನಿರೀಕ್ಷಕರು, ಅಧೀಕ್ಷಕರು ಇಲ್ಲದೆ ತಡಬಡಾಯಿಸುತ್ತಿದ್ದರು. ಪ್ರಾಚಾರ್ಯರನ್ನು ಕರೆದು ಗೌರವದಿಂದ ಮಾತನಾಡಿಸಿ, ತಲೆ ಸವರಲು ನೋಡಿದರು. ಪ್ರಾಚಾರ್ಯರು ಜಗ್ಗುವರೇ, ಬಗ್ಗುವರೇ? ಮೊಬೈಲ್‌ನಲ್ಲಿ ಮಾತನಾಡಿದ್ದನ್ನೆಲ್ಲ, ಮೇಡಂ ಕಳಿಸಿದ ಸಂದೇಶಗಳನ್ನೆಲ್ಲಾ ಸಾಕ್ಷಿಯಾಗಿ ಒದಗಿಸಿದರು. ಸಂದೇಶಗಳಲ್ಲಿ ಮೇಡಂ ತುಂಬಾ ಚೌಕಾಶಿ ಮಾಡಿದ್ದರು. ವ್ಯವಹಾರ ಕುದುರಿಸಿದ್ದರು. ಆರು ಸಾವಿರ ರೂಪಾಯಿಗಳಿಂದ ತಾವು ಕೊಳ್ಳಬೇಕೆಂದಿದ್ದ ಆರು ಬರ್ನರ್‌ಗಳಿರುವ ಅತ್ಯಾಧುನಿಕ ವಿನ್ಯಾಸದ ಸ್ಟವ್‌ನ ವಿವರ, ಬ್ರಾಂಡಿನ ಹೊಸತನ ಎಲ್ಲವನ್ನೂ ವಿವರವಾಗಿ ಉಲ್ಲೇಖಿಸಿದ್ದರು. ಇದನ್ನು ಕೊಳ್ಳುವ ಅಂಗಡಿಯ ಹೆಸರು ಕೂಡ ಸಂದೇಶವೊಂದರಲ್ಲಿ ಅಡಕವಾಗಿತ್ತು.

ಪ್ರಾಚಾರ್ಯರ ಜುಲುಮೆಯ ಮೇಲೆ ತನಿಖಾ ಮಂಡಳಿಯವರು ಮೇಡಂ ಮೇಟ್‌ಲ್ಯಾಂಡ್‌ರ ಮೇಲೆ ದಾಳಿ, ತನಿಖೆ ನಡೆಸೇಬಿಟ್ಟರು. ಒಮ್ಮೆ ದಾಳಿ, ತನಿಖೆ ಶುರುವಾದರೆ, ಎಲ್ಲ ವಿಧಾನಗಳನ್ನು ಅನುಸರಿಸಲೇಬೇಕು. ಇಡೀ ಮನೆ ಜಾಲಾಡಿದರು, ಗೂಡು, ಗೋಡೆ, ಅಟ್ಟ, ಅಲ್ಮೇರಾಗಳಿಲ್ಲದ್ದದ್ದಲ್ಲೆವನ್ನೂ ತೆಗೆದು ಬಿಸಾಡಿದರು. ಹೇಳಿಕೆ, ಮುಚ್ಚಳಿಕೆಗಳನ್ನು ಬರೆಸಿಕೊಂಡರು. ಬಂಧು-ಬಳಗದವರೆಲ್ಲ ತನಿಖೆಯ ವ್ಯಾಪ್ತಿಯೊಳಗೆ ಬಂದರು.

ದೂರವಾಣಿಯಲ್ಲಿ ಮೇಡಂ, ಪ್ರಾಚಾರ್ಯರನ್ನು ಅಸಹ್ಯವಾಗಿ ಗದರಿದ್ದರು, ಹೀಯಾಳಿಸಿದ್ದರು. ಇಷ್ಟು ಪ್ರಸಿದ್ಧವಾದ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಚಾರ್ಯರಾಗಿರುವ ನೀವು ತುಂಬಾ ಸತಾಯಿಸುತೀರಿ, ನಿಮ್ಮಷ್ಟು ಚೌಕಾಶಿ ಮಾಡುವವರನ್ನು ನಾನು ಸರ್ವೀಸಿನಲ್ಲೇ ನೋಡಿಲ್ಲ ಎಂದು ಕೀರಲು ಧ್ವನಿಯಲ್ಲಿ ಕೂಗಾಡಿದ್ದರು. ಪ್ರಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರಾದ ಪಟವರ್ಧನರ ಮನೆತನದವರು. ನೀತಿ, ನ್ಯಾಯ, ನಿಯತ್ತು, ದೇಶಪ್ರೇಮ, ಇಂತಹ ಪದಗಳನ್ನು ಯಾವಾಗಲೂ ನಾಲಿಗೆ ತುದಿಯಲ್ಲಿ ಮಾತ್ರವಲ್ಲ, ಮೂಗಿನ ತುದಿಯಲ್ಲೂ ಇಟ್ಟುಕೊಂಡವರು.

ಸರಿ, ಕಛೇರಿಗೂ ಬಂದರು. ನಾನು ಮೇಲಧಿಕಾರಿಯಾದ್ದರಿಂದ ನನ್ನ ಅನುಮತಿಯನ್ನು ಪಡೆದು ಮೇಡಂ ಕೋಣೆಯಲ್ಲೇ ಗಂಟೆಗಟ್ಟಲೆ ಪ್ರಶ್ನೋತ್ತರ ನಡೆಸಿದರು. ಪಂಚನಾಮ ತಯಾರಿಸಿದರು. ಇದಕ್ಕೆಲ್ಲ ತುಂಬಾ ಸಮಯ ತೆಗೆದುಕೊಂಡು, ಬೆಳಿಕ್ಕೆ ಏಳು ಘಂಟೆಗೆ ಶುರುವಾದ ದಾಳಿ, ತನಿಖೆ, ನಡುರಾತ್ರಿಯ ತನಕವೂ ಮುಂದುವರೆಯಿತು. ಮೇಡಂರನ್ನು ಬಂಧಿಸುವುದಾಗಿ, ನಾಳೆ ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಪೋಲೀಸ್‌ ಸುಪರ್ದಿಗೆ ಒಪ್ಪಿಸುವುದಾಗಿ ತಿಳಿಸಿದರು. ನಿಮ್ಮ ಕಛೇರಿಯ ಆವರಣದಿಂದಲೇ ಬಂಧಿಸುತ್ತಿರುವುದರಿಂದ, ಸೌಜನ್ಯಕ್ಕಾಗಿ ನಿಮಗೆ ತಿಳಿಸುತ್ತಿದ್ದೇವೆ. ಕಾನೂನು ಪ್ರಕಾರ ತಿಳಿಸುವ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ನನ್ನ ಮೇಲಧಿಕಾರಿಗಳು, ಸ್ನೇಹಿತರು, ಸಹೋದ್ಯೋಗಿಗಳು, ಬಂಧುಮಿತ್ರರನೇಕರು, ಹೀಗೆ ತನಿಖೆ, ಬಂಧನಕ್ಕೆ ಒಳಗಾಗಿರುವುದು ನಿಜವಾದರೂ, ಈಚೆಗೆ ಇದೆಲ್ಲ ಮಾಮೂಲು ಸಂಗತಿಯಾಗಿದ್ದರೂ, ತೀರಾ ಒಬ್ಬ ಹೆಂಗಸನ್ನು ಭ್ರಷ್ಟಾಚಾರದ ಆಪಾದನೆಯ ಮೇಲೆ ಬಂಧಿಸುವುದು, ರಾತ್ರೋರಾತ್ರಿ ಸ್ಟೇಶನ್‌ಗೆ ಕರೆದುಕೊಂಡು ಹೋಗಿ ಲಾಕಪ್‌ನಲ್ಲಿ ಇಟ್ಟುಕೊಂಡು ಮಾರನೇ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ನನಗೆ ಅನುಚಿತವಾಗಿ ಕಂಡಿತು. ಅಪರಾಧಿಯೇ ಆಗಿರಲಿ, ನಿರಪರಾಧಿಯೇ ಆಗಿರಲಿ, ಮೇಟ್‌ಲ್ಯಾಂಡ್‌ ಮೇಡಂ ಒಬ್ಬ ಹೆಂಗಸು. ನನ್ನ ಅಕ್ಕನಿಗಾಗುವಷ್ಟು ವಯಸ್ಸಾಗಿತ್ತು. ಅವರನ್ನು ಕಂಡು ಸಹಾನುಭೂತಿಯನ್ನಾದರೂ ವ್ಯಕ್ತಪಡಿಸುವುದು, ನನ್ನ ಕರ್ತವ್ಯ ಮಾತ್ರವಲ್ಲ, ಸಾಂಸ್ಕೃತಿಕ ಜವಾಬ್ದಾರಿ ಕೂಡ ಅನಿಸಿತು. ತಳಮಳ ಶುರುವಾಯಿತು.
ಸಹೋದ್ಯೋಗಿಗಳೊಡನೆ ಚರ್ಚಿಸಿದೆ. ನನ್ನ ಕಾಳಜಿ, ಸಂಸ್ಕೃತಿ, ಪ್ರೀತಿ ಸೂಕ್ತವಾದದ್ದಾದರೂ, ಉನ್ನತಾಧಿಕಾರಿಯಾಗಿ ಇನ್ನೊಂದು ಸೋದರ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಅಡ್ಡಿ ಮಾಡುವುದು ನ್ಯಾಯವಲ್ಲವೆಂದು, ಹಾಗೆ ಮಾಡಿದರೆ, ನನ್ನ ಮೇಲೂ ಕೂಡ ಅವರಿಗೆ ಅನುಮಾನ ಬರುವುದೆಂದು ಬುದ್ಧಿಮಾತು ಹೇಳಿದರು. ಬುದ್ಧಿಮಾತು ಸರಿಯಾಗಿಯೇ ಇತ್ತು. ಆದರೆ ಮಾನವೀಯತೆ, ಸ್ತ್ರೀಯರ ಬಗ್ಗೆ ಅನುಕಂಪ ಎಂಬ ಒಂದು ಪದಾರ್ಥವೂ ಇರುತ್ತದಲ್ಲ.
ಆಯ್ತು, ನಾನು ಸೋದರ ಇಲಾಖೆಯ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ಬರುವುದಿಲ್ಲ. ಹೋಗಿ ಅಧಿಕಾರಿಯನ್ನು ಭೇಟಿ ಮಾಡುತ್ತೇನೆ. ಮಾನವೀಯ ಅನುಕಂಪ ಮತ್ತು ನೈತಿಕ ಬೆಂಬಲವನ್ನು ಮಾತ್ರ ವ್ಯಕ್ತಪಡಿಸುತ್ತೇನೆ ಎಂದು ಪರಿಪರಿಯಾಗಿ ತಿಳಿಸಿದಾಗಲೂ, ಸಹೋದ್ಯೋಗಿಗಳು ಒಪ್ಪಲಿಲ್ಲ. ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಇನ್ನೊಬ್ಬರ ಮಾತನ್ನು ಕೇಳುವುದು ಯಾವಾಗಲೂ ಸರಿಯಲ್ಲವೆಂದು ಕೆಳಗಿನ ಮಹಡಿಯಲ್ಲಿದ್ದ ಮೇಟ್‌ಲ್ಯಾಂಡ್‌ರವರ ಕೋಣೆಯ ಕಡೆಗೆ ಹೊರಟೆ.
ಕೋಣೆಯ ಮುಂಭಾಗದಲ್ಲಿ ತನಿಖಾ ಸಿಬ್ಬಂದಿ ರಾತ್ರಿಯ ಭೋಜನ ಮಾಡುತ್ತಿದ್ದರು. ಬಿರಿಯಾನಿಯನ್ನು ಕೆಂಪು ಬೇಳೆಯ ತೊವ್ವೆಯಲ್ಲಿ ಕಲಸಿಕೊಂಡು, ಗೋಬಿ ಮಂಚೂರಿ ಜೊತೆ ನೆಂಚಿಕೊಳ್ಳುತ್ತಾ, ಕೋಕಾಕೋಲಾ ಕುಡಿಯುತ್ತಾ ಸ್ವಲ್ಪ ಆತುರಾತುರವಾಗಿಯೇ ಊಟ ಮಾಡುತ್ತಿರುವಂತೆ ಕಂಡಿತು. ಒಬ್ಬರು ಮೊಬೈಲ್‌ನಲ್ಲಿ ಯಾವುದೋ ದೃಶ್ಯವನ್ನು ನೋಡುತ್ತಾ ತಲ್ಲೀನರಾಗಿ ತಮ್ಮ ದೇಹವನ್ನು ಹಿಂದಕ್ಕೆ ಮುಂದಕ್ಕೆ ತೂಗುತ್ತಾ ಜೋಕಾಲಿಯಾಡಿಸುತ್ತಿದ್ದರು. ಆಗಾಗ್ಗೆ ಮುಖದಲ್ಲಿ ನಗೆಯ ಎಳೆ ಹಾದುಹೋಗುತ್ತಿತ್ತು. ಆದರೆ ನನ್ನನ್ನು ನೋಡಿದ ಕೂಡಲೇ ಎಲ್ಲರೂ ಮುಖ ಸಿಂಡರಿಸಿದರು. ಇಡೀ ಭಾರತ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಸಂಗ್ರಹಿಸುವ ನಿಮ್ಮ ಇಲಾಖೆಗೆ ಈಕೆ ಒಂದು ಕಪ್ಪು ಚುಕ್ಕೆ. ಎಲ್ಲರಿಗೂ ಈಕೆಯಿಂದಾಗಿ ಅವಮಾನ. ನಾನಾದರೂ ಅವರ ಮಾತನ್ನು ಹೇಗೆ ಪ್ರತಿಭಟಿಸಲಿ?
ಆಯ್ತು, ನಿಮ್ಮ ಕೆಲಸ ನೀವು ಮಾಡಿ. ಆಕೆ ಸ್ತ್ರೀ ಅಧಿಕಾರಿ. ಹಾಗಾಗಿ, ನನಗೆ ಒಂದು ಮಾನವೀಯ ಜವಾಬ್ದಾರಿಯೂ ಇದೆ. ಒಮ್ಮೆ ಭೇಟಿ ಮಾಡುವೆ ಎಂದು ಕೋರಿದೆ. ಮೊದಲ ಕೋರಿಕೆಗೇ ಒಪ್ಪಲಿಲ್ಲ. ಇಂತಹ ಕೋರಿಕೆ ಇದುವರೆಗೆ ನಮಗೆ ಬಂದಿಲ್ಲ, ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ವಾದಿಸಿದರು. ಕೊನೆಗೆ ನನ್ನ ವಯಸ್ಸು, ಹಿರಿತನ, ಕಳಕಳಿಪೂರ್ಣ ಮನವಿಗೆ ಕ್ಷೀಣವಾಗೆಂಬಂತೆ ಸ್ಪಂದಿಸುತ್ತಾ, ಸರಿ, ಎರಡು ನಿಮಿಷ ನೋಡಲು ಬಿಡ್ತೀವಿ, ಕೇಸ್‌ ವಿಷಯ ಮಾತನಾಡಕೂಡದು, ನೀವು ಅವರನ್ನು ಭೇಟಿ ಮಾಡುವಾಗ ನಾವು ಕೂಡ ಒಬ್ಬರು ಜೊತೆಗೇ ಇರ‍್ತೀವಿ ಎಂದರು.
ಸರಿ ಎನ್ನುತ್ತಾ ಅವರಲ್ಲಿ ಒಬ್ಬರೊಡನೆ ನಾನು ಮೇಡಂ ಕೋಣೆ ಪ್ರವೇಶಿಸಿದೆ. ರಾತ್ರಿಯ ಚಳಿಗೆಂದೋ ಏನೋ ಒಂದು ಶಾಲು ಹೊದ್ದುಕೊಂಡು ಆರಾಮ ಕುರ್ಚಿಯಲ್ಲಿ ಆಸೀನರಾಗಿದ್ದರು. ಎದುರುಗಡೆ ಒಂದು ಬಿಸಲೇರಿ ನೀರಿನ ಬಾಟಲ್‌, ಸಣ್ಣ ಮೇಜಿನ ಮೇಲೆ ಅರ್ಧ ತಿಂದಿದ್ದ ಕುರುಕಲು ತಿಂಡಿ, Robert Ludlum ಕಾದಂಬರಿಯೊಂದನ್ನು ಓದುತ್ತಿದ್ದರು. ಮುಖದಲ್ಲಿ ಯಾವುದೇ ಭಯ, ಆತಂಕ ಕಾಣಲಿಲ್ಲ. ನನಗೇ ಬಾಯಿ ಒಣಗಿತು. ಮಾತು ಹೊರಡಲಿಲ್ಲ. ಸಾವರಿಸಿಕೊಳ್ಳುತ್ತಾ Sorry ಎಂದೆ.
ಇರಲಿ ಬಿಡಿ ಪರವಾಗಿಲ್ಲ. ಇದೆಲ್ಲ ನಿರೀಕ್ಷಿತವೇ ಎಂದರು ಮೇಡಂ.
ಹಾಗಲ್ಲ, ನೀವು ಪಾಪ ರಾತ್ರಿಯೆಲ್ಲಾ ಸ್ಟೇಶನ್‌ನಲ್ಲಿ ಇರಬೇಕು. ಲಾಕಪ್‌ನಲ್ಲಿ ಕಳೆಯಬೇಕು. ಸುಮ್ಮನೆ ಅನಾನುಕೂಲ ಎಂದೆ.
No problem, Sir, ಎಂದು ಎದುರುಗಡೆ ಇದ್ದ ಒಂದು ಬ್ಯಾಗ್‌ ತೋರಿಸಿದರು. ಅದರಲ್ಲಿ ಗಾಳಿದಿಂಬು, ಬೆಡ್‌ಶೀಟ್‌, ಟವೆಲ್‌, ರಾತ್ರಿ ಧರಿಸುವ ನೈಟಿ, ಶೌಚಾಲಯದ ಸಾಮಾನುಗಳ ಕಿಟ್‌, ಇನ್ನೊಂದೆರಡು ಮ್ಯಾಗಜೈನ್‌ಗಳು ಎಲ್ಲ ಇದ್ದವು. ಎಲ್ಲವನ್ನೂ ಯಾರೋ ಚೆನ್ನಾಗಿ ಜೋಡಿಸಿ ಕೊಟ್ಟಿರುವಂತೆ ಕಂಡಿತು.
“ಈ ಫಿಸಿಕ್ಸ್‌ ಪ್ರೊಫೆಸರ್‌ ತುಂಬಾ ಸಣ್ಣ ಮನುಷ್ಯ. ತುಂಬಾ ಚೌಕಾಶಿ ಮಾಡಿದ. ಮಾತನಾಡಿದ್ದನ್ನೆಲ್ಲ ರೆಕಾರ್ಡ್‌ ಮಾಡಿಕೊಂಡಿದ್ದಾನೆ. ಇರಲಿ, ನಾನೇನೂ ಹೆದರೋಲ್ಲ. ವಕೀಲರ ಹತ್ತಿರ ಮಾತನಾಡಿದ್ದೇನೆ. ಪೂನಾದಿಂದ ಒಬ್ಬರು, ಮುಂಬೈನಿಂದ ಒಬ್ಬರು ಬರುತ್ತಿದ್ದಾರೆ. ನಾಳೆ ಬೆಳಿಗ್ಗೇನೇ ಜಾಮೀನು ಕೊಡಿಸ್ತಾರೆ. It is just a matter of few hours. ನಮ್ಮ ಭಾವ ಸ್ಟೇಶನ್‌ ಸಿಬ್ಬಂದಿಯ ಹತ್ತಿರ ಮಾತನಾಡಿದ್ದಾರೆ. ಏನೂ ತೊಂದರೆ ಆಗೋಲ್ಲ.” ಧ್ವನಿಯಲ್ಲಿ ಯಾವುದೇ ಏರಿಳತವಿಲ್ಲದೆ ವಿವರಿಸಿದರು.

ನನಗೇ ಮುಖ ಸಪ್ಪೆಯಾಯಿತು. ನಿಮ್ಮ ಭಾವನೆ, ಕಳಕಳಿಯೆಲ್ಲ ತಪ್ಪು ಅನ್ನುವಂತೆ ನನ್ನ ಜೊತೆ ಬಂದಿದ್ದ ತನಿಖಾಧಿಕಾರಿ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ನನ್ನ ಮುಖ ಸಣ್ಣದಾಗಿ ತಲೆ ತಗ್ಗಿಸಬೇಕಾಯಿತು. ಆದರೆ ಮೇಡಂ ಕೂಲಂಕುಷವಾಗಿ ಮಾಡಿಕೊಂಡಿದ್ದ ಸಕಲ ತಯಾರಿಯಿಂದ ಒಂದು ಸಮಾಧಾನವೂ ಆಯಿತೆನ್ನಿ.

ಮುಂದಿನ ಅರ್ಧ ಘಂಟೆಯಲ್ಲಿ ತನಿಖೆ-ಪ್ರಶ್ನೋತ್ತರ ಮುಗಿದು, ಮೇಡಂದು ಅಧಿಕೃತವಾಗಿ ಬಂಧನ ಆಯ್ತು. ವ್ಯಾನ್‌ನಲ್ಲಿ ಕೂರಿಸಿಕೊಂಡು ಹೊರಟರು. ವ್ಯಾನಿನೊಳಗೆ ಪ್ರವೇಶಿಸುವಾಗ, ಕೂರುವಾಗ ಮೇಡಂ ಸಂಕೋಚದಿಂದ, ಮುಜುಗರದಿಂದ ತಲೆತಗ್ಗಿಸಿಕೊಳ್ಳಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು. ಗಣರಾಜ್ಯೋತ್ಸವದಂದು ಕವಾಯಿತು ಮಾಡುತ್ತಾ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಮಾರ್ಚ್‌ಪಾಸ್ಟ್‌ ಮಾಡುವ ಸೇನಾ ಸಿಬ್ಬಂದಿಯ ಗತ್ತಿನಲ್ಲೇ ಮೇಡಂ ಹೆಜ್ಜೆ ಹಾಕಿದರು.

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

7 Comments

  1. Gopala Krishna

    Gopala Krishna

    Reply
  2. Raghavendra

    Their are always people who do not care for societal values. Madam is one such person. Her character is getting more and more reflected by people in power. Well written and lucid.

    Reply
    • Satyanarayana Krishnamurthy

      thanks.

      Reply
  3. Suma

    extremely well written and humorous!

    Reply
    • Satyanarayana Krishnamurthy

      Thanks Madam.

      Reply
  4. Poorvi

    ನಮ್ಮ ಸರ್ಕಾರದ ಅನೇಕ ಇಲಾಖೆಗಳಲ್ಲಿ ಇಂತಹ ಮೇ dumb ಗಳು ಹಾಗು ಗುಳುಂ ಅಪ್ಪ ಗಳು ಬಹಳ . ನೀವು ಇಂತಹುದೇ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ನಿಮ್ಮ ಲೇಖನದಲ್ಲಿ ಎಲ್ಲವೂ ಸ್ವಾರಸ್ಯಕರವಾಗಿ ಮೂಡಿಬಂದಿದೆ . ಮುಂದಿನ ಕಂತುಗಳಿಗೆ ಕಾಯುತ್ತಿರುತ್ತೇನೆ

    Reply
    • Satyanarayana Krishnamurthy

      Thanq so much.

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ