Advertisement
ನೀ ನನಗಿದ್ದರೆ ನಾ ನಿನಗೆ: ಚಂದ್ರಮತಿ ಸೋಂದಾ ಸರಣಿ

ನೀ ನನಗಿದ್ದರೆ ನಾ ನಿನಗೆ: ಚಂದ್ರಮತಿ ಸೋಂದಾ ಸರಣಿ

ನಮ್ಮ ಬದುಕಿಗೆ ಹತ್ತಿರವಾದ ಹಕ್ಕಿಗಳಲ್ಲಿ ಕಾಗೆ, ಕೋಳಿಗಳೂ ಸೇರುತ್ತವೆ. ಕಾಗೆ ಬಣ್ಣ ಕಪ್ಪು ಅಂತ ಅದನ್ನು ಹಳಿಯುವುದಿದೆ. ಯಾರಾದರೂ ತಮ್ಮ ಮಕ್ಕಳನ್ನು ಹೊಗಳುತ್ತಿದ್ದರೆ ʻಕಾಗೆ ತನ್ನ ಮರಿ ಹೊನ್ನಮರಿ ಅಂದಿತ್ತಂತೆʼ ಎಂದು ಮೂಗುಮುರಿಯುವವರೂ ಇದ್ದಾರೆ. ಕೆಲವು ಬಾರಿ ಮಕ್ಕಳನ್ನು ನಂಬಿಸಲು ಕಾಗೆಯ ಬಳಕೆ ಇದೆ. ಮಗುವಿಗೆ ಕೊಡಬಾರದು ಎಂದಿರುವ ತಿನಿಸನ್ನು ಅದು ಬೇಕೇಬೇಕು ಎಂದು ಹಟಮಾಡಿದರೆ ʻಕಾಕಪಾಯಿ ಕಚ್ಗೊಂಡು ಹೋಯ್ತʼ ಅಂತ ಹೇಳುವುದಿದೆ. ಮಾಮೂಲಿನಂತಲ್ಲದೆ ಬೇರೆ ರೀತಿಯಲ್ಲಿ ಕಾಗೆ ಕೂಗಿದರೆ ನೆಂಟರು ಬರುತ್ತಾರೆ ಎನ್ನುವ ನಂಬಿಕೆಯೂ ಇದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಏಳನೆಯ ಕಂತಿನಲ್ಲಿ ಮನುಷ್ಯನ ಬದುಕಿನಲ್ಲಿ ಹಕ್ಕಿಗಳ ಜೊತೆಗಿನ ಸಂಬಂಧದ ಕುರಿತ ಬರಹ

ಗಿಳಿರಾಂ ಗಿಳಿರಾಂ ಎಲ್ಲಾಡಿದೆ
ಸೀತಾಳಿ ಮರನಡಿಗೆ ಕೊಳಲೂದಿದೆ

ಎನ್ನುವ ಹಾಡಿನ ಸಾಲು ಯಾಕೋ ನೆನಪಾಯಿತು. ಹೌದು, ನಾವೆಲ್ಲ ಚಿಕ್ಕವರಿರುವಾಗ ಮಕ್ಕಳನ್ನು ಆಡಿಸುವ ಹಾಡುಗಳಲ್ಲಿ ಇದೂ ಸೇರಿತ್ತು. ಮಕ್ಕಳಿಗೂ ಪ್ರಾಣಿ ಪಕ್ಷಿಗಳಿಗೂ ಎಂತಹ ನಂಟು. ಕಾಗಕ್ಕ, ಗುಬ್ಬಕ್ಕನ ಕತೆ ಕೇಳದೆ ಬೆಳೆದ ಮಕ್ಕಳೇ ಇಲ್ಲ ಎನ್ನಬಹುದೇನೋ. ಕಾಗೆ, ಗುಬ್ಬಿ ಅನ್ನದೆ ಕಾಗಕ್ಕ, ಗುಬ್ಬಕ್ಕ ಅಂತಲೇ ಹೇಳುತ್ತೇವೆ. ಅಂದರೆ ಪಕ್ಷಿ ಪ್ರಪಂಚಕ್ಕೂ ನಮಗೂ ಎಷ್ಟೊಂದು ಸಂಬಂಧ. ಪಕ್ಷಿಗಳನ್ನು ನೋಡುತ್ತ ಊಟಮಾಡಿದ್ದಿದೆ. ಅವುಗಳ ಕಲರವವನ್ನು ಕೇಳುತ್ತ ಮಲಗಿ ನಿದ್ದೆ ಮಾಡಿದ್ದಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪಕ್ಷಿಗಳೊಂದಿಗೆ ಸಂಬಂಧವನ್ನು ಹೊಂದಿದ್ದೆವು. ಈಗೀಗ ಒಂದು ಸುದ್ದಿ ಬಹಳ ಓಡಾಡುತ್ತಿದೆ. ಪಕ್ಷಿ ಸಂಕುಲದಲ್ಲಿ ಕೆಲವು ಅಳಿವಿನ ಅಂಚಿಗೆ ತಲುಪುತ್ತಿವೆ ಅಂತ. ಈ ವಿಷಯ ಕೇಳಿದರೆ ಬಾಲ್ಯದ ಆ ದಿನಗಳು ಬಹಳ ಕಾಡುತ್ತವೆ.

ಹಿಂದೆ ಮನೆಯ ಜಗುಲಿ ಎಂದರೆ ಅಲ್ಲಿ ಬಗೆಬಗೆಯ ಫೋಟೋಗಳು ಸ್ಥಾನಪಡೆಯುತ್ತಿದ್ದವು. ಗುಬ್ಬಿಗಳಿಗೂ ಫೋಟೋಗಳಿಗೂ ಎಲ್ಲಿಲ್ಲದ ನಂಟು. ಆ ಫೋಟೋಗಳ ಹಿಂದೆ ಗುಬ್ಬಿಗಳು ಗೂಡು ಕಟ್ಟುತ್ತಿದ್ದವು. ಅವುಗಳ ಕಿಚಿಪಿಚಿ ಸದಾ ಇರುತ್ತಿತ್ತು. ನಮಗೆ ಅವನ್ನು ಹಿಡಿಯಬೇಕೆನ್ನುವ ಚಪಲ. ಅವು ನಮ್ಮ ಕೈಗೆ ಸಿಗುತ್ತಿರಲಿಲ್ಲ. ಆದರೂ ನಮ್ಮ ಪ್ರಯತ್ನ ನಡೆಯುತ್ತಿತ್ತು. ಹಿರಿಯರಿಗೆ ತಿಳಿದರೆ ಬೈಗುಳ ಶತಸ್ಸಿದ್ಧ ಎನ್ನುವುದು ನಮಗೂ ತಿಳಿದಿತ್ತು. ʻಗುಬ್ಬಿಯನ್ನು ಮನುಷ್ಯ ಮುಟ್ಟಿದರೆ ಗುಂಪಿನಿಂದ ಆ ಗುಬ್ಬಿಯನ್ನು ಉಳಿದವು ಹೊರಗಿಡುತ್ತವೆʼ ಎನ್ನುತ್ತಿದ್ದರು. ಆದರೂ ಯಾಕೋ ನಮ್ಮ ಕುತೂಹಲ ತಣಿಯುತ್ತಿರಲಿಲ್ಲ. ಗುಬ್ಬಿಗೂಡು ಇದೆ ಎಂದರೆ ಅನೇಕ ಬಾರಿ ಕೇರೆ ಹಾವುಗಳು ಅವುಗಳ ಮರಿಯನ್ನೋ, ಮೊಟ್ಟೆಯನ್ನೋ ಕಬಳಿಸಲು ಜಗಲಿಗೆ ಹಾಜರಿ ಹಾಕುತ್ತಿದ್ದವು. ಆದಾಗ್ಯೂ ಗುಬ್ಬಿಯನ್ನು ಅಲ್ಲಿಂದ ಓಡಿಸುತ್ತಿರಲಿಲ್ಲ. ಗುಬ್ಬಿಗಳು ಧಾನ್ಯಗಳನ್ನು ತಿಂದು ಹಾಳುಮಾಡುತ್ತವೆ ಎಂದು ಗುಬ್ಬಿಗಳನ್ನು ನಿರ್ನಾಮ ಮಾಡಲು ಹೋಗಿ ಈಗ ಚೈನಾ ಪಡುತ್ತಿರುವ ಪಾಡು ಎಂತಹದು ಎನ್ನುವುದನ್ನು ನಾವು ಓದಿದ್ದೇವೆ. ಗುಬ್ಬಿಯಿಂದ ಬೆಳೆ ಹಾಳಾಗುವುದಕ್ಕಿಂತ ಎಷ್ಟೋ ಪಟ್ಟು ಬೆಳೆಗಳು ಕೀಟಗಳಿಂದ ಹಾಳಾಗುತ್ತದೆಯಂತೆ. ಕೀಟವನ್ನು ನಿಯಂತ್ರಿಸುವುದರಲ್ಲಿ ಉಳಿದೆಲ್ಲ ಹಕ್ಕಿಗಳಿಗಿಂತ ಗುಬ್ಬಿಗಳ ಪಾಲು ಹಿರಿದು ಎನ್ನಲಾಗುತ್ತಿದೆ. ʻಊರುಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆʼ ಈಗ ಗುಬ್ಬಿಗಾಗಿ ಆ ದೇಶ ಪರಿತಪಿಸುತ್ತಿದೆ. ಹಕ್ಕಿಗಳ ನಡವಳಿಕೆಯಿಂದ ಮನುಷ್ಯ ಕೆಲವು ನಂಬಿಕೆಗಳನ್ನು ಬೆಳೆಸಿಕೊಂಡಿದ್ದಾನೆ. ಗುಬ್ಬಿ ನೀರಲ್ಲಿ ಆಡಿದರೆ ಮಳೆ ಬರೋದಿಲ್ಲ, ಮಣ್ಣಲ್ಲಿ ಆಡಿದರೆ ಮಳೆ ಬಂದೇಬರುತ್ತದೆ ಎನ್ನುವ ನಂಬಿಕೆ ಇದೆ. ಮಂಗಟ್ಟೆ ವಿಷಯದಲ್ಲಿಯೂ ಹಾಗೆಯೇ. ಮುಂಗಾರು ಪ್ರವೇಶವನ್ನು ಮಂಗಟ್ಟೆಯ ಚಲನವಲನದಿಂದ ಅಂದಾಜಿಸುವ ರೂಢಿಯೂ ಇದೆ. ಅವುಗಳು ಮರದ ಮೇಲೆ ಗುಂಪು ಗುಂಪಾಗಿ ಕುಳಿತು ಹಾರಾಡಲು ಪ್ರಾರಂಭಿಸಿದರೆ ಸಧ್ಯದಲ್ಲಿಯೇ ಮಳೆಗಾಲ ಶುರುವು ಎನ್ನುವ ಲೆಕ್ಕಾಚಾರ.

ಗೂಡು ಅಂದಾಗ ನೆನಪಾಗುವ ಹಕ್ಕಿ ಎಂದರೆ ಗೀಜಗವೇ. ಗೀಜಗನಂತೆ ತಾಂತ್ರಿಕತೆಯಿಂದ, ಕೌಶಲದಿಂದ, ಸೌಂದರ್ಯದ ದೃಷ್ಟಿಯಿಂದ ಗೂಡು ಕಟ್ಟುವ ಹಕ್ಕಿ ಇನ್ನೊಂದಿಲ್ಲ ಎನ್ನುತ್ತಾರೆ. ಗೀಜಗನ ಗೂಡು ಸಿಕ್ಕಿತೆಂದರೆ ನಮಗೆ ಬಹಳ ಸಂಭ್ರಮವಾಗುತ್ತಿತ್ತು. ಸಣ್ಣಸಣ್ಣ ಕಡ್ಡಿಗಳನ್ನು ಆಯ್ದು ತಂದು ಸಣ್ಣದಾಗಿ ನೇಯ್ಗೆಮಾಡಿ ಎಷ್ಟೊಂದು ಕಾಳಜಿಯಿಂದ ಅವು ಗೂಡು ಕಟ್ಟುತ್ತವೆ ಎನ್ನುವ ಬೆರಗು ನಮಗೆ. ನೋಡಲಿಕ್ಕೆ ಅಷ್ಟೊಂದು ಪುಟ್ಟದಾಗಿರುವ ಹಕ್ಕಿಯ ಗೂಡು ಮಾತ್ರ ವಿಶಾಲವಾಗಿ ಇರುವಂಥದು. ಅಗೆ ಬಿತ್ತನೆಯ ಕಾಲದಲ್ಲಿ ಮಾತ್ರ ಗೀಜಗ ರೈತರಿಗೆ ಶತ್ರುವಾಗಿ ಕಾಣಿಸುತ್ತದೆ.  ನಾಟಿ ಮಾಡಲು ಸಸಿಗಳನ್ನು ತಯಾರಿಸಲು ಅಗೆಯ ಬಿತ್ತನೆ ಅನಿವಾರ್ಯ. ಬಿತ್ತಿದ ಬತ್ತ ಮೊಳಕೆಯೊಡೆಯುವವರೆಗೆ ಹಕ್ಕಿಗಳಿಂದ ಅದರ ರಕ್ಷಣೆ ಆಗಲೇಬೇಕು. ನಾವೆಲ್ಲ ಸಣ್ಣದಾಗಿ ಹೊಯ್ಯುತ್ತಿರುವ ಮಳೆಯಲ್ಲಿ ರಜೆಯ ದಿವಸ ಅಗೆ ಕಾಯುವ ಕೆಲಸವನ್ನು ಮಾಡಬೇಕಿತ್ತು. ಒಂದು ಕಡೆ ಗಾಳಿಗೆ ಕೊಡೆ ಹಾರದಂತೆ ಕೊಡೆಯನ್ನು ಗಟ್ಟಿಯಾಗಿ ಹಿಡಿದಿರಬೇಕು, ಜೊತೆಗೆ ಅಗೆಯನ್ನು ತಿನ್ನಲು ಬರುವ ಗೀಜಗದಿಂದ ಅಗೆಯನ್ನು ಕಾಪಾಡಬೇಕಿತ್ತು. ಗೀಜಗದ ಹಿಂಡು ಎಂದೇ ಕರೆಯುವುದು. ನೂರಾರು ಗೀಜಗಗಳು ಒಮ್ಮಲೇ ದಾಳಿಮಾಡುತ್ತವೆ. ನಾವು ಕೂಗು ಹಾಕಿದಾಗ ಓಡುವ ಅವು ಕ್ಷಣ ಮಾತ್ರದಲ್ಲಿ ಮತ್ತೆ ಅವತರಿಸುತ್ತವೆ. ಜಿಟಿಜಿಟಿ ಮಳೆಯಲ್ಲಿ ಗದ್ದೆ ಹಾಳಿಯ (ಬದುವು) ಮೇಲೆ ನಿಂತು ಗೀಜಗವನ್ನು ಕಾಯುವುದು ಒಂಥರಾ ಮಜಾ, ಇನ್ನೊಂದು ಥರಾ ಸಾಹಸ. ಸಾಹಸ ಯಾಕೆಂದರೆ, ಸಣ್ಣ ಮಳೆಗೆ ಕಚ್ಚುವ ನೊರಜು ಅಥವಾ ನುಸಿ. ಕೊಡೆ ಹಿಡಿದ ಕೈಗೆ ಮಾತ್ರವಲ್ಲ, ಇನ್ನೊಂದು ಕೈಗೂ ಕಾಲನ್ನು ಕೆರೆದುಕೊಳ್ಳಲೇ ಬೇಕಾದ ಕೆಲಸ. ಮನೆಗೆ ಬಂದಮೇಲೆ ಕೆಂಪಾದ ಚರ್ಮಕ್ಕೆ ಎಣ್ಣೆಲೇಪನ.

ಜನಸಾಮಾನ್ಯರಿಗೆ ಬೆಳ್ಳಕ್ಕಿ ಎನ್ನುವ ಹೆಸರು ಹೆಚ್ಚು ಪರಿಚಿತ. ಬಕಪಕ್ಷಿ, ಕೊಕ್ಕರೆ ಎನ್ನುವುದು ಶಿಷ್ಟ ಪರಂಪರೆಗೆ ಸೇರಿದ ನಾಮಧೇಯ. ದನಗಳು ಮೇಯುತ್ತಿದ್ದರೆ ಅಲ್ಲಿ ಬೆಳ್ಳಕ್ಕಿಯ ಹಾಜರಿ ಇದ್ದೇ ಇರುತ್ತದೆ. ಕೊಕ್ಕನ್ನು ಬಳುಕಿಸಿ ದನಗಳ ಮೇಲಿನ ಕೀಟಗಳನ್ನು ಮುಖ್ಯವಾಗಿ ಉಣ್ಣಿಯನ್ನು ಹೆಕ್ಕಿ ತೆಗೆಯುವ ಅವು ದನಗಳ ಸ್ನೇಹಿತ. ಬೆಳ್ಳಕ್ಕಿ ನಮಗೂ ಪ್ರಿಯವೇ. ಸಂಜೆಯಲ್ಲಿ ಗುಂಪಾಗಿ ಅವು ಹಾರಿಹೋಗುತ್ತಿದ್ದರೆ, ನಮ್ಮ ಎರಡೂ ಕೈಗಳನ್ನು ಎತ್ತಿ ʻಬೆಳ್ಳಕ್ಕಿ ಬೆಳ್ಳಕ್ಕಿ ಹಳೆ ಉಗುರು ಕೊಡ್ತೇನೆ ಹೊಸ ಉಗುರು ಕೊಡುಕೊಡುʼ ಎಂದು ಎಲ್ಲರೂ ಒಂದೇ ರಾಗದಲ್ಲಿ ಹಾಡುತ್ತಿದ್ದೆವು. ಯಾರದಾದರೂ ಕೈಯುಗುರಿನಲ್ಲಿ ಬಿಳಿ ಇರುವುದು ಕಂಡರೆ ಸಾಕು ʻನೋಡಿಲ್ಲಿ ನಂಗೆ ಬೆಳ್ಳಕ್ಕಿ ಹೊಸ ಉಗುರು ಕೊಟ್ಟಿದೆʼ ಎಂದು ಡೌಲು ಮಾಡುತ್ತಿದ್ದೆವು. ಯಾವುದೋ ಕೊರತೆಯಿಂದ ಮಕ್ಕಳ ಉಗುರಿನಲ್ಲಿ ಬಿಳಿಚುಕ್ಕಿ ಬರುತ್ತದೆ ಎನ್ನುವುದು ಬಹಳ ಕಾಲದವರೆಗೆ ಗೊತ್ತಿರಲಿಲ್ಲ. ಬಕಧ್ಯಾನ, ಬಕಪಕ್ಷಿ ಮೇಜವಾನಿ ಎನ್ನುವ ಮಾತುಗಳೇನೋ ಇವೆ. ಆದರೂ ಅವು ಮಾನವನೊಂದಿಗೆ ಹೊಂದಿರುವ ಸಂಬಂಧದ ವಿಸ್ತೃತ ರೂಪವೇ ಆಗಿದೆ.
ಊರಬಾಗಿಲಲ್ಲೇ ಇರುವ ಕೆರೆಯಲ್ಲಿ ಸದಾ ಬಾತುಕೋಳಿಗಳು ಕಾಣಸಿಗುತ್ತಿದ್ದವು. ಅವು ನೀರಮೇಲೆ ತೇಲುತ್ತಿದ್ದರೂ ಆಗಾಗ ಮುಳುಗಿ ಏಳುವುದು ಅವುಗಳ ಬದುಕಿನ ಶೈಲಿ. ʻಬಾತುಕೋಳಿ ಬಾತುಕೋಳಿ ಮೊಕ ತೊಕ್ಕೊಂಡು ಎದ್ಕಳೆ ಗಡಿಗೆಲ್ಲಿ ಅನ್ನ ಇಡ್ತಿʼ ಅಂತ ಹೇಳಿ ಸಂತೋಷಿಸುತ್ತಿದ್ದೆವು. ʻನೋಡು ನಾನು ಹೇಳಿದ್ಕೂಡ್ಲೆ ಅದು ನೀರಲ್ಲಿ ಮುಳುಗ್ತುʼ ಅಂತ ನಮ್ಮ ವ್ಯಾಖ್ಯಾನ ಬೇರೆ. ನಮ್ಮ ಬದುಕಿಗೆ ಹತ್ತಿರವಾದ ಹಕ್ಕಿಗಳಲ್ಲಿ ಕಾಗೆ, ಕೋಳಿಗಳೂ ಸೇರುತ್ತವೆ. ಕಾಗೆ ಬಣ್ಣ ಕಪ್ಪು ಅಂತ ಅದನ್ನು ಹಳಿಯುವುದಿದೆ. ಯಾರಾದರೂ ತಮ್ಮ ಮಕ್ಕಳನ್ನು ಹೊಗಳುತ್ತಿದ್ದರೆ ʻಕಾಗೆ ತನ್ನ ಮರಿ ಹೊನ್ನಮರಿ ಅಂದಿತ್ತಂತೆʼ ಎಂದು ಮೂಗುಮುರಿಯುವವರೂ ಇದ್ದಾರೆ. ಕೆಲವು ಬಾರಿ ಮಕ್ಕಳನ್ನು ನಂಬಿಸಲು ಕಾಗೆಯ ಬಳಕೆ ಇದೆ. ಮಗುವಿಗೆ ಕೊಡಬಾರದು ಎಂದಿರುವ ತಿನಿಸನ್ನು ಅದು ಬೇಕೇಬೇಕು ಎಂದು ಹಟಮಾಡಿದರೆ ʻಕಾಕಪಾಯಿ ಕಚ್ಗೊಂಡು ಹೋಯ್ತʼ ಅಂತ ಹೇಳುವುದಿದೆ. ಮಾಮೂಲಿನಂತಲ್ಲದೆ ಬೇರೆ ರೀತಿಯಲ್ಲಿ ಕಾಗೆ ಕೂಗಿದರೆ ನೆಂಟರು ಬರುತ್ತಾರೆ ಎನ್ನುವ ನಂಬಿಕೆಯೂ ಇದೆ. ಹಂಚಿ ತಿನ್ನುವ ಗುಣ ಅದಕ್ಕೆ. ʻಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನುʼ ಎನ್ನುತ್ತದೆ ಬಸವಣ್ಣನವರ ವಚನವೊಂದು. ಕಾಗೆ ಪಾಪದ ಹಕ್ಕಿ, ಹಾಗಾಗಿ ನರಿಯ ಮೋಸಕ್ಕೆ ಬಲಿಯಾಯಿತು ಎನ್ನುವ ಕತೆಯೂ ಇದೆ. ಅಲ್ಲದೆ, ಅದು ಕೋಗಿಲೆಯ ಮೊಟ್ಟೆಯನ್ನು ಮರಿಮಾಡಿ ತನ್ನದೆಂದು ಸಾಕಿಸಲಹುತ್ತದೆ. ʻಕಾಗೆ, ಕೋಗಿಲೆ ಎರಡರ ಬಣ್ಣವೂ ಕಪ್ಪೇ. ಆದರೆ ವಸಂತ ಕಾಲ ಬಂದಾಗ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇʼ   ಎನ್ನುತ್ತದೆ ಸಂಸ್ಕೃತ ಸುಭಾಷಿತವೊಂದು. ಆದಾಗ್ಯು, ಹಿರಿಯರ ದಿನಗಳಂದು ಕಾಗೆಗೆ ಪ್ರಾಶಸ್ತ್ಯ. ವಾಯಸ ಎಡೆಯನ್ನು ಮುಟ್ಟಿದರೆ ಮಾತ್ರ ಹಿರಿಯರಿಗೆ ಅದು ಸಲ್ಲುತ್ತದೆ ಎನ್ನುವ ನಂಬಿಕೆ ಇದೆ. ಎಲ್ಲಾದರು ಇಟ್ಟ ವಸ್ತುವನ್ನು ಮರೆತು ಹುಡುಕಿದರೆ ʻಕಾಗೆ ಅಪ್ಪಚ್ಚಿ ಇಟ್ಟು ಮರೆತಂತೆʼ ಎಂದು ಹೇಳುವ ರೂಢಿಯಿದೆ ನಮ್ಮೂರ ಕಡೆ.
ಕೋಳಿ ಅಂದರೆ ಅದು ಇರುವುದೇ ನಮ್ಮನ್ನು ಬೆಳಗಿನ ಜಾವದಲ್ಲಿ ಎಚ್ಚರಿಸುವುದಕ್ಕೆ ಎನ್ನುವ ಭಾವನೆ ಸಾಮಾನ್ಯವಾದುದು. ಅದಕ್ಕಾಗಿಯೇ ಇರಬಹುದು. ʻಕೋಳಿಕೂಗಿತೇಳು ಕಂದ ಸೂರ್ಯ ಪೂರ್ವದಲ್ಲಿ ಬಂದ ಹೆಚ್ಚು ಮಲಗಲೇನು ಚಂದ ಬಾ ಕಂದ ಬಾʼ ಎನ್ನುತ್ತದೆ ಶಿಶುಗೀತೆಯೊಂದು. ಬೆಳಗ್ಗೆ ಬೇಗ ಏಳುವ ಮಗುವನ್ನು ಕುರಿತು ʻನಮ್ಮನೆ ಈ ಪಾಪು ಬೆಳಗಿನ ಜಾವದ ಕೋಳಿʼ ಎನ್ನುತ್ತಾರೆ ಕೆಲವರು. ʻಕೋಳಿ ಕೂಗದ ಊರಿಲ್ಲʼ ಎನ್ನುವ ಮಾತೂ ಇದೆ. ತನ್ನ ಕೋಳಿ ಕೂಗಿದ್ದಕ್ಕೆ ಬೆಳಗಾಗುತ್ತದೆ ಎನ್ನುವ ಜಂಬದ ಮುದುಕಿಯ ಕತೆಯೂ ಇದೆ. ಪ್ರಾಯಶಃ ಇದರಿಂದ ʻಜಂಬದ ಕೋಳಿʼ ಎನ್ನುವ ನುಡಿಗಟ್ಟೂ ಹುಟ್ಟಿರಬಹುದು. ಊಟಮಾಡುವಾಗ ಅನ್ನವನ್ನು ಕೆದಕಿ ಉಣ್ಣುತ್ತಿದ್ದರೆ ʻಕೋಳಿ ಕೆದಕಿದಾಂಗೆ ಕೆದಕ್ತೀಯೆʼ  ಎನ್ನುವ ಮಾತು ಚಾಲ್ತಿಯಲ್ಲಿದೆ.
   

ಗುಬ್ಬಿಗಳು ಧಾನ್ಯಗಳನ್ನು ತಿಂದು ಹಾಳುಮಾಡುತ್ತವೆ ಎಂದು ಗುಬ್ಬಿಗಳನ್ನು ನಿರ್ನಾಮ ಮಾಡಲು ಹೋಗಿ ಈಗ ಚೈನಾ ಪಡುತ್ತಿರುವ ಪಾಡು ಎಂತಹದು ಎನ್ನುವುದನ್ನು ನಾವು ಓದಿದ್ದೇವೆ. ಗುಬ್ಬಿಯಿಂದ ಬೆಳೆ ಹಾಳಾಗುವುದಕ್ಕಿಂತ ಎಷ್ಟೋ ಪಟ್ಟು ಬೆಳೆಗಳು ಕೀಟಗಳಿಂದ ಹಾಳಾಗುತ್ತದೆಯಂತೆ. ಕೀಟವನ್ನು ನಿಯಂತ್ರಿಸುವುದರಲ್ಲಿ ಉಳಿದೆಲ್ಲ ಹಕ್ಕಿಗಳಿಗಿಂತ ಗುಬ್ಬಿಗಳ ಪಾಲು ಹಿರಿದು ಎನ್ನಲಾಗುತ್ತಿದೆ.

ಕೋಗಿಲೆ ಮತ್ತು ನವಿಲು ಮಹಾಕವಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಇಷ್ಟಪಡುವ ಹಕ್ಕಿಗಳು. ಒಂದರ ಕಂಠ, ಇನ್ನೊಂದರ ಕುಣಿತ ಜನರಿಗೆ ಮೋಡಿಹಾಕುತ್ತವೆ. ಕೋಗಿಲೆಗೆ ಪರಪುಟ್ಟ ಎನ್ನುವ ಹೆಸರೂ ಇದೆ. ಕಾಗೆಯ ಗೂಡಿನಲ್ಲಿ ಬೆಳೆದರೂ ಅದರ ಸ್ವರಕ್ಕೆ ಮೆಚ್ಚಿಗೆ ವ್ಯಕ್ತವಾಗುತ್ತಲೇ ಬಂದಿದೆ. ಮಧುರ ಸ್ವರ ಇರುವವರನ್ನು ಅವರದು ಕೋಗಿಲೆ ಕಂಠ ಎಂದು ಹೋಲಿಕೆ ಮಾಡಲಾಗುತ್ತದೆ. ಗಾನಕೋಗಿಲೆ ಎನ್ನುವ ಬಿರುದು ಕೊಡುವ ಪರಿಪಾಠವೂ ಇದೆ. ವಸಂತಋತು, ಮಾವಿನ ಚಿಗುರು, ಕೋಕಿಲಗಾನ ಇವೆಲ್ಲ ಕವಿವರ್ಣನೆಯ ಪರಿಭಾಷೆಗೆ ಸೇರಿರುವ ಸಂಗತಿ. ಕಾಗೆಯಂತೆ ಕೋಗಿಲೆ ನಮಗೆ ಬೇಗ ಗೋಚರಿಸುವುದಿಲ್ಲ. ʻಗಿಡಗಂಟೆಗಳ ಕೊರಳೊಳಗಿಂದʼ ಅದರ ಕುಕಿಲಿನ ಹೊರಹೊಮ್ಮುವಿಕೆ. ಅದರ ದನಿಯನ್ನ ಕೇಳಿ ಮರದಲ್ಲಿ ಹುಡುಕಿದರೆ ಯಾವುದೋ ಮೂಲೆಯಲ್ಲಿ ಅದು ಕುಳಿತಿರುತ್ತದೆ.
ನವಿಲು ಗರಿಯನ್ನು ಪುಸ್ತಕದೊಳಗೆ ಇಟ್ಟು ಅದು ಮರಿಹಾಕುತ್ತದೆ ಎಂದು ಕಾಯದ ಮಕ್ಕಳೇ ಇಲ್ಲವೇನೋ? ನಮ್ಮ ಕಾಲದಲ್ಲಂತೂ ನಮಗೆ ಅದೊಂದು ಬಹಳ ಸಂಭ್ರಮದ ಸಂಗತಿಯಾಗಿತ್ತು.  ಯಾವ ಗರಿಯೂ ಮರಿಹಾಕದಿದ್ದರೂ ಮಕ್ಕಳು ಅದರಿಂದ ವಿಮುಖರಾಗುತ್ತಿರಲಿಲ್ಲ. ಮತ್ತೆ ನವಿಲು ಗರಿ ಕಂಡಾಗ ಅದೇ ಕಾಯುವಿಕೆ. ನಮಗೆ ಶಾಲೆಯಲ್ಲಿ ಎಂಥ ಚಂದದ ಪದ್ಯವಿತ್ತು.
ಕಾಡಿಗೊಂದು ನವಿಲಿಗೊಂದು ಬಹಳ ಹರುಷ ದೊರೆಯಿತು
ಮಳೆಯಕಾಲ ಬಂತು ಭಲಾ ಎಂದು ರಾಗ ಹಾಡಿತು
ಚಾಚಿ ಎದೆಯ ತಲೆಯ ತುದಿಯ ಜುಟ್ಟ ಕೆದರಿ ಕುಣಿಸಿತು
ಅದನು ಕಂಡು ಮುಗಿಲ ಹಿಂಡು ಹಿಗ್ಗಿ ಮಳೆಯ ಕರೆಯಿತು
ಪ್ರಕೃತಿಯ ಕ್ರಿಯೆಗಳೊಡನೆ ಪ್ರಾಣಿ, ಪಕ್ಷಿಗಳ ನಡವಳಿಕೆಗೆ ಸಂಬಂಧ ಕಲ್ಪಿತವಾಗಿರುವುದನ್ನು ನಮ್ಮ ಅನುಭವಗಳಿಂದ ಕಂಡುಕೊಂಡಿದ್ದೇವೆ. ʻನವಿಲು ಕುಣಿತು ಅಂತ ಕೆಂಬೂತ ಕುಣಿತುʼ ಎನ್ನುವ ಗಾದೆ ಮಾತಿದೆ. ನವಿಲಿಗೆ ಚಂದದ ಬಣ್ಣಬಣ್ಣದ ಉದ್ದನೆಯ ಗರಿಗಳಿವೆ. ಕೆಂಬೂತಕ್ಕಿರುವುದು ಸಣ್ಣ ಗರಿ ಮಾತ್ರ. ನವಿಲಿನ ನಡಿಗೆ, ನವಿಲು ಕುಣಿತ ಇವೆಲ್ಲವೂ ಮನುಷ್ಯ ನವಿಲನ್ನು ಎಷ್ಟೊಂದು ಬಗೆಯಲ್ಲಿ ಆಪ್ತವಾಗಿ ಗ್ರಹಿಸುತ್ತಿದ್ದಾನೆ ಎನ್ನುವುದರ ಸಂಕೇತವೇ ಅಲ್ಲವೇ?

ಗಿಳಿ ಎನ್ನುವುದು ನಮ್ಮ ಭಾಷೆಯ ಒಂದು ಭಾಗವೇ ಆಗಿದೆ. ಮಕ್ಕಳಿಗೆ ಗಿಳಿ, ಗಿಣಿ ಎಂದು ಮುದ್ದಿಗೆ ಕರೆಯುತ್ತೇವೆ. ಗಿಳಿಯನ್ನು ಸಾಕುವ ಪರಿಪಾಠ ಬಹಳ ಹಳೆಯದು. ಅದರಿಂದಲೇ ಪಂಜರದ ಗಿಳಿ ಎನ್ನುವ ನುಡಿಗಟ್ಟು ಬಂದಿರಬೇಕು. ಗಿಳಿಪಾಠ, ಗಿಳಿಶಾಸ್ತ್ರ ಇವೆಲ್ಲ ನಮ್ಮ ಬದುಕಿನ ಭಾಗವಾಗಿ ಪ್ರಯೋಗವಾಗುತ್ತಿದೆ. ʻಗಿಳಿ ಹೊಡೆದು ಹದ್ದಿಗೆ ಹಾಕಿದಂತೆʼ ಎನ್ನುವ ಮಾತೂ ಚಾಲ್ತಿಯಲ್ಲಿದೆ.

ಹದ್ದು ಎನ್ನುತ್ತಲೇ ನನಗೆ ನೆನಪಾಗುವುದು ರಣಹದ್ದುಗಳು. ನಾವು ಸಣ್ಣವರಿರುವಾಗ ಹದ್ದು ಹಾರುವುದನ್ನು ಕಂಡರೆ ಊರಿನ ಹೊರವಲಯದಲ್ಲಿ ಯಾವುದೋ ಪ್ರಾಣಿ, ಪ್ರಾಯಶಃ ದನಕರುಗಳು ಸತ್ತುಬಿದ್ದಿರಬೇಕು ಎನ್ನುತ್ತಿದ್ದರು ಹಿರಿಯರು. ನಮಗೆ ಹೋಗಿ ನೋಡುವ ಕುತೂಹಲ. ನಮ್ಮನ್ನು ಹೋಗಲು ಬಿಡುತ್ತಿರಲಿಲ್ಲ. ಯಾರಾದರೂ ದೊಡ್ಡವರು ನಮ್ಮನ್ನು ಕರೆದುಕೊಂಡು ಹೋಗಬೇಕಿತ್ತು. ರಣಹದ್ದುಗಳು ಉಳಿದ ಹಕ್ಕಿಗಳಂತಲ್ಲ. ಮನುಷ್ಯರ ಮೇಲೂ ಎರಗಬಹುದೆನ್ನುವ ಅಂಜಿಕೆ. ಅದರ ಬಗೆಗೆ ನೇತ್ಯಾತ್ಮಕ ಭಾವನೆಯೇ ಇರುವುದು. ʻರಣಹದ್ದಿನಂತೆ ಕಿತ್ತು ತಿನ್ನುತ್ತಾರೆʼ ಎನ್ನುವ ಬೈಗಳು ಇದೆ. ಹದ್ದಿಗೆ ಗಡಿ ಎನ್ನುವುದೇ ಇಲ್ಲ. ಹಾಗಾಗಿಯೇ ಇರಬಹುದು, ಸರಹದ್ದು, ಹದ್ದುಬಸ್ತು, ಹದ್ದುಮೀರಿದ್ದು ಎನ್ನುವ ಪದಗಳು ಬಳಕೆಗೆ ಬಂದಿರುವುದು.
ನಮ್ಮ ಸುತ್ತಮುತ್ತಲೇ ಕಾಣುವ ಹಕ್ಕಿಗಳು ಸಾಕಷ್ಟಿವೆ. ಹಲವು ಹಕ್ಕಿಗಳ ಹೆಸರನ್ನು ನಾವು ಬಲ್ಲೆವು, ನಮಗೆ ಗೊತ್ತಿರುವ ಆದರೆ ಹೆಸರು ತಿಳಿಯದ ಹಕ್ಕಿಗಳ ಸಂಖ್ಯೆ ಬಹಳಿವೆ. ಕೆಂಬೂತ, ಕಾಡುಕೋಳಿ, ಗರುಡ, ಗಿಡಗ, ಗೂಬೆ, ಪಾರಿವಾಳ, ಪಿಕಳಾರಿ, ಮರಕುಟಿಗ, ಮುತವಾಳ, ಮಿಂಚುಳ್ಳಿ, ಮೈನಾ ಹೀಗೆ ಕೆಲವು ಹೆಸರುಗಳು ನಮ್ಮ ಪದಕೋಶದಲ್ಲಿವೆ. ಇನ್ನು ಕೆಲವಕ್ಕೆ ಅದರ ರೂಪದಿಂದ ಕರೆಯುವುದೂ ಇದೆ. ಬಾಲದಹಕ್ಕಿ, ಜುಟ್ಟದಹಕ್ಕಿ, ಕಿರೀಟದ ಹಕ್ಕಿ, ಬಾಲಕುಣಿಸೋ ಹಕ್ಕಿ ಮುಂತಾಗಿ.
ಹಕ್ಕಿಗಳು ಮನುಷ್ಯನಿಗೆ ಬಹಳ ಉಪಕಾರಿಗಳೂ ಹೌದು. ಬೀಜಪ್ರಸಾರದಲ್ಲಿ ಅವುಗಳ ಪಾತ್ರ ಬಹಳ ದೊಡ್ಡದು. ನಮ್ಮ ಮನೆಯ ಅಂಗಳದ ತುದಿಯಲ್ಲಿ, ನೀರಿನ ಟ್ಯಾಂಕಿನ ಅಂಚಿನಲ್ಲಿ ಅರಳಿಮರ ಹುಟ್ಟಬಹುದು, ಯಾವುದೋ ಹಣ್ಣಿನ, ಹೂವಿನ ಗಿಡಗಳು ನಮಗರಿವಿಲ್ಲದೆ ನಮ್ಮ ತೋಟದ ಭಾಗವಾಗಬಹುದು. ಕೀಟ ನಿಯಂತ್ರಣದಲ್ಲಿ ಅವುಗಳನ್ನು ಮೀರಿಸುವ ಕೀಟನಾಶಕಗಳಿಲ್ಲ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು. ನಮಗೆ ಹಕ್ಕಿಗಳಂತೆ ಹಾರಲಾಗದಿದ್ದರೂ ಅವುಗಳ ಹಾರಾಟಕ್ಕೆ ನಾವು ಅಡ್ಡಿಯಾಗದಿದ್ದರೆ ʻನೀ ನನಗಿದ್ದರೆ ನಾ ನಿನಗೆʼ

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ