Advertisement
ನಗುತ್ತಲೆ ಬದುಕಿದವಳು ನನ್ನಮ್ಮ: ಮಾರುತಿ ಗೋಪಿಕುಂಟೆ ಸರಣಿ

ನಗುತ್ತಲೆ ಬದುಕಿದವಳು ನನ್ನಮ್ಮ: ಮಾರುತಿ ಗೋಪಿಕುಂಟೆ ಸರಣಿ

ನನಗಾಗ ಐದಾರು ವರ್ಷಗಳಿರಬೇಕು. ಪ್ರತಿದಿನ ಅಮ್ಮ ಕೂಲಿ ಹೋಗುತ್ತಿದ್ದಳು. ಅವಳಿಗೆ ಬರುವ ಅಲ್ಪ ಕೂಲಿಯಲ್ಲಿ ಇಡಿ ಬದುಕನ್ನು ನಡೆಸಬೇಕು. ಅದರಲ್ಲಿ ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೂ ಕೂಲಿಯ ಹಣದಿಂದಲೆ ಸರಿದೂಗಿಸಬೇಕು. ಅಕ್ಷರ ಜ್ಞಾನವಿಲ್ಲದ ಆಕೆ ಹೇಗೆ ನಿಭಾಯಿಸುತ್ತಿದ್ದಳೊ. ಇಂದಿಗೂ ಅದೊಂದು ಆಶ್ಚರ್ಯದ ಸಂಗತಿ. ಇದರ ನಡುವೆಯೂ ಖಾಯಿಲೆ ಬಂದರೆ ಅದರಲ್ಲಿಯೆ ಈ ಖರ್ಚು ಸೇರಿಕೊಳ್ಳುತ್ತಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೆರಡನೆಯ ಕಂತು

ನಿಜವಾದ ಬದುಕು ತಿಳಿಯುವುದು ಕಷ್ಟಗಳಿಂದ ಅನಿಸುತ್ತದೆ. ಕಷ್ಟಗಳೆ ಇಲ್ಲವೆಂದಮೇಲೆ ಬದುಕು ಸಾರವೆ ಇಲ್ಲದ ರುಚಿಸದ ಅಡುಗೆಯಿದ್ದಂತೆ, ಬದುಕಿನಲ್ಲಿ ಏರಿಳಿತಗಳಿರಬೇಕು, ಆಗಲೆ ನಾವು ಸಮ ದಾರಿಯಲ್ಲಿ ನಡೆಯಲು ಸಾಧ್ಯ. ಜೀವನಕ್ಕೊಂದು ವೇಗವಿದೆ. ಬದುಕು ಆ ವೇಗದಲ್ಲಿ ಮುನ್ನಡೆಯುವುದಕ್ಕೆ ಸಾಧ್ಯ. ಇಂತಹ ಅನೇಕ ಕಷ್ಟಗಳ ಏರಿಳಿತಗಳಲ್ಲಿ ಬದುಕು ನಡೆಸಿದವಳು ಅಮ್ಮ. ಅಕ್ಷರ ಜ್ಞಾನವಿಲ್ಲದ ಆಕೆ ಬದುಕಿನ ಪೆಟ್ಟಿಗೆ ಬಗ್ಗದವಳು. ಎಂದೂ ಆಡಂಬರದ ಬದುಕಿಗೆ ಒಗ್ಗಿಕೊಂಡವಳಲ್ಲ. ಆದರೆ ಗಟ್ಟಿ ಮನಸ್ಸಿನವಳು ಎಂದಷ್ಟೆ ಹೇಳಬಲ್ಲೆ. ವಿಪರೀತ ಬಡತನದ ನಡುವೆಯೂ ನಮ್ಮನ್ನು ಸಾಕಿದವಳು ಅವಳು. ಎಂದೂ ಯಾವ ಕಷ್ಟವನ್ನೂ ಮಕ್ಕಳ ಎದುರಿಗೆ ಹೇಳಿಕೊಂಡವಳಲ್ಲ. ಈಗಲೂ ಅಂತಹದೆ ಮನಸ್ಥಿತಿಯನ್ನು ಕಾಯ್ದುಕೊಂಡು ಬಂದವಳು.

ಅಮ್ಮ ಎಂದರೆ ಮನಸ್ಸಿಗೆ ತಟ್ಟುವ ಜೀವ. ಅದೊಂದು ಭಾವುಕ ಜಗತ್ತಿನೊಳಗೆ ವಿಶಿಷ್ಟ ಸ್ಥಾನ ಪಡೆದ ಜೀವ “ಅಮ್ಮ ಎಂದರೆ ಏನೊ ಹರುಷವೊ ನಮ್ಮ ಬಾಳಿಗೆ ನೀನೆ ಜೀವವೂ” ಈ ಹಾಡು ನನ್ನ ಮನಸ್ಸನ್ನು ಆಗಾಗ ತಟ್ಟುತ್ತಲೆ ಇರುತ್ತದೆ. ಅದಕ್ಕೆ ಅಮ್ಮ ಅನುಭವಿಸಿದ ಬಡತನದ ಬದುಕು, ನಮಗಾಗಿ ಆಕೆ ಪಟ್ಟ ಕಷ್ಟಗಳು ಕಾರಣವಿರಬಹುದು.

ನನಗಾಗ ಐದಾರು ವರ್ಷಗಳಿರಬೇಕು. ಪ್ರತಿದಿನ ಅಮ್ಮ ಕೂಲಿ ಹೋಗುತ್ತಿದ್ದಳು. ಅವಳಿಗೆ ಬರುವ ಅಲ್ಪ ಕೂಲಿಯಲ್ಲಿ ಇಡಿ ಬದುಕನ್ನು ನಡೆಸಬೇಕು. ಅದರಲ್ಲಿ ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೂ ಕೂಲಿಯ ಹಣದಿಂದಲೆ ಸರಿದೂಗಿಸಬೇಕು. ಅಕ್ಷರ ಜ್ಞಾನವಿಲ್ಲದ ಆಕೆ ಹೇಗೆ ನಿಭಾಯಿಸುತ್ತಿದ್ದಳೊ. ಇಂದಿಗೂ ಅದೊಂದು ಆಶ್ಚರ್ಯದ ಸಂಗತಿ. ಇದರ ನಡುವೆಯೂ ಖಾಯಿಲೆ ಬಂದರೆ ಅದರಲ್ಲಿಯೆ ಈ ಖರ್ಚು ಸೇರಿಕೊಳ್ಳುತ್ತಿತ್ತು. ನಾನೆಂದರೆ ಅಮ್ಮನಿಗೆ ಬಹಳ ಪ್ರೀತಿ. ಬಹಳ ಲವಲವಿಕೆಯಿಂದ ಇದ್ದ ನನಗೆ ಇದ್ದಕ್ಕಿದ್ದಂತೆ ಒಂದುದಿನ ವಿಪರೀತ ಜ್ವರ ಬಂದು ಕೈಕಾಲುಗಳಲ್ಲಿ ಶಕ್ತಿಯಿಲ್ಲದಂತಾಗಿ ಕುಸಿದಂತೆ ಕುಳಿತಿದ್ದೆ. ಮನೆಯಲ್ಲಿ ಯಾರೂ ಇರಲಿಲ್ಲ. ಅಮ್ಮ ಕೂಲಿಗೆ ಹೋಗಿದ್ದಳು. ಅಕ್ಕಂದಿರು ಶಾಲೆಗೆ ಹೋಗಿದ್ದರು. ನಾನು ಬೇರೆ ದಾರಿಯಿಲ್ಲದೆ ಮನೆಯ ಪಡಸಾಲೆಯಲ್ಲಿ ಮುದುಡಿ ಮಲಗಿದ್ದೆ. ಅಮ್ಮ ಸಾಯಂಕಾಲ ಬಂದು, ನನ್ನ ಸ್ಥಿತಿ ನೋಡಿ ಗಾಬರಿಯಾದಳು. ಮುಖದ ಮೇಲೆ ಅಲ್ಲಲ್ಲಿ ಚಿಕ್ಕ ಚಿಕ್ಕ ಕಪ್ಪು ಕಲೆಗಳು ಕಂಡೂ ಕಾಣದಂತೆ ಕಾಣುತ್ತಿದ್ದವು. ಅದು ಸಿಡುಬಿನ ಗುಳ್ಳೆಗಳು ಎಂದು ಅಮ್ಮನಿಗೆ ಅರಿವಾಯಿತು. ಇದು ಆಸ್ಪತ್ರೆಗೆ ಹೋಗಿ ಸರಿಪಡಿಸುವಂಥದ್ದಲ್ಲ ಎಂದರಿತ ಆಕೆ ಗೋವಿನ ಗಂಜಳದಲ್ಲಿ ಬೇವಿನಸೊಪ್ಪು ಹರಿಶಿಣ ಬೆರೆಸಿ ಔಷಧಿ ತಯಾರಿಸಿ ಬೇವಿನಕೊನೆಯಲ್ಲಿ ಅದನ್ನು ಕಪ್ಪು ಕಲೆಗಳಿಗೆ ಸವರಿದಳು. ಹಣೆಯ ಮೇಲೆ ಬಟ್ಟೆಯೊಂದನ್ನು ನೆನೆಹಾಕಿ ದೇಹದ ಉಷ್ಣಾಂಶ ಇಳಿಯುವಂತೆ ಜಾಗೃತಿ ವಹಿಸಿದಳು. ಮನೆ ಹಾಗೂ ಅಂಗಳವನ್ನೆಲ್ಲಾ ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸಿದಳು. ಇದು ಸಾಂಕ್ರಾಮಿಕವಾದುದರಿಂದ ಅದು ಇನ್ನೊಬ್ಬರಿಗೆ ಹರಡಬಾರದೆಂಬ ಎಚ್ಚರಿಕೆ ಆಕೆಯದ್ದು.

ಮೂರು ದಿನ ನನ್ನನ್ನು ಚೇತರಿಸಿಕೊಳ್ಳುವಂತೆ ಮಾಡಿದಳು ಅಮ್ಮ. ಅದು ನಿಧಾನವಾಗಿ ನನ್ನಿಂದ ದೂರವಾಗುವವರೆಗೆ ಎಲ್ಲಿಗೂ ಕೂಲಿಗೆ ಹೋಗುವಂತಿಲ್ಲ. ಆದರೆ ಹೊಟ್ಟೆಗೇನು ಮಾಡುವುದು. ಪ್ರತಿದಿನ ಕೂಲಿ ಹೋಗುತ್ತಿದ್ದ ಯಜಮಾನರ ಹತ್ತಿರ ಏನೇನು ಹೇಳಿದಳೊ. ಎಷ್ಟು ಗೋಳಾಡಿದಳೊ ಗೊತ್ತಿಲ್ಲ. ಅಂತೂ ಅವರು ಅಮ್ಮನ ಒಳ್ಳೆಯತನಕ್ಕೆ ಪರ್ವಾಗಿಲ್ಲ ನಿಮ್ಮ ಮಗ ಹುಷಾರಾದರೆ ಸಾಕು ಪ್ರತಿದಿನ ಊಟವನ್ನು ಮನೆಗೆ ಬಂದು ಪಡೆದುಕೊಂಡು ಹೋಗು ಎಂದರು. ಅದಕ್ಕೆ ಕಾರಣವೂ ಇದೆ. ‘ದೊಡ್ಡಕ್ನೋರು ‘ಮನೆ ಎಂದು ಕರೆಯುತ್ತಿದ್ದ ಆ ಮನೆಯ ಒಡತಿ ಬಹಳ ಒಳ್ಳೆಯವರು. ಅಮ್ಮ ಎಂದರೆ ಬಹಳ ಪ್ರೀತಿ ಆಕೆಗೆ, ಆ ಮನೆಯ ತೊಳೆಯುವುದು ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವುದು ಅದಕ್ಕೆ ಕಾರಣವಾಗಿತ್ತು. ಕೆಲಸದ ಪ್ರಾಮಾಣಿಕತೆ ಅಮ್ಮನನ್ನು ಒಡತಿ ಇಷ್ಟ ಪಡುವುದಕ್ಕೆ ಕಾರಣವಾಗಿತ್ತು. ನಾನು ಎಂದಾದರೂ ಶಾಲೆಯಿಂದ ಮನೆಯಲ್ಲಿ ಅಮ್ಮ ಕಾಣಿಸಲಿಲ್ಲವೆಂದರೆ ಸೀದಾ ಆ ಮನೆಗೆ ಹೋಗುತ್ತಿದ್ದೆ. ಆ ಮನೆಯಲ್ಲಿದ್ದದ್ದನ್ನು ತಿನ್ನಲು ನನಗೆ ಬಲವಂತವಾಗಿ ಕೊಡುತ್ತಿದ್ದರು. ಅಮ್ಮ ಸ್ವಾಭಿಮಾನಿಯಾದ್ದರಿಂದ ಕೊಟ್ಟಿದ್ದನ್ನೆಲ್ಲಾ ಇಸಿದುಕೊಳ್ಳುವಂತಿರಲಿಲ್ಲ. ಕೂಲಿ ಮಾಡಿದ್ದಕ್ಕಷ್ಟೆ ಪಡೆಯಬೇಕು ಎಂಬ ಧೋರಣೆ ಅಮ್ಮನದು. ಅವರು ಬಲವಂತ ಮಾಡಿ, ಅಮ್ಮ ಒಪ್ಪಿದಾಗ ಮಾತ್ರ ನಾವು ಇಸ್ಕೊಳ್ತಿದ್ವಿ. ಇವತ್ತು ನೆನೆದರೆ ಅಮ್ಮನ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೇಗೊ ಎರಡ್ಮೂರು ದಿನ ಊಟವೇನೊ ಸಿಕ್ಕುತ್ತಿತ್ತು. ಆದರೆ ಅದಕ್ಕಾಗಿ ಹೆಚ್ಚುವರಿಯಾಗಿ ಕೆಲಸ ಮಾಡಬೇಕೆಂದು ತಿಳಿದಿರಲಿಲ್ಲ.

ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೊ ಹಾಗೆ ಸಿಡುಬಿನ ಖಾಯಿಲೆ ಇನ್ನೇನು ಕಡಿಮೆಯಾಯಿತು ಅನ್ನುವಾಗಲೆ ನನಗೆ ದಡಾರವು ಬಂದು ನನ್ನನ್ನು ಹೈರಾಣು ಮಾಡಿದವು. ಪ್ರತಿದಿನ ಅಮ್ಮ ಅದಕ್ಕೆ ಔಷಧಿ ಹಚ್ಚಿ ಮಲಗಿಸುತ್ತಿದ್ದಳು. ಈಗಲೂ ಅದರ ಗುರುತಾಗಿ ನನ್ನ ಮೈಯಲ್ಲಿ ಕಂಡೂ ಕಾಣದ ಕಪ್ಪು ಕಲೆಗಳು ಇವೆ. ಅವುಗಳನ್ನು ನೋಡುವಾಗೆಲ್ಲ ನನಗೆ ಆ ದಿನಗಳು ನೆನಪಾಗುತ್ತವೆ.ಕಷ್ಟದ ದಿನಗಳಲ್ಲಿ ಅಮ್ಮನ ಜೊತೆ ಬೆಂಗಾವಲಾಗಿ ಯಾರೂ ಇರಲಿಲ್ಲ. ಅವಳು ಯಾರ ಸಹಾಯವನ್ನು ಬೇಡಲಿಲ್ಲ. ಒಮ್ಮೊಮ್ಮೆ ನಾನು ಅದರ ಬಗ್ಗೆಯೇ ಚಿಂತಿಸುತ್ತೇನೆ ಅಮ್ಮನಿಗೆ ಅಂತಹ ಶಕ್ತಿ ಬಂದಿದ್ದಾದರೂ ಹೇಗೆ ಎಂದು. ಅಮ್ಮ ಯಾವತ್ತೂ ಬೇರೆಯವರ ಸುಖವನ್ನು ನೋಡಿ ಹಲುಬಿದವಳಲ್ಲ. ತನ್ನ ಪಾಲಿಗೆ ಬಂದಿದ್ದು ಇಷ್ಟೆ ಎಂದು ಬದುಕನ್ನು ನಡೆಸಿದವಳು. ನಾನು ಯಾವಾಗಲಾದರೂ ನನ್ನ ಮೇಲೆಯೆ ಯಾಕಿಷ್ಟು ಮಮತೆ ಎಂದು ಕೇಳಿದರೆ ನಿನ್ನನ್ನು ತಪಸ್ಸು ಮಾಡಿ ಪಡೆದಿದ್ದೇವೆ. ಈ ಮೊದಲು ನನಗೆ ಇಬ್ಬರೂ ಹೆಣ್ಣು ಮಕ್ಕಳು ಹುಟ್ಟಿದ್ದವು. ಮೂರನೆಯದು ಹೆಣ್ಣಾದರೆ ಎಂಬ ಭಯ ನನ್ನನ್ನು ಕಾಡುತ್ತಿತ್ತು. ಅದಕ್ಕಾಗಿ ದೇವರಿಗೆ ಹರಕೆ ಹೊತ್ತಿದ್ದೆವು. ಕರಿಯಮ್ಮ ದೇವರ ಸನ್ನಿಧಿಯಲ್ಲಿ ಏಳುರಾತ್ರಿ ಪೂಜಿಸಿದ ಮೇಲೆ ಹುಟ್ಟಿದವನೆಂದು ಒಂದಿಷ್ಟು ಜಾಸ್ತಿ ಮಮತೆ ಎನ್ನುತ್ತಿದ್ದರು. ಆದರೆ ಎಲ್ಲಾ ಮಕ್ಕಳನ್ನು ಸಮಾನವಾಗಿಯೇ ಸಾಕಿದ್ದರು. ಯಾರಿಗೂ ಬೇದ ಭಾವ ತೋರಿಸುತ್ತಿರಲಿಲ್ಲ. ಹಾಗೆ ನೋಡಿದರೆ ನಮ್ಮ ಮನೆಯಲ್ಲಿ ಅತಿ ಹೆಚ್ಚು ಅಪ್ಪನಿಂದ ಹೊಡೆತ ತಿಂದವನು ನಾನೆ. ಅದಕ್ಕೆ ನನ್ನ ಬಾಲ್ಯದ ಆಟ ತುಂಟಾಟಗಳು ಕಾರಣವಿರಬಹುದು. ಆದರೆ ಅಮ್ಮನಿಂದ ಹೊಡೆತ ತಿಂದದ್ದು ಕಡಿಮೆಯೆ. ಅಮ್ಮ ಅಂತಃಕರಣ ತುಂಬಿದ ಮನಸ್ಸಿನವಳು. ಅಂತಹದೊಂದು ಅಂತಃಕರಣ ನನ್ನಲ್ಲೂ ಬಂದಿದೆ. ನಾನು ಬೇಗ ಮರಗುತ್ತೇನೆ. ಅಮ್ಮನು ಹಾಗೆಯೆ ಬಡತನದಲ್ಲಿಯೆ ಬದುಕಿದರೂ ಯಾರಿಗೂ ಸಹಾಯಕ್ಕಾಗಿ ಕೈಚಾಚಲಿಲ್ಲ. ಕ್ರಮೇಣ ಕೂತು ಊಟಮಾಡುವಷ್ಟು ಅನುಕೂಲತೆ ಬಂದಾಗಲೂ ಅಮ್ಮ ಮನೆಯಲ್ಲಿಯೆ ಗೃಹ ಕೈಗಾರಿಕೆ ಮಾಡಿ ಅಪ್ಪನಿಗೆ ಸಹಾಯ ಮಾಡುತ್ತಿದ್ದಳು.

ಅಪ್ಪ ಒಂದು ಕಿರಾಣಿ ಅಂಗಡಿ ತೆರೆದಿದ್ದ. ನಮ್ಮನ್ನು ಬೇಡ ಎಂದವರೆಲ್ಲ ನಮ್ಮ ಸಹಾಯವನ್ನು ಕೇಳಿಕೊಂಡು ಬಂದರು. ಅಮ್ಮ ಅವಾಗಲೂ ಯಾರಿಗೂ ಸಹಾಯ ಮಾಡುವುದು ಬೇಡ ಅನ್ನಲಿಲ್ಲ. ನಮ್ಮಿಂದ ಸಹಾಯ ಪಡೆದವರು ನಮ್ಮತ್ತ ತಿರುಗಿಯೂ ನೋಡಲಿಲ್ಲ. ಅಮ್ಮ ಅವಾಗಲೂ ಯಾರನ್ನು ದೂಷಿಸಲಿಲ್ಲ. ಉಬ್ಬರವಿಳಿತದ ಈ ಬದುಕು ನಮ್ಮನ್ನು ಪದೆ ಪದೆ ಕಷ್ಟಗಳಿಗೆ ನೂಕಿದೆ. ಅಮ್ಮ ಯಾವಾಗಲೂ ಸ್ಥಿತಪ್ರಜ್ಞೆ; ಅದನ್ನು ಬಂದಂತೆ ಸ್ವೀಕರಿಸಿದಳು. ಇನ್ನೇನು ಬದುಕು ಚೆನ್ನಾಯಿತು ಎನ್ನುವಷ್ಟರಲ್ಲಿಯೆ ಅಪ್ಪನಿಗೆ ಖಾಯಿಲೆ ಬಂದು ದಿಢೀರನೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಯಿತು. ಇದ್ದ ಒಂದಿಷ್ಟು ಹಣವೂ ಖರ್ಚುಮಾಡಿ ಅಪ್ಪನನ್ನು ಉಳಿಸಿಕೊಂಡಿದ್ದೆವು. ಕಿರಾಣಿ ಅಂಗಡಿಯನ್ನು ಮುಚ್ಚಬೇಕಾಯಿತು. ಆದರೂ ಅಪ್ಪನನ್ನು ಅಮ್ಮ ಜತನವಾಗಿ ಕಾಪಾಡಿಕೊಂಡಿದ್ದಳು.

ಮನೆಯಲ್ಲಿ ಪ್ರತಿದಿನ ಅಪ್ಪನಿಗೆ ಬೆಳಗ್ಗೆ ತಿಂಡಿ ಬೇಕಾದ್ದರಿಂದ ಮನೆಯಲ್ಲಿ ಅದನ್ನು ಮಾಡಲು ಅಮ್ಮನಿಗೆ ಕಷ್ಟವಾಗುತ್ತಿದ್ದರಿಂದ ಸುಮಾರು ಒಂದು ವರ್ಷದ ಕಾಲ ಎರಡು ಕಿ ಮೀ ದೂರ ನಡೆದು ಹೋಗಿ ತಿಂಡಿ ತಂದು ಕೊಡುವ ಜವಾಬ್ದಾರಿ ನನ್ನದಾಗಿತ್ತು. ಬೆಳ್ ಬೆಳಿಗ್ಗೆ ಕೈಯಲ್ಲಿ ಟಿಫನ್ ಕೆರೆ (ಉದ್ದನೆಯ ಸ್ಟೀಲ್ ಪಾತ್ರೆ) ಹಿಡಿದುಕೊಂಡು ನೋಡುತ್ತಿದ್ದೆ. ಅಪ್ಪ ಎಂಟು ಗಂಟೆಗೆ ತಿನ್ನಬೇಕಾಗಿತ್ತು. ಅಷ್ಟರೊಳಗೆ ಬಿಸಿ ಬಿಸಿ ಇಡ್ಲಿಯನ್ನು ತಂದುಕೊಡಬೇಕಾಗಿತ್ತು. ಬೆಳಿಗ್ಗೆ ಹೊರಟೆನೆಂದರೆ ಸಾಕು ಓ ಹೊರಟ ತಿಂಡಿ ತರೋದಕ್ಕೆ ಎಂದು ಜನ ಮಾತಾಡಿಕೊಳ್ಳುವಷ್ಟು ಜನಪ್ರಿಯತೆ ಪಡೆದಿದ್ದೆ. ಮನೆಯಲ್ಲಿ ಅಮ್ಮ ಇಬ್ಬರೂ ಅಕ್ಕಂದಿರನ್ನು ಶಾಲೆಗೆ ಕಳಿಸಬೇಕಿತ್ತು. ಒಬ್ಬ ತಮ್ಮನನ್ನು ನೋಡಿಕೊಳ್ಳಬೇಕಾಗಿತ್ತು. ಇದರ ಜೊತೆಯಲ್ಲಿ ಬೀಡಿ ಸುತ್ತುವ ಕಾಯಕದಿಂದಲೆ ಮನೆ ನಡೆಯಬೇಕಾಗಿತ್ತು. ಒಂದೆರಡು ವರ್ಷಗಳವರೆಗೂ ಕಷ್ಟದ ಬದುಕು ನಮ್ಮದಾಗಿತ್ತು. ಅಮ್ಮ ಎಂದೂ ಎದೆ ಗುಂದಲಿಲ್ಲ ಬದುಕಿದಳು… ಕಷ್ಟಗಳನ್ನು ನುಂಗಿ ನಗುತ್ತಾ ಬದುಕಿದಳು ಈಗಲೂ…. ಬೆಳೆದ ಮಕ್ಕಳ ಸುಖದ ಸಂಭ್ರಮದ ದಿನಗಳನ್ನು ನೋಡಿ ನಗುತ್ತಲೆ ಬದುಕಿದ್ದಾಳೆ… ಯಾಕೆಂದರೆ ಅಮ್ಮ ಅಂದ್ರ ಅಮ್ಮ ಅಷ್ಟೆ… ಅವಳಿಗೆ ಬೇರೆ ಯಾರೂ ಸಾಟಿಯಿಲ್ಲ…

(ಮುಂದುವರಿಯುವುದು)

About The Author

ಮಾರುತಿ ಗೋಪಿಕುಂಟೆ

ಮಾರುತಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೋಪಿಕುಂಟೆ ಗ್ರಾಮದವರು. ಶ್ರೀ ಅಮ್ಮಾಜಿ ಗ್ರಾಮಾಂತರ ಪ್ರೌಢಶಾಲೆ ಹಾರೋಗೆರೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕತೆ-ಕವನಸಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಎದೆಯ ನೆಲದ ಸಾಲು" ಎಂಬ ಕವನ ಸಂಕಲನ ಅಚ್ಚಿನಲ್ಲಿದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ