Advertisement
ದೇವರೇ ಬೆನ್ನಟ್ಟಿ ಬಂದಾಗ!

ದೇವರೇ ಬೆನ್ನಟ್ಟಿ ಬಂದಾಗ!

ಅದ್ಯಾವಾಗ ಹರ್ಷ ಬಾಗಿಲು ದಾಟಿದ ಸದ್ದಾಯಿತೋ ಕೋಮಲ ನಿಧಾನವಾಗಿ ಕಣ್ಣು ಬಿಟ್ಟಿದ್ದಾನೆ. ಬಿಟ್ಟವನು ತಾನು ಸಿನಿಮಾ ನೋಡಲು ಹೋಗುವುದೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಫಕ್ಕನೆ ಕರೆಂಟ್ ಹೋಗಿದೆ! ಕೂಡಲೇ ಕೋಮಲ “ನಾನೂ ಜೊತೆಗೆ ಬರುತ್ತೇನೆ” ಎಂದು ಹರ್ಷನಿಗೆ ಹೇಳುವ ಸಲುವಾಗಿ “ಹರ್ಷ., ಹರ್ಷ.,” ಎಂದಿದ್ದಾನೆ. ನೋಡಿದರೆ ಅದಾಗಲೇ ಹರ್ಷ ಜಾಗ ಖಾಲಿ ಮಾಡಿ ಆಗಿದೆ. ಒಡನೆಯೇ ಕೋಮಲನಿಗೆ ಇಡೀ ಕಟ್ಟಡದಲ್ಲಿ ಇರುವುದು ತಾನೊಬ್ಬನೇ ಎಂಬ ಹೊಳವು ಬಂದು ದಿಗಿಲಾಗಿದೆ. ಜಗದೆಲ್ಲಾ ಪುಕ್ಕಲು ತನ್ನನ್ನು ಆವರಿಸಿಕೊಂಡಂತೆ ಭಾಸವಾಗಿದೆ.
ಪೂರ್ಣೇಶ್‌ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ

ದೆವ್ವಗಳು ಮನುಷ್ಯರ ಬೆನ್ನಟ್ಟಿಸಿಕೊಂಡು ಬಂದ ಹತ್ತಾರು ಕತೆಗಳನ್ನು ಕೇಳಿ, ಓದಿ ಬಲ್ಲ ನಮಗೆ ದೇವರು ಮನುಷ್ಯರ ಬೆನ್ನಟ್ಟಿಸಿಕೊಂಡು ಬಂದ ಕಥೆಯನ್ನು ಕೇಳುವಾಗ ತುಸು ವಿಚಿತ್ರ ಎನಿಸಿ ಬಿಡಬಹುದಲ್ಲವೇ! ಹೌದು, ಅಂತಹದ್ದೇ ಒಂದು ವಿಚಿತ್ರ ಕಥೆಗೆ ನಾವುಗಳು ಸಾಕ್ಷೀಭೂತರಾಗಿದ್ದ ವಿಶೇಷ ಸನ್ನಿವೇಶವಿದು!

ಅದು ನವೋದಯ ಎಂಬ ವಸತಿ ಶಾಲೆಯಲ್ಲಿನ ನನ್ನ ಮೊದಲ ದಿನದ ರಾತ್ರಿ..! ಅಂದು ಬೆಳಿಗ್ಗೆಯಷ್ಟೇ ನಾನು ನಮ್ಮ ಬ್ಯಾಚ್‌ನ ಕೊನೆಯವನಾಗಿ ನವೋದಯ ಶಾಲೆಗೆ ದಾಖಲು ಪಡೆದಿದ್ದೆ. ಪ್ರಾಂಶುಪಾಲರು ಗೆಳೆಯ ತೇಜಸ್ವಿಯನ್ನು ಕರೆದು ಆರನೇಯ ತರಗತಿಯವರಿಗೆಂದು ಹಂಚಿಕೆ ಮಾಡಲಾಗಿದ್ದ ಕಟ್ಟಡಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನನ್ನ ಸರಕು ಸರಂಜಾಮುಗಳನ್ನೆಲ್ಲಾ ಇಟ್ಟು ಬರಲು ಕಳಿಸಿ, ನಂತರ ತರಗತಿ ಕೋಣೆಗೆ ತೆರಳಿ ಪಾಠ ಕೇಳಲು ತಿಳಿಸಿದ್ದರು.

ದಿನದ ಪಾಠಗಳೆಲ್ಲಾ ಮುಗಿದು ಸಂಜೆಯಾಗುತ್ತಲೇ ನಮ್ಮ ಹೌಸ್ ಮೇಡಂ ಆಗಮಿಸಿ ಕಟ್ಟಡದಲ್ಲಿ ನನಗೆ ಸ್ಥಳ ಹಂಚಿಕೆ ಮಾಡುವ ಅಂದರೆ ಮಂಚ ಗೊತ್ತುಪಡಿಸುವ ಪ್ರಕ್ರಿಯೆಯನ್ನು ನಡೆಸಿದ್ದರು.

ಎರಡು ಅಂತಸ್ತಿನದಾಗಿದ್ದ ಆ ಕಟ್ಟಡದ ನೆಲ ಮಹಡಿ ‘ಗರ್ಲ್ಸ್ ಡಾರ್ಮಿಟರಿ’ಯ ಹೆಸರಿನಲ್ಲಿ ಹನ್ನೆರಡನೇ ತರಗತಿಯ ಸೀನಿಯರ್ ಅಕ್ಕಂದಿರಿಗೆ ಮೀಸಲಾಗಿದ್ದರೆ, ಮೊದಲನೆಯ ಮಹಡಿ ‘ಕೆಳ ಡಾರ್ಮಿಟರಿ’ಯ ಹೆಸರಿನಲ್ಲಿ ಮತ್ತು ಎರಡನೇಯ ಮಹಡಿ ‘ಮೇಲ್ ಡಾರ್ಮಿಟರಿ’ಯ ಹೆಸರಿನಲ್ಲಿ ನಮ್ಮ ಆರನೇ ತರಗತಿಯ ಹುಡುಗರಿಗೆ ಮೀಸಲಾಗಿದ್ದವು. ಅವುಗಳ ಪೈಕಿ ಸ್ಥಳ ಲಭ್ಯತೆಯ ಆಧಾರದ ಮೇಲೆ ಕೆಳ ಡಾರ್ಮಿಟರಿಯಲ್ಲಿ ನನಗೆ ಮಂಚ ಗೊತ್ತುಪಡಿಸಿ ಸ್ಥಳ ಹಂಚಿಕೆ ಪ್ರಕ್ರಿಯೆಗೆ ಮೇಡಂ ಕೊನೆ ಸಾರಿದರು.

ಮೊದಲೇ ಮನೆಯಿಂದ ಮೊದಲ ಬಾರಿಗೆ ಎಂಬಂತೆ ದೂರ ಬಂದಿದ್ದ ನನಗೆ ಈಗ ಕೆಳ ಡಾರ್ಮಿಟರಿಯಲ್ಲಿ ನನ್ನ ಪಾಲಿಗೆ ಅಪರಿಚಿತರಾಗಿದ್ದ ಹೊಸ ಗೆಳೆಯರೊಡನೆ ವಾಸ್ತವ್ಯ ಹೂಡಲು ಅದೇನೋ ಅಭದ್ರ ಭಾವ ಕಾಡ ಹತ್ತಿತು. ಅದಕ್ಕೆಂದೇ ನನ್ನ ಹಿಂದಿನ ಶಾಲೆಯ ಗೆಳೆಯರಾಗಿದ್ದ ರವಿ ಮತ್ತು ಗಣೇಶ ಇದ್ದರೆಂಬ ಕಾರಣಕ್ಕೆ ಮೇಲ್ ಡಾರ್ಮಿಟರಿಯಲ್ಲಿ ಹೋಗಿ ವಾಸ್ತವ್ಯ ಹೂಡಿದೆ.

ರಾತ್ರಿಯಾಯಿತು.
ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ರವಿ ಮಂಚದ ಕೆಳಗೆ ಹಾಸಿಗೆ ಹಾಸಲಾರಂಭಿಸಿದ! ಉಳಿದ ಇತರರೂ ಅದೇ ಕಾರ್ಯ ಮಾಡುತಲಿದ್ದರು. ನನಗೋ ಅದು ತುಸು ವಿಚಿತ್ರ ಎನಿಸಿ ಅದರ ಬಗ್ಗೆ ವಿಚಾರಿಸಿದೆ.

ಅವನೋ ಮಂಚದ ಮೇಲೆ ಅದರಲ್ಲೂ ಕಿಟಕಿಯ ಕಡೆ ಮುಖ ಹಾಕಿ ಮಲಗಿದರೆ ಕಳ್ಳರು ಕಿಟಕಿಯಿಂದ ಕೈ ಹಾಕಿ ನಮ್ಮ ಕಣ್ಣುಗಳನ್ನು ಸುಲಭವಾಗಿ ಕಿತ್ತು ಬಿಡುತ್ತಾರೆಂದು ಹೆದರಿಸಲಾರಂಭಿಸಿದ!

ನೋಡಿದರೆ ಕಿಟಕಿಯನ್ನು ತಂತಿಯಿಂದ ಬಿಗಿದು ಭದ್ರಪಡಿಸಲಾಗಿತ್ತು. ಇದರಿಂದ ನಾನು ಕೊಂಚ ಧೈರ್ಯ ತೋರಿಸುತ್ತಾ ನೆಲದ ಮೇಲೆ ಮಲಗುವುದಕ್ಕಿಂತ ಮಂಚದ ಮೇಲೆಯೇ ಕಿಟಕಿಗೆ ವಿರುದ್ಧ ದಿಕ್ಕಿಗೆ ತಲೆ ಹಾಕಿ ಮಲಗುತ್ತೇನೆಂದು ತಿಳಿಸಿದೆ.

ಆಗ ರವಿ ಹೇಳಿದ ಕತೆಗಳು ಭಯಾನಕವಾಗಿದ್ದವು!

ರವಿ ಹೇಳಿದಂತೆ ಅಲ್ಲಿ ರಾತ್ರಿಯ ಹೊತ್ತು ಯಾರದ್ದೋ ಓಡಾಟದ ಸದ್ದು ಕೇಳಿ ಬರುತ್ತಿತ್ತು. ಸಾಲದೆಂಬಂತೆ ಒಮ್ಮೊಮ್ಮೆ ಹೆಣ್ಣಿನ ನಡಿಗೆಯ ಗೆಜ್ಜೆ ಶಬ್ದವೂ ಕೇಳಿ ಬರುತ್ತಿತ್ತು.

ಅವನ ಪ್ರಕಾರ ಅದು ಮತ್ಯಾರದ್ದೂ ಕೆಲಸ ಆಗಿರದೇ ಆ ಹೊಸ ಕಟ್ಟಡವನ್ನು ಕಟ್ಟುವಾಗ ಕಟ್ಟಡದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಹೆಂಗಸೊಬ್ಬಳದ್ದಾಗಿತ್ತು. ಆಕೆಯ ಆತ್ಮ ಮೋಹಿನಿಯಾಗಿ ಈಗ ದಿನ ರಾತ್ರಿ ಕಟ್ಟಡದ ಸುತ್ತ ಸುತ್ತುತ್ತಿರುವುದರಿಂದಲೇ ಈ ಎಲ್ಲಾ ಕಾಟ ಉಂಟಾಗುತಲಿತ್ತು!

ಅದೂ ಸಾಲದೆಂಬಂತೆ ಇಲ್ಲಿಗೆ ಬಂದ ಮೇಲೆ ಆಶ್ರಯ ನಿದ್ರೆಯಲ್ಲೇ ಒಮ್ಮೊಮ್ಮೆ ನಿದ್ರಾ ನಡಿಗೆ ಮಾಡುತ್ತಾನೆಂದೂ ಕೆಳ ಡಾರ್ಮಿಟರಿಯ ದೀಪಕ್ ಕನಸಿನಲ್ಲಿ ಮಂಚವನ್ನೇ ಎತ್ತುತ್ತಾನೆಂದೂ., ಹೀಗೆ ಏನೆನೆಲ್ಲಾ ಹತ್ತಾರು ಕತೆಗಳನ್ನು ಬಹಳ ಖಚಿತತೆಯಿಂದ ಹೇಳಿದ.

ಇಂತಹ ಹತ್ತು ಹಲವು ವಿಲಕ್ಷಣ ಕತೆಗಳನ್ನು ಏಕಕಾಲದಲ್ಲಿ ಕೇಳುತ್ತಲೇ, ಅದಕ್ಕೂ ಮಿಗಿಲಾಗಿ ಎಲ್ಲವನ್ನೂ ಖುದ್ದು ನೋಡಿದವರ ವಿಶ್ವಾಸದಲ್ಲಿ‌ ಅವನು ಅಭಿನಯ ಪೂರ್ವಕವಾಗಿ ಹೇಳಿದ ರೀತಿಯನ್ನು ನೋಡುತ್ತಲೇ ನನ್ನಲ್ಲಿದ್ದ ಕೊಂಚ ಧೈರ್ಯವೂ ಬಿಸಿಲಿಗಿಡಿದ ಐಸ್ ಕ್ಯಾಂಡಿಯಂತೆ ಕರಗಿಹೋಗಿತ್ತು.

ಸಾಲದೆಂಬಂತೆ ಮುಖವೆಲ್ಲಾ ಬೆವೆತು, ಮೈ ಕೈಗಳು ಸಣ್ಣಗೆ ಕಂಪಿಸುತಲಿದ್ದವು. ಅದರ ಪರಿಣಾಮವಾಗಿ ಮಂಚದ ಮೇಲೆ ಒಬ್ಬನೇ ಮಲಗುವ ಮಾತಿರಲಿ, ಪಕ್ಕದಲ್ಲಿ ಡಾರ್ಮಿಟರಿಗೆ ಹೊಂದಿಕೊಂಡಂತೆ ಇದ್ದ ಶೌಚಾಲಯಕ್ಕೆ ಹೋಗಿ ಬರಲೂ

“ರವಿ, ನೀನೂ ಜೊತೆಗೆ ಬಾರೋ” ಎಂದು ಕರೆಯುವಂತಾಗಿದ್ದೆ!

ಹೀಗೆ ನಾನು ನವೋದಯದಲ್ಲಿನ ನನ್ನ ಮೊದಲ ರಾತ್ರಿಯಲ್ಲಿ ಒಂದಷ್ಟು ದುಃಖ, ಮತ್ತೊಂದಷ್ಟು ಭಯ, ಮಗದೊಂದಷ್ಟು ಆತಂಕಗಳ ಮಿಶ್ರ ಭಾವವನ್ನು ಹೊದ್ದು ಮಲಗಲು ಸಿದ್ಧನಾಗಿದ್ದೆ. ಬಹಳ ಹೊತ್ತಿನವರೆಗೆ ಹಲವರು ಗೊರಕೆ ಹೊಡೆಯಲು ಆರಂಭಿಸುವವರೆಗೆ ನನಗೆ ನಿದ್ರೆ ಬಂದಿರಲಿಲ್ಲ.

ಈ ನಡುವೆ ಯಾರೋ ಓಡಾಡಿದ ಸದ್ದಾಯಿತು. ಸ್ವಲ್ಪ ಹೊತ್ತಿನ ನಂತರದಲ್ಲಿ ಗೆಜ್ಜೆ ಸದ್ದನ್ನೂ ನಾನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೆ. ಇದರಿಂದಾಗಿ ಮತ್ತಷ್ಟು ಭಯ ಭೀತನಾದೆ. ಹೇಳಿಕೊಳ್ಳಲು ಮೆತ್ತಗೆ “ರವಿ… ರವಿ…” ಎಂದೆನಾದರೂ ಪಕ್ಕದಲ್ಲಿ ಮಲಗಿದ್ದ ರವಿ ಅದಾಗಲೇ ಗೊರಕೆ ಹೊಡೆಯುತ್ತಿದ್ದ.

ಮತ್ತಿನ್ನೇನು ತಾನೇ ಮಾಡುವುದು. ಮತ್ತಷ್ಟು ಮುದುರಿಕೊಂಡು, ಮುಖದ ತುಂಬಾ ಬೆಡ್ ಶೀಟ್ ಹೊದ್ದು, ಕಣ್ಣು ಮುಚ್ಚಿ ದೇವರ ನಾಮ ಸ್ಮರಣೆ ಮಾಡುತ್ತಾ ಅಂತೂ ಇಂತೂ ನಿದ್ರೆಗೆ ಜಾರಿ ನವೋದಯದಲ್ಲಿನ ಮೊದಲ ರಾತ್ರಿಯನ್ನು ಕಳೆದಿದ್ದೆ.

ಈ ಎಲ್ಲದರ ನಡುವೆ ನಾನು ಆ ರಾತ್ರಿಯಲ್ಲಿ ಗಮನಿಸಿದ್ದೆಂದರೆ ಬಹುತೇಕರು ಮಂಚದ ಕೆಳಗೆ ಹಾಸಿಕೊಂಡು ಭಯದಲ್ಲಿ ಮುದುರಿ ಮಲಗಿರುವಾಗ ಕೋಮಲ ಎಂಬುವವನು ಮಾತ್ರ ಯಾವ ಆತಂಕವೂ ಇಲ್ಲದೇ ಹಾಯಾಗಿ ಮಂಚದ ಮೇಲೆಯೇ ಮಲಗಿ ಸುಖವಾದ ಗೊರಕೆ ಹೊಡೆಯುತಲಿದ್ದ.

ಮರು ದಿನ ಸಂಜೆ ಆಟ ಮುಗಿಸಿ, ಡಾರ್ಮಿಟರಿಗೆ ಬಂದು, ಕೈಕಾಲು ತೊಳೆದು, ಓದಲು ಕೂರ ಹೊರಟಾಗ ಹಲವರು ಪೂಜೆಯಲ್ಲಿ ತೊಡಗಿರುವುದನ್ನು ಗಮನಿಸಿದೆ.

ರಘು, ತೇಜಸ್ವಿ, ಹರ್ಷರಂತಹ ಗೆಳೆಯರು ತಾವು ತಮ್ಮ ಮಂಚದ ಬಳಿ ಅಂಟಿಸಿಕೊಂಡಿದ್ದ ದೇವರ ಪಟಗಳಿಗೆ ಊದುಬತ್ತಿ ಬೆಳಗಿ, ಕೈ ಮುಗಿದು ಹಣೆಗೆ ಕುಂಕುಮ ಇಟ್ಟುಕೊಳ್ಳುವ ಶಾಸ್ತ್ರ ಮಾಡಿದರೆ, ಮೃತ್ಯುಂಜಯ, ಸುಧೀರ, ರಾಜೇಂದ್ರರಂತಹ ಗೆಳೆಯರು ಬಿಳಿ ವಸ್ತ್ರಗಳನ್ನುಟ್ಟು, ಸಾಲಾಗಿ ಕೂತು ಸಂಧ್ಯಾ ವಂದನೆಯ ಶಾಸ್ತ್ರ ಮಾಡುತ್ತಿದ್ದರು.

ಇಲ್ಲೂ ಇವರೆಲ್ಲರನ್ನು ಮೀರಿಸಿ ವಿಶೇಷ ಗಮನ ಸೆಳೆದದ್ದು ಮತ್ತದೇ ಕೋಮಲ!

ಕೋಮಲ ಕೈ ಕಾಲು ತೊಳೆದು ಬಂದವನು ಕಾವಿ ಪಂಚೆ, ಬಿಳಿ ಬನಿಯಾನ್ ತೊಟ್ಟು, ಗಂಟೆ, ಕರ್ಪೂರ, ವಿಭೂತಿ, ಊದುಬತ್ತಿ, ಕುಂಕುಮ, ಹೂವು, ತುಳಸಿ, ಇತ್ಯಾದಿ, ಇತ್ಯಾದಿ ಒಳಗೊಂಡ ತಟ್ಟೆ, ನೀರು ತುಂಬಿದ ಮಿಳ್ಳೆ ಮುಂತಾದ ತನ್ನ ಪೂಜಾ ಸರಂಜಾಮುಗಳನ್ನೆಲ್ಲಾ ಹರಡಿಕೊಂಡು ಕೂತು, ಹಣೆಗೆ, ಕೊರಳಿಗೆ, ಮೈ ಕೈ ಗಳಿಗೆಲ್ಲಾ ವಿಭೂತಿ ಹಚ್ಚಿಕೊಂಡು, ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ತೊಟ್ಟು, ಎಡಗೈಯಲ್ಲಿ ಲಿಂಗವನ್ನಿಡಿದು ಬಲಗೈಯಲ್ಲಿ ಅದಕ್ಕೆ ಊದುಬತ್ತಿ ಬೆಳಗಿ, ಘಂಟೆ ಬಾರಿಸಿ, ಕರ್ಪೂರ ಬೆಳಗಿ “ಓಂ ಶಿವಾಯ ನಮಃ, ಓಂ ಶಿವಾಯ ನಮಃ..” ಎನ್ನುತ್ತಾ ಧ್ಯಾನಸ್ಥನಾಗಿ ಬಿಟ್ಟಿದ್ದ.

ದಿನಗಳು ಕಳೆದಂತೆ ಕೋಮಲನ ಈ ಆರಾಮದಾಯಕ ನಿದ್ರೆ, ತಪಸ್ಸುಗಳ ಜೊತೆಗೆ ಅವನ ಮತ್ತಷ್ಟು ಸಾಹಸಗಳ ಬಗ್ಗೆ ನನಗೆ ತಿಳಿಯುತ್ತಾ ಹೋಯ್ತು.

ಕೋಮಲ ಒಬ್ಬನೇ ಮಂಚದ ಮೇಲೆ ಮಲಗಲು ಹೆದರುತ್ತಿರಲಿಲ್ಲವಷ್ಟೇ ಅಲ್ಲ, ಅವನು ಶಿಕ್ಷಕರು, ಸೀನಿಯರ್‌ಗಳು ಹೀಗೆ ಬೇರೆ ಯಾರಿಗೂ ಹೆದರುತ್ತಿರಲಿಲ್ಲ.
ಬೇರೆಯವರೆಲ್ಲ ತರಗತಿಯಲ್ಲಿ ಶಿಕ್ಷಕರು ಹೊಡೆಯ ಬಂದಾಗ ಹೆದರಿ ಬೆವತರೆ, ಕೆಲವರು ಹೊಡೆಯುವ ಮೊದಲೇ ಅತ್ತರೇ ಕೋಮಲ ಮಾತ್ರ ಕಲ್ಲು ಬಂಡೆಯಂತೆ ನಿಂತಿದ್ದು, ಎಂತಹ ಜೋರು ಹೊಡೆತಕ್ಕೂ ಥೇಟು “ಎಮ್ಮೆ ಮೇಲೆ ಮಳೆ ಸುರಿದಂಗೆ” ಎಂಬ ನಾಣ್ನುಡಿಯ ಅನ್ವರ್ಥದಂತೆ ಪ್ರತಿಕ್ರಿಯೆಯನ್ನು ಕೊಡುತ್ತಿದ್ದ.

ಇಂತಹ ಪ್ರತಿಕ್ರಿಯೆಯಿಂದ ರೋಸಿ ಹೋದ ಶಿಕ್ಷಕರೊಬ್ಬರು ಅವನ ಎರಡು ಕಿವಿಗಳನ್ನು ಹಿಡಿದು ಅವನನ್ನು ಮೇಲೆತ್ತಿ ಕೈ ಬಿಟ್ಟಾಗಲೂ ಏನು ಆಗಿಯೇ ಇಲ್ಲವೆಂಬಂತೆ ತಣ್ಣಗೆ ಪ್ರತಿಕ್ರಿಯೆ ನೀಡಿದ್ದ!

ಅವನಲ್ಲಿ ಇನ್ನೂ ಹಲವು ವಿಶೇಷತೆಗಳಿದ್ದವು. ಆಗಿನ್ನೂ ಶಾಲಾ ಕ್ಯಾಂಪಸ್ಸಿನಲ್ಲಿ ಹಲವು ಹೊಸ ಕಟ್ಟಡಗಳು ತಲೆ ಎತ್ತುತ್ತಿದ್ದವು. ಅಂತಹ ಹೊಸ ಕಟ್ಟಡವೊಂದರ ಮೊದಲ ಮಹಡಿಯಿಂದ ಪದೇ ಪದೇ ಕೆಳಗಿನ ಮರಳ ರಾಶಿಯ ಮೇಲೆ ನೆಗೆದು ತನಗೆ ನೋವೇ ಆಗುವುದಿಲ್ಲ ಎನ್ನುತ್ತಿದ್ದ.

ಎಲ್ಲರೂ ಕೊರೆವ ಚಳಿಯಲ್ಲಿ ತಣ್ಣೀರು ಮುಟ್ಟಲೂ ಕಷ್ಟ ಪಡುವಾಗ ಬೆಳ ಬೆಳಿಗ್ಗೆಯೇ ಬಕೆಟ್ ಗಟ್ಟಲೆ ತಣ್ಣೀರು ಸ್ನಾನ ಮಾಡಿ ತನಗೆ ಚಳಿಯೇ ಆಗುವುದಿಲ್ಲ ಎನ್ನುತ್ತಿದ್ದ. ಮಿಗಿಲಾಗಿ, ಇದಕ್ಕೆಲ್ಲಾ ತಾನು ನಂಬಿ ಆರಾಧಿಸುವ ಅಜ್ಜಯ್ಯ ದೇವರೇ ಕಾರಣ ಎಂದೂ ಹೇಳುತ್ತಿದ್ದ.

ಅಲ್ಲದೇ ತನ್ನ ತಾಯಿ ಊರಿನಲ್ಲಿರುವಾಗ ಆ ಅಜ್ಜಯ್ಯ ದೇವರ ಸನ್ನಿಧಾನಕ್ಕೆ ತನ್ನನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದದ್ದನ್ನು, ಅಲ್ಲಿ ಅಜ್ಜಯ್ಯನ ಕುರಿತು ನಾನಾ ಕತೆಗಳನ್ನು ತಾನು ಕೇಳುತ್ತಿದ್ದದ್ದನ್ನು ಸ್ಮರಿಸಿಕೊಳ್ಳುತ್ತಿದ್ದ.

ಹೀಗಿರಲಾಗಿ ಒಂದು ದಿನ ಸಂಜೆ ಎಂದಿನಂತೆ “ಓಂ ಶಿವಾಯ ನಮಃ, ಓಂ ಶಿವಾಯ ನಮಃ..” ಎನ್ನುತ್ತಾ ತಪಸ್ಸಿಗೆ ಕುಳಿತಿದ್ದ ಕೋಮಲ ಎಷ್ಟು ಹೊತ್ತಾದರೂ ಕಣ್ಣು ಬಿಟ್ಟು ಮೇಲೇಳಲೇ ಇಲ್ಲ. ಅದಾಗಲೇ ನಮ್ಮ ಹೌಸ್ ಮೇಡಂ ಸಂಜೆ ಹೊತ್ತಿನ ಸೂಪರ್ ವಿಷನ್‌ಗೆ ಬರುವ ಸಮಯವಾಗುತಲಿತ್ತು.

ಹಾಗಾಗಿ ಕೆಲವರು “ಅವನ ತಪಸ್ಸಿಗೆ ಭಂಗ ತರುವುದಾ ಬೇಡವಾ” ಎಂಬ ಭಯ, ಅಂಜಿಕೆಗಳನ್ನೆಲ್ಲಾ ಬದಿಗಿಟ್ಟು ಅವನನ್ನು ಇಹ ಲೋಕಕ್ಕೆ ಎಳೆದು ತರುವ ಪ್ರಯತ್ನ ಮಾಡಲಾರಂಭಿಸಿದರು. ಆದಾಗ್ಯೂ ಅವನು ಎಚ್ಚರಾಗಲೇ ಇಲ್ಲ.

ಅಷ್ಟರಲ್ಲೇ ಹೌಸ್ ಮೇಡಂ ಬಂದು ಬಿಟ್ಟರು.

ಬಂದವರು ಕೋಮಲನ ಈ ತಪಸ್ಸಿನ ಭಂಗಿಯನ್ನು ನೋಡಿ “ಕೋಮಲ್.. ಕೋಮಲ್…” ಎಂದು ಜೋರಾಗಿ ಕರೆದರಾದರೂ ಕೋಮಲ ಹೇಳಲಿಲ್ಲ.

ಇನ್ನೂ ನಟೇಶ ಧೈರ್ಯ ಮಾಡಿ “ಕೋಮಲ.. ಕೋಮಲ..” ಎನ್ನುತ್ತಾ ಅವನ ಮುಖಕ್ಕೆ ನೀರು ಹಾಕಿ ಕಚಗುಳಿ ಇಟ್ಟು ಏಳಿಸುವ ಪ್ರಯತ್ನ ಮಾಡಿದ.

ಕೋಮಲನಿಂದ ಹೊರ ಹೊಮ್ಮುತ್ತಿದ್ದದ್ದು “ಓಂ ಶಿವಾಯ ನಮಃ, ಓಂ ಶಿವಾಯ ನಮಃ..” ಎಂಬ ಪ್ರತಿಕ್ರಿಯೆ ಮಾತ್ರ!

ಸರಿ, ಮೇಡಂ ನೋಡುವಷ್ಟು ನೋಡಿ ಕೆಲವರ “ಸುಮ್ನೆ ನಾಟಕ ಮಾಡ್ತಾನೆ ಮೇಡಂ” ಎಂಬ ಮಾತುಗಳಿಂದ ಪ್ರೇರಿತರಾಗಿ ಕೋಮಲನನ್ನು ಗದರುವ ಪ್ರಯತ್ನದಲ್ಲಿರುವಾಗಲೇ ಗೆಳೆಯ ಹರ್ಷ ಮೊದಲೇ ಥಿಯೇಟರ್ ಓನರ್ ಮಗನಾಗಿದ್ದು ತಮ್ಮದೇ ಥಿಯೇಟರ್‌ನಲ್ಲಿ ಹತ್ತಾರು ದೇವರು ದಿಂಡಿರ ಅಲ್ಲದೇ ಭೂತ ಪ್ರೇತಗಳ ಸಿನಿಮಾಗಳನ್ನು ನೋಡಿ ಪ್ರಭಾವಿತನಾಗಿದ್ದಾತ, “ಅವನ ಮೈ ಮೇಲೆ ನಿಜಕ್ಕೂ ಅಜ್ಜಯ್ಯ ದೇವರು ಬಂದಿದೆ ಮೇಡಂ..” ಎಂದೆಲ್ಲಾ ಶೇಕಡಾ ನೂರರ ಖಾತ್ರಿಯಿಂದ ಹೇಳುತ್ತಾ ಮೇಡಂರನ್ನೇ ಗೊಂದಲಗೊಳಿಸಿಬಿಟ್ಟ.

ಪಾಪ ಮೇಡಂ, ಇದರಿಂದಾಗಿ ನಿಜಕ್ಕೂ ಗಲಿಬಿಲಿಗೊಂಡಂತವರಾಗಿ ತನಗೇಕೆ ಈ ಎಲ್ಲಾ ರಾಮಾಯಣ ಎಂದೆಣಿಸುತ್ತಾ, ತಮಗಾದ ದಿಗಿಲನ್ನು ಮರೆ ಮಾಚುವ ಪ್ರಯತ್ನ ಮಾಡುತ್ತಾ “ಸ್ವಲ್ಪ ಹೊತ್ತು ನೋಡಿ, ಸರಿಯಾಗ್ತಾನೆ”, ಎನ್ನುತ್ತಾ ಎಂದಿಗಿಂತ ಬೇಗನೇ ಜಾಗ ಖಾಲಿ ಮಾಡಿ ಬಿಟ್ಟರು.

ಈ ನಡುವೆ ಹರ್ಷ ಪರಮ ಭಕ್ತಿಯಿಂದ ತನ್ನ ತಾಯಿ‌ ಕೊಟ್ಟು ಕಳಿಸಿದ್ದ ಕುಂಕುಮವನ್ನು ಕೋಮಲನ ಹಣೆಗೆ ಹಚ್ಚಿ, ಊದುಬತ್ತಿ, ಕರ್ಪೂರದಾರತಿ ಬೆಳಗಿ ಕೋಮಲ ಸಾಕ್ಷಾತ್ ದೇವರ ಪ್ರತಿರೂಪವೋ ಎಂಬಂತೆ ಅಡ್ಡ ಬಿದ್ದು ನಮಸ್ಕರಿಸಿದ.

ಈ ಭಕ್ತಿಯ ಶಾಸ್ತ್ರ ಮುಗಿಯುತ್ತಲೇ ಕೋಮಲ ನಿಧಾನವಾಗಿ ಕಣ್ಣುಗಳನ್ನು ತೆರೆದ. ತೆರೆದವನು ಒಂದಷ್ಟು ಕಾಲ ಶಾಂತನಾಗಿಯೇ ಕುಳಿತಿದ್ದ. ನಾವುಗಳೂ ಏನನ್ನೂ ಮಾತನಾಡುವ ಧೈರ್ಯ ತಾಳದೆ ಶಾಂತವಾಗಿಯೇ ಕುಳಿತಿದ್ದೆವು.

ತುಸು ಹೊತ್ತು ಸುಧಾರಿಸಿಕೊಂಡ ಕೋಮಲ ಮಂದಸ್ಮಿತನಾಗಿ,
“ಹುತ್ತಾ ಕಾಣ್ತು.. ಹುತ್ತದ ಮೇಲೆ ದೀಪ ಕಾಣ್ತು..” ಎಂದ.

ಹರ್ಷ ಅವನೊಂದಿಗೆ ಮತ್ತಷ್ಟು ಮಿತ್ರರು ಮತ್ತೊಮ್ಮೆ ಕೋಮಲನಿಗೆ ಕೈ ಮುಗಿದರು.

ಎಲ್ಲರೂ ಕೊರೆವ ಚಳಿಯಲ್ಲಿ ತಣ್ಣೀರು ಮುಟ್ಟಲೂ ಕಷ್ಟ ಪಡುವಾಗ ಬೆಳ ಬೆಳಿಗ್ಗೆಯೇ ಬಕೆಟ್ ಗಟ್ಟಲೆ ತಣ್ಣೀರು ಸ್ನಾನ ಮಾಡಿ ತನಗೆ ಚಳಿಯೇ ಆಗುವುದಿಲ್ಲ ಎನ್ನುತ್ತಿದ್ದ. ಮಿಗಿಲಾಗಿ, ಇದಕ್ಕೆಲ್ಲಾ ತಾನು ನಂಬಿ ಆರಾಧಿಸುವ ಅಜ್ಜಯ್ಯ ದೇವರೇ ಕಾರಣ ಎಂದೂ ಹೇಳುತ್ತಿದ್ದ. ಅಲ್ಲದೇ ತನ್ನ ತಾಯಿ ಊರಿನಲ್ಲಿರುವಾಗ ಆ ಅಜ್ಜಯ್ಯ ದೇವರ ಸನ್ನಿಧಾನಕ್ಕೆ ತನ್ನನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದದ್ದನ್ನು, ಅಲ್ಲಿ ಅಜ್ಜಯ್ಯನ ಕುರಿತು ನಾನಾ ಕತೆಗಳನ್ನು ತಾನು ಕೇಳುತ್ತಿದ್ದದ್ದನ್ನು ಸ್ಮರಿಸಿಕೊಳ್ಳುತ್ತಿದ್ದ.

ಈ ಘಟನೆಯಾದ ಮೇಲೆ ಒಂದು ಸೂಪರ್ ಡೂಪರ್ ಹಿಟ್ ಸಿನಿಮಾದ ನಂತರ ಹೀರೋನ ತಾರಾ ಮೌಲ್ಯ ಏಕಾಏಕಿ ಮೇಲೆರುವಂತೆ ಕೋಮಲನ ತಾರಾ ಮೌಲ್ಯವೂ ಜಿಗಿದಿತ್ತು. ಕೋಮಲ ಕತ್ತಲಲ್ಲಿನ ಹೆದರಿಕೆಗೆ ರಾಮಬಾಣವಾದ.

ಪರಿಣಾಮವಾಗಿ ಕೋಮಲ ಬೆಳಿಗ್ಗೆ ಹಾಲು ಕುಡಿಯಲು ಮೆಸ್‌ಗೆ ಹೊರಟರೆ ಲೋಟಕ್ಕೆ ಹಾರ್ಲಿಕ್ಸ್, ಬೋರ್ನ್ ವೀಟಾ ಹಾಕುವವರ ಸಂಖ್ಯೆ, ಊಟಕ್ಕೆ ಹೊರಟರೆ ತಟ್ಟೆಗೆ ಉಪ್ಪಿನ ಕಾಯಿ, ತುಪ್ಪ, ಚಟ್ನಿ ಪುಡಿ ಹಾಕುವವರ ಸಂಖ್ಯೆ, ಬೇಕೆಂದರೆ ಹೋಂ ವರ್ಕ್ ಕಾಪಿ ಮಾಡಲು ನೋಟ್ ಬುಕ್ ನೀಡುವವರ ಸಂಖ್ಯೆ ಸಾಕಷ್ಟು ಹೆಚ್ಚಾಯಿತು.

ಮತ್ತಷ್ಟು ದಿನಗಳುರುಳಿದವು.

ಹೀಗಿರಲಾಗಿ ಒಂದು ದಿನ ಅನಿರೀಕ್ಷಿತ ಘಟನೆಯೊಂದು ಅಚಾನಕ್ಕಾಗಿ ನಡೆದು ಬಿಟ್ಟಿತ್ತು. ಆ ಒಂದು ಭಾನುವಾರ ಸಂಜೆಯ ವೇಳೆಗೆ ನಾವುಗಳೆಲ್ಲಾ ದೂರದರ್ಶನದ ಸಿನಿಮಾ ನೋಡಲು ಶಾಲಾ ಮಲ್ಟಿ‌ ಪರ್ಪಸ್ ಹಾಲ್‌ಗೆ ತೆರಳಿದ್ದೆವು. ಅದಾಗಲೇ ಕತ್ತಲಾವರಿಸುತಿತ್ತು.

ಇತ್ತ ಡಾರ್ಮಿಟರಿಯಲ್ಲಿ ಹರ್ಷ, ಕೋಮಲ ಇಬ್ಬರೇ ಇದ್ದರು. ಹರ್ಷ ಸ್ನಾನ ಮುಗಿಸಿ ಬಂದಾಗ ಎಲ್ಲರೂ ಸಿನಿಮಾ ನೋಡಲು ತೆರಳಿದ್ದರೆ ಕೋಮಲ ಮಾತ್ರ ತಪಸ್ಸಿನಲ್ಲಿ ಮುಳುಗಿದ್ದ.

ತಾನೂ ಕೂಡಾ ಸಿನಿಮಾ ನೋಡುವ ಆತುರದಲ್ಲಿದ್ದ ಹರ್ಷ ತಪಸ್ಸಿನಲ್ಲಿ ಮುಳುಗಿರುವ ಕೋಮಲನನ್ನು ಕರೆದು ಏಳಿಸುವುದಾ ಬೇಡವಾ ಎಂಬ ಅರೆ ಕ್ಷಣದ ಗೊಂದಲಕ್ಕೆ ಒಳಗಾದ. ಮತ್ತೆ, ಕರೆದು ಏಳಿಸಿ ಅವನ ತಪಸ್ಸಿಗೆ ಭಂಗ ತರುವುದು ಸರಿಯಾಗಲಾರದು ಎಂದು ನಿರ್ಧರಿಸಿ, ಲಗುಬಗೆಯಲ್ಲಿ ತನ್ನ ಅಮ್ಮ ಕೊಟ್ಟಿದ್ದ ಕುಂಕುಮವನ್ನು ಕೋಮಲನ ಹಣೆಗೆ ಇಟ್ಟು ಅವನೆಡೆಗೆ ನಮಸ್ಕರಿಸಿ ಸಿನಿಮಾ ನೋಡಲು ಹೊರಟ.

ಹೀಗೆ ಹೊರಟ ಹರ್ಷ ಮೆಟ್ಟಿಲಿಳಿಯುತ್ತಾ ಮೇಲ್ ಡಾರ್ಮಿಟರಿಯಿಂದ ಕೆಳ ಡಾರ್ಮಿಟರಿ, ಅಲ್ಲಿಂದ ಅಕ್ಕಂದಿರ ಡಾರ್ಮಿಟರಿ ದಾಟಿ ಕಟ್ಟಡದಿಂದ ನಾಲ್ಕು ಹೆಜ್ಜೆ ಹೊರಗೆ ಹೋಗಿರಬಹುದು ಅಷ್ಟರಲ್ಲೇ ಕರೆಂಟ್ ಹೋಗಿ ಬಿಡಬೇಕೆ. ತಿರುಗಿ ನೋಡಿದರೆ ಇಡೀ ಬ್ರಹ್ಮಾಂಡವೇ ಕತ್ತಲು ಕತ್ತಲಾದಂತೆನಿಸಿತು.

ಈ ಬ್ರಹ್ಮಾಂಡ ಕತ್ತಲಲ್ಲಿ ಮತ್ತೊಮ್ಮೆ ಹಿಂದೆ ತಿರುಗಲೂ ನಡುಕವಾಗಿ ಆದದ್ದಾಗಲಿ ಕಣ್ಣ ಮುಂದೆ ದೂರದಲ್ಲಿ ಕಾಣುತ್ತಿರುವ ಪೆಟ್ರೋಮ್ಯಾಕ್ಸ್ ಮತ್ತು ಟಾರ್ಚ್‌ಗಳ ಮಂದ ಬೆಳಕನ್ನು ಹೊತ್ತ ಶಾಲಾ ಮಲ್ಟಿ ಪರ್ಪಸ್ ಹಾಲ್ ನೆಡೆಗೇ ಹೋಗೋಣ ಎಂದು ನಿರ್ಧರಿಸಿ ಒಂದೆರಡು ಹೆಜ್ಜೆ ಮುಂದಿಟ್ಟಿರಬಹುದು ಅಷ್ಟರಲ್ಲೇ ಕಟ್ಟಡದಿಂದ ದಡಬಡ ದಡಬಡ ಸದ್ದೊಂದು ಅಟ್ಟಿಸಿಕೊಂಡು ಬಂದಂತಾಗಬೇಕೇ!

ಒಡನೆಯೇ ಹರ್ಷನಿಗೆ ತಾನು ತನ್ನ ಥಿಯೇಟರ್‌ನಲ್ಲಿ ನೋಡಿದ್ದ ಭಯಾನಕ ಸಿನಿಮಾಗಳ ದೃಶ್ಯಗಳೆಲ್ಲವೂ ಅಪ್ರಜ್ಞಾಪೂರ್ವಕವಾಗಿ ಕಣ್ಣ ಮುಂದೆಯೇ ಹಾದು ಹೋದಂತಾಗಿ, ಇದು ನಿಜಕ್ಕೂ ಭಯಾನಕ ದೆವ್ವವೆ ಇರಬೇಕೆಂದು ಖಾತರಿಯಾಗಿ ಜೀವ ಕೈಗೆ ಬಂದಂತಾಯ್ತು! ಕಿರುಚಲು ಬಾಯಿಯೂ ಬರದಂತಾಯ್ತು!

ಸರಿ, ಒಂದಿನಿತೂ ಯೋಚಿಸದೆ ಕ್ಷಣ ಮಾತ್ರದಲ್ಲಿ ಎಂಬಂತೆ ಮಲ್ಟಿ ಪರ್ಪಸ್ ಹಾಲ್‌ನತ್ತ ಓಟ ಕೀಳಲಾರಂಭಿಸಿದ. ಆದರೇನು ಮಾಡುವುದು ಆ ದಡಬಡ ಸದ್ದು ಹರ್ಷನನ್ನು ಬಿಡದೆ ಬೆನ್ನಟ್ಟಿತು. ಹರ್ಷನೋ ತನ್ನ ವೇಗವನ್ನು ಇನ್ನಷ್ಟು ಹೆಚ್ಚಿಸಿದ.

ಪರಿಣಾಮವಾಗಿ ಕಣ್ಣು ಮಿಟುಕಿಸಿ, ಕಣ್ಣು ಬಿಡುವುದರೊಳಗಾಗಿ ಎಂಬಷ್ಟು ಹೊತ್ತಿನಲ್ಲಿ ನಾವೆಲ್ಲರೂ ಇದ್ದ ಶಾಲಾ ಮಲ್ಟಿ ಪರ್ಪಸ್ ಹಾಲ್ ತಲುಪಿದ್ದ.

ಕರೆಂಟ್ ಹೋದ ಕಾರಣಕ್ಕೆ ಪೆಟ್ರೋಮ್ಯಾಕ್ಸ್ ಮತ್ತು ಟಾರ್ಚ್‌ಗಳ ಮಂದ ಬೆಳಕನ್ನು ಹೊತ್ತಿಸಿ ಕರೆಂಟ್ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ನಾವುಗಳು ಹರ್ಷ ಹೀಗೆ ದಿಗ್ಭ್ರಾಂತನಾಗಿ ಓಡಿ ಬಂದುದನ್ನು ನೋಡಿ ಗಲಿಬಿಲಿಗೊಂಡೆವು!

ಅಷ್ಟರಲ್ಲೇ ಕೋಮಲನೂ ಹರ್ಷನ ಬೆನ್ನಟ್ಟಿಸಿಕೊಂಡು ಬಂದಂತೆ ಬಂದು ನಿಂತ. ಈಗ ನಮ್ಮನ್ನು ನೋಡಿದ ಭರವಸೆಯಲ್ಲಿ ಅರ್ಧ ಜೀವ ಬಂದಂತಾದ ಹರ್ಷ ಸಾವರಿಸಿಕೊಳ್ಳುತ್ತಾ, ಅಳುಕುತ್ತಲೇ ಹಿಂದೆ ತಿರುಗಿ ನೋಡುತ್ತಾನೆ.. ಕೋಮಲ!

ಹರ್ಷ ಆವಾಕ್ಕಾದವನಂತಾಗಿ ಬಿಟ್ಟ.

ಪಾಪ ಕೋಮಲ, ತಾನು ತಪಸ್ಸಿಗೆ ಕುಳಿತಿರುವಾಗಲೇ ಒಬ್ಬೊಬ್ಬರೇ ಸಿನಿಮಾ ನೋಡಲು ಹೊರಟು ಹೋದ ಪರಿಣಾಮ ಡಾರ್ಮಿಟರಿಯ ತುಂಬಾ ನಿಶ್ಶಬ್ದ ಆವರಿಸಿದೆ.

ಇನ್ನೇನು ಕಣ್ಣು ತೆರೆದು, ತಪಸ್ಸಿನಿಂದ ಏಳೋಣ ಎಂದು ಯೋಚಿಸುತ್ತಿರುವಾಗಲೇ ಹರ್ಷನೂ ಸ್ನಾನ ಮುಗಿಸಿ ಬಂದಿದ್ದಾನೆ. ಬಂದವನೋ ಸಿನಿಮಾ ನೋಡಲು ಹೊರಡುವ ತರಾತುರಿಯಲ್ಲಿ ಕೋಮಲನ ಹಣೆಗೆ ಕುಂಕುಮವನ್ನಿಟ್ಟು ನಮಸ್ಕರಿಸಿದ್ದಾನೆ.

ಹೀಗೆ ಕುಂಕುಮ ಇಟ್ಟೊಡನೆ ಕೋಮಲನಿಗೆ ಮತ್ತಷ್ಟು ಸ್ಫೂರ್ತಿ ಬಂದಂತಾಗಿ, ಮತ್ತಷ್ಟು ಗಂಭೀರ ವದನನಾಗಿ ತನ್ನ “ಓಂ ಶಿವಾಯ ನಮಃ..” ದ ದನಿಯನ್ನು ಮತ್ತಷ್ಟು ಜೋರಾಗಿಸಿದ್ದಾನೆ.

ಅದ್ಯಾವಾಗ ಹರ್ಷ ಬಾಗಿಲು ದಾಟಿದ ಸದ್ದಾಯಿತೋ ಕೋಮಲ ನಿಧಾನವಾಗಿ ಕಣ್ಣು ಬಿಟ್ಟಿದ್ದಾನೆ. ಬಿಟ್ಟವನು ತಾನು ಸಿನಿಮಾ ನೋಡಲು ಹೋಗುವುದೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಫಕ್ಕನೆ ಕರೆಂಟ್ ಹೋಗಿದೆ!

ಕೂಡಲೇ ಕೋಮಲ “ನಾನೂ ಜೊತೆಗೆ ಬರುತ್ತೇನೆ” ಎಂದು ಹರ್ಷನಿಗೆ ಹೇಳುವ ಸಲುವಾಗಿ “ಹರ್ಷ., ಹರ್ಷ.,” ಎಂದಿದ್ದಾನೆ. ನೋಡಿದರೆ ಅದಾಗಲೇ ಹರ್ಷ ಜಾಗ ಖಾಲಿ ಮಾಡಿ ಆಗಿದೆ.

ಒಡನೆಯೇ ಕೋಮಲನಿಗೆ ಇಡೀ ಕಟ್ಟಡದಲ್ಲಿ ಇರುವುದು ತಾನೊಬ್ಬನೇ ಎಂಬ ಹೊಳವು ಬಂದು ದಿಗಿಲಾಗಿದೆ. ಜಗದೆಲ್ಲಾ ಪುಕ್ಕಲು ತನ್ನನ್ನು ಆವರಿಸಿಕೊಂಡಂತೆ ಭಾಸವಾಗಿದೆ.

ಸರಿ, ಏನೊಂದೂ ಯೋಚಿಸದೇ ಕತ್ತಲೆಯಲ್ಲೇ ಗೋಡೆ, ಮಂಚಗಳನ್ನೆಲ್ಲಾ ದಡವುತ್ತಾ ಒಂದಷ್ಟು ಹೆಜ್ಜೆ ಮುಂದೆ ಸಾಗಿ ದಡಬಡ ದಡಬಡ ಮೆಟ್ಟಲಿಳಿದು ಕಟ್ಟಡದಿಂದ ಹೊರ ಬಂದಿದ್ದಾನೆ. ನೋಡಿದರೆ ಹರ್ಷ ಕಣ್ಣೆದುರಲ್ಲೇ ಓಡುತ್ತಿದ್ದಾನೆ.

ಇವನು “ಲೇ ಹರ್ಷ ನಿಲ್ಲೋ” ಎನ್ನುವ ವೇಳೆಗಾಗಲೇ ಹರ್ಷ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ದೂರ ದೂರ ಸಾಗುತ್ತಿದ್ದಾನೆ. ಇದರಿಂದ ಕೋಮಲನ ಪುಕ್ಕಲೋ ಮತ್ತಷ್ಟು ಹೆಚ್ಚಿ ಇವನೂ ಯರ್ರಾಬಿರ್ರಿ ಓಟ ಕಿತ್ತು ಹರ್ಷನ ಬೆನ್ನಟ್ಟಿ ಬಂದಿದ್ದ..!

ಇನ್ನೂ ಅವರಿಬ್ಬರೂ ಯರ್ರಾಬಿರ್ರಿ ಓಡಿ ಬಂದ ಆ ಧಾಟಿ, ಮುಖಭಾವದಲ್ಲಿನ ಆ ದಿಗಿಲು, ನಮ್ಮನ್ನು ನೋಡುತ್ತಲೇ ದಿಗಿಲನ್ನು ಮರೆಮಾಚಲು ಮಾಡಿದ ಆ ವ್ಯರ್ಥ ಪ್ರಯತ್ನ…. ಹೀಗೆ ಎಲ್ಲವೂ ಕ್ಷಣ ಹೊತ್ತಿನ ಹಿಂದೆ ಡಾರ್ಮಿಟರಿಯಲ್ಲಿ ನಡೆದಿರಬಹುದಾದ ಘಟನಾವಳಿಗಳ ಸುಳಿವನ್ನು ನಮಗೆಲ್ಲಾ ಸಾರಿ ಸಾರಿ ಹೇಳಿದ್ದವು.

ಅದರ ಪರಿಣಾಮವಾಗಿ, ಅಂದಿನಿಂದ ಕೋಮಲನ ತಾರಾ ಮೌಲ್ಯ ವಿಮಾನ ಹಾರಿಸಲು ಹೊರಟು ತಳ ಕಚ್ಚಿದ ವಿಜಯ್ ಮಲ್ಯನ ಶೇರು ಮೌಲ್ಯದಂತೆ ಪಾತಾಳಕ್ಕೆ ಕುಸಿದಿತ್ತು!

ಇನ್ನು ಮುಂದಿನ ದಿನಗಳಲ್ಲಿ; ರಾತ್ರಿಯ ವೇಳೆ ನೀರಿನ ಮೋಟಾರ್ ಆನ್ ಮಾಡಲೆಂದು ವಾಚ್‌ಮನ್ ಅಂಕಲ್ ಡಾರ್ಮಿಟರಿಯ ಹಿಂದೆ ಬರುತ್ತಿದ್ದುದರಿಂದ ಓಡಾಟದ ಸದ್ದು ಕೇಳುತ್ತಿತ್ತೆಂದೂ, ಕೆಳ ಮಹಡಿಯ ಅಕ್ಕಂದಿರ ಓಡಾಟದ ದೆಸೆಯಿಂದ ಗೆಜ್ಜೆ ಸದ್ದು ಕೇಳುತ್ತಿತ್ತೆಂದೂ, ನಾವು ಹೊಸದಾಗಿ ಬಂದವರು ರಾತ್ರಿ ವೇಳೆ ಡಾರ್ಮಿಟರಿಯಿಂದ ಹೊರ ಬರದಿರಲೆಂದು, ಕದ್ದು ಓಡದಿರಲೆಂದು ಆತ್ಮಹತ್ಯೆ, ಮೋಹಿನಿ ಓಡಾಟದ ಕತೆ ಕಟ್ಟಿ ಹೇಳಿರಬಹುದೆಂದು ಅಂದಾಜಿಸಿದೆವು.

ಅಷ್ಟೇ ಅಲ್ಲ, ಈ ಎಲ್ಲಾ ಅಂದಾಜು ಸಿಗುವ ವೇಳೆಗೆ ನಾವು ಏಳನೇ ತರಗತಿಯವರಾಗಿದ್ದು ಮತ್ತೊಂದು ಡಾರ್ಮಿಟರಿಗೆ ಆ ಮೂಲಕ ಮತ್ತೊಂದು ಹೊಸ ಕಥೆಗೆ ಶಿಫ್ಟ್ ಆಗಿದ್ದೆವು!

About The Author

ಪೂರ್ಣೇಶ್ ಮತ್ತಾವರ

ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. "ದೇವರಿದ್ದಾನೆ! ಎಚ್ಚರಿಕೆ!!" ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ..

2 Comments

  1. Dr. Arun prasad

    ನವೋದಯ ವಸತಿ ಶಾಲೆಯಲ್ಲಿ ಕಲಿತ ಎಲ್ಲಾ ಮಕ್ಕಳಲ್ಲಿ ಈ ರೀತಿಯ ಒಂದೊಂದು ಕಥೆ ಅನುಭವ ಇದ್ದೇ ಇರುತ್ತದೆ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ