Advertisement
ನಡಿಗೆಯ ದಾರಿ ಕರುಣಿಸಿದ ದುಪ್ಪಟ್ಟು ಖುಷಿ

ನಡಿಗೆಯ ದಾರಿ ಕರುಣಿಸಿದ ದುಪ್ಪಟ್ಟು ಖುಷಿ

ಕಾಲಚಕ್ರದ ಉರುಳುವಿಕೆಯಡಿ ಸಿಲುಕಿ ಇಂದು ವಾತಾವರಣದಲ್ಲಿ ಬದಲಾವಣೆಗಳಾಗಿವೆ. ಮುಂಜಾನೆಯ ನೀರವತೆಗೆ ಭಂಗ ತರುವ ವಾಹನಗಳ ಓಡಾಟ ಆರಂಭವಾಗಿರುತ್ತದೆ. ವಿಶಾಲ ಭತ್ತದ ಗದ್ದೆಗಳೆಲ್ಲ ಸೈಟುಗಳಾಗಿ ಪರಿವರ್ತಿತವಾಗಿ ಇಂದು ಅಲ್ಲಿ ಕಟ್ಟಡಗಳು ಮೇಲೆದ್ದಿವೆ. ಸೇತುವೆ ಮೇಲಿನ ಮುದ್ದು ಪಾರಿವಾಳಗಳು ಗುಬ್ಬಚ್ಚಿಗಳು ಎಲ್ಲಿ ಹೋದವೋ. ರಸ್ತೆ ಅಗಲೀಕರಣಕ್ಕಾಗಿ ಇಕ್ಕೆಲದ ಮರಗಳ ಬಲಿಯಾಗಿದೆ. ಇಷ್ಟಾದರೂ ಇಲ್ಲಿ ಅರಸುವ ಕಣ್ಣುಗಳಿಗೆ ಬರವಿಲ್ಲದಂತೆ ಪ್ರಕೃತಿ ತನ್ನ ಸೊಬಗನ್ನು ಕಣ್ತುಂಬಿ ಮನವನ್ನು ಸಂತೈಸುವಷ್ಟು ಉದಾರಿ. –ಕೆ.ಆರ್. ಉಮಾದೇವಿ ಉರಾಳ ಬರೆದ ಹೊಸ  ಪ್ರಬಂಧ  ಇಲ್ಲಿದೆ. 

 

ನಂಗ್ಯಾಕವೆಲ್ಲಾ…
ಯಾವುವೆಲ್ಲಾ ಅಂದ್ರಾ?…ಹೇಳ್ತೀನಿ.

ನನ್ನ ಸ್ನೇಹಿತರು, ಸಹೋದ್ಯೋಗಿಗಳು ತೂಕ ಇಳಿಸುವುದರ ಕುರಿತು ಅನುಸರಿಸಬೇಕಾದ ಕ್ರಮಗಳೇನು, ಪಥ್ಯ ಏನು ಎಂದೆಲ್ಲಾ ಗಹನವಾಗಿ ಚರ್ಚಿಸುತ್ತಿದ್ದರೆ ನಾನು ಮಾತ್ರ ಅದಕ್ಕೂ ನನಗೂ ಸಂಬಂಧವಿಲ್ಲ ಎಂಬಂತೆ ನಂಗ್ಯಾಕವೆಲ್ಲಾ ಎಂದು ಮುಖ ತಿರುವಿಕೊಂಡೇ ಇರುತ್ತಿದ್ದವಳು. ಏಕೆಂದರೆ ನನಗೆ ನೆನಪು ಇರುವ ಬಾಲ್ಯದಿಂದಲೂ ಸಣಕಲಿಯಾಗೇ ಬೆಳೆದು ಬಂದವಳು ನಾನು. ಮೂರನೇ ವಯಸ್ಸಿನಲ್ಲಿ ಎತ್ತಿಕೊಳ್ಳಲು ಕಷ್ಟ ಎನಿಸುವಷ್ಟು ದಷ್ಟಪುಷ್ಟಳಾಗಿದ್ದೆನೆಂದು ಅಮ್ಮ ಹೇಳುವಂತೆಯೇ ಅದನ್ನು ಪುಷ್ಟೀಕರಿಸುವ ಒಂದು ಹಳೆಯ ಫೋಟೋ ಕೂಡ ಇದೆಯಾದರೂ, ಅದು ನನ್ನ ನೆನಪಿನಲ್ಲಿರುವ ಸಂಗತಿಯಲ್ಲ. ಹೀಗಾಗಿ ವಯಸ್ಸಿಗಿಂತ ನನ್ನನ್ನು ಚಿಕ್ಕವಳೆಂದು ಪರಿಗಣಿಸಿದವರೇ ಹೆಚ್ಚುಕಮ್ಮಿ ಎಲ್ಲರೂ. ನನ್ನ ತಂಗಿ ಸುಧಾ ಮೈಕೈ ತುಂಬಿಕೊಂಡು ಅಗಲ ಮೈಕಟ್ಟಿನವಳಾದ್ದರಿಂದ ನಾನು ಅವಳು ಒಟ್ಟಿಗಿದ್ದರೆ, ನಾನೇ ಅಕ್ಕ ಎಂದು ಬಿಡಿಸಿ ಹೇಳಿದರೂ ಕೇಳಿ ಆಶ್ಚರ್ಯಪಡುವುದು ಸಾಮಾನ್ಯದ ಸಂಗತಿಯಾಗಿತ್ತು. ನಗುಮೊಗದ ಮಾತುಗಾರ್ತಿ ಸರಸಮಯಿ ಸುಧಾ ಈ ಹಾಸ್ಯಮಯ ಸನ್ನಿವೇಶವನ್ನು ಮನಸಾರೆ ಸವಿಯುತ್ತಿದ್ದಳು. ಇದ್ದ ಕೃಶಕಾಯ ಸಾಲದೆಂದು ಮೂರುವರ್ಷ ಮೊದಲೇ ಶಾಲೆಗೆ ಬೇರೆ ಸೇರಿಸಿದ್ದರಿಂದ ತರಗತಿಯಲ್ಲಿ ವಿದ್ಯಾಭ್ಯಾಸದಾದ್ಯಂತ ಮುಂದಿನ ಬೆಂಚಿನ ಮೇಷ್ಟ್ರು ಮತ್ತು ಬೋರ್ಡಿಗೆ ಸಮೀಪವಾಗುವ ತುದಿಯ ಸೀಟೇ ನನಗೆ ಸದಾ ಗ್ಯಾರಂಟಿ.

ಇಂತಿಪ್ಪ ನನಗೂ ಎಲ್ಲರಂತೇ ಬಂದೇ ಬಂದಿತಪ್ಪ ನಿಡುಸುಯ್ಯುತ್ತಲೇ ನಿರ್ವಾಹವಿಲ್ಲದೆ ಸ್ವಾಗತಿಸಬೇಕಾದ ಆ ನಲ್ವತ್ತನೇ ವರ್ಷ. ಹುಮ್ಮಸ್ಸಿನ ಯೌವನ ಬೊಗಸೆ ನೀರಿನಂತೆ ಕೈಜಾರಿ ಹೋಗುತ್ತಿದೆ, ಮಧ್ಯವಯಸ್ಕಳಾಗಿ ಮುಂದಿನ ಯಾತ್ರೆ ಪ್ರಾರಂಭಿಸಬೇಕಿದೆ ಎಂದು ಬದುಕಿನ ಪಾಠಶಾಲೆ ಮುಲಾಜಿಲ್ಲದೆ ಜಾಗಟೆ ಬಾರಿಸಿ ಹೇಳಿಬಿಟ್ಟಿತ್ತು. ಈ ಎಚ್ಚರಿಕೆಯ ಗಂಟೆಗೆ ಕಿವಿಗೊಡಲೇಬೇಕಿತ್ತು. ಕನ್ನಡಿ ಕೂಡ ‘ಸುತ್ತಳತೆ ಇನಿತಿನಿತೇ ಜಾಸ್ತಿಯಾಗುತ್ತಿದೆ, ನೋಡಿಕೋ’ ಎಂದು ತೋರಿಸುತ್ತಿತ್ತು. ಅದುವರೆಗೆ ನರಪೇತಲಿಯಾಗೇ ನನ್ನನ್ನು ಕಂಡವರೆಲ್ಲ ಸ್ವಲ್ಪ ಸ್ವಲ್ಪ ದಪ್ಪಗಾಗುತ್ತಿರುವುದನ್ನು ಬಾಯಿಬಿಟ್ಟು ಹೇಳಲಾರಂಭಿಸಿದರು.

ನಾನಾದರೋ ಕದಿರುಕಡ್ಡಿಯಂತಿದ್ದವಳು ಏನೋ ಸ್ವಲ್ಪ ಮೈಕೈ ತುಂಬಿಕೊಳ್ಳುತ್ತಿದ್ದೇನೆ, ಸೀರೆ ಉಟ್ಟಿದ್ದು ಚಂದ ಕಾಣಲಾದರೂ ಸ್ವಲ್ಪ ದಪ್ಪಗಿರಬೇಕು ಎಂಬ ಅರಿವಿಲ್ಲದವಳು. ಪಕ್ಕದ ಮನೆಯ ಆತ್ಮೀಯರಾದ ಜಯಲಕ್ಷ್ಮಮ್ಮ ಹಾಗೆಂದು ನನಗೆ ಹೇಳಿದರು ಕೂಡ. ಅಷ್ಟಾದರೂ ದಿಗಿಲು ಹಾರುವಂಥ ಗಾಬರಿಗೊಳಗಾದೆ. ಅದುವರೆಗಿನ ನನ್ನ ಅನುದಿನದ ಅವಿನಾಭಾವದ ಸಂಗಾತಿ ‘ಕೃಶಕಾಯ’ಕ್ಕೆ ವಿದಾಯ ಹೇಳಿ ಇನ್ನು ಮುಂದೆ ನಲ್ವತ್ತು ದಾಟಿದವಳು ನಾನೆಂದು ಸಾರಲು ಬೊಜ್ಜುಮೈ ಆವಾಹಿಸಿಕೊಳ್ಳಬೇಕೇ? ಹೀಗೇ ದಿನೇ ದಿನೇ ಊದಿಕೊಳ್ಳುತ್ತಾ ಹೋದರೆ? ಎರಡು ಕಂಬಗಳ ಮೇಲಿರಿಸಿದ ಹತ್ತಿ ಮೂಟೆಯಂಥ ಗಜಗಾತ್ರದ ದೇಹದ ಚಿತ್ರವೇ ಹಗಲು ರಾತ್ರಿ ಕಣ್ಮುಂದೆ ಸುಳಿಯಲಾರಂಭಿಸಿತು. ಬೊಜ್ಜುಮೈಯೊಂದಿಗೆ ಗಂಟು ಹಾಕಿಕೊಂಡ ಬಿ.ಪಿ. ಶುಗರ್ ಇತ್ಯಾದಿತ್ಯಾದಿ ರೋಗಗಳ ಸರಮಾಲೆ ಕಣ್ಮುಂದೆ ಸುಳಿಯಲಾರಂಭಿಸಿ, ಕಣ್ಮಿಟುಕಿಸಿ ‘ಬರ್ತೇವೆ, ತಾಳು’ ಎಂದಂತಾಗುತ್ತಿತ್ತು. ನನ್ನ ನೆಮ್ಮದಿಯ ಕೊಳಕ್ಕೆ ಕಲ್ಲೆಸೆಯಲಾಗಿತ್ತು. ನನ್ನ ಸವಿನಿದ್ದೆಗೆ ದುಃಸ್ವಪ್ನಗಳು ದಾಳಿ ಇಟ್ಟವು. ಇಲ್ಲ, ಇನ್ನು ಸುಮ್ಮನಿರಲಾಗದು. ಏನಾದರೂ ಮಾಡಲೇಬೇಕು. ಪಥ್ಯ ಮಾಡೋಣವೆಂದರೆ, ನಾನು ತಿನ್ನುವ ಆಹಾರದ ಪ್ರಮಾಣವೇ ಕಮ್ಮಿ. ಮತ್ತೇನು ದಾರಿ? ಆಗ ಹೊಳೆದದ್ದೇ ‘ವಾಕಿಂಗ್’.

ಇಪ್ಪತ್ತೈದು ವರ್ಷಗಳಿಗೂ ಹಿಂದಿನ ಆ ಕಾಲದಲ್ಲಿ ನಮ್ಮೂರಲ್ಲಿ ಮುಂಜಾನೆಯ ವಾಯುವಿಹಾರ ಈಗಿನಷ್ಟು ಸರ್ವಸಾಧಾರಣ ಸಂಗತಿಯೇನಾಗಿರಲಿಲ್ಲ. ಅದರಲ್ಲೂ ಹೆಂಗಸರು ವಾಕಿಂಗ್ ಮಾಡುವುದು ತುಂಬ ಅಪರೂಪವೇ ಆಗಿತ್ತು. ಹೀಗಾಗಿ ವಾಕಿಂಗೇ ನನ್ನ ಸಮಸ್ಯೆಗೆ ಪರಿಹಾರ ಎಂದು ಅಳೆದೂ ಸುರಿದೂ ಸ್ಪಷ್ಟಪಡಿಸಿಕೊಂಡಿದ್ದೆನಾದರೂ ನನ್ನ ಪರಿಸ್ಥಿತಿ ಸ್ಟಾರ್ಟಿಂಗ್ ಟ್ರಬಲ್ ಇರುವ ಇಂಜಿನ್‌ನಂತಾಗಿತ್ತು. ನೋಡಿದವರು ಇವಳದೊಂದು ವೇಷ ಎಂದುಕೊಂಡಾರೇ ಎಂಬ ಅಳುಕು. ಹೀಗಾಗಿ ನನ್ನ ಸಮಸ್ಯೆಯ ಕಗ್ಗವಿಗೆ ಬೆಳಕಿನ ಕಿರಣದಂತಿದ್ದ ‘ವಾಕಿಂಗ್’ನ ವಿಚಾರ ಸಾಕಷ್ಟೇ ಸಮಯ ಗೂಡೊಳಗೆ ರೆಕ್ಕೆ ಮುದುರಿ ಕೂತ ಹಕ್ಕಿಯಂತಿತ್ತು. ಆದರೆ ತಡ ಮಾಡುವಂತಿರಲಿಲ್ಲ. ಕನ್ನಡಿ ದಿನದಿನಕ್ಕೆ ವಿಸ್ತರಿಸುತ್ತಿರುವ ನನ್ನ ಸುತ್ತಳತೆ ಕುರಿತು ನಿರ್ದಾಕ್ಷಿಣ್ಯವಾಗಿ ಸಾಕ್ಷಿ ಹೇಳುತ್ತಿತ್ತು. ವಿಧಿಯಿಲ್ಲದೆ ಒಂದು ಶುಭ ಮುಂಜಾವು ಅಮೋಘವಾದ ಮುಂಜಾನೆಯ ವಾಯು ವಿಹಾರಕ್ಕೆ ಮುನ್ನುಡಿ ಬರೆದೇ ಬಿಟ್ಟೆ.

ಮಲೆನಾಡಿನ ಸತ್ವಪೂರ್ಣ ಸಂಸ್ಕೃತಿ ಸಂಪನ್ನವಾದ ತಾಲ್ಲೂಕು ಎಂದೇ ಪ್ರಸಿದ್ಧವಾಗಿರುವ ತುಂಗೆಯ ದಡದ ಮೇಲಿನ ತೀರ್ಥಹಳ್ಳಿಯಲ್ಲಿನ ನಮ್ಮ ಮನೆಯಿಂದ ನಾಲ್ಕೈದು ಕಡೆಗಳಿಂದಲೂ ನೆಮ್ಮದಿಯ ನಿರುಮ್ಮಳವಾದ ಪ್ರಕೃತಿ ಸೌಂದರ್ಯಭರಿತ ತಾಣದಲ್ಲಿ ಮುಂಜಾನೆಯ ನಡಿಗೆ ಮಾಡಲು ಅವಕಾಶವಿದೆ. ದೂರದ ಸುತ್ತುವರಿದ ಕಾಡಿನ ಮರಗಳು. ಅದರಾಚೆಯ ಬೆಟ್ಟ ಸಾಲುಗಳೆಲ್ಲ ತೆಳು ಮಂಜಿನ ಮುಸುಕು ಹೊದ್ದು ಇನ್ನೇನು ಇಣುಕಿ ಮೂಡಲಿರುವ ದಿನಕರನೇ ಹೊದ್ದಿರುವ ತಮ್ಮ ಮುಸುಕನ್ನು ಇನಿತಿನಿತೇ ಸರಿಸಲಿ ಬಿಡು ಎಂಬಂತೆ ಬಿಮ್ಮನೇ ಮಲಗಿವೆ. ಬೆಳ್ಳಕ್ಕಿಗಳ ಹಿಂಡು ಬಾನಲ್ಲಿ ಮೂಡಿದ ರಜತ ರೇಖೆಯಂತೆ ಹಾರುತ್ತಾ ಇದೆ. ಮಂದಗತಿಯಲ್ಲಿ ಹಾರಿ ಹೋಗುತ್ತಿರುವ ಈ ಬೆಳ್ಳಕ್ಕಿಗಳ ಸಾಲು ಉದಯರವಿಗೆ ಮುತ್ತಿನಾರತಿ ಎತ್ತುತ್ತಿರುವಂತಿದೆಯೆನಿಸಿ ಮನಕ್ಕೆ ಕಚಗುಳಿಯಿಡುತ್ತವೆ. ಅಲ್ಲೊಂದು ಒಂಟಿ ಹಕ್ಕಿ ತಾನೇತಾನಾಗಿ ಹಾರುತ್ತಾ ಹಾರುತ್ತಾ ದೂರ ದೂರ ಸಾಗಿ ಕಣ್ಣಿಗೇ ಕಾಣದ ಚಿಕ್ಕಿಯಂತಾಗಿಬಿಟ್ಟಿತು. ಮೂಡಿ ಬರಲಿರುವ ಸೂರ್ಯನನ್ನು ಸ್ವಾಗತಿಸಲು ನನ್ನ ಮುಂದಿರುವ ದಾರಿ ಸ್ವರ್ಗಸದೃಶವಾಗಿ ಸಿಂಗರಗೊಂಡಂತೆ ಕಂಡುಬರುತ್ತಿದೆ. ಆಹಾ! ಮನಸ್ಸಿಗೆ ಆವರಿಸಿದ ಯಾವುದೇ ದುಗುಡ ದುಮ್ಮಾನ ಬೇನೆ ಬೇಸರಿಕೆಗಳೆಲ್ಲ ಫೇರಿ ಕಿತ್ತು ಫಲಾಯನ ಮಾಡಿಬಿಡುತ್ತವೆ.

ಸ್ವಲ್ಪ ದೂರ ಹೋಗುತ್ತಲೇ ತುಂಗೆಯನ್ನು ಸಮೀಪಿಸುತ್ತೇನೆ. ಇಕ್ಕೆಲಗಳ ನುಣ್ಣನೆಯ ಬಿಳುಪು ಮರಳ ದಂಡೆಗಳ ನಡುವಲ್ಲಿ ನೀಲ ಬಣ್ಣದಲ್ಲಿ ಹರಿವ ಸುತ್ತ ಹಚ್ಚಹಸಿರಿನ ಮರಗಳಿಂದಾವೃತವಾದ ಪ್ರಶಾಂತ ತುಂಗೆ. ಮುಂಜಾನೆಯ ಎಲ್ಲೆಲ್ಲೂ ಹಾಸಿ ಹೊದ್ದ ನೀರವ ವಾತಾವರಣದಲ್ಲಿ ಆಗೀಗ ಮೂಡಿ ಬಂದು ಕಿವಿದುಂಬುವ ಮನಮೀಟುವ ಹಕ್ಕಿಗಳಿಂಚರ. ನದಿಯಲ್ಲಿ ದಡದ ಸಮೀಪದಲ್ಲೊಂದು ಬಕ ಒಂಟಿಕಾಲಲ್ಲೇ ನಿಂತಂತೆ ನಿಂತಿದೆ. ನೀರಿನ ಮೇಲಿಂದಲೂ ತೆಳ್ಳನೆ ಮಂಜು ಮೆಲ್ಲನೇ ಮೇಲೇರುತ್ತಿದೆ. “ಒಡೆಯನಡಿಗಳುಲಿಯ ನೀವು ಕೇಳಲಿಲ್ಲವೇ? ಬರುತಲಿಹನು, ಬರುತಲಿಹನು, ಬರುತಲಿರುವನು!”ಎನ್ನುತ್ತಾ ಪೂರ್ವದ ಆಕಾಶ ಮೆಲ್ಲ ಮೆಲ್ಲನೆ ಹೊಳಪೇರುತ್ತಿದೆ. ಕೆಲವೊಮ್ಮೆ ಮೇಲೇರಿ ಬರುವ ಚೆಂದಿರಂಗೆ ಎಡೆಮಾಡಿ ಚಂದ್ರ ಪಶ್ಚಿಮದಲ್ಲಿ ಮೆಲ್ಲ ಜಾರುತ್ತಿರುವ ನೋಟವೂ ಕಾಣಸಿಗುತ್ತದೆ. ಈಗ ಉಂಟಾಗುವ ಆನಂದಾನುಭೂತಿ ಮಾತಿಗೆ ಮೀರಿದ್ದು.

ಈ ನದಿಗೆ ನಿರ್ಮಿಸಿದ ಸೇತುವೆ ಕೂಡ ವಾತಾವರಣದ ಸೌಂದರ್ಯಕ್ಕೆ ಮೆರುಗು ನೀಡುತ್ತಿದೆ. ಇದು ಕಳೆದ ಶತಮಾನದ ನಲ್ವತ್ತರ ದಶಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ನಿರ್ಮಿಸಿದ ಕಮಾನುಳ್ಳ ರಚನಾ ವಾಸ್ತು ವೈಶಿಷ್ಟ್ಯದ ಸಿಮೆಂಟ್ ಕಾಂಕ್ರೀಟಿನ ಅಖಂಡ ನಿರ್ಮಾಣದ ಸೇತುವೆ. ಜಯಚಾಮರಾಜೇಂದ್ರ ಒಡೆಯರ್‌ರವರು ಉದ್ಘಾಟಿಸಿದ್ದ ಅವರದೇ ಹೆಸರಿನದು. ಈ ಸೇತುವೆ ನಿರ್ಮಾಣದ ಕೆಲಸ ಮುಗಿದಾಗ ಉಳಿದ ಸಿಮೆಂಟಿನಿಂದ ಊರ ಹೊರಾವರಣದಲ್ಲಿರುವ ಆನಂದಗಿರಿ ಗುಡ್ಡದ ಮೇಲೆ ಊರಿನ ಸೊಬಗಿಗೆ ಮೆರುಗೀಯಲು ಒಂದು ಮಂಟಪವನ್ನು ನಿರ್ಮಿಸಿದ್ದರು. ಸೊಬಗಿಗೆ ಕುಂದಣದಂತಿರುತ್ತಾ, ಕೆರೆಯ ನೀರನು ಕೆರೆಗೇ ಚೆಲ್ಲುವ ಅಂದಿನ ಜನರ ಪ್ರಾಮಾಣಿಕತೆಯನ್ನು ಸಾರುತ್ತಿದೆ ಈ ಮಂಟಪ. ಸೇತುವೆ ಮೇಲೆ ಬಂದಾಗ ಒಂದು ಕ್ಷಣ ನಿಂತು ದೂರದ ರಾಮಮಂಟಪ ನೋಡದೆ ಹೋದರೆ ಅದು ವಾಕಿಂಗಿನ ಒಂದು ಲೋಪವೇ ಸರಿ. ಬಂಡೆಗಳ ಮೇಲೆ ಎದ್ದು ನಿಂತಂತೆ ಕಾಣುವ ರಾಮಮಂಟಪ. ಮಳೆಗಾಲದಲ್ಲಿ ತುಂಗೆ ಈ ಮಂಟಪವನ್ನೂ ಮುಚ್ಚಿ ಬಿಡುವುದು ಊರವರಿಗೆ ಒಂದು ಕೌತುಕದ ನಿರೀಕ್ಷೆ. ರಾಮಮಂಟಪ ಒಮ್ಮೆಯೂ ಮುಳುಗಲಿಲ್ಲವೆಂದರೆ ಅದೊಂದು ಮಳೆಗಾಲದ ಕೊರತೆಯಂತೆಯೇ ಭಾಸ. ಮಂಟಪದ ಎದುರಿನಲ್ಲಿರುವ ನಿಸರ್ಗ ನಿರ್ಮಿತ ಕಲ್ಲುಸಾರ ಕೂಡ ನಮ್ಮೂರ ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತುಗಳಲ್ಲೊಂದು. ದೂರದಲ್ಲಿ ಶಿಲಾಮಯ ಸಿದ್ಧೇಶ್ವರ ಗುಡ್ಡ. ದಿನದಿನವೂ ನೋಡುವ ನೋಟವೇ ಆದರೂ ಅನುದಿನವೂ ಹೊಸಹೊಸತೇ ಎಂಬಂತೆ ಪ್ರತಿದಿನವೂ ರೋಮಾಂಚಿತಳಾಗುತ್ತೇನೆ. ಥೇಮ್ಸ್ ನದಿಯ ವೆಸ್ಟ್‍ಮಿನ್ಸ್ಟರ್ ಸೇತುವೆ ಮೇಲೆ ನಿಂತು ವಡ್ರ್ಸ್‍ವರ್ತ್ ಕವಿಯು ಹೊಂಬೆಳಕ ಹಾಸಿ ಹೊದ್ದ ಲಂಡನ್, ನಿತಾಂತ ಶಾಂತಿಯಿಂದ ಹರಿವ ನದಿ, ಚೆಂಬೆಳಕಿಂದ ಮಿರುಗುವ ಪರಿಸರದ ಕುರಿತು ತನ್ನ ಸುನೀತವೊಂದರಲ್ಲಿ ಹೇಳಿದ ಸಾಲುಗಳು ನೆನಪಾಗುತ್ತವೆ:-

“ಭೂಮಿಗೆ ತೋರಿಸಲು ಇದಕ್ಕಿಂತ ಮಿಗಿಲಾದ ಚೆಲುವಿನ ತಾಣ ಬೇರಿಲ್ಲ
ಇದ ಕಾಣದೆ ಸಾಗಿ ಹೋಗುವಾತನದು ಆತ್ಮ ದಾರಿದ್ರ್ಯವಲ್ಲದೆ ಬೇರಲ್ಲ”

ನನ್ನ ಸಮಸ್ಯೆಯ ಕಗ್ಗವಿಗೆ ಬೆಳಕಿನ ಕಿರಣದಂತಿದ್ದ ‘ವಾಕಿಂಗ್’ನ ವಿಚಾರ ಸಾಕಷ್ಟೇ ಸಮಯ ಗೂಡೊಳಗೆ ರೆಕ್ಕೆ ಮುದುರಿ ಕೂತ ಹಕ್ಕಿಯಂತಿತ್ತು. ಆದರೆ ತಡ ಮಾಡುವಂತಿರಲಿಲ್ಲ. ಕನ್ನಡಿ ದಿನದಿನಕ್ಕೆ ವಿಸ್ತರಿಸುತ್ತಿರುವ ನನ್ನ ಸುತ್ತಳತೆ ಕುರಿತು ನಿರ್ದಾಕ್ಷಿಣ್ಯವಾಗಿ ಸಾಕ್ಷಿ ಹೇಳುತ್ತಿತ್ತು.

ಕೆಲವು ದಿನ ಮತ್ತೊಂದು ದಿಕ್ಕಿನಲ್ಲಿ ನಡಿಗೆ ಪ್ರಾರಂಭಿಸಿದೆನೆಂದರೆ ಸಿಗುವುದು ತುಂಗೆಯನ್ನು ಸಂಗಮಿಸುವ ಹಳ್ಳದ ಕುಶಾವತಿ ಸೇತುವೆ. ಇದರ ಬುಡದಲ್ಲಿ ದೊಡ್ಡ ದೊಡ್ಡ ಹೆಜ್ಜೇನ ತಟ್ಟಿಗಳು ಜೋತಾಡುತ್ತಿರುತ್ತವೆ. ಸೇತುವೆ ಮೇಲೆ ಪಾರಿವಾಳಗಳ ಹಿಂಡು. ಗುಬ್ಬಚ್ಚಿಗಳದೂ. ನೆನಪಾದಾಗ ಕಾಳು ತಂದು ಇಲ್ಲಿ ಚೆಲ್ಲುತ್ತೇನೆ. ಈ ಸೇತುವೆ ದಾಟುತ್ತಲೇ ಭತ್ತದ ಗದ್ದೆಗಳ ಹಾಳಿ. ದಿನದಿನಕ್ಕೂ ಎಳೆ ಹಸಿರು, ಹಳದಿ ಮಿಶ್ರಿತ ಹಸಿರು, ಹೊಂಬಣ್ಣದ ಹಳದಿ ಎಂದು ವರ್ಣ ವೈವಿಧ್ಯ ತಾಳಿ ಮನಸೂರೆಗೊಳ್ಳುವ ಭತ್ತದ ಗದ್ದೆಗಳು! ಸುಳಿಗಾಳಿ ಬೀಸಿದಾಗ ತೊನೆದಾಡುತ್ತಾ ನಲಿವಿನ ನರ್ತನ. ರಸ್ತೆಯ ಎರಡೂ ಬದಿಗಳಲ್ಲಿ ಹಸಿರಿನ, ಮಾಣಿಕ್ಯಗೆಂಪಿನ, ಹಳದಿ ಎಲೆಗಳ ಮರಗಳು. ಇಲ್ಲಿ ನೋಡಿ! ಈ ದೊಡ್ಡ ಮರದ ಬುಡದಲ್ಲಿ ನಕ್ಷತ್ರದಾಕಾರದ ಉದುರಿದ ಹೂಗಳ ರಾಸಿರಾಸಿ. “ಮರಳಿನ ಮೇಲೆ ಅಕ್ಷತೆಯ ರಂಗವಲ್ಲಿಯಿಕ್ಕಿದಂತೆ” ಎಂಬ ಕವಿವಾಣಿ ನೆನಪಾಗುತ್ತಿದೆ. ಬೇಲಿ ಸಾಲಲ್ಲಿ ಗಂಟೆ ದಾಸವಾಳ, ಕಣಗಿಲೆ, ಶಂಖಪುಷ್ಪ ಮುಂತಾದ ತುಂಬಿ ತೊನೆವ ಹೂರಾಸಿ. ಒಳಗಿಂದ ಆನಂದ ಉಕ್ಕಿ ಉಕ್ಕಿ ಬರುತ್ತಿದೆ. ಯಾರಾದರೂ ಇದ್ದಾರೆಯೇ ಎಂದು ಹಿಂತಿರುಗಿ ನೋಡುತ್ತೇನೆ. ಇಲ್ಲ…. ಯಾರಿಲ್ಲ. ದಿವವೇ ಧರೆಗಿಳಿದಿರುವಂಥ ಈ ತಾಣದಲ್ಲಿ ನನಗೆ ಸಿಕ್ಕಿದೆ ಅನನ್ಯ ಅನ್ಯಾದೃಶ ಏಕಾಂತ! ಗಂಧವತಿ ಪೃಥ್ವಿ ನಸುನಗುತ್ತಾ ತನ್ನ ಬೆರಗುಗೊಳಿಸುವ ಸೌಂದರ್ಯದ ಅನಾವರಣ ಮಾಡುತ್ತಿರುವಾಗ ಸುಮ್ಮನಿರುವುದೇ? ಆಗದೇ ಆಗದು. ಈಗ ಧ್ವನಿಬಿಟ್ಟು ಹಾಡಿಕೊಳ್ಳುತ್ತಾ ಹೋಗುತ್ತೇನೆ. ಒಂದೆರಡು ಸಾಲುಗಳಷ್ಟೇ, ಆದರೂ ಸಂತೋಷಕ್ಕೆ ಪುಟವಿಟ್ಟಂತಾಗುತ್ತದೆ. ಇಷ್ಟರಲ್ಲಿ ಕೆಂಪಿನೋಕುಳಿ ಎರಚಿದ ಆಕಾಶದಿಂದ ‘ದೀವಟಿಗೆಯ ದೂತ ದಿವಾಕರ’ ನಸುನಸುವೇ ಮೆಲ್ಲ ಮೂಡಿಬಂದನೆಂದರೆ ಆಗ ಈ ಸ್ಥಳ ಮೇರು ವರ್ಣಚಿತ್ರ ಕಲಾವಿದನೊಬ್ಬ ರಚಿಸಿದ ಕಲಾಕೃತಿಯಂತೆ ಭಾಸವಾಗುತ್ತದೆ. ಮತ್ತೂ ಮುಂದೆ ಸಾಗಿ ನಾನು ಓದಿದ್ದ ತುಂಗಾ ಕಾಲೇಜಿನವರೆಗೆ ಹೋಗುತ್ತೇನೆ. ಇದೇ ಕಾಲೇಜಲ್ಲಿ ಪಾಠ ಮಾಡುವ ಪತಿ ಪರಿಹಾಸ್ಯ ಮಾಡುತ್ತಾರೆ, “ಹೋದವಳು ಕಾಲೇಜು ಕಟ್ಟಡದ ಸುರಕ್ಷತೆ ಪರಿಶೀಲನೆ ಮಾಡಿ ಬಾ, ಸೆಕ್ಯುರಿಟಿ ಗಾರ್ಡ್ ಕೆಲಸವೂ ಆಗುತ್ತದೆ, ಓದಿದ ಕಾಲೇಜಿನ ಸೇವೆಯೂ ಆಗುತ್ತದೆ”

ಕ್ಷಮಿಸಿ, ಮೊದಲೇ ಹೇಳಿಬಿಡಬೇಕಿತ್ತು. ಈ ಸೂರೆವರಿವ ಪ್ರಕೃತಿ ಸೌಂದರ್ಯದ ವಾತಾವರಣ ಈಗಿನದಲ್ಲ, ಮಾರಾಯ್ರೇ. ಇದು ನಾನು ವಾಯುವಿಹಾರ ಪ್ರಾರಂಭ ಮಾಡಿದ್ದ ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದಿನದು. ಕಾಲಚಕ್ರದ ಉರುಳುವಿಕೆಯಡಿ ಸಿಲುಕಿ ಇಂದು ವಾತಾವರಣದಲ್ಲಿ ಸಾಕಷ್ಟೇ ಬದಲಾವಣೆಗಳಾಗಿವೆ. ಇಂದು ಬೆಳಗು ಮುಂಜಾನೆಗೇ ನೀರವತೆಗೆ ಭಂಗ ತರುವ ವಾಹನಗಳ ಓಡಾಟ ಆರಂಭವಾಗಿರುತ್ತದೆ. ಆ ವಿಶಾಲ ಭತ್ತದ ಗದ್ದೆಗಳೆಲ್ಲ ಸೈಟುಗಳಾಗಿ ಪರಿವರ್ತಿತವಾಗಿ ಇಂದು ಅಲ್ಲಿ ಕಟ್ಟಡಗಳು ಮೇಲೆದ್ದಿವೆ. ಸೇತುವೆ ಮೇಲಿನ ಮುದ್ದು ಪಾರಿವಾಳಗಳು ಗುಬ್ಬಚ್ಚಿಗಳು ಎಲ್ಲಿ ಹೋದವೋ. ರಸ್ತೆ ಅಗಲೀಕರಣಕ್ಕಾಗಿ ಇಕ್ಕೆಲದ ಮರಗಳ ಬಲಿಯಾಗಿದೆ. ಇಷ್ಟಾದರೂ ಇಲ್ಲಿ ಅರಸುವ ಕಣ್ಣುಗಳಿಗೆ ಬರವಿಲ್ಲದಂತೆ ಪ್ರಕೃತಿ ತನ್ನ ಸೊಬಗನ್ನು ಕಣ್ತುಂಬಿ ಮನವನ್ನು ಸಂತೈಸುವಷ್ಟು ಉದಾರಿ.

ಸೇವಾ ತತ್ಪರತೆಯ, ರೋಗಿಗಳು ಬಡ ರೋಗಿಗಳ ಕುರಿತು ಕಳಕಳಿಯ ಕರುಣೆ ಹೊಂದಿರುವ ನಮ್ಮೂರ ವೈದ್ಯರೊಬ್ಬರ ತೋಟ ಈ ಕುಶಾವತಿ ಸೇತುವೆ ದಾಟಿದ ನಂತರ ಇದೆ. ದಿನವೂ ಬೆಳಿಗ್ಗೆ ತೋಟದ ನಿಗಾವಣೆಗೆ ದಿನಪನುದಿಸುವ ಸಮಯದಲ್ಲಿ ಬರುವ ಅವನದೇ ಹೆಸರೊಂದರ ಇವರು ಎದುರಾದಾಗ ಅವರಿಗೆ ಒಂದು ಗೌರವದ ವಂದನೆ ಸಲ್ಲಿಸುತ್ತೇನೆ. ವಾಕಿಂಗ್ ಪ್ರಾರಂಭಿಸಿದ ಮೇಲೆ ಅಪರೂಪಕ್ಕೊಮ್ಮೊಮ್ಮೆ ಅವರ ಶಾಪಲ್ಲಿ ನಾನು ತೂಕ ನೋಡಿಕೊಳ್ಳಲಾರಂಭಿಸಿದ್ದೆ. ಇವರು ಒಮ್ಮೆ ನನಗೆ ಕೊಟ್ಟಿದ್ದ ಸಲಹೆಯೆಂದರೆ, ವಾಕಿಂಗ್ ಮಾಡುವಾಗ ಮಾತನಾಡುತ್ತಾ ಮಾಡಿದರೆ ಅದರ ಉದ್ದೇಶವೇ ನಿರರ್ಥಕವಾಗುತ್ತದೆ, ಮೌನವಾಗಿ ವಾಕಿಂಗ್ ಮಾಡಬೇಕು ಎಂದಿದ್ದರು. ವೈದ್ಯಕೀಯ ಕಾರಣ ಕೂಡ ಹೇಳಿದ್ದರು. ನಾನಂತೂ ಇದನ್ನು ವೇದ ವಾಕ್ಯದಂತೆ ಪಾಲಿಸಿದೆ. ಅಲ್ಲದೆ ವಾಕಿಂಗ್ ಮುಗಿಸಿ ಮನೆಗೆ ಬರುತ್ತಲೇ ಮನೆಗೆಲಸ, ಮಕ್ಕಳೆಡೆ ಗಮನ, ಶಾಲೆ ಕಾಲೇಜಿಗೆ ಹೊರಡಬೇಕಿರುವ ನನ್ನ ದಿನಚರಿಯಲ್ಲಿ ಜೊತೆಗಾಗಿ ಕಾಯುವ ವಿರಾಮವೂ ಇರುತ್ತಿರಲಿಲ್ಲವೆನ್ನಿ. ಇಷ್ಟಕ್ಕೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ಮನದಾಳದ ಕಣಕಣವೂ ಮಾರುಹೋಗಿ ಮನಸ್ಸಿನಲ್ಲೇ ಮಾತುಗಳ ಅನುರಣನವಾಗುತ್ತಿರುವಾಗ ಬೇರೆ ಮಾತುಗಳೆಲ್ಲ ಬರಿಯ ಶಬ್ದಗಳಷ್ಟೆ ಎನಿಸುತ್ತಿರುತ್ತದೆ. ಹಾಗೆಂದು ಆತ್ಮೀಯರು ಒಮ್ಮೊಮ್ಮೆ ಎದುರಾಗುತ್ತಾರೆ. ಅವರೊಂದಿಗೆ ನಿಂತೋ, ಹೆಜ್ಜೆ ಹಾಕುತ್ತಲೋ ಆಡುವ ಮಾತುಗಳು ದಿನವಿಡೀ ಮನಸ್ಸಿಗೆ ಉಲ್ಲಾಸದ ಮುದ ನೀಡುವುದು ಕೂಡ ವಾಕಿಂಗಿನ ವಿಶೇಷತೆ. ಈಗಂತೂ ವಯಸ್ಸಾದವರು ಮಾತ್ರವಲ್ಲ, ಮಧ್ಯ ವಯಸ್ಕರು ಯುವಜನರು ಕೂಡ ಮುಂಜಾನೆಯ ವಾಯು ವಿಹಾರಕ್ಕೆ ಮನ ಮಾಡಿದ್ದಾರೆ.

ಈ ವಾಕಿಂಗ್ ಸಮಯದಲ್ಲಿ ಮನಸ್ಸು ಶಾಂತಿ ಸ್ವಸ್ಥತೆಯಿಂದಿರುವುದರ ಪರಿಣಾಮವೋ ಏನೋ, ಮನಸ್ಸನ್ನು ಕಾಡುತ್ತಿರುವ ಸಮಸ್ಯೆಯೊಂದಕ್ಕೆ ಇದ್ದಕ್ಕಿದ್ದಂತೆ ಇಲ್ಲಿ ಸಕಾರಾತ್ಮಕವಾದ ಪರಿಹಾರವೊಂದು ಗೋಚರಿಸುತ್ತದೆ. ಯಾವುದಾದರೂ ವಿಷಯದ ಕುರಿತು ತಪ್ಪಾಗಿ ತೀರ್ಮಾನಿಸಿದ್ದರೆ ಒಳಗಿನ ದನಿಯೊಂದು ಎದ್ದು ಬಂದು ಸರಿಯಾದ ತೀರ್ಮಾನ ಯಾವುದೆಂದು ತೋರಿಸುತ್ತದೆ. ಏನನ್ನಾದರೂ ಬರೆಯಬೇಕಿದ್ದು ಲೇಖನದ ರೂಪುರೇಷೆ ತೋಚದಂತಾಗಿದ್ದಲ್ಲಿ ಮನದಾಳದ ಕೋಶದಿಂದ ಸಾಲುಗಳು ಮನಸ್ಸಿನ ಪರದೆಯ ಮೇಲೇ ಮೂಡುತ್ತಾ ಹೋಗುತ್ತವೆ. ಹಾಗೆಂದು ಅವು ಅಲ್ಲೇನು ಉಳಿದುಬಿಡುವುದಿಲ್ಲ, ಬಿಡಿ. ಮನೆಗೆ ಬಂದು ಬರೆದಿಡಲೆತ್ನಿಸಿದರೂ, ಅದೆಷ್ಟೋ ಆಗಲೇ ಹಾರಿಹೋಗಿಯಾಗಿರುತ್ತದಾದರೂ ಒಂದು ಸಣ್ಣ ಕಿರು ದಾರಿದೀಪ ಕಂಡಂತಾಗಿರುತ್ತದೆ.

ವಾಯು ವಿಹಾರಕ್ಕೋ ಮತ್ತ್ಯಾವ ಕಾರಣಕ್ಕೋ ಬಂದೆ ಬಂದೆ ಎಂದು ಹೆದರಿಸಿದ್ದ ಬೊಜ್ಜುಮೈ ನನ್ನತ್ತ ಸುಳಿಯಲೇ ಇಲ್ಲ. ಯಾವುದಕ್ಕೂ ಇರಲಿ, ಎಲ್ಲದಕ್ಕೂ ಒಳ್ಳೆಯದು, ವಯಸ್ಸು ಏರುತ್ತಿರುವಾಗ ಇನ್ನಷ್ಟು ಮತ್ತಷ್ಟೇ ಒಳ್ಳೆಯದೆಂದು ಬೆಳಗಿನ ನಡಿಗೆಗೆ ಭದ್ರವಾಗಿ ಅಂಟಿಕೊಂಡಿದ್ದೇನೆ. ಪ್ರವಾಸದ ಸಂದರ್ಭದಲ್ಲೂ ಬೆಳಿಗ್ಗೆ ಬೇಗ ಎದ್ದು ಸಿದ್ಧವಾಗಿ ವಾಕಿಂಗ್. ಪತಿ ಸಂಜೆಗಾದರೆ ಜೊತೆ ಕೊಡುವವರು. ಈಶಾನ್ಯ ಭಾರತ ಪ್ರವಾಸದಲ್ಲಿ ಅಸ್ಸಾಂ ತ್ರಿಪುರ ಮೇಘಾಲಯ ರಾಜ್ಯಗಳಲ್ಲೆಲ್ಲ ಬೆಳಿಗ್ಗೆ ಒಬ್ಬಳೇ ಒಂದು ಗಂಟೆ ನಡಿಗೆ ಮಾಡುವಾಗ ಎಲ್ಲ ಊರುಗಳೂ ನಮ್ಮೂರಂತೆಯೇ ಎಂಬ ಭಾವ ಮೂಡುತ್ತಿತ್ತು. ಅರುಣ ಕಿರಣ ಲೀಲೆಯ ಅರುಣಾಚಲ ಪ್ರದೇಶದಲ್ಲಿ ಮನೆಯ ಮುಂದೆ ಪೂರ್ವಾಭಿಮುಖವಾಗಿ ಒಲೆ ಉರಿಸಿ ಧೂಮ ತೋರಣದೊಂದಿಗೆ ‘ಸೂರ್ಯ ಭಗವಾನ’ನಿಗೆ ಪ್ರಣಾಮ ಸಲ್ಲಿಸುವ ಅವರ ಪರಿ ಮಾರು ಹೋಗಿಸಿತ್ತು. ನಾಗಾಲ್ಯಾಂಡ್‌ನಲ್ಲಿ ಮಾತ್ರ ಪತಿಯ “ಜಾಗ್ರತೆ, ದೂರ ಹೋಗ ಬೇಡ” ಎಂಬ ಎಚ್ಚರಿಕೆ ಪಾಲಿಸಿದ್ದೆ. ವಿದೇಶ ಪ್ರವಾಸಗಳಲ್ಲಿ ಯೂರೋಪ್, ಸ್ಕಾಂಡಿನೇವಿಯಾ ದೇಶಗಳಲ್ಲಿ ರಾತ್ರಿ ಊಟದ ನಂತರವೂ ಇಲ್ಲಿನ ಸಂಜೆ ಆರು ಗಂಟೆಯ ಬೆಳಕಿರುವಾಗ ಇಬ್ಬರೂ ಊಟ ಮುಗಿಸಿಯೇ ನಡಿಗೆ ಮಾಡುತ್ತಿದ್ದೆವು. ಎಲ್ಲೆಲ್ಲೂ ರಮಣೀಯ ಪ್ರಕೃತಿ. ನಸು ನಗುತ್ತಾ ತುಸು ತಲೆ ಬಾಗಿ ವಂದಿಸುವ ಸ್ನೇಹಮಯಿ ಜನರು. ಆಸ್ಟ್ರಿಯಾದಲ್ಲಿ ಒಂದೆಡೆ ಅಪರೂಪವೆಂಬಂತೆ ರಸ್ತೆ ಬದಿಯ ಮನೆಯೊಂದರ ಮುಂಬಾಗಿಲು ತೆರೆದಿತ್ತು. ಎದುರಿನ ಅಂಗಳದಲ್ಲಿ ಮೂರ್ನಾಲ್ಕು ಮಕ್ಕಳು ಆಡುತ್ತಿದ್ದವು. ‘ನಾವು ಇವರ ಮನೆಗೆ ಹೋಗೋಣ’ ಎಂದು ಹೇಳಿ ಪತಿಯಿಂದ ಬೈಸಿಕೊಂಡೆ. ಜರ್ಮನಿಯ ಆಟೋಬಾನ್ ರಸ್ತೆಗಳಲ್ಲಿನ ವಾಹನಗಳ ವೇಗದ ಸಂಚಾರ ನೋಡಿ ಹೆದರಿ ಹಿಂದಿರುಗಿದ್ದೆವು. ಕೊರೋನಾಗಮನದೊಂದಿಗೆ ಲಾಕ್ಡೌನ್ ಸಂದರ್ಭದಲ್ಲಿ ‘ಹಾಕಿದ ಹುಲ್ಲು, ಕಟ್ಟಿದ ಗೂಟ’ ಎಂಬಂತಿರಬೇಕಾದಾಗ ಅದುವರೆಗೆ ಮಾಡದ ತಾರಸಿ ಮೇಲಿನ ನಡಿಗೆ ಆರಂಭಿಸಿದೆ. ಎತ್ತರ ಎನ್ನುವುದು ಬಿತ್ತರದೊಂದಿಗೆ ನೋಟಕ್ಕೆ ಚಿತ್ತಾಪಹಾರಿ ದೃಶ್ಯಗಳ ಬೆರಗನ್ನೂಡುವ ಬಗೆಯನ್ನು ಕಂಡಂತಾಯ್ತು.

ಹಾಗೆಂದು ವಾಕಿಂಗ್ ಸಮಯದಲ್ಲಿ ಬೇಸರದ ಸಂಗತಿಗಳೇನೂ ಇಲ್ಲವೇ ಇಲ್ಲವೇ ಎಂದರೆ, ಖಂಡಿತ ಇದ್ದೇ ಇವೆ. ಬೆಳ್ಳನೆ ಬೆಳಕಲ್ಲೂ ರಸ್ತೆ ಬದಿಯ ದೀಪ ಉರಿಯುತ್ತಲೇ ಇರುವಾಗ ಮನಸ್ಸು ಮಂಕಾಗುತ್ತದೆ. ಹೊಳೆಗೆ ನೈರ್ಮಾಲ್ಯದ ಹೂ ಹೊತ್ತು ತಂದು ಹಾಕುವವರು, ಸೇತುವೆ ಮೇಲೆ ವಾಹನ ಹೋಗುವಾಗ ನದಿಗೆ ಬಾಟಲ್, ಕಸ ಎಸೆವವರನ್ನು ನೋಡುವಾಗ ಎದೆಗೆ ಚೂರಿ ಹಾಕಿದಂತಾಗುತ್ತದೆ. ಒಬ್ಬರನ್ನು ಈ ಕುರಿತು ಪ್ರಶ್ನಿಸಿದಾಗ ಅವರು ಹೇಳಿದ್ದು, “ಹರಿವ ನೀರು ಗಂಗೆ” ಎಂದು. ಎಂಥ ಆಘಾತಕಾರಿ ಉತ್ತರ! ‘ಗಂಗಾ ಸ್ನಾನ, ತುಂಗಾ ಪಾನ’ ಎಂಬ ಮಾತೇ ಇರುವಾಗ ಗಂಗೆಯ ನೀರು ಕಸ ಎಸೆಯಲು ಲೈಸೆನ್ಸ್ ಇದ್ದಂತೆ ಎಂಬರ್ಥದ ಈ ಉತ್ತರದ ಆಘಾತ ದೊಡ್ಡದಿತ್ತು. ಇಲ್ಲ, ಜನರ ಮನಃಸ್ಥಿತಿ ಬದಲಾಗದೆ ನಮ್ಮ ಪ್ರಕೃತಿಗೆ ಉಳಿಗಾಲವಿಲ್ಲ, ಪರಿಸ್ಥಿತಿ ಆಶಾದಾಯಕವಾಗಿಲ್ಲ ಎನಿಸಿತು. ನಮ್ಮೂರ ಪಟ್ಟಣ ಪಂಚಾಯತಿ ಮನೆ ಮನೆಗೂ ಕಸ ತುಂಬಲು ಪುಕ್ಕಟೆ ಬಕೆಟ್ ನೀಡಿದೆ. ಕಸ ಒಯ್ಯಲು ನಿಗದಿತ ಸಮಯಕ್ಕೆ ತಪ್ಪದೇ ಬರುತ್ತಾರೆ. ಇಷ್ಟಾಗಿಯೂ ಹಾದಿಬದಿ ಕಸ ಎಸೆವವರಿದ್ದಾರೆ. ಪೌರಪ್ರಜ್ಞೆಗೆ ತಿಲಾಂಜಲಿಯಿತ್ತು ರಸ್ತೆ ಮೇಲೇ ತುಪ್ಪುವವರು, ಸಿಂಬಳ ಸೀಟುವವರು ಗುಟ್ಕಾ ಪಾಕೀಟು ಎಸೆವವರು…. ಒಂದೆರಡಲ್ಲ. ಇವೆಲ್ಲ ಕಣ್ಣಿಗೊತ್ತುವ ಕಸಗಳು.

ಹೂಂ… ನಮ್ಮೂರಲ್ಲೂ ಊರೂರಲ್ಲೂ ಹೋದಹೋದಲ್ಲೂ ಮುಂಜಾನೆಯ ವಾಯು ವಿಹಾರ ಮಾಡಿದ್ದೇ ಮಾಡಿದ್ದು. ಪ್ರಾರಂಭ ಮಾಡಿದ್ದೇನೋ ಏರುವ ತೂಕಕ್ಕಂಜಿ. ಬೆಳಗಿನ ಸೊಬಗಿನ ನೋಟಗಳನ್ನು ಮೊಗೆಮೊಗೆದು ಕೊಡುವ ಪ್ರಕೃತಿ ಮಾತೆಯ ಮಮತೆ ಉದಾರತೆಯು ಅಂದಂದಿನ ದಿನವನ್ನು ಮನವನ್ನು ಸಂಪನ್ನಗೊಳಿಸಲು ನೆರವೀಯುವ ಊರೆಗೋಲು ಕೂಡ ಎಂಬರಿವಾಗಿರುವಾಗ, ವಾಕಿಂಗ್ ಮಾಡದ ದಿನವೇ ವ್ಯರ್ಥ ಎಂದೆನಿಸುತ್ತದೆ. ನಾನದಕ್ಕೆ ಹೇಳುತ್ತೇನೆ, ‘ಭೂಮಿಯ ಮೇಲೆ ನಾನಿರುವವರೆಗೂ ನಾ ನಿನ್ನ ಕೈ ಬಿಡೆನು, ನೀನೂ ನನ್ನ ಆತ್ಮ ಸಂಗಾತಿಯಾಗಿರು’ ಎನ್ನುವೆ. ತೂಕವಿಳಿಸಲೆಂದು ನಡಿಗೆ ಆರಂಭಿಸಿ ಅವರ್ಣನೀಯ ಆನಂದಾನುಭವ ಪಡೆವ ಯಾರೇ ಆದರೂ ವಾಕಿಂಗ್‍ನ ದುಪ್ಪಟ್ಟು ಫಲಾನುಭವಿಗಳೇ ಸೈ, ಅಲ್ಲವೇ.

About The Author

ಕೆ.ಆರ್.ಉಮಾದೇವಿ ಉರಾಳ

ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. "ಮುಂಬೆಳಕಿನ ಮಿಂಚು", "ಮಕ್ಕಳಿಗಿದು ಕಥಾ ಸಮಯ", "ಮುಳ್ಳುಬೇಲಿಯ ಹೂಬಳ್ಳಿ", ಬಾನಾಡಿ ಕಂಡ ಬೆಡಗು, "ಗ್ರಾಮ ಚರಿತ್ರ ಕೋಶ" ಇವರ ಪ್ರಕಟಿತ ಕೃತಿಗಳು.

1 Comment

  1. Poorvi

    Sogasada Lekhana Madam.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ