Advertisement
ಪದ್ಮನಾಭ ಭಟ್ ಶೇವ್ಕಾರ್ ಬರೆದ ಮೂರು ಕವಿತೆಗಳು

ಪದ್ಮನಾಭ ಭಟ್ ಶೇವ್ಕಾರ್ ಬರೆದ ಮೂರು ಕವಿತೆಗಳು

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ks.kendasampige@gmail.com ಇ-ಮೇಲ್  ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು.

 

 

 

 

 

 

ಫ್ರಮ್ ಅಡ್ರೆಸ್

ಹೆದ್ದಾರಿ ರಿಪೇರಿಯ ಹುಡುಗ
ಬಂಡೆಯ ಮೇಲೆ ಡಾಂಬರಿನಲ್ಲಿ ಬರೆದ
ಯಾವುದೋ ಹೆಸರ ಮೊದಲ ಅಕ್ಷರ
ಪುರಸೊತ್ತಿರದ ಬಸ್ಸುಗಳನ್ನೆಲ್ಲಾ ಛೇಡಿಸಿ ನಕ್ಕಿದೆ

ಸಿಟ್ಟಿನಿಂದ ಘರ್ಜಿಸುತ್ತಾ ಘಟ್ಟ ಹತ್ತುವ
ಲೊಂಗ್‍ರೂಟು ಬಸ್ಸಿನ ಚೂರು ಹರಿದ
ಸೀಟಿನಲ್ಲಿ ಕಿಟಕಿ ಬದಿ ಕೂತ ದೊಡ್ಡಕ್ಕನಿಗೆ
ಅದೇ ಬಂಡೆಯ ಮೇಲೆ
ಗತ ಪ್ರೀತಿಯ ಸಮಾರೋಪ ಸಿಕ್ಕು
ಗೊತ್ತಾಗದೆಯೇ ಕತ್ತು ಬೆವರಿ
ಮಪ್ಲರಿನಿಂದ ಹೊರಬಿದ್ದ
ಸುಮಾರು ಮುಂಗುರುಳು ಸದ್ದಿರದೇ ಬಿಕ್ಕಿವೆ.

ಬಸ್ಸಿನೊಳಗೆ ಲೈಟು ಆರುತ್ತಿದ್ದಂತೇ
ಬೆಳಕೆಲ್ಲಾ ಕಿಟಕಿಗಳಲ್ಲಿ ಸೋರಿ
ಕತ್ತಲೊಟ್ಟಿಗೆ ಸೇರಿ
ಜೋರು ಹಿಂದಕ್ಕೋಡಿದೆ.
ಸೂಟ್‍ಕೇಸಿನಲ್ಲಿನ ಕಪ್ಪು ಫೈಲಿನಲ್ಲಿ
ಎಲ್ಲ ಮಾರ್ಕ್ಸ್ ಕಾರ್ಡ್ ಗಳಿಗೂ ಭದ್ರ ನಿದ್ರೆ.

ಮಧ್ಯರಾತ್ರಿ ಎದ್ದುಕೂತ ಅಪ್ಪ
ಮೋಟು ಬೀಡಿಯಲ್ಲಿ ಅಶರೀರನಾಗಿ
ಸುಟ್ಟು ಸುಟ್ಟು ಕತ್ತಲನ್ನು ಕನ್ನು ಮಾಡುತ್ತಾನೆ.

ಗಲ್ಲಿಗೆ ಒಳಗಾದ ಹ್ಯಾಂಗರಿನ ಅಂಗಿಯ
ಕೆಸರು ಕಿಸೆಯಲ್ಲಿ ಜಾಮಾದ
ಹತ್ತಿಪ್ಪತ್ತರ ಹಳೆ ನೋಟಿನಡಿಯಿಂದ
ಹಣಕಿದ ಉದ್ರಿ ಸಾಮಾನಿನ ಬಿಲ್ಲು
ದಿಗ್ಭ್ರಾಂತವಾಗಿದೆ ನಿದ್ರೆಯಲ್ಲೂ ತುಟಿಬಿರಿದ
ಪುಟ್ಟುವಿನ ನಗು ನೋಡಿ.

ದಪ್ಪ ಕನ್ನಡಕ ಏರಿಸೇರಿಸಿ
ಕಣ್ಣು ಸಣ್ಣ ಮಾಡಿ ದಾರ ಪೋಣಿಸಿ
ಸೀಳಿಹೋದ ಪುಟ್ಟುವಿನ ನಸುಕನ್ನು
ಕನಸು ಹೆಸರಿನ ಸ್ಟಿಚ್ಚುಹಾಕಿ
ಬೆಳಗಿನೊಳಗೇ ಹೊಲಿಯುವ ಭರದಲ್ಲಿ ಅಮ್ಮ
ಹೆಪ್ಪು ಹಾಕುವುದನ್ನೇ ಮರೆತಿದ್ದಾಳೆ ಹಾಲಿಗೆ.

ಇಲ್ಲಿ ದೊಡ್ಡಕ್ಕನಿಗೆ ಕೊ೦ಚ ಮಂಪರು ಬಂದಂತಾಗಿ
ಹಣೆ ಜಪ್ಪಿದಾಗ ಮುಂದಿನ ಸೀಟಿಗೆ
ದಿಗಂತದಂಚು ಗಾಯಗೊಂಡು ತೀವ್ರ ಸ್ರಾವ.
ಅಲ್ಲಿ ಲಾಂಗ್‍ರೂಟಿನ ತುದಿಯಲ್ಲಿ
ಅನಾಮಿಕ ಅಡ್ರೆಸ್ಸಿನ ಬಾಗಿಲಲ್ಲಿ
ಬಿಸಿಲ ಕೋಲಿಂದ ಕತ್ತಲೆಯ ಕೊಲೆಯಾಗಿದೆ.

ಅಲ್ಲಿಂದಲೇ ದೊಡ್ಡಕ್ಕ ಕಣ್ಣುಜ್ಜುತ್ತಾ
ಈಗಷ್ಟೇ ಹಾಸಿಗೆಯಲ್ಲಿ ಎದ್ದು ಕೂತ ಪುಟ್ಟುವಿಗೆ
ಒಂದು ಗ್ರೀಟಿಂಗ್ಸ್ ಕಾರ್ಡ್ ಕಳಿಸಬೇಕಿದೆ
ಫ್ರಮ್ ಅಡ್ರೆಸ್ ಸಮೇತ.

ಸಾಕ್ಷಿಯಾಗುವ ಗಳಿಗೆ…

ಮನದೊಳಗಣ ಕವನಕ್ಕಿನ್ನೂ ಉಸಿರು ದಕ್ಕಿಲ್ಲ
ಕೂಸು ಹುಟ್ಟುವ ಮೊದಲೇ ಕನಸಿನ ಕುಲಾವಿ
ವೃತ್ತ ಪತ್ರಿಕೆಯ ಮುಖಪುಟದ ಎಡಪಕ್ಕದಲ್ಲಿ
ಚರಮಸುಖದ ಔಷದಿಯ ಬದಿಯಲ್ಲಿಯೇ
ಗರ್ಭಪಾತದ ಗುಳಿಗೆಯ ಜಾಹೀರಾತು

ಸಿಗ್ನಲ್ ದೀಪದ ಬುಡದಲ್ಲಿ ನೂಕುನುಗ್ಗಲು
ಏನೋ ಸ್ವಲ್ಪ ಗಾಡಿ ತಾಕಿತಂತೆ
ಅದೆಲ್ಲ ಹೊಡೆದಾಡುವ ವಿಷಯ ಅಲ್ಲವೇ ಅಲ್ಲವಂತೆ
ಸಿಡಿದ ನೆತ್ತರು  ಷರ್ಟ್‌ನ ಕಾಲರ‍್ಗೆ ಬಳಿದದ್ದು ಗೊತ್ತಾದರೂ
ನೋಡಿ ಸಾಬೀತುಪಡಿಸಿಕೊಳ್ಳುವ ಯತ್ನ ವಿಫಲ

ನಡುಗುತ್ತಿರುವ ಕಾಲುಗಳು ನಿಶ್ಚೇತವಾದರೆ
ಪ್ಯಾಂಟ್ ಹಿಡಿದೆಳದು ತನ್ನ ಮೊಂಡು ಕೈಯೊಡ್ಡುವ
ಕಾಲಿಲ್ಲದ ಹುಡುಗನ ಕಣ್ಣುಗಳು
ಹುಟ್ಟುಹಬ್ಬದ ಕೇಕನ್ನು ಕತ್ತರಿಸುವ ಚಾಕುಗಿಂತ ಹರಿತ

ಹಾಗೇ ಕೊಡವಿಕೊಂಡು ಮನದ ದಿಗಿಲು ಹುದುಗಿಸಲು
ರಸ್ತೆ ಬದಿಯ ಪಾರ್ಕಿನ ಬೇಂಚಿನ ಬದಿ ಕುಳಿತರೆ
ಹಿಂದಿನ ಮರದಡಿಯಿಂದ ಪ್ರೇಮಿಗಳ ಪಿಸುಮಾತು
“ನಾಳೆಯೇ ಹೋಗಿ ತೆಗೆಸಿಕೊಂಡು ಬರೋಣ..”

ಅಂಗಿ ಕಾಲರ್ ಮೇಲಿನ ನೆತ್ತರಿನ ಅತ್ತರು
ಸಾಕ್ಷಿ ಹೇಳುತ್ತಿರುವುದು ಹೊಡೆದಾಟ ನಡೆದಿದ್ದಕ್ಕಾ
ಅಥವಾ ಅದಕ್ಕೆ ನಾನು ಸಾಕ್ಷಿಯಾಗಿರುವುದಕ್ಕಾ

ರೂಪಾಂತರವಾಗಿ ಬಂದ ಗೆಳತಿಯ ಮೆಸೆಜನ್ನು
ನನಗೆ ಅರ್ಥೈಸಲು ಮಾರಣಾಂತಿಕವಾಗಿ ಕೂಗಿತು ಮೊಬೈಲು
“ಯಾಕೋ ಸಾಯಬೇಕು ಅನ್ನಿಸುತ್ತಿದೆ ಕಣೋ..”

“ಮರೆಯಬೇಡ ಕಣೇ ನಾನಿದ್ದೀನಿ” ಬರೆಯಹೊರಟರೆ
ಬಣ್ಣ ಬಣ್ಣದ ಅಕ್ಷರಗಳನ್ನೆಲ್ಲಾ ಕಲಸಿ ಹೊಯ್ದಂತಾಗಿ
ಕಣ್ಣೆಲ್ಲಾ ಮಂಜು ಮಂಜು…

ಹನಿ ಹನಿಯಾಗಿ ಹನಿಯುತಿದೆ
ಎದೆಯ ಭಾವಗೀತೆಯ ಗರ್ಭಪಾತ ಗುಪ್ತಗಾಮಿನಿ
ತಡಕಾಡಿ ಹುಡುಕಿದರೆ ಕುಲಾವಿಕಟ್ಟಿದ
ಕನಸುಗಳೂ ನನ್ನ ಪರವಾಗಿ ಸಾಕ್ಷಿ ಹೇಳುತ್ತಿಲ್ಲ.

 

 

 

 

 

ಕೆಲವು ಸಲದ ಶಬ್ದಗಳು

ಹಾಗೇ ಒಂದಿನ ಹೆರಿಗೆ ವಾರ್ಡಿನ ದಾರಿಯಲ್ಲಿ
ತಿರುಗಾಡಲು ಹೋಗಿ
ಈಗಷ್ಟೇ ಲೋಕ ಕಂಡ ಕಂಗಾಲಲ್ಲಿ
ಅಳುವ ಮಗುವಿನ ಧ್ವನಿ ಎದುರಾಗಿ
ಆಸ್ಪತ್ರೆಯ ಆ ವಿಕ್ಷಿಪ್ತ ವಾಸನೆಗೆ
ಹೆಸರಿಟ್ಟುಬಿಟ್ಟಿದ್ದೆ ಎರಡಕ್ಷರದ್ದು.

ನನ್ನ ಕಲ್ಪನೆಗೆ ನಾನೇ ಖುಷಿಯಾಗಿ
ಹೀಗೇ ಒಂದೆರಡು ಸಾಲು
ಗುನುಗಿದ್ದೆ ಪ್ರಾಸಬದ್ದವಾಗಿ.

“ಆಸ್ಪತ್ರೆಯೆಂದರೆ ಹುಟ್ಟು,
ಬದುಕ ಯಾನದ ದೋಣಿ
ಜೀಕುವ ಮೊದಲ ಹುಟ್ಟು..”

ಪೂರ್ತಿ ಗೊತ್ತಿರಲಿಲ್ಲ ನನಗಾಗ
ಕೆಲವು ಸಲದ ಶಬ್ದಗಳೂ
ಭ್ರಮೆ ಹುಟ್ಟಿಸುವುದುಂಟು
ವ್ಯಕ್ತಿಗಳಂತೇ.

ನಿನ್ನೆ ರಾತ್ರಿ ಅಪ್ಪ ಮಾಯದ
ಮಾರುಕಟ್ಟೆಯಲ್ಲಿ ಕೊಂಡುತಂದ
ಕನಸುಗಳೆಲ್ಲಾ ಎಣ್ಣೆ ಮೆತ್ತಿದ
ಅವನ ಕೈಯಿಂದ ಜಾರಿ ನನ್ನ ಹೆಗಲಿಗೆ ಬಿದ್ದಿದೆ.
ಬೆವರ ಹೀರಿ ಬೆಳೆದ
ಅವು ಬಲು ಭಾರ
ಹೊತ್ತು ಸಾಗಬೇಕಾಗಿದೆ
ಗಮ್ಯವಿನ್ನೂ ದೂರ ದೂರ..

ಆಸ್ಪತ್ರೆಯ ಅಪರಿಚಿತ ಬೆಳಕಲ್ಲಿ
ಕೊಂಚ ಕತ್ತಲೆಗಾಗಿ ತಡಕಾಡುತ್ತಾ
ಔಷಧಿಗಳ ಅಸಹನೀಯ ಗಮಲಲ್ಲಿ
ಕಳವಳಿಸುತ್ತಾ
ಸಂಪಿಗೆಯ ಕಂಪಿನ ನೆನಪಲ್ಲಿ.

ಒಮ್ಮೆ ಬಿಕ್ಕಳಿಸಿ ಹಗುರಾಗಲು
ಮಡಿಲ ಚಡಪಡಿಕೆಯಲ್ಲಿ
ಪಟಪಟಿಸುವ ಕಣ್ಣುಗಳು
ಜರ್ಝರಿತವಾಗಿದೆ, ಎದುರಿಗೆ
ಕೊಡವಿಕೊಂಡು ಹೋಗುವವರ
ಹೆಗಲಿನಿಂದ ಹಾರಿದ ದೂಳಿಗೆ.

ಸುಡಲಿಕ್ಕೇ ಎಂಬಂತೇ
ಕಾದು ನಿಂತಿದೆ
ಕುಸಿದು ಕುಳಿತ ನಯವಾದ
ಕಪ್ಪು ಕಲ್ಲು ಮೆಟ್ಟಿಲೂ,

ಒಳಗೆ ಶುಭ್ರ ಚಾದರ ಹೊದ್ದು
ರಕ್ತ ಬೇಡುವ ತನ್ನ ತನುವ
ಪ್ರಶ್ನಾರ್ಥಕ ಚಿಹ್ನೆಯಂತೇ
ಮುದುರಿಸಿ ಮಲಗಿದ್ದಾನೆ ಅಪ್ಪ.
ಹೊರಬಾಗಿಲ ಮೆಟ್ಟಿಲಲ್ಲಿ
ಬಳಲಿ ಕುಳಿತಲ್ಲೇ ನನ್ನ ಕಣ್ಣ
ಮೇಲಿನ ಪೊರೆಯಂಥ ಭ್ರಮೆಗೆ
ಶಸ್ತ್ರಚಿಕಿತ್ಸೆಯಾಗಿ ಹೋಗಿದೆ ತಣ್ಣಗೆ.

ಬವಳಿ ಮೀರಿ ಎದ್ದುನಿಂತು
ಹದ ತಪ್ಪಿದ ಹೆಜ್ಜೆ ಎತ್ತಿಟ್ಟರೆ ವಾರ್ಡಿನತ್ತ
ಈಗಷ್ಟೇ ಒರೆಸಿದ ನೆಲದಿಂದ
ಎದ್ದೆದ್ದು ಬಂದ ಮಂದ ಮಂದವಾದ
ಆ, ಅದೇ ವಾಸನೆ…

ಅದರೀಗ ಗಿರಗಿರ ತಿರುಗುವ ತಲೆಯಲ್ಲಿ
ಅದಕ್ಕೆ ಬೇರೆಯದೇ ಹೆಸರು ಹೊಳೆದು
ಮನ ಬೆಚ್ಚಿ, ಮೈ ಬೆವರಿ…
ಹಾ, ಇದಕ್ಕೂ ಎರೆಡೇ ಅಕ್ಷರ,
ಉಚ್ಚರಿಸಲು ಸೋತ ನಾಲಿಗೆ
ತೊಡರಿ ಬಾಯಾರಿ…

ಪೊರೆಯ ತೆರೆ ಸರಿದು
ಆಚೆ ಬಚ್ಚಿಟ್ಟುಕೊಂಡಿದ್ದ
ಅರ್ಥಗಳೆಲ್ಲ ನಿಧಾನ ನಿಚ್ಚಳವಾಗುತ್ತಿದೆ.

ಕೆಲವು ಸಲದ ಶಬ್ದಗಳೂ
……….
…..

(ಚಿತ್ರ: ರೂಪಶ್ರೀ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಬಿದಲೋಟಿ ರಂಗನಾಥ್

    ಒಳ್ಳೆಯ ಪದ್ಯಗಳು

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ