Advertisement
ಬಸಪ್ಪ ಕಾಕಾನ ನೆನಪುಗಳು: ಶರಣಗೌಡ ಪಾಟೀಲ ಬರೆದ ಪ್ರಬಂಧ

ಬಸಪ್ಪ ಕಾಕಾನ ನೆನಪುಗಳು: ಶರಣಗೌಡ ಪಾಟೀಲ ಬರೆದ ಪ್ರಬಂಧ

ಬಸಪ್ಪ ಕಾಕಾನ ಮನಸ್ಸು ಕೂಡ ಬಿಳಿ ಬಟ್ಟೆಯಷ್ಟೇ ಶುಭ್ರಗಿತ್ತು. ಆತ ಬಿಳಿ ಬಟ್ಟೆ ಧರಿಸಿ ಹೊರಟರೆ ಥೇಟ ಸ್ವಾತಂತ್ರ್ಯ ಹೋರಾಟಗಾರ ಕಂಡಂತೆ ಕಾಣಿಸುತ್ತಿದ್ದ. ಎದುರಿಗೆ ಸಿಕ್ಕವರಿಗೆಲ್ಲ ಮಾತಾಡಿಸಿ ಊಟ ತಿಂಡಿ ಕೆಲಸ ಕಾರ್ಯದ ಬಗ್ಗೆ ವಿಚಾರಿಸುತ್ತಿದ್ದ. ಬಸಪ್ಪ ಕಾಕಾನ ಕುಟುಂಬವೂ ಚಿಕ್ಕದಾಗಿತ್ತು. ಒಬ್ಬನೇ ಮಗ ಆತನಿಗೆ ಅಂಗಡಿ ವ್ಯವಹಾರದ ಬಗ್ಗೆ ಯಾವದೂ ಗೊತ್ತಿರಲಿಲ್ಲ. ಬೇಕಂತಲೇ ಬಸಪ್ಪ ಕಾಕಾ ಗೊತ್ತು ಪಡಿಸಿರಲಿಲ್ಲ. ಯಾಕೆಂದರೆ ಮಗ ಇನ್ನೂ ಓದುವವನು ಸರಿಯಾಗಿ ಓದಿ ವಿದ್ಯಾವಂತನಾಗಬೇಕು ಓದುವ ವಯಸ್ಸಿನಲ್ಲಿ ಓದದಿದ್ದರೆ ಹೇಗೆ ಅಂತ ಯೋಚಿಸುತ್ತಿದ್ದ.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ನಾನು ಹುಟ್ಟಿದೂರಿಗೆ ಹೋಗದೇ ಸುಮಾರು ಇಪ್ಪತ್ತೈದು ವರ್ಷಗಳೇ ಕಳೆದು ಹೋಗಿದ್ದವು. ಯಾವಾಗ ನೌಕರಿ ಸಿಕ್ಕು ಕುಟುಂಬ ಸಮೇತ ಬೇರೆ ಕಡೆ ಮನೆ ಮಾಡಿದೆನೋ ಆವಾಗಿನಿಂದ ಸ್ವಾತಂತ್ರ ಕಳೆದುಕೊಂಡವನಂತಾಗಿ ಎಲ್ಲೂ ಹೋಗಲಾಗದ ಸ್ಥಿತಿ ತಲುಪಿಬಿಟ್ಟಿದ್ದೆ. ಸ್ವಂತ ಊರಿಗೆ ಹೋಗಲಾಗದ ಚಡಪಡಿಕೆ ಆಗಾಗ ಮನದಲ್ಲಿ ಸುಳಿದಾಡಿ ಒಮ್ಮೆ ಹೋಗಬೇಕು. ಎಲ್ಲರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಬೇಕು ಅನ್ನುವ ಆಸೆ ಜೀವಂತವಾಗಿತ್ತು. ಜನರ ಮುಖಾಕೃತಿ, ಹೊಲ, ನೆಲ, ಜಲ, ಪರಿಸರ ಎಲ್ಲವೂ ನನ್ನ ಕಣ್ಮುಂದೆ ಬಂದು ಅನೇಕ ಸಲ ಶೂನ್ಯ ದಿಟ್ಟಿಸುತ್ತಿದ್ದೆ.

ವಾರದಲ್ಲಿ ಒಂದಿನ ರಜೆ ಸಿಕ್ಕರೂ ಸಂಸಾರದ ಜಂಜಾಟದಿಂದ ಬಿಡುವು ಸಿಗುತ್ತಿರಲಿಲ್ಲ. ಹೆಂಡತಿ ಮಕ್ಕಳು ಅಂತ ಅವರ ಸಲುವಾಗೇ ಸಮಯ ಮೀಸಲಿಡುವದು ಅನಿವಾರ್ಯವಾಗುತ್ತಿತ್ತು. ದೂರದ ಊರು ಹೋಗಲೊಂದಿನ ಬರಲೊಂದಿನ ಬೇಕೇ ಬೇಕು. ಸುಮಾರು ವರ್ಷಗಳ ನಂತರ ಹೋದಾಗ ಆಗಿಂದಾಗೇ ಹೋಗಿ ಬರೋದೂ ಸರಿಯಲ್ಲ. ಮೊಕ್ಕಾಂ ಮಾಡಲೇಬೇಕು ಆಗಲೇ ಹೋದದ್ದಕ್ಕೂ ಸಾರ್ಥಕವಾಗುತ್ತದೆ ಅಂತ ಯೋಚಿಸಿದೆ.

ಇಷ್ಟು ದಿವಸ ಊರಲ್ಲಿನ ಜಾತ್ರೆ ಉತ್ಸವ ಜನರ ಸುಖಃ ದುಃಖದ ಸಂದರ್ಭಗಳು ಇದ್ದಾಗ ಊರಲ್ಲಿರುವ ನಮ್ಮ ಸಂಬಂಧಿಕರೇ ಹಾಜರಾಗಿ ನಮ್ಮ ಸ್ಥಾನವನ್ನ ಅವರೇ ತುಂಬುತ್ತಿದ್ದರು. ನಾವು ಬರದಿರುವ ಬಗ್ಗೆ ಸಹಜವಾಗಿ ಯಾರಾದರು ಪ್ರಶ್ನಿಸಿದರೆ “ಅವರಿಗೆಲ್ಲಿ ಬರೋದು ಆಗ್ತಾದೆ? ಅವರ ಕೆಲಸಾನೇ ಅವರಿಗೆ ಹಾಸಿ ಹೊದ್ದುಕೊಳ್ಳುವಷ್ಟಿದೆ ಅಂತ ಸಮಜಾಯಿಷಿ ನೀಡುತ್ತಿದ್ದರು. “ನೌಕರಿ ಅಂದ್ಮೇಲೆ ಹಂಗೇ ಆಗೋದು ಅವರೇನು ನಮ್ಮಂಗ ಖುಲ್ಲಾ ಇರೋರಾ? ಅದಲ್ಲದೆ ಅವರು ನೌಕರಿ ಮಾಡೋ ಊರು ಬೇರೆ ಇಲ್ಲಿಂದ ನಾಲ್ಕೈದುನೂರು ಕಿಲೋಮೀಟರ್ ದೂರದಲ್ಲಿದೆ. ಇಲ್ಲೇ ಆಸುಪಾಸ ಇದ್ದರೆ ಬಂದು ಹೋಗುತ್ತಿದ್ದರು. ಪಾಪ ಅನ್ನುವ ಅನುಕಂಪದ ಮಾತುಗಳು ನಮ್ಮ ಬಗ್ಗೆ ಕೇಳಿ ಬರುತ್ತಿದ್ದವು. ನಾವು ಬರದಿದ್ದರೂ ಯಾರೂ ಕೋಪ ಮಾಡಿಕೊಳ್ಳುತ್ತಿರಲ್ಲ ಅದೇ ಸಮಾಧಾನ ತರುವ ವಿಷಯವಾಗಿತ್ತು.

ನಾನು ನೌಕರಿಗೆ ಬಂದ ಮೇಲೆ ವಾರಕ್ಕೊಮ್ಮೆ ತಪ್ಪದೆ ದಿನ ಬಳಕೆ ವಸ್ತು ತರಲು ಸಮೀಪದ ಸೂಪರ ಬಜಾರಿಗೆ ಹೋಗುತ್ತಿದ್ದೆ. ಸಾಮಾನು ಕೊಳ್ಳುವಾಗ ಯಾವುದೇ ವಸ್ತುವಿನ ದರ ಹೆಚ್ಚಿಗೆ ಅನಿಸಿದರೆ ಥಟ್ಟನೆ ನಮ್ಮೂರಿನ ಕಿರಾಣಿ ಅಂಗಡಿ ಬಸಪ್ಪ ಕಾಕಾನ ನೆನಪೇ ಬರುತ್ತಿತ್ತು. ಇಲ್ಲಿನ ದರಕ್ಕೂ ಅಲ್ಲಿನ ದರಕ್ಕೂ ವ್ಯತ್ಯಾಸ ಕಂಡಾಗ ಗಾಬರಿಯಾಗುತ್ತಿದ್ದೆ. ನಮ್ಮ ಬಸಪ್ಪ ಕಾಕಾನ ಅಂಗಡಿಯೇ ಎಷ್ಟೋ ಮೇಲು ಅಂತ ಯೋಚಿಸುತ್ತಿದ್ದೆ. ಸೂಪರ್‌ ಬಾಜಾರ ಅಂದ್ಮೇಲೆ ಕಟ್ಟಡದ ಬಾಡಿಗೆ ನೌಕರರ ಪಗಾರು ಅದು ಇದು ಅಂತ ಖರ್ಚು ಜಾಸ್ತಿ ಇರ್ತಾದೆ ಅದೆಲ್ಲ ಇವರು ನಮ್ಮಂಥವರ ಕಡೆಯಿಂದಲೇ ವಸೂಲಿ ಮಾಡ್ತಾರೆ. ಆದರೆ ಬಸಪ್ಪ ಕಾಕಾನ ಅಂಗಡಿಗೆ ಯಾವುದೇ ಬಾಡಿಗೆ ಗೀಡಿಗೆ ಇಲ್ಲ. ಅದಕ್ಕೆ ಸಸ್ತಾ ಕೊಡುತ್ತಿದ್ದ ಅಂತ ಅನಿಸುತ್ತಿತ್ತು. ಊರಲ್ಲಿರೋತನಕ ನಿತ್ಯ ಒಂದೆರಡು ಬಾರಿಯಾದರು ಬಸಪ್ಪ ಕಾಕಾನ ಕಿರಾಣಿ ಅಂಗಡಿಗೆ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆಯುವದು ರೂಢಿಯಾಗಿತ್ತು. ನಮ್ಮ ವಾರಿಗೆಯವರು ಕೂಡ ನಿತ್ಯ ಅಲ್ಲಿಗೆ ಬರುತ್ತಿದ್ದರು. ಅಂಗಡಿ ಪಕ್ಕದ ಕಟ್ಟೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ಊರು ಕೇರಿ ದೇಶಾವರಿ ವಿಷಯದ ಬಗ್ಗೆ ಮಾತಾಡುತಿದ್ದೆವು. ಬಿಡುವು ಸಿಕ್ಕಾಗ ಬಸಪ್ಪ ಕಾಕಾ ಕೂಡ ನಮ್ಮ ಬಳಿ ಬರುತ್ತಿದ್ದ. ಆತ ಅನುಭವಿ. ಊರಿನ ಇತಿಹಾಸವೇ ತಿಳಿದುಕೊಂಡಿದ್ದ. ನಡೆದು ಹೋದ ಹತ್ತು ಹಲವು ಘಟನೆಗಳೂ ನೆನಪಿಸುತ್ತಿದ್ದ. ಆತನ ಮಾತು ಕುತೂಹಲ ಮೂಡಿ ಇನ್ನೂ ಕೇಳಬೇಕು ಅಂತ ಅನಿಸುತ್ತಿತ್ತು. ಆತನ ಮಾತಿನಿಂದ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.

ಅಂದು ನಾನು ಡ್ಯೂಟಿ ಮುಗಿಸಿ ಮನೆಗೆ ಹೊರಟಾಗ ಸಿಟಿ ಬಸ್ ನಿಲ್ದಾಣದ ಮುಂಭಾಗ ಅಂಗಿ ಧೋತಿ ಹಾಕಿಕೊಂಡು ವ್ಯಕ್ತಿಯೊಬ್ಬ ಹೋಗುತ್ತಿದ್ದ. ಆತನಿಗೆ ನೋಡಿ ಕುತೂಹಲ ಮೂಡಿತು. ಆತನ ಮುಖ ಕಾಣಸುತ್ತಿರಲಿಲ್ಲ ಹಿಂದಿನಿಂದ ನೋಡಿದರೆ ಥೇಟ್‌ ಬಸಪ್ಪ ಕಾಕಾನಂತೆ ಕಾಣಿಸುತ್ತಿದ್ದ. ಅರೇ ಬಸಪ್ಪ ಕಾಕಾ ಇಲ್ಲಿಗೆ ಯಾಕೆ ಬಂದಿದ್ದಾನೆ? ಇಲ್ಲಿ ಯಾರಾದರು ಬೀಗರು ನೆಂಟರು ಸಂಬಂಧಿಕರು ಇರಬಹುದೇ? ಅಂತ ಯೋಚಿಸಿ ಜೋರಾಗಿ ಕೂಗಿದೆ. ಆತ ನನ್ನ ಕಡೆ ಹೊರಳಿ ನೋಡಿದ. ಆದರೆ ಆತ ಬಸಪ್ಪ ಕಾಕಾ ಆಗಿರದೆ ಬೇರೆ ಯಾರೋ ಆಗಿದ್ದು ನನಗೆ ನಿರಾಸೆ ಮೂಡಿಸಿತು.

ಈ ಬಾರಿ ಊರಿಗೆ ಹೋದಾಗ ಎಲ್ಲರಿಗಿಂತ ಮೊದಲು ಬಸಪ್ಪ ಕಾಕಾನಿಗೆ ಭೇಟಿಯಾಗಬೇಕು, ಈಗ ಆತ ಹೇಗಿದ್ದಾನೋ ಏನೋ? ಆವಾಗಲೇ ಅರವತ್ತರ ಆಸುಪಾಸಿನಲ್ಲಿದ್ದ. ಆದರೂ ಗಟ್ಟಿಯಾಗಿದ್ದ ಒಂದೇ ಒಂದು ತಲೆಗೂದಲು ಬೆಳ್ಳಗಾಗಿರಲಿಲ್ಲ. ಮಕ್ಕಳಂತೆ ಪಟಪಟನೆ ಮಾತಾಡಿ ಚುರುಕಾಗಿ ಓಡಾಡಿ ಯಾರ ಸಹಾಯವಿಲ್ಲದೆ ಒಬ್ಬನೇ ಕಿರಾಣಿ ಸಾಮಾನು ತರುತ್ತಿದ್ದ. ಅಂಗಡಿಯಲ್ಲಿ ಸಾಮಾನು ಜೋಡಿಸಿದರೆ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಈಗ ಆತನ ಅಂಗಡಿ ಮತ್ತಷ್ಟು ಬದಲಾಗಿರಬೇಕು ಮತ್ತೆ ಏನೇನು ಹೊಸ ಹೊಸ ಸಾಮಾನು ತಂದಿಟ್ಟಿದ್ದಾನೋ ಏನೋ ಅಂತ ಲೆಕ್ಕ ಹಾಕಿದೆ. ಆತನದೊಂದು ಕಿರಾಣಿ ಅಂಗಡಿ ಬಿಟ್ಟರೆ ಬೇರೆ ಯಾವದೂ ಇರಲಿಲ್ಲ ಆತ ಬರೀ ಕಿರಾಣಿ ಅಂಗಡಿ ನಡೆಸೋದಲ್ಲದೇ ಊರ ನ್ಯಾಯಾಧೀಶನಂತೆಯೂ ಕೆಲಸಾ ಮಾಡುತಿದ್ದ. ಊರಲ್ಲಿನ ಯಾವುದೇ ತಂಟೆ ತಕರಾರು, ಕೌಟುಂಬಿಕ ಕಲಹ, ಆಸ್ತಿವಿವಾದ ಯಾವುದಿದ್ದರು ಬಗೆಹರಿಸಲು ಮುಂದಾಗುತಿದ್ದ. “ನಡೀರಿ ಬಸಪ್ಪ ಕಾಕಾನ ಹತ್ತಿರ ಹೋಗೋಣ ನಮ್ಮ ಸಮಸ್ಯೆ ಅವನೇ ಬಗೆಹರಿಸುತ್ತಾನೆ ಅಂತ ಅನೇಕರು ಅವನ ಕಡೆ ಬರುತ್ತಿದ್ದರು. ಆತ ಎರಡೂ ಕಡೆಯವರ ಮಾತು ಆಲಿಸಿ ಸಮಾಧಾನವಾಗುವ ರೀತಿಯಲ್ಲಿ ನ್ಯಾಯ ಬಗೆಹರಿಸಿ ಕಳಿಸುತ್ತಿದ್ದ. ಆತ ಹೇಳಿದ ಮೇಲೆ ಮುಗೀತು ಯಾರೂ ಧೂಸರಾ ಮಾತಾಡದೆ ಒಪ್ಪಿಕೊಂಡು ಬಿಡುತ್ತಿದ್ದರು.

ಊರಿನ ಬಹುತೇಕ ಜನರಿಗೆ ನಗರದ ಗಂಧ ಗಾಳಿಯ ಗೊತ್ತಿರಲಿಲ್ಲ. ಕೆಲವರು ಮಾತ್ರ ನಗರಕ್ಕೆ ಹೋಗಿ ಬರುತ್ತಿದ್ದರು. ಉಳಿದವರಂತೂ ನಗರದ ಕಡೆ ಮುಖವೇ ಮಾಡುತ್ತಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತ ಇರುತಿದ್ದರು. ದುಡಿಯೋದು ಬಿಟ್ಟರೆ ಅವರಿಗೆ ಬೇರೆ ಯಾವದೂ ಗೊತ್ತಿರಲಿಲ್ಲ. ಯಾವುದೇ ಸಾಮಾನು ಬೇಕಾದರೂ ಬಸಪ್ಪ ಕಾಕಾನ ಅಂಗಡಿಯಲ್ಲೇ ಖರೀದಿಸುತ್ತಿದ್ದರು. ಯಾವುದಾದರು ವಸ್ತು ಸಿಗದಿದ್ದರೆ ಆತನ ಕೈಗೆ ರೊಕ್ಕ ಕೊಟ್ಟು ತಂದು ಕೊಡಲು ಹೇಳುತ್ತಿದ್ದರು. ಆಗ ಅವನು ಒಲ್ಲೆ ಅನ್ನದೆ ತಂದುಕೊಡುತ್ತಿದ್ದ.

“ಬಸಪ್ಪಕಾಕಾನಿಂದ ನಮಗೆ ಬಹಳ ಸಹಾಯ ಆಗ್ತಿದೆ. ಆತ ತರೋದಿಲ್ಲ ಅಂದರೆ ಎಲ್ಲಾ ಕೆಲಸಾ ಬಿಟ್ಟು ನಾವೇ ಕೈ ಖರ್ಚು ಮಾಡಿ ಹೋಗಿ ತರಬೇಕಾಗ್ತಿತ್ತು ಅಂತ ಅವನ ಸಹಾಯ ಸ್ಮರಿಸುತ್ತಿದ್ದರು. ಜನರ ಕೈಯಲ್ಲಿ ರೊಕ್ಕ ಇಲ್ಲದಿದ್ದಾಗ ಬಸಪ್ಪ ಕಾಕಾ ತನ್ನ ಅಂಗಡಿಯ ಸಾಮಾನು ಉದ್ರಿ ಕೊಟ್ಟು ಆಮ್ಯಾಲ ತೊಗೊಳ್ತಿದ್ದ. ರೊಕ್ಕದ ಅಡಚಣೆ ಇದ್ದವರಿಗೆ ಇಡೀ ವರ್ಷ ಉದ್ರಿ ಕೊಟ್ಟು ಉಗಾದಿಗೆ ಕೊಡ್ರಿ ಅಂತ ಹೇಳುತಿದ್ದ. ಬಾಕಿ ಹಣಕ್ಕೆ ಯಾವುದೇ ಹೆಚ್ಚುವರಿ ಬಡ್ಡಿಯಾಗಲಿ ಮತ್ತೊಂದಾಗಲಿ ಹಾಕುತ್ತಿರಲಿಲ್ಲ ಅವನ ಉದಾರತೆಯಿಂದ ಅನೇಕರು ನೆಮ್ಮದಿಯ ನಿಟ್ಟುಸಿರುಬಿಡುತ್ತಿದ್ದರು.

ಊರಲ್ಲಿದ್ದಾಗ ನಾನು ಬಸಪ್ಪ ಕಾಕಾನ ಅಂಗಡಿಯಲ್ಲೇ ಕಿರಾಣಿ ಸಾಮಾನು ಖರೀದಿಸುತ್ತಿದ್ದೆ. ಯಾವುದಾದರು ಸಾಮಾನು ಇರದಿದ್ದರೆ ಅದನ್ನು ಡೈರಿಯಲ್ಲಿ ಬರೆದುಕೊಂಡು ಮರುದಿನ ನೆನಪಿನಿಂದ ತಂದು ಕೊಡುತ್ತಿದ್ದ. “ನಿನ್ನಂಗ ಅಂಗಡಿ ನಡೆಸಲು ಯಾರಿಗೂ ಬರೋದಿಲ್ಲ ಅಂತ ತಾರೀಫ ಮಾಡಿದಾಗ “ಯಾವುದೇ ವಸ್ತು ಇಲ್ಲ ಅಂತ ಹೇಳಬಾರದು. ಇರದಿದ್ದರು ತಂದು ಕೊಡಬೇಕು ಅದು ವ್ಯಾಪಾರಿಗಳ ಲಕ್ಷಣ” ಅಂತ ಸಮಜಾಯಿಷಿ ನೀಡುತಿದ್ದ.

ನೌಕರಿ ಅಂದ್ಮೇಲೆ ಹಂಗೇ ಆಗೋದು ಅವರೇನು ನಮ್ಮಂಗ ಖುಲ್ಲಾ ಇರೋರಾ? ಅದಲ್ಲದೆ ಅವರು ನೌಕರಿ ಮಾಡೋ ಊರು ಬೇರೆ ಇಲ್ಲಿಂದ ನಾಲ್ಕೈದುನೂರು ಕಿಲೋಮೀಟರ್ ದೂರದಲ್ಲಿದೆ. ಇಲ್ಲೇ ಆಸುಪಾಸ ಇದ್ದರೆ ಬಂದು ಹೋಗುತ್ತಿದ್ದರು. ಪಾಪ ಅನ್ನುವ ಅನುಕಂಪದ ಮಾತುಗಳು ನಮ್ಮ ಬಗ್ಗೆ ಕೇಳಿ ಬರುತ್ತಿದ್ದವು. ನಾವು ಬರದಿದ್ದರೂ ಯಾರೂ ಕೋಪ ಮಾಡಿಕೊಳ್ಳುತ್ತಿರಲ್ಲ ಅದೇ ಸಮಾಧಾನ ತರುವ ವಿಷಯವಾಗಿತ್ತು.

ಬಸಪ್ಪ ಕಾಕಾನ ದಿನಚರಿ ನಸುಕಿನಲ್ಲೇ ಆರಂಭವಾಗುತ್ತಿತ್ತು. ಊರು ಏಳುವ ಮೊದಲೇ ಎದ್ದು ಜಳಕಾ ಮಾಡಿ ಬಿಳಿ ಬಟ್ಟೆ ಧರಿಸಿ, ಹಣೆಗೆ ಮೂರು ಬಟ್ಟು ವಿಭೂತಿ ಹಚ್ಚಿ ಅಂಗಡಿ ತೆರೆದು ನೀರು ಸಿಂಪಡಿಸಿ ಸಾಲು ಸಾಲಾಗಿ ಕಟ್ಟಿದ ದೇವರ ಫೋಟೋಗಳಿಗೆ ಊದಕಡ್ಡಿ ಬೆಳಗಿ ಗದ್ದಿಗೆಯ ಮೇಲೆ ಕೂಡುತಿದ್ದ. ಗಿರಾಕಿ ಕೊಟ್ಟ ಮೊದಲ ರೊಕ್ಕವನ್ನು ಹಣೆಗೆ ಹಚ್ಚಿ ನಮಸ್ಕರಿಸುತ್ತಾ “ನಿನ್ನದೇ ಬೋಣಿಗೆ” ಅಂತ ಹೇಳುತಿದ್ದ. ಗಿರಾಕಿಗಳು ಆತನ ಮಾತಿನ ತಲೆದೂಗಿ ಮಂದಹಾಸ ಬೀರುತ್ತಿದ್ದರು. ಅವರು ಬೇಡಿದ ಸಾಮಾನು ಕೊಟ್ಟು ಲೆಕ್ಕ ಮಾಡಿ ಉಳಿದ ರೊಕ್ಕ ವಾಪಸ್‌ ಕೊಡುತ್ತಿದ್ದ. ಯಾವುದೇ ಮೋಸ ಆಗೋದಿಲ್ಲ ಸಣ್ಣ ಮಗುವಿಗೆ ಕಳಿಸಿದರು. ಬಸಪ್ಪ ಕಾಕಾ ಸರಿಯಾಗೇ ಕೊಡ್ತಾನೆ ಅಂತ ಎಲ್ಲರೂ ಹೇಳುತ್ತಿದ್ದರು.

ಬಸಪ್ಪ ಕಾಕಾನ ಮನಸ್ಸು ಕೂಡ ಬಿಳಿ ಬಟ್ಟೆಯಷ್ಟೇ ಶುಭ್ರಗಿತ್ತು. ಆತ ಬಿಳಿ ಬಟ್ಟೆ ಧರಿಸಿ ಹೊರಟರೆ ಥೇಟ ಸ್ವಾತಂತ್ರ್ಯ ಹೋರಾಟಗಾರ ಕಂಡಂತೆ ಕಾಣಿಸುತ್ತಿದ್ದ. ಎದುರಿಗೆ ಸಿಕ್ಕವರಿಗೆಲ್ಲ ಮಾತಾಡಿಸಿ ಊಟ ತಿಂಡಿ ಕೆಲಸ ಕಾರ್ಯದ ಬಗ್ಗೆ ವಿಚಾರಿಸುತ್ತಿದ್ದ. ಬಸಪ್ಪ ಕಾಕಾನ ಕುಟುಂಬವೂ ಚಿಕ್ಕದಾಗಿತ್ತು. ಒಬ್ಬನೇ ಮಗ ಆತನಿಗೆ ಅಂಗಡಿ ವ್ಯವಹಾರದ ಬಗ್ಗೆ ಯಾವದೂ ಗೊತ್ತಿರಲಿಲ್ಲ. ಬೇಕಂತಲೇ ಬಸಪ್ಪ ಕಾಕಾ ಗೊತ್ತು ಪಡಿಸಿರಲಿಲ್ಲ. ಯಾಕೆಂದರೆ ಮಗ ಇನ್ನೂ ಓದುವವನು ಸರಿಯಾಗಿ ಓದಿ ವಿದ್ಯಾವಂತನಾಗಬೇಕು ಓದುವ ವಯಸ್ಸಿನಲ್ಲಿ ಓದದಿದ್ದರೆ ಹೇಗೆ ಅಂತ ಯೋಚಿಸುತ್ತಿದ್ದ. ಮಗನಿಗೆ ನಗರದಲ್ಲಿ ಬಾಡಿಗೆಯ ರೂಮ್‌ ಕೊಡಿಸಿ ಆತನ ಓದಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಿದ್ದ.

“ನಮ್ಮ ಶಂಕ್ರು ನಿನ್ನಂಗ ಓದಬೇಕು ಓದು ಮುಗಿದ ಮೇಲೆ ಅಂಗಡಿ ವ್ಯಾಪಾರ ಇದ್ದೇ ಇರ್ತಾದೆ. ಕಲಿಯುವ ವಯಸ್ಸಿನಲ್ಲಿ ಕಲಿತರೆ ಛೊಲೊ. ವಯಸ್ಸು ಮೀರಿದ ಮ್ಯಾಲ ಕಲಿಯಲು ಆಗೋದಿಲ್ಲ. ವ್ಯಾಪಾರ ವ್ಯವಹಾರ ಯಾವ ವಯಸ್ಸಲ್ಲೂ ಮಾಡಬಹುದು ಅಂತ ನನ್ನ ಮುಂದೆ ಆಗಾಗ ಹೇಳುತ್ತಿದ್ದ ಆತನ ಮಾತು ನೂರಕ್ಕೆ ನೂರು ಸತ್ಯವಾಗಿತ್ತು.

“ಮನೆ ಕತ್ತಲೆ ಹಾಕಿ ಹೋಗಬ್ಯಾಡ್ರಿ ಇಲಿ ಹೆಗ್ಗಣ ಹಾವು ಚೇಳು ಸೇರಿಕೊಂಡು ಮನೆ ಹಾಳಾಗ್ತದೆ ಅಂತ ನಾವು ನಾವು ಊರಿಂದ ಬರುವಾಗ ಕೆಲವರು ಎಚ್ಚರಿಕೆಯ ಜೊತೆ ಸಲಹೆಯೂ ಕೊಟ್ಟಿದ್ದರು. “ನೌಕರಿ ಬಿಟ್ಟು ಏನು ಮಾಡ್ತಾನೆ? ನೌಕರಿ ಸಿಗೋದೇ ಅಪರೂಪ, ಮನೆ ಹೊಲಾ ಅಂತ ಇಲ್ಲೇ ಕುಂತರೆ ಹೇಗೆ? ಹೊಲ ಮನೆ ಎಲ್ಲಿಗೂ ಹೋಗೋದಿಲ್ಲ. ಇದ್ದಲ್ಲೇ ಇರ್ತಾವೆ ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಬಂದು ಮನೆ ಸ್ವಚ್ಛ ಮಾಡಿ ಹೋದರೆ ಮುಗೀತು” ಅಂತ ಬಸಪ್ಪ ಕಾಕಾ ನಮಗೆ ಧೈರ್ಯ ಮೂಡಿಸಿದ್ದ.

ಸಣ್ಣ ಮಕ್ಕಳಿಗೂ ಬಸಪ್ಪ ಕಾಕಾನ ಅಂಗಡಿಯೇ ಇಷ್ಟವಾಗುತ್ತಿತ್ತು. ಅವರೆಲ್ಲ ಬಸಪ್ಪ ಕಾಕಾನ ಅಂಗಡಿಯಲ್ಲೇ ತಮಗೆ ಬೇಕಾದ ವಸ್ತು ಕೊಂಡುಕೊಳ್ಳುತ್ತಿದ್ದರು. ಮಿಠಾಯಿ ಎಳ್ಳಿನುಂಡಿ, ಶೇಂಗಾಚಿಕ್ಕಿ, ಇನ್ನಿತರ ತಿಂಡಿ ತಿನಿಸು ಬೇಗನೇ ಖಾಲಿಯಾಗುತ್ತಿದ್ದವು. ಹುಣ್ಣಿಮೆ ಅಮವಾಸ್ಯೆ ಮತ್ತಿತರ ವಿಶೇಷ ದಿನ ಬಂದಾಗ ಅಂಗಡಿಯಲ್ಲಿ ಗಿರಾಕಿಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆಗ ಆತನಿಗೆ ಬೆವರೊರಿಸಿಕೊಳ್ಳಲೂ ಪುರುಸೊತ್ತು ಸಿಗುತ್ತಿರಲಿಲ್ಲ. ಅಂಗಡಿ ಮುಚ್ಚಿಕೊಂಡು ಹೋಗಲು ಮಧ್ಯ ರಾತ್ರಿಯೇ ಆಗುತ್ತಿತ್ತು. ಆಗ ಹೆಂಡತಿ ಮಾದೇವಮ್ಮ ಸಿಡುಕಿ. ಬರೀ ಅಂಗಡಿ ಅಂಗಡಿ ಅಂತ ಊಟ ತಿಂಡಿಯ ಖಬರಿಲ್ಲದೆ ಹಗಲು ರಾತ್ರಿ ಯೋಚನೆ ಮಾಡಿದರೆ ಹೇಗೆ? ಅಂತ ಪ್ರಶ್ನಿಸಿ ಸಿಡುಕುತ್ತಿದ್ದಳು. ಹೆಂಡತಿಯ ಮಾತಿಗೆ ಮೌನವಾಗೇ ಉತ್ತರ ನೀಡುತ್ತಿದ್ದ.

ಅಂಗಡಿಯಲ್ಲಿನ ಸಾಮಾನು ಖಾಲಿಯಾಗುತ್ತಿದಂತೆ ಬಸಪ್ಪ ಕಾಕಾ ದೊಡ್ಡ ಖಾಲಿ ಚೀಲ ತೆಗೆದುಕೊಂಡು ನಗರದ ಕಡೆ ಮುಖ ಮಾಡುತ್ತಿದ್ದ. ಕಿರಾಣಿ ಸಾಮಾನಿನ ಜೊತೆ ಮಕ್ಕಳ ಆಟಿಕೆ ಸಾಮಾನು ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳೂ ಖರೀದಿಸಿಕೊಂಡು ಬರುತ್ತಿದ್ದ. ಊರ ಅಗಸಿ ಹತ್ತಿರ ಇರುವ ದಾನವ್ವಳು ಹೋಟಲಿಗೂ ಸಕ್ಕರಿ ಚಹಾಪುಡಿ ಚುರಮುರಿ ಕೂಡ ಅವನೇ ಪೂರೈಸುತ್ತಿದ್ದ. ಅವಳು ಗಿರಾಕಿ ಮಾಡಿ ವಾರಕ್ಕೊಮ್ಮೆ ಅಂಗಡಿಯ ಬಾಕಿ ಚುಕ್ತಾ ಮಾಡುತ್ತಿದ್ದಳು.

ಅಂದು ನನಗೆ ಒಂದು ವಾರ ರಜೆ ಸಿಕ್ಕಾಗ ಇಂತಹ ಸಮಯ ಮತ್ತೆ ಸಿಗೋದಿಲ್ಲ. ಊರಿಗೆ ಹೋಗಿ ಒಂದೆರಡುದಿನ ಇದ್ದು ಮನೆ ಸ್ವಚ್ಛ ಮಾಡಿ ಎಲ್ಲರನ್ನು ಮಾತಾಡಿಸಿಕೊಂಡು ಬರಬೇಕು ವಿಶೇಷವಾಗಿ ಬಸಪ್ಪ ಕಾಕಾನಿಗೆ ಮೊದಲು ಭೇಟಿಯಾಗಬೇಕು ಅಂತ ನಿರ್ಧಾರ ಮಾಡಿ ಊರಿಗೆ ಬಂದೆ, ಊರು ನೋಡಿ ಆಶ್ಚರ್ಯವಾಯಿತು. ಊರ ಮುಂದಿನ ಕಲಕು ನೀರಿನ ಹಳ್ಳ ತಿಳಿ ನೀರಿನ ಕೊಳವಾಗಿತ್ತು. ಅಕ್ಕ ಪಕ್ಕದಲ್ಲಿ ಬೆಳೆದಿದ್ದ ಜಾಲಿಕಂಟಿ ಮಾಯವಾಗಿದ್ದವು. ಹಳ್ಳದ ಸುತ್ತಲೂ ಕಂಪೌಂಡ ಕಟ್ಟಿ ಈಜು ಕೊಳವಾಗಿ ನಿರ್ಮಿಸಲಾಗಿತ್ತು. ಬೀಳು ಬಿದ್ದ ಹೊಲಗಳಲ್ಲಿ ಶಾಲಾ ಕಟ್ಟಡ ಜೊತೆಗೆ ಹಾಸ್ಟಲ್ ಕೂಡ ತಲೆ ಎತ್ತಿದ್ದವು. ನೂರಾರು ಮಕ್ಕಳು ಆಟಪಾಠದಲ್ಲಿ ತೊಡಗಿರುವದು ಕಂಡು ಬಂದಿತು. ಹೊಸ ಹೊಸ ಮನೆ. ಕಟ್ಟಡ ಅಕ್ಕಪಕ್ಕ ಗೋಚರಿಸಿದವು. ಒಣಭೂಮಿಯ ರೈತರು ನೀರಾವರಿ ಮಾಡಿಕೊಂಡು ಕಬ್ಬು ಬಾಳಿ ವಿವಿಧ ಬಗೆಯ ಹಣ್ಣು ಹಂಪಲ ತರಕಾರಿ ಬೆಳೆದಿದ್ದು ಕಣ್ಮನ ಸೆಳೆದವು. ಸುಮಾರು ವರ್ಷಗಳ ಹಿಂದೆ ನಾನು ಕಂಡ ಗುಡಿಸಲು, ಅರಿಛಪ್ಪರ, ಪತ್ರಾಸಿನ ಮನೆಗಳು ಮಾಯವಾಗಿದ್ದವು. ಕಲ್ಲು ಮಣ್ಣಿನ ನಿಜಾಮ ಕಾಲದ ರಸ್ತೆ ಕೂಡ ಕಾಂಕ್ರಿಟ್ ರಸ್ತೆಯಾಗಿ ಬದಲಾಗಿದ್ದವು. ಇದು ನಮ್ಮ ಊರೇ? ನಾನೇ ದಾರಿ ತಪ್ಪಿ ಬಂದಿದ್ದೇನೇಯೇ? ಅಂತ ನನ್ನ ನಾನೇ ಪ್ರಶ್ನಿಸಿಕೊಂಡೆ.

ಈ ಅನಿರೀಕ್ಷಿತ ಬದಲಾವಣೆ ಹೇಗಾಯಿತು? ಇದನ್ನು ಬಸಪ್ಪಕಾಕಾನ ಬಾಯಿಂದಲೇ ಕೇಳಿ ತಿಳಿಯಬೇಕು ಅಂತ ಯೋಚಿಸಿ ಹೆಜ್ಜೆಹಾಕಿದೆ. ಆತನ ಅಂಗಡಿ ಕೂಡ ಭೌತಿಕವಾಗಿ ಬದಲಾಗಿದ್ದು ಆಶ್ಚರ್ಯ ತರಿಸಿತು. ಅಂಗಡಿಯ ಒಳಗಡೆ ಕಿರಾಣಿ ಸಾಮಾನು ಕಾಣಿಸಿದಾಗ ಕಟ್ಟಡ ಬದಲಾಗಿದೆ ಹೊರತು ಕಿರಾಣಿ ಅಂಗಡಿ ಬದಲಾಗಿಲ್ಲ ಅಂತ ಕುತೂಹಲದಿಂದ ಮುಂದೆ ಹೆಜ್ಜೆ ಇರಿಸಿದೆ. ಅಂಗಡಿಯಲ್ಲಿ ಯಾರೂ ಕಾಣಲಿಲ್ಲ. “ಬಸಪ್ಪ ಕಾಕಾ” ಅಂತ ಒಂದೆರಡು ಬಾರಿ ಜೋರಾಗಿ ಕೂಗಿದೆ ನನ್ನ ಕೂಗಿಗೆ ಶಂಕ್ರು ಹೊರ ಬಂದು “ಬರ್ರಿ ಅಂಕಲ್ ಯಾವಾಗ ಬಂದ್ರಿ ಆರಾಮ ಇದ್ದೀರಾ” ಅಂತ ಒಂದೇ ಉಸಿರಿನಲ್ಲಿ ಪ್ರಶ್ನಿಸಿದ. “ಆರಾಮ ಇದ್ದೀನಿ ನೀವೆಲ್ಲ ಆರಾಮ ಇದ್ದೀರಾ?” ಅಂತ ಮರು ಪ್ರಶ್ನಿಸಿದೆ.

ಆತ ತಲೆಯಾಡಿಸಿ ಬರಮಾಡಿಕೊಂಡ. ನಾನು ಹೋಗಿ ಅಂಗಡಿಯ ಬಲಭಾಗದ ಕಟ್ಟೆಯ ಮೇಲೆ ಕುಳಿತೆ. ಸ್ವಲ್ಪ ಹೊತ್ತು ಆ ಕಡೆ ಈ ಕಡೆ ಗಮನ ಹರಿಸಿ “ಬಸಪ್ಪ ಕಾಕಾ ಎಲ್ಲಿ? ಕಾಣಸ್ತಿಲ್ಲ. ಆತನಿಗೆ ನೋಡದೇ ಬಹಳ ವರ್ಷಗಳಾಗಿವೆ, ಇವತ್ತು ಅವನಿಗೆ ಮುದ್ದಾಮ ನೋಡುವ ಸಲುವಾಗೇ ಬಂದಿದ್ದೇನೆ” ಅಂತ ಹೇಳಿದಾಗ ಶಂಕ್ರುನ ಕಣ್ಣು ತೇವಗೊಂಡವು. ಕಂಠ ಬಿಗಿದು ಆತನ ಬಾಯಿಂದ ಮಾತೇ ಹೊರಡಲಿಲ್ಲ. ದುಃಖಭರಿತನಾಗಿ ಮೇಲ್ಗಡೆ ಕಟ್ಟಿದ ಫೋಟೋದ ಕಡೆ ದೃಷ್ಟಿ ಹಾಯಿಸಿದ. ನಾನೂ ಆತನ ದೃಷ್ಟಿಯೊಂದಿಗೆ ದೃಷ್ಟಿಗೂಡಿಸಿ ಮೇಲೆ ನೋಡಿದೆ, ಸಾಲಾಗಿ ಕಟ್ಟಿದ ದೇವರ ಫೋಟೋದ ಕೆಳಗೆ ಬಸಪ್ಪ ಕಾಕಾನ ಫೋಟೋ, ಅದಕ್ಕೊಂದು ಹೂವಿನ ಹಾರ ಕೂಡ ಹಾಕಲಾಗಿತ್ತು. ಆಗ ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಜೀವವಿಲ್ಲದ ಭಾವಚಿತ್ರ ನನ್ನ ಎಲ್ಲ ಪ್ರಶ್ನೆಗೂ ಉತ್ತರ ನೀಡಿತು. ಯಾವ ವಿಷಯ ಹೇಳದಿದ್ದರು ಬಸಪ್ಪ ಕಾಕಾ ತೀರಿ ಹೋದ ವಿಷಯವಾದರು ಹೇಳಬೇಕಿತ್ತು. ಕೊನೆಯ ಬಾರಿಯಾದರು ಆತನ ಮುಖ ನೋಡಿ ಮಣ್ಣು ಹಾಕುತ್ತಿದ್ದೆ ಅಂತ ಯೋಚಿಸಿ ಕೋಪಗೊಂಡೆ. ಬಸಪ್ಪ ಕಾಕಾ ಇಲ್ಲದ ಅಂಗಡಿಯ ಮುಂದೆ ಕೂಡಲು ಮನಸ್ಸಾಗಲಿಲ್ಲ. ಭಾರವಾದ ಮನಸ್ಸಿನಿಂದ ಅಲ್ಲಿಂದ ಎದ್ದು ಊರ ಕಡೆ ಹೆಜ್ಜೆಹಾಕಿದೆ ದಾರಿಯುದ್ದಕ್ಕೂ ಬಸಪ್ಪ ಕಾಕಾನ ನೆನಪೇ ಕಾಡಿತು!!

About The Author

ಶರಣಗೌಡ ಬಿ ಪಾಟೀಲ, ತಿಳಗೂಳ

ಶರಣಗೌಡ ಬಿ ಪಾಟೀಲ ಮೂಲತಃ  ಕಲಬುರಗಿ ಜಿಲ್ಲೆಯ ತಿಳಗೂಳದವರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ ಕಾದಂಬರಿ ಲಲಿತ ಪ್ರಬಂಧ ಸೇರಿ ಇವರ ಎಂಟು ಕೃತಿಗಳು ಪ್ರಕಟವಾಗಿವೆ. ಕಸಾಪ ಬೆಂಗಳೂರಿನಿಂದ ಮಾಣಿಕರಾವ ದತ್ತಿ ಪುಸ್ತಕ ಪ್ರಶಸ್ತಿ, ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಕಾದಂಬರಿ ಪ್ರಶಸ್ತಿ, ಗುರುಕುಲ ಪ್ರತಿಷ್ಠಾನದ ಸಾಹಿತ್ಯ ಶರಭ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ