Advertisement
ದಿಗ್ಭ್ರಮೆ ವೆಂಕಟ್ರಮಣನ ದಶಾವತಾರಂಗಳು:ಭಾರತಿ ಹೆಗಡೆ ಕಥಾನಕ

ದಿಗ್ಭ್ರಮೆ ವೆಂಕಟ್ರಮಣನ ದಶಾವತಾರಂಗಳು:ಭಾರತಿ ಹೆಗಡೆ ಕಥಾನಕ

”ಅವರಿವರಿಗೆ ಜಬರದಸ್ತುಮಾಡಿಕೊಂಡು, ತಮಾಷೆಗೊಳಗಾಗುತ್ತಲೇ ಇರುವ ಈ ದಿಗ್ಭ್ರಮೆ ವೆಂಕಟ್ರಮಣನ ಬದುಕಲ್ಲಿ ನಿಜಕ್ಕೂ ದಿಗ್ಭ್ರಮೆಯಾಗುವಂಥ ದಿನವೊಂದು ಬಂತು. ಅದೆಂದರೆ ಅವನಿಗೆ ನಿಧಿ ಸಿಕ್ಕಿದ್ದು. ಅವತ್ತು ಹೊತ್ತು ಕಂತುವ ಮೊದಲೇ ದಿಗ್ಭ್ರಮೆ ವೆಂಕಟ್ರಮಣನಿಗೆ ನಿಧಿ ಸಿಕ್ಕಿದ ಸುದ್ದಿ ಊರೆಲ್ಲ ಹರಡಿ ಕೆಲವು ಹೆಂಗಸರು ಮತ್ತು ಹುಡುಗರು ಅವನ ಮನೆಯ ಬಳಿ ಜಮಾಯಿಸಿ ಬಿಟ್ಟಿದ್ದರು. ಆಗೆಲ್ಲ ಅಲ್ಲಿ ಕೊಪ್ಪರಿಗೆ ಚಿನ್ನ ಸಿಕ್ಕಿತಂತೆ, ಇಲ್ಲಿ ಸಿಕ್ಕಿತಂತೆ ಎಂಬ ಸುದ್ದಿ ದಟ್ಟವಾಗಿತ್ತು. ಅಂಥದ್ದೇ ಸುದ್ದಿ ಈ ವೆಂಕಟ್ರಮಣನ ಕುರಿತೂ ಹಬ್ಬಿ ಎಲ್ಲರಿಗೂ ಅವನ ಬಳಿ ಇರುವ ಚಿನ್ನ ನೋಡುವ, ಅದನ್ನು ತುಂಬಿದ ಕೊಪ್ಪರಿಗೆ ನೋಡುವ ಆಸೆ”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಎರಡನೆಯ ಕಂತು.

 

ದಿಗ್ಭ್ರಮೆ ವೆಂಕಟ್ರಮಣ ಮೋಟು ಪಂಚೆ ಉಟ್ಟು, ಮೇಲೊಂದು ತೆಳುವಾದ ಕಸೆ ಅಂಗಿಯನ್ನು ಹಾಕಿಕೊಂಡು ಸರಬರ ಎಂದು ಹೊರಟನೆಂದರೆ ಯಾರಿಗೋ ಅವತ್ತು ಗ್ರಹಚಾರ ಕಾದಿದೆ ಎಂದೇ ಅರ್ಥ. ಮುನಸಿಪಾಲಿಟಿಗೋ, ತಹಶೀಲ್ದಾರ ಆಫೀಸಿಗೋ ಹೋಗಿ, ಅಲ್ಲಿರುವ ಸಣ್ಣಪುಟ್ಟ ಸಿಬ್ಬಂದಿಗಳನ್ನೆಲ್ಲ ಹೆದರಿಸಿ, ಅಧಿಕಾರಿಗಳೆದುರಿಗೆ ಕೈಕಟ್ಟಿ ನಿಂತು, ‘ಅಲ್ಲ, ನೀವೇ ಹೇಳಿ ಇದ್ಯಾಕೆ ಹೀಗ್ ಮಾಡಿದ್ರಿ, ಪ್ರಜಾಪ್ರಭುತ್ವ ರಾಷ್ಟ್ರ ಇದು… ಇಲ್ಲಿ ನಮ್ಮಂಥವರ ಮಾತಿಗೂ ಬೆಲೆ ಇದೆ..’ ಎಂದು ಒಂದಷ್ಟು ಲಾ ಪಾಯಿಂಟು ಹಾಕಿಬರುವವನೇ. ಅಲ್ಲಿರುವ ಬಹುತೇಕ ಎಲ್ಲ ಸರ್ಕಾರಿ ಆಫೀಸಿನವರಿಗೂ ಈ ದಿಗ್ಭ್ರಮೆ ವೆಂಕಟ್ರಮಣನ ವಿಷಯ ಗೊತ್ತಾಗಿ, ಯಾರೊಬ್ಬರೂ ಅವನ ಮಾತಿಗೆ ಸೊಪ್ಪು ಹಾಕದಿದ್ದರೂ ಅವನನ್ನು ಇನ್ನಷ್ಟು ರೇಗಿಸಿ ಮಜಾ ತೆಗೆದುಕೊಳ್ಳುತ್ತಿದ್ದರು. ಇದರಿಂದ ವೆಂಕಟ್ರಮಣನ ಉಮೇದು ಹೆಚ್ಚಾಗಿ ಮತ್ತೊಂದಿಷ್ಟು ಎಪರಾತಪರಾ ಮಾತನಾಡಿ, ಮನೆಗೆ ಬಂದು ಅಕ್ಕಪಕ್ಕದ ಮನೆಯವರ ಹತ್ರೆಲ್ಲ “ನಾ ಹೇಳಿದ್ದಕ್ಕೆ ಇವತ್ತು ತಹಶೀಲ್ದಾರನೇ ಉತ್ತರಕೊಡಲಾಗದೇ ನಡುಕ್ಯಂಡು ನಿಂತ್ಕಬಿಟ್ಟ…” ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡು ತಿರುಗುತ್ತಿದ್ದ.

ಅವನಿಗೆ ದಿಗ್ಭ್ರಮೆ ವೆಂಕಟ್ರಮಣ ಎಂದು ಯಾಕೆ ಕರೆಯುತ್ತಿದ್ದರು ಎಂಬುದು ಮೊದಮೊದಲು ನನಗೆ ತಿಳಿದಿರಲಿಲ್ಲ. ಅವನ ಹೆಸರೇ ಹಾಗೆ ಅಂದುಕೊಂಡುಬಿಟ್ಟಿದ್ದೆ. ಆದರೆ ಇವನ ಹೆಸರಿನ ಹಿಂದೆ ದಿಗ್ಭ್ರಮೆ ಬರಲೊಂದು ಕತೆ ಇದೆ ಎಂಬುದು ಆಮೇಲೆ ತಿಳಿಯಿತು.  ಅದು ದೇಶದ ಪ್ರಧಾನಿ ಇಂದಿರಾಗಾಂಧಿ ತೀರಿಕೊಂಡ ಸಮಯ. 1984, ಅಕ್ಟೋಬರ್ 31 ರಂದು ಇಂದಿರಾ ಅಂಗರಕ್ಷಕರ ಗುಂಡಿನ ದಾಳಿಗೆ ತುತ್ತಾಗಿ ಅಸು ನೀಗಿದ್ದರು. ಆಗೆಲ್ಲ ಟಿವಿಗಳ ಹಾವಳಿ ಇಷ್ಟೆಲ್ಲ ಇರಲಿಲ್ಲ. ಸುದ್ದಿ ಏನಿದ್ದರೂ ರೇಡಿಯೋ ಮತ್ತು ಪತ್ರಿಕೆಗಳ ಮೂಲಕವೇ ತಿಳಿಯಬೇಕಾಗಿತ್ತು. ಮಾರನೇ ದಿನದ ಪತ್ರಿಕೆಗಳಲ್ಲಿ, ಯಾರ ಬಾಯಲ್ಲೂ ಇದೇ ಸುದ್ದಿ. ಅವತ್ತು ನಮ್ಮ ನೆಂಟರೊಬ್ಬರ ಮನೆಯ ಜಗುಲಿಯ ಮೇಲೆ ಊರಿನ ನಾಲ್ಕಾರು ಪ್ರಮುಖರು ಮದ್ಯೆ ಕವಳಬಟ್ಟಲು ಇಟ್ಟುಕೊಂಡು ಕತೆ ಹೇಳುತ್ತಾ ಇಂದಿರಾಗಾಂಧಿ ತೀರಿಕೊಂಡ ವಿಷಯವನ್ನು ತಮತಮಗೆ ಬೇಕಾದಂತೆ ಹೇಳುತ್ತಿದ್ದರು.

“ಅದಕ್ಕೆ ವಿದೇಶಗಳಲ್ಲಿ ಭಾರೀ ಗೌರವವಿತ್ತು. ಅದಕ್ಕೆ ಇಂದಿರಾಗಾಂಧಿ ನಿಧನಕ್ಕೆ ದೇಶವಿದೇಶಗಳಿಂದ ಗಣ್ಯರ ಸಂತಾಪಗಳು ಹರಿದುಬರುತ್ತಿವೆ”, ಎಂದೊಬ್ಬ ಪತ್ರಿಕೆ ಓದುತ್ತಿದ್ದಂತೆ, ಅಲ್ಲೇ ಎಲೆಅಡಿಕೆ ಜಗಿಯುತ್ತಿದ್ದ ವೆಂಕಟ್ರಮಣ, ತನ್ನ ಪಂಚೆ ಸರಿಪಡಿಸಿಕೊಳ್ಳುತ್ತ ಮೈ ಹೊರಳಿಸುತ್ತ, “ಅದೂ.. ರಾಮಕೃಷ್ಣಹೆಗಡೆ ಇಂದಿರಾಗಾಂಧಿ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದ ಹೇಳಿ..” ಎಂದ. ಅಲ್ಲಿಯವರೆಗೆ ಅವನೊಬ್ಬ ಅಲ್ಲಿದ್ದಾನೆಂದೇ ಯಾರೂ ಗ್ರಹಿಸಿರದ ಕಾರಣ ಇವನ ಕಡೆ ನೋಡದೆ ಇಂದಿರಾಗಾಂಧಿಯ ರಾಜಕೀಯ, ನೆಹರೂ ಮನೆತನ ಹೀಗೆ ಏನೇನೋ ರಾಜಕೀಯ ಮಾತನಾಡತೊಡಗಿದರು. ಅಷ್ಟೊತ್ತಿಗೆ ಪಕ್ಕದ ಮನೆ ಕಾಶಿ ಮಾಣಿ ಹೌದು, ರಾಶಿ ಜನ ಸಂತಾಪ ಸೂಚಿಸಿದ್ದ ಎನ್ನುವಷ್ಟರಲ್ಲಿ “ಬರೇ ಸಂತಾಪ ಅಲ್ದೋ ಮಾರಾಯ.. ದಿಗ್ಭ್ರಮೆನೇ ವ್ಯಕ್ತಪಡಿಸಿದ್ವೋ…” ಎಂದು ಅವನ ಮಾತನ್ನು ಸರಿಪಡಿಸುವಂತೆ ಹೇಳಿದ ವೆಂಕಟ್ರಮಣ. ಆಗಲೂ ಎಲ್ಲರೂ ಸುಮ್ಮನಿದ್ದರು. ಹೀಗೆ ಯಾವ ವಿಷಯ ತಂದರೂ, ಸುತ್ತಿಬಳಸಿ ಅವ ದಿಗ್ಭ್ರಮೆ ಪದಕ್ಕೇ ಬರುತ್ತಿದ್ದ. ಅದಕ್ಕೆ ಅಲ್ಲಿಂದ ಅವನಿಗೆ ದಿಗ್ಭ್ರಮೆ ವೆಂಕಟ್ರಮಣ ಎಂದಾಗಿ ಕಡೆಗೆ ಅದೂ ಶಾರ್ಟ್ ಆಗಿ ದಿಗ್ಭ್ರಮೆ ಯಂಟ್ರಮಣ ಎಂದು ಊರ ಹುಡುಗರ ಬಾಯಲ್ಲಿ ನಲಿದು ಅದೇ ಹೆಸರು ಕಾಯಂ ಆಗಿಬಿಡ್ತು. ಅವ ಅಕ್ಕಿ ಚೀಲವನ್ನೋ.. ಅವಲಕ್ಕಿ ಚೀಲವನ್ನೋ… ಇನ್ನೇನೋ ಹೊತ್ತುಕೊಂಡು ಬರುವಾಗಲೆಲ್ಲ “ಕಡೆಗಾ.. ಯಂಟ್ರಮಣ… ಮತ್ಯಾರು ದಿಗ್ಭ್ರಮೆ ವ್ಯಕ್ತಪಡಿಸಿದ್ವೋ..” ಎಂದು ಲೇವಡಿ ಮಾಡಲು ಶುರುಮಾಡಿದ್ರು.

ಹೀಗೆಲ್ಲ ಒಂದಷ್ಟು ಮಾತುಗಾರಿಕೆ ಕಲಿತು ಅದು ಸರಿಯೋ ತಪ್ಪೋ ಎಂದೂ ತಿಳಿಯದೆ ಮಾತನಾಡಿ ತಮಾಶೆಗೊಳಗಾಗುವ ವೆಂಕಟ್ರಮಣ ತೀರ ಅಂದ್ರೆ ತೀರ ಬಡವ. ಇರುವ ಕಾಲು ಎಕರೆ ಜಮೀನಿನಲ್ಲಿ ಬೆಳೆ ಅಷ್ಟಾಗಿ ಬರುತ್ತಿರಲಿಲ್ಲ. ಇಬ್ಬರು ಗಂಡುಮಕ್ಕಳು, ಅವರಿಗೆ ಅಷ್ಟಾಗಿ ವಿದ್ಯೆ ತಲೆಗೆ ಹತ್ತದೆ, ಇರುವ ಸ್ವಲ್ಪ ಜಮೀನಿನಲ್ಲೇ ಗೇಯುತ್ತಿದ್ದರು. ಅವನ ಹೆಂಡತಿ ಸಾವಿತ್ರಿ ತನ್ನ ಪಾಲಿಗೆ ಬಂದದ್ದೇ ಪಂಚಾಮೃತವೆಂದು ಇದ್ದುದ್ದರಲ್ಲೇ ಅನುಸರಿಸಿಕೊಂಡು ಹೋಗುತ್ತಿದ್ದಳು. ಈ ಎಲ್ಲರ ಹೊಟ್ಟೆ ಹೊರೆಯುವ ಜವಾಬ್ದಾರಿ ವೆಂಕಟ್ರಮಣನ ಮೇಲಿತ್ತು. ಅದಕ್ಕೆ ಇನ್ನು ಈ ಜಮೀನನ್ನು ನಂಬಿಕೊಂಡರೆ ಪ್ರಯೋಜನವಿಲ್ಲವೆಂದು ಅಲ್ಲಿಇಲ್ಲಿ ಅಡುಗೆಗೆ ಹೋಗಿ, ಕಡೆಗೆ ಊರಿನ ಮಠಕ್ಕೆ ಸೇರಿಕೊಂಡು, ಅದ್ಹೇಗೋ ಗುರುಗಳ ಸಖ್ಯ ಬೆಳೆಸಿ ಅಲ್ಲಿ ಕಾಯಂ ಅಡುಗೆಭಟ್ಟನಾಗಿಬಿಟ್ಟ. ಜಮೀನಿನ ಆದಾಯಕ್ಕಿಂತಲೂ ಅಡುಗೆಯಿಂದ ಬರುವ ವರಮಾನವೇ ಅವನಿಗೆ ಸಾಕಾಗುವಷ್ಟಾಯಿತು. ಗುರುಗಳ ಕೃಪೆಯಿಂದ ಅವನ ಬದುಕೂ ಸುಧಾರಿಸತೊಡಗಿತು ಎಂದು ಜನ ಹೇಳುತ್ತಿದ್ದರು. ತೀರ ಸಣ್ಣಸಣ್ಣ ವಿಷಯಕ್ಕೂ ಪೊಲೀಸು, ಮುಖ್ಯಮಂತ್ರಿಗಳ ಹತ್ರನೇ ಹೋಗುತ್ತೇನೆಂದು ಹೇಳುತ್ತಿದ್ದ ವೆಂಕಟ್ರಮಣ ನಿಜಕ್ಕೂ ಒಂದುದಿನ ತಹಶೀಲ್ದಾರರ ಬಳಿ ಹೋಗುವ ಪ್ರಸಂಗ ಬಂದುಬಿಡ್ತು.

ಅವತ್ತು ಬೆಳಗ್ಗೆಬೆಳಗ್ಗೆನೇ ಅವನಿಗೆ ಸಿಟ್ಟು ಬಂದುಬಿಟ್ಟಿತ್ತು. ಕೈಯಲ್ಲಿ ಒಂದು ಪತ್ರ ಹಿಡಿದುಕೊಂಡು ಸೀದಾ ತಹಸೀಲ್ದಾರ ಕಚೇರಿಯ ಮುಂದೆ ಹೋದಾಗ ಕಚೇರಿಯ ಬಾಗಿಲಿನ್ನೂ ತೆರೆದಿರಲಿಲ್ಲ. ಅಲ್ಲೇ ಕಟ್ಟೆಯಮೇಲೆಯೇ ಕುಳಿತ; ಯಾರಾದರೂ ಬರುತ್ತಾರಾ ಎಂದು. ವಿಷಯ ಇಷ್ಟೆ. ಅವನ ಬಳಿ ಒಂದು ಬಂದೂಕು ಇತ್ತು. ಅದನ್ನು ರಿನಿವಲ್ ಮಾಡಿಸಬೇಕಾಗಿತ್ತು. ರಿನೆವಲ್ ಗೆಂದು ಕಚೇರಿಗೆ ಹೋಗಿ ಕೊಟ್ಟಾಗ ಅದು ಕಡೆಯ ದಿನಾಂಕವಾಗಿತ್ತು. ಇವನಿಗಿನ್ನು ಹೇಳಿದರೆ ರಂಪ ಮಾಡುತ್ತಾನೆಂದು ಅವರು ಸುಮ್ಮನೆ ಇಟ್ಟುಕೊಂಡಿದ್ದರು. ಕೊಟ್ಟು ತುಂಬ ದಿವಸಗಳ ನಂತರ, “ರಿನಿವಲ್ ಮಾಡಲು ನಿಮ್ಮ ಸಮಯ ಮುಗಿದು ಹೋಗಿದೆ. ಅದಕ್ಕೆ ನಿಮ್ಮ ಬಂದೂಕಿನ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿದೆ” ಎಂದು ಅವರೊಂದು ಪತ್ರ ಬರೆದರು. ಅದನ್ನು ನೋಡಿದವನೇ ಸಿಟ್ಟುಬಂದು ಆ ಪತ್ರವನ್ನೂ ಹಿಡಿದುಕೊಂಡು ಕಚೇರಿಗೆ ಹೋದ. ಕಚೇರಿಯ ಗುಮಾಸ್ತ ನಾರಾಯಣ ಕಟ್ಟೆಯ ಮೇಲೆ ಕುಳಿತ ವೆಂಕಟ್ರಮಣನನ್ನು ದೂರದಿಂದಲೇ ನೋಡಿ, ಇವತ್ತೇನೋ ಗ್ರಹಚಾರ ಕಾದಿದೆ ಎಂದು ಅಂದುಕೊಂಡೇ, “ಏನ್ ಹೆಗಡೇರೆ… ರಾತ್ರಿಯೂ ಇಲ್ಲೇ ಉಳಕಂಡಹಾಗಿದೆ…” ಎಂದು ಸ್ವಲ್ಪ ಗೌರವ ಮಿಶ್ರಿತ ಧ್ವನಿಯಲ್ಲಿ ಎನ್ನುತ್ತಿದ್ದಂತೆ, “ಮತ್ತೆ… ನೀವು ಮಾಡುವ ಉಪದ್ವ್ಯಾಪತನಕ್ಕೆ ಇನ್ನೇನು ಮಾಡಕಾಗುತ್ತದೆ ನಾರಾಯಣಾ… ಅದ್ಹೆಂಗೆ ಇವರು ನನ್ನ ಬಂದೂಕಿನ ಲೈಸೆನ್ಸ್ ರದ್ದುಪಡಿಸ್ತಾರೆ…” ಎಂದು ಜೋರಾಗಿ ಕೇಳಿದ ರಭಸಕ್ಕೇ ನಾರಾಯಣನಿಗೆ ಅರ್ಥವಾಗಿಹೋಯಿತು, ಇವನಿಗೆ ಸಿಟ್ಟುಬಂದಿದೆ ಎಂದು. ಅಷ್ಟೊತ್ತಿಗೆ ತಹಶೀಲ್ದಾರರ ಸೆಕ್ರೆಟರಿ ಬಂದದ್ದನ್ನು ನೋಡಿ ವೆಂಕಟ್ರಮಣ, ‘ಅಲ್ಲ ಸ್ವಾಮಿ, ಅದ್ಹೆಂಗೆ ಸ್ವಾಮಿ ನೀವು ಲೈಸೆನ್ಸ್ ರದ್ದುಪಡಿಸ್ತೀರಿ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ನಿಮಗೆ ಹೇಳದೇ ಕೇಳದೆ ರದ್ದುಪಡಿಸುವ ಅಧಿಕಾರ ಕೊಟ್ಟೋರ್ಯಾರು..?’ ಎಂದು ಜೋರಾಗಿ ಕೇಳುತ್ತ ಅವರ ಹಿಂದೆಯೇ ಒಳಗೆ ಹೋದ. ಅಲ್ಲಿಯೇ ಇದ್ದ ಅಟೆಂಡರ್ ನಾರಾಯಣ, “ಸರ್ ಸ್ವಲ್ಪ ನಿಲ್ಲಿ…. ಅದು…” ಎಂದೇನೋ ಹೇಳಲು ಬಂದವನಿಗೆ, “ನೋಡು ನಂಗೆ ನೀನು ಸರ್… ಗಿರ್.. ಅಂತೆಲ್ಲ ಕರೀಬೇಡ. ನಾ.. ಮೋಟು ಪಂಚೆಯವನೇಯ. ಆದ್ರೆ ನಂಗೂ ಕಾನೂನು ಗೊತ್ತದೆ. ಇದ್ನ ಇಲ್ಲಿಗೇ ಬಿಡುವವನಲ್ಲ ನಾನು. ನಾನು ಎಸಿಗೊಂದು, ಡಿಸಿಗೊಂದು, ಮುಖ್ಯಮಂತ್ರಿಗೊಂದು ಪತ್ರ ಬರೀತೇನೆ… ಎಲ್ಲಿ ನಿಮ್ಮ ತಹಸೀಲ್ದಾರ… ಅವರಿಗೂ ಹೇಳೋವನೇಯ. ನಂಗೆಂತ ಹೆದ್ರಿಕೆ…” ಎಂದು ಜೋರು ಮಾಡುತ್ತಿರುವವನನ್ನು ಸೆಕ್ರೆಟರಿ ಕೂರಿಸಿ ಸಮಾಧಾನಪಡಿಸಿ ಇನ್ನೊಂದು 15 ದಿವಸ ಬಿಟ್ಟು ಬನ್ನಿ ಹೆಗಡೇರೆ.. ರಿನಿವಲ್ ಮಾಡ್ಸಿಕೊಡ್ತೇನೆ ಎಂದು ಹೇಳಿಕಳುಹಿಸಿದ. ಅಲ್ಲಿಂದ ಹೊರಬಿದ್ದ ವೆಂಕಟ್ರಮಣ ಊರುತುಂಬ “ತಹಶೀಲ್ದಾರ ನಾ ಕೇಳ ಪ್ರಶ್ನೆಗೆಲ್ಲ ಉತ್ತರ ಹೇಳಲಾಗದೆ ದಂಗಾಗಿ ಹೋದ” ಎಂದು ಹೇಳಿಕೊಂಡು ತಿರುಗಾಡಿದ.

ಅಷ್ಟೊತ್ತಿಗೆ ಪಕ್ಕದ ಮನೆ ಕಾಶಿ ಮಾಣಿ ಹೌದು, ರಾಶಿ ಜನ ಸಂತಾಪ ಸೂಚಿಸಿದ್ದ ಎನ್ನುವಷ್ಟರಲ್ಲಿ “ಬರೇ ಸಂತಾಪ ಅಲ್ದೋ ಮಾರಾಯ.. ದಿಗ್ಭ್ರಮೆನೇ ವ್ಯಕ್ತಪಡಿಸಿದ್ವೋ…” ಎಂದು ಅವನ ಮಾತನ್ನು ಸರಿಪಡಿಸುವಂತೆ ಹೇಳಿದ ವೆಂಕಟ್ರಮಣ. ಆಗಲೂ ಎಲ್ಲರೂ ಸುಮ್ಮನಿದ್ದರು. ಹೀಗೆ ಯಾವ ವಿಷಯ ತಂದರೂ, ಸುತ್ತಿಬಳಸಿ ಅವ ದಿಗ್ಭ್ರಮೆ ಪದಕ್ಕೇ ಬರುತ್ತಿದ್ದ.

ಇಂಥ ದಿಗ್ಭ್ರಮೆ ವೆಂಕಟ್ರಮಣ ಒಮ್ಮೆ ಕೋರ್ಟ್ಗೆ ಹೋಗುವ ಪ್ರಸಂಗ ಬಂದುಬಿಡ್ತು. ಅದು ಹೇಗೆಂದರೆ ಊರಲ್ಲಿದ್ದ ಒಂದೇ ಒಂದು ಗಿರಣಿಯ ಯಜಮಾನ ವಿಠೋಬರಾಯನಿಂದ ವೆಂಕಟ್ರಮಣನಿಗೆ ಮೋಸವಾಗಿತ್ತು. ಈ ವಿಠೋಬರಾಯ ಜಿಪುಣಾಂದರೆ ಜಿಪುಣ. 10 ಕೆ.ಜಿ ಭತ್ತ ಕೊಟ್ಟರೆ ಎಂಟೇ ಕೆಜಿ ಅವಲಕ್ಕಿ ಅವನ್ಹತ್ರ ಬರೋದು. ಯಾರೊಬ್ಬರು ಕೊಟ್ಟರೂ 2-3 ಕೆಜಿ ಒಳಹಾಕಿಬಿಡುತ್ತಿದ್ದ. ಹೀಗೆ ಒಳ ಹಾಕಿಕೊಂಡೇ ದೊಡ್ಡವಾಗಿದ್ದು ಎಂಬ ಕುಖ್ಯಾತಿ ಅವನಿಗಿತ್ತು. ಇದರ ಜೊತೆಗೆ ಬೇರೆಯವರೆಲ್ಲ ದಡ್ಡರು, ತಾನು ಮತ್ತು ತನ್ನ ಮಕ್ಕಳು ಮಾತ್ರ ಬುದ್ಧಿವಂತರು ಅವನ ದೃಷ್ಟಿಯಲ್ಲಿ. ಮಿಲ್ ನ ಪಕ್ಕದಲ್ಲಿಯೇ ಅವನ ಮನೆ. ಅವನಿಗೂ ಇಬ್ಬರು ಮಕ್ಕಳು. ಒಂದು ಇನ್ನೂ 4 ವರ್ಷದ ಮಗು. ಇನ್ನೊಂದು ಶಾಲೆಗೆ ಹೋಗುತ್ತಿತ್ತು. ಅವನ ಮನೆಯಲ್ಲಿ ಅವನ ವಯಸ್ಸಾದ ಅಪ್ಪ-ಅಮ್ಮ, ಅವನ ತಮ್ಮಂದಿರು ಇರುತ್ತಿದ್ದರು. ತಲೆತಲಾಂತರದಿಂದ ಬಂದ ಅಂಗಡಿ ಮತ್ತು ಈ ಮಿಲ್ಲನ್ನು ಇವ ನೋಡಿಕೊಳ್ಳುತ್ತಿದ್ದ. ಇಲ್ಲಿಗೆ ಅಕ್ಕಿಹಿಟ್ಟು, ಗೋಧಿ ಹಿಟ್ಟು, ಅವಲಕ್ಕಿ, ಅರಳುಗಳನ್ನು ಮಾಡಿಸಲು ಬಂದವರು ಅಲ್ಲೇ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತ ನಿಲ್ಲುತ್ತಿದ್ದರು.

ಒಮ್ಮೆ ಹೀಗಾಯಿತು. ಹಳತಕಟ್ಟಾದ ಸುಜಾತಕ್ಕ ತನ್ನ ಚಿಕ್ಕ ಮಗನನ್ನು ಕರೆದುಕೊಂಡು ಚಕ್ಕುಲಿ ಹಿಟ್ಟು ಮಾಡಿಸಲು ಮಿಲ್ಲಿಗೆ ಬಂದವಳು, ವಿಠೋಬನ ಹೆಂಡತಿ ಜಾನಕಿ ಜೊತೆ ಮಾತಾಡುತ್ತಿರುವಾಗ ಸುಜಾತಕ್ಕಳ ಮಗ ಜೋರಾಗಿ ಶಬ್ದ ಮಾಡುತ್ತ ಇಡೀ ಮನೆ ಓಡಾಡತೊಡಗಿದ. “ಏಯ್ ಮಾಣಿ, ಸುಮ್ನಿರು.. ನಮ್ಮನೆ ರಾಯರು ಮಲಗಿದ್ದಾರೆ ಗೊತ್ತಾಗುದಿಲ್ಲ ನಿನಗೆ” ಎಂದು ಬೈದ. ಅದನ್ನು ಕೇಳಿಸಿಕೊಂಡ ಸುಜಾತ, ರಾಯರಾ… ಯಾರು..? ಎಂದು ಕೇಳಿದ್ದಕ್ಕೆ ಜಾನಕಿ, ಅದಾ… ನನ್ನ ಎರಡನೇ ಮಗ ಎಂದು ಮಲಗಿರುವ ಪುಟ್ಟ ಮಗುವನ್ನು ತೋರಿಸಿದಳು.

ಅಂದರೆ ಅವನಿಗೆ ಬೇರೆಯವರನ್ನು ಗೌರವಿಸಿಯೇ ಗೊತ್ತಿಲ್ಲ. ಒಮ್ಮೆ ಮಿಲ್ ಗೆ ಅಕ್ಕಿ ಮಾಡಿಸಲು ಬಂದ ಹೆಗಡೇರ ಹತ್ರ, “ಏನ್ ಹೆಗಡೇರೆ ನಿಮ್ಮನೆ ಹುಡುಗ ಒಬ್ಬ ತಹಶೀಲ್ದಾರ ಆಗಿದ್ದಾನಂತಲ್ಲ… ಮತ್ತೊಬ್ಬ ಐಎಎಸ್ ಮಾಡಿದ್ದಾನಂತಲ್ಲ” ಎಂದು ಕೇಳಿದ. ಹೆಗಡೇರು ಹೌದೆಂದು ತಲೆ ಅಲ್ಲಾಡಿಸಿ, “ನಿಮ್ಮ ತಮ್ಮಂದಿರು ಏನು ಮಾಡ್ತಿದ್ದಾರೆ ವಿಠೋಬ್ ರಾಯರೇ…” ಎಂದು ಕೇಳಿದರು. ಅದಕ್ಕೆ ವಿಠೋಬ “ನಮ್ಮನೆ ದೊಡ್ಡ ರಾಯರು…” ಎಂದ ತಕ್ಷಣ ಯಾವುದೋ ದೊಡ್ಡ ನೌಕರಿಯಲ್ಲಿರಬೇಕು ಇವರ ತಮ್ಮ ಎಂದು ನಾವೇನಾದರೂ ಕಿವಿ ನೆಟ್ಟಗೆ ಮಾಡಿಕೊಂಡು ಕೇಳಿದರೆ ನಮ್ಮಂಥ ದಡ್ಡರು ಬೇರೆ ಯಾರೂ ಇರುವುದಿಲ್ಲ. “ನಮ್ಮನೆ ದೊಡ್ಡ ರಾಯರು ಅಂಕೋಲೆಯಲ್ಲಿ ಹೋಟೆಲ್ನಲ್ಲಿ ಬಿಲ್ ಬರೆಯೋ ಕೆಲಸಕ್ಕಿದ್ದಾನೆ, ಒಳ್ಳೆ ಕಮಾಯಿ ಇದೆ ಅವನಿಗೆ, ಸಣ್ಣರಾಯರದ್ದು ಪಿಯುಸಿಯಲ್ಲಿ 2 ವಿಷಯ ಹೋಗ್ಬಿಟ್ಟಿದೆ… ಈಗ ನಮ್ಮ ಅಂಗಡಿ ನೋಡ್ಕೋತಾ ಇದ್ದಾನೆ” ಎಂದ. ಬೇರೆಯವರು ಎಷ್ಟೇ ದೊಡ್ಡ ನೌಕರಿಯಲ್ಲಿದ್ದರೂ, ಎಷ್ಟೇ ಓದಿದ್ದರೂ ಅವನ ದೃಷ್ಟಿಯಲ್ಲಿ ಅವರೆಲ್ಲ ಮಾಣಿ ಅಥವಾ ಹುಡುಗರಾಗಿಯೂ, ಇವನ ಮಕ್ಕಳು, ತಮ್ಮಂದಿರು ಮಾತ್ರ ರಾಯರು ಆಗಿಬಿಡ್ತಾ ಇದ್ದರು. ಹೀಗಾಗಿ ಅವ ಬಂದ ಕೂಡ್ಲೇ “ಏನ್ ರಾಯರೇ…” ಎಂದು ಎಲ್ಲ ತಮಾಷೆ ಮಾಡ್ತಾ ಇದ್ದರು. ಹೀಗೆ ಸದಾ ನಗೆಪಾಟಲಿಗೆ ಗುರಿಯಾಗುವ ವಿಠೋಬನಿಗೂ, ಸದಾ ತಮಾಷೆಯ ವಸ್ತುವಾಗಿರುವ ದಿಗ್ಭ್ರಮೆ ವೆಂಕಟ್ರಮಣನಿಗೂ ಮಾರಾಮಾರಿ ಶುರುವಾಗಿದ್ದು ಅವಲಕ್ಕಿ ವಿಷಯಕ್ಕೆ.
ಅವತ್ತು ವೆಂಕಟ್ರಮಣ ವಿಠೋಬನ ಮಿಲ್ಲಿಗೆ 20 ಕೆಜಿ ಭತ್ತ ತಗಂಡು ಹೋಗಿ ಅವಲಕ್ಕಿ ಮಾಡಿಸಲು ಕೊಟ್ಟ. ಅವಲಕ್ಕಿ ಮಾಡಿಸಿದ ಮೇಲೆ ನೋಡ್ತಾನೆ, 4 ಕೆಜಿ ಕಡಿಮೆಯಾಗ್ಬಿಟ್ಟಿದೆ. ನೋಡಿ ಇವನಿಗೆ ನಖಶಿಖಾಂತ ಉರಿದು ಹೋಯಿತು. “ಏನ್.. ವಿಠೋಬಾ… ಎನ್ನ ಅವಲಕ್ಕಿ ತಿಂದಿದೀಯ ನೀನು. 20 ಕೆಜಿ ಭತ್ತದಲ್ಲಿ 4 ಕೆಜಿ ಹ್ಯಾಂಗ್ ಕಡಿಮೆ ಬರ್ತದೆ” ಎಂದು ನಡುಗುತ್ತಲೇ ಕೇಳಿದ.

ವಿಠೋಬನಿಗೆ ಇವ ಕೇಳಿದ ರೀತಿಗೇ ಸಿಟ್ಟು ನೆತ್ತಿಗೇರಿ, “ಅದ್ಹೆಂಗೆ ಅಂದ್ರೆ ಹಂಗೇಯ. 30 ವರ್ಷದಿಂದ ಇದೇ ಕೆಲ್ಸ ಮಾಡಕ್ಯಂಡು ಬರ್ತಿದ್ದೇನೆ. ಯಾರೋಬ್ಬರೂ ಹೀಗೆ ಹೇಳ್ಳಿಲ್ಲ. ಆ ಸಾಯಿಬಾಬನ ಮೇಲಾಣೆ, ರಾಘವೇಂದ್ರ ಸ್ವಾಮಿಯ ಮೇಲಾಣೆ, ನೀ ಒಬ್ಬವನೇ ಕಡಿಮೆ ಬಂದಿದೆ ಎಂದು ಹೇಳಿ ನನ್ನ ಮಾನ ಮರ್ಯಾದಿ ತೆಗೀತಿದ್ದೀಯ” ಎಂದು ಪ್ರಪಂಚದಲ್ಲಿರುವ ಎಲ್ಲಾ ದೇವರು, ಸ್ವಾಮಿಗಳ ಮೇಲೆಲ್ಲ ಆಣೆ ಇಟ್ಟು ಹೇಳಿದ.  ಹೀಗೆ ಇಬ್ರಿಗೂ ಜಗಳ ಏರಿದಾಗ ವೆಂಕಟ್ರಮಣನಿಗೆ ನಿಜಕ್ಕೂ ದಿಗ್ಭ್ರಮೆನೇ ಆಗಿಬಿಡ್ತು. ಎಲಾ ಇವನಾ… ಇಷ್ಟೆಲ್ಲ ಕಬಳಿಸ್ತಾನಾ ಇವನು ಎಂದು ಸಿಟ್ಟುಬಂದು, ಹೇಗಾದ್ರೂ ಮಾಡಿ ಇವನನ್ನು ಬಗ್ಗಿಸಲೇಬೇಕೆಂಬ ಹಠಕ್ಕೆ ಬಂದು, “ಹಂಗಾರೆ ನಾನು ಕೋರ್ಟಿಗೆ ಹೋಗ್ತೆನೆ, ಪೊಲೀಸಿಗೆ ದೂರು ಕೊಡ್ತೇನೆ” ಎಂದ. ಇವ ಅಷ್ಟೆಲ್ಲ ದೂರ ಹೋಗ್ಲಿಕ್ಕೆಲ್ಲ ಎಂದು ಭಾವಿಸಿದ ವಿಠೋಬ, ಹೋಗು.. ಎಂದುಬಿಟ್ಟ. ಹೀಗೆಂದ ವಿಠೋಬನ ಮಾತಿಗೆ ಉರಿಹತ್ತಿ ಅವಲಕ್ಕಿ ಚೀಲ ಹಿಡಿದುಕೊಂಡೇ ಪೊಲೀಸ್ ಸ್ಟೇಷನ್ಗೆ ಹೋಗಿ ದೂರು ಕೊಟ್ಟೇಬಿಟ್ಟ ವೆಂಕಟ್ರಮಣ. ತನ್ನ 20 ಕೆಜಿ ಬತ್ತದಲ್ಲಿ 4 ಕೆಜಿಯನ್ನು ವಿಠೋಬ ನುಂಗಿದ್ದಾನೆ. ನನಗೆ 16 ಕೆಜಿ ಅವಲಕ್ಕಿ ಮಾತ್ರ ಕೊಟ್ಟಿದಾನೆ, ನನಗೆ ನ್ಯಾಯ ಕೊಡಿಸಿ ಎಂದು.

ಎಲ್ಲವನ್ನೂ ಪರಿಶೀಲಿಸಿದ ಪೊಲೀಸ್ ಇನ್ಸ್ಪೆಕ್ಟರ್, ವಿಠೋಬನನ್ನೂ ಸ್ಟೇಷನ್ಗೆ ಕರೆಸಿದರು. “ಭತ್ತ ಇದ್ದದ್ದೇ ಅಷ್ಟು. ನಾ ಏನ್ಮಾಡ್ಲಿ, ಎಂತ ಮಷಿನ್ನೇ ತಿಂದು ಹಾಕ್ತದಾ…” ಎಂದು ಕೇಳಿದ ವಿಠೋಬ. ಹೀಗೆ ಇಬ್ಬರ ಜಗಳ ಜಗ್ಗಾಟ ತಿಂಗಳುಗಟ್ಟಲೆ ಹಿಡಿಯಿತು. ಯಾರೊಬ್ಬರೂ ಬಗ್ಗುತ್ತಿಲ್ಲ. ಅಷ್ಟೊತ್ತಿಗೆ ವಿಷಯ ಊರವರಿಗೆ ತಿಳಿದು, ಒಬ್ಬೊಬ್ಬರು ತಲೆಗೊಂದರಂತೆ ಇವರಿಗೆ ಬುದ್ಧಿ ಹೇಳತೊಡಗಿದರು. ಇವನಿಗೆ ಸುಮ್ಸುಮ್ನೆ ತನ್ನ 4 ಕೆಜಿ ಅವಲಕ್ಕಿ ಕಳೆದುಕೊಳ್ಳಲು ಇಷ್ಟವಿಲ್ಲ. ಅಲ್ಲದೆ ಈಗ ಪೊಲೀಸ್ ವರೆಗೆ ಹೋಗಿಯಾಗಿದೆ. ಏನೊಂದೂ ಬಗೆಹರಿತಿಲ್ಲ, ಇನ್ನು ಹೀಗೇ ಇದ್ದರಾಗುವುದಿಲ್ಲವೆಂದು ತಿಳಿದ ವೆಂಕಟ್ರಮಣನಿಗೆ ಇದು ಮರ್ಯಾದೆಯ ಪ್ರಶ್ನೆಯಾಗಿ ಏನು ಮಾಡುವುದೆಂದು ಎಲೆ ಅಡಿಕೆ ಹಾಕುತ್ತ ಯೊಚಿಸತೊಡಗಿದ. “ಈ ಪೊಲೀಸು ಗೀಲೀಸು ಎಲ್ಲ ನಮಗೆಂತಕ್ಕೆ ಬಿಟ್ಬಿಡಿ” ಎಂದು ಕಂಬದ ಮರೆಯಲ್ಲೇ ನಿಂತು ಹೇಳಿದ ಹೆಂಡತಿಗೆ, “ಅಲ್ಲಿ ಒಲೆಮೇಲೆ ಹಾಲಿಟ್ಟಿದ್ಯಾ ನೋಡು. ಗಂಡಸರ ವಿಷಯಕ್ಕೆಲ್ಲ ತಲೆಹಾಕಡ” ಎಂದು ಸಿಡುಕಿ ಮತ್ತೊಂದು ಹಾಸು ಸುಣ್ಣ ಹಚ್ಚಿಕೊಂಡ ಎಲೆ ಚೂರನ್ನು ಬಾಯಿಗೆಸೆದುಕೊಂಡು.

ಇನ್ನು ಈ ಪೊಲೀಸು, ಕೋರ್ಟ್ನಿಂದೇನೂ ಪ್ರಯೋಜನವಿಲ್ಲವೆಂದು ಏನೋ ಹೊಳೆದು ಅಲ್ಲಿಂದೆದ್ದು ಒಂದು ತೆಂಗಿನ ಕಾಯಿ ಹಿಡಿದುಕೊಂಡು ಮಿಲ್ ಹತ್ರ ಹೋದ. ಇವನನ್ನು ನೋಡಿಯೂ ನೋಡದವನಂತಿದ್ದ ವಿಠೋಬನಿಗೆ ತೋರಿಸಿ, “ನೋಡು, ನನ್ನ ಅವಲಕ್ಕಿ ವಾಪಾಸು ಕೊಡದಿದ್ದರೆ ನಾನು ಕಾಳಮ್ಮನಗುಡಿಗೆ ಹುಯಿಲು ಕೊಡ್ತೇನೆ” ಎಂದುಬಿಟ್ಟ. (ಹುಯಿಲು ಎಂದರೆ ಹರಕೆ ಎಂದರ್ಥ). ವೆಂಕಟ್ರಮಣ ಬಂದ ರೀತಿ, ಅವ ಕಾಯಿ ಹಿಡಿದ ರೀತಿ ನೋಡಿ ಭಯವಾದರೂ ತೋರಗೊಳ್ಳದೆ “ಆಯಿತು ಕೊಡು. ನಾನೂ ಕೊಡ್ತೇನೆ” ಎಂದರೂ ಯಾಕೋ ವಿಠೋಬ ಸ್ವಲ್ಪ ಡೌನ್ ಆದ. ಅಲ್ಲೆಲ್ಲ ಕಾಳಮ್ಮನ ಗುಡಿ ಭಾಳ ಪ್ರಸಿದ್ಧಿ ಪಡೆದಿತ್ತು. ಕಾಳಮ್ಮನ ಗುಡಿಯ ಎದುರು ನಿಂತು ತೆಂಗಿನ ಕಾಯಿ ಹಿಡಿದು ನಾ ಸತ್ಯವೇ ಆದರೆ ಇದ್ನ ಸರಿಮಾಡು ಎಂದೆಲ್ಲ ಹರಕೆ ಹೇಳಿಕೊಳ್ಳುತ್ತಿದ್ದರು. ಹಾಗೆ ಹುಯಿಲು ಹೇಳಿಕೊಂಡ ನಂತರ, ಅವ ಸತ್ತ, ಇವ ಬಿದ್ದ, ಕಾಲು ಮುರಕೊಂಡ, ಇವರಮನೆ ಒಡೆದು ಚೂರಾಗಿ ಹೋಯತ್ತು… ಎಂಬ ಕತೆಗಳು ತುಂಬ ಇದ್ದವು. ಹಾಗಾಗಿ ಕಾಳಮ್ಮ ಎಂದರೆ ಭೀತಿ ಹುಟ್ಟಿಸೋ ಥರ ಆಗಿತ್ತು ಬಹುತೇಕರಿಗೆ. ಅದಕ್ಕೆ ವಿಠೋಬನಿಗೂ ಭಯ ಶುರುವಾಗಿ, ತನ್ನ ಹೆಂಡತಿ, ಮಕ್ಕಳು, ಸಣ್ಣದೊಡ್ಡ ರಾಯರುಗಳೆಲ್ಲ ನೆನಪಿಗೆ ಬಂದು… ಸುಮ್ಮನಾಗಿ, “ಆಯ್ತು ಬಿಡಪ್ಪ, ನಮ್ಮನಮ್ಮಲ್ಲೆಂತಕ್ಕೆ ಜಗಳ.. ಇದು ನನ್ನ ಭತ್ತ. ಅದರಿಂದಲೇ ನಿಂಗೆ ಅವಲಕ್ಕಿ ಮಾಡಿಸಿಕೊಡ್ತೇನೆ” ಎಂದ. ವಿಠೋಬ ದಾರಿಗೆ ಬಂದ ಎಂದೆನಿಸಿ ಒಳಗೊಳಗೇ ಖುಷಿಯಾದರೂ ತೋರಗೊಡದೆ, “ನೋಡು ನಂಗೆ ನಿನ್ನದು ಬೇಡ. ನಾ ಕೊಟ್ಟ ಭತ್ತವೇ ಬೇಕು” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ. ಅವ ಕೊಟ್ಟ ಭತ್ತವನ್ನೇ ಕೊಡುತ್ತೇನೆಂದರೆ ತಾನು ಕದ್ದಿದ್ದು ಸಾಬೀತಾಗಿಬಿಡುತ್ತದೆ. ಕೊಡುವುದಿಲ್ಲವೆಂದರೆ ಇವ ಬಿಡುವುದಿಲ್ಲ ಏನು ಮಾಡಬೇಕೆಂಬ ಸಂದಿಗ್ಧತೆಯಲ್ಲಿರುವಾಗ… ಅವನ ಮಿಲ್ ನಲ್ಲಿ ಲೆಕ್ಕ ಬರೆಯುವ ರಾಮಚಂದ್ರ ಭಟ್ಟರು “ಏ… ಯಂಟ್ರಮಣ, ಮತ್ತೆಂತದಾ ನಿಂದು ತಕರಾರು. ಅವ ಕೊಡ್ತಿ ಅಂದಮೇಲೆ ಮುಗತ್ತು, ಸುಮ್ಮಂಗೆ ತಗ” ಎಂದು ಎಲೆ ಅಡಿಕೆ ಹಾಕಿದ ಕೆಂಪಗಿನ ರಸವನ್ನು ಉಗುಳುತ್ತ ಹೇಳಿ ಆ ಜಗಳ ಸುಧಾರಿಸಿದರು. ಇತ್ತ ವಿಠೋಬ “ಭಟ್ರೆ ನೀವಂದ್ರೆ ಒಂಥರದ ವಕೀಲರ್ರ ಹಾಗೇಯೇ. ನಿಮ್ಮ ಮೇಲಿನ ಗೌರವದಿಂದ ಕೊಟ್ಟೆ” ಎಂದು ದೇಶಾವರಿ ನಗೆ ನಗುತ್ತ ಹೇಳಿದರೂ ಅಸಲಿ ಹಕೀಕತ್ತು ಬೇರೆಯದೇ ಇತ್ತು.

“ನಮ್ಮನೆ ದೊಡ್ಡ ರಾಯರು ಅಂಕೋಲೆಯಲ್ಲಿ ಹೋಟೆಲ್ನಲ್ಲಿ ಬಿಲ್ ಬರೆಯೋ ಕೆಲಸಕ್ಕಿದ್ದಾನೆ, ಒಳ್ಳೆ ಕಮಾಯಿ ಇದೆ ಅವನಿಗೆ, ಸಣ್ಣರಾಯರದ್ದು ಪಿಯುಸಿಯಲ್ಲಿ 2 ವಿಷಯ ಹೋಗ್ಬಿಟ್ಟಿದೆ… ಈಗ ನಮ್ಮ ಅಂಗಡಿ ನೋಡ್ಕೋತಾ ಇದ್ದಾನೆ” ಎಂದ. ಬೇರೆಯವರು ಎಷ್ಟೇ ದೊಡ್ಡ ನೌಕರಿಯಲ್ಲಿದ್ದರೂ, ಎಷ್ಟೇ ಓದಿದ್ದರೂ ಅವನ ದೃಷ್ಟಿಯಲ್ಲಿ ಅವರೆಲ್ಲ ಮಾಣಿ ಅಥವಾ ಹುಡುಗರಾಗಿಯೂ, ಇವನ ಮಕ್ಕಳು, ತಮ್ಮಂದಿರು ಮಾತ್ರ ರಾಯರು ಆಗಿಬಿಡ್ತಾ ಇದ್ದರು. ಹೀಗಾಗಿ ಅವ ಬಂದ ಕೂಡ್ಲೇ “ಏನ್ ರಾಯರೇ…” ಎಂದು ಎಲ್ಲ ತಮಾಷೆ ಮಾಡ್ತಾ ಇದ್ದರು.

ಹೀಗೆ ಇದರಲ್ಲಿ ಯಶಸ್ವಿಯಾಗಿ, ಅವರಿವರಿಗೆ ಜಬರದಸ್ತುಮಾಡಿಕೊಂಡು, ತಮಾಷೆಗೊಳಗಾಗುತ್ತಲೇ ಇರುವ ಈ ದಿಗ್ಭ್ರಮೆ ವೆಂಕಟ್ರಮಣನ ಬದುಕಲ್ಲಿ ನಿಜಕ್ಕೂ ದಿಗ್ಭ್ರಮೆಯಾಗುವಂಥ ದಿನವೊಂದು ಬಂತು. ಅದೆಂದರೆ ಅವನಿಗೆ ನಿಧಿ ಸಿಕ್ಕಿದ್ದು.  ಅವತ್ತು ಹೊತ್ತು ಕಂತುವ ಮೊದಲೇ ದಿಗ್ಭ್ರಮೆ ವೆಂಕಟ್ರಮಣನಿಗೆ ನಿಧಿ ಸಿಕ್ಕಿದ ಸುದ್ದಿ ಊರೆಲ್ಲ ಹರಡಿ ಕೆಲವು ಹೆಂಗಸರು ಮತ್ತು ಹುಡುಗರು ಅವನ ಮನೆಯ ಬಳಿ ಜಮಾಯಿಸಿ ಬಿಟ್ಟಿದ್ದರು. ಆಗೆಲ್ಲ ಅಲ್ಲಿ ಕೊಪ್ಪರಿಗೆ ಚಿನ್ನ ಸಿಕ್ಕಿತಂತೆ, ಇಲ್ಲಿ ಸಿಕ್ಕಿತಂತೆ ಎಂಬ ಸುದ್ದಿ ದಟ್ಟವಾಗಿತ್ತು. ಅಂಥದ್ದೇ ಸುದ್ದಿ ಈ ವೆಂಕಟ್ರಮಣನ ಕುರಿತೂ ಹಬ್ಬಿ ಎಲ್ಲರಿಗೂ ಅವನ ಬಳಿ ಇರುವ ಚಿನ್ನ ನೋಡುವ, ಅದನ್ನು ತುಂಬಿದ ಕೊಪ್ಪರಿಗೆ ನೋಡುವ ಆಸೆ. ಮೊದಲೇ ಬಡವ, ಅಂತೂ ಅವನ ಬಡತನ ಕಳದ್ಹಾಗಾತು ಎಂದು ಕೆಲವರೂ, ಒಂದೊಳ್ಳೆ ಪಂಚೆನೂ ಗತಿಇಲ್ಲದೆ ಅದೇ ಅಂಗಸ್ತ್ರಪಂಚೆಯಲ್ಲೇ ದಿನಕಳೆಯುವವ. ಈ ಹೆಂಡತಿ ಮಕ್ಕಳಿಗೆ ಸರಿಯಾಗಿ ಊಟವೂ ಇರದ ಇವನಿಗೆ ಇನ್ನು ಮುಂದಾದರೂ ಒಳ್ಳೆದಾಗಲಿ ಎಂದೂ, ಇದು ಹ್ಯಾಗೆ ಇವನಿಗೆ ಸಿಗ್ತು, ಹಂಗೆಲ್ಲ ಅದನ್ನು ಅವ ಇಟ್ಟುಕೊಳ್ಳಲು ಬರುವುದಿಲ್ಲ. ಅದನ್ನು ಸರ್ಕಾರಕ್ಕೆ ಕೊಡಬೇಕು… ಎಂದು ಕೆಲವರಿಗೆ ಹೊಟ್ಟೆಕಿಚ್ಚೂ ಆಗಿ, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಂಡು ಅವನ ಮನೆಯ ಮುಂದೆ ಜಮಾಯಿಸಿದ್ದರು. ಆದರೆ ವೆಂಕಟ್ರಮಣ ಮಾತ್ರ ಮನೆಯಲ್ಲಿರಲಿಲ್ಲ. ಅವನ ಹೆಂಡತಿ ಯಾವ ಉತ್ಸಾಹವನ್ನೂ ತೋರಿಸದೇ ಎಂತದೂ ಸಿಗಲಿಲ್ಲ. ಏನೋ ಒಂದು ಚೀಲ ಸಿಗ್ತು ಅಷ್ಟೆ. ಬಂಗಾರಿದ್ದಿಕ್ಕು ಹೇಳಿ ಮಾಡಕ್ಯಂಡಿದ್ದಷ್ಟೇಯ. ಆದ್ರೆ ಬಂಗಾರವೂ ಇಲ್ಲೆ. ಎಂತ ಖರ್ಮವೂ ಇಲ್ಲೆ ಎಂದು ಸಿಡಿಮಿಡಿಗುಡುತ್ತ ಹೇಳಿದಳು. ಇವಳು ನಮ್ಮಿಂದ ಮುಚ್ಚಿಡುತ್ತಾಳೆಂದೇ ಮಾತನಾಡಿಕೊಂಡು ಅಲ್ಲೇ ಮನೆಯ ಮುಂಬಾಗಿಲಿನ ಕಟ್ಟೆಯ ಮೇಲೆ ಕೂತರು.
ಆದರೆ ವೆಂಕಟ್ರಮಣನ ಹೆಂಡತಿ ಸಾವಿತ್ರಿಗೆ ಮಾತ್ರ ಇನ್ನಿಲ್ಲದ ಸಿಟ್ಟೂ… ದುಃಖವೂ ಒಟ್ಟಿಗೇ ಆಗಿತ್ತು. ಮುಂಚಿನ ದಿನದ ಇಂಥದ್ದೇ ಮಟಮಟ ಮದ್ಯಾಹ್ನ ವೆಂಕಟ್ರಮಣ ಓಡಿಬಂದು ಏದುಸಿರು ಬಿಡುತ್ತ ಗೂಡಿನಂತಿರುವ ದೇವರ ಮನೆಗೆ ಕರೆದುಕೊಂಡು ಹೋಗಿ, ಸೊಂಟದಲ್ಲಿ ಅಂಗವಸ್ತ್ರ ಪಂಚೆಯೊಳಗೆ ಕಟ್ಟಿಕೊಂಡಿದ್ದ ಗಂಟನ್ನು ಬಿಚ್ಚಿ ತೋರಿಸಿದ್ದ. ಕೈಚೀಲದಂತಿದ್ದ ಆ ಸಣ್ಣ ಚೀಲದಲ್ಲಿ ಒಂದಷ್ಟು ಚಿನ್ನದ ನಾಣ್ಯಗಳು, ದೊಡ್ಡ ಕಾಸಿನ ಪವನ ಸರ, ಟೀಕಿ ಸರ ಸೇರಿದಂತೆ ಹಲವು ಆಭರಣಗಳನ್ನು ಕಂಡು ಸಾವಿತ್ರಿಯ ಕಣ್ಣು ದೊಡ್ಡದಾಗಿ ಅವಳ ಕಷ್ಟಗಳೆಲ್ಲ ಆ ದೊಡ್ಡ ಕಣ್ಣಿನ ಮುಂದೆ ಕರಗಿದಂತೆನಿಸಿ ಹಾಗೆಯೇ ಕಣ್ಣುಮುಚ್ಚಿದಳು. ಆದರೆ ವೆಂಕಟ್ರಮಣ, “ನಾಳೆ ಮಠಕ್ಕೆ ಹೋಗಿ, ಗುರುಗಳ ಮುಂದೆ ಇಟ್ಟು ಆಶೀರ್ವಾದ ಪಡ್ಕಂಡು ಬರ್ತಿ…. ಅಲ್ಲಿವರೆಗೆ ಯಾರಿಗೂ ಹೇಳಡ” ಎಂದದ್ದನ್ನು ಕೇಳಿ ಸುಖದ ಸ್ವಪ್ನ ಕರಗಿದ ಸಾವಿತ್ರಿ ಸಿಟ್ಟಿನಿಂದ ಗಂಡನ ಮುಖ ನೋಡಿ, ದೈವ ತಾನಾಗಿಯೇ ಕಾಲಬಳಿ ಬಂದ್ರೆ ಒದ್ದು ಹಾಕತ್ವನು ಯಾರಾದ್ರೂ… ಸುಮ್ಮಂಗಿರಿ ಎಂದು ಗಂಟು ಕಸಿಯಲು ಮುಂದಾದಳು. ಆದ್ರೆ ವೆಂಕಟ್ರಮಣ ಅವಳ ಕೈಗೆ ಸಿಗದಂತೆ, ಅವಳನ್ನು ತಳ್ಳಿ, ಮಳ್ಳ ಎಂತದು ನಿಂಗೆ, ಗುರುಗಳಿಗೆ ಈಗ್ಲೇ ಇದೆಲ್ಲ ಗೊತ್ತಾಗಿರ್ತು, ಅವರಿಗೆ ಹೇಳದೆ ನಾವು ಇಟ್ಗಂಡ್ರೆ ಮಹಾಪಾಪ ಬರ್ತು. ಗುರುಶಾಪವಿದ್ರೆ ಬದುಕಲಾಗ್ತ. ಅವರೇನು ಇಟ್ಗತ್ರಿಲ್ಲೆ. ಅವರ ಆಶೀರ್ವಾದ ಸಿಕ್ರೆ ಸಾಕು… ಎಂದು ಹೇಳಿ ಹೊರಟ.

ವೆಂಕಟ್ರಮಣ ಏನಾದ್ರೂ ಮೆದುವಾಗುವುದಿದ್ದರೆ ಅದು ಗುರುಗಳಿಗೆ ಮಾತ್ರ. ಮಿಕ್ಕ ಯಾರಿಗೇ ಆದ್ರೂ ಅವನು ಹೆದರುವುದಿಲ್ಲ ಎಂಬುದು ಗೊತ್ತಿದ್ದ ಸಾವಿತ್ರಿ ದುಃಖದಿಂದ ಗಂಡ ಹೋಗುವ ಹಾದಿಯನ್ನೇ ನೋಡತೊಡಗಿದಳು.  ಇದಿಷ್ಟು ಬಂಗಾರವಿದ್ದಿದ್ದರೆ ಎಷ್ಟೆಲ್ಲ ಕಷ್ಟಗಳು ತೀರ್ತಾ ಇದ್ವು, ತಾನೊಂದಿಷ್ಟು ಒಳ್ಳೊಳ್ಳೆ ಸೀರೆ ತಗೋಬಹುದಿತ್ತು, ಮಕ್ಕಳಿಗೊಂದಿಷ್ಟು ಬಟ್ಟೆ ಕೊಡಿಸಿ, ಈ ಮಣ್ಣಿನ ನೆಲಕ್ಕೆ ಗಿಲಾಯ ಮಾಡ್ಸಿ ದಿನಾ ಸೆಗಣಿಯಿಂದ ಸಾರಿಸುವುದರಿಂದ ಮುಕ್ತಿ ಪಡೆಯಬಹುದಿತ್ತು ಎಂದುಕೊಂಡು ತನ್ನ ಪೋಣಿಸಿದ ಕರಿಮಣಿ ಸರವನ್ನು ಮತ್ತಷ್ಟು ಜಗ್ಗಿಕೊಂಡು, ಛೇ… ಇವ್ರಿಗೆ ಬುದ್ಧಿ ಇಲ್ಲವೆಂದು ಶಪಿಸಿದಳು. ಆ ಗುರುಗಳು ಬಂಗಾರ ಕೊಡ್ತಾರೋ… ಇಲ್ಲವೋ… ಎಂಬ ಸಣ್ಣ ಅನುಮಾನ ಅವಳಲ್ಲಿ.

ಆದರೆ ವೆಂಕಟ್ರಮಣನಿಗೆ ಮಾತ್ರ ಏನೇ ಮಾಡುವುದಿದ್ದರೂ ಗುರುಗಳ ಆಶೀರ್ವಾದವಿಲ್ಲದೆ ಮುಂದಕ್ಕೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ. ಅದಕ್ಕೆ ಕಾರಣ ಅವನ ಕಡುಬಡತನದಲ್ಲಿ ದಿಕ್ಕುದೆಸೆ ಇಲ್ಲದಿರುವಾಗ ಅವನಿಗೆ ಅಡುಗೆ ಕೆಲಸವನ್ನು ನೀಡಿದ್ದು. ಇದರಿಂದ ಅವನು ಸ್ವಲ್ಪ ಉಸಿರಾಡುವಂತಾಗಿತ್ತು. ಅಲ್ಲಿಂದ ಆತ ಏನೇ ಮಾಡುವುದಿದ್ದರೂ ಅಷ್ಟೇ ಏಕೆ ಉಚ್ಚೆ ಹೊಯ್ಯುವುದಿದ್ದರೂ ಗುರುಗಳನ್ನು ಕೇಳದೇ ಮಾಡುವವನಲ್ಲ ಅವ ಎಂದು ಅವನ ಕುರಿತು ತಮಾಷೆ ಮಾಡುತ್ತಿದ್ದರು. ಹಾಗಾಗಿ ಚಿನ್ನವನ್ನು ಮಠಕ್ಕೆ ತೆಗೆದುಕೊಂಡು ಹೋಗುತ್ತಾನೆಂದು ಜನ ಆಡಿಕೊಂಡಂತೆಯೇ ಅವ ಚಿನ್ನವನ್ನು ತೆಗೆದುಕೊಂಡು ಮನೆಯಿಂದ ಹೊರಬಿದ್ದದ್ದಂತೂ ಹೌದು. ಆದರೆ ನಂತರ ಏನಾಯಿತು ಎಂಬುದು ಯಾರಿಗೂ ತಿಳಿಯಲಿಲ್ಲ. ಸ್ವತಃ ವೆಂಕಟ್ರಮಣ ಈ ಕುರಿತು ಯಾರಲ್ಲಿಯೂ ಬಾಯಿ ಬಿಡಲಿಲ್ಲ. ಆದರೆ ತುಂಬ ದಿನಗಳ ನಂತರ ತಿಳಿದದ್ದು ಪೊಲೀಸಿನವರು ಅವನನ್ನು ಕರೆದು ವಿಚಾರಣೆ ನಡೆಸಿದರು, ಸ್ವಲ್ಪದಿನ ಜೈಲಲ್ಲೂ ಇದ್ದನೆಂಬುದು. ಅಷ್ಟೇ ಅಲ್ಲ, ಪೊಲೀಸರು ಮಠಕ್ಕೂ ಹೋಗಿದ್ದರೆಂತಲೂ ಸುದ್ದಿಯಾಯಿತು.

ಒಟ್ಟಿನಲ್ಲಿ ಮಠದ ಜೊತೆ ಏನೋ ಹೈಗೈ ಆಗಿದೆ ಎಂಬುದಂತೂ ಪಕ್ಕಾ ಆಗಿದ್ದು ಹೇಗೆಂದರೆ, ಅಷ್ಟರ ನಂತರ ವೆಂಕಟ್ರಮಣ ಮತ್ತು ಮಠದ ಸಖ್ಯ ಮಾತ್ರ ಮುಂದುವರಿಯಲಿಲ್ಲ. ಅಡುಗೆಯ ಕೆಲಸವೂ ನಿಂತು ಹೋಗಿ ಅವ ಊಟಕ್ಕೂ ಪರದಾಡುವಂತಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಅವ ಈಗ ಮೊದಲಿನ ಹಾಗೆ ಲಾ ಪಾಯಿಂಟು ಹಾಕಿ ಮಾತನಾಡುತ್ತಿರಲಿಲ್ಲ. ಸದಾ ಮಂಕಾಗಿರುತ್ತಿದ್ದ.  ಈಗಂತೂ ಹುಷಾರಿಲ್ಲದೆ ಮಲಗಿದ್ದಾನೆ. ಅವನಿಗೆ ಚಿಕಿತ್ಸೆ ಕೊಡಿಸುವುದಕ್ಕೂ ಅವನ ಮಕ್ಕಳಲ್ಲಿ ದುಡ್ಡಿಲ್ಲ. ಇವನಿಂದ ಪೊಲೀಸರು ಮಠದ ಮೆಟ್ಟಿಲು ತುಳಿಯೋ ಹಾಗಾಯ್ತು, ಹಾಗಾಗಿ ಇದು ಗುರುಗಳ ಶಾಪ ಎಂದು ಕೆಲವರೂ, ಅಷ್ಟೊಂದು ಚಿನ್ನ ಸಿಕ್ತಲ್ಲ, ಕಣ್ಣು ಬೀಳುತ್ತದೆಂದು ಅವ ಬೇಕೆಂದೇ ನಾಟಕವಾಡುತ್ತಿದ್ದಾನೆ ಎಂದೂ ಜನ ಆಡಿಕೊಂಡರು. ಆದರೆ ವೆಂಕಟ್ರಮಣ ಮಾತ್ರ ಹಾಸಿಗೆಯಿಂದ ಮೇಲೇಳಲೂ ಆಗದೆ, ಸದಾ ಶೂನ್ಯದಲ್ಲಿ ದೃಷ್ಟಿನೆಟ್ಟಿರುತ್ತಾನೆ. ಅವನ ಹೆಂಡತಿ ಮಾಸಲು ಸೀರೆಯುಟ್ಟು, ದಾರದಲ್ಲಿ ಪೋಣಿಸಿದ ಅದೇ ಕರಿಮಣಿ ಸರವನ್ನು ಹಾಕಿಕೊಂಡು ಅವನ ಸೇವೆ ಮಾಡುತ್ತಿದ್ದಾಳೆ. ಮಕ್ಕಳಿಬ್ಬರೂ ಅಲ್ಲಿ ಇಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಾರೆ.

(ಮುಂದುವರಿಯುವುದು)

About The Author

ಭಾರತಿ ಹೆಗಡೆ

ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಮೊದಲ ಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು(ಕಥಾ ಸಂಕಲನ), ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ