ನಾಗರಿಕರನ್ನು ಸಾಕಬೇಕು, ಪೋಷಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ಅವರನ್ನು ಸಬಲಗೊಳಿಸಬೇಕು, ಅವರು ಸರ್ಕಾರ, ರಾಜ್ಯದ ಮೇಲೆ ಅವಲಂಬಿತರಾಗದ ಹಾಗೆ ನೋಡಿಕೊಳ್ಳಬೇಕು, ಹಾಗಾದಾಗ ಮುಂದೆ ಅವರೇ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾರೆ ಎಂಬುದು ಈ ಸಮಾಜದ ನಿಲುವು. ಉನ್ನತ ಮಟ್ಟದ ರಾಷ್ಟ್ರೀಯ ಆದಾಯ, ತಲಾವಾರ್ಷಿಕ ಆದಾಯದ ಹಂತವನ್ನು ತಲುಪಿದ ದೇಶದಲ್ಲಿ ಮಾತ್ರ ಇದು ಸಾಧ್ಯ. ಶ್ರೀಮಂತರು, ಚಕ್ರವರ್ತಿಗಳು ಇಲ್ಲವೆಂದಿಲ್ಲ. ಆದರೆ, ನಾಗರಿಕರ ನಡುವೆಯೇ ಕಣ್ಣಿಗೆ ರಾಚುವಷ್ಟು ಆರ್ಥಿಕ-ಸಾಮಾಜಿಕ ಅಸಮಾನತೆ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಕೊನೆಯ ಬರಹ
ರಾಜಕಾರಣದ ವಲಯದ ಬಗ್ಗೆ ಬರೆಯದೆ ಹೋದರೆ ಇಲ್ಲಿಯ ಬರವಣಿಗೆ ಅಪೂರ್ಣವಾಗುತ್ತದೆ ಎಂಬುದು ನನಗೂ ಗೊತ್ತಿದೆ. ಆದರೆ ಈ ವಲಯದೊಡನೆ ಸಂಪರ್ಕ, ಒಡನಾಟ ಬರುವುದೇ ಇಲ್ಲ. ಮಾಧ್ಯಮದಲ್ಲೂ ರಾಜಕಾರಣದ ಬಗ್ಗೆ ಪ್ರಸ್ತಾಪ ಬಹಳ ಕಡಿಮೆ. ಅಲ್ಲದೆ ಅಭಿವೃದ್ಧಿ ಹೊಂದಿದ, ನಾಗರಿಕ ಪ್ರಜ್ಞೆ ಸಕ್ರಿಯಾಗಿರುವ, ನಾಗರಿಕ ವಲಯ (Civil Society) ಸರ್ವವ್ಯಾಪಿಯಾಗಿರುವ ಒಂದು ಸಮಾಜದಲ್ಲಿ ರಾಜಕಾರಣದ ಸ್ವರೂಪವೇ ಬೇರೆಯಿರುತ್ತದೆ. ರಾಜಕಾರಣ ಲಾಭಕಾರವಾದ ಉದ್ಯಮವಂತೂ ಅಲ್ಲವೇ ಅಲ್ಲ. ಹಾಗಾಗಿ ಭ್ರಷ್ಟಾಚಾರ, ಲಂಚಗುಳಿತನ, ಸ್ವಜನಪಕ್ಷಪಾತದ ಚರ್ಚೆಗಳು ಮಾಧ್ಯಮದಲ್ಲಿ ಸಂಪೂರ್ಣ ಗೈರು ಹಾಜರಿಯಾಗಿರುತ್ತವೆ. ಸೈದ್ಧಾಂತಿಕ ಚರ್ಚೆಗಳೂ ಕೂಡ ಕಡಿಮೆ. ಸರ್ಕಾರದ, ಆಡಳಿತದ ಗಮನ ಕೂಡ ಯಾವಾಗಲೂ ನಾಗರಿಕರ ದಿನನಿತ್ಯದ ಬದುಕನ್ನು ಹಸನುಗೊಳಿಸುವುದರ ಕಡೆಗೇ ಇರುತ್ತದೆ. ಇದಕ್ಕೆ ಬೇಕಾದ ನೀತಿ ನಿರೂಪಣೆ, ಕಾರ್ಯಕ್ರಮಗಳು, ಅವುಗಳ ಅನುಷ್ಠಾನದ ಬಗ್ಗೆ ಚರ್ಚೆ ಮಾಧ್ಯಮದಲ್ಲಿದ್ದರೂ ಅದೇನು ರೋಚಕವಾಗಿರುವುದಿಲ್ಲ. ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಗಣ್ಯ ಪಾತ್ರವನ್ನು ಒಪ್ಪುವುದರ ಮಟ್ಟಿಗೆ ನೆದರ್‌ಲ್ಯಾಂಡ್ಸ್ ಕೂಡ ಬಂಡವಾಳಶಾಹಿ ಆರ್ಥಿಕ ಮಾದರಿಯನ್ನೇ ಅನುಸರಿಸುತ್ತದೆ ಎಂದು ಹೇಳಬಹುದು. ಆದರೆ ಇದು ಅಮೆರಿಕದ ಮಾದರಿಯಲ್ಲ. ಬೃಹತ್ ಕೈಗಾರಿಕಾ ಕಾರ್ಪೊರೇಷನ್‌ಗಳು, ಕಂಪನಿಗಳು ಇರುವುದಿಲ್ಲ. ಹಣ, ಸಂಪತ್ತಿನ ಬಗ್ಗೆ, ಮಿತಿ ಮೀರಿ ದುಡಿಯುವುದರ ಬಗ್ಗೆ ಕೂಡ ಗೀಳಿಲ್ಲ. ವಿದೇಶಾಂಗ ನೀತಿಯಲ್ಲಿ ಎಲ್ಲ ದೇಶಗಳಂತೆ ಇಲ್ಲೂ ಸಮಯಸಾಧಕತೆ ಇದೆ. ಅಮೆರಿಕ-ಚೀನಾಗಳಂತೆ ಯುದ್ಧಪ್ರಿಯತೆ ಇಲ್ಲ. ಸಮಾಜವಾದಿ ಆಶಯಗಳನ್ನು ಸೈದ್ಧಾಂತಿಕವಾಗಿ ಒಪ್ಪದೆ ಹೋದರೂ, “ಕಲ್ಯಾಣ ರಾಜ್ಯ”ದ (welfare state) ಆಶಯವನ್ನು ಹೃತ್ಪೂರ್ವಕವಾಗಿ ಪ್ರಾಮಾಣಿಕವಾಗಿ ಒಪ್ಪಿದ್ದಾರೆ.
ಶಿಕ್ಷಣ, ಆರೋಗ್ಯ, ಮಕ್ಕಳ ಜೀವನ, ಸಾರಿಗೆ ಸಾಗಣೆ, ಕ್ರೀಡೆ, ವಸತಿ – ಈ ವಲಯಗಳಲ್ಲೆಲ್ಲ ಜನಪರವಾದ ನೀತಿ-ಕಾರ್ಯಕ್ರಮಗಳೇ ಯಾವಾಗಲೂ ಚರ್ಚೆಯಾಗುವುದು, ಈ ನೀತಿ-ಕಾರ್ಯಕ್ರಮಗಳನ್ನು ಇನ್ನೂ ಹೇಗೆ ಉತ್ತಮಗೊಳಿಸಬಹುದು, ವ್ಯಾಪಕಗೊಳಿಸಬಹುದು ಎಂಬುದರ ಬಗ್ಗೆಯೇ. ಈ ಕುರಿತು ರಾಜಕೀಯ ಪಕ್ಷಗಳಲ್ಲೇ ಒಂದು ರೀತಿಯ ಸ್ಪರ್ಧೆ ಇದೆ. ನಾಗರಿಕರನ್ನು ಸಾಕಬೇಕು, ಪೋಷಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ಅವರನ್ನು ಸಬಲಗೊಳಿಸಬೇಕು, ಅವರು ಸರ್ಕಾರ, ರಾಜ್ಯದ ಮೇಲೆ ಅವಲಂಬಿತರಾಗದ ಹಾಗೆ ನೋಡಿಕೊಳ್ಳಬೇಕು, ಹಾಗಾದಾಗ ಮುಂದೆ ಅವರೇ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾರೆ ಎಂಬುದು ಈ ಸಮಾಜದ ನಿಲುವು. ಉನ್ನತ ಮಟ್ಟದ ರಾಷ್ಟ್ರೀಯ ಆದಾಯ, ತಲಾವಾರ್ಷಿಕ ಆದಾಯದ ಹಂತವನ್ನು ತಲುಪಿದ ದೇಶದಲ್ಲಿ ಮಾತ್ರ ಇದು ಸಾಧ್ಯ. ಶ್ರೀಮಂತರು, ಚಕ್ರವರ್ತಿಗಳು ಇಲ್ಲವೆಂದಿಲ್ಲ. ಆದರೆ, ನಾಗರಿಕರ ನಡುವೆಯೇ ಕಣ್ಣಿಗೆ ರಾಚುವಷ್ಟು ಆರ್ಥಿಕ-ಸಾಮಾಜಿಕ ಅಸಮಾನತೆ ಇಲ್ಲ.
ನನಗೆ ತುಂಬಾ ಇಷ್ಟವಾದದ್ದು ಕಾರ್ಮಿಕರಿಗಿರುವ ಉದ್ಯೋಗ ರಕ್ಷಣೆ ಮತ್ತು ಕಾರ್ಮಿಕರ ಕೌಟುಂಬಿಕ ಜೀವನ ಮತ್ತು ಖಾಸಗಿ ಬದುಕನ್ನು ಗೌರವಿಸುವ ರೀತಿ. ಎಲ್ಲ ಸ್ತರದ ಉದ್ಯೋಗಿಗಳಿಗೂ ಭದ್ರತೆಯಿದೆ. ಯಾರನ್ನಾದರು ಕೆಲಸದಿಂದ ತೆಗೆದುಹಾಕುವುದು ಅಮೆರಿಕದಷ್ಟು ಸುಲಭವಲ್ಲ. ಬಡ್ತಿ ಕೊಡದೆ, ಸಂಬಳ ಹೆಚ್ಚು ಮಾಡದೆ, ಸತಾಯಿಸಿ, ತಾವೇ ತಾವಾಗಿ ಕೆಲಸ ಬಿಡುವಂತೆ ವಾತಾವರಣ ನಿರ್ಮಿಸುತ್ತಾರೆಯೇ ಹೊರತು ಕೆಲಸದಿಂದ ವಜಾ ಮಾಡುವ ಆದೇಶ ನೀಡುವುದಿಲ್ಲ.
ಆದರೆ ಪ್ರತಿಯೊಬ್ಬ ಉದ್ಯೋಗಿಯೂ ಕುಟುಂಬದ ಕಡೆ ಹೆಚ್ಚು ಗಮನ ಕೊಡಬೇಕು, ವಾರಾಂತ್ಯದಲ್ಲಿ ಹೆಚ್ಚು ಸಮಯವನ್ನು ಕುಟುಂಬದ ಜೊತೆಯೇ ಕಳೆಯಬೇಕೆಂದು ಸರ್ಕಾರ, ಸಮಾಜ ಬಯಸುತ್ತದೆ. ಕೆಲಸ ಮಾಡುವಾಗಲೂ ನಿಮಗೆ ಪ್ರಯೋಗಶೀಲರಾಗಿರಲು ಸ್ವಾತಂತ್ರ‍್ಯವಿದೆ. ನೀವು ಎಷ್ಟು ಘಂಟೆ ಕೆಲಸ ಮಾಡುತ್ತೀರಿ, ಮಾಡಿದ ಕೆಲಸದಿಂದ ಒಟ್ಟು ಉತ್ಪಾದನೆಗೆ ಎಷ್ಟು ಕಾಣಿಕೆ ನೀಡುತ್ತೀರಿ ಎಂಬುದೇ ಮುಖ್ಯ. ಖೈದಿಗಳ, ನಿರಾಶ್ರಿತರ, ವಯಸ್ಸಾದ ನಾಗರಿಕರ ಬಗ್ಗೆ ಮಾಧ್ಯಮದಲ್ಲಿ ನಿರಂತರವಾಗಿ ಚರ್ಚೆ ನಡೆಯುತ್ತಿರುತ್ತದೆ.
ವಲಸೆ, ವಲಸಿಗರನ್ನು ಕುರಿತು ಈ ದೇಶಗಳು ಯಾವ ನಿಲುವು ತಳೆಯುತ್ತವೆ ಎಂಬುದು ಇಲ್ಲಿಯ ರಾಜಕಾರಣದ ಒಂದು ಭಾಗ. ಅವರು ಇರುವ ಬಡಾವಣೆಗಳಿಗೂ ಕೂಡ ಎಲ್ಲ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ನೆಲೆ ಊರಲು ಪ್ರೋತ್ಸಾಹಿಸಲಾಗುತ್ತದೆ. ಆದರೆ ಇಂತಹ ಸಹನಶೀಲ ಯುರೋಪು ಕೂಡ ಈಚಿನ ಇಸ್ಲಾಂ ಪ್ರೇರಿತ ಆತಂಕವಾದದಿಂದ ಭಯಗೊಂಡಿದೆ, ತಲ್ಲಣಕ್ಕೆ ಒಳಗಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಉನ್ಮಾದ ತುಂಬಿದ ರಾಷ್ಟ್ರೀಯತೆ, ಉಗ್ರ ರಾಷ್ಟ್ರಪ್ರೇಮ, ನೆದರ್‌ಲ್ಯಾಂಡ್ಸ್‌ನಲ್ಲಿ ಮಾತ್ರವಲ್ಲ, ಎಲ್ಲ ಯುರೋಪಿನ ದೇಶಗಳಲ್ಲೂ ಕಾಣಿಸಿಕೊಂಡಿದೆ. ಈ ರಾಜಕಾರಣಕ್ಕೆ ಧಾರ್ಮಿಕ ಸಂಘಟನೆಗಳು ಕೂಡ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬೆಂಬಲಿಸುತ್ತವೆ. ಕೆಲವು ಯುರೂಪು ದೇಶಗಳಲ್ಲಿ ಈ ಒಲವಿರುವ ರಾಜಕೀಯ ಪಕ್ಷ, ಒಕ್ಕೂಟಗಳೇ ಅಧಿಕಾರಕ್ಕೆ ಬಂದಿವೆ. ಆದರೆ ಒಟ್ಟು ಸಮಾಜವೇ ಈ ರೀತಿಯ ಮನೋಭಾವವನ್ನು ಹೊಂದಿಲ್ಲ. ಹಾಗಾಗಿ, ಈ ಮನೋಧರ್ಮವೇ ಮುಂದೆ ಮುಖ್ಯ ಧಾರೆಯಾಗದಿರಬಹುದು ಎಂಬ ಭರವಸೆ ಇಟ್ಟುಕೊಳ್ಳಬಹುದು.
ನೆದರ್‌ಲ್ಯಾಂಡ್ಸ್‌ನಲ್ಲಿದ್ದಾಗ, ಹಂಗೇರಿಯಲ್ಲಿ ಒಂದು ವಾರ ತಂಗಿದ್ದಾಗ, ಉಕ್ರೇನ್ ಪ್ರಸ್ತಾಪ ಮತ್ತೆ ಮತ್ತೆ ಬರುತ್ತಲೇ ಇರುತ್ತಿತ್ತು. ಯಾರಿಗೂ ಸ್ಪಷ್ಟ ನಿಲುವಿಲ್ಲ. ರಷ್ಯಾದ ಸಾಮ್ರಾಜ್ಯಶಾಹಿ ನೀತಿಯನ್ನು ಒಪ್ಪುವುದಿಲ್ಲ. ಅಮೆರಿಕದ ಯುದ್ಧಪ್ರಿಯತೆಯನ್ನು ಕೂಡ ಗೌರವಿಸುವುದಿಲ್ಲ. ಆದರೆ ಒಂದು ಹಂತದ ನಂತರ ಇದರ ಬಗ್ಗೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂಬ ಧೋರಣೆಯಿದೆ. ಇದು ತಾಟಸ್ಥ್ಯ ಮನೋಭಾವವಲ್ಲ. ಉದಾಸೀನ, ತಾತ್ಸಾರದ ಮನೋಭಾವ. ಉಕ್ರೇನ್ ಆಕ್ರಮಣದ ಎರಡನೇ ವಾರ್ಷಿಕೋತ್ಸವ ಕೂಡ ನಡೆಯಿತು. ಒಂದು ಸಮಸ್ಯೆ ಬಗೆ ಹರಿಯದೆ ದೀರ್ಘಕಾಲ ಇದ್ದುಬಿಟ್ಟರೆ, ಮನುಷ್ಯರೆಲ್ಲರಲ್ಲೂ ಮೂಡುವ ಉದಾಸೀನ, ಉಡಾಫೆಯ ಮನೋಭಾವವನ್ನು ನೆದರ್‌ಲ್ಯಾಂಡ್ಸ್‌ನಲ್ಲೂ, ಹಂಗೇರಿಯಲ್ಲೂ ನಾವು ಭೇಟಿ ಮಾಡಿದ ಯುರೋಪಿನ ಉಳಿದ ನಾಗರಿಕರಲ್ಲೂ ಕಂಡಿತು.
ಒಂದು ಅಭಿವೃದ್ಧಿ ಹೊಂದಿದ ದೇಶದ, ಸಂತೃಪ್ತಿ ತುಂಬಿದ ಸಮಾಜದ ರಾಜಕಾರಣದ ಮಾದರಿಯಾಗಿ ಇಲ್ಲಿನ ಬೆಳವಣಿಗೆಗಳನ್ನು ಗಮನಿಸಬಹುದು. ಸಾಮಾನ್ಯ ನಾಗರಿಕರ ದಿನನಿತ್ಯದ ಜೀವನದ ಬಗ್ಗೆ ಇರುವ ಸೂಕ್ಷ್ಮತೆ, ಗೌರವ, ಇಲ್ಲಿಯ ರಾಜಕಾರಣ, ಆಡಳಿತದಲ್ಲಿ ಅಂತರ್ಗತವಾಗಿದೆ. ಭಾರತೀಯರು ಇದನ್ನು ಗಮನಿಸಬೇಕೆನ್ನಿಸುತ್ತದೆ.
(ಸರಣಿ ಮುಕ್ತಾಯ…)
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.