Advertisement
ನಾಟಕದ ನೆಂಟರ ಬದುಕಿನ ಚದುರಂಗ: ಸುಜಾತಾ ತಿರುಗಾಟ ಕಥನ

ನಾಟಕದ ನೆಂಟರ ಬದುಕಿನ ಚದುರಂಗ: ಸುಜಾತಾ ತಿರುಗಾಟ ಕಥನ

ಗಾಡಿ ಎಳೆಯುವ ಜೋಡಿ ಎತ್ತಿಗೆ ಲವಕುಶರ ಹೆಸರಿಡುತ್ತಲೇ ಸೀತೆ ಪಟ್ಟ ಪಾಡು ದೃಷ್ಯದಿಂದ ಎದೆಗಿಳಿದ ಹೊತ್ತಿನಲ್ಲೇ… ತಮ್ಮವರ ಕಷ್ಟದ ಹೊತ್ತುಗಳನ್ನು ನೆನೆದು, “ಸೀತಾ ಮಾತೆ ನೀಸದಂಗೆ ನೀಸಬುಟ್ಲು ಕಣ ಬಾರವ್ವ ಅವಳು” ಎಂಬ ಮಾತಾಗುತ್ತಿದ್ದವು. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲವಂತೆ ಬಾ, ನಮ್ಮದೇನು?” ಎಂದು ಲೊಚಗುರೆಯುತ್ತ, ಕಷ್ಟದ ಗಂಟು ಮಾತಲ್ಲಿ ನಿಟ್ಟುಸಿರಾಗಿ ಬಿಚ್ಚಿಕೊಂಡು ಹೊರಹೊಮ್ಮುತ್ತಿದ್ದವು. ಇವು ದೊಂಬಿದಾಸರಂಥ ಕಲೆಗಾರರು ತೀವ್ರಗತಿಯ ಹಾಡುಗಾರಿಕೆ ಹಾಗೂ ತಮ್ಮ ಅನುಭಾವದ ಅಭಿವ್ಯಕ್ತಿಯಿಂದ ಊರ ಕಣ್ಣನ್ನು ಆಕರ್ಷಿಸಿ ಜನರ ತಿಳಿವಿನಲ್ಲಿ ಬಿಟ್ಟು ಹೋದ ಕುರುಹುಗಳು.
ಸುಜಾತಾ ತಿರುಗಾಟ ಕಥನ

 

“ಜಗವೇ ನಾಟಕರಂಗ, ಜಗದೀಶನಾಡುವಾ….. ಜಗವೇ ನಾಟಕರಂಗ”.

ಇಂಥ ನಾಟಕರಂಗವನ್ನು ತಮ್ಮೊಡಲಲ್ಲಿ ಕಟ್ಟಿಕೊಂಡು ಅಡ್ಡಾಡಿದ ನೂರಾರು ಅಲೆಮಾರಿಗಳ ತಂಡವೇ ದೊಂಬಿದಾಸರ ತಂಡ. ಆಂಧ್ರಮೂಲದವರಾದ ಇವರು ಮಳೆ ಬೆಳಸು ಇದ್ದೆಡೆ ಹೂಡಿದ್ದೊಂದು ಗುಡಿಸಲು. ತಾತ್ಕಾಲಿಕವಾಗಿ ಅಲ್ಲಿ ಬೀಡುಬಿಟ್ಟಿದ್ದು ಅವರ ಸಂಸಾರ. ಹೆಂಡತಿ ಮಕ್ಕಳಿಗೆ ಹೀಗೊಂದು ಗೂಡು ಕಟ್ಟಿ, ಹೊಟ್ಟೆಪಾಡಿಗಾಗಿ ಮಾಡಿದ್ದು ಆಡಿದ್ದು ಅಲೆದಾಟ. ಅರೆಅಲೆಮಾರಿಗಳಾದ ಇವರು ಹಿರಿಯರ ರಕ್ತದೊಂದಿಗೆ ಹರಿದು ಬಂದ ನೆನಪಿನ ಕೋಶದಿಂದ ತಾವು ಕಲಿತ ವಿದ್ಯೆಯನ್ನು ಹೊರತೆಗೆದು ಹಾಡು ಹಾಗೂ ನಿಂತಲ್ಲೇ ಮಾಡುವ ಅಭಿನಯದ ಮೂಲಕ ಇವರು ಬಯಲು ನಾಟಕ ಕಟ್ಟುತ್ತಾ….. ಮಾಡುತ್ತಾ… ಊರವರನ್ನೆಲ್ಲ ತಮ್ಮ ಕಥೆಯ ಪಾತ್ರಧಾರಿಗಳನ್ನಾಗಿಸುತ್ತಾ ಅವರನ್ನು ನುಡಿಸಿ ಕುಣಿಸಿ ನಗಿಸಿ ಅಳಿಸಿ ತಣಿಸಿ ತಮ್ಮ ಸಂಸಾರದ ಹೊಟ್ಟೆಯನ್ನು ತಣಿಸಿಕೊಳ್ಳುತ್ತಿದ್ದರು.

ಮತ್ತೆ ಇನ್ನೊಂದೂರಲ್ಲಿ ಇವರ ಬೀಡು. ಮತ್ತೊಂದು ತೆರೆ ಸರಿದು ಕಟ್ಟುವ ಮತ್ತೊಂದು ಮೇಳ. ಇದೇ ಅವರ ನಿತ್ಯ ಕಾಯಕ. ತಮ್ಮ ಕರುಳಿನ ನಂಟಿಗಾಗಿ ಇವರು ಕಟ್ಟಿದ್ದು ಭೂಮ್ಯಾಕಾಶದ ನಡುವೆ ಇದ್ದಲ್ಲೇ ಕಾಲುಚಾಚಿ ಮಲಗುವ ಒಂದು ತಾವು, ಹೊಟ್ಟೆ ತಣಿಸಲು ಉರಿವ ಕಾವನ್ನು ಮೊಟ್ಟೆಯೊಡೆವ ಮೂರು ಕಲ್ಲಿಟ್ಟು ಎಸರು ಬೇಯಿಸುವ ಒಂದು ಒಲೆ…. ಇದನ್ನು ಬಿಟ್ಟು, ಅವರಿಗೆ ಮತ್ತೊಂದರ ಹಂಗಿಲ್ಲ.

ಆದರೆ, ಎದೆಯೊಳಗಿದ್ದುದು ಸಾವಿರ ಪದಗಳು ಕಣಿಗುಡುವ ದೊಡ್ಡ ಗಣಿ. ತಾತ ಮುತ್ತಾತರ ಕಾಲದಿಂದ ಹರಿದ ರಕ್ತ ನಂಟಿನ ನೆನಪು. ನೆನಪೆಂಬುದು ಅವರ ಶಕ್ತಿ. ಆ ಕೋಶದಿಂದ ಭಾಷೆಯನ್ನು ಭಾವವನ್ನು ಹೊರಗೆಳೆದು ಕಥೆ ಕಾವ್ಯವನ್ನಾಗಿಸಿ, ಹಾಡಾಗಿಸಿ, ಸಂಭಾಷಣೆಯನ್ನಾಗಿಸಿ, ಕುಣಿತ ಮೆರೆತದ ಮೂಲಕ ನಾಟಕವಾಡಿಸುತ್ತ, ಸಮಾಜಕ್ಕೆ ತಮ್ಮೂಲಕ ಪುರಾಣದ ಕಥೆಗಳನ್ನು, ಸಾಹಸವನ್ನು, ವ್ಯಥೆಯನ್ನು ಊರೂರಿಗೆ ಧಾರೆಯೆರೆದ ಆದಿ ಕಾಲದ ನೆಂಟರು ನಮ್ಮ ದೊಂಬಿದಾಸರು. ಇವರು ತಮ್ಮ ಬದುಕಲ್ಲಿ ಕಾಪಾಡಿಕೊಂಡು ಬಂದ ಕಥನ ಕಾವ್ಯಗಳು ಹತ್ತಾರು. ಗಂಗೆ ಗೌರಿ ಕಥನ, ಕೃಷ್ಣ ಕೊರವಂಜಿ, ಅಣ್ಣ ತಂಗಿ, ಬಾಲ ನಾಗಮ್ಮ, ಬಂಜೆ ಹೊನ್ನಮ್ಮ, ಧರ್ಮರಾಯ, ಅತ್ತೆಸೊಸೆ, ಕಲಿಯುಗದ ಬಾಲೆ, ದೇವಗನ್ನೆ, ಮಾಗಡಿ ಕೆಂಪೇಗೌಡ, ಸತ್ಯಭೋಜರಾಜ, ನಳದಮಯಂತಿ, ಸಾಮಾಜಿಕ, ಧಾರ್ಮಿಕ, ಹಾಗೂ ಅರಸೊತ್ತಿಗೆಯ ನಾಟಕಗಳು ನೂರಾರು ಕಣಜದ ಹಾಡು ಇವರದು.

“ದೋಂಬಿದಾಸರು ಅವರು ತೆಗ, ದೊಂಬಿದಾಸರಂಗೆ ಇವ್ರು ಬಾ” ಅಂತ ಹಿಂದೆ ಹಳ್ಳಿಗಳಲ್ಲಿ ಆಡಿಕೊಳ್ಳುವ ಪದ್ಧತಿಯಿತ್ತು.

ಇದು ಯಾಕಪ್ಪಾ ಅಂದ್ರೆ, ಈ ಜನಾಂಗ ಊರೂರಿಗೆ ದಂಡು ದಂಡಾಗಿ ಹಾರ್ಮೋನಿಯಂ ಹಾಗೂ ತಾಳಮದ್ದಳೆಯ ಸಮೇತ ಬಂದು, ಹಸಿರು ಚಪ್ಪರದಲ್ಲೇ ಒಂದು ನಾಟಕ ರಂಗವನ್ನು ಕಟ್ಟಿ ನಾಟಕ ಆಡಿಸುವುದರ ಮೂಲಕ ಒಂದು ದೊಂಬಿಯ ಸಡಗರವನ್ನು ಊರಲ್ಲಿ ಹುಟ್ಟುಹಾಕಿ, ಊರು ಖಾಲಿ ಮಾಡಿ ಮುಂದಿನೂರಿಗೆ ಮುಲಾಜಿಲ್ಲದೆ ನಡೆದು ಬಿಡುತಿದ್ದರು. ಹಳ್ಳಿಗೆ ಹೀಗೆ ಬಂದು ಹಾಗೆ ಹೋಗುವ ಈ ಜಾತ್ರೆ ಒಂದು ಕಿನ್ನರ ಲೋಕವನ್ನು ಊರ ಕಣ್ಣುಗಳಲ್ಲಿ ನೆಟ್ಟು ಇಲ್ಲೇ ಬಿಟ್ಟು ಹೋಗುತಿತ್ತು. ಅವರು ತೆರಳಿದ ನಂತರ ಖಾಲಿ ಖಾಲಿಯಾಗುತಿದ್ದ ಊರಿನ ಎದೆಗಳಲ್ಲಿ ದೊಂಬಿದಾಸರು ಬಂದರೆ ಊರಲ್ಲಿ ಒಂದು ಸಂಚಲನ ಶಕ್ತಿ ಕಾಣಿಸುತಿತ್ತು. ಕ್ರಮೇಣ, ಇದರಿಂದ ಆಕರ್ಷಿತರಾಗುವ ಊರ ಮನದಲ್ಲಿ ಇದು ತಾತ್ಕಾಲಿಕವಾದ್ದು ಎಂಬ ನಂಬಿಕೆ, ಗೀಳು ಹುಟ್ಟು ಹಾಕಿ ಹೋಗುವಂಥದ್ದು ಎಂಬ ಅನುಮಾನ, ನಮ್ಮ ಕುಲಕಸುಬೇ ದೊಡ್ದದು ಅನ್ನುವ ಊರಿನಲ್ಲಿ ನೆಲೆಯಾಗಿದ್ದ ಬದುಕಿನ ಹೆಚ್ಚುಗಾರಿಕೆ…ದೊಂಬಿದಾಸರನ್ನು ಕೆಳಗಡೆ ಮಾಡಿ ಮಾತಾಡುವ ರೂಢಿಯಾಗಿತ್ತೇನೋ?

ಆದರೆ, ಇಂಥ ದೊಂಬಿದಾಸರು ಬಂದು ಆಡಿಹೋಗುವ, ಹಾಡಿಹೋಗುವ ಕಂದ ಪದ್ಯಗಳು ಬೇಸರದ ಗಳಿಗೆಗಳಲ್ಲಿ ಊರವರ ಎದೆಯ ಹಾಡಾಗಿ, ಸಾಯುವವರೆಗೂ ಅವರೊಡನೆ ಮುಂಗೈ ಮೇಲೆ ಕುಕ್ಕಿಸಿಕೊಂಡ ಹಚ್ಚೆಯಂತೆ ಉಳಿಯುತ್ತಿದ್ದದು ಸುಳ್ಳಲ್ಲ.

ರಾಮಾಯಣ ಮಹಾಭಾರತದ ಪಾತ್ರಗಳಲ್ಲಿ ಸುತ್ತಿಕೊಂಡು ನೋಯುವ ಕಳ್ಳುಬಳ್ಳಿಗಳು, ಉಪಕಥೆಗಳು ತೋರುವ ಸತ್ಯದ ಹಾದಿಗಳು, ದಾಯಾದಿ ಮತ್ಸರಗಳು, ಹೊಡೆದಾಟಗಳು, ಧರ್ಮರಾಯನ ಪಗಡೆ ಗೀಳು, ಭೀಮನ ಮಗುತನ, ಅರ್ಜುನನ ಹೆಣ್ಣುಬಾಕತನ, ಶಕುನಿಯ ಅಡ್ದಕಸುಬಿತನ, ಭೂಮಿ ಗರ್ಭಧಾರಣೆಗಾಗೇ ಇರುವ ಸತ್ಯ, ಮುಂದಿನ ಪೀಳಿಗೆಯ ಉಳಿವಿಗಾಗಿಯೇ ಇರುವ ಪ್ರಪಂಚದ ಸತ್ಯಕ್ಕೆ ತಕ್ಕಂತೆ ಹುಟ್ಟಿದ ಕುಂತಿಮಾದ್ರಿಯರ ಪಾಂಡವ ಮಕ್ಕಳು, ಅವರನ್ನು ಹಂಚಿಕೊಂಡು ಕುಟುಂಬವನ್ನು ಒಗ್ಗಟ್ಟಾಗಿ ಮುನ್ನಡೆಸುವ ದ್ರೌಪದಿಯ ಸ್ತ್ರೀ ಶಕ್ತಿ, ಐವರ ಹೆಂಡತಿಯಾಗಿಯೂ ಕಷ್ಟಗಳನ್ನು ಒಬ್ಬಂಟಿಯಾಗಿ ಅನುಭವಿಸುವ ಈ ಧರೆಯ ಸತ್ಯ, ಧ್ರುತರಾಷ್ಟ್ರನ ಮಕ್ಕಳ ಮೇಲಿನ ಕುರುಡು ಪ್ರೀತಿ, ಅದಕ್ಕಾಗೇ ದಾಯಾದಿಗಳಿಬ್ಬರೂ ಮನೆಮಠ ಕಳೆದುಕೊಂಡ ಗತಿ, ಅಗಸನ ಉಡಾಫೆ ಮಾತಿಗೆ ಬಸುರಿ ಹೆಣ್ಣ ತೊರೆದ ರಾಮ, ಲಂಕಾ ವೈಭವ, ‘ನಳನಿಗೆ ಶನಿ ಹೆಗಲೇರಿದಂತೆ’ ಅನ್ನುವ ಊರವರ ಗಾದೆ ಮಾತುಗಳು, ರಾಮ ಕೋದಂಡದಲ್ಲಿಟ್ಟ ಬಾಣದಂತೆ ಮಾತುಮಾತಲ್ಲಿ ಹಾಸುಹೊಕ್ಕಾಗಿ ಜನಮನದಲ್ಲಿ ಉಳಿದುಹೋಗುತ್ತಿದ್ದವು.

ಗಾಡಿ ಎಳೆಯುವ ಜೋಡಿ ಎತ್ತಿಗೆ ಲವಕುಶರ ಹೆಸರಿಡುತ್ತಲೇ ಸೀತೆ ಪಟ್ಟ ಪಾಡು ದೃಷ್ಯದಿಂದ ಎದೆಗಿಳಿದ ಹೊತ್ತಿನಲ್ಲೇ… ತಮ್ಮವರ ಕಷ್ಟದ ಹೊತ್ತುಗಳನ್ನು ನೆನೆದು, “ಸೀತಾ ಮಾತೆ ನೀಸದಂಗೆ ನೀಸಬುಟ್ಲು ಕಣ ಬಾರವ್ವ ಅವಳು” ಎಂಬ ಮಾತಾಗುತ್ತಿದ್ದವು. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲವಂತೆ ಬಾ, ನಮ್ಮದೇನು?” ಎಂದು ಲೊಚಗುರೆಯುತ್ತ, ಕಷ್ಟದ ಗಂಟು ಮಾತಲ್ಲಿ ನಿಟ್ಟುಸಿರಾಗಿ ಬಿಚ್ಚಿಕೊಂಡು ಹೊರಹೊಮ್ಮುತ್ತಿದ್ದವು. ಇವು ದೊಂಬಿದಾಸರಂಥ ಕಲೆಗಾರರು ತೀವ್ರಗತಿಯ ಹಾಡುಗಾರಿಕೆ ಹಾಗೂ ತಮ್ಮ ಅನುಭಾವದ ಅಭಿವ್ಯಕ್ತಿಯಿಂದ ಊರ ಕಣ್ಣನ್ನು ಆಕರ್ಷಿಸಿ ಜನರ ತಿಳಿವಿನಲ್ಲಿ ಬಿಟ್ಟು ಹೋದ ಕುರುಹುಗಳು. ಹಳ್ಳಿಯಿಂದಾಚೆಗೂ ಗಾದೆ ಮಾತಲ್ಲಿ ಬದುಕನ್ನು ಜಗತ್ತಿಗೆ ವಿಸ್ತರಿಸುತ್ತಿದ್ದ ಸುಳುಹುಗಳು.

ಈ ಜನಾಂಗ ಊರೂರಿಗೆ ದಂಡು ದಂಡಾಗಿ ಹಾರ್ಮೋನಿಯಂ ಹಾಗೂ ತಾಳಮದ್ದಳೆಯ ಸಮೇತ ಬಂದು, ಹಸಿರು ಚಪ್ಪರದಲ್ಲೇ ಒಂದು ನಾಟಕ ರಂಗವನ್ನು ಕಟ್ಟಿ ನಾಟಕ ಆಡಿಸುವುದರ ಮೂಲಕ ಒಂದು ದೊಂಬಿಯ ಸಡಗರವನ್ನು ಊರಲ್ಲಿ ಹುಟ್ಟುಹಾಕಿ, ಊರು ಖಾಲಿ ಮಾಡಿ ಮುಂದಿನೂರಿಗೆ ಮುಲಾಜಿಲ್ಲದೆ ನಡೆದು ಬಿಡುತಿದ್ದರು.

ಇಂಥ ಜಗತ್ತಿನ, ವಿರಾಟ್ ರೂಪವನ್ನು ತೋರುವ ದೊಂಬಿದಾಸರ ಮನೆಯ ತಾಯಿಯೊಬ್ಬರನ್ನು ಮಾತನಾಡಿಸಿದಾಗ ಅವರ ಅನುಭವವನ್ನು ಹೀಗೆ ಹೇಳಿದರು. ಪಕ್ಕದಲ್ಲಿ ನಾಟಕದ ಗಣಿ ಎಂದು ಹೆಸರಾದ ಮನೆಯ ಯಜಮಾನ್ರು, ಮುಪ್ಪಿನ ಅರಳುಮರಳಲ್ಲಿ.. ಹಾಸಿಗೆಯ ಮೇಲೆ ಕುಂತು ಹಕ್ಕಿ ಹಾರಿಸುವಂತೆ ಕೈಬಾಯಾಡಿಸುತ್ತ.. ತಮ್ಮ ಅರೆಪ್ರಜ್ಞೆಯನ್ನು ಹಾಗೂ ಕೇಳದ ಕಿವಿಯನ್ನು.. ವರ್ತಮಾನಕ್ಕೆ ಹೊಂದಿಸಲು ಪರದಾಡುತಿದ್ದರು.

“ನನ್ನ ಹೆಸರು ತೀರ್ಥಮ್ಮ. ನಮ್ಮನೇರ ಹೆಸ್ರು ಲಕ್ಷ್ಮಣ ಮೂರ್ತಿ. ಅವರಪ್ಪಾರೆಸ್ರು ಕೋಡಂಗಯ್ಯ. ಅವ್ರು ಕೋಡಂಗಿ ವೇಷ ಹಾಕದ್ರಲ್ಲಿ ಎತ್ತಿದ್ ಕೈ. ಅದಕ್ಕೆ ಆ ಹೆಸರು. ನಮ್ಮೋರು ನಿಜವಾಗಿ ಪಾತ್ರ ಹಾಕ್ಕಂಡು ಪಾತ್ರ ಮಾಡುವರು. ನಾಟಕ ಕಲ್ಸಿಕೊಡುವರು. ಹಿಂದೆ ನಮ್ಮ ಜನಗಳ್ನ “ಹೆಣ್ವಾಸು” ಅಂತ ಕರ್ಯೋರು. ಹೆಣ್ಣುಪಾತ್ರ ಹಾಕ್ಕಂಡು ಅಭಿನಯ ಮಾಡದ್ರಲ್ಲಿ ಎತ್ತಿದ್ ಕೈ ನಮ್ಜನಗಳು. ಇದು ಯಾಕಪ್ಪ ಅಂದ್ರೆ ಅದುಕ್ಕೆ ಒಂದು ಕಥೆ ಹೇಳತರೆ.

“ಹಿಂದೆ, ಯಾವುದೋ ತಲೆಮಾರಲ್ಲಿ ಭೂಮಿ ಮೇಲೆ ಅಡ್ದಾಡಕ್ಕೆ ಬಂದಿದ್ದ ತಾಯಿ ಪಾರೋತೀನ ನಮ್ಮರೊಬ್ರು ನೋಡಿದ್ದೆಯ ಕಣ್ಣು ತೆಗಿದೆ ಆಸೆಪಟ್ಟುಬುಟ್ರು. ಮದ್ವೆ ಮಾಡಕೋ ಅಂತ ದುಂಬಾಲು ಬಿದ್ದುಬುಟ್ರು. ಆಗೇನಾತು? ಏನೂ ಹೇಳುದ್ರೂ ಇವ್ನು ಕೇಳುನಿಲ್ಲ. ಹೇಳದೆಲ್ಲ ಹೇಳಿ ಮುಗುದ್ಮೇಲೆ ಅವಳಿಗೆ ಮೊದ್ಲೇ ಮುಂಗೋಪ, ಕ್ವಾಪ ನೆತ್ತಿಗೇರಿದ್ದೆಯ ಶಾಪ ಕೊಟ್ಟುಬುಟ್ಲು. ನೀನು ಶಿಖಂಡಿ ಆಗ್ಬುಡು ಅಂತವ.

ಇವ್ನು ಹೋಗಿ ‘ತಾಯೀ… ಭೂಮಿ ಮೇಲೆ ಸುಳುದು ಹೋಗೋ ನಿನ್ನ ರೂಪ ಕಂಡು ನಾ ಮತಿ ಕಳಕಂಡುಬುಟ್ಟೆ ಅಂತವ ಕಾಲ ಹಿಡಕಂಡನು ಬುಡದೆ ಹೋಗಬುಟ್ಟ. ಅವ್ಳು ಜಗನ್ಮಾತೆ ಅಲ್ವಾ? ಅಂತಃಕರಣ ಕರಗಿದ್ದೆಯ “ಆಯ್ತು.. ಹೋಗಪ್ಪ. ನನ್ನಂಥ ಸ್ತ್ರೀ ಪಾತ್ರ ಹಾಕ್ಕಂಡು ನೀನು ಪಾಪಾ ಪರಿಹಾರ ಮಾಡ್ಕೋ…. ಅಂದೋಳೆ ಆಕಾಷದಲ್ಲಿ ತೇಲಿ ಮಾಯ ಆಗೋದ್ಲು.”

ಅದುಕ್ಕೆ ನಮ್ಮೋರು ಗಂಡುಸ್ರೆ ಸ್ತ್ರೀ ವೇಷ ಹಾಕತಾರೆ ಹಿಂದಿಂದ್ಲೂವೆ. ಅವಳ ಕೊಟ್ಟ ಶಾಪ. ಆಗ ಸೀನು ಅನ್ನವು ಇರ್ನಿಲ್ಲ. ಹಸ್ರು ಚಪ್ಪರ ಹಾಕ್ಕಂದು, ಇವ್ರೆ ಬಣ್ಣ ಗಿಣ್ಣ ಮುಖ ಮೈಗೆ ಸವರಕಂದು, ಸಿಕ್ಕ ಹೂವಿನ ಕುಚ್ಚಗಳ್ನ ತೋಳು ತಲಿಗೆ ಕಟ್ಟಕಂಡು ಸೀರೆ ಚಿಲ್ಲ ತಲಿಗೆ ಕಟ್ಕಂದು ವೇಷ ಮಾಡಕಂದು ನಾಟಕ ಮಾಡರು.

ಏಕತಾರಿ, ತಪ್ಲ, ಹಾರ್ಮನಿ, ಚಿಟಿಕೆ, ಕಂಚಿನ ಬಟ್ಟು ತಾಳ, ದುಮ್ಮಡಿ, ಪ್ರತಿ ಒಂದೂ ಇವ್ರದೆಯ. ಊರರು ಕರದ ಕಡೆ ಹೋಗಿ ಬಯಲು ನಾಟಕ ಮಾಡಿ ಬರರು. ನಮ್ಮಪ್ಪಾರು ನಾಟಕದ ಮಾಷ್ಟ್ರು. ಆಮೇಲಾಮೇಲೆ ನಾಟ್ಕದ ಸೀನು ಬಂದ್ವು. ಇವ್ರ ನೋಡಿ ಹಳ್ಳಿ ಮುಖ್ಯಸ್ಥರು ದುಡ್ಡು ಕೊಡತಿವಲ್ಲ ಅನ್ನ ಜಬರ್ದಸ್ತಿಗೆ ತಾವೂ ಬಣ್ಣ ಹಚ್ಕಳಕೆ ನಿಂತ್ಕಂದ್ರು. ಕಲೆ ಅನ್ನೋದು ಗೀಳಲ್ವಾ? ಆಗೇನಾತು.. ನಮ್ಮೋರು ಹೋಗಿ ಊರ್ ಮುಂದೆ ಹಾಡಿ ಕುಣದು ಕೊಟ್ಟುದ್ದ ಭಿಕ್ಷ ಇಸ್ಕಳದ ಬುಟ್ಟುಬುಟ್ಟು ವರ್ಷಕ್ಕೆ ಇಷ್ಟು ಭತ್ತ ಭರಣ, ದುಡ್ಡು ಅಂತ ಹಳ್ಳಿ ಮ್ಯಾಗೆ ಗೊತ್ತು ಮಾಡಕಂದ್ರು. ಮೂರು ತಿಂಗಳು ತನಕ ಊರೋರ ತಿದ್ಬೇಕಲ್ಲ. ನಮಗೆ, ರಕ್ತದಲ್ಲೇ ಹರ್ದು ತಲೆತಲಿಂದ ಬಂದಿರೋ ಇದ್ಯೇನ ಇನ್ನೊಬ್ರ ತಲಿಗೆ ತುಂಬಿ ಧಾರೆ ಎರಿಯದೇನು ಸುಲಭವಾ?”.

“ನಮ್ಮನೇರು ಊರೂರ ಮೇಲೆ ಹೋಗ್ಬುಡರು ಕನವ್ವ. ನಮ್ಮದು ಚನ್ನರಾಯಪಟ್ನದ್ ತಾವ ಹಳ್ಳಿ. ನಮ್ಮನೇರು ಅಲ್ಲಿ ನಮಗೊಂದು ಗುಡ್ಲು ಕಟ್ಕೊಟ್ಟಿದ್ರು. ನಮ್ಮೋರು ಅಲ್ಲಿ ಬೇಕಾದಷ್ಟು ಜನ ಇದಾರೆ. ಅರ್ಸಿಕೆರೆ, ಹೂವನಳ್ಳಿ ಕೊಪ್ಲು, ಗಂಡಸಿ ಸುತ್ತಮುತ್ತ. ಇದು ನಮ್ಮಪ್ಪಾರೂರು. ಹುಣಸೂರು ಸುತ್ತುಮುತ್ತ, ಕೆ. ಆರ್. ನಗರ ಹಿಂಗೆ ಈ ಕಡೆಲೂ ನಮ್ಮೋರು ಚದುರಿಹೋಗವ್ರೆ. ಅಪಾರ ಜನೇನಿಲ್ಲ ನಮ್ಮೋರು ಅನ್ನು. ಅಲ್ಲೆಳ್ದು ವಕ್ಕಲು, ಇಲ್ಲೆಲ್ಡು ಹಿಂಗೆ. ಎಲ್ಲಿ ಅನುಕೂಲ ಬತ್ತದೆ ಅಂತ ಹೋತರೋ ಅಲ್ಲೇ ಉಳ್ಕಳರು. ಇದ್ರೆ ಈ ಊರು, ಬಿದ್ರೆ ಮುಂದ್ಲೂರು ಅನ್ನಂಗೆ!

ಈಗೇನಪ್ಪ ಅಂದ್ರೆ ನಮಗೆ ಗೌರ್ಮೆಂಟು ಇಂದ್ರಗಾಂಧಿ ವೋಟಿನ ಕಾಲದಲ್ಲಿ, ನಮ್ಮ ಬಳಗಕ್ಕೆ ಒಂದೀಟು ಜನ್ರಿಗೆ ದರಕಾಸು ಜಮೀನ ಮಾಡಿಕೊಡತು. ನಮ್ಮ ದೇವರಾಜ ಅರ್ಸು ಹುಣಸೂರ್ನರೆ ಅಲ್ವೇನವ್ವ. ಜಾಗ ಕೊಟ್ರು. ಮನೆ ಕಟ್ಕಂಡ್ವಿ. ಹಿತ್ಲು ಮಾಡಕಂದ್ವಿ. ಐದೆಕ್ರೆ ಜಮೀನು ಕೊಟ್ಟುದ್ದ ಮಾಡಕಂದವಿ. ಆಮೇಕೆ ನಾವು ಹಾಸನದ ಕಡಿಂದ ಇತ್ಲಾಗೆ ಬಂದುಬಿಟ್ವಿ. ಇಲ್ಲಿ ನೆಲೆಯಾದ್ವಿ” ಅಲೆಮಾರಿಯ ದಾರಿಯ ಕಥೆ ಮುಂದುವರೆಯಿತು.

“ಇವ್ರು ಶ್ರಾವಣ ಕಳೆಯವರ್ಗೂ ಬ್ಯಾಸಾಯ ಮಾಡಕೊಟ್ಟು ನಾಟಕ ಕಲ್ಸಕ್ಕೆ ಹೊಂಟೋಗರಾ? ನಾನು ಕರ, ಕುರಿಮರಿ ಎಳದಾಡಕಂಡು, ಹೊಲದ ಕಳೆ ಕಿತ್ಕಂಡು ಮಕ್ಕಳ ಸಾಕ್ಕಳನಿ ಅನ್ನು. ಅವರ ಜತಿಗೆ ಹ್ವಾದ್ರೆ ಮನೆ ಮಾಡರ್ಯಾರು? ನಾಟ್ಕ ಕಲ್ಸ ದುಡ್ಡು ಹೊಟ್ಟ್ಗಾಗದೇ ಕಷ್ಟ. ಆವಾಗ ಹಳ್ಳೀಲಿ ಕೊಡತಿದ್ದು ಕಡ್ಮೆ. ಹಳ್ಳಿಯಾಗ ಆಗಿನ ಕಾಲ್ದಲ್ಲಿ ದುಡ್ಡು ಹುಟ್ಟೋದೆ ಕಷ್ಟ ಆಗಿತ್ತು ಕನವ್ವ! ನಮ್ಮ ಕಾಲ್ದಲ್ಲಿ…. ನಮ್ಮೋರ್ನೆಲ್ಲ ಕಟ್ಕಂಡು ಹೋಗಿ ನಮ್ಮಪ್ಪಾರು, ಅರಮನೆಲಿ ರಾಜರಮುಂದೆ ನಾಟ್ಕ ಮಾಡಿ ಮೈಸೂರ್ ಮಾರಾಜರ ಕೈಲಿ ಭೇಷ್ ಅನ್ಸ್ಕಂದಿದ್ರು. ನಾಲ್ಮಡಿ ಕೃಷ್ಣರಾಜ ವಡೇರು ಇದ್ರಲ್ಲ ಅವ್ರು “ಒಳ್ಳೆ ದೊಂಬಿದಾಸರು ಕಣ್ರೋ ನೀವು…” ಅಂತ ಹೆಸರಿಟ್ಟು, ಮೆಚ್ಕಂಡು, ಮುತ್ತಿಂದೊಂದು ಹಾರನೇ ಬಿಚ್ಕೊಟ್ಟಿದ್ರಂತೆ.

ನಮ್ಮ ಕುಲಕಸುಬೇ ಇದು. ಇವ್ರು ಲಕ್ಷ್ಮಣ ಮೇಷ್ಟ್ರು, ನೆಲದಲ್ಲಿಟ್ಟ ಸೀಸವ ಅವ್ರ ನಾಲಿಗೆ ತುದೀಲಿ ತೆಗದು ತಲೆ ಮೇಲೆ ಇಟ್ಟ್ಕಂಬುಡರು. ಅಂಥ ಕಸರತ್ತು ಮಾಡರು ಆಗ. ನಮ್ಮ ಭಾಷೆ ತೆಲುಗು. ನಮ್ಮಕ್ಳಿಗೆ ತೆಲುಗು ಬರದಿಲ್ಲ. ಮನೆಲಿ ಕನ್ನಡನೆ ಮಾತಾಡದು. ನಾವು ಆ ಕಾಲದಿಂದ್ಲೂ ಇಲ್ಲೇ ಇದ್ದೋರಲ್ವಾ? ಅದುಕ್ಕೆ. ದೂರದ ನೆಂಟ್ರು ಆಗೀಗ ಬಂದೋರ ಜತಿಗೆ ಮಾತಾಡಕತೀವಿ. ನಮ್ಮ ಭಾಷೆ ಅವ್ರಗೆ ಅರ್ಥ ಆಯ್ತದೆ. ಅವ್ರು ಮಾತ್ರೇಯ ಕಚಪಚನೆ ಮಾತಾಡತಾರೆ. ನಮ್ಮಂಗೆ ನೀಟಿಲ್ಲ. ನಮ್ಮ ಸೊಸೆ ಚಿತ್ರದುರ್ಗ. ಅವ್ಳು ವಸಿ ತೆಲುಗು ಮಾತಾಡತಳೆ. ನಮ್ಮಮಕ್ಳು ಮಾತ್ರವ ಕನ್ನಡನೇ ಮಾತಾಡದು. ಆದ್ರೆ ಅವರಪ್ಪನ ಇದ್ಯೆ ಕಲಿನಿಲ್ಲ”

ಅವ್ಳು ಜಗನ್ಮಾತೆ ಅಲ್ವಾ? ಅಂತಃಕರಣ ಕರಗಿದ್ದೆಯ “ಆಯ್ತು.. ಹೋಗಪ್ಪ. ನನ್ನಂಥ ಸ್ತ್ರೀ ಪಾತ್ರ ಹಾಕ್ಕಂಡು ನೀನು ಪಾಪಾ ಪರಿಹಾರ ಮಾಡ್ಕೋ…. ಅಂದೋಳೆ ಆಕಾಷದಲ್ಲಿ ತೇಲಿ ಮಾಯ ಆಗೋದ್ಲು.”

ಟೈಲರಿಂಗ್ ಮಾಡುತ್ತಿದ್ದ ಸೊಸೆ ನಕ್ಕಳು. ಅದನ್ನು ನೋಡಿ ಹುಳ್ಳಗೆ ಮುಖ ಮಾಡಿದ ಮಗ ಮಾತನಾಡಿದರು. “ನಾವು ಇವ್ರ ವಿದ್ಯೆ ಕಲಿಲಿಲ್ಲ. ನಮಗೆ ಬರದಿಲ್ಲ”. ಪಾರಂಪರಿಕ ವೃತ್ತಿಯ ಕಲಿಕೆಯ ಬಗ್ಗೆ ಅವರಿಗೆ ಅಂಥ ಸಮಾಧಾನವಿಲ್ಲದಿದ್ದರೂ, ಅಪ್ಪನ ಅಗಾಧ ಜ್ಞಾನದ ಹರವನ್ನು ತಿಳಿಸಿಕೊಡುತ್ತಲೇ ತಮ್ಮ ಕುಲಕಸುಬಿನ ಬಗ್ಗೆ ಹೆಮ್ಮೆಯಿಂದ ವಿವರಿಸಿದರು. ಯಾಕೆಂದರೆ ಅವರ ತಂದೆ ಲಕ್ಷ್ಮಣಮೂರ್ತಿಗಳು ಹಾಡಿ ರಂಜಿಸಿ ಜನರು ಕೊಟ್ಟದ್ದನ್ನು ಈಸ್ಕೊಳ್ಳುವ ಹಂತವನ್ನು ದಾಟಿ ನಾಟಕ ಮೇಷ್ಟ್ರಾಗಿ ಭಡ್ತಿ ಪಡೆದಿದ್ದರು.

ಅಲ್ಲದೆ ಅದಕ್ಕಾಗಿ ಅವರಿಗೆ ಗೌರವ ದೊರಕಿತ್ತು. ಅದನ್ನು ಕಲಿಯುವ ಆಸಕ್ತಿ ತನಗೆ ಇಲ್ಲ ಎಂದು ಮುಲಾಜಿಲ್ಲದೆ ಹೇಳಿದರು. “ನನ್ನಪ್ಪ ಅವ್ರುದ್ದಕ್ಕೂ ಅದೆಷ್ಟು ನಾಟಕ ಆಡ್ಸಿದಾರೋ….. ೩೦೦ರ ಮೇಲೆ ಕಲ್ಸಿದಾರೆ. ಇಲ್ಲೇ ಪಕ್ಕದ ಊರಲ್ಲೇ ಒಂದೇ ನಾಟಕನ ೩೦ ಸಲ ಆಡ್ಸಿದಾರೆ. ಅರ್ಸು ಅವರ ಊರು ಕಲ್ಲಳ್ಳೀಲಿ ಒಂದೇ ನಾಟಕನ ೧೦ ಸಲ ಆಡ್ಸಿದಾರೆ. ಚಂದ್ರಪ್ರಭಾ ಅರ್ಸು ಅವ್ರು ಬರೋರು. ಹಾರ್ಮೋನಿಯಂ ನುಡಿಸೇ ಅವ್ರು ಹಾಡದು. ಎಲ್ಲ ಶ್ರುತಿಬದ್ಧ. ಓದು ಬರಹ ಗೊತ್ತಿರೋದ್ರಿಂದ ಅವ್ರು ಎಲ್ಲಾ ನಾಟಕಗಳನ್ನೂ ಆಡಸೋರು. ಒಂದತ್ತು ನಾಟಕದ ಒಂದು ಮಾತು ಮರಿದಿರಂಗೆ ಅವ್ರಿಗೆ ಬಾಯಲ್ಲಿದೆ. ಅವರನ್ನು ಜಾನಪದ ಕಲಾವಿದ ಅಂತ ಗುರುತಿಸಿ ನಮಪ್ಪಾರಿಗೆ ಮಾಶಾಸನ ಕೊಡತಾ ಇದೆ ಸರಕಾರ, ಜಮೀನು ಮನೆ ನೆಲೆ ಮಾಡಿಕೊಟ್ಟಿದೆ.

ನನ್ನ ತಮ್ಮ ಬೆಂಗ್ಳೂರಲ್ಲಿ ಗಾರ್ಮೆಂಟ್ ಇಟ್ಟವ್ರೆ. ನಮ್ಮೋರು ಹೇಳಿಕೇಳಿ ಅಲೆಮಾರಿಗಳು. ಹೆಚ್ಚು ಜನಸಂಖ್ಯೆ ಇಲ್ಲ, ಏನೂ….೧ ರಿಂದ ೨ ಲಕ್ಷ ಜನ ಇರಬಹುದು ಕರ್ನಾಟಕದಲ್ಲಿ. ಇತ್ತೀಚಿನ ಒಂದೆರಡು ತಲೆಮಾರಿಂದ ಒಳ್ಳೊಳ್ಳೆ ಕೆಲ್ಸದಲ್ಲಿ ಇದಾರೆ ನಮ್ಮ ಕಡೇವ್ರು. ಅರೆ ಅಲೆಮಾರಿ ಕೆಟಗರಿ ೧ ಇಂದ ಎಸ್.ಸಿ ಮಾಡಸ್ಕಬೇಕು ಅಂತಿದಾರೆ. ನಮ್ಮ ಮೂಲ ಬೇರಿನ ಕಲೆ ಹುಡಕಬೇಕು ಅಂದ್ರೆ ಭದ್ರಾವತಿ, ಉತ್ತರ ಕರ್ನಾಟಕಕ್ಕೆ ಹೋದ್ರೆ ಅದೇ ಹಳೇ ಮಾದರೀಲೆ ಅವ್ರು ಮಾಡತಾರೆ.” ಕೆಂಪು ನಾಮದ ದಪ್ಪ ಎಳೆಯಿಟ್ಟು ಸಾಮಾಜಿಕ ಮಾತುಗಳನ್ನು ಆಡಿದರು. ದೊಂಬಿದಾಸರ ಕಾಲೊನಿ ಹೆದ್ದಾರಿಯ ಪಕ್ಕಕ್ಕೆ ಸೇರಿದ್ದಾಗಿದ್ದಾಗಿತ್ತು.

ಕಿವಿ ಕೇಳದ ಅರೆಮಂಪರಿನಲ್ಲಿದ್ದ ೮೭ರ ಅಜ್ಜ ಲಕ್ಷ್ಮಣಮೂರುತಿ ಸರಕಾರದ ಮಾತು ಬಂದ ಕೂಡಲೇ ದೇವರನ್ನು ನೆನೆದಂತೆ ಕೈಎತ್ತಿ ಮುಗಿದು ಅಲೆಮಾರಿಗಳಾಗಿದ್ದವರನ್ನು ಗುರುತಿಸಿ ನೆಲೆ ಮಾಡಿದ ಜೀವಗಳನ್ನು ನೆನೆಯುತ್ತ ಸಂಸ್ಕೃತಿ ಇಲಾಖೆಗೆ ವಂದಿಸಿ ಕಿವಿಯಲ್ಲಿ ಗಟ್ಟಿಯಾಗಿ ಹೇಳಿದ ನಮ್ಮ ಕೋರಿಕೆಯನ್ನು ಕೇಳಿ, ಗುರುಭೋಧನೆ ನೀಡಿದ ತಮ್ಮ ಗುರು ಹಾಗೂ ತನ್ನ ತಂದೆತಾಯಿಯ ಫೋಟೋ ದಿಕ್ಕಿಗೆ ಕೈಮುಗಿದು ಒಂದು ನಾಟಕದ ಹಾಡನ್ನು ಶ್ರುತಿಬದ್ಧವಾಗಿ ಗಟ್ಟಿದನಿಯಲ್ಲಿ ಹಾಡಿದರು.

“ಗುರುವೇ….ನಮೋ…ನಮಃ” ಎಂದು ಶುರುವಾದ ಹಾಡಿಗೆ ಜಾತ್ರೆ ಪೀಪಿ ಹಾಗೂ ಜಾತ್ರೆ ಢಮರುಗದಲ್ಲಿ ರಾಗ ಕೂಡಿಸುತ್ತ ಮೊಮ್ಮಗ ಹಿಮ್ಮೇಳದ ಪ್ರಯೋಗ ನಡೆಸುತಿದ್ದ. ಅದನ್ನು ಕಂಡು ಅವರ ಅಜ್ಜಿ ತೀರ್ಥಮ್ಮನವರ ಮುಖದಲ್ಲಿ ನಗೆ ತುಳುಕುತಿತ್ತು, ತನ್ನ ಮನೆಯಲ್ಲಿ ಕುಡಿಯೊಡೆದ ಕಲೆಯ ಚೆಲುವಿಗೆ. ಹಾಡು ನಿಂತಾಗ ಸೊಸೆ ಅಕ್ಕರೆಯಿಂದ ಹೇಳಿದರು. “ನಿದ್ದಗಣ್ಣಲ್ಲೂ ಹಾಡಕತಿರುತ್ತೆ ನಮ್ಮಯ್ಯ, ಮಧ್ಯ ರಾತ್ರೀಲ್ಲಿ, ಎದ್ ಕುಂತ್ಕಂದು”
ಅರಳು ಮರಳು ಅಜ್ಜಯ್ಯ, “ನಮ್ಮಿಂದ ಏನಾಗಬೇಕಂತೆ ಅವ್ರಿಗೆ?” ಮರುಪ್ರಶ್ನೆ ಎಸೆದರು. ಮುಚ್ಚಿಹೋದ ಕಿವಿ, ಗೂಡು ಸೇರಿದ ಅವರ ಕಣ್ಣು ಈ ಗೂಡಿಂದ ದಿಕ್ಕುತಪ್ಪಿ ಬೇರೆ ಪ್ರಪಂಚದಲ್ಲಿ ಅಲೆಯುತ್ತಿದ್ದಂತಿದ್ದವು.

ಅವರು ಕೊಟ್ಟ ಯಾಲಕ್ಕಿ ಬಾಳೆಹಣ್ಣು ತಿಂದು, ಅಚ್ಚುಕಟ್ಟಾಗಿದ್ದ ಅವರ ಹಿತ್ತಿಲ ಹೂ ಗಿಡಗಳನ್ನು ನೋಡಿ, ಅವರು ಕಿತ್ತುಕೊಟ್ಟ ಸೇವಂತಿಗೆ ಹೂ ಮುಡಿದು, ಸೊಸೆ ಮಾಡುತಿದ್ದ ಹೊಲಿಗೆಯ ಕೌಶಲ್ಯವನ್ನು ನೋಡುತ್ತಲೇ ಅವರು ಕೊಟ್ಟ ಕುಂಕುಮ ಹಣೆಗಿಟ್ಟು ಹೊರಟು ತಿರುಗಿ ನೋಡಿದರೆ ಮನೆಯ ಮೇಲೆ ಹಬ್ಬಿಸಿದ್ದ ಚಪ್ಪರದ ತುಂಬ ಹಿತ್ತಿಲವರೆ ಕೋಡುಗಳು, ಕಾಯಿಗಳು. ಆ ಕಾಲೊನಿಯ ಪ್ರತಿ ಮನೆಯ ಮುಂದೆ ಹೂವರಳಿದ ಡೇರ, ಮಲ್ಲಿಗೆ, ಕನಕಾಂಬರ, ಸೇವಂತಿಗೆ ಗಿಡಗಳು, ಅಂಗಳದಲ್ಲಿ ಆಡುತ್ತಿದ್ದ ಆರೋಗ್ಯಕರ ಮಕ್ಕಳ ದಂಡು ನಮ್ಮೆಡೆಗೆ ನೋಡುತ್ತಿದ್ದವು. ಒಬ್ಬ ತರುಣನ ಬುಲ್ಲೆಟ್ ಬೈಕ್ ಕಾಲೊನಿಗೆ ತಿರುಗಿ ಸದ್ದು ಮಾಡಿದಾಗ ನಮ್ಮ ಕಾರು ಅವರ ಕಾಲೊನಿಯಿಂದ ಹೆದ್ದಾರಿಗೆ ಇಳಿಯಿತು.

About The Author

ಸುಜಾತಾ ಎಚ್.ಆರ್

ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ 'ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ