Advertisement
“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಆತ್ಮಕಥನದ ಪುಟಗಳು

“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಆತ್ಮಕಥನದ ಪುಟಗಳು

ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು!
ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ಆತ್ಮಕಥನ “ದಿಟದ ದೀವಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

ಕೇಳಿದ್ದು-ಕಾಣಿಸಿದ್ದು

ನನ್ನ ತಾತ ಪ್ರಾಯಕ್ಕೆ ಬಂದ ಮೂವರು ಮಕ್ಕಳನ್ನು ಕಟ್ಟಿಕೊಂಡು ಬೆಂಗಳೂರಿನ ನಾಗಸಂದ್ರಕ್ಕೆ ಬಂದದ್ದು ಈಗ್ಗೆ ನೂರುವರ್ಷಗಳ ಹಿಂದೆ! ನಾನು ಮೊದಲೇ ತಿಳಿಸಿದ್ದಂತೆ ಕಲಾಸಿಪಾಳ್ಯದ ಬಳಿ ಇರುವ `ಪಾರ್ವತಿಪುರ’ದಲ್ಲಿ ನಮ್ಮ ಜನ ವಾಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಚಿಕ್ಕಬಳ್ಳಾಪುರದ ನಮ್ಮ ಜಾತಿಯ ಕುಟುಂಬದವರ ಜೊತೆ ಕೌಟುಂಬಿಕ ಸಂಪರ್ಕವೂ ಇತ್ತು. ತಾತನ ಒಬ್ಬಳೇ ಮಗಳನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದುಂಟಷ್ಟೆ. ಆ ಸಂಬಂಧಿಕರ ನೆರವಿನಿಂದ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ತಾತ ಹೆಣಗಾಡಿದ. ನನ್ನ ತಾತ ಕೆಂದಗಂಗಯ್ಯ ತನ್ನೂರಿನಲ್ಲಿ `ಹಿರಿಯತನ’ದಿಂದ ನಡೆದುಕೊಂಡವನು. ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದವನು. ಇಂಥ ಮನುಷ್ಯ ಪಟ್ಟಣದಲ್ಲಿ ವಾಸಮಾಡುವುದು, ಬದುಕು ಕಟ್ಟಿಕೊಳ್ಳುವುದು ಸುಲಭ ಸಾಧ್ಯವಾದುದಲ್ಲ. ಆದರೆ, ಬಂದದ್ದಾಗಿದೆ; ಜೀವನ ಕಟ್ಟಿಕೊಳ್ಳಲು ಹೆಣಗಿದ. ತಾತ ಕೆಂದಗಂಗಯ್ಯ ತನ್ನೂರಿನಿಂದ ಬೆಂಗಳೂರಿಗೆ ಬರುವಾಗ್ಗೆ ಅವನ ಕೈ ಬರಿದಾಗಿತ್ತು! ಚಿಕ್ಕತಾತನ ವಂಚನೆ, ನನ್ನ ತಾತನ ಮನಸ್ಸನ್ನು ತುಂಬಾ ಘಾಸಿಗೊಳಿಸಿತ್ತು. ಆಗ್ಗೆ ನನ್ನ ಅಪ್ಪ ಪ್ರಾಯಕ್ಕೆ ಬಂದಿದ್ದ. ಜೊತೆಗೆ ಫರ‍್ತ್ಫಾರಂ ವರೆಗೂ ಓದಿದ್ದ. ಸರ್ಕಾರಿ ಕೆಲಸಕ್ಕಾಗಿ ಅಲೆದಾಡಿದ. ಆಗ ತಾನೆ ಸರ್ಕಾರಿ ಬಸ್ಸುಗಳು ಓಡಾಡುತ್ತಿದ್ದವು. ಯಾರೋ ಹಿರಿಯ ಅಧಿಕಾರಿಗಳೊಬ್ಬರನ್ನು ಹಿಡಿದು ಬಸ್‌ಕಂಡಕ್ಟರ್ ಕೆಲಸ ಹಿಡಿದುಕೊಂಡ! ನಮ್ಮಪ್ಪ ಕಂಡಕ್ಟರ್ ಕೂಡಾ ಆದ. ಇದು ನಮ್ಮ ತಾತನಿಗೆ ಸಂತೋಷ ಮತ್ತು ನೆಮ್ಮದಿಯನ್ನು ನೀಡಿತೆಂದು ತೋರುತ್ತದೆ. ಆದರೆ, ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಏನೋ ಕಾರಣದಿಂದಾಗಿ ನಮ್ಮಪ್ಪ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.!

ಈ ನಡುವೆ ನನ್ನಪ್ಪನಿಗೆ ಸಂಗೀತದ ಹುಚ್ಚು ಹಿಡಿಯಿತು. ನಮ್ಮ ಜನಸಮುದಾಯದವರ `ಸನಾದಿ’ ನುಡಿಸುತ್ತಿದ್ದುದೇ ಹೆಚ್ಚು! ಆದರೆ, ಅಪ್ಪ ಹರ‍್ಮೋನಿಯಂ ನುಡಿಸಿಕೊಂಡು ಹಾಡುವುದನ್ನು ಅತಿಶೀಘ್ರದಲ್ಲಿಯೇ ಕಲಿತುಕೊಂಡ. ಆಗ್ಗೆ ಸಿನಿಮಾಗಳ ದಂಧೆ ಇರಲಿಲ್ಲ. ಜನರು ಕಂಪನಿ ನಾಟಕಗಳಿಗೊ ಹರಿಕಥೆಗಳಿಗೊ ಸಂಜೆಯ ಭಜನಾ ಸಂಗೀತಕ್ಕೊ ಅಥವ ಸಂಗೀತ ಕಚೇರಿಗಳಿಗೊ ಹೋಗುತ್ತಿದ್ದದ್ದುಂಟು. ನನ್ನಪ್ಪ ಆಗಾಗ್ಗೆ ಗುಬ್ಬಿವೀರಣ್ಣನವರ ನಾಟಕಗಳಿಗೆ ಹೋಗುತ್ತಿದ್ದರಂತೆ. ಅಲ್ಲಿ ಸಾಮಾಜಿಕ ನಾಟಕಗಳೇ ಹೆಚ್ಚು. ಇನ್ನು ಹವ್ಯಾಸಿ ಕಂಪನಿಗಳು ಸತ್ಯಹರಿಶ್ಚಂದ್ರ, ನಳದಮಯಂತಿ, ಶನಿಮಹಾತ್ಮೆ ಮುಂತಾದ ನಾಟಕಗಳನ್ನು ಆಡಿಸುತ್ತಿದ್ದರು. ಅಪ್ಪ ಅದರ ಗುಂಗಿಗೆ ಬಿದ್ದ. ಅಲ್ಲಿ ಇಲ್ಲಿ ದುಡಿಯುತ್ತ ಸಮಯ ಸಿಕ್ಕಾಗೆಲ್ಲಾ ಶಾಸ್ತ್ರೀಯ ಸಂಗೀತದ ಒಲುಮೆಯನ್ನು ಬೆಳಸಿಕೊಂಡ. ಇತ್ತ ನಮ್ಮ ದೊಡ್ಡಪ್ಪ ಬಾಡಿಗೆಗೆ ಎತ್ತಿನಗಾಡಿ ಹಿಡಿದು ಕಲ್ಲು, ಮರಳು, ಜಲ್ಲಿ ಹೀಗೆ ದುಡಿಮೆಗೆ ಇಳಿದು ಆರುಕಾಸು, ಮೂರುಕಾಸು, ಒಂದೆರಡಾಣೆ ಸಂಪಾದಿಸತೊಡಗಿದ. ನಮ್ಮ ಚಿಕ್ಕಪ್ಪ ಸೈಕಲ್‌ಶಾಪ್ ಇಟ್ಟುಕೊಂಡ. ನಮ್ಮ ಚಿಕ್ಕಪ್ಪ ಕನಕನಪಾಳ್ಯ, ತ್ಯಾಗರಾಜನಗರದ ಜನರ ವಿಶ್ವಾಸವನ್ನು ಗಳಿಸಿಕೊಂಡ. ತ್ಯಾಗರಾಜನಗರದ ಗರಡಿಮನೆಯಲ್ಲಿ ಸಾಮು ಮಾಡಿ ಆಗಿನ ಕಾಲಕ್ಕೆ ಒಳ್ಳೆ ಪೈಲ್ವಾನ್ ಎನಿಸಿಕೊಂಡಿದ್ದ ನಮ್ಮ ಚಿಕ್ಕಪ್ಪನನ್ನು ಅಲ್ಲಿಯ ಜನರು `ಪೈಲ್ವಾನ್ ಗಂಗಪ್ಪ’ ಎಂದೇ ಕರೆಯುತ್ತಿದ್ದರು. ಸೈಕಲ್‌ಶಾಪ್‌ನಿಂದ ಒಳ್ಳೆ ವರಮಾನ ಕೂಡಾ ಬರತೊಡಗಿತು.

ನನ್ನ ತಾತ ಬೆಂಗಳೂರಿಗೆ ಬಂದು ನಾಗಸಂದ್ರದಲ್ಲಿ ನೆಲೆಯೂರತೊಡಗಿದಾಗ ಅವನಿಗೆ ಸುಮಾರು ನಾಲ್ವತ್ತು ವರ್ಷ ಮೇಲಾಗಿತ್ತು. ನಮ್ಮ ಅಜ್ಜಿ ಗಂಗಮ್ಮನೂ ಜತೆಗಿದ್ದಳು. ದೊಡ್ಡಪ್ಪ ಹಾಗೂ ನಮ್ಮಪ್ಪ ಸಣ್ಣಪುಟ್ಟ ದುಡಿಮೆಯಲ್ಲಿದ್ದರು. ಸರ್ಕಾರಿ ನೌಕರಿ ಇನ್ನೂ ಸಿಕ್ಕಿರಲಿಲ್ಲ. ಆಗ್ಗೆ ಸರ್ಕಾರಿ ನೌಕರಿ ಸಿಗುವುದು ಅಷ್ಟು ಸುಲಭವಿರಲಿಲ್ಲ. ಈ ನಡುವೆ ನನ್ನ ಮುತ್ತಾತ ಲಕ್ಕೇನಹಳ್ಳಿಗೆ ಹೋಗಿ ರಾಗಿ, ಹುರುಳಿ ತರುತ್ತಿದ್ದ. ಕೈಯಲ್ಲಿ ಕಾಸಿಗೆ ತತ್ವಾರ. ಆಗ್ಗೆ ಬಸ್ಸಿನ ಓಡಾಟವೂ ಕಡಿಮೆ. ನನ್ನ ತಾತ ಊರಿಗೆ ಹೋಗಬೇಕಾದರೆ ಬೆಂಗಳೂರಿನ ಕಲಾಸಿಪಾಳ್ಯದಿಂದ ನೆಲಮಂಗಲಕ್ಕೆ ಹೊರಡುವ ಬಸ್ಸಿನಲ್ಲಿ ಹೋಗುತ್ತಿದ್ದ. ಅವನು ನೆಲಮಂಗಲದ ಬಳಿ ಇಳಿದು ಎಂಟು ಮೈಲಿ ನಡೆದುಕೊಂಡು ಲಕ್ಕೇನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ. ಒಂದು ವಾರ ಊರಲ್ಲಿದ್ದು, ಬೆಂಗಳೂರಿನ ಕಡೆ ಹೊರಡುವ ಎತ್ತಿನ ಬಂಡಿಯಲ್ಲಿ ಸಾಮಾನುಗಳನ್ನು ಹೇರಿಕೊಂಡು ಬರುತ್ತಿದ್ದ. ಆಗ್ಗೆ ಎಲ್ಲಾ ಕಡೆಯಿಂದ ಬರುತ್ತಿದ್ದ ಎತ್ತಿನಗಾಡಿಗಳು ಕಲಾಸಿಪಾಳ್ಯಕ್ಕೇ ಬರುತ್ತಿದ್ದುವು.

ನಮ್ಮ ದೊಡ್ಡಪ್ಪನಿಗೆ ಮದುವೆ ಆಗಿತ್ತು. ನಮ್ಮಪ್ಪನೂ ಪ್ರಾಯಕ್ಕೆ ಬಂದಿದ್ದ. ನನ್ನ ತಾತ ಕಲಾಸಿಪಾಳ್ಯದಲ್ಲಿ ನೆಲೆಸಿದ್ದ ಕುದೂರು ಗಂಗಣ್ಣನ ಮಗಳು ಹನುಮಕ್ಕಳ ಜೊತೆ ನಮ್ಮಪ್ಪನ ಮದುವೆ ನೆರವೇರಿಸಿದ. `ದಾಂಪತ್ಯ ಜೀವನ’ ಅಷ್ಟು ಹೊಂದಾಣಿಕೆಯಿಲ್ಲದೆ ನಡೆಯುತ್ತಿತ್ತು. ಆಗ ನಮ್ಮ ಅಪ್ಪ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮಪ್ಪನೊ ಉಗ್ರಕೋಪಿಷ್ಟ. ನಮ್ಮಪ್ಪನಿಗೆ ಹನುಮಕ್ಕಳಿಂದ ಏಳುಜನ ಮಕ್ಕಳು ಹುಟ್ಟಿದರು. ಹಿರಿಯ ಮಗಳು ಜಿ.ಜಯಲಕ್ಷ್ಮಮ್ಮ. ಈಕೆ ಬಲು ಸಾಧು. ನಮ್ಮಪ್ಪ ಬೆಂಗಳೂರು ಉತ್ತರ ತಾಲೂಕು ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದಾಗ, ಈಕೆ ಬಟ್ಟೆ ಒಗೆಯುತ್ತಿರುವ ವೇಳೆ ನೀರಿನ ಸೆಳವಿಗೆ ಸಿಕ್ಕಿ ನೀಗಿಕೊಂಡಳಂತೆ. ಈ ಸುದ್ದಿ ನಮ್ಮಪ್ಪನಿಗೆ ತಿಳಿದಾಗ ಮಮ್ಮಲ ಮರುಗಿದ್ದುಂಟು. ಆಗಾಗ್ಗೆ ದೊಡ್ಡ ಮಗಳನ್ನು ನೆನೆದು ನಮ್ಮಪ್ಪ ದುಃಖಿಸುತ್ತಿದ್ದರು. ಎರಡನೆಯ ಮಗಳು ಜಿ.ಪಾರ್ವತಮ್ಮ, ಆನಂತರ ಜಿ.ನಾರಾಯಣಸ್ವಾಮಿ, ಜಿ.ಲಕ್ಕಪತಿ, ಜಿ.ಗಂಗಾಧರಯ್ಯ ಹುಟ್ಟಿದರು. ಕೊನೆಯ ಆರು ಮತ್ತು ಏಳನೆಯ ಗಂಡುಮಕ್ಕಳು ಹುಟ್ಟಿದ ಕೂಡಲೇ ತೀರಿಕೊಂಡವಂತೆ.

ನನ್ನ ದೊಡ್ಡಮ್ಮ ಹನುಮಕ್ಕ 1980ರ ವರೆಗೂ ಬದುಕಿದ್ದಳು. ನನ್ನ ದೊಡ್ಡಮ್ಮ ಬಲು ವಿಲಕ್ಷಣವಂತ ಹೆಣ್ಣುಮಗಳು. ಈಕೆ ಯಾವಯಾವುದೋ ಕಾರಣವೊಡ್ಡಿ ಆಗಾಗ್ಗೆ ಮಕ್ಕಳನ್ನು ಬಿಟ್ಟು ತವರು ಮನೆ ಸೇರಿಕೊಳ್ಳುತ್ತಿದ್ದಳು. ಮನೆಯಲ್ಲಿ ತುಂಬಿದ ಮಕ್ಕಳು. ಅವರಿಗೆ ಸ್ನಾನ-ಆರೈಕೆ-ಊಟ ಮಾಡಿಸಲು ತೊಂದರೆಯಾಗುತ್ತಿತ್ತು. ನಮ್ಮಪ್ಪನಿಗೆ ಕೆಲಸಕ್ಕೆ ಹೋಗುವ ಧಾವಂತ. ಮನೆ ಮಕ್ಕಳನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಅಜ್ಜಿ ಒಂದೆಡೆ ನಿಲ್ಲುತ್ತಿರಲಿಲ್ಲ. ನಮ್ಮ ತಾತ 2.12.1937ರಲ್ಲಿ ಅಮಾವಾಸ್ಯೆ ನರಕಚತುರ್ದಶಿ ದಿವಸ ನಾಗಸಂದ್ರದ ಅಂದಾನಪ್ಪ ಅವರ ಮನೆಯಲ್ಲಿ ತೀರಿಕೊಂಡರು. ಅವರನ್ನು ಚೆನ್ನಮ್ಮನ ಕೆರೆ ಪಕ್ಕದ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ನನ್ನ ತಾತ ತೀರಿಕೊಂಡಾಗ ಅವನ ವಯಸ್ಸು ಐವತ್ತೈದಾಗಿತ್ತೆಂದು ನಮ್ಮಪ್ಪ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ. ಇದು ಸಾಯುವ ವಯಸ್ಸಲ್ಲ. ಆದರೆ, ಲಕ್ಕೇನಹಳ್ಳಿ ಬಿಟ್ಟ ಮೇಲೆ ನಮ್ಮ ತಾತನಿಗೆ ಮನೋವ್ಯಾಧಿ ಶುರುವಾಯಿತು. ಕಟ್ಟಿಕೊಂಡ ಹೆಂಡತಿಯ ಜಬರದಸ್ತುಗಾರಿಕೆ, ಬೆಳೆಯುತ್ತಿರುವ ಮಕ್ಕಳ ಪಾಲನೆ-ಪೋಷಣೆಗೆ ಹಣದ ಅಡಚಣೆ, ಎಲ್ಲೂ ಸೂರಿಲ್ಲದ ಸ್ಥಿತಿ. ನಮ್ಮ ತಾತ ದಿನೇದಿನೇ ಇದೆ ಕೊರಗಿನಲ್ಲಿ ಅಳಿದರೆಂದು ತೋರುತ್ತದೆ.

ನನ್ನ ತಾತ ತೀರಿಕೊಳ್ಳುವಾಗ ನಮ್ಮ ಅಪ್ಪ `ಕ್ಲೋಸ್‌ಪೇಟೆ’ ಎಂದು ಕರೆಯುತ್ತಿದ್ದ ರಾಮನಗರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಮ್ಮ ದೊಡ್ಡಪ್ಪ ಮರಳು-ಇಟ್ಟಿಗೆಗೆ ಬಾಡಿಗೆ ಗಾಡಿ ಮಾಡಿಕೊಂಡು ಬದುಕಿದ್ದ. ನನ್ನ ತಾತ ಸಾಯುವ ಮುನ್ನ ಆಗಾಗ್ಗೆ ತಮ್ಮ ಮಕ್ಕಳ ಜೊತೆ ಇರುತ್ತಿದ್ದರು. ಊರಿಗೆ ಹೋಗಿ ಬರುತ್ತಿದ್ದುದುಂಟು. ನಮ್ಮ ಚಿಕ್ಕಪ್ಪ ನಾಗಸಂದ್ರದಲ್ಲಿ ಸೈಕಲ್‌ಷಾಪ್ ಇಟ್ಟುಕೊಂಡಿದ್ದವನು ಅದನ್ನು ಅಭಿವೃದ್ಧಿಗೊಳಿಸಿ ತ್ಯಾಗರಾಜನಗರಕ್ಕೆ ಬಂದು ನೆಲೆಸಿದ್ದ. ನನ್ನ ತಾತ ಸ್ವಾಭಿಮಾನಿ. ಹಾಗಾಗಿ, ಮಕ್ಕಳ ಜೊತೆಗೆ ಕೆಲವು ದಿನ ಇದ್ದು ಬರುತ್ತಿದ್ದ. ಅಜ್ಜಿ ಗಂಗಮ್ಮನ ಜೊತೆಗೂ ಸಂಸಾರಸುಖ ಇರಲಿಲ್ಲ. ಇವೆಲ್ಲವೂ ಸೇರಿಕೊಂಡು ತಾತ ಕೆಂದಗಂಗಯ್ಯ ಇಳಿಪ್ರಾಯದಲ್ಲಿಯೇ ತೀರಿಕೊಂಡ.

ನನ್ನ ಅಪ್ಪ ನೆಲಮಂಗಲದ ಪೊಲೀಸ್ ಸ್ಟೇಷನ್ನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮ ದೊಡ್ಡಮ್ಮ ಮನೆಯನ್ನು ಬಿಟ್ಟು ಬೆಂಗಳೂರಿನ ಜಯನಗರದಲ್ಲಿದ್ದ ಸಿದ್ಧಾರೂಢ ಆಶ್ರಮಕ್ಕೆ ಸೇರಿಕೊಂಡಿದ್ದಳು. ಆಶ್ರಮದಲ್ಲಿದ್ದವರ ಜತೆ ಸತ್ಸಂಗ, ಭಜನೆ ಮಾಡಿಕೊಂಡು ಹುಬ್ಬಳ್ಳಿ ಸಿದ್ಧಾರೂಢ ಆಶ್ರಮಕ್ಕೆ ಹೋಗಿ ಬರುತ್ತಿದ್ದಳು. ನಮ್ಮ ದೊಡ್ಡಮ್ಮ ಹನುಮಕ್ಕ ಸಿದ್ಧಾರೂಢ ಆಶ್ರಮಕ್ಕೆ ಸೇರಿಕೊಂಡ ಮೇಲೆ, ನಮ್ಮಪ್ಪನಿಗೆ ಮಕ್ಕಳೆಲ್ಲರ ಆರೈಕೆ ಮಾಡುವುದು ಕಷ್ಟವಾಯಿತು. ನಮ್ಮಪ್ಪನ ಎರಡನೆಯ ಹೆಣ್ಣುಮಗಳು ಜಿ. ಪಾರ್ವತಮ್ಮ ಇನ್ನೂ ಹನ್ನೆರಡು ವರ್ಷದವಳು. ಆಕೆಯೇ ಮನೆಯ ಉಸಾಬರಿಯನ್ನು ನೋಡಿಕೊಳ್ಳುತ್ತಿದ್ದಳು. ನಮ್ಮಪ್ಪನ ಜೊತೆ ನಮ್ಮಜ್ಜಿಯೂ ಇದ್ದಳು. ಅವರಿಬ್ಬರೂ ಸೇರಿಕೊಂಡು ಮಕ್ಕಳ ಆರೈಕೆಯನ್ನು ಮಾಡತೊಡಗಿದರು. ನಮ್ಮ ಅಜ್ಜಿ ಒಂದೆಡೆ ನಿಲ್ಲುತ್ತಿರಲಿಲ್ಲ. ಅವಳು ತಿರುಗಾಟದವಳು. ನಮ್ಮ ಚಿಕ್ಕಪ್ಪನ ಮನೆಗೆ ಹೋಗಿ ವಾರಗಟ್ಟಲೆ ಉಳಿಯುತ್ತಿದ್ದಳು. ಒಮ್ಮೊಮ್ಮೆ ತಾನು ಹುಟ್ಟಿದ ಊರು ಲಕ್ಕೇನಹಳ್ಳಿಗೂ ಹೋಗುತ್ತಿದ್ದಳು. ನಮ್ಮ ಅಜ್ಜಿ, ತಾತ ತೀರಿಕೊಂಡ ಮೇಲೆ ಸರ್ವತಂತ್ರ ಸ್ವತಂತ್ರೆಯಾಗಿಬಿಟ್ಟಳು. ನಮ್ಮ ದೊಡ್ಡಪ್ಪ ಹಾಗೂ ನಮ್ಮ ಚಿಕ್ಕಪ್ಪನ ಜತೆ ಈಕೆಗೆ ಇದ್ದ ಹೊಂದಾಣಿಕೆ ನನ್ನಪ್ಪನ ಜೊತೆ ಇರಲಿಲ್ಲ. ನಮ್ಮ ಅತ್ತೆಯನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದರು. ಆಗಾಗ್ಗೆ ಅಲ್ಲಿ ಹೋಗಿ ಅಜ್ಜಿ ಇರುತ್ತಿದ್ದಳು. ನಮ್ಮ ಅಜ್ಜಿಯೊಂದಿಗೆ ಸರಿಯಾಗಿ ಸಂಸಾರ ಮಾಡಿಕೊಳ್ಳದೆ ಆರೈಕೆ-ಪ್ರೀತಿಗಳಿಲ್ಲದೆ ಸಾಯದ ಪ್ರಾಯದಲ್ಲಿ ನನ್ನ ತಾತ ತೀರಿಕೊಂಡ. ಅವನು ‘ಸತ್ಯವ್ರತ’ನೆಂದು ನಮ್ಮಪ್ಪ ಆಗಾಗ್ಗೆ ಕೊಂಡಾಡುತ್ತಿದ್ದರು!

ನನ್ನಪ್ಪ ನೆಲಮಂಗಲದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗ ನಮ್ಮಜ್ಜಿ ತನ್ನೂರು ಲಕ್ಕೇನಹಳ್ಳಿಗೆ ಆಗಾಗ್ಗೆ ಹೋಗಿಬರುತ್ತಿದ್ದಳಷ್ಟೆ. ಅಪ್ಪ ಹೆಂಡತಿಯಿಂದ ದೂರವಾಗಿದ್ದ. ಇನ್ನೊಂದು ಮದುವೆಯೊ ಕೂಡಿಕೆಯೊ ಮಾಡಿಕೊಳ್ಳಬೇಕೆಂಬ ಇಚ್ಛೆ ಇತ್ತು. ಹಿರಿಯ ಹೆಂಡತಿಯ ಮಕ್ಕಳನ್ನು ತನ್ನ ಮಕ್ಕಳೆಂದು ಪರಿಭಾವಿಸಿಕೊಂಡು, ಸಂಸಾರ ನಿಭಾಯಿಸುವ ಹೆಣ್ಣನ್ನು ನಮ್ಮಜ್ಜಿ ಹುಡುಕುತ್ತಿದ್ದಳು. ಆಗ ನಮ್ಮಜ್ಜಿಯ ಕಣ್ಣಿಗೆ ಬಿದ್ದವಳೇ ನಮ್ಮಮ್ಮ! ಹನ್ನೊಂದು ವರ್ಷ ಪ್ರಾಯದ, ಚೂಟಿ ಹುಡುಗಿ. ಯಾರದೋ ಹೊಲದಲ್ಲಿ ಇದ್ದಾಗ ನಮ್ಮಜ್ಜಿ ಮಾತಾಡಿಸಿದ್ದಳು. ನಮ್ಮಜ್ಜಿಯ ಮಾತುಗಳಿಗೆ ಖಡಕ್ಕಾಗಿ ನಮ್ಮಮ್ಮ ಉತ್ತರ ಕೊಟ್ಟಳಂತೆ. ಈ ವಿಷಯವನ್ನು ಅಪ್ಪನಿಗೆ ನಮ್ಮ ಅಜ್ಜಿ ಹೇಳಿದಳಂತೆ! ಆಗ ಅಪ್ಪನ ಪ್ರಾಯ ನಾಲ್ವತ್ತೆರಡು. ಏಳು ಜನ ಮಕ್ಕಳ ತಂದೆ. ನನ್ನಪ್ಪ ನಮ್ಮ ಅಮ್ಮನನ್ನು ನೋಡಿದ. ಇಬ್ಬರ ಪ್ರಾಯದ ಅಂತರ ಮೂವತ್ತಕ್ಕಿಂತ ಹೆಚ್ಚಿತ್ತು. ಅಮ್ಮನ ತಾಯಿ-ತಂದೆಯರು ಕಡುಬಡತನದಲ್ಲಿ ಬೆಂದಿದ್ದರು. ಅಮ್ಮನ ತಂದೆಯ ಹೆಸರು ಗಂಗಯ್ಯ ಬಿನ್ ಕುಲ್ಲಯ್ಯ ತಾಯಿಯ ಹೆಸರು ಹನುಮಕ್ಕ. ಇವರು ಲಕ್ಕೇನಹಳ್ಳಿಯಲ್ಲಿದ್ದವರು. ನಮ್ಮಮ್ಮನ ಅಪ್ಪನ ಜನ್ಮನಾಮ ಗಂಗಯ್ಯ. ಆದರೆ, ಜನರು ‘ಕುಲ್ಲಯ್ಯ’ ಎಂದು ಅಡ್ಡಹೆಸರಿನಿಂದ ಕರೆಯುತ್ತಿದ್ದರು. ಅವರ ಪೂರ್ವಿಕರ ವಿವರಗಳು ನನಗೆ ತಿಳಿಯದು. ಅವರಿಗೆ ಯಾವುದೇ ಭೂಮಿಕಾಣಿ ಇರಲಿಲ್ಲ. ಪ್ರತಿನಿತ್ಯ ಕೂಲಿ ಮಾಡಿ ಜೀವಿಸಬೇಕಾಗಿತ್ತು. ಅವರಿಗೆ ಮೂವರು ಮಕ್ಕಳಿದ್ದರು. ಮೊದಲನೆಯವಳು ಮುನಿಯಮ್ಮ, ಎರಡನೆಯವಳು ನಮ್ಮ ತಾಯಿ ವೆಂಕಟಮ್ಮ, ಮೂರನೆಯವಳು ಮುತ್ತಮ್ಮ!

ನಮ್ಮಮ್ಮ ಕೆಂಪಗೆ ಇದ್ದಳು. ಆ ಕಾಲಕ್ಕೆ ಹತ್ತುವರ್ಷ ತುಂಬಿದ ತಕ್ಷಣ ಮೂಗು ಚುಚ್ಚಿ ಸೀರೆ ಉಡಿಸುತ್ತಿದ್ದ ಪದ್ಧತಿ ಇತ್ತು. ನಮ್ಮಜ್ಜಿ ಹನುಮಕ್ಕಳಿಗೆ ತನ್ನ ಮಗಳು ವೆಂಕಟಮ್ಮನಿಗೆ ಮೂಗುಬೊಟ್ಟು-ಸೀರೆ ಕೊಡಿಸಬೇಕೆಂಬ ಆಸೆ ಇದ್ದರೂ ಅದನ್ನು ತೆಗೆಸಿಕೊಡಲಾರದಷ್ಟು ಘನಘೋರವಾದ ಬಡತನವಿತ್ತು. ಲಕ್ಕೇನಹಳ್ಳಿ ಜೋಡಿಗ್ರಾಮದ ಶ್ಯಾನುಭೋಗರ ಮನೆಯಲ್ಲಿ ನಮ್ಮಮ್ಮ ಕೆಲಸ ಮಾಡಿಕೊಡುತ್ತಿದ್ದಳು. ಅಮ್ಮನ ದುಡಿಮೆ, ನಿಷ್ಠೆ, ಪ್ರಾಮಾಣಿಕತೆಗೆ ಶ್ಯಾನುಭೋಗರ ಹೆಂಡತಿ ಸೀತಮ್ಮ ಮಾರುಹೋಗಿದ್ದಳು. ನಮ್ಮ ತಾಯಿಗೆ ಮೂಗುಬೊಟ್ಟು, ಬಳೆ, ಸೀರೆ ತೆಗೆಸಿಕೊಟ್ಟ ಪುಣ್ಯಾತ್ಗಿತ್ತಿ ಆಕೆಯೇ. ನನ್ನ ಅಮ್ಮ ಆಕೆಯನ್ನು ಹಲವಾರು ಸಲ ನೆನೆದುಕೊಂಡದ್ದನ್ನು ನಾನು ಗಮನಿಸಿದ್ದೇನೆ. ಆ ಗ್ರಾಮದಲ್ಲಿ ಶ್ಯಾನುಭೋಗರ ಮನೆಯ ಜೊತೆ ಹತ್ತಾರು ಒಕ್ಕಲಿಗರ ಮನೆತನಗಳು ಇದ್ದವು. ಉಳಿದವರಲ್ಲಿ ಬೇರೆಬೇರೆ ಸಮುದಾಯಕ್ಕೆ ಸೇರಿದ್ದ ಜನರಿದ್ದರು. ನಮ್ಮ ಸಮುದಾಯಕ್ಕೆ ಸೇರಿದ ಕುಟುಂಬದವರೇ ಹೆಚ್ಚಿದ್ದರು! ನೀರಾವರಿ ಸೌಕರ್ಯ ಇರಲಿಲ್ಲ. ಕೇವಲ ಒಣಬೇಸಾಯ ಮಾತ್ರ. ಮಳೆಗಾಲ ಮಾತ್ರ ಸಮೃದ್ಧವಾಗಿರುತ್ತಿತ್ತು. ಎಲ್ಲಾ ಕಡೆ ಹಸಿರೋ ಹಸುರು. ಹಸುಗಳು ಧಂಡಿಯಾಗಿ ಹಾಲು ಕೊಡುತ್ತಿದ್ದವು. ಕುರಿ-ಮೇಕೆಗಳಿಗೆ ಬರವಿರಲಿಲ್ಲ! ಪ್ರತಿವಾರ ತ್ಯಾಮಗೊಂಡ್ಲುವಿನಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ತುಪ್ಪವನ್ನೊ ಬೆಣ್ಣೆಯನ್ನೊ ಕೋಳಿಯನ್ನೊ ತೆಗೆದುಕೊಂಡು ಹೋಗಿ ಮಾರಿ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ಮನೆಗೆ ತರುತ್ತಿದ್ದರು. ಉಪ್ಪು, ಎಣ್ಣೆ, ಸೋಪು ಮುಂತಾದವುಗಳನ್ನೂ ಸಾಂಬಾರ ಪದಾರ್ಥಗಳನ್ನೂ ಸಂತೆಯಿಂದ ತಂದರೆ ಒಂದುವಾರ ಅದನ್ನೇ ಬಳಸುತ್ತಿದ್ದರು.

ನಮ್ಮಪ್ಪನ ಎರಡನೆಯ ಹೆಣ್ಣುಮಗಳು ಜಿ. ಪಾರ್ವತಮ್ಮ ಇನ್ನೂ ಹನ್ನೆರಡು ವರ್ಷದವಳು. ಆಕೆಯೇ ಮನೆಯ ಉಸಾಬರಿಯನ್ನು ನೋಡಿಕೊಳ್ಳುತ್ತಿದ್ದಳು. ನಮ್ಮಪ್ಪನ ಜೊತೆ ನಮ್ಮಜ್ಜಿಯೂ ಇದ್ದಳು. ಅವರಿಬ್ಬರೂ ಸೇರಿಕೊಂಡು ಮಕ್ಕಳ ಆರೈಕೆಯನ್ನು ಮಾಡತೊಡಗಿದರು. ನಮ್ಮ ಅಜ್ಜಿ ಒಂದೆಡೆ ನಿಲ್ಲುತ್ತಿರಲಿಲ್ಲ. ಅವಳು ತಿರುಗಾಟದವಳು. ನಮ್ಮ ಚಿಕ್ಕಪ್ಪನ ಮನೆಗೆ ಹೋಗಿ ವಾರಗಟ್ಟಲೆ ಉಳಿಯುತ್ತಿದ್ದಳು.

ನನ್ನ ಅಮ್ಮ ತನ್ನ ತಾಯಿ ಹನುಮಕ್ಕನ ಜೊತೆಗೆ ಸಂತೆಗೆ ಹೋಗುತ್ತಿದ್ದಳು. ಅಲ್ಲಿ ತುಪ್ಪ ಮಾರಿ ಸಣ್ಣ-ಪುಟ್ಟ ದಿನಸಿ ಸಾಮಾನುಗಳನ್ನು ನಮ್ಮಜ್ಜಿ ತರುತ್ತಿದ್ದಳು. ನಮ್ಮ ತಾತ ಕುಲ್ಲಯ್ಯನನ್ನು ನಾನು ಚಿಕ್ಕಂದಿನಲ್ಲೆ ನೋಡಿದ್ದೆ. ಅವನ ಹೆಸರು ನನಗೆ ವಿಲಕ್ಷಣವಾಗಿ ಕಂಡಿತ್ತು. ಮಟ್ಟಸವಾದ ತೆಳುದೇಹದ ಆಕೃತಿ. ಆದರೆ, ಬಡತನ ಮುಖದ ಮೇಲೆ ವಿರಾಜಮಾನವಾಗಿತ್ತು. ಬಡತನವೇ ಹೊದ್ದು ಮೆರೆಯುತ್ತಿತ್ತು. ಇಂಥ ಮನೆಯಲ್ಲಿ ನನ್ನಮ್ಮ ಬೆಳೆಯುತ್ತಿದ್ದಳು. ನನ್ನ ತಂದೆಯ ತಾಯಿ ಕರಿಯಜ್ಜಿಗೆ ನನ್ನ ಅಮ್ಮನನ್ನು ನೋಡಿದ ತಕ್ಷಣವೇ “ಈಕೆ ನಮ್ಮ ಮನೆಯನ್ನು ಸಂಭಾಳಿಸಿಕೊಂಡು ಹೋಗಬಲ್ಲಳು” ಎಂದು ಮನವರಿಕೆ ಆಯಿತಂತೆ. ಇನ್ನೊಮ್ಮೆ ನಮ್ಮ ಅಜ್ಜಿ ಲಕ್ಕೇನಹಳ್ಳಿಗೆ ಹೋದಾಗ ಕೋಸುಗಿಡಕ್ಕೆ ನೀರನ್ನು ಕಟ್ಟುತ್ತಿದ್ದಳಂತೆ. ಆಗ ನಮ್ಮ ಅಜ್ಜಿ “ನೀನು ಯಾರ ಮಗಳೇ?” ಎಂದಾಗ “ನಾನು ಕುಲ್ಲಯ್ಯನ ಮಗಳು” ಎಂದು ದಿಟ್ಟವಾಗಿ ಉತ್ತರ ಕೊಟ್ಟಳಂತೆ. ಆಮೇಲೆ ನಮ್ಮಮ್ಮನ ತಾಯಿ ಹನುಮಕ್ಕನನ್ನು ಕಂಡು ಮಾತಾಡಿದಾಗ ಈಗ್ಗೆ ಎರಡು ವರ್ಷಗಳ ಹಿಂದೆ ಮದುವೆ ಆಗಿತ್ತೆಂದೂ ಇನ್ನು ಸಣ್ಣವಳಾಗಿರುವುದರಿಂದ ಋತುಮತಿ ಆದೊಡನೆ ಗಂಡನ ಮನೆಗೆ ಕಳುಹಿಸಿಕೊಡುತ್ತೇವೆಂದೂ ನಮ್ಮಜ್ಜಿಗೆ ತಿಳಿಸಿದರಂತೆ!

ನಮ್ಮ ಅಜ್ಜಿಯ ಮನಸ್ಸಿಗೆ ಈಕೆ ನಮ್ಮ ಅಪ್ಪನಿಗೆ ತಕ್ಕ ಹೆಂಡತಿ ಆಗುವಳೆಂದು ಅನ್ನಿಸಿದ್ದರಿಂದ ಈ ಪ್ರಸಂಗವನ್ನು ಹೇಗೆ ನಿವಾರಿಸಿಕೊಳ್ಳುವುದೆಂಬ ಯೋಚನೆಗೆ ಬಿದ್ದಳು. ನಮ್ಮ ಅಪ್ಪ ಎರಡನೆಯ ಮದುವೆಗೆ ಸಿದ್ಧನಾಗಿರುವ ವರ, ನನ್ನ ಅಮ್ಮನಿಗೆ ಈಗಾಗಲೇ ಮದುವೆ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನ ಅಮ್ಮನ ಮದುವೆ ಆಗಿರುವ ಸಂಬಂಧದ ಜೊತೆ ಮಾತಾಡಿ – ಅವರ ಜೊತೆ ‘ದಾಂಪತ್ಯ ವಿಚ್ಛೇದನ’ ಮಾಡಿ, ಅವರು ಕೊಟ್ಟಿರುವ ಒಡವೆ-ವಸ್ತçಗಳನ್ನು ಹಿಂದಿರುಗಿಸುವುದೆಂದು; ಈ ವಿಷಯವಾಗಿ ‘ಒಪ್ಪಂದ ಪತ್ರ’ ಸಿದ್ಧಪಡಿಸಲು ಊರಿನ ಮುಖಂಡರು ಕುಲದ ಮುಖ್ಯಸ್ಥರು ನಿಶ್ಚಯಿಸಿದರಂತೆ. ಆಗ ನಮ್ಮ ಅಪ್ಪ ಈ ಸಂಬಂಧವಾಗಿ ಮದುವೆ ತೆರ ಕಟ್ಟಿ ನನ್ನಮ್ಮನ ಜತೆ ಕೂಡಿಕೆ ಮಾಡಿಕೊಂಡರು, ಈ ವಿಷಯವನ್ನು ನನ್ನ ಅಪ್ಪನ ತಾಯಿ ಗಂಗಮ್ಮಜ್ಜಿ ಸಮಯ ಸಿಕ್ಕಾಗೊಮ್ಮೆ ಹೇಳಿದ್ದಳು.

ನನ್ನ ತಾಯಿಯ ದಾಂಪತ್ಯ ವಿಚ್ಛೇದನ ನಡೆದದ್ದು 1947ನೆಯ ಇಸವಿ ಸೆಪ್ಟೆಂಬರ್ 28ರಂದು. ಆ ಕಾಲಕ್ಕೆ ಊರಿನ ಮುಖ್ಯಸ್ಥರು ಮತ್ತು ಕುಲಸ್ಥರೂ ಸೇರಿ ಪಂಚಾಯಿತಿ ಮಾಡಿದರು: ದಾಂಪತ್ಯ ವಿಚ್ಛೇದನದ ಯಥಾವತ್ ಪತ್ರ ಹೀಗಿದೆ:

“ಸನ್ 1947ನೇ ಇಸವಿ ಸೆಪ್ಟಂಬರು ಮಾಹೆ 29ರಲ್ಲೂ ನೆಲಮಂಗಲ ತಾಲ್ಕೂ ತ್ಯಾಮಗೊಂಡ್ಲು ಹೋಬಳಿ ಜೋಡಿಲಕ್ಕೇನಹಳ್ಳಿ ವಾಸಿ ಕೊರಮಸೆಟ್ಟಿ ಗಂಗಯ್ಯನ ಮಗ ಗಂಗಯ್ಯ ವುರೂಪ್ ಕುಲ್ಲಯ್ಯನಿಗೆ ಕೊರಟಗೆರೆ ತಾಲ್ಕೂ ಕೋಲಾಳ ಹೋಬಳಿ ಲಕ್ಕಮುತ್ತನಹಳ್ಳಿ ವಾಸಿಗಳಾದ ಕೊರಮಸೆಟ್ಟಿ ಮತದ ಈ ಕೆಳಗೆ ರುಜು ಮಾಡಿರುವ ಮರಿಯಪ್ಪನ ಮಗ ನಂಜಯ್ಯನಾದ ನಾನು ನನ್ನ ತಾಯಿ ರಾಮಕ್ಕನ ಅಣ್ಣ ಗಂಗಯ್ಯನಾದ ನಾವುಗಳು ಖುದ್ದು ಮನೋರಾಜಿಯಿಂದ ಈ ಕೆಳಗೆ ಕಂಡ ಪಂಚಾಯಿತೆದಾರರ ಮತ್ತು ಕಟ್ಟಿಮನೆ ಯಜಮಾನ ಗುಂಡೇನಹಳ್ಳಿ ಮಸಿಯಪ್ಪನವರ ಯಿನ್ನು ಹಾಜರಿರುವ ಕುಲಸ್ತರ ರೂಬು ರೂಬು ಒಪ್ಪಿ ಬರಸಿಕೊಟ್ಟ ಬಿಡುಗಡೆ ಅಥವ ದಾಂಮ್‌ಪತ್ಯ ವಿಚ್ಛೇದನ ಕರಾರು ಏನಂದರೆ : ಮೇಲ್ಕಂಡ ಗಂಗಯ್ಯ ವುರೂಪ್ ಕುಲ್ಲಯ್ಯನ ಮಗಳು ವೆಂಕಟಮ್ಮ ಎಂಬ ಹುಡುಗಿಯನ್ನು ನಂಜಯ್ಯನಾದ ನಾನು ಲಗ್ನವಾಗಿದ್ದು ಸರಿಯಷ್ಟೆ. ಈಗ ನಮಗೂ ನಿಮಗೂ ನಂಟಸ್ತನ ಸರಿಬೀಳದ ಪ್ರಯುಕ್ತವೂ ಮತ್ತು ಹುಡುಗಿಯು ಪ್ರೌಢೆಯಾಗುವುದಕ್ಕೆ ಯಿನ್ನು ತುಂಬಾ ಕಾಲವು ಬೇಕಾಗಿರುವುದರಿಂದಲೂ ನಮ್ಮ ಕೆಲಸದ ಸಬೂಬು ಬೇರೆ ಲಗ್ನಮಾಡಿಕೊಳ್ಳುವವುದ್ದಿಸ್ಯ ನಿನ್ನ ಮಗಳು ಅಂದರೆ ನನ್ನ ಹೆಂಡತಿ ವೆಂಕಟಮ್ಮ ಎಂಬುವಳನ್ನು ಬಿಡುಗಡೆ ಮಾಡಿಕೊಡಬೇಕಂತ ಪಂಚಾಯಸ್ತರ ರೂಬು ರೂಬು ಈಗ್ಗೆ 15 ದಿನಗಳ ಹಿಂದೆ ನಾವು ನಿಮ್ಮನ್ನು ಕೇಳಿಕೊಂಡದ್ದು ಸರಿಯಷ್ಟೆ. ಇದಕ್ಕೆ ನೀವು ಸಹ ಸಮ್ಮತಪಟ್ಟಿದ್ದರಿಂದ ಲಗ್ನ ಕಾಲದಲ್ಲಿ ನಾವು ಹೆಣ್ಣಿಗೆ ಕೊಟ್ಟಿದ್ದ ವಿಶಿಷ್ಟ ಆಭರಣಗಳನ್ನು ಮಾಂಗಲ್ಯಸಹಿತ ಹಾಲಿ ಇರುವ ಪಂಚಾಯಸ್ತರ ಮತ್ತು ಕುಲಸ್ತರ ರೂಬುರೂಬು ಲೇಶ್ಯಾಂಶವು ಬಿಡದೆ ನಮ್ಮ ವಶಕ್ಕೆ ಅಂದರೆ ನಂಜಯ್ಯನಾದ ನಾನು ತೆಗೆದುಕೊಂಡಿರುತ್ತೇನೆ. ಕುಲಪದ್ಧತಿ ಪ್ರಕಾರ ಹೆಣ್ಣಿಗೋಸ್ಕರ ಲಗ್ನಕಾಲದಲ್ಲಿ ಕೊಟ್ಟಿದ್ದ ವರಹಗಳು (30) ರೂಪಾಯಿಗಳನ್ನು ಮತ್ತು ಸೀರೆಯ ಬಾಬ್ತು (15) ರೂಪಾಯಿಗಳನ್ನು ನನ್ನ ವಶಕ್ಕೆ ತೆಗೆದುಕೊಂಡಿರುವುದಲ್ಲದೆ ಮಾಮೂಲ್ ರೀತಿಯ ಅಂದರೆ ಕುಲಪದ್ಧತಿ ಪ್ರಕಾರ ಬರಬೇಕಾದ ರಿವಾಜು ಮಂಶುಕಳ್ಳು ಸಹ ಬಂದಿರುತ್ತೆ. ನಮಗೂ ನಿಮಗೂ ಮತ್ತು ನಿಮ್ಮ ಹೆಣ್ಣಿಗೂ ಯಾವ ವಿಧವಾದ ಸಮ್ಮಂದವೂ ಇರುವುದಿಲ್ಲ. ಸದರಿ ಬಿಡುಗಡೆಯಾದ ನನ್ನ ಹೆಂಡತಿಯನ್ನು ನಿಮ್ಮ ಇಷ್ಟಬಂದವರಿಗೆ ಪುನರ್‌ವಿವಾಹ ಮಾಡಿಕೊಡುವುದರಲ್ಲಿ ನಮ್ಮ ಅಭ್ಯಂತರವೇನು ಇರುವುದಿಲ್ಲ ಎಂಬುದಾಗಿ ನಮ್ಮ ಖುದ್ದು ಮನೋರಾಜಿಯಿಂದ ಒಪ್ಪಿ ಬರೆಸಿಕೊಟ್ಟ ಬಿಡುಗಡೆ ಅಥವ ದಾಮ್‌ಪತ್ಯ ವಿಚ್ಛೇದನ ಕರಾರು ಪತ್ರ.”

ನನ್ನ ಅಮ್ಮ ಜೋಡಿ ಲಕ್ಕೇನಹಳ್ಳಿ ಶ್ಯಾನುಭೋಗರ ಮನೆಯ ಸೀತಮ್ಮನ ಜೊತೆ ತುಂಬಾ ಹೊಂದಿಕೊಂಡಿದ್ದಳು. ಅವರ ಮನೆಯ ಹಿತ್ತಲಲ್ಲಿ ಕುಳಿತು ಭತ್ತಕುಟ್ಟಿ ಅಕ್ಕಿ ಕೇರುವುದು, ಖಾರದಪುಡಿ ಮಾಡಿಕೊಡುವುದನ್ನು ಮಾಡುತ್ತಿದ್ದಳು. ಹೀಗಾಗಿ, ಮನೆಯಲ್ಲಿ ಅಡುಗೆ ಮಾಡಿದಾಗ ಬೇಳೆತೊವ್ವೆ ಮಾಡಿಕೊಂಡು ಊಟ ಮಾಡುತ್ತಿದ್ದಳು. ಶ್ಯಾನುಭೋಗರ ಹೆಂಡತಿ ಸೀತಮ್ಮ ಕೊಡುವ ಹುಳಿ, ಸಾರು, ಪಲ್ಯಗಳನ್ನು ಮನೆಗೆ ತಂದು ಊಟ ಮಾಡುತ್ತಿದ್ದಳು. ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು!

ನಮ್ಮ ಅಜ್ಜಿ ಇನ್ನೂ ದೊಡ್ಡವಳಾಗದ ಅಮ್ಮನನ್ನು ಮನೆಗೆ ಕರೆತಂದರು. ಆಗ ಅಮ್ಮನ ಪ್ರಾಯದ ದೊಡ್ಡ ಹೆಂಡತಿಯ ಮಗಳು ಪಾರ್ವತಮ್ಮ ಮತ್ತು ಉಳಿದ ಮೂವರು ಗಂಡುಮಕ್ಕಳಿಗೆ ನನ್ನಮ್ಮ ಮಲತಾಯಿ ಎನಿಸಿಕೊಂಡಳು. ಅಪ್ಪ ನನ್ನಮ್ಮನನ್ನು ಕೂಡಿಕೆ ಮಾಡಿಕೊಂಡಾಗ ನನ್ನಪ್ಪನಿಗೆ ಮದುವೆ ಆಗಿ ಮಕ್ಕಳಿದ್ದುದು ಅಮ್ಮನಿಗೆ ಗೊತ್ತಿತ್ತು. ಅಮ್ಮ ಮನೆಗೆಲಸ ಮಾಡುತ್ತ, ಹಿರಿಹೆಂಡತಿ ಮಕ್ಕಳನ್ನು ತನ್ನ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದಳು. ನನ್ನ ಹಿರಿಯಣ್ಣಂದಿರಾದ ಜಿ.ನಾರಾಯಣಸ್ವಾಮಿ, ಜಿ. ಲಕ್ಕಪತಿ ಮತ್ತು ಜಿ. ಗಂಗಾಧರಯ್ಯ ಈ ಮೂವರನ್ನು ಬಲು ಅಕ್ಕರೆಯಿಂದ ಅಮ್ಮ ನೋಡಿಕೊಳ್ಳುತ್ತ ಅವರಿಗೆಲ್ಲಾ ಕಾಲಕಾಲಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಿದ್ದಳು. ಅವರು ನನ್ನ ಅಮ್ಮನನ್ನು ಹೆಸರು ಹಿಡಿದು ಕರೆಯುತ್ತಿದ್ದರು. ನಮ್ಮ ದೊಡ್ಡಕ್ಕ ಪಾರ್ವತಮ್ಮ, ನನ್ನ ಅಮ್ಮನಿಗಿಂತ ಒಂದೆರಡು ವರ್ಷ ದೊಡ್ಡವಳೇ. ನನ್ನ ದೊಡ್ಡಕ್ಕ ಪಾರ್ವತಕ್ಕ ಕೂಡ ‘ವೆಂಕಟಮ್ಮ’ ಎಂದು ಹೆಸರನ್ನು ಹಿಡಿದೇ ನನ್ನಮ್ಮನನ್ನು ಕರೆಯುತ್ತಿದ್ದಳು. ಅಮ್ಮ ಋತುಮತಿಯಾದಾಗ ಗೂಡ್ಲುಶಾಸ್ತ್ರ ಮಾಡಿ ಅಧಿಕೃತವಾಗಿ ಮನೆತುಂಬಿಸಿಕೊಂಡರಂತೆ. ಆಗ ಊರಿಂದ ತಾಯಿ ಹನುಮಕ್ಕ ಮತ್ತು ತಂದೆ ಕುಲ್ಲಯ್ಯ ಬಂದು ಒಂದು ವಾರ ಇದ್ದು ಹೋದರು.

ನನ್ನ ಅಮ್ಮ ಸಾಧುಪ್ರಾಣಿ. ಅವಳಿಗೆ ಕಪಟ-ವಂಚನೆಗಳು ಗೊತ್ತಿರಲಿಲ್ಲ. ಅತ್ಯಂತ ಮುಗ್ಧ ಹೆಂಗಸು. ಭಿಕ್ಷೆ ಬೇಡುವವರೊ ನಿರ್ಗತಿಕರೊ ಮನೆಬಾಗಿಲಿಗೆ ಬಂದರೆ, ಮನೆಯಲ್ಲಿ ಏನಿರುತ್ತದೊ ಅದನ್ನು ಧಾರಾಳವಾಗಿ ಕೊಡುತ್ತಿದ್ದ ಮಹಾತಾಯಿ. ನನ್ನಪ್ಪ ನನ್ನಮ್ಮ ಇಬ್ಬರ ವ್ಯಕ್ತಿತ್ವ ಭಿನ್ನಭಿನ್ನವೇ. ನಮ್ಮಪ್ಪ ರಾವಣ ಪ್ರಕೃತಿ. ಅವರು ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿ ನೆಲಮಂಗಲ ಪೊಲೀಸ್ ಸ್ಟೇಷನ್ನಿನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಮೆಳ್ಳೆಪುರದಲ್ಲಿ ನಾಲ್ಕುಗುಂಟೆಯ ಜಮೀನನ್ನು ಖರೀದಿಸಿದ್ದರು. ನೆಲಮಂಗಲ ತಾಲ್ಲೂಕು ಬಸವನಹಳ್ಳಿಯ ಶ್ಯಾನುಭೋಗ್ ಕಿಟ್ಟಪ್ಪನವರ ಸಮಕ್ಷಮದಲ್ಲಿ ಖರೀದಿ ಪ್ರಕ್ರಿಯೆ ಜರುಗಿತು. ನಮ್ಮ ಅಕ್ಕ ಜಯಲಕ್ಷ್ಮಮ್ಮ 08.07.1948ರಲ್ಲಿ ಹುಟ್ಟಿದಳು. ಆಗ ನಮ್ಮ ಅಮ್ಮನಿಗೆ ಹದಿನಾಲ್ಕೊ ಹದಿನೈದೊ ವರ್ಷ. ನನ್ನ ಅಕ್ಕ ಹುಟ್ಟಿದಾಗ ನನ್ನಪ್ಪನಿಗೆ ಆನಂದವೋ ಆನಂದ. ಏಕೆಂದರೆ, ನಮ್ಮಪ್ಪನ ದೊಡ್ಡ ಹೆಂಡತಿಯ ಹಿರಿಯ ಮಗಳ ರೀತಿಯಲ್ಲೆ ಈಕೆ ಇರುವಳೆಂದೂ ಆಕೆಯೇ ಈಗ ನಮ್ಮ ಮನೆಯಲ್ಲಿ ಜನಿಸಿರುವಳೆಂದೂ ಗಾಢವಾಗಿ ನಂಬಿದ್ದರು. ಆಕೆಯ ಹೆಸರು ಜಯಲಕ್ಷ್ಮಮ್ಮ. ಅದೇ ಹೆಸರನ್ನು ನನ್ನ ಅಕ್ಕನಿಗೂ ಇಟ್ಟರು.

ನನ್ನ ಅಕ್ಕ ಹುಟ್ಟಿದ ಗಳಿಗೆ ಚೆನ್ನಾಗಿದೆಯೆಂದು ಅಮ್ಮ ಪದೇ ಪದೇ ಹೇಳುತ್ತಿದ್ದಳು. ನನ್ನ ಅಕ್ಕ ಹುಟ್ಟಿದ ಮೇಲೆ ಮನೆಕಟ್ಟುವ ಕೆಲಸ ಶುರು ಮಾಡಿದರು. ನನ್ನ ತಾತ ಸಾಯುವಾಗ ಸ್ವಂತ ಮನೆಯಿಲ್ಲದೆ, ಬೇರೆಯೊಬ್ಬರ ಮನೆಯಲ್ಲಿ ಮರಣ ಹೊಂದಿದ್ದ. ಅದೊಂದು ವ್ಯಥೆ ನನ್ನಪ್ಪನನ್ನು ಸದಾ ಬಾಧಿಸುತ್ತಿತ್ತು. ನಮ್ಮ ವಂಶದಲ್ಲಿ ಸ್ವಂತ ಮನೆ ಕಟ್ಟಿದವರು ಯಾರೂ ಇರಲಿಲ್ಲ. ನನ್ನಪ್ಪ ಸ್ಥಳದಲ್ಲೇ ದೊರಕುವ ಇಟ್ಟಿಗೆ, ಮರಳು, ಸುಣ್ಣ ಬಳಸಿ ಸಾಕಷ್ಟು ವಿಸ್ತಾರವಾದ ಮನೆಯನ್ನೇ ಕಟ್ಟಿದರು. ಅವರು ಮನೆಯನ್ನು ಕಟ್ಟುವಾಗ ಆ ಊರಿಗಿದ್ದ ಹೆಸರು ಮೆಳ್ಳೆಪುರ. ಸರ್ಕಾರಿ ದಾಖಲೆಯಲ್ಲೂ ಅದೇ ಹೆಸರಿತ್ತು. ಆ ಮನೆಗೆ ವಾಸಕ್ಕೆ ಬಂದದ್ದು 1950ರ ಸುಮಾರಿಗೆ. ಆಗ ನಾನಿನ್ನೂ ಹುಟ್ಟಿರಲಿಲ್ಲ. ನನ್ನಪ್ಪ ನೆಲಮಂಗಲ ಸ್ಟೇಷನ್ನಿನಿಂದ ಆನೇಕಲ್ ಸ್ಟೇಷನ್ನಿಗೆ ದಫೇದಾರ್ ಆಗಿ ವರ್ಗಾವಣೆ ಆಗಿದ್ದರು. ಆನಂತರ ಹೆಬ್ಬಗೋಡಿಗೆ ವರ್ಗಾವಣೆ ಆಯಿತು. ಅಲ್ಲಿ ನನ್ನಪ್ಪ ಇಲಾಖೆಯಲ್ಲಿ ಒಳ್ಳೆ ಹೆಸರನ್ನು ಪಡೆದರು. ಅಪ್ಪನ ಹೆಸರು ಹೇಳಿದರೆ ಊರಿನ ಜನರು ಎರಡು ಕೈಗಳನ್ನು ಎತ್ತಿ ಕೈಮುಗಿಯುತ್ತಿದ್ದರು.

(ಕೃತಿ: ದಿಟದ ದೀವಟಿಗೆ (ಆತ್ಮಕಥನ), ಲೇಖಕರು: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 595/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ