Advertisement
ದೇಶಕ್ಕೆ ತನ್ನರಿವಾದ ದಿನ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ದೇಶಕ್ಕೆ ತನ್ನರಿವಾದ ದಿನ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಸೈನಿಕರಿಗೆ ಸಂಬಂಧಿಸಿದ ಯಾವುದೇ ಆಚರಣೆಯಾಗಲೀ, ವೈಭವೀಕರಣವಾಗಲೀ ಎಚ್ಚರದ ಬೇಲಿಯೊಳಗೇ ಇರಬೇಕಾಗುತ್ತದೆ. ಸತ್ತವರ ನೆನಪಲ್ಲಿ ಕಣ್ಣೀರು ಮಿಡಿಯುವ ರಾಜಕಾರಣಿಗಳ ಬಗ್ಗೆ ಅನುಮಾನ ಇಟ್ಟುಕೊಂಡೇ ನೋಡಬೇಕಾಗುತ್ತದೆ. ಪೇಟ್ರಿಯಟಿಸಂ ಹಾಗು ನ್ಯಾಷನಲಸಿಂನ ಅಂತರವನ್ನು ಮನಸ್ಸಲ್ಲಿಟ್ಟುಕೊಂಡೇ ಯೋಚಿಸಬೇಕಾಗುತ್ತದೆ. ಇದನ್ನೆಲ್ಲಾ ಯಾಕೆ ಹೇಳಿಕೊಳ್ಳುತ್ತಿದ್ದೇನೆಂದರೆ, ಏಪ್ರಿಲ್ ೨೫ ಆಸ್ಟ್ರೇಲಿಯದಲ್ಲಿ Anzac day. ಮೊದಲನೇ ಮಹಾಯುದ್ಧದ ಗಲಿಪೊಲಿಯ ಆಕ್ರಮಣದಲ್ಲಿ ಪ್ರಾಣತೆತ್ತವರನ್ನು, ನಂತರ ಎರಡನೇ ಮಹಾಯುದ್ಧದಲ್ಲಿ ಅಸುನೀಗಿದವರನ್ನು, ಮುಂದೆ ಆಸ್ಟ್ರೇಲಿಯ ಪಾಲ್ಗೊಂಡ ಎಲ್ಲ ಯುದ್ಧಗಳಲ್ಲಿ ಜೀವ ತೆತ್ತವರನ್ನು ಇಡೀ ದೇಶ ನೆನಸಿಕೊಳ್ಳುವ ದಿನ. ಆ ಎಲ್ಲ ಯುದ್ಧಗಳಲ್ಲಿ ಸತ್ತವರ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅಂದು ದೇಶದಲ್ಲೆಲ್ಲಾ ಮಾರ್ಚ್ ಮಾಡುತ್ತಾರೆ. ಇಂದಿನ ಮುಂದಿನ ತಲೆಮಾರಿಗೆ ದೇಶದ ಬಗ್ಗೆ ಎಚ್ಚರ ಮೂಡಿಸುವ ದಿನ ಎಂದರೆ ತಪ್ಪಾಗಲಾರದು.

ಗಲಿಪೊಲಿ ಟರ್ಕಿಯ ಒಂದು ಸಣ್ಣ ಪೆನೆನ್ಸುಲ. ಅದನ್ನು ವಶಪಡಿಸಿಕೊಳ್ಳುವುದನ್ನು ಮೊದಲ ಮಹಾಯುದ್ಧದಲ್ಲಿ ಮುಖ್ಯವಾದ ಹೆಜ್ಜೆ ಎಂದು ಪರಿಗಣಿಸಲಾಗಿತ್ತು. ಅಲ್ಲಿಯ ಕಡಲ ಕಿನಾರೆಯನ್ನು ವಶಪಡಿಸಿಕೊಂಡು ಆ ಮೂಲಕ ಹೊಸ ಸಪ್ಲೈ ರೂಟ್ ತೆರೆದುಕೊಳ್ಳುವ ಯೋಚನೆಯಿತ್ತು. ಅದಕ್ಕಾಗಿ ಅಲೈಡ್ ದಳ ಸಾಕಷ್ಟು ತಯಾರಿ ನಡೆಸಿತ್ತು. ಬ್ರಿಟೀಷ, ಫ್ರಾನ್ಸ್ ಅಲ್ಲದೆ ಮುಖ್ಯವಾಗಿ ಆಸ್ಟ್ರೇಲಿಯ ನ್ಯೂಜಿಲೆಂಡ್ ಈ ಆಕ್ರಮಣದಲ್ಲಿ ಪಾಲ್ಗೊಳ್ಳಲು ಮುಂದೊತ್ತಿ ಬಂದಿತ್ತು. ಇಂಡಿಯದ ಸೈನ್ಯವೂ ಬ್ರಿಟಿಷರಡಿ ಪಾಲ್ಗೊಂಡು ಸಾವಿರಕ್ಕೂ ಮಿಕ್ಕಿ ಸೈನಿಕರನ್ನು ಕಳಕೊಂಡಿತ್ತು. ಬ್ರಿಟಿಷ್ ಮುಂದಾಳತ್ವದಲ್ಲಿ ಹಲವು ದಿನಗಳ ಈ ತಯಾರಿ ಟರ್ಕಿಗೂ ಸಿದ್ಧವಾಗಲು ಅವಕಾಶಕೊಟ್ಟಿತ್ತು.

ಅಟ್ಟೋಮಾನ್ ಎಂಪೈರ್‍ ಕುಸಿಯುತ್ತಿದ್ದ ಹೊತ್ತಲ್ಲಿ, ಗಲಿಪೊಲಿಯನ್ನು ಕಾಪಾಡಿಕೊಳ್ಳುವುದು ಟರ್ಕಿಗೂ ತುಂಬಾ ಮುಖ್ಯವಾಗಿತ್ತು. ವೈರಿಯ ಆಲೋಚನೆಯ ವಾಸನೆ ಹಿಡಿದ ಟರ್ಕಿ ತನ್ನ ಗಡಿರಕ್ಷಣೆಗೆ ಸನ್ನದ್ಧವಾಗ ತೊಡಗಿತು. ಗಲಿಪೊಲಿಯ ಕಡಲತಡಿಯ ಪಕ್ಕದ ಎತ್ತರದ ಗುಡ್ಡದಲ್ಲಿ ತನ್ನ ಸೈನ್ಯವನ್ನು ಅದು ಜಮಾಯಿಸಿತು. ಬಹುಶಃ ಇದೆಲ್ಲಾ ಎಲ್ಲ ಯುದ್ಧಗಳಲ್ಲೂ ನಡೆಯುವಂತಹವೇ. ಆದರೆ, ಮುಂದೆ ನಡೆದದ್ದು ಮಾತ್ರ ವಿಶಿಷ್ಟವಾದ್ದು.

ಲಂಡನ್ನಿನಲ್ಲಿ ತೆಗೆದುಕೊಂಡು ಹೇರಲ್ಪಟ್ಟ ಯುದ್ಧನಿರ್ಧಾರವನ್ನು ಪೂರೈಸಲು ೧೯೧೫ರ ಏಪ್ರಿಲ್ ೨೫ರ ಮುಂಜಾನೆ- ಬೆಳಕು ಹರಿಯುವ ಮುನ್ನದ ಅರೆಗತ್ತಲಿನಲ್ಲಿ- ಅಲೈಡ್ ದಳಗಳು ಟರ್ಕಿಯ ಕಡಲತಡಿಗೆ ದಾಳಿಯಿಟ್ಟವು. ಸುಲಭದಲ್ಲಿ ವಶಪಡಿಸಿಕೊಳ್ಳಬಹುದೆಂದು ತಿಳಿದಿದ್ದವರಿಗೆ ಅಲ್ಲಿ ನಡೆದ ಅತ್ಯಂತ ಘೋರ ಯುದ್ಧ ಅನಿರೀಕ್ಷಿತವಾಗಿತ್ತು. ಒಂದೆರಡು ವಾರದಲ್ಲಿ ಮುಗಿಯಬೇಕಾದ್ದು ಎಂಟು ತಿಂಗಳಾದರೂ ಮುಗಿಯಲಿಲ್ಲ. ಅಲೈಡ್ ದಳ ತೀವ್ರ ಜೀವನಷ್ಟವಾದ್ದರಿಂದ ಸೋತು ಹಿಮ್ಮೆಟ್ಟ ಬೇಕಾಯಿತು. ಅಷ್ಟೇ ಅಲ್ಲ ಸುಮಾರು ೪೫ ಸಾವಿರ ಅಲೈಡ್ ದಳದವರೂ, ಸುಮಾರು ೮೬ ಸಾವಿರ ಟರ್ಕಿ ಸೈನಿಕರೂ ಅಲ್ಲಿ ಅಸುನೀಗಿದರು. ಲಕ್ಷಾಂತರ ಮಂದಿ ಗಾಯಗೊಂಡರು.

ಎಲ್ಲಕ್ಕಿಂತ ಮಿಗಿಲಾಗಿ ಆ ಘಟನೆ ಆಸ್ಟ್ರೇಲಿಯದ ಒಳಮನಸ್ಸನ್ನು ತಟ್ಟಿ ಎಬ್ಬಿಸಿದ ಬಗೆ ಈ ದೇಶದ ಇತ್ತೀಚಿನ ಇತಿಹಾಸದ ಮುಖ್ಯ ಘಟ್ಟ ಅನ್ನುತ್ತಾರೆ. ೧೯೦೧ರಲ್ಲಿ ಎಲ್ಲ ರಾಜ್ಯಗಳು ಒಂದಾಗಿ ಫೆಡರೇಷನ್ ಸ್ಥಾಪಿಸಿಕೊಂಡ ಆಸ್ಟ್ರೇಲಿಯ ಆಗಿನ್ನೂ ಜಾಗತಿಕ ರಾಜಕಾರಣದಲ್ಲಿ ಹಸುಳೆ. ತಾಯೆಂದು ಪ್ರೇಮದಿಂದ ನೋಡುವ ಬ್ರಿಟನ್ನಿಗೆ ತಾನೂ ಒಂದು ಸಶಕ್ತ ದೇಶ ಎಂದು ತೋರುವ ಹಂಬಲ. ದೊಡ್ಡ ದೇಶಗಳ ಜತೆ ಭುಜಕ್ಕೆ ಭುಜಕೊಟ್ಟು ನಿಂತು ತನ್ನ ಶಕ್ತಿಯನ್ನು ಸಾರುವ ಗರಜು. ಇದಕ್ಕೆಲ್ಲಾ ಗಲಿಪೊಲಿಯ ಆಕ್ರಮಣ ಹೊಂದಿಕೊಂಡು ಬಂದಿತ್ತು.

ಆದರೆ ಅಲ್ಲಿ ಗೆಲ್ಲಲಾರದೇ ಹೋಗಿದ್ದು ಬ್ರಿಟನ್ನಿನ ಬಗ್ಗೆ ಕಹಿ ಭಾವನೆಯನ್ನು ಮೊದಲ ಬಾರಿಗೆ ಈ ದೇಶದ ಜನರಲ್ಲಿ ಮೂಡಿಸಿತು. ಸುಮಾರು ಎಂಟು ಸಾವಿರ ಸೈನಿಕರನ್ನು ಕಳಕೊಂಡ ದೇಶ ಎಚ್ಚೆತ್ತುಕೊಂಡಂತೆ ಅನಿಸಿತು. ತನ್ನ ಸೈನಿಕರನ್ನು ಕುರಿಗಳಂತೆ ಬಲಿಕೊಟ್ಟ ಬ್ರಿಟನ್ನಿನ ಬಗ್ಗೆ ಮೊದಲ ಬಾರಿಗೆ “ತಾಯ ಪ್ರೇಮ”ವನ್ನು ಮೀರಿದ ಅರಿವು ಮೂಡಿಸಿತು. ಹಲವು ಇತಿಹಾಸಜ್ಞರು ಹೇಳುವ ಹಾಗೆ – ಆಸ್ಟ್ರೇಲಿಯ ತನ್ನತನವನ್ನು ಕಂಡುಕೊಂಡ ಘಟನೆಯಾಯಿತು ಎಂದು.

ಈಗಲೂ, ಪ್ರತಿ ಏಪ್ರಿಲ್ ೨೫ಕ್ಕೆ ಬೆಳಕು ಹರಿಯುವ ಮುನ್ನದ ಅರೆಗತ್ತಲಿನಲ್ಲಿ ಡಾನ್ ಸರ್ವೀಸ್ ನಡೆಯುತ್ತದೆ. ಒಂಟಿ ಕಹಳೆ ಮೊಳಗುತ್ತದೆ. ದೇಶ ತಾನು ಕಳಕೊಂಡ ಜೀವನೋತ್ಸಾಹದ ಮಕ್ಕಳನ್ನು ಎರಡು ನಿಮಿಷ ಮೌನವಾಗಿ ನೆನಪಿಸಿಕೊಳ್ಳುತ್ತದೆ.

 

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ