ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು. ಕೆಲವರು ಕುಸಿದು ಕುಳಿತುಕೊಂಡು ದುಃಖಿಸಿದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಆರನೆಯ ಕಂತು ನಿಮ್ಮ ಓದಿಗೆ
ಈಗ ಆಡಳಿತ ಕಛೇರಿಯಲ್ಲಿ ಸುರಂಗದಲ್ಲಿ ಶಿಲೆಗಳ ಕೆಳಗೆ ಸಿಕ್ಕಿಕೊಂಡಿರುವ ಇಬ್ಬರು ಕಾರ್ಮಿಕರನ್ನು ಪಾರು ಮಾಡುವುದರ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಆ ಗಣಿಯ ಮುಖ್ಯಸ್ಥರು, ಮೈನಿಂಗ್ ಎಂಜಿನಿಯರ್ಸ್, ಭೂವಿಜ್ಞಾನಿಗಳು, ಏಜೆಂಟ್ಸ್, ಮೇಸ್ತ್ರಿಗಳು ಮತ್ತು ಕೆಲವು ಸೀನಿಯರ್ ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸುರಂಗದಲ್ಲಿ ಶಿಲೆಗಳು ಸ್ಫೋಟಗೊಂಡಾಗ ಇಬ್ಬರು ಡ್ರಿಲ್ಲರ್ಸ್ ಕಲ್ಲುಗಳ ಕೆಳಗೆ ಸಿಕ್ಕಿಕೊಂಡಿದ್ದನ್ನು ಅವರ ಜೊತೆಗಿದ್ದ ಅಂಡರ್‌ಗ್ರೌಂಡ್ ಕಾರ್ಮಿಕರು ನೋಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ಕಾರ್ಯಾಚರಣೆ ಮಾಡುವಂತಿಲ್ಲ. ಕಾರ್ಮಿಕರು ಅಲ್ಲಿಗೆ ಹೋಗಿ ಶಿಲೆಗಳನ್ನು ತೆಗೆಯುವುದು ತೀರಾ ಅಪಾಯದ ಕೆಲಸ. ಕಾರಣ ಕನಿಷ್ಟ 24 ಗಂಟೆಗಳ ಕಾಲವಾದರೂ ಕಾದು ನೋಡಲೇಬೇಕಿದೆ. ಮತ್ತೆ ಏನಾದರು ಶಿಲೆಗಳು ಕುಸಿಯುತ್ತವೊ ಏನೊ? ಎಂಬುದನ್ನು ಗಮನಿಸಬೇಕಾಗಿದೆ. ಅನಂತರ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳೋಣ ಎಂದು ತೀರ್ಮಾನಿಸಲಾಯಿತು.
ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ ಇಬ್ಬರು ಕಾರ್ಮಿಕರೆಂದರೆ ಒಬ್ಬ ಅಮಾವಾಸೆ. ಇನ್ನೊಬ್ಬ ಬಾಬು. ಅವರ ಮನೆಗಳಲ್ಲಿ ವಿಷಯ ತಿಳಿಸಲಾಯಿತು. ನಾಳೆ ಬೆಳಗಿನವರೆಗೂ ಯಾರೂ ಗಣಿಯ ಒಳಗೆ ಹೋಗದಂತೆ ಆದೇಶ ಮಾಡಿ ಶಿಲೆಗಳು ಕುಸಿಯುವುದರ ಬಗ್ಗೆ ಎಚ್ಚರಿಕೆಯನ್ನು ಇಡಲಾಯಿತು. ಆ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕಾರ್ಮಿಕರನ್ನು ಮೇಲಕ್ಕೆ ಕರೆದುಕೊಂಡು ಹಾಜರಾತಿ ತೆಗೆದುಕೊಳ್ಳಲಾಯಿತು. ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಪಾರುಗಾಣಿಕಾ ತಂಡ ಎಲ್ಲಾ ಮುನ್ನೆಚ್ಚರಿಕೆಗಳಿಂದ 66ನೇ ಹಂತಕ್ಕೆ ತಲುಪಿ ಎಲ್ಲವನ್ನೂ ಗಮನಿಸುತ್ತಿತ್ತು. ತುರ್ತು ಪರಿಸ್ಥಿತಿಯಲ್ಲಿ ಅಲ್ಲಿ ಅಡಗಿಕೊಳ್ಳಲು ಕೆಲವು ಉಕ್ಕಿನ ಬಂಕರ್‌ಗಳಿದ್ದವು.
ಕಳೆದ 24 ಗಂಟೆಗಳಿಂದಲೂ ಗಣಿ ನಗರದಲ್ಲಿ ಎಲ್ಲೆಲ್ಲೂ ಅಮಾವಾಸೆ ಮತ್ತು ಬಾಬು ಬಗ್ಗೆಯೇ ಮಾತುಗಳು ನಡೆಯುತ್ತಿದ್ದವು. ಕೆಲವರು ಸುರಂಗದಲ್ಲಿ ಕುಸಿದಿರುವ ಕಲ್ಲುಮಣ್ಣನ್ನು ಬೇಗನೆ ತೆಗೆದಿದ್ದರೆ ಇಬ್ಬರೂ ಬದುಕಿಕೊಳ್ಳುತ್ತಿದ್ದರೊ ಏನೋ? ಆಡಳಿತ ಬೇಗನೇ ನಿರ್ಧಾರ ತೆಗೆದುಕೊಳ್ಳಬೇಕು ಎಂದರೆ ಇನ್ನಷ್ಟು ಕಾರ್ಮಿಕರು ಅವರಿಬ್ಬರನ್ನು ತೆಗೆಯಲು ಹೋಗಿ ಇನ್ನಷ್ಟು ಕಾರ್ಮಿಕರು ಪ್ರಾಣ ಕಳೆದುಕೊಂಡರೆ ಹೇಗೆ ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಮಾವಾಸೆ ಮತ್ತು ಬಾಬು ಅವರ ಕುಟುಂಬಗಳು ಗಣಿ ಹತ್ತಿರಕ್ಕೆ ಹೋಗಿ ಆಕ್ರಂದನ ಮಾಡುತ್ತಿದ್ದರು. ಇಡೀ ರಾತ್ರಿ ಅವರ ಕುಟುಂಬಗಳು ಅನ್ನ ನೀರಿಲ್ಲದೆ ನಮ್ಮವರನ್ನು ಉಳಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದರು. ಅವರ ಅಕ್ಕಪಕ್ಕದ ಕಾರ್ಮಿಕರ ಕುಟುಂಬಗಳು ಊಟ ಮತ್ತು ನೀರು ತಂದುಕೊಟ್ಟು ಸಂತೈಸುವಲ್ಲಿ ತೊಡಗಿಕೊಂಡಿದ್ದವು. ಇಡೀ ರಾತ್ರಿ ಅಧಿಕಾರಿಗಳು, ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರು ಉದ್ವೇಗದಿಂದಲೇ ಕಾಲ ಕಳೆದರು. ಸೆಲ್ವಮ್ ಕೂಡ ಅಲ್ಲಿಯೇ ಅವರ ಜೊತೆಗೆ ಕುಳಿತುಕೊಂಡಿದ್ದನು. ಬಾಬು ಮತ್ತು ಅಮಾವಾಸೆ, ಸೆಲ್ವಮ್ ಜೊತೆಗೆ ಕೆಲಸ ಮಾಡುವ ಕಾರ್ಮಿಕರು. ಅಂತೂ 24 ಗಂಟೆಗಳು ಕಳೆದುಹೋಗಿದ್ದವು. ಇಡೀ ರಾತ್ರಿ ಪಾರುಗಾಣಿಕ ತಂಡ ಮತ್ತು ಬೆಂಕಿ ನಂದಿಸುವ ತಂಡ ರಾತ್ರಿಯೆಲ್ಲ ಸುರಂಗದಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಾ ಇದ್ದು ಬೆಳಿಗ್ಗೆ ಅಧಿಕಾರಿಗಳಿಗೆ ವರದಿ ಒಪ್ಪಿಸಿತು.
ಬೆಳಿಗ್ಗೆ 9 ಗಂಟೆಗೆ ಕಾರ್ಮಿಕರ ಒಂದು ತಂಡ ಇನ್ನೊಂದು ಪಾರುಗಾಣಿಕ ತಂಡದ ಜೊತೆಗೆ ಗಣಿಯ ಒಳಕ್ಕೆ ಇಳಿಯಿತು. ಸೆಲ್ವಮ್ ಕೂಡ ಅವರ ಜೊತೆಗೆ ಹೋಗಲು ಕೇಳಿಕೊಂಡ. ಆದರೆ ಅವನು ಯೂನಿಫಾರ್ಮ್ ಹಾಕಿಕೊಂಡಿರಲಿಲ್ಲ, ಜೊತೆಗೆ ಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ಅವನಿಗೆ ಇಳಿಯಲು ಅವಕಾಶ ಕೊಡಲಿಲ್ಲ. ಅನಂತರ ಸೆಲ್ವಮ್ ಮನೆಗೆ ಹೋಗಿ ಯೂನಿಫಾರ್ಮ್ ಹಾಕಿಕೊಂಡು ಬಂದು ಗಣಿ ಒಳಗೆ ಇಳಿಯಲು ಮತ್ತೆ ಕೇಳಿಕೊಂಡ. ಸೆಲ್ವಮ್ ಅದೇ ಸುರಂಗದಲ್ಲಿ ಕೆಲಸ ಮಾಡುವುದರಿಂದ ಏನಾದರೂ ಸಹಾಯ ಆಗಬಹುದೆಂದು ಕೊನೆಗೆ ಅವನನ್ನು ಇನ್ನೊಬ್ಬ ಕಾರ್ಮಿಕನ ಜೊತೆಗೆ ಗಣಿಯ ಒಳಕ್ಕೆ ಕಳಿಸಲಾಯಿತು. ಅವರಿಬ್ಬರೂ ಇದ್ದ ಕೇಜ್ ಒಂದೇ ಸಮನೇ 2.5 ಕೀ.ಮೀ.ಗಳ ಆಳಕ್ಕೆ ಸರ‍್ರನೆ ಇಳಿದುಹೋಗಿ ನಿಂತುಕೊಂಡಿತು.
ಅರವತ್ತಾರನೇ ಹಂತದ ನಿಲ್ದಾಣದಲ್ಲಿ ಕೇಜ್‌ನಿಂದ ಹೊರಕ್ಕೆ ಬಂದ ಸೆಲ್ವಮ್ ತಾನು ಕೆಲಸ ಮಾಡುತ್ತಿದ್ದ ಸುರಂಗದ ಕಡೆಗೆ ಜೊತೆಗಿದ್ದ ಕಾರ್ಮಿಕನೊಂದಿಗೆ ನಡೆದುಕೊಂಡು ಹೋದ. ಆಗಲೇ ಸಾಕಷ್ಟು ಕಲ್ಲು-ಮಣ್ಣನ್ನು ಬಾಚಿ ತುಂಬಿದ್ದು ಟ್ರಾಲಿಗಳು ಅಡ್ಡ ಬರುತ್ತಿದ್ದವು. ರಕ್ಷಣೆ ಕಾರ್ಮಿಕರಿಬ್ಬರು ಬ್ಯಾಟರಿಗಳನ್ನು ಹೊತ್ತಿಸಿಕೊಂಡು ತಲೆಗಳ ಮೇಲೆ ಸುರಂಗಗಳಲ್ಲಿ ಎಲ್ಲಾದರೂ ಬಿರುಕುಗಳು ಬಿಟ್ಟಿವೆಯೇನೊ ಎಂಬುದನ್ನು ಗಮನಿಸುತ್ತಿದ್ದರು. ಆ ಸುರಂಗದ ಉಸ್ತುವಾರಿ ಏಜೆಂಟ್ ಈ ಸುರಂಗದಲ್ಲಿ ಬೇಗನೇ ಕಬ್ಬಿಣ ರಿಮ್‌ಗಳನ್ನು ಅಳವಡಿಸಬೇಕು ಎಂದು ಹೇಳಿದರು. ಸುರಂಗಗಳನ್ನು ಮಾಡುತ್ತಾ ಹೋಗುತ್ತಿದ್ದರೆ ಹಿಂದಿನಿಂದ ಸುರಂಗಗಳು ಕುಸಿಯದಂತೆ ಕಬ್ಬಿಣ ಮತ್ತು ಜಾಲಿಮರಗಳನ್ನು ಸಹಾಯಕ್ಕೆ ನಿಲ್ಲಿಸುವುದು ಸಾಮಾನ್ಯ. ಕೆಲವು ಕಡೆ ತಾತ್ಕಾಲಿಕವಾಗಿ ಸಿಮೆಂಟ್ ಸ್ತಂಭಗಳನ್ನು ಮತ್ತು ಉದ್ದವಾದ ಕಬ್ಬಿಣ ಕೀಲಿ ರಾಡುಗಳನ್ನು ಹೊಡೆಯಲಾಗುತ್ತದೆ.
ಕಾರ್ಮಿಕರು ಆತಂಕದಲ್ಲಿಯೇ ಕುಸಿದು ಬಿದ್ದಿರುವ ಕಲ್ಲುಮಣ್ಣಿನ ರಾಶಿಯನ್ನು ಸಲಿಕೆಗಳಲ್ಲಿ ಆತುರಾತುರವಾಗಿ ಬಾಚುತ್ತಿದ್ದಾರೆ. ಹಾರೆಗಳನ್ನು ಹಿಡಿದುಕೊಂಡಿರುವವರು ನಿಧಾನವಾಗಿ ದೊಡ್ಡದೊಡ್ಡ ಕಲ್ಲುಗಳನ್ನು ಮೇಲಿಂದ ಕೆಳಕ್ಕೆ ತಳ್ಳುತ್ತಿದ್ದಾರೆ. ಅಂದರೆ ಕಲ್ಲುಗಳ ಕೆಳಗೆ ಅಮಾವಾಸೆ ಮತ್ತು ಬಾಬು ಒಂದು ವೇಳೆ ಬದುಕಿದ್ದರೆ ಅವರುಗಳಿಗೆ ಗಾಯವಾಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ಸಲಿಕೆಯಲ್ಲಿ ಮಣ್ಣು ತೆಗೆಯುತ್ತಿದ್ದಾಗ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡು ಅಂಗಲಾಚುವ ಸದ್ದು ಕೇಳಿಬಂದಿತು. ಕಾರ್ಮಿಕನೊಬ್ಬ, “ಅರೆ ಇಲ್ಲಿ ಒಬ್ಬರು ಬದುಕಿದಂತಿದೆ” ಎಂದು ಕೂಗಿಕೊಂಡ. ಎಲ್ಲರೂ ಸೇರಿ ಕೈಗಳಿಂದ ಮಣ್ಣನ್ನು ನಿಧಾನವಾಗಿ ಬಾಚಿ ತೆಗೆದರು. ಹಾಗೆ ಕಲ್ಲುಮಣ್ಣನ್ನು ತೆಗೆಯುತ್ತಿದ್ದಂತೆ ಅಮಾವಾಸೆಯ ದೇಹ ಕೈ ಕಾಲುಗಳು ದೇಹದೊಂದಿಗೆ ಪಳೆಯುಳಿಕೆಯಂತೆ ಬಿದ್ದುಕೊಂಡಿದೆ.
ಎಲ್ಲರೂ ಸೇರಿ ದೇಹವನ್ನು ಮಣ್ಣಿನಿಂದ ಹೊರಕ್ಕೆ ತೆಗೆದರು. ದೇಹದ ಮೇಲೆ ಎಲ್ಲೂ ರಕ್ತ ಬಂದಿಲ್ಲ. ಮುಖದ ಮೇಲಿದ್ದ ಮಣ್ಣನ್ನು ಮೃದುವಾಗಿ ಸರಿಸಿದರು. ಒಬ್ಬ ಕಾರ್ಮಿಕ ಮೂಗಿನ ಮುಂದೆ ಕಿವಿ ಇಟ್ಟು ನೋಡಿದ, ಅಮಾವಾಸೆ ಉಸಿರಾಡುತ್ತಿದ್ದಾನೆ. “ಅರೆ ನಮ್ಮ ಅಮಾವಾಸೆ ಬದುಕಿದ್ದಾನೆ” ಎನ್ನುತ್ತ ಎಲ್ಲರೂ ಆತನನ್ನು ಎತ್ತಿಕೊಂಡು ಕೇಜ್‌ನಲ್ಲಿ ನೆಲದ ಮೇಲಕ್ಕೆ ತಂದರು. ಅಲ್ಲಿಯೇ ನಿಂತಿದ್ದ ಆಂಬ್ಯುಲೆನ್ಸ್‌ನಲ್ಲಿ ಅಮಾವಾಸೆಯನ್ನು ತಕ್ಷಣವೇ ಮೈನಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಅಮಾವಾಸೆ ಕುಟುಂಬ ಆಂಬ್ಯುಲೆನ್ಸ್ ಹಿಂದೆಯೇ ಆಸ್ಪತ್ರೆ ಕಡೆಗೆ ಓಡಿತು. ಅಮಾವಾಸೆ ಸತ್ತಿಲ್ಲ ಪ್ರಾಣ ಇದೆ ಎನ್ನುವ ವಿಷಯ ಗಣಿ ನಗರವೆಲ್ಲ ಕೆಲವೇ ಕ್ಷಣಗಳಲ್ಲಿ ಸುತ್ತಿಕೊಂಡು ಕಾರ್ಮಿಕರು ಆಸ್ಪತ್ರೆ ಕಡೆಗೆ ದಾವಿಸಿ ಬಂದರು. ಅಷ್ಟರಲ್ಲಿ ವೈದ್ಯರು ಅಮಾವಾಸೆ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೆ ಕೊಟ್ಟರು. ಅಮಾವಾಸೆ 24 ಗಂಟೆಗಳ ಕಾಲ ಮಣ್ಣಿನ ಕೆಳಗೆ ಸಿಕ್ಕಿಕೊಂಡಿದ್ದರೂ ಬದುಕಿ ಉಳಿದಿದ್ದು ಒಂದು ಪವಾಡವೆ ಆಗಿತ್ತು.
ಮತ್ತೆ ಕಾರ್ಮಿಕರು ಅದೇ ರೀತಿ ಬಾಬುನನ್ನು ಹೊರ ತೆಗೆಯುವ ಕಾರ್ಯದಲ್ಲಿ ತೊಡಗಿಕೊಂಡರು. ಕಲ್ಲು ಮಣ್ಣನ್ನು ತೆಗೆಯುತ್ತ ದೇವರೇ ನಮ್ಮ ಬಾಬುನನ್ನು ಬದುಕಿಸಿಬಿಡಿ ಎಂದು ಬೇಡಿಕೊಳ್ಳುತ್ತಿದ್ದರು. ಸಾಕಷ್ಟು ಕಲ್ಲುಮಣ್ಣು ತೆಗೆದರೂ ಬಾಬು ದೇಹ ಕಾಣಿಸಲಿಲ್ಲ. ಸಾಯಂಕಾಲ 6 ಗಂಟೆಯಾದರೂ ಏನೂ ಪ್ರಯೋಜನ ಆಗಲಿಲ್ಲ. ಅಗಾಧವಾದ ಮಣ್ಣುರಾಶಿ ಕುಸಿದು ಬಿದ್ದಿತ್ತು. ಬೆಳಿಗ್ಗೆಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರ ತಂಡವನ್ನು ಬಿಡುಗಡೆ ಮಾಡಲು ಮತ್ತೊಂದು ಕಾರ್ಮಿಕರ ತಂಡ ಗಣಿ ಒಳಕ್ಕೆ ಇಳಿದು ಹೋಗಿ ಕೆಲಸದಲ್ಲಿ ತೊಡಗಿಕೊಂಡಿತು. ಬೆಳಿಗ್ಗೆಯಿಂದ ಕೆಲಸ ಮಾಡಿದ ತಂಡ ನಿರಾಸೆಯಿಂದ ಮೇಲಕ್ಕೆ ಬಂದಿತು. ಸೆಲ್ವಮ್ ನಾನು ಕೆಲಸ ಮುಂದುವರಿಸುತ್ತೇನೆ ಎಂದರೂ ಬಿಡದೇ ನೀನು ಈಗಾಗಲೆ ಸುಸ್ತಾಗಿದ್ದೀಯ ಎಂದು ಮೇಲಕ್ಕೆ ಕಳುಹಿಸಿದರು. ಆದರೂ ಸೆಲ್ವಮ್ ಮನೆಗೋಗದೆ ತನ್ನ ಗೆಳೆಯ ಬಾಬುವಿಗಾಗಿ ಗಣಿಯ ಹತ್ತಿರ ಕಾಯತೊಡಗಿದ.
ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು. ಕೆಲವರು ಕುಸಿದು ಕುಳಿತುಕೊಂಡು ದುಃಖಿಸಿದರು. ಕೊನೆಗೆ ಬಾಬು ದೇಹವನ್ನು ತೆಗೆದುಕೊಂಡು ಕೇಜ್ ಮೂಲಕ ಮೇಲಕ್ಕೆ ಬಂದರು. ಸಮಯ ರಾತ್ರಿ 12 ಗಂಟೆ ದಾಟಿಹೋಗಿದ್ದು ಬಾಬುಗಾಗಿ ಮೇಲೆ ಕಾಯುತ್ತಿದ್ದವರೆಲ್ಲ ಜೋರಾಗಿ ಅಳಲು ಪ್ರಾರಂಭಿಸಿದರು. ಕತ್ತಲರಾತ್ರಿಗೆ ತಾನು ಏನು ಮಾಡಬೇಕೊ ತಿಳಿಯದೆ ಮೌನದಿಂದ ಒಳಗೊಳಗೆ ಯಾರಿಗೂ ಕಾಣಿಸದೆ ದುಃಖಿಸುತ್ತಿತ್ತು. ವಿಕೃತಗೊಂಡಿದ್ದ ಬಾಬು ದೇಹವನ್ನು ಆಂಬ್ಯುಲೆನ್ಸ್ ತನ್ನ ಒಳಕ್ಕೆ ಹಾಕಿಕೊಂಡು ಮೈನಿಂಗ್ ಆಸ್ಪತ್ರೆಯ ಕಡೆಗೆ ನಿಧಾನವಾಗಿ ಹೊರಟುಹೋಯಿತು.
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.