Advertisement
ಬಾಬ್ಬಿ ಎಂಬ ಪ್ರೇಮದ ಕುರುಹನ್ನು ಹುಡುಕಿಕೊಂಡು…

ಬಾಬ್ಬಿ ಎಂಬ ಪ್ರೇಮದ ಕುರುಹನ್ನು ಹುಡುಕಿಕೊಂಡು…

ತಲೆಯೊಳಗೆ ಬಲ್ಬಿನ ಥಕಪಕ ಕುಣಿತ. ‘ಅರೆ, ಇವನು ಅವನೇ ಅಲ್ವಾ? ಎಲ್ಲಿದ್ದಾನೆ? ನಾನು ಯಾಕೆ ಅವನನ್ನು ನೋಡದೆಯೇ, ಭೇಟಿ ಮಾಡದೆ ವಾಪಸ್ಸು ಬಂದುಬಿಟ್ಟೆ? ಛೆ ಛೆ, ಅವನೂರಿಗೆ ಬಂದು ಅವನನ್ನು ಮುದ್ದು ಮಾಡದೆ, ಅಪ್ಪಿಕೊಳ್ಳದೆ… ಓಹ್…’ ಸ್ವಾಗತ ಕೊಠಡಿಗೆ ಕರೆ ಮಾಡಿದೆ. ಅವನ ವಿಳಾಸ ಸಿಕ್ಕಿತು. ಅಯ್ಯೋ, ಅವನನ್ನು ನೋಡದೆಯೇ ಆ ರಾತ್ರಿ ಕಳೆಯಬೇಕಿತ್ತು. ಸೂರ್ಯ ಕರೆಗಂಟೆ ಒತ್ತಿದ್ದೆ ತಡ, ಗಡಿಬಿಡಿಸಿಕೊಂಡು ಬೆಚ್ಚನೆಯ ಬಟ್ಟೆ ತೊಟ್ಟು ಅವನಲ್ಲಿಗೆ ಓಡತೊಡಗಿದೆ.
‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಬಾಬ್ಬಿ ಎಂಬ ಅಪ್ರತಿಮ ಸಂಗಾತಿಯ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ.

 

ಹೌದು, ಲಕ್ನೋದಿಂದ ಹೊರಹೋಗುವ ಮೊದಲು ಇಲ್ಲಿ ನೋಡಿದ ಇನ್ನೊಂದೆರಡು ಜಾಗಗಳ ಬಗ್ಗೆ ಹೇಳಲೇಬೇಕು ಎಂದುಕೊಳ್ಳುತ್ತಿರುವಾಗಲೇ ‘ಈ ಸರ್ತಿಯ ಹೊಸ ವ್ಯಾಲೆಂಟೈನ್ ಯಾರಮ್ಮ’ ಎಂದು ದೂರದೂರಿನವ ಮೇಸೇಜ್ ಮಾಡಿದ. ಹೌದಲ್ಲ್ವಾ ನಾಳೆಯೋ ನಾಡಿದ್ದೋ ವ್ಯಾಲೆಂಟೈನ್ಸ್ ಡೇ ಇದೆ. ನನ್ನ ವ್ಯಾಲೆಂಟೈನ್ ಮಾತ್ರ ಅವತ್ತಿನಿಂದ ಇವತ್ತಿನವರೆಗೂ ಅವನೇ ಎನ್ನುವುದು ನೆನಪಾಗಿ ಮನಸೆಲ್ಲಾ ಪರಿಮಳವಾಯಿತು.

ಅವತ್ತು ಎಳೆ ಬಿಸಿಲಿತ್ತು ಆದರೂ ಚಳಿಚಳಿಯೂ ಆಗುತ್ತಿತ್ತು. ಅರ್ಥ ಮಾಡಿಕೊಳ್ಳಲು ತಿಣುಕಾಡ ಬೇಕಿರುವ ಶೈಲಿಯಲ್ಲಿ ಇಂಗ್ಲೀಷ್ ಮಾತನಾಡುತ್ತಿದ್ದ ಟಿಮ್ ಮೃದುವಾಗಿ ಕೈ ಹಿಡಿದು ಬಸ್ಸು ಹತ್ತಿಸಿಕೊಂಡ. ಮುತುವರ್ಜಿಯಿಂದ ತನ್ನ ಸೀಟಿನ ಹತ್ತಿರದಲ್ಲಿಯೇ ಕುಳ್ಳಿರಿಸಿಕೊಂಡ. ಸರಿ, ಚಲನೆ ಪ್ರಾರಂಭವಾಯಿತು. ಅವನದ್ದು ಅಸ್ಖಲಿತ ಮಾತು ಆದರೂ ಅರೆಬರೆ ಅರ್ಥವಾಗುತ್ತಿತ್ತು. ಹೊಟ್ಟೆಯೊಳಗೆ ಹದವಾಗಿ ಬೋರಲಾಗಿದ್ದ ಬೆಳಗಿನ ತಿಂಡಿಯನ್ನು ಬಸ್ಸಿನಲ್ಲಿದ್ದ ಬೆಚ್ಚನೆಯ ಹವೆ ಮೋಹಿಸಲು ಶುರುವಿಟ್ಟಿದ್ದೇ ತಡ ರೆಪ್ಪೆಗಳು ಪೈಪೋಟಿಗೆ ಬಿದ್ದಂತೆ ಒಂದನ್ನೊಂದು ಮುತ್ತಿಡಲು ಮುನ್ನುಗ್ಗುತ್ತಿದ್ದವು. ಒಟ್ಟಿನಲ್ಲಿ ಮಧ್ಯಾಹ್ನದ ಊಟದ ಹೊತ್ತಿನವರೆಗೂ ಜೂಗರಿಸುತ್ತಲೇ ಇದ್ದೆ. ಅದೆಲ್ಲೋ ದೂರದಲ್ಲಿ ಅದು ಯಾವುದೋ ಪ್ರತಿಮೆಯಂತೆ ಮಿರಮಿರ ಮಿಂಚುತ್ತಿದ್ದ ಕರಿಕಲ್ಲನ್ನು ತೋರಿ ಇನ್ನೂ ಅದೇನೇನೋ ಹೇಳುತ್ತಿದ್ದ ಟಿಮ್. ನನಗೋ ಯುಗಾಂತರಗಳ ತೂಕಡಿಕೆ. ಸಂಜೆ ಬಸ್ಸಿನಿಂದ ಇಳಿಯುವಾಗಲೂ ಬೆಳಗಿನ ಹಾಗೆಯೇ ಮೃದುವಾಗಿ ಕೈಹಿಡಿದು ಇಳಿಸಿದ. ಅಲ್ಲಿಗೆ ಸ್ಕಾಟ್ಲ್ಯಾಂಡಿನ ಎಡಿನ್‌ಬರೋ ನಗರದ ಒಂದು ದಿನದ ನೋಡುವಿಕೆ ಸಂಪನ್ನವಾಗಿತ್ತು.

ಕೊಂಚ ಹೆಚ್ಚೇ ಆಗಿದ್ದ ಚಳಿಯಿತ್ತು. ತಂಗುದಾಣದ ಕೋಣೆಗೆ ಬಂದು ಬಿಸಿಬಿಸಿ ನೀರಿನ ಸಂಗಕ್ಕೆ ಬಿದ್ದ ನಂತರ ಮನಸ್ಸು, ಮೈ ಪ್ರವಾಸಕ್ಕೆ ತಯಾರಾಯ್ತು. ಆದರೇನು ಮಾಡೋದು ಆಗ ಕತ್ತಲೆಯಾಗಿಬಿಟ್ಟಿತ್ತು. ಅಲ್ಲಿಯೇ ಟೇಬಲ್ ಮೇಲಿದ್ದ ಆ ಊರಿನ ಮಾಹಿತಿ ಪುಸ್ತಕ ಕೈಗೆತ್ತಿಕೊಳ್ಳಲು ಬಗ್ಗಿದೆ, ಟಿಮ್ ಹೇಳಿದ Bobby ಎನ್ನುವ ಪದ “ಜೀವನ ಟಾನಿಕ್ ಬಾಟ್ಲೀ; ಕುಡಿಯೋ ಮುಂಚೆ ಅಲ್ಲಾಡ್ಸು… ಅಲ್ಲಾಡ್ಸು…” ಎನ್ನುವಂತೆ ರಿಂಗುಣಿಸಿತು. ತಲೆಯೊಳಗೆ ಬಲ್ಬಿನ ಥಕಪಕ ಕುಣಿತ. ‘ಅರೆ, ಇವನು ಅವನೇ ಅಲ್ವಾ? ಎಲ್ಲಿದ್ದಾನೆ? ನಾನು ಯಾಕೆ ಅವನನ್ನು ನೋಡದೆಯೇ, ಭೇಟಿ ಮಾಡದೆ ವಾಪಸ್ಸು ಬಂದುಬಿಟ್ಟೆ? ಛೆ ಛೆ, ಅವನೂರಿಗೆ ಬಂದು ಅವನನ್ನು ಮುದ್ದು ಮಾಡದೆ, ಅಪ್ಪಿಕೊಳ್ಳದೆ… ಓಹ್…’ ಸ್ವಾಗತ ಕೊಠಡಿಗೆ ಕರೆ ಮಾಡಿದೆ. ಅವನ ವಿಳಾಸ ಸಿಕ್ಕಿತು. ಅಯ್ಯೋ, ಅವನನ್ನು ನೋಡದೆಯೇ ಆ ರಾತ್ರಿ ಕಳೆಯಬೇಕಿತ್ತು. ಸೂರ್ಯ ಕರೆಗಂಟೆ ಒತ್ತಿದ್ದೆ ತಡ, ಗಡಿಬಿಡಿಸಿಕೊಂಡು ಬೆಚ್ಚನೆಯ ಬಟ್ಟೆ ತೊಟ್ಟು ಅವನಲ್ಲಿಗೆ ಓಡತೊಡಗಿದೆ. ನಾನಿದ್ದ ಜಾಗದಿಂದ ಒಂದು ಇಪ್ಪತ್ತೈದು ಹೆಜ್ಜೆ ನಡೆದು, ಕೇವಲ ಒಂದರವತ್ತು ಮೆಟ್ಟಲುಗಳನ್ನು ಹತ್ತಿ, ಅತ್ತ ಬದಿಯಲ್ಲಿ ಇಳಿದು, ಏರುದಾರಿಯಲ್ಲಿ ಬರೀ ಎರಡೇ ಕಿಲೋಮೀಟರ್ಗಳಷ್ಟು ನಡೆದರೆ ಅವನ ದರ್ಶನವಾಗುತ್ತಿತ್ತು.

ಅದೆಲ್ಲೋ ದೂರದಲ್ಲಿ ಅದು ಯಾವುದೋ ಪ್ರತಿಮೆಯಂತೆ ಮಿರಮಿರ ಮಿಂಚುತ್ತಿದ್ದ ಕರಿಕಲ್ಲನ್ನು ತೋರಿ ಇನ್ನೂ ಅದೇನೇನೋ ಹೇಳುತ್ತಿದ್ದ ಟಿಮ್. ನನಗೋ ಯುಗಾಂತರಗಳ ತೂಕಡಿಕೆ. ಸಂಜೆ ಬಸ್ಸಿನಿಂದ ಇಳಿಯುವಾಗಲೂ ಬೆಳಗಿನ ಹಾಗೆಯೇ ಮೃದುವಾಗಿ ಕೈಹಿಡಿದು ಇಳಿಸಿದ.

ಏದುಸಿರು ಬಿಡುತ್ತಲೇ, ಕದ್ದುಮುಚ್ಚಿ ಪ್ರೇಮಿಯ ನೋಡುವಾಗ ಇರುವ ಕಾತುರದಿಂದ ಅವನಲ್ಲಿಗೆ ನಡೆದೆ. ಸಿಕ್ಕ, ಸಿಕ್ಕ, ಸಿಕ್ಕಿಯೇ ಬಿಟ್ಟ Bobby. ಅದೆ ನೆನ್ನೆ ಟಿಮ್ ದೂರದಿಂದ ತೋರಿದ್ದನಲ್ಲ ಪ್ರತಿಮೆಯಂತೆ ಮಿರಮಿರ ಮಿಂಚಿತ್ತಿದ್ದ ಕರಿಕಲ್ಲು, ಅದರ ಮೇಲ್ತುದಿಯಲ್ಲಿ ತಣ್ಣಗೆ ಕುಳಿತಿದ್ದ. ಕೆಳಭಾಗದಲ್ಲಿ ಕಂಚಿನ ತಟ್ಟೆಯನ್ನು ಅಂಟಿಸಿ ಅದರ ಮೇಲೆ ಬರೆಯಲಾಗಿತ್ತು “Greyfriars Bobby, ಮರಣ: 14, ಜನವರಿ, 1872; ವಯಸ್ಸು: 16 ವರ್ಷ”. ಒಂದೇ ಕ್ಷಣದಲ್ಲಿ ಅವನನ್ನು ಅಪ್ಪಿ ಮುದ್ದಾಡಿ, ತಲೆ ಸವರುತ್ತಿದ್ದಾಗ ಹೀಗೆ ಮಾಡಿಸಿಕೊಳ್ಳಲು Jhon Gray ಕೂಡ ಇಲ್ಲಿ ಇರಬಾರದಿತ್ತೇ ಎಂದುಕೊಂಡೆ. ಇವನೊಬ್ಬ ಮಾಲಿ. 1850ರಲ್ಲಿ ತನ್ನ ಹೆಂಡತಿ ಮಗನೊಂದಿಗೆ ಈ ಊರಿನಲ್ಲಿ ಬದುಕು ಕಟ್ಟಿಕೊಳ್ಳಲು ಬರುತ್ತಾನೆ. ಆದರೆ ನಿರುದ್ಯೋಗ ಬಾಧಿಸಿದಾಗ ಸರ್ಕಾರದ ಪೊಲೀಸ್ ವ್ಯವಸ್ಥೆಯಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಮೊದಲೇ ಅಲ್ಲಿ ಕಠಿಣ ಹವಾಮಾನ, ಚಳಿಗಾಲದಲ್ಲೋ ಪ್ರಕೃತಿಯದ್ದು ರುದ್ರಿಯ ಅವತಾರ. ಕಾವಲು ಕಾಯಬೇಕಿದ್ದ ರಾತ್ರಿಗಳನ್ನು ಕಳೆಯಲು ಅವನು ಪುಟಾಣಿ Bobbyಯ ಸಂಗ ಕಟ್ಟಿಕೊಳ್ಳುತ್ತಾನೆ. ವಯಸ್ಸು, ಪ್ರಭೇದಗಳ ಅಂತರವಿಲ್ಲದೆ ಅದೆಷ್ಟೋ ವರ್ಷಗಳು ಅವರಿಬ್ಬರೂ, ಆ ಊರಿನ ಗಲ್ಲಿಗಲ್ಲಿಗಳಲ್ಲೂ ‘ಕುಚಿಕು ಕುಚಿಕು ಕುಚಿಕು ನಾವು ಚಡ್ಡಿ ದೋಸ್ತು ಕಣೊ ಕುಚಿಕು’ ಎಂದು ಹಾಡಿಕೊಳ್ಳುತ್ತಾ ಪರಸ್ಪರರಿಗೆ ಜೀವಕ್ಕಿಂತ ಜಾಸ್ತಿಯಂತೆಯೇ ಆಗಿರುತ್ತಾರೆ. ಆದರೇನು ಇದ್ದಷ್ಟೇ ಆಯಸ್ಸು ತಾನೆ, Jhon Gray ಅನಾರೋಗ್ಯದಿಂದ ಕಣ್ಣು ಮುಚ್ಚುತ್ತಾನೆ. ಅವನನ್ನು Greyfriars Kirkyard ಎನ್ನುವ ಚರ್ಚಿನ ಹೂಳಂಗಳದಲ್ಲಿ ಮಣ್ಣು ಮಾಡಲಾಗುತ್ತದೆ.

ಅಂದಿನಿಂದ, ಆ ಘಳಿಗೆಯಿಂದ, ಚಳಿ, ಮಳೆ, ಬಿಸಿಲು, ಹಿಮಪಾತಗಳನ್ನು ಲೆಕ್ಕಿಸದೆ ಅರೆ ನಿಮಿಷವೂ ಬಿಡದೆ Bobby ತನ್ನ ಗೆಳೆಯನ ಸಮಾಧಿಯ ಬದಿಯಲ್ಲಿಯೇ ಇರುತ್ತಿದ್ದ. ಚರ್ಚಿನ ಆಡಳಿತ ಮಂಡಳಿ ಅನೂಹ್ಯ ಕಾಟಗಳನ್ನು ಕೊಟ್ಟು ಅವನನ್ನು ಅಲ್ಲಿಂದ ಹೊರದಬ್ಬಲು ಪ್ರಯತ್ನ ಪಟ್ಟರೂ ಅವನು ಅದು ಹೇಗೋ, ತಾಳ್ಮೆ, ಸಹನೆಯಿಂದ, ಪ್ರೀತಿಯ ಮೂರ್ತರೂಪದಂತೆ ಅಲ್ಲಿಯೇ ಇರುತ್ತಿದ್ದ. ಕೊನೆಗೂ ಸೋತ ಚರ್ಚಿನ ಮಂದಿ ಅಲ್ಲಿಯೇ ಅವನಿಗೊಂದು ಪ್ಲಾಸ್ಟಿಕಿನ ಸೂರು ಹಾಕಿಕೊಡುತ್ತಾರೆ. ಮಧ್ಯಾಹ್ನ ಹತ್ತು ನಿಮಿಷಗಳು ಮಾತ್ರ ಧಾವಂತದಲ್ಲಿಯೇ ಓಡಿ ಹೋಗಿ ತನ್ನ ಗೆಳೆಯನೊಡನೆ ನಿತ್ಯವೂ ಹೋಗುತ್ತಿದ್ದ ಕಾಫೀ ಬಾರೊಂದಕ್ಕೆ ಹೋಗಿ ಅವರುಗಳು ಕೊಟ್ಟಿದ್ದನ್ನು ತಿಂದು ಬರುತ್ತಿದ್ದ ಅಷ್ಟೆ. ಅವನ ಈ ಪರಿಗೆ ಸೋತು ಶರಣಾದ ಆ ಊರಿನ ಜನ Bobby ಒಂದು ‘ನಾಯಿ’ ಎನ್ನುವುದನ್ನು ಮರೆತು ಎಗ್ಗುಸಿಗ್ಗಿಲ್ಲದೆ ಪ್ರೀತಿಸತೊಡಗುತ್ತಾರೆ. ಕೆಲವೇ ದಿನಗಳಲ್ಲಿ ಅಲ್ಲಿನ ಸರ್ಕಾರ ಲೈಸೆನ್ಸ್ ಇಲ್ಲದ ನಾಯಿಗಳನ್ನು ಹಿಡಿದು ಕೊಲ್ಲಲಾಗುತ್ತದೆ ಎನ್ನುವ ಆದೇಶ ಹೊರಡಿಸಿದಾಗ ತಂಡತಂಡದಲ್ಲಿ ಸಾವಿರಾರು ಜನ ಅವನ ರಕ್ಷಣೆಗೆ ಬಂದು ನಿಲ್ಲುತ್ತಾರೆ. ಜನರ ಮನವಿಗೆ ಮಣಿದು ಆಗ ಆ ಊರಿನ ರಾಜನಾಗಿದ್ದ Sir William Chambers ಅನುಮತಿ ಪತ್ರ ಪಡೆದುಕೊಂಡು Bobbyಯ ಕೊರಳಿಗೆ ಕಂಚಿನ ಪಟ್ಟಿ ಕಟ್ಟಿ ‘ನಿಷ್ಠೆ ಮತ್ತು ಪ್ರೀತಿ’ ಅನಾಥವಾಗುವುದನ್ನು, ನಿಷ್ಕರುಣವಾಗಿ ಸಾಯುವುದನ್ನು ತಪ್ಪಿಸಿ ಮನುಷ್ಯತ್ವವನ್ನು ಅಮರವಾಗಿಸುತ್ತಾನೆ. ನಂತರದ ಹದಿನಾಲ್ಕು ವರ್ಷ Bobby ಒಮ್ಮೆಯೂ ತನ್ನ ಗೆಳೆಯನ ಸಮಾಧಿಯನ್ನು ಅಗಲದೆ ಇದ್ದು ಕಣ್ಮುಚ್ಚುತ್ತಾನೆ. ಅವನನ್ನೂ ಅದೇ ಚರ್ಚಿನ ಮಣ್ಣಿನಲ್ಲಿ ಒಂದಾಗಿಸಲಾಗಿದೆ. ಆಗ ಅಲ್ಲಿನ ಸರ್ಕಾರದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದ ಆ್ಯನ್ಜೇಲಿಯಾ ಜಾರ್ಜಿಯಾನ, ಭೂಗ್ರಹದಲ್ಲಿ ಆಗಿಹೋದ ಈ ಅಪೂರ್ವ ಪ್ರೇಮಕಥೆಯ ಕುರುಹಾಗಿ, Bobbyಯ ಪ್ರತಿಮೆಯನ್ನು ಕಂಚಿನಲ್ಲಿ ಕೆತ್ತಿಸಿ ಹೀಗೊಂದು ಸ್ಮಾರಕವನ್ನಾಗಿ ಮಾಡಿದ್ದಾರೆ.

ಪ್ರತೀ ವ್ಯಾಲೆಂಟೈನ್ ದಿವಸಕ್ಕೂ Bobby ನೆನಪಾಗುತ್ತಾನೆ. ಇದ್ದರೆ ಇಂತಹ ಪ್ರೇಮಿ ಇರಬೇಕು ಎಂದು ನನ್ನೆಲ್ಲಾ ವ್ಯಾಲಎಂಟೈನ್‌ಗಳಿಗೂ ಸಂದೇಶ ಕಳುಹಿಸುತ್ತೇನೆ. ‘ಪರಸ್ಪರ ಸ್ವಲ್ಪವಾದರೂ Bobbyಯಲ್ಲಿ ಇದ್ದಷ್ಟು ಪ್ರೀತಿ ಹುಟ್ಟಲಿ ಮತ್ತು ಪ್ರೀತಿಯೇ ಒಳಹೊರಗಿನ ಪ್ರವಾಸ ಆಗಲಿ’ ಎಂದು. ಅಂದಹಾಗೆ ಲಕ್ನೋದಿಂದ ಇಂತಹದ್ದೇ ಒಂದು ಪ್ರೇಮಕಥೆ ಹೇಳುವ ಜಾಗಕ್ಕೆ ಹೋಗಿದ್ದೆ. ಹಂಚಿಕೊಳ್ಳುವೆ ಒಂದು ಮುಷ್ಠಿ ಪಾರಿಜಾತದೊಂದಿಗೆ.

About The Author

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.  ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.

5 Comments

  1. Vijayakka

    ಬೆಳ್ ಬೆಳಿಗ್ಗೆ ಕಣ್ಣು ತೇವವಾದರೂ ‘ಬಾಬ್ಬಿ’ ಮನಸ್ಸಿಗೆ ತುಂಬಾ ಖುಷಿ ತಂದ . ಥ್ಯಾಂಕ್ಸ್ ?

    Reply
  2. Shyamala Madhav

    ಬಾಬ್ಬಿಯ ಪ್ರತಿಮೆ ನನ್ನ ಹೃದಯದಲ್ಲೂ ಬಂದು ಕುಳಿತಿತ್ತು, ಅಂಜಲಿ, ಥ್ಯಾಂಕ್ಯೂ!

    Reply
  3. Kumara Raitha

    ಹೃದಯಸ್ಪರ್ಶಿ ಬರೆಹ

    Reply
  4. Gurudath

    ನಿಷ್ಕಲ್ಮಷ ಪ್ರೀತಿಯ ಸಂಕೇತವಾದ ಬಾಬಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ