ಸಮಾಜದಲ್ಲಿ ವಿಚಾರವಾದದ ಬೆಳವಣಿಗೆಯಿಂದ ಮಾತ್ರವೇ ನವಸಮಾಜದ ನಿರ್ಮಾಣವಾಗಲು ಸಾಧ್ಯ. ಎಲ್ಲ ಧರ್ಮಗಳನ್ನು ವಿಚಾರವಾದದ ಒರೆಗಲ್ಲಿಗೆ ಹಚ್ಚದಿದ್ದರೆ ಮಾನವಕುಲ ಇನ್ನೂ ಅಧೋಗತಿಗೆ ಹೋಗುವುದು. ಧರ್ಮಗಳ ತಿರಸ್ಕಾರದಿಂದ ವಿಚಾರವಾದಿಗಳು ಇದನ್ನು ಸಾಧಿಸಲಿಕ್ಕಾಗದು. ಧರ್ಮಗಳಲ್ಲಿನ ಅರಿವಿನ ಬೆಳಕಿನೊಂದಿಗೆ ಮಾತ್ರ ಈ ವಿಚಾರಹೀನ ಸ್ಥಿತಿಯಿಂದ ಹೊರಬರಲು ಸಾಧ್ಯ. ಅದಕ್ಕಾಗಿ ಮಾನವನ ಬದುಕಿಗೆ ಒಂದೇ ಧರ್ಮ ಸಾಲದು ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 94ನೇ ಕಂತು ನಿಮ್ಮ ಓದಿಗೆ
ಧಾರಣ ಶಕ್ತಿಯುಳ್ಳದ್ದು ಧರ್ಮ ಎಂದು ಹೇಳುತ್ತಾರೆ. ಧರ್ಮವು ಮನುಷ್ಯನನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತ ಕಾಪಾಡುವಂಥದ್ದು ಎಂಬ ಭಾವನೆ ಸಹಜವಾಗೇ ಮೂಡುವಂಥದ್ದು. ಶಿಲಾಯುಗದ ಮಾನವ 21ನೇ ಶತಮಾನ ತಲುಪುವುದರೊಳಗಾಗಿ ಅದೆಷ್ಟೋ ಸ್ಥಿತ್ಯಂತರಗಳಾಗಿವೆ. ಅವನ ನಾಗರಿಕತೆ ಯುದ್ಧಗಳ ಮೂಲಕವೇ ಹಬ್ಬಿದೆ ಮತ್ತು ಆ ಯುದ್ಧಗಳಲ್ಲಿ ಅನೇಕ ನಾಗರಿಕತೆಗಳು ನಾಶವಾಗಿವೆ. ಆ ನಾಗರಿಕತೆಗಳ ಮೂಲಕ ವಿವಿಧ ಸಂಸ್ಕೃತಿಗಳ ಉಗಮವಾಗಿದೆ. ಅವೆಲ್ಲ ಬೇರೆ ಬೇರೆ ಸಂಸ್ಕೃತಿಗಳ ಕೊಡು ಕೊಳ್ಳುವಿಕೆಯ ಮೂಲಕ ಒಂದಿಲ್ಲೊಂದು ರೀತಿಯಲ್ಲಿ ರೂಪಾಂತರ ಹೊಂದುತ್ತ ಉಳಿದುಕೊಂಡಿವೆ. ಅಸ್ತಿತ್ವಕ್ಕಾಗಿ ಸೆಣಸಾಟ, ಸಂಗ್ರಹಬುದ್ದಿ, ಕ್ರೌರ್ಯ, ಅಸಹಾಯಕತೆ, ದಬ್ಬಾಳಿಕೆ, ಸೋಲು, ಗೆಲವು, ಗುಲಾಮಗಿರಿ, ಸಾಮ್ರಾಜ್ಯದ ಅಧಿಪತ್ಯ ಮುಂತಾದ ಕಾರಣಗಳಿಂದಾಗಿ ಮಾನವ ಬದುಕಿನಲ್ಲಿ ಕಾಯಕಗಳು, ಜಾತಿಗಳು, ಕುಲಗಳು, ಬುಡಕಟ್ಟುಗಳು ಹುಟ್ಟಿಕೊಂಡಿವೆ. ಮಾನವನನ್ನು ಸುಸಂಸ್ಕೃತಗೊಳಿಸಲು ಧರ್ಮಗಳೂ ಹುಟ್ಟಿಕೊಂಡಿವೆ.
ಕೆಲವು ಧರ್ಮಗಳ ಧರ್ಮಗ್ರಂಥಗಳನ್ನು ಅಪೌರುಷೇಯ ಎಂದು ಕರೆಯಲಾಗುತ್ತದೆ. ಅವುಗಳನ್ನು ಮನುಷ್ಯರು ಬರೆದದ್ದಲ್ಲ ಎಂಬ ನಂಬಿಕೆಯನ್ನು ಆ ಧರ್ಮಗಳವರು ಹೊಂದಿದ್ದಾರೆ. ಅವುಗಳಲ್ಲಿ ಕೆಲ ಧರ್ಮಗಳು ಏಕದೇವೋಪಾಸನೆಯನ್ನು ನಂಬಿದ್ದರೆ, ಇನ್ನು ಕೆಲ ಧರ್ಮಗಳು ಬಹುದೇವೋಪಾಸನೆಯನ್ನು ಹೊಂದಿವೆ. ಅವರ ದೇವತೆಗಳು ಅವರವರ ಭಾಷೆಗಳ ಹೆಸರಿನಲ್ಲೇ ಇವೆ. ಕೆಲ ಧರ್ಮಗಳಲ್ಲಿ ಅವರ ಉದಾತ್ತ ಪುರುಷರೇ ದೇವಸ್ವರೂಪರಾಗುತ್ತಾರೆ. ಕೆಲ ಧರ್ಮಗಳು ಅಜ್ಞೇಯವಾದಿ ಧರ್ಮಗಳಾಗಿವೆ. ಅಂದರೆ ದೇವರು ಇದ್ದಾನೋ ಇಲ್ಲವೋ, ಆದರೆ ನಿಸರ್ಗದಲ್ಲಿ ಕ್ರಿಮಿ, ಪಶು, ಪಕ್ಷಿ ಮತ್ತು ಮಾನವರು ಇದ್ದಾರೆ. ಮಾನವ ಮತ್ತು ನಿಸರ್ಗದ ಮಧ್ಯೆ ಅವಿನಾಭಾವ ಸಂಬಂಧವಿರಬೇಕು ಎಂಬುದು ಅವುಗಳ ನಿಲವು. ಒಟ್ಟಾರೆ ಎಲ್ಲ ಧರ್ಮಗಳು ನಿಸರ್ಗ ಮತ್ತು ಮಾನವಕುಲದ ಒಳಿತನ್ನೇ ಬಯಸುತ್ತವೆ. ಆದರೆ ಆದರೆ ಮಾನವ ತಾನು ಜನಿಸಿದ ಅಥವಾ ಸ್ವೀಕರಿಸಿದ ಧರ್ಮಗಳ ಆಶಯದಂತೆ ಬದುಕುತ್ತಿದ್ದಾನೆಯೆ ಎಂದು ಕೇಳಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ.
ಮಾನವರು ತಮ್ಮ ಧರ್ಮಗಳಲ್ಲಿ ತೊಡಕುಗಳನ್ನು ಸೃಷ್ಟಿಸಿದ್ದಾರೆ. ಇನ್ನೊಂದು ಧರ್ಮವನ್ನು ಕೀಳಾಗು ನೋಡುತ್ತ ತಮ್ಮ ಧರ್ಮದ ಮೇಲ್ಮೆಯನ್ನು ಸಾಧಿಸುವಲ್ಲಿ ಇನ್ನೂ ಹೆಚ್ಚಿನ ತೊಡಕುಗಳನ್ನು ಸೃಷ್ಟಿಸುತ್ತಾರೆ. ತಮ್ಮ ತಮ್ಮ ಧರ್ಮಗಳ ಅರಿವಿನ ಬೆಳಕನ್ನು ಕಡೆಗಣಿಸುತ್ತಾರೆ. ಆ ಅರಿವು ತಮ್ಮ ಸ್ವಾರ್ಥ ಸಾಧನೆಗೆ ಅಡ್ಡಿ ಮಾಡುತ್ತದೆ ಎಂಬುದನ್ನು ಅವರು ಬಲವಾಗಿ ನಂಬಿದ್ದಾರೆ. ಹೀಗಾಗಿ ಅವರೆಲ್ಲೋ ಅವರ ಧರ್ಮವೆಲ್ಲೋ ಎನ್ನುವ ದುರಂತ ಸ್ಥಿತಿಯನ್ನು ತಲುಪಿದ್ದಾರೆ. ಧರ್ಮದ ಹೆಸರಿನಲ್ಲಿ ಕ್ರೌರ್ಯವನ್ನು ಮೆರೆಯುವುದರ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಹೀನ ಸ್ಥಿತಿಯಲ್ಲಿ ಅವರು ಮುಂದುವರಿದಿದ್ದಾರೆ.
ಅವರೆಲ್ಲ ತಮ್ಮ ಧರ್ಮಗಳಲ್ಲಿಯಾದರೂ ಒಂದಾಗಿ ಇದ್ದಾರೆಯೆ ಎಂದು ಕೇಳಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ತಮ್ಮಲ್ಲೇ ಅವರು ಅನೇಕ ಜಾತಿ, ಉಪಜಾತಿಗಳೊಂದಿಗೆ ಮೇಲು ಕೀಳುಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವರೆಲ್ಲ ಒಂದಾಗಬೇಕಾದರೆ ಬೇರೆ ಧರ್ಮಗಳನ್ನು ವೈರಿ ಸ್ಥಾನದಲ್ಲಿ ನಿಲ್ಲಿಸಬೇಕು ಮತ್ತು ಅವುಗಳಿಂದ ಅಪಾಯವಿದೆ ಎಂದು ತಮ್ಮ ಧರ್ಮದವರನ್ನು ಎಚ್ಚರಿಸುತ್ತಲೇ ಇರಬೇಕು. ಆ ಮೂಲಕ ದ್ವೇಷಸಂಸ್ಕೃತಿಯನ್ನು ಬೆಳೆಸಬೇಕು, ಹೀಗೆ ಸಮಾಜವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುದೇ ಆಯಾ ಧರ್ಮಗಳಲ್ಲಿನ ಪ್ರಬಲರ ಗುರಿಯಾಗಿರುತ್ತದೆ.
ಎಲ್ಲ ಧರ್ಮ ಮತ್ತು ಜಾತಿಗಳಲ್ಲಿ ಉದಾತ್ತ ಮಾನವರಿರುತ್ತಾರೆ. ಅವರು ಧರ್ಮದ ಬೆಳಕಲ್ಲಿ ಮುನ್ನಡೆಯಬಯಸುತ್ತಾರೆ. ಜನ ಅವರನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಅವರ ವ್ಯಕ್ತಿತ್ವವನ್ನು ತಮ್ಮ ವ್ಯಕ್ತಿತ್ವಕ್ಕೆ ಸಮ ಮಾಡಿಕೊಂಡೇ ಹೊಗಳುತ್ತಾರೆ. ಆ ಮೂಲಕ ಅವರನ್ನು ಧರ್ಮ ರಕ್ಷಕರೆಂದು ಸಾರುತ್ತಾರೆ. ತಾವು ಪಾಲಿಸುತ್ತಿರುವ ಕ್ರಮವನ್ನೇ ಅವರು ಧರ್ಮವೆಂದು ಪ್ರಸಾರ ಮಾಡುತ್ತಾರೆ.
ಧರ್ಮಗ್ರಂಥಗಳು ಸಾರ್ವಕಾಲಿಕ ಸತ್ಯವನ್ನು ಹೇಳುವುದರ ಜೊತೆಗೆ ತಾವು ಹುಟ್ಟುವ ಕಾಲದ ಸ್ಥಿತಿಗತಿಗನುಗುಣವಾದ ವಾಸ್ತವದ ಹಿನ್ನೆಲೆಯಲ್ಲೂ ಅನೇಕ ವಿಚಾರಗಳನ್ನು ಹೇಳಿರುತ್ತವೆ. ಜನರು ತಮ್ಮ ನಡವಳಿಕೆಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಅಸ್ಥಗಿತಗೊಂಡ ವಿಚಾರಗಳನ್ನೇ ಎತ್ತಿಹಿಡಿಯುತ್ತಾರೆ. ಮತ್ತು ತಮ್ಮ ಹಿಂದಿನ ತಲೆಮಾರಿನವರು ನಡೆದುಕೊಂಡ ರೀತಿ ರಿಜಾಜುಗಳು ತಮ್ಮ ಸ್ವಾರ್ಥಕ್ಕೆ ಅನುಕೂಲಕರವಾಗಿದ್ದರೆ ಅವುಗಳನ್ನು ಪದೆ ಪದೆ ಮುನ್ನೆಲೆಗೆ ತರುತ್ತಾರೆ. ದೈನಂದಿನ ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಮತ್ತು ಭೌತಿಕ ವಸ್ತುಗಳ ಮೋಹ ಹಾಗೂ ದುರಾಸೆಗಳಿಂದಾಗಿ ಅವರು ಧರ್ಮವನ್ನು ಕಾಲ ಕಸದಂತೆ ಬಳಸಿಕೊಳ್ಳುತ್ತಾರೆ. ಧರ್ಮದ ಹೊರಗಿನವರನ್ನು ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಮತ್ತು ತಮ್ಮದೇ ಧರ್ಮದ ದುರ್ಬಲರ ತಲೆಯಲ್ಲಿ ತಮ್ಮ ಸ್ವಾರ್ಥವನ್ನು ಬಿತ್ತುತ್ತ ಅವರನ್ನು ಬಲಿಪಶು ಮಾಡುವಲ್ಲಿ ನಿಷ್ಣಾತರಾಗುತ್ತಾರೆ. ಹೀಗೆ ಜಾತಿಗಳು ಮತ್ತು ಧರ್ಮಗಳು ಈ ತೆರನಾಗಿ ಅಸ್ತಿತ್ವದಲ್ಲಿವೆ.
ಆಯಾ ಧರ್ಮಗಳಲ್ಲಿನ ತುಳಿತಕ್ಕೊಳಗಾದ ಜನರಾದರೂ ಒಂದಾಗಿದ್ದಾರೆಯೆ ಎಂದರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಅವರಲ್ಲೂ ಮೇಲು ಕೀಳುಗಳನ್ನು ಸೃಷ್ಟಿಸಿ ಒಂದಾಗದಂತೆ ನೋಡಿಕೊಂಡಿದ್ದಾರೆ.
ಇದೆಲ್ಲ ಎಂದೆಂದೂ ಸರಿಹೋಗದ ದುಃಸ್ಥಿತಿ ಎಂಬ ಭಾವ ಮೂಡುವುದರಲ್ಲಿ ಸಹಜವೇ ಆಗಿದೆ. ಸಮಾಜದಲ್ಲಿ ವಿಚಾರವಾದದ ಬೆಳವಣಿಗೆಯಿಂದ ಮಾತ್ರವೇ ನವಸಮಾಜದ ನಿರ್ಮಾಣವಾಗಲು ಸಾಧ್ಯ. ಎಲ್ಲ ಧರ್ಮಗಳನ್ನು ವಿಚಾರವಾದದ ಒರೆಗಲ್ಲಿಗೆ ಹಚ್ಚದಿದ್ದರೆ ಮಾನವಕುಲ ಇನ್ನೂ ಅಧೋಗತಿಗೆ ಹೋಗುವುದು. ಧರ್ಮಗಳ ತಿರಸ್ಕಾರದಿಂದ ವಿಚಾರವಾದಿಗಳು ಇದನ್ನು ಸಾಧಿಸಲಿಕ್ಕಾಗದು. ಧರ್ಮಗಳಲ್ಲಿನ ಅರಿವಿನ ಬೆಳಕಿನೊಂದಿಗೆ ಮಾತ್ರ ಈ ವಿಚಾರಹೀನ ಸ್ಥಿತಿಯಿಂದ ಹೊರಬರಲು ಸಾಧ್ಯ. ಅದಕ್ಕಾಗಿ ಮಾನವನ ಬದುಕಿಗೆ ಒಂದೇ ಧರ್ಮ ಸಾಲದು ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಮಾನವ ಏಕತೆಯ ಗುರಿ ಸಾಧಿಸುವುದಕ್ಕಾಗಿ ವಿವಿಧ ಧರ್ಮಗಳಲ್ಲಿ ಮಾನವೀಯ ಸ್ಪಂದನ ಹಾಗೂ ಶರಣರು, ಸೂಫಿಗಳು, ದಾಸರು ಮತ್ತು ವಿವಿಧ ಧರ್ಮಗಳ ಸಂತರ ಆಶಯಗಳ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಲೋಕಹಿತಾರ್ಥಕ್ಕಾಗಿ ಬಳಸುವಂಥ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಬೇಕು. ದುಷ್ಟರು, ಲಫಂಗರು, ಅತ್ಯಾಚಾರಿಗಳು ಮತ್ತು ರಾಜಕೀಯ ಸರ್ವಾಧಿಕಾರಿಗಳು ಧರ್ಮಗಳ ಹೆಸರಲ್ಲಿ ಕ್ರೌರ್ಯವನ್ನು ಬೆಳೆಸುತ್ತ ಸಮಾಜವನ್ನು ರಣರಂಗ ಮಾಡುವುದನ್ನು ತಡೆಯಲು ಉಳಿದಿರುವ ಮಾರ್ಗ ಇದೊಂದೇ ಆಗಿದೆ.
ಮನುಷ್ಯರು ಸ್ವರೂಪ ಗೊಂದಲದಿಂದ ದಿಕ್ಕುತಪ್ಪಿದವರಾಗಿದ್ದಾರೆ. ತಮ್ಮ ಐಡೆಂಟಿಟಿಗಾಗಿ ಧರ್ಮ, ಜಾತಿ ಮತ್ತು ಉಪಜಾತಿಗಳ ಮೊರೆ ಹೊಗುತ್ತಾರೆ. ದೈನಂದಿನ ಬದುಕಿಗಾಗಿ ಅವಕಾಶವಾದಿಗಳಾಗುತ್ತಾರೆ. ಅಸ್ಪೃಶ್ಯರ ಮಧ್ಯೆ ಕೂಡ ಮೇಲು ಕೀಳು ಭಾವ ಮೂಡುವಂಥ ದುರಂತ ಸ್ಥಿತಿಗೆ ನಾವು ಸಾಕ್ಷಿಯಾಗಿದ್ದೇವೆ. ಮಹಾವೀರ, ಬುದ್ಧ, ಜೀಸಸ್, ಪೈಗಂಬರ್, ಬಸವಣ್ಣ, ಗುರುನಾನಕ, ಕಬೀರ, ರಬಿದಾಸ್, ಗರೀಬ್ ನವಾಜ್, ಬಂದಾನವಾಜ್, ತುಕಾರಾಮ, ಗಾಂಧಿ, ಅಂಬೇಡ್ಕರ್ ಮುಂತಾದ ಸಮೂಹ ಬದುಕಿನ ಪ್ರತಿಪಾದಕರ ಚಿಂತನೆಗಳನ್ನು ಗಾಳಿಗೆ ತೂರಿ ಜಾತಿ, ಉಪಜಾತಿ, ಮತ, ಪಂಥ ಮುಂತಾದ ಗುಂಪುಗಳಲ್ಲಿ ಒಡೆದು ಹೋಗಿ ನರಳುತ್ತಿರುವ ಮಾನವ ಕುಲವನ್ನು ಮೇಲಕ್ಕೆತ್ತುವಲ್ಲಿ ಪ್ರತಿಯೊಬ್ಬ ವಿಚಾರವಾದಿಗಳ ಆದ್ಯ ಕರ್ತವ್ಯವಾಗಿದೆ.
ನನ್ನ ಬದುಕಿನ ನೆನಪಿನ ಆಗರದಲ್ಲಿ ಅದೆಷ್ಟೋ ಉದಾಹರಣೆಗಳಿವೆ, ಅದೆಷ್ಟೋ ಅನುಭವಗಳಾಗಿವೆ. ಅದನ್ನೆಲ್ಲ ಇಲ್ಲಿ ಹೇಳುತ್ತ ಕುಳಿತರೆ ದುಷ್ಟರು ಅವುಗಳನ್ನು ನಕಾರಾತ್ಮಕವಾಗಿ ನೋಡ ಬಯಸುತ್ತಾರೆ. ಶಿಷ್ಟರು ಸಕಾರಾತ್ಮಕವಾಗಿ ನೋಡಿದರೂ ಮುಂದೆ ಬಂದು ಪ್ರತಿಪಾದಿಸುವ ಮತ್ತು ದುಷ್ಟರನ್ನು ಎದುರಿಸುವ ಸಾಮರ್ಥ್ಯ ಹೊಂದಿರುವುದು ಅಷ್ಟಾಗಿ ಕಂಡುಬರುತ್ತಿಲ್ಲ. ಒಳ್ಳೆಯವರ ಮೌನ ಕೂಡ ಜಗತ್ತಿನ್ನಲ್ಲಿ ದುಷ್ಟರ ಅಟ್ಟಹಾಸ ಹೆಚ್ಚಾಗಲು ಕಾರಣವಾಗಿದೆ. ಒಳ್ಳೆಯವರು ಒಂದಾಗಲೇಬೇಕು ಎಲ್ಲ ಧರ್ಮಗಳಲ್ಲಿನ ದುಷ್ಟಶಕ್ತಿಗಳು ತಲೆ ಎತ್ತದಂತೆ ನೋಡಿಕೊಳ್ಳಲು ಈ ಒಂದಾಗುವಿಕೆ ಅವಶ್ಯವಾಗಿದೆ. ಇದು ದುಷ್ಟಶಕ್ತಿಗಳ ಯುಗ. ಜಗತ್ತಿನ ವಿವಿಧ ದೇಶಗಳಲ್ಲಿ ಫ್ಯಾಸಿಸ್ಟರು, ಜನಾಂಗವಾದಿಗಳು ಮತ್ತು ಕೋಮುವಾದಿಗಳು ಅಧಿಕಾರದ ಗದ್ದುಗೆಯನ್ನು ಏರುತ್ತಿದ್ದಾರೆ. ಎಲ್ಲ ಧರ್ಮಗಳು ತಮ್ಮ ಅರ್ಥವನ್ನು ಕಳೆದುಕೊಂಡು ವಿವಿಧ ಧರ್ಮಗಳ ಉಗ್ರರ ಕೈಗೊಂಬೆಗಳಾಗುತ್ತಿವೆ. ನಿಜಮಾನವರ ಕುರಿತು ಧರ್ಮಗಳು ಅಂತಃಕರಣದಿಂದ ತಿಳಿಸಿವೆ. ಮಾನವನ ವ್ಯಕ್ತಿತ್ವದ ಉದಾತ್ತೀಕರಣದ ಕನಸನ್ನು ಕಂಡಿವೆ. ಕಾರ್ಲ್ ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಮುಂತಾದವರು ಸಮತಾವಾದದ ಮೂಲಕ ಮಾನವಕುಲವನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ. ಈ ಮೇಲೆತ್ತುವ ಪ್ರಯತ್ನ ನಿರಂತರವಾಗಿರಬೇಕು. ಅದಕ್ಕಾಗಿ ವಿವಿಧ ಮೂಲದ ಮಾನವತಾವಾದಿಗಳು ಮತ್ತು ವಿಚಾರವಾದಿಗಳು ಪ್ರಯತ್ನಿಸುತ್ತಲೇ ಇರಬೇಕು.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.