Advertisement
ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ! ಆಧುನಿಕ ಕಾಲದಲ್ಲಂತೂ ಬಾತ್‌ರೂಮ್‌ ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಬಚ್ಚಲಿನ ಕುರಿತ ಹಲವು ವಿಚಾರಗಳನ್ನು ಬರೆದಿದ್ದಾರೆ ವಿಶ್ವನಾಥ ಎನ್‌ ನೇರಳಕಟ್ಟೆ

“ನಾನು ಇವತ್ತು ಸ್ನಾನ ಮಾಡುವುದಿಲ್ಲ. ಅಲ್ಲಿ ಕತ್ತಲಿದೆ. ನನಗೆ ಹೋಗಲು ಭಯವಾಗುತ್ತಿದೆ” ಬಚ್ಚಲುಮನೆ ಎಂದ ತಕ್ಷಣ ಬೇರೆಯವರಿಗೆ ಏನು ನೆನಪಾಗುತ್ತದೋ ಗೊತ್ತಿಲ್ಲ, ನನಗಂತೂ ಈ ಮಾತು ನೆನಪಾಗುತ್ತದೆ. ಐದಾರು ವರ್ಷದವನಿದ್ದಾಗ ಪ್ರತೀದಿನ ಎನ್ನುವಂತೆ ನಾನಾಡುತ್ತಿದ್ದ ಈ ಮಾತು ಕೇಳಿ ಮನೆಯವರೆಲ್ಲ ನನ್ನನ್ನು ಬಹುದೊಡ್ಡ ಅಂಜುಬುರುಕನ ಪಟ್ಟಿಗೆ ಸೇರಿಸಿಬಿಟ್ಟಿದ್ದರು. ಆದರೆ ನಿಜಸ್ಥಿತಿ ಬೇರೆಯೇ ಇತ್ತು. ಸ್ನಾನವನ್ನು ಮಾಡದೇ ಇರುವುದಕ್ಕೆ ನಾನಾಡುತ್ತಿದ್ದ ಕುಂಟುನೆಪ ಅದೆನ್ನುವುದು ನನಗೆ ಮಾತ್ರ ಗೊತ್ತಿದ್ದ ಪರಮಸತ್ಯವಾಗಿತ್ತು. ನಮ್ಮ ಮನೆಯಿಂದ ಬಚ್ಚಲುಮನೆ ಒಂದಿಷ್ಟು ಪ್ರತ್ಯೇಕವಾಗಿದ್ದದ್ದೇ ನನ್ನಲ್ಲಿ ಸ್ನಾನದ ಕುರಿತ ಆಲಸ್ಯವನ್ನು ಹುಟ್ಟುಹಾಕಿತ್ತೇನೋ, ನನಗಿಂದಿಗೂ ಗೊತ್ತಿಲ್ಲ. ನಾನು ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಬುದ್ಧಿವಂತರಾಗಿದ್ದರು ನನ್ನಮ್ಮ. ಹಠ ಮಾಡುತ್ತಿದ್ದ ನನ್ನನ್ನು ಎಳೆದುಕೊಂಡು ಹೋಗಿ ಸ್ನಾನ ಮಾಡಿಸಿ ಕರೆದುಕೊಂಡು ಬಂದರೇ ಅವರಿಗೆ ನೆಮ್ಮದಿ. ಸ್ವಚ್ಛಭಾರತದ ರಾಯಭಾರಿಯಾಗಿಸಬಹುದಿತ್ತು ಅವಳನ್ನು, ಅಂತಹ ಸ್ವಚ್ಛತೆಯ ಸಾಕಾರಮೂರ್ತಿ ನನ್ನಮ್ಮ.

ಅವಳ ಕೈಯ್ಯಿಂದ ತಪ್ಪಿಸಿಕೊಂಡು ಬರುವುದು ಸುಲಭದ ವಿಷಯವೇನೂ ಆಗಿರಲಿಲ್ಲ. ಕತ್ತಲೆಯ ಕೂಪಕ್ಕೆ ತಳ್ಳಿ ತಲೆಮೇಲೆ ಭರಭರ ನೀರು ಸುರಿಯುತ್ತಿದ್ದ ಅವಳ ಮೇಲೆ ಕೋಪ ಬರುತ್ತಿದ್ದದ್ದಂತೂ ಸುಳ್ಳಲ್ಲ. ಆದರೆ ಅಂದು ಒತ್ತಾಯದಿಂದ ನೀರೆರೆದ ಅವಳ ಕಾಳಜಿಯನ್ನು ನೆನೆಸಿಕೊಂಡಾಗ ಇಂದು ಕಣ್ಣಂಚಲ್ಲಿ ಹನಿ ನೀರು ಸುರಿಯುತ್ತದೆ.

ಬಾಲ್ಯದಲ್ಲಿ ಒತ್ತಾಯದ ಹೇರಿಕೆಯಾಗಿದ್ದ ಬಚ್ಚಲುಮನೆ ಆ ಬಳಿಕ ನನ್ನ ಪಾಲಿಗೆ ಪ್ರತಿಭಾ ವೇದಿಕೆಯಾಗಿತ್ತು. ‘ಬಚ್ಚಲುಮನೆಯಲ್ಲಿಯೇ ಹೀಗೆ ಹಾಡುತ್ತಾನೆ ಎಂದಮೇಲೆ ಅಪ್ಪಿತಪ್ಪಿ ಇವನ ಕೈಗೇನಾದರೂ ಮೈಕ್ ಸಿಕ್ಕಿದರೆ ಹೇಗೆ ಹಾಡಿಯಾನು?’ ನನ್ನ ಜೀವಮಾನದಲ್ಲಿ ನಾನು ಪಡೆದ ಮೊದಲ ಪ್ರಶಂಸೆ ಇದು. ಬಚ್ಚಲಮನೆಯಲ್ಲಿ ನಾನು ಗುನುಗುತ್ತಿದ್ದ ‘ಇಂದು ಎನಗೆ ಗೋವಿಂದ…’ ಹಾಡನ್ನು ಹೊರಗಿನಿಂದ ಕೇಳಿಸಿಕೊಂಡು ನನ್ನ ಅಮ್ಮನ ಸ್ನೇಹಿತೆಯೊಬ್ಬರು ಹೀಗಂದಿದ್ದರಂತೆ. ಮಗನಿಗೆ ಸಿಕ್ಕಿದ ಹೊಗಳಿಕೆ ಅಮ್ಮನನ್ನು ಆಕಾಶಕ್ಕೇರಿಸಿತ್ತು. ಬಚ್ಚಲುಮನೆಯಿಂದ ನಾನು ಹೊರಬರುವ ಮೊದಲೇ ಬೊಬ್ಬೆ ಹೊಡೆದು ಈ ಮಾತನ್ನು ನನ್ನ ಕಿವಿಗೆ ರವಾನಿಸಿದ್ದರು. ಬಚ್ಚಲುಮನೆಯ ಹಾಡಿಗೆ ನಾನು ಪಡೆದ ಹೊಗಳಿಕೆ ನನ್ನಲ್ಲಿ ಆತ್ಮವಿಶ್ವಾಸ ಹುಟ್ಟುಹಾಕಿತ್ತು. ಆ ಬಳಿಕ ಊರು ಪರವೂರಿನಲ್ಲಿ ನಡೆದ ಬಹುತೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬಹುಮಾನ ಪಡೆದದ್ದು- ಇವುಗಳನ್ನೆಲ್ಲ ಮರೆಯುವುದಾದರೂ ಹೇಗೆ? ಇಂದು ಹಲವಾರು ಜನ ಮುಚ್ಚುಮರೆಯಿಲ್ಲದೆ ‘ನಾನು ಬಾತ್‌ರೂಮ್‌ ಸಿಂಗರ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗೆ ನೋಡಿದರೆ ಹಲವರಲ್ಲಿರುವ ಸುಪ್ತ ಪ್ರತಿಭೆ ವ್ಯಕ್ತಗೊಳ್ಳುವುದೇ ಬಚ್ಚಲುಮನೆಯಲ್ಲಿ.

ಹಲವು ದಿನಗಳ ನಂತರ ಸಿಕ್ಕ ಬಾಲ್ಯದ ಗೆಳತಿಯೊಬ್ಬಳು ಅವಳ ಎಂಟು ವರ್ಷದ ಮಗನನ್ನು ಪರಿಚಯಿಸುತ್ತಾ “ಬಾತ್‌ರೂಮ್‌ ಹೊಕ್ಕರೆ ಸಾಕು, ದೊಡ್ಡದಾಗಿ ಬಾಲಿವುಡ್ ಸಾಂಗ್ ಹಾಡಿಕೊಂಡು ಡ್ಯಾನ್ಸ್ ಮಾಡುತ್ತಾನೆ. ವಾಯ್ಸ್ ರೆಕಾರ್ಡ್ ಮಾಡಿಟ್ಟಿದ್ದೇನೆ” ಎಂದು ಹೇಳಿ ಮನದುಂಬಿ ನಗಾಡಿದ್ದಳು. ‘ಪುಣ್ಯ, ಇವಳು ವೀಡಿಯೋ ರೆಕಾರ್ಡ್ ಮಾಡಿಲ್ಲವಲ್ಲ’ ಎಂದು ನೆನೆಸಿಕೊಂಡು ನನಗೂ ತಡೆಯಲಾರದ ನಗು ಬಂದಿತ್ತು.

ನನ್ನ ಪ್ರತಿಭೆಗೆ ನೀರೆರೆದ ಬಚ್ಚಲುಮನೆ ಅದೊಂದು ದಿನ ಮರೆಯಲಾರದ ನಡುಕವನ್ನು ನನ್ನೊಳಗೆ ಮೂಡಿಸಿತ್ತು. ಶಾಲೆ ಮುಗಿಸಿ ಬರುವಾಗ ಮನೆಗೆ ಬೇಕಾಗಿದ್ದ ದಿನಸಿಯನ್ನು ತರುವ ಕೆಲಸ ಹಿರಿಯ ಮಗನಾದ ನನ್ನದಾಗಿತ್ತು. ಯಾವತ್ತಿಗಿಂತ ತುಸು ಭಾರವಾಗಿದ್ದ ಅಂದಿನ ಕೈಚೀಲ ನನಗೇನೂ ಆಯಾಸ ಮೂಡಿಸಿರಲಿಲ್ಲ. ಆದರೂ ತಮ್ಮ- ತಂಗಿಯರಿಗಿಂತ ನಾನೇ ಹೆಚ್ಚು ಶ್ರಮಜೀವಿ ಎನ್ನುವುದನ್ನು ಹೆತ್ತವರೆದುರು ತೋರಿಸಿಕೊಳ್ಳಬೇಕೆಂಬ ಹಪಾಹಪಿ. ಭಾರೀ ಆಯಾಸವಾದಂತೆ ನಟಿಸಿದವನು ಬಚ್ಚಲುಮನೆ ಹೊಕ್ಕಿದ್ದೆ. ಎರಡು ನಿಮಿಷ ಕಳೆದಿತ್ತೇನೋ, ನಾನು ನಿಂತ ನೆಲ ಚಲಿಸುತ್ತಿರುವಂತೆ ಅನಿಸತೊಡಗಿತು. ‘ಭೂಮಿ ಸೂರ್ಯನ ಸುತ್ತ ಚಲಿಸುತ್ತಿರುತ್ತದೆ’ ಎಂದು ಬೋಧಿಸಿದ ವಿಜ್ಞಾನ ಶಿಕ್ಷಕರ ಮಾತು ನೂರಕ್ಕೆ ನೂರರಷ್ಟು ನಿಜ ಎಂದು ಅಂದುಕೊಂಡು ಸ್ನಾನ ಮುಂದುವರಿಸಿದರೆ ಜೋರಾಗಿ ಉಸಿರಾಡಿದಂತಹ ಸದ್ದು. ಇದ್ದ ಮಂದ ಬೆಳಕನ್ನೇ ಮುಂದಿರಿಸಿಕೊಂಡು ನೋಡಿದರೆ ಹೃದಯ ಹಾರಿಹೋಗುವಂತಾಗಿತ್ತು. ಹಾವೊಂದು ನನಗೆ ಪೈಪೋಟಿ ಕೊಡುವಂತೆ ಚಲಿಸತೊಡಗಿತ್ತು. ಕಿಟಾರನೆ ಕಿರುಚಿಕೊಂಡವನು ಐದೇ ಸೆಕೆಂಡಿನಲ್ಲಿ ಹೊರಗೋಡಿದ್ದೆ. ಮದುವೆ ಆದ ಮೇಲೆ ಪತ್ನಿಯಲ್ಲಿ “ಎರಡು ನಿಮಿಷ ನಾನು ಹಾವಿನ ಮೇಲೆಯೇ ನಿಂತಿದ್ದೆ” ಎಂದು ಹೇಳಿದ್ದಕ್ಕೆ ಅವಳು “ಹಾವಿಗೆ ಏನೂ ಆಗಿರಲಿಲ್ಲ ತಾನೇ?” ಎಂದು ತುಂಟನಗೆ ಸೂಸುತ್ತಾ ಕೇಳಿದ್ದಳು. ಅಮ್ಮನ ಮಾತನ್ನೇ ನಿಜ ಎಂದುಕೊಂಡ ನನ್ನ ಮುದ್ದುಮಗ “ಹಾವಿಗೆ ಏನಾಯಿತು ಹೇಳಪ್ಪಾ” ಎಂದು ತೊದಲು ನುಡಿದಿದ್ದ.

ಬಚ್ಚಲುಮನೆಯ ಹಾಡಿಗೆ ನಾನು ಪಡೆದ ಹೊಗಳಿಕೆ ನನ್ನಲ್ಲಿ ಆತ್ಮವಿಶ್ವಾಸ ಹುಟ್ಟುಹಾಕಿತ್ತು. ಆ ಬಳಿಕ ಊರು ಪರವೂರಿನಲ್ಲಿ ನಡೆದ ಬಹುತೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬಹುಮಾನ ಪಡೆದದ್ದು- ಇವುಗಳನ್ನೆಲ್ಲ ಮರೆಯುವುದಾದರೂ ಹೇಗೆ?

ನಾನೂ ನನ್ನ ಹೆಂಡತಿ ಬಾಡಿಗೆ ಮನೆಯಲ್ಲಿದ್ದ ಸಂದರ್ಭ. ಪಕ್ಕದ ಮನೆಯಲ್ಲಿದ್ದ ವ್ಯಕ್ತಿಯೊಬ್ಬ ಕನ್ನಡ ಉಪನ್ಯಾಸಕನಾಗಿದ್ದ. ವಿದ್ಯಾರ್ಥಿಗಳು ಅವನ ಪಾಠವನ್ನು ಇಷ್ಟಪಡುತ್ತಾರೆಂಬ ವಿಚಾರ ನನಗೆ ಗೊತ್ತಿತ್ತು. ಒಳ್ಳೆಯ ಭಾಷಣಕಾರನೂ ಆಗಿದ್ದ. ಒಂದೆರಡು ಸಲ ನಾನೂ ಅವನ ಭಾಷಣ ಕೇಳಿದ್ದೆ. ಹೊಸ ಚಿಂತನೆ, ಯೋಚನೆಗಳು ಅವನ ಭಾಷಣದಲ್ಲಿರುತ್ತಿದ್ದವು. ದಿನನಿತ್ಯದ ಜೀವನದಲ್ಲಿ ಅವನಿಗೆ ಮಾತೇ ಕಡಿಮೆ. ತೀರಾ ಅಂತರ್ಮುಖಿ. ಇವನು ತರಗತಿಯಲ್ಲಿ, ವೇದಿಕೆ ಮೇಲೆ ಅಷ್ಟೊಂದು ಚೆನ್ನಾಗಿ ಮಾತನಾಡುವುದು ಹೇಗೆ? ಆ ಚಿಂತನೆ ಹುಟ್ಟುವುದೆಂತು? ಎಂಬ ಕುತೂಹಲ ನನಗೆ. ಕೇಳಿಯೇಬಿಟ್ಟೆ. ಒಂದಷ್ಟು ಸಂಕೋಚದಿಂದಲೇ ಬಾಯಿಬಿಟ್ಟ. “ನನ್ನ ಯೋಚನೆಗಳು ಗರಿಗೆದರುವುದು ಬಾತ್‌ರೂಮಿನಲ್ಲಿ. ಬಾತ್‌ರೂಮಿನ ಆ ಏಕಾಂತ ನನ್ನಲ್ಲಿ ಹೊಸ ಬಗೆಯ ಯೋಚನೆಗಳನ್ನು ಹುಟ್ಟಿಸುತ್ತದೆ. ಅಲ್ಲಿ ಹೊಳೆಯುವಷ್ಟು ಯೋಚನೆಗಳು ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ” ನಗುತ್ತಾ ಅವನು ಹೇಳಿದ ಮಾತುಗಳನ್ನು ಪ್ರಯೋಗಿಸಿ ನೋಡಲು ನನ್ನ ಸಂಶೋಧಕ ಮನಸ್ಸು ಬಯಸಿತ್ತು. ಬಾತ್‌ರೂಮ್ ಹೊಕ್ಕವನು ಯೋಚನೆಗಳು ಧಾಳಿಯಿಡುತ್ತವೇನೋ ಎಂದು ಕಾದೆ. ಗೋಡೆ ಮೇಲಿದ್ದ ಜಿರಳೆ ಮೈಮೇಲೆ ಬಿತ್ತಷ್ಟೇ. “ಆಗಲೇ ಒಳಗೆ ಹೋಗಿದ್ದೀರಿ. ತಪಸ್ಸು ಮಾಡುತ್ತಿದ್ದೀರೋ ಹೇಗೆ?” ಎಂದು ಪತ್ನಿ ಹೊರಗಿನಿಂದ ತಮಾಷೆ ಆರಂಭಿಸಿದ್ದಳು.

ನನ್ನಪ್ಪನಿಗಂತೂ ಬಚ್ಚಲುಮನೆ ಎನ್ನುವುದು ಧಾರ್ಮಿಕ ನಂಬಿಕೆಯ ಇನ್ನೊಂದು ಆಯಾಮವಾಗಿಹೋಗಿತ್ತು. ದೇವರ ಕೋಣೆಯನ್ನು ಹೊಕ್ಕುವುದಕ್ಕೆ ಮೊದಲೇ ಬಚ್ಚಲುಮನೆಯಲ್ಲಿಯೇ ದೇವರನ್ನು ನೆನೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದರು. ‘ಗಂಗೇಚ ಯಮುನೇಚ್ಛೈವ ಗೋದಾವರೀ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿಂ ಸನ್ನಿಧಿಂ ಕುರು||’ ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ ತಣ್ಣೀರಿನ ಸ್ನಾನ. ಮಡಿ ವಸ್ತ್ರದಲ್ಲಿ ದೇವರ ಪೂಜೆ. ಇದು ನನ್ನಪ್ಪನ ದಿನ ಶುರು ಆಗುತ್ತಿದ್ದ ರೀತಿ. ಬಚ್ಚಲುಮನೆಯನ್ನೇ ಪವಿತ್ರ ಕ್ಷೇತ್ರಗಳ ಸನ್ನಿಧಾನ ಎನ್ನುವಂತೆ, ಬಚ್ಚಲುಮನೆಯ ನೀರನ್ನೇ ಪವಿತ್ರ ತೀರ್ಥ ಎನ್ನುವಂತೆ ಪರಿಗಣಿಸಿದ ನಮ್ಮ ಹಿರಿಯರ ಅಪೂರ್ವ ಸಾಂಕೇತಿಕತೆಯನ್ನು ಯಾವ ಕವಿಗಳೂ ಹಿಂದಿಕ್ಕಲು ಸಾಧ್ಯವಿಲ್ಲ. ದೇವರ ಕುರಿತಾಗಿದ್ದ ಅವರ ಅಚಲ ನಂಬಿಕೆ ಚಳಿಗಾಲದ ಬೆಳಗ್ಗಿನ ಚಳಿಯನ್ನೂ ಮೀರಿಸುವಷ್ಟು ಸದೃಢವಾಗಿತ್ತು ಎನ್ನುವುದನ್ನು ನೆನೆಸಿಕೊಂಡಾಗ ಅಚ್ಚರಿಯಾಗುತ್ತದೆ. ಶಬರಿಮಲೆ ಯಾತ್ರಾರ್ಥಿಗಳ ಕಠಿಣ ವ್ರತವನ್ನು ತಿಳಿದಾಗಲೂ ಅಚ್ಚರಿಯಾಗುತ್ತದೆ. ಬಚ್ಚಲುಮನೆಯೊಳಗಿನ ಬಿಸಿಯಲ್ಲಿ ಭಕ್ತಿ ಭಂಡಾರವನ್ನು ಬಚ್ಚಿಟ್ಟ ಭಾರತೀಯ ಪರಂಪರೆಯ ಅದ್ಭುತ ಆಸ್ತಿಕತೆಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು.

ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ! ಆಧುನಿಕ ಕಾಲದಲ್ಲಂತೂ ಬಾತ್‌ರೂಮ್‌ ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. “ಬಾತ್‌ರೂಮ್‌ನ ಇಂಟೀರಿಯರ್ ಡಿಸೈನ್‌ಗೆ ಮೂರು ಲಕ್ಷ ಖರ್ಚಾಗಿದೆ” ಬೆಂಗಳೂರಿನ ಸಂಬಂಧಿಕರ ಮನೆಗೆ ಹೋದಾಗ ಸಹಜವೆಂಬಂತೆ ಅವರಾಡಿದ ಈ ಮಾತು ಕೇಳಿ ಅಚ್ಚರಿಯಿಂದ ಕಣ್ಣರಿಳಿಸಿದ್ದೆ. ‘ಇದೇ ಹಣದಲ್ಲಿ ಸರಳವಾದ ಅರ್ಧ ಮನೆಯೊಂದನ್ನು ಕಟ್ಟಿ ಮುಗಿಸಬಹುದಿತ್ತಲ್ಲ’ ನಾಲಗೆ ತುದಿವರೆಗೂ ಬಂದ ಮಾತನ್ನು ಒತ್ತಾಯಪೂರ್ವಕ ತಡೆದಿದ್ದೆ.

ಬೆಂಗಳೂರಿನಲ್ಲಿದ್ದ ನನ್ನ ಗೆಳೆಯನೊಬ್ಬನ ಬಾಡಿಗೆ ಮನೆಯ ಪರಿಸ್ಥಿತಿಯೇ ಬೇರೆ. “ಬಾತ್‌ರೂಮ್‌ ಇಕ್ಕಟ್ಟಾಗಿದೆ ಎಂದುಕೊಳ್ಳಬೇಡ ಆಯ್ತಾ? ಹಾಗೆ ನೋಡಿದರೆ ಇಲ್ಲಿರುವ ಬಾಡಿಗೆ ಮನೆಗಳಲ್ಲಿ ದೊಡ್ಡ ಬಾತ್‌ರೂಮ್‌ ಎಂದರೆ ನಮ್ಮ ಮನೆಯದ್ದೇ”- ನಾನು ಬಾತ್‌ರೂಮ್‌ ಪ್ರವೇಶಿಸುವಾಗಲೇ ಅರ್ಧ ಸಂಕೋಚದಿಂದ, ಅರ್ಧ ಹೆಮ್ಮೆಯಿಂದ ನುಡಿದಿದ್ದ ನನ್ನ ಗೆಳೆಯ. ಮರುದಿನ ಬೆಳಗ್ಗೆ “ಬಿಸಿನೀರು ಬರುತ್ತಿಲ್ಲವಲ್ಲೋ” ಎಂದದ್ದಕ್ಕೆ “ಯಾವಾಗಲೂ ಎಂಟು ಗಂಟೆಗೇ ಬಂದುಬಿಡುತ್ತದೆ. ಇವತ್ತು ತಡವಾದೀತೋ ಏನೋ. ನಿನಗೇನೂ ಗಡಿಬಿಡಿ ಇಲ್ಲದಿದ್ದರೆ ಸ್ವಲ್ಪ ಸಮಯ ಕಾದು ಆಮೇಲೆ ಸ್ನಾನ ಮಾಡು” ಎಂದು ಮೊದಲಿನ ಸಲುಗೆಯಿಂದಲೇ ನುಡಿದಿದ್ದ. ಬೇಗ ಹೊರಟುಬರಬೇಕಾದ ಒತ್ತಡ ನನ್ನನ್ನು ತಣ್ಣೀರಿನ ಸ್ನಾನಕ್ಕೆ ಎಡೆಮಾಡಿತ್ತು. ಬಾಲ್ಯದಲ್ಲಿ ಬಚ್ಚಲುಮನೆಯ ಹಂಡೆತುಂಬಾ ದಿನದ ಇಪ್ಪತ್ನಾಲ್ಕು ಗಂಟೆಯೂ ತುಂಬಿರುತ್ತಿದ್ದ ಬಿಸಿನೀರು ಮೂಡಿಸುತ್ತಿದ್ದ ಬೆಚ್ಚನೆಯ ಭಾವದ ನೆನಪು ಮನವನ್ನು ಕಾಡತೊಡಗಿತ್ತು.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ