Advertisement
ಪಿಕ್ ನಿಕ್‍ ಎಂದು ಯಾಮಾರಿಸಿದ್ದು!!!: ಬಸವನಗೌಡ ಹೆಬ್ಬಳಗೆರೆ ಬರಹ

ಪಿಕ್ ನಿಕ್‍ ಎಂದು ಯಾಮಾರಿಸಿದ್ದು!!!: ಬಸವನಗೌಡ ಹೆಬ್ಬಳಗೆರೆ ಬರಹ

ಊರಿಂದ ಇನ್ನೇನು ಸ್ವಲ್ಪ ದೂರ ಹೋಗಿರಲಿಲ್ಲ, ಅವನ ವಿರೋಧಿಗಳು ಕೈಯಲ್ಲಿ ಕಣಿಗೆ (ಮರದ ಬಡಿಗೆ) ಹಿಡಿದು ನಮ್ಮ ರಸ್ತೆಗೆ ಅಡ್ಡವಾಗಿ ನಿಂತಿದ್ದರು. ವ್ಯಾನು ನಿಲ್ಲಿಸಿ ‘ಯಾಕೆ?’ಎಂದು ಕೇಳಿದಾಗ ಅವರು ವ್ಯಾನಿನ ಸುತ್ತಲೂ ನಿಂತು ‘ನೋಡಲು ನರಪೇತಲ ನಾರಾಯಣರಂತೆ ಇದೀರ ಬೋ… ಮಕ್ಕಳಾ.. ರೌಡಿಗಳೇನ್ರೂ ನೀವು, ತಲೆ ಸೀಳಿ ಬಿಡ್ತೀವಿ’ ಎಂದು ಸಿಟ್ಟಾಗಿ ಕಣಿಗೆ ಎತ್ತುತ್ತಾ ಬೈಗುಳ ಶುರು ಮಾಡಿದರು. ಆಗ ನಾವು ನಡುಗುತ್ತಾ ಕಣ್ಣೀರಿಡುತ್ತಾ ನಮ್ಮ ಹಿನ್ನೆಲೆ ತಿಳಿಸಿದೆವು. ತಾಳ್ಮೆಯಿಂದ ನಮ್ಮ ಮಾತನ್ನು ಅವರು ಕೇಳಿದ್ದರಿಂದಲೋ ಏನೋ ಅವರು ನಮಗೇನೂ ಮಾಡದೇ, ಹೋಗಲು ಸುಮ್ಮನೆ ಬಿಟ್ಟರು!
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ

ಪಿ.ಯೂ.ಸಿ ಓದುತ್ತಿದ್ದಾಗ ನಾವಿದ್ದ ಹಾಸ್ಟೆಲ್‌ನಲ್ಲಿ ಡಿಗ್ರೀ ಹುಡುಗರೂ ಇದ್ದರು. ಓದಲೆಂದೇ ಹಾಸ್ಟೆಲ್‌ಗೆ ಸೇರಿದ್ದರೂ ‘ಸಂಗದಂತೆ ಬುದ್ಧಿ, ಊಟದಂತೆ ಲದ್ಧಿ’ ಎಂಬ ಮಾತಿನಂತೆ ಕೆಟ್ಟವರ ಸಹವಾಸ ಮಾಡಿ ಅಷ್ಟು ಸೀರಿಯಸ್ಸಾಗಿ ನಾವು ಓದುತ್ತಿರಲಿಲ್ಲ. ಸಮಯ ವ್ಯರ್ಥ ಮಾಡುತ್ತಿದ್ದೆವು. ಹೀಗೆ ಕಾಲ ಕಳೆಯುತ್ತಿದ್ದಾಗ ಒಮ್ಮೆ ನಮ್ಮ ಹಾಸ್ಟೆಲ್‌ನಲ್ಲಿದ್ದ, ಡಿಗ್ರೀ ಓದುತ್ತಿದ್ದ ಸುನಿಲ್ ನಮ್ಮ ಬಳಿ ಬಂದು ‘ಈ ದಿನ ನಾವು ಕೊಂಡಜ್ಜಿಗೆ ‘ಪಿಕ್ ನಿಕ್’ ಹೋಗೋಣ, ನೀವು ದುಡ್ಡು ಕೊಡುವುದು ಬೇಡ, ನನ್ನಣ್ಣ ಮಾರುತಿ ವ್ಯಾನ್ ವ್ಯವಸ್ಥೆ ಮಾಡಿದ್ದಾನೆ’ ಎಂದ. ಆಗ ‘ಮಗಾ, ಜೀವನದಲ್ಲಿ ಎಂಜಾಯ್ ಮಾಡ್ಬೇಕು’ ಎಂಬ ಹಾಸ್ಟೆಲ್ ಹೈಕಳ ಒಣ ವೇದಾಂತದ ನುಡಿಗಳು ನೆನಪಾಗಿ ತಕ್ಷಣ ನನ್ನ ಒಪ್ಪಿಗೆ ಕೊಟ್ಟೆ. ಅಷ್ಟೇ ಅಲ್ಲದೇ ನನ್ನ ಸ್ನೇಹಿತರ ಬಳಿ ಹೋಗಿ ‘ದೇಶ ಸುತ್ತಬೇಕು ಕೋಶ ಓದಬೇಕು’ ಕೆ.ಎಸ್.ಆರ್. ಟಿ.ಸಿ ಬಸ್ಸಿನಲ್ಲಿ ಬರೆಯಿಸುವ ‘ಇರುವುದೆಲ್ಲವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂಬ ಕಗ್ಗದ ನುಡಿಯನ್ನು ಹೇಳಿ, ಪ್ರೇರೇಪಿಸಿ ಬೇರೆಯವರನ್ನು ಪಿಕ್‌ನಿಕ್‌ಗೆ ಹೊರಡಿಸಿದೆ. ವ್ಯಾನ್ ಬಂದ ಕೂಡಲೇ ಖುಷಿಯಿಂದಲೇ ಹತ್ತಿ ಪಿಕ್‌ನಿಕ್‌ನ ರಸಘಳಿಗೆಗಳನ್ನು ಕಲ್ಪಿಸಿಕೊಳ್ಳುತ್ತಾ ಹೊರಟೆವು.

ನಮ್ಮ ವ್ಯಾನಿನಲ್ಲಿ ಒಂದಿಬ್ಬರು ಅಪರಿಚಿತರೂ ಸಹ ಹತ್ತಿದ್ದರು. ದಾವಣಗೆರೆಯಿಂದ ಸ್ವಲ್ಪವೇ ದೂರದಲ್ಲಿರುವ ಕೊಂಡಜ್ಜಿಗೆ ನಮ್ಮ ವ್ಯಾನು ಒಂದು ಘಂಟೆಯಾದರೂ ತಲುಪಲಿಲ್ಲ. ನಮಗೆ ಸ್ವಲ್ಪ ದಿಗಿಲಾಯಿತು. ಯಾಕೆಂದು ಪ್ರಶ್ನಿಸಿದಾಗ ‘ಇನ್ನೂ ಉತ್ತಮವಿರುವ ಸ್ಥಳಕ್ಕೆ ಹೋಗೋಣ’ ಎಂದು ಪೂಸಿ ಹೊಡೆದರು. ವಾಪಸ್ಸು ಬರುವಾಗ ಕೊಂಡಜ್ಜಿಗೆ ಹೋಗೋಣ ಎಂದು ತಿಳಿಸಿದರು. ಆದರೆ ಅವರು ಕರೆದುಕೊಂಡು ಹೋಗಿದ್ದು ಮಾತ್ರ ಹರಪನಹಳ್ಳಿ ತಾಲ್ಲೂಕಿನ ಒಂದು ಕುಗ್ರಾಮಕ್ಕೆ! ಸೀದಾ ಊರೊಳಗೆ ಹೋಗಿ ಒಬ್ಬ ವ್ಯಕ್ತಿಯ ಮನೆ ಬಳಿ ನಿಲ್ಲಿಸಿ ಅವನ ಮನೆಯೊಳಗೆ ಕರೆದುಕೊಂಡು ಹೋದರು. ಅವರ ಮನೆಯಲ್ಲಿ ತಿನ್ನಲು ನಮಗೆ ಉಪ್ಪಿಟ್ಟು ಕೊಟ್ಟರು. ಅಷ್ಟಕ್ಕೇ ನಮ್ಮನ್ನು ಬಿಡದೇ, ನಮ್ಮನ್ನೆಲ್ಲಾ ಒಬ್ಬ ವ್ಯಕ್ತಿಯ ಹಿಂದೆ ಹೋಗಲು ತಿಳಿಸಿದರು. ಅಲ್ಲಿಯವರೆಗೂ ಏನು ಘಟಿಸುತ್ತಿದೆ ಎಂಬುದನ್ನು ಅರಿಯದ ನಮಗೆ, ಯಾವಾಗ ಊರ ಮುಖ್ಯ ಬೀದಿಯಲ್ಲಿ ತಮಟೆ ಬಾರಿಸುತ್ತಾ ಆ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿಯವರೆಗೆ ಕರೆದುಕೊಂಡು ಹೋದರೋ ಆಗ ನಮಗೆ ಊರವರಿಂದ ತಿಳಿಯಿತು, ಆ ವ್ಯಕ್ತಿಯ ನಾಮಪತ್ರ ಸಲ್ಲಿಕೆಗೆ ಜನ ಬೆಂಬಲ ಪ್ರದರ್ಶಿಸಲು ನಮ್ಮನ್ನೆಲ್ಲಾ ಕರೆದುಕೊಂಡು ಬಂದದ್ದು ಅಂತಾ! ನಾವು ಬಕ್ರಾ ಆಗಿ ಸುನಿಲನ ಮೇಲೆ ಕೋಪ ಬಂದರೂ ಏನೂ ಮಾಡದ ಸ್ಥಿತಿಗೆ ಬಂದಿದ್ದೆವು. ಅವನ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಗಿದ ಮೇಲೆ ನಮ್ಮನ್ನು ಅಲ್ಲಿಂದ ಕಳಿಸಿಕೊಟ್ಟರು.

ಊರಿಂದ ಇನ್ನೇನು ಸ್ವಲ್ಪ ದೂರ ಹೋಗಿರಲಿಲ್ಲ, ಅವನ ವಿರೋಧಿಗಳು ಕೈಯಲ್ಲಿ ಕಣಿಗೆ (ಮರದ ಬಡಿಗೆ) ಹಿಡಿದು ನಮ್ಮ ರಸ್ತೆಗೆ ಅಡ್ಡವಾಗಿ ನಿಂತಿದ್ದರು. ವ್ಯಾನು ನಿಲ್ಲಿಸಿ ‘ಯಾಕೆ?’ಎಂದು ಕೇಳಿದಾಗ ಅವರು ವ್ಯಾನಿನ ಸುತ್ತಲೂ ನಿಂತು ‘ನೋಡಲು ನರಪೇತಲ ನಾರಾಯಣರಂತೆ ಇದೀರ ಬೋ… ಮಕ್ಕಳಾ.. ರೌಡಿಗಳೇನ್ರೂ ನೀವು, ತಲೆ ಸೀಳಿ ಬಿಡ್ತೀವಿ’ ಎಂದು ಸಿಟ್ಟಾಗಿ ಕಣಿಗೆ ಎತ್ತುತ್ತಾ ಬೈಗುಳ ಶುರು ಮಾಡಿದರು. ಆಗ ನಾವು ನಡುಗುತ್ತಾ ಕಣ್ಣೀರಿಡುತ್ತಾ ನಮ್ಮ ಹಿನ್ನೆಲೆ ತಿಳಿಸಿದೆವು. ತಾಳ್ಮೆಯಿಂದ ನಮ್ಮ ಮಾತನ್ನು ಅವರು ಕೇಳಿದ್ದರಿಂದಲೋ ಏನೋ ಅವರು ನಮಗೇನೂ ಮಾಡದೇ, ಹೋಗಲು ಸುಮ್ಮನೆ ಬಿಟ್ಟರು!

ನಮ್ಮ ಜೊತೆ ವ್ಯಾನಿನಲ್ಲಿ ಬಂದ ಅಪರಿಚಿತರಿಂದ ನಮಗೆ ತಿಳಿದ ಕಹಿ ಸತ್ಯವೇನೆಂದರೆ, ಆ ಗ್ರಾಮದ ಅಭ್ಯರ್ಥಿಯಿಂದ ಸುನಿಲನ ಅಣ್ಣನು ನಾಮಪತ್ರ ಸಲ್ಲಿಕೆಗೆ ಜನಬೆಂಬಲಕ್ಕಾಗಿ ಜನರನ್ನು, ರೌಡಿಗಳನ್ನು ಕರೆದುಕೊಂಡು ಬರುತ್ತೇನೆ’ ಎಂದು ದುಡ್ಡು ತೆಗೆದುಕೊಂಡಿದ್ದನಂತೆ! ಆದರೆ ದುಡ್ಡು ಉಳಿಸಿಕೊಳ್ಳಲು ನಮ್ಮನ್ನೇ ಕರೆದುಕೊಂಡು ಹೋಗಿದ್ದು ಮಾತ್ರ ನಮ್ಮ ಈ ಸಂಕಟಕ್ಕೆ ಕಾರಣವಾಗಿತ್ತು. ಹಾಸ್ಟೆಲ್‌ಗೆ ತಲುಪಿ ಇದರ ಬಗ್ಗೆ ಹೇಳಿಕೊಂಡರೆ ‘ಬಾಯಿಬಿಟ್ಟರೆ ಬಣ್ಣಗೇಡು’ ಎಂಬಂತೆ ನಾವು ನಗೆಪಾಟಲಿಗೆ ಈಡಾಗುತ್ತೇವೆ ಎಂದೇ ಭಾವಿಸಿ ಪಿಕ್ ನಿಕ್ ರಹಸ್ಯವನ್ನು ನಮ್ಮಲ್ಲೇ ಉಳಿಸಿಕೊಂಡೆವು. ಇಂದಿಗೂ ‘ಕೊಂಡಜ್ಜಿ’ ಯ ಹೆಸರು ಕೇಳಿದ ಕೂಡಲೇ ಪಿಕ್ ನಿಕ್ ಗೆಂದು ಹೋಗಿ ಯಾಮಾರಿದ ಸಂಗತಿ ನೆನಪಿಗೆ ಬರುತ್ತದೆ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ