Advertisement
ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆ’ ಇಂದಿನಿಂದ

ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆ’ ಇಂದಿನಿಂದ

‘ನಾನಿರೋದೇ ಹೀಗೇನೇ… ನಾನೇನೂ ಇದರಿಂದ ಕಲಿಯೋದಿಲ್ಲವೆಂದು ನಾವು ಅಹಮಿಕೆ ತೋರಿದೆವೋ, ಅಲ್ಲಿಗೆ ಮುಗೀತು ನಮ್ಮ ಬದುಕು! ಅದು ಕಬ್ಬಿಣದ ಕಡಲೆಯಂತಾಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಯನ್ನು ಪಾಠ ಮಾಡಿ ಪರೀಕ್ಷೆ ಮಾಡ್ತಾರೆ! ಆದರೆ ಬದುಕು ಉಲ್ಟಾ. ಅದು ಪರೀಕ್ಷೆ ಮಾಡಿ ಪಾಠ ಕಲಿಸುತ್ತಾ ಹೋಗುತ್ತದೆ! ಬದುಕಿಗೆ ಬಾಗಿದರೆ ಅದು ನಮ್ಮನ್ನು ಬೀಗುವಂತೆ ಮಾಡುತ್ತದೆ. ಇಲ್ಲದಿರೆ ಬದುಕು ನಮ್ಮ ಪಾಲಿಗೆ ನಾವೇ ಗುರಿಯಿಟ್ಟು ಹೊಡಿಸಿಕೊಳ್ಳುವ ಬಂದೂಕಿನಂತಾಗುತ್ತದೆʼ.
ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆʼ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಭೂಮಿ ಮೇಲಿರುವ ಸಕಲ ಜೀವಿಗಳಲ್ಲಿ ಮನುಷ್ಯನೇ ಬುದ್ಧಿವಂತ ಜೀವಿ ಎಂದವನು ಭಾವಿಸಿದ್ದಾನೆ. ಅಸಲಿಗೆ ಮನುಜನಿಗೆ ಭೂಮಿ ಅನಿವಾರ್ಯ; ಭೂಮಿಗೆ ಮನುಜ ಅನಿವಾರ್ಯವೇ ಅಲ್ಲ ಎಂದರೆ ನೀವು ನಂಬಲೇಬೇಕು. ಹಾಗೆ ನೋಡಿದರೆ ಮನುಜನ ಉಗಮವಾದ ಮೇಲೆಯೇ ಭೂಮಿಗೆ ತೊಂದರೆ ಆಗಿರೋದು. ತನ್ನ ಸ್ವಾರ್ಥಪರತೆ, ದುರಾಸೆ, ಕೊಳ್ಳುಬಾಕತನ, ದ್ವೇಷ, ತಾವೇ ಗ್ರೇಟ್ ತಮ್ಮ ನಂಬಿಕೆಯೇ ಗ್ರೇಟ್ ಎಂಬ ಮನೋಭಾವದಿಂದ ಸೌರಮಂಡಲದಲ್ಲಿ ಜೀವಿಗಳಿರುವ ಈ ಸುಂದರ ಭೂಮಿಯನ್ನು ಹಾಳುಗೆಡವುತ್ತಿದ್ದಾನೆ. ಮಾನವೀಯ ಮೌಲ್ಯಗಳ ನೆಲೆಯಲ್ಲಿ ಯೋಚಿಸಿದಾಗ ಅವು ದಿನೇ ದಿನೇ ಅಧಃಪತನವಾಗುತ್ತಿರೋದು ಕರ್ಣಕಠೋರ ಸತ್ಯ. ಹಣದ ಹಿಂದೆ ಓಡುತ್ತಿರುವವರಿಗೆ ಮೌಲ್ಯಗಳ ಬಗ್ಗೆ ಹೇಳಿದರೆ ‘ಹೊಳೆಯಲ್ಲಿ ಹುಣಸೇ ಹಿಂಡಿದಂತೆ ವ್ಯರ್ಥ’! ಹಾಗಂತ ಎಲ್ರೂ ಹಾಗೆ ಇರ್ತಾರ? ಖಂಡಿತಾ ಇರೋಲ್ಲ. ಕೆಲವರು ವಸ್ತುಗಳ ಹಿಂದೆ ಬಿದ್ದು ಬದುಕನ್ನು ಸವೆಸಿದರೆ, ಕೆಲವರು ತಮಗಿರುವ ಭಾಗ್ಯವ ನೆನೆದು ಬದುಕನ್ನು ಸವಿಯುತ್ತಾರೆ. ಆದರೆ ಇಂತವರ ಸಂಖ್ಯೆ ವಿರಳಾತಿವಿರಳ.

ಕೆಲವರು ತಮ್ಮ ಬದುಕಿನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳನ್ನು, ಅನುಭವಗಳನ್ನು ಓದಿಯೋ, ಕೇಳಿಯೋ, ಅನುಭವಿಸಿಯೋ ತಿಳಿದು ಅದರಿಂದ ಪಾಠ ಕಲಿತು ಮುಂದೆ ಸಾಗಿ ತಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳುವರು. ‘ಅನುಭವವೇ ಶಿಕ್ಷಣ’ ಎಂಬಂತೆ ಎಲ್ಲವನ್ನೂ ನಾವೇ ಅನುಭವಿಸಿ ಪಾಠ ಕಲಿಯುವಷ್ಟು ಬದುಕು ದೊಡ್ಡದಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ನಾವು ಕಷ್ಟಕ್ಕೆ ಗುರಿಯಾಗಬೇಕಾದೀತು. ಆಯುಷ್ಯವನ್ನು ಪಾಠ ಕಲಿಯುತ್ತಲೇ ಕಳೆಯಬೇಕಾದೀತು! ಆದರೆ ಮತ್ತೊಬ್ಬರ ಅನುಭವದಿಂದ ಪಾಠ ಕಲಿಯೋದು ಬುದ್ಧಿವಂತನ ಲಕ್ಷಣ. ಈ ಅನುಭವಗಳು ನಮ್ಮ ಸುತ್ತಮುತ್ತಲೂ ನಡೆದಿರಬಹುದು, ನಡೆಯದಿರಬಹುದು. ನಮ್ಮ ಪರಿಧಿಯ ವ್ಯಾಪ್ತಿ ಮೀರಿ ನಮ್ಮ ಸುತ್ತಮತ್ತಲೂ ನಡೆಯದಿರುವ ಘಟನೆಗಳಿಂದ ನಾವು ಹೇಗೆ ಪಾಠ ಕಲಿಯಬಹುದು ಎಂದಿರಾ? ಇದಕ್ಕೆ ಸಾಹಿತ್ಯವೇ ದಾರಿ. ‘ದೇಶ ಸುತ್ತು ಕೋಶ ಓದು’ ಎಂಬ ಮಾತು ಓದಿನ ಮಹತ್ವ ತಿಳಿಸುತ್ತದೆ. ಜಗವ ಸುತ್ತಲೂ ನಮ್ಮ ಬಳಿ ಸಾಕಷ್ಟು ಹಣವಿಲ್ಲವೆಂದಾದರೆ ನಾವು ಓದಿನ ಮೂಲಕ ಅವುಗಳ ದರ್ಶನ ಮಾಡಬಹುದು. ಅನುಭವಗಳ ಗಣಿಯೇ ನೀವಾಗಬಹುದು!

ಮಾನವ ತನ್ನ ಜೀವನವನ್ನು ಸುಗಮಗೊಳಿಸಿಕೊಳ್ಳಲು ಹಲವಾರು ಉಪಕರಣಗಳನ್ನು ಕಂಡುಕೊಂಡಿದ್ದಾನೆ. ಇವುಗಳ ಸಹಾಯದಿಂದ ಅವನ ಕೆಲಸ ಹಗುರವಾಗಿದೆ. ಅದರಲ್ಲಿ ಕಬ್ಬಿಣದ ಉಪಕರಣಗಳೂ ತುಂಬಾ ಸಹಾಯವಾಗುತ್ತಿವೆ. ಆ ಉಪಕರಣಗಳು ಆಕಾರಕ್ಕೆ ಬರುವುದು, ತಮ್ಮ ಮೊನಚು ಕಂಡುಕೊಳ್ಳುವುದು, ತಮ್ಮ ಆಕಾರ ಬದಲಿಸಿಕೊಳ್ಳುವುದು ಕುಲುಮೆಯಲ್ಲಿ. ಅವು ಬೆಂಕಿಯಲ್ಲಿ ಕಾದು ಕುಲುಮೆಯವನಿಂದ ಬಡಿಸಿಕೊಂಡಾಗಲೇ ಒಂದು ಆಕಾರಕ್ಕೆ ಬರುವುದು. ರೂಪಾಂತರವಾಗುವುದು, ರೂಪಾಂತರ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದೇ ರೀತಿ ಬದುಕೂ ಅಷ್ಟೇ. ಸುಮ್ಮನೇ ಹುಟ್ಟಿ ಸುಮ್ಮನೇ ಸಾಯೋದಲ್ಲ. ಮಾವನನಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು. ಸಾಧಿಸಲು ಸುಮ್ಮನಿದ್ದರೆ ಸಾಲದು. ಕುಲುಮೆಯಲ್ಲಿ ಕಬ್ಬಿಣವು ಯಾವ ರೀತಿ ತನ್ನ ಮೈಯನ್ನು ಬೆಂಕಿಗೊಡ್ಡಿ ಕಾದು, ಕಾದು ಕೆಂಪಗಾಗಿ ತದ ನಂತರ ಸುತ್ತಿಗೆಯಿಂದ ಬಡಿಸಿಕೊಂಡು ತನ್ನನ್ನು ತಾನು ಬದಲಾಯಿಸಿಕೊಳ್ಳುವುದೋ ಅದೇ ರೀತಿ ಬದುಕೆಂಬ ಕುಲುಮೆಯಲ್ಲಿ ನಾವೂ ಪ್ರಯೋಗಶೀಲತೆಗೆ ಒಳಗಾಗಬೇಕು, ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ಬದುಕು ನಮಗೆ ಸುಂದರವಾಗುತ್ತದೆ.

‘ನಾನಿರೋದೇ ಹೀಗೇನೇ… ನಾನೇನೂ ಇದರಿಂದ ಕಲಿಯೋದಿಲ್ಲವೆಂದು ನಾವು ಅಹಮಿಕೆ ತೋರಿದೆವೋ, ಅಲ್ಲಿಗೆ ಮುಗೀತು ನಮ್ಮ ಬದುಕು! ಅದು ಕಬ್ಬಿಣದ ಕಡಲೆಯಂತಾಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಯನ್ನು ಪಾಠ ಮಾಡಿ ಪರೀಕ್ಷೆ ಮಾಡ್ತಾರೆ! ಆದರೆ ಬದುಕು ಉಲ್ಟಾ. ಅದು ಪರೀಕ್ಷೆ ಮಾಡಿ ಪಾಠ ಕಲಿಸುತ್ತಾ ಹೋಗುತ್ತದೆ! ಬದುಕಿಗೆ ಬಾಗಿದರೆ ಅದು ನಮ್ಮನ್ನು ಬೀಗುವಂತೆ ಮಾಡುತ್ತದೆ. ಇಲ್ಲದಿರೆ ಬದುಕು ನಮ್ಮ ಪಾಲಿಗೆ ನಾವೇ ಗುರಿಯಿಟ್ಟು ಹೊಡಿಸಿಕೊಳ್ಳುವ ಬಂದೂಕಿನಂತಾಗುತ್ತದೆ. ‘ಬದುಕು ಒಂದು ಜಟಕಾಬಂಡಿ’ಯೆಂದು ಹೋಲಿಸುವುದಾದರೆ ಅದನ್ನು ನಾವೇ ದೂಕುವಂತೆ ಸರಾಗ ಮಾಡಿಕೊಳ್ಳಬೇಕು. ಬೇರೆಯವರ ಬಳಿ ದೈನ್ಯತೆಯಿಂದ ನಮ್ಮ ಬದುಕಿನ ಬಂಡಿ ಮುಂದೆ ಸಾಗಲು ‘ಬಾ ದೂಕು… ಬಾ ದೂಕು’ ಎಂದು ಬೇಡಿಕೊಳ್ಳುವಂತಾಗಬಾರದು.

ಸಾಕಪ್ಪಾ ಇದು. ಬದುಕಿನ ಬಗ್ಗೆ ಇಷ್ಟು ವೇದಾಂತ ಹೇಳೋನು ಇವನ್ಯಾರಪ್ಪಾ? ಎಂದು ಬಯ್ಕೋಬೇಡಿ. ಬದುಕಿನ ಬಗ್ಗೆ ಉಪನ್ಯಾಸ ಕೊಡೋವಷ್ಟು ನಾನು ವೇದಾಂತಿಯಲ್ಲ. ಸಂನ್ಯಾಸಿಯಂತೂ ಮೊದಲೇ ಅಲ್ಲ. ಮಾಗಿದ ವಯಸ್ಸಿನವನೂ ನಾನಲ್ಲ. ‘ಎನಗಿಂತ ಅತಿ ಕಿರಿಯವರಿಲ್ಲ’ ಎಂಬ ಮನೋಭಾವವನ್ನೊಳಗೊಂಡವನಾದ ನಾನು ನಲವತ್ತರ ಆಸುಪಾಸಿನವನು. ಸುಮ್ಮನಂತೂ ಕೂರುವವನಲ್ಲ. ಏನಾದ್ರೂ ಮಾಡ್ತಾ ಇರಬೇಕು ಎಂದು ಹಪಹಪಿಸುವವನು. ಸ್ನೇಹ ಜೀವಿ. ಯಾವುದನ್ನೇ ಆಗಲಿ ಬೇಗನೇ ನಂಬುವ ಗುಣವಿರುವವನು. ವೃತ್ತಿಯಲ್ಲಿ ಮೇಷ್ಟ್ರು. ಕೆಲವೊಮ್ಮೆ ಮನದ ಸಂಕಟಗಳನ್ನು ಕವನ, ಲೇಖನದ ಮೂಲಕ ಗೀಜುತ್ತೇನೆ. ನಂಬುವ ಉದಾರದ ಗುಣದಿಂದಲೋ ಏನೋ ಹಲವಾರು ಸಲ ನಾನು ಕೆಲವರಿಂದ ಮೋಸಕ್ಕೂ ಒಳಗಾಗಿದ್ದೇನೆ. ಪೇಚಿಗೆ ಸಿಲುಕಿಕೊಂಡಿದ್ದೇನೆ. ಬಕ್ರಾ ಆಗಿದ್ದೇನೆ. ಆದರೆ ವಿಶೇಷ ಏನಪ್ಪಾ ಅಂದ್ರೆ ಈ ರೀತಿ ಟೋಪಿ ಹಾಕಿಸಿಕೊಂಡಾಗ ‘ಅಯ್ಯೋ ನಾನು ಮೋಸಕ್ಕೆ ಒಳಗಾದೆ! ಯಾಮಾರಿದೆ! ದೇವರೇ ಮುಂದೇನು ಗತಿ’ ಎಂದು ಅಳುತ್ತಾ ಕುಳಿತಿಲ್ಲ. ಅವನ್ನು ನೆನೆದು ನಕ್ಕಿದ್ದೇನೆ, ನಗುತ್ತೇನೆ. ನಾನು ನಕ್ಕಿದ್ದಷ್ಟೇ ಅಲ್ಲ, ಅವನ್ನು ತಮಾಷೆಯ ಪ್ರಸಂಗ ರೂಪದಿ ಹೇಳಿ ಹಲವರನ್ನು ನಗಿಸಿ ಅವರೂ ಪಾಠ ಕಲಿಯುವಂತೆ ಮಾಡಿದ್ದೇನೆ!! ‘ನಗು ನಗುತಾ ನಲಿ ನಲಿ ಏನೇ ಆಗಲಿ’ ಎಂಬ ಅಣ್ಣಾವ್ರ ಹಾಡಿನಂತೆ ಜೀವಿಸುತ್ತಿದ್ದೇನೆ. ‘ನಗಲಾರದ ದಿನ ನಮ್ಮ ಜೀವನದ ವ್ಯರ್ಥದ ದಿನ’ ಎಂದು ನಂಬಿ ಬದುಕುತ್ತಿದ್ದೇನೆ. ಇದುವರೆಗಿನ ನನ್ನ ಇಂತಾ ಪೇಚಿಗೆ ಸಿಕ್ಕ ಪ್ರಸಂಗಗಳನ್ನು, ಶಾಲೆಯ ಮಕ್ಕಳ ಜೊತೆ ಇದ್ದಾಗ ಬರುವ ರಸಪ್ರಸಂಗಗಳನ್ನು ನನ್ನ ನೆನಪಿನ ಕೋಶದಿಂದ ಹೆಕ್ಕಿ ಹೆಕ್ಕಿ ಅವಕ್ಕೆ ಉಪ್ಪು ಖಾರ ಸೇರಿಸದೆಯೇ, ಹೇಗಿದಿಯೋ ಹಾಗೇ, ಏನಾಗಿತ್ತೋ ಹಾಗೆಯೇ ನಿಮ್ಮ ಮುಂದೆ ಮುಂಬರುವ ದಿನಗಳಲ್ಲಿ ಸಾದರಪಡಿಸುತ್ತೇನೆ. ಓದುಗ ದೊರೆಗಳಾದ ನೀವು ಅವನ್ನು ಓದಿರಿ. ನಗು ಬಂದರೆ ನಕ್ಕು ನಲಿಯಿರಿ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. Sridhara tk

    ಬಸವನ ಗೌಡ್ರ ಬದುಕಿನ ಕುಲುಮೆಯ ಸರಣಿ ಮುಂದುವರೆಯಲಿ ಒಳ್ಳೆಯದಾಗಲಿ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ