Advertisement
ತಮ್ಮಣ್ಣ ಬೀಗಾರ ಮಕ್ಕಳ ಕಥಾಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

ತಮ್ಮಣ್ಣ ಬೀಗಾರ ಮಕ್ಕಳ ಕಥಾಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

ಕನ್ನಡದ ಮಕ್ಕಳ ಕಥೆಗಳು ಇನ್ನೂ ವಿಚಿತ್ರ ಹಂತದಲ್ಲೇ ನಿಂತುಬಿಟ್ಟಿದೆ. ಬಹುತೇಕ ಮಕ್ಕಳ ಕಥೆಗಳು ಎಂದು ಸಾರ್ವಜನಿಕ ಗ್ರಂಥಾಲಯವನ್ನು ತುಂಬುವ ಪುಸ್ತಕಗಳಲ್ಲಿ ಅದೇ ಹಳೆಯ ಸಿದ್ಧ ಮಾದರಿಯ ಏಳು ಸುತ್ತಿನ ಮಲ್ಲಿಗೆಯ ತೂಕದ ರಾಜಕುಮಾರಿ, ಏಳು ಕೋಟೆಯ ರಾಜಕುಮಾರರ ವಿವರಣೆಗಳೇ ತುಂಬಿರುತ್ತವೆ. ಆದರೆ ಉಳಿದ ಭಾಷೆಗಳಲ್ಲಿ ಮಕ್ಕಳ ಕಥೆಗಳ ಆಯಾಮ ಬದಲಾಗಿ ದಶಕಗಳ ಸನಿಹಕ್ಕೆ ಬಂದಿದೆ. ಮಕ್ಕಳ ಕಥೆಗಳನ್ನು ವಾಸ್ತವಿಕ ನೆಲಗಟ್ಟಿಗೆ ತರುವ ಯಾವ ಪ್ರಯತ್ನವನ್ನೂ ಕನ್ನಡದ ಹೆಚ್ಚಿನ ಮಕ್ಕಳ ಸಾಹಿತಿಗಳೆಂದುಕೊಂಡವರು ಮಾಡುತ್ತಿಲ್ಲ. ಮಕ್ಕಳ ಕಥೆಗಳಿಗೆ ಬೇಕಾದ ಫ್ಯಾಂಟಿಸಿಯನ್ನು ತಂದು ಅದನ್ನು ಅಚ್ಚುಕಟ್ಟಾಗಿ ಬರೆಯುವುದಕ್ಕೂ ಹೆಚ್ಚಿನವರಿಗೆ ಮುಜುಗರ.
ತಮ್ಮಣ್ಣ ಬೀಗಾರರ “ಉಲ್ಟಾ ಅಂಗಿ” ಮಕ್ಕಳ ಕಥಾಸಂಕಲನದ ಕುರಿತು ಶ್ರೀದೇವಿ ಕೆರೆಮನೆ ಬರಹ

 

ಮಕ್ಕಳ ಸಾಹಿತ್ಯವನ್ನು ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಮಕ್ಕಳ ಕಥೆಗಳನ್ನು ಬರೆಯುವುದು ಒಂದಿಷ್ಟು ಕಷ್ಟದಾಯಕ ಕೆಲಸವೇ ಸರಿ. ಒಂದು ಹೆಜ್ಜೆ ಹಿಂದಿಟ್ಟರೆ ಶಿಶು ಕಥೆಗಳಾಗಿಬಿಡುವ, ಒಂದು ಹೆಜ್ಜೆ ಮುಂದಿಟ್ಟರೆ ಹದಿಹರೆಯದವರ ಕಥೆಗಳಾಗಿಬಿಡುವ ಅಪಾಯವಿದೆ ಈ ಪ್ರಕಾರಕ್ಕೆ. ಹೀಗಾಗಿ ಮಕ್ಕಳ ಕಥೆ ಬರೆಯುವುದೆಂದರೆ ತಂತಿಯ ಮೇಲೆ ನಡಿಗೆ ಮಾಡಿದಂತೆ. ಆದರೆ ಸಮತೋಲನಕ್ಕೆ ಯಾವ ಕೋಲನ್ನೂ ಹಿಡಿದುಕೊಳ್ಳದೇ ತಂತಿಯ ಮೇಲೆ ಸರಾಗವಾಗಿ ನಡೆಯುವುದನ್ನು ರೂಢಿಸಿಕೊಂಡ ಕೆಲವೇ ಕೆಲವು ಸಾಹಿತಿಗಳಲ್ಲಿ ತಮ್ಮಣ್ಣ ಬೀಗಾರ ಒಬ್ಬರು.

ಕನ್ನಡದ ಮಕ್ಕಳ ಕಥೆಗಳು ಇನ್ನೂ ವಿಚಿತ್ರ ಹಂತದಲ್ಲೇ ನಿಂತುಬಿಟ್ಟಿದೆ. ಬಹುತೇಕ ಮಕ್ಕಳ ಕಥೆಗಳು ಎಂದು ಸಾರ್ವಜನಿಕ ಗ್ರಂಥಾಲಯವನ್ನು ತುಂಬುವ ಪುಸ್ತಕಗಳಲ್ಲಿ ಅದೇ ಹಳೆಯ ಸಿದ್ಧ ಮಾದರಿಯ ಏಳು ಸುತ್ತಿನ ಮಲ್ಲಿಗೆಯ ತೂಕದ ರಾಜಕುಮಾರಿ, ಏಳು ಕೋಟೆಯ ರಾಜಕುಮಾರರ ವಿವರಣೆಗಳೇ ತುಂಬಿರುತ್ತವೆ. ಆದರೆ ಉಳಿದ ಭಾಷೆಗಳಲ್ಲಿ ಮಕ್ಕಳ ಕಥೆಗಳ ಆಯಾಮ ಬದಲಾಗಿ ದಶಕಗಳ ಸನಿಹಕ್ಕೆ ಬಂದಿದೆ. ಮಕ್ಕಳ ಕಥೆಗಳನ್ನು ವಾಸ್ತವಿಕ ನೆಲಗಟ್ಟಿಗೆ ತರುವ ಯಾವ ಪ್ರಯತ್ನವನ್ನೂ ಕನ್ನಡದ ಹೆಚ್ಚಿನ ಮಕ್ಕಳ ಸಾಹಿತಿಗಳೆಂದುಕೊಂಡವರು ಮಾಡುತ್ತಿಲ್ಲ. ಮಕ್ಕಳ ಕಥೆಗಳಿಗೆ ಬೇಕಾದ ಫ್ಯಾಂಟಿಸಿಯನ್ನು ತಂದು ಅದನ್ನು ಅಚ್ಚುಕಟ್ಟಾಗಿ ಬರೆಯುವುದಕ್ಕೂ ಹೆಚ್ಚಿನವರಿಗೆ ಮುಜುಗರ.

(ತಮ್ಮಣ್ಣ ಬೀಗಾರ)

ಹೀಗಾಗಿ ಮಕ್ಕಳ ಕಥೆಗಳು ಇಂದಿಗೂ ಅಡಗೂಲಜ್ಜಿಯ ಮಾದರಿಯಲ್ಲಿ, ಪಂಚತಂತ್ರದ ಹಳೆಯ ನಿರೂಪಣೆಯಲ್ಲಿಯೇ ಸಿಲುಕಿಕೊಂಡಿವೆ. ಆದರೆ ತಮ್ಮಣ್ಣ ಬೀಗಾರ, ಆನಂದ ಪಾಟೀಲ್, ಗಿರೀಶ್ ಜಕಾಪುರೆ, ಗಣೇಶ ನಾಡೋರಂತಹ ಕೆಲವೇ ಕೆಲವು ಮಕ್ಕಳ ಸಾಹಿತಿಗಳು ಇದರಲ್ಲೂ ಸೃಜನಶೀಲತೆಯನ್ನು ತರಲು ಪ್ರಯತ್ನಿಸಿ ಸಫಲರಾಗಿದ್ದಾರೆ. ಅಂತಹ ಸೃಜನಶೀಲ ಮಕ್ಕಳ ಕಥೆಗಾರರಲ್ಲೊಬ್ಬರಾದ ತಮ್ಮಣ್ಣ ಬೀಗಾರರ ‘ಉಲ್ಟಾ ಅಂಗಿ’ ಮಕ್ಕಳಿಗೆ ಬೇಕಾದ ವಾಸ್ತವವನ್ನು ತೆರೆದಿಡುವ ಜೊತೆಜೊತೆಗೇ ಫ್ಯಾಂಟಿಸಿಯನ್ನೂ ಕಟ್ಟಿಕೊಟ್ಟು ಮಕ್ಕಳ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ.

ಮೊದಲ ಕಥೆ ‘ಯಾರು ಕೊಟ್ಟಿದ್ದು.’ ಇದು ಹಳ್ಳಿಯ ಬಡ ಮಕ್ಕಳ ವಾಸ್ತವಿಕತೆಯನ್ನು ತೆರೆದಿಡುತ್ತದೆ. ಹುಟ್ಟಿದ ದಿನದಂದು ಅಜ್ಜಿಯೇ ಆಸರೆಯಾಗಿ ಬದುಕುತ್ತಿರುವ ಸೌಮ್ಯಳಿಗೆ ಶಾಲೆಗ ಹಂಚಲು ಚಾಕ್ಲೇಟ್ ಡಬ್ಬ ತರಲು ಆಗದ ಬೇಸರ. ಹೀಗಾಗಿ ಹೊಸ ಅಂಗಿ ಹಾಕಿಕೊಂಡರೆ ಎಲ್ಲರಿಗೂ ಹುಟ್ಟಿದ ದಿನ ಎಂದು ಗೊತ್ತಾಗುತ್ತದೆ, ಆಗ ಚಾಕ್ಲೆಟ್ ಹಂಚಲು ಆಗುವುದಿಲ್ಲ ಎಂದು ನಿತ್ಯದ ಯುನಿಫಾರ್ಮ ಹಾಕಿ ಶಾಲೆಗೆ ಹೋದರೂ ಪ್ರಾರ್ಥನಾ ವೇಳೆಯಲ್ಲಿ ಮುಂದೆ ಕರೆಯಿಸಿ ಶಾಲಾ ಮಕ್ಕಳಿಂದ ಶುಭಾಶಯ ಹೇಳಿಸಿ ಪೆನ್ನು ಕೊಟ್ಟ ಶಿಕ್ಷಕರು, ‘ತಾನು ಚಾಕ್ಲೆಟ್ ಹೆಚ್ಚು ತಂದಿರುವೆ. ನನ್ನೊಂದಿಗೆ ಹಂಚಲು ಬಾ.’ ಎಂದು ಕರೆದ ರಂಜಿತಾ ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸಹೃದಯರೇ. ಕ್ಲಾಸಿನ ಒಳಗೆ ಹೋದರೆ ಬ್ಯಾಗ್ ನಲ್ಲಿ ಚಾಕ್ಲೆಟ್ ಪ್ಯಾಕ್. ತನ್ನದಲ್ಲದ ವಸ್ತು ಎಂದು ಹೆಡ್ಮಾಸ್ತರರಿಗೆ ಕೊಟ್ಟರೆ ‘ನಿನ್ನದೇ ಇದು, ಹಂಚಿ ಬಿಡು’ ಎನ್ನುವ ಗುರುಗಳು… ಓದಿದ ಕ್ಷಣಕ್ಕೆ ಮನಸ್ಸು ಆದ್ರವಾಗುತ್ತದೆ.

ಎರಡನೇ ಕಥೆ ‘ಹೀಗೂ ಆಗುತ್ತದೆ.’ ಇದು ಪ್ರತಿ ಶಾಲೆಯ ಸಮಸ್ಯೆ. ಎಲ್ಲಾ ಶಾಲೆಯಲ್ಲೂ ಸುಬ್ಬುವಿನಂತಹ ಶಾಲೆ ತಪ್ಪಿಸುವ ಹುಡುಗನೊಬ್ಬ ಇದ್ದೇ ಇರುತ್ತಾನೆ. ಎರಡು ದಿನ ಬಂದರೆ ಒಂದು ವಾರ ಶಾಲೆ ತಪ್ಪಿಸುವವರು. ಈ ಕಥೆಯಲ್ಲಿ ಒಂದನೇ ತರಗತಿಯಿಂದಲೂ ಸುಬ್ಬುವಿಗೆ ಶಾಲೆಗೆ ಬರುವುದೆಂದರೆ ಅದೇನೋ ಬೇಸರ. ಆದರೆ ಶಿಕ್ಷಕರು ಬಿಡುವಂತಿಲ್ಲ. ಬಣ್ಣದ ಪೆನ್ಸಿಲ್, ಕಂಪಾಸ್ ಬಾಕ್ಸ್ ನ ಆಮಿಷ ತೋರಿಸಿ ಶಾಲೆಗೆ ಕರೆದುತರಲೇ ಬೇಕು. ಆದರೆ ಈ ವರ್ಷ ಮಾತ್ರ ಮೇ ರಜೆ ಕಳೆದು ಹದಿನೈದು ದಿನ ಕಳೆದರೂ ಸುಬ್ಬುವಿನ ಪತ್ತೆಯಿಲ್ಲ. ಆತನ ತಮ್ಮ ಶಾಲೆಗೆ ಬಂದರೂ ಸುಬ್ಬು ಮಾತ್ರ ಶಾಲೆಯ ಕಡೆ ತಿರುಗಿಯೂ ನೋಡಲಿಲ್ಲ. ಎಂದಿನಂತೆ ಆತನನ್ನು ಕರೆಯಲು ಹೋದ ಶಿಕ್ಷಕರಿಗೆ ಮುಖಕ್ಕೆ ಉಗಿದಂತೆ ಬಾಯಲ್ಲಿ ಗುಟ್ಕಾ ತುಂಬಿಕೊಂಡು ತಾನು ಶಾಲೆಗೆ ಬರುವುದಿಲ್ಲ ಎಂದು ಹೇಳಿಬಿಡುತ್ತಾನೆ. ಶಿಕ್ಷಕ ವೃತ್ತಿಯಲ್ಲಿರುವವರಿಗೆ ವಿಧೇಯ, ಬುದ್ಧಿವಂತ ಮಕ್ಕಳಿರುವಂತೆ ಇಂತಹ ಎದುರುತ್ತರ ಕೊಡುವ, ಅವಿಧೇಯ ವಿದ್ಯಾರ್ಥಿಗಳೂ ಇರುತ್ತಾರೆಂಬುದನ್ನು ಮರೆಯುವಂತಿಲ್ಲ.

ಒಂದು ಹೆಜ್ಜೆ ಹಿಂದಿಟ್ಟರೆ ಶಿಶು ಕಥೆಗಳಾಗಿಬಿಡುವ, ಒಂದು ಹೆಜ್ಜೆ ಮುಂದಿಟ್ಟರೆ ಹದಿಹರೆಯದವರ ಕಥೆಗಳಾಗಿಬಿಡುವ ಅಪಾಯವಿದೆ ಈ ಪ್ರಕಾರಕ್ಕೆ. ಹೀಗಾಗಿ ಮಕ್ಕಳ ಕಥೆ ಬರೆಯುವುದೆಂದರೆ ತಂತಿಯ ಮೇಲೆ ನಡಿಗೆ ಮಾಡಿದಂತೆ.

ಮೂರನೆ ಕಥೆ ‘ಉಲ್ಟಾ ಅಂಗಿ.’ ಹುಡುಗನೊಬ್ಬ ಉಲ್ಟಾ ಅಂಗಿ ಹಾಕಿಕೊಂಡು ಶಾಲೆಗೆ ಹೋಗುವ ಮತ್ತು ದಾರಿಯಲ್ಲಿ ಕಂಡಿದ್ದು ಕಾಡು ಪಾರಿವಾಳ ಅದರ ಕಾಲಿಗೆ ಉರುಳಂತೆ ಸಿಕ್ಕಿಕೊಂಡ ಬಳ್ಳಿಯಿಂದ ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಅಂಟಿಕೊಂಡಿದ್ದ ಹಾವಸೆಯೆಲ್ಲ ಅಂಗಿಗೆ ಅಂಟಿ ನಂತರ ಅಂಗಿ ಉಲ್ಟಾ ಹಾಕಿಕೊಂಡು ಬಂದಿದ್ದೇ ಒಳ್ಳೆಯದಾಯ್ತು ಎನ್ನುವ ಕಥೆ. ನಾಲ್ಕನೆಯದ್ದು ‘ಕೆರೆಯಲ್ಲಿ ಮುಳುಗಿಸುವ ಹಾಗಿಲ್ವಾ….’ ಪ್ರತಿ ವರ್ಷದಂತೆ ಗಣಪತಿಯನ್ನು ಕೆರೆಗೆ ಮುಳುಗಿಸುವಂತಿಲ್ಲ ಎಂದು ತೀರ್ಮಾನ ಕೈಗೊಂಡ ಕುರಿತು ಮಕ್ಕಳ ಮಾತುಕಥೆ ಇರುವ ಕಥೆ ಇದು. ಕಥೆಯಲ್ಲಿ ಕೆರೆಯಲ್ಲಿ ಗಣಪನನ್ನು ಕೆರೆಯಲ್ಲಿ ಮುಳುಗಿಸುವುದರಿಂದ ಆಗುವ ಕೆಡಕುಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ಮಕ್ಕಳ ಓದಿಗೆ ನಿಲುಕುವಂತೆ ಹೇಳಲಾಗಿದೆ.

ಐದನೆಯ ಕಥೆ ಅಜ್ಜಿ ಮತ್ತು ಎಲೆ’ ಈ ಕಥೆಯಲ್ಲಿ ಅಪ್ಪ ಅಮ್ಮನಿಂದ ಬೇಸತ್ತ ಮಗ ಮತ್ತು ಅಜ್ಜಿ ಅವರನ್ನು ಒಂದಾಗಲು ಏನಾದರೂ ಮಾಡಬೇಕೆಂದು ಯೋಚಿಸುವ ಹಂದರವನ್ನು ಹೊಂದಿದೆ. ಕಾಡು ತಿರುಗಿ ಗಂಡ ಹೆಂಡಿರನ್ನು ಒಂದಾಗಿಸುವ ಎಲೆ ಹುಡುಕಿ ತರುವ ಅಜ್ಜಿ ಇಲ್ಲಿ ಬೆಸುಗೆಯ ಮಾಯಾವಿಯಂತೆ ಕಾಣುತ್ತಾರೆ. ಮುಂದಿನದ್ದು ‘ಗೀಜಗನ ಗೂಡಿನಿಂದ ಗೀಜಗನ ಮರಿ ಹೊರಕ್ಕೆ ಬಂತು.’ ಈ ಕಥೆಯಲ್ಲಿ ಓದಲು ಬರದ ಹುಡುಗನೊಬ್ಬ ಕಥೆ ಹೇಳಿ ಟೀಚರ್ನಿಂದ ಶಹಬ್ಬಾಸ ಪಡೆದು ಮುಂದೆ ಶಾಲೆಯ ಮುಖ್ಯೋಪಾಧ್ಯಾಯನಾದ ಕಥೆ ಇದೆ. ಪ್ರೀತಿಯಿಂದ ಹೇಳಿದರೆ ಮಕ್ಕಳೂ ಅರ್ಥ ಮಾಡಿಕೊಂಡು ಓದುತ್ತಾರೆ ಎನ್ನುವ ಕಿವಿಮಾತು ಇಲ್ಲಿದೆ.

ಏಳನೆಯ ಕಥೆ ‘ರಾಡಿ ಅಂಗಿ.’ ಇಲ್ಲಿ ತಮ್ಮ ಮಕ್ಕಳು ಒಳ್ಳೆಯವರು, ಬೇರೆಯ ಮಕ್ಕಳೇ ದಾರಿ ತಪ್ಪಿಸುವುದು ಎನ್ನುವ ಅಮ್ಮಂದಿರಿಗೊಂದು ನೀತಿ ಇದೆ. ಪ್ರತಿದಿನ ಕಬ್ಬಡ್ಡಿ ಆಡಿ ಮೈಕೈ ಎಲ್ಲ ಕೆಸರು ಮಾಡಿಕೊಂಡು ಬರುವ ಮಗನನ್ನು ಕಂಡು ರೋಸಿ ಹೋದ ತಾಯಿಯೊಬ್ಬಳು ಅವನ ಸ್ನೇಹಿತರಿಗೆ ಇನ್ನು ಮುಂದೆ ಆಡಲು ಬರಬೇಡಿ ಎನ್ನುವುದು, ಆದರೆ ನಂತರ ಮಳೆಯಿಂದಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದವನನ್ನು ಸ್ನೇಹಿತರು ಹಿಡಿದು ಮೇಲೆ ತಂದಿದ್ದು ಎಲ್ಲವನ್ನೂ ಮನಮುಟ್ಟುವಂತೆ ಹೇಳಲಾಗಿದೆ. ಎಂಟನೆಯ ಕಥೆ ‘ರಾಜಣ್ಣನ ಹಾಗೆ’ ಇಲ್ಲಿ ಮೊಬೈಲ್ ನಿಂದಾಗಿ ಬರೀ ಕೆಲಸವಿಲ್ಲದ ಆಟದಲ್ಲಿ ತೊಡಗಿದ್ದ ಶ್ರೇಯಸ್ ಗೆ ಅವನ ದೊಡ್ಡಪ್ಪನ ಮಗ ರಾಜು ಮೊಬೈಲ್ ಲೋಕ ಬಿಟ್ಟು ಓದು, ಚಿತ್ರ ಬಿಡಿಸುವುದರ ಕುರಿತು ಹೇಳುವ ಮಾತುಗಳಿವೆ. ಈಗಿನ ಕಾಲದ ಮೊಬೈಲ್ ಗೆ ಅಂಟಿಕೊಂಡ ಮಕ್ಕಳೆಲ್ಲ ಓದಲೇಬೇಕಾದ ಕಥೆಯಿದು.

ಒಂಬತ್ತನೆಯ ಕಥೆ ‘ಏನಾಯ್ತು’ ಮಾವಿನ ಮರದಲ್ಲಿ ಬಿಟ್ಟ ಹೊಂಬಣ್ಣದ ಮಾವಿನ ಹಣ್ಣಿಗೆ ಆಸೆ ಪಟ್ಟ ಮೊಮ್ಮಗನೊಬ್ಬನ ಆಸೆ ಈಡೇರಿಸಲು ಹೋಗಿ ಅಜ್ಜಿಯೊಬ್ಬಳು ಕಾಲು ಮುರಿದುಕೊಂಡ ಕಥೆ ಇಲ್ಲಿದೆ. ಆದರೆ ತನ್ನಿಂದಾಗಿ ಅಜ್ಜಿಯ ಕಾಲು ಮುರಿದಿದೆ ಎನ್ನುವ ಗಿಲ್ಟ್ ಇರುವ ಮೊಮ್ಮಗ ರವಿವಾರ ಅಜ್ಜಿಯ ಜೊತೆ ಕುಳಿತು ಅವಳ ಬೇಸರದ ಸಮಯವನ್ನು ಕಳೆಯಲು ಯೋಚಿಸುವುದು ಕೂಡುಕುಟುಂಬದ ಖುಷಿಯನ್ನು ಹೇಳುತ್ತದೆ. ಹತ್ತನೆಯದ್ದು ‘ನಮ್ಮ ಹಿಂದೇ ಹೊರಟಿದ್ದರು.’ ಓದಲು ಬರೆಯಲು ಅಷ್ಟೇನೂ ಜಾಣನಲ್ಲದವ ಬಾಯಿಲೆಕ್ಕ, ಪರಿಸರ ಪ್ರಜ್ಞೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಶಂಸಿದ್ದರ ಕುರಿತಿದೆ.

ಹನ್ನೊಂದನೆಯ ಕಥೆ ‘ಯಾರ ತಪ್ಪು’ ಜೇಡಿ ಮಣ್ಣಿನಿಂದ ಆಕೃತಿಗಳನ್ನು ಮಾಡುವ ಸ್ಪಧೆಗಾಗಿ ಮಣ್ಣು ತರಲು ಕೆರೆಗೆ ಹೋದ ಮಕ್ಕಳ ಕುರಿತಾಗಿ ಈ ಕಥೆಯಲ್ಲಿದ್ದರೆ ಹನ್ನೆರಡನೆಯ ಕಥೆ ‘ಎಲ್ಲಾ ಮರೆತು’ ವಿನಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸುಮ್ಮನಿರಿಸುವ ಸಲುವಾಗಿ ಮೊಬೈಲ್ ನೀಡಿ, ನಂತರ ಮೊಬೈಲ್ ಆಟ ಬಿಡಿಸಲು ಮಕ್ಕಳಿಗೆ ಬೈಯ್ಯುವ ಕಥೆ ಇದೆ. ಹದಿಮೂರನೆಯ ಕಥೆ ‘ಆಣೆಕಟ್ಟು’ ಇಲ್ಲಿ ಆಣೆಕಟ್ಟು ಕಟ್ಟಿ ತಮ್ಮ ಮನೆಮಠಗಳನ್ನು ಕಳೆದುಕೊಳ್ಳುವ ಚಿಕ್ಕ ಮಕ್ಕಳ ನೋವಿದೆ. ಮನೆಯನ್ನು ಕಳೆದುಕೊಳ್ಳುವುದಕ್ಕಿಂತ ಅವರು ಶಾಲೆ ಮುಳುಗಿ ಹೋಗುತ್ತದೆ ಎಂದು ದುಃಖಿಸುವುದು ಮನಕಲಕುತ್ತದೆ.

ಹದಿನಾಲ್ಕನೆಯ ಕಥೆಯಲ್ಲಿ ‘ಅಜ್ಜನಾಗುವವರೆಗು…’ ಇಲ್ಲಿ ತೀರಿಹೋಗಿ, ಫೋಟೊದಲ್ಲಿರುವ ಅಜ್ಜನೊಬ್ಬ ಮೊಮ್ಮಗನ ವೇಶ ಧರಿಸಿ, ತನ್ನ ವಯಸ್ಸನ್ನು ಮೊಮ್ಮಗನಿಗೆ ನೀಡಿ ಊರನ್ನೆಲ್ಲ ತಿರುಗಿಸಿ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಹೇಳುವ ಕಥೆ ಇದೆ. ಹದಿನೈದನೆಯದ್ದು ‘ಹೊಳೆಯುವ ಕಲ್ಲು’ ಒಂದು ಬಾಹ್ಯಾಕಾಶದ ಕಾಲ್ಪನಿಕ ಕಥೆ. ತನ್ನ ಅಪ್ಪ ಗಗನಯಾತ್ರಿ ಎಂದುಕೊಳ್ಳುತ್ತ ತಾನು ಬಾಹ್ಯಾಕಾಶಕ್ಕೆ ಹೋದ ಕಥೆಯನ್ನು ಹೇಳುವ ಪುಟ್ಟ ಬಾಲಕನೊಬ್ಬನ ಕಲ್ಪನೆ ಕುತೂಹಲ ಹುಟ್ಟಿಸುವುದರ ಜೊತೆಜೊತೆಗೇ ಎಲ್ಲಿ ಹೋದರೂ ತಮ್ಮದಲ್ಲದ ವಸ್ತುವಿಗೆ ಆಸೆ ಪಡಬಾರದು ಎಂಬುದನ್ನು ತಿಳಿಸಿದೆ.

ಇಲ್ಲಿನ ಕಥೆಗಳು ಕೇವಲ ಮನೋರಂಜನೆಗಾಗಿ ಮಾತ್ರವಲ್ಲ, ಪರಿಸರ, ವೈಜ್ಞಾನಿಕ, ಕೌಟುಂಬಿಕ ವಿಷಯವಾಗಿಯೂ ಮಕ್ಕಳನ್ನು ಯೋಚಿಸುವಂತೆ ಮಾಡುವುದರಲ್ಲಿ ಸಫಲವಾಗುತ್ತವೆ. ಮಕ್ಕಳ ಕಥೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ ಮಕ್ಕಳು ಹೇಗಿರಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಡಬೇಕು ಎಂಬುದನ್ನು ತಿಮ್ಮಣ್ಣ ಬೀಗಾರ ತಮ್ಮ ಕಥೆಗಳ ಮೂಲಕವೇ ತೋರಿಸಿಕೊಟ್ಟಿದ್ದಾರೆ. ಇಂತಹ ಕಥೆಗಳು ಇನ್ನೂ ಹೆಚ್ಚು ಹೆಚ್ಚು ಬರಲಿ. ಮಕ್ಕಳ ಕಥಾ ಲೋಕ ಸಮೃದ್ಧಿಯಾಗಿ ವಾಸ್ತವತೆಯತ್ತ ಮುಖ ಮಾಡಲಿ.


(ಪುಸ್ತಕ: ಉಲ್ಟಾ ಅಂಗಿ (ಮಕ್ಕಳ ಕಥಾಸಂಕಲನ), ಲೇಖಕರು: ತಮ್ಮಣ್ಣ ಬೀಗಾರ, ಪ್ರಕಾಶಕರು: ಪ್ರೇಮ ಪ್ರಕಾಶನ, ಬೆಲೆ:90/-)

About The Author

ಶ್ರೀದೇವಿ ಕೆರೆಮನೆ

ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.

4 Comments

  1. ತಮ್ಮಣ್ಣ ಬೀಗಾರ

    ನನ್ನ ಕಥಾಸಂಕಲನದ ಕುರಿತು ತುಂಬಾ ವಿವರವಾಗಿ ಆಪ್ತವಾಗಿ ಬರೆದಿದ್ದೀರಿ. ಡಾ. ಆನಂದ ಪಾಟೀಲರು ಅಧ್ಯಯನ ಮಾಡಿದ ಪ್ರಕಾರ ಇಂಗ್ಲೀಷ ಭಾಷೆ ಹೊರತು ಪಡಿಸಿ ಪ್ರಾದೇಶಿಕ ಭಾಷೆಗಳಲ್ಲಿ ನಾವು ಕನ್ನಡಿಗರೇ ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಹೊಸತನಕ್ಕೆ ತೆರೆದುಕೊಂಡಿದ್ದೇವೆ.ನೀವು ಪ್ರಸ್ತಾಪಿಸಿದಂತೆ ಬಹುಜನರು ಇನ್ನೂ ಹೊಸತಕ್ಕೆ ತೆರೆದುಕೊಳ್ಳುತ್ತಿಲ್ಲ.ಅವರು ಬೇರೆಯವರನ್ನು ಓದುವುದು ಕಡಿಮೆಯಾಗಿರುವುದೂ ಕಾರಣವಾಗಿರಬಹುದು. ನಿಮ್ಮ ಈ ಪ್ರಯತ್ನ ಒಂದಿಷ್ಟು ಜನರಿಗೆ ಓದಲು ಪ್ರೇರಣೆ ಯಾಗುತ್ತದೆ. ನನಗೆ ತುಂಬಾ ಖುಷಿಆಯಿತು. ತಮ್ಮ ಆತ್ಮೀಯ ಬರಹ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ವಂದನೆಗಳು.

    Reply
  2. ಸುಜಾತ ಲಕ್ಷ್ಮೀಪುರ

    ಉಲ್ಟಾ ಅಂಗಿ ಮಕ್ಕಳ ಕಥಾ ಸಂಕಲನ ಪರಿಚಯವನ್ನು ವಿವರವಾಗಿ ಮಾಡುಕೊಟ್ಟಿದ್ದೀರ ಮೇಡಮ್.ಕಥಾ ವಸ್ತುಗಳ ವೈವಿಧ್ಯತೆಯನ್ನು ಗುರುತಿಸುತ್ತಾ, ಪ್ರತಿ ಕತೆಯ ಕಿರುಪರಿಚಯದಿಂದ ಒಟ್ಟು ಕೃತಿಯ ಸ್ಥೂಲ ಪರಿಚಯವಾಗುತ್ತದೆ .ಮಕ್ಕಳ ಕಥೆಗಳ ಬರೆವಣೆಗೆಯೇ ಕಡಿಮೆ ಇಂತಹ ಸಂದರ್ಭದಲ್ಲಿ ಉತ್ತಮವಾಗಿ ಮೂಡಿಬಂದಂತಿದೆ ಈ ಕೃತಿ.ಕೃತಿ ರಚನಕಾರರಿಗೂ,ಪರಿಚಯಿಸಿದ ಶ್ರೀದೇವಿ ಅವರಿಗೂ ಅಭಿನಂದನೆಗಳು.??

    Reply
    • ತಮ್ಮಣ್ಣ ಬೀಗಾರ

      ಧನ್ಯವಾದಗಳು ಸುಜಾತ ಅವರಿಗೆ

      Reply
  3. ಧನಪಾಲ ನಾಗರಾಜಪ್ಪ

    ಶ್ರೀದೇವಿ ಮೇಡಂ, ನಿಮ್ಮ ಪುಸ್ತಕ ವಿಶ್ಲೇಷಣೆ ಎಂದಿನಂತೆ ಅತ್ಯಾಪ್ತವಾಗಿದೆ. ಮಕ್ಕಳ ಸಾಹಿತಿಗಳಾದ ತಮ್ಮಣ್ಣ ಬೀಗಾರರಿಗೆ ಮಕ್ಕಳ ಮನಸ್ಸು ಚೆನ್ನಾಗಿ ಗೊತ್ತಿದೆ. ಮಕ್ಕಳಿಗೆ ಹೇಗರ ಬರೆಯಬೇಕು? ಏನು ಬರೆಯಬೇಕು? ಅಂತ ಅವರಿಗೆ ಗೊತ್ತಿದೆ.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ