Advertisement
ಬಾಲ್ಯದ ಅಟ, ಆ ಮೊಂಡಾಟ ಇನ್ನೂ ಮರೆತಿಲ್ಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ಬಾಲ್ಯದ ಅಟ, ಆ ಮೊಂಡಾಟ ಇನ್ನೂ ಮರೆತಿಲ್ಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮ ಮನೆಯಲ್ಲೋ ರಾಗಿ ಮುದ್ದೆ ಊಟ ಇರುತ್ತಿತ್ತು. ಅದು ಕಪ್ಪಾಗಿ ಇರುತ್ತಿದ್ದರಿಂದ ಉಣ್ಣೋಕೆ ಅಳುತ್ತಿದ್ದೆ. ಅಜ್ಜಿ‌ ಮನೆಯಲ್ಲಿ ಜೋಳದ ಮುದ್ದೆ ಬೆಳ್ಳಗೆ ಇರುತ್ತಿದ್ದರಿಂದ ಅದನ್ನು ಉಣ್ಣುತ್ತಿದ್ದೆ‌. ಒಮ್ಮೆ ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಕಕ್ಕಸ್ಸು ಕಪ್ಪಾದಾಗ ಬಹಳ ಬೇಸರವಾಗಿ ಮತ್ತೆ ಅಮ್ಮ ಉಣಿಸೋಕೆ ಬಂದಾಗ ಬಾಯೇ ತೆರೆಯದೇ ಊಟ ಮಾಡೋಕೆ ಹಠ ಮಾಡಿದ್ದೆ. ಅನ್ನಕ್ಕೆ ತತ್ವಾರ ಇದ್ದ ಕಾಲವದು. ಇದ್ದ ಮುದ್ದೆಯನ್ನೇ ಉಣಿಸೋಕೆ ಅಮ್ಮ, ‘ರಾಜ್ ಕುಮಾರ್ ಊಟ ಮಾಡೋದು ಇದನ್ನೇ’ ಎಂದು ಹೇಳಿದಾಗ ನಾನು ಆಶ್ಚರ್ಯದಿಂದ ‘ಹೌದಾ?’ ಎಂದು ಕೇಳಿ ರಾಗಿ ಮುದ್ದೆ ತಿನ್ನುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂರನೆಯ ಕಂತು ನಿಮ್ಮ ಓದಿಗೆ

‘ಕಲಿಕೆಯು ಶಾಲೇಲಿ ಮಾತ್ರ ಆಗುತ್ತೆ, ಮನೇಲಿ ಕಲಿಯೋದು ಏನಿರುತ್ತೆ?’ ಎನ್ನುವುದು ಬಹುತೇಕರ ಅಭಿಪ್ರಾಯ! ಇಲ್ಲಿ ಕಲಿಕೆ ಎಂಬುದನ್ನು ಶಾಲೆಯ ಪುಸ್ತಕದ ಪಾಠ, ಲೆಕ್ಕ, ಸಿಲಬಸ್, ಪರೀಕ್ಷೆ, ಅಂಕಪಟ್ಟಿ ಅಂತ ಸೀಮಿತವಾಗಿರಿಸಿರುವುದೇ ಇದಕ್ಕೆ ಕಾರಣ. ಈ‌ ಕಾರಣಕ್ಕೆ ಈಗೀಗಲಂತೂ ಮಕ್ಕಳಿಗೆ ಮೂರು ವರ್ಷ ಆಗೋದೇ ತಡ; ಪ್ರೀಕೆಜಿ ಗೆ ಸೇರಿಸಿ ಮಕ್ಕಳು ‘ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್’ ಅಂದ ಕೂಡಲೇ ಪೋಷಕರು‌ ಹಿರಿ ಹಿರಿ ಹಿಗ್ಗಿ ಹೀರೆಕಾಯಿಯಂತಾಗುತ್ತಾರೆ. ಆದರೆ ಹಿಂದೆ ಈ ರೀತಿ ಕೆಜಿಗಳು ಇರಲಿಲ್ಲ. ‘ಮಕ್ಕಳ ಸ್ಕೂಲ್ ಮನೇಲಲ್ವೇ’ ಎಂಬಂತೆ ಮಗು ಮನೇಲಿ ಉಳಿದುಕೊಂಡು ಕೇಳಿಯೋ, ನೋಡಿಯೋ ಮೌಲ್ಯಗಳನ್ನು‌ ಕಲಿಯುತ್ತಿದ್ದರು. ನನಗೂ ಇದೇ ರೀತಿ ಕಲಿಕೆ ಆಯ್ತು ಎಂಬ ಹೆಮ್ಮೆ ಇದೆ.

ನಮ್ಮಜ್ಜಿ‌ ಗುಣಗಳ ಗಣಿಯಾಗಿದ್ದರು‌. ಬಡ ಬಗ್ಗರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು. ‘ಊಟ ಹಾಕಿದ ಮನೆ ಹಾಳಾಗೋಲ್ಲ, ಗೊಬ್ಬರ ಹಾಕಿದ ಹೊಲ ಹಾಳಾಗೋಲ್ಲ’ ಎಂಬಂತೆ ಅವರು ಹಸಿವು ಅಂತ ಬಂದವರಿಗೆ ಹಾಗೆಯೇ ಕಳಿಸಿದ್ದು ಇಲ್ಲ. ಮಾತಿನಲ್ಲಿ ಒರಟಂತೆ ಕಂಡರೂ ಮನಸ್ಸು ಮಾತ್ರ ಹೂವಿನಂತೆ ಮೃದು ಆಗಿತ್ತು. ಇವರ ಕೈ ತುತ್ತು ತಿನ್ನುವುದೆಂದರೆ ನನಗೆ ತುಂಬಾ ಖುಷಿ ತರಿಸುತ್ತಿತ್ತು. ತುಪ್ಪ ಹಾಕಿಕೊಂಡು ಸ್ವಲ್ಪ ಸಾಂಬಾರ್ ಸೇರಿಸಿ, ಮಿದಿಕೆ ಮಾಡಿ ಕೊಡುತ್ತಿದ್ದರು. ಹೊಟ್ಟೆ ತುಂಬಾ ಊಟ ಮಾಡಿದ್ದರೂ ಅಜ್ಜಿ ಕೈತುತ್ತು ತಿನ್ನುವ ರೂಢಿ ನಾನಾಗ ಬೆಳೆಸಿಕೊಂಡಿದ್ದೆ.

ಆಟ ಆಡಲು ಹಳೇ ಸೈಕಲ್ ಗಾಲಿಗಳು, ಗೋಲಿಗಳು, ಬುಗುರಿಗಳು ಇದ್ದವು. ಒಂದು ಗೇಣುದ್ದನೆಯ ಕೋಲು ಹಿಡಿದುಕೊಂಡು ಗಾಲಿ ಹೊಡೆದುಕೊಂಡು ಹೋಗುವುದು ಆಟವಾಗಿತ್ತು. ಕೆಲವರದ್ದು ಸ್ಕೂಟಿ, ಬೈಕಿನ ಗಾಲಿಗಳಾಗಿದ್ದರಿಂದ, ನನ್ನ ಹಳೇ ಲಡುಗೂರಿ ಸೈಕಲ್ ಗಾಲಿ ಸ್ವಲ್ಪ ಮೇಲೆ ಕೆಳಗೆ ಡ್ಯಾನ್ಸ್ ಮಾಡುತ್ತಾ ಹೋಗುತ್ತಿದ್ದುದರಿಂದ ಬೇರೆ ಗಾಲಿಗಳನ್ನು ಓಟದಲ್ಲಿ ಮೀರಿಸೋಕೆ ನನ್ನ ಕೈಲಿ ಆಗ್ತಾನೆ ಇರಲಿಲ್ಲ! ಎಷ್ಟೇ ಜೋರಾಗಿ ಕೋಲಿನಿಂದ ಹೊಡೆದರೂ ಅದು ವೇಗವಾಗಿ ಮುಂದೆ ಸಾಗುತ್ತಿರಲಿಲ್ಲ. ಇದು ಬೇಸರ ತರಿಸುತ್ತಿತ್ತು. ಈ ಕಾರಣಕ್ಕೆ ಬೈಕಿನ ಗಾಲಿಯನ್ನು ಹುಡುಕಿ ಹುಡುಕಿ ಸಾಕಾಗಿ, ಅದು ಸಿಗದೇ ತುಂಬಾ ನಿರಾಶೆ ಹೊಂದಿದ್ದೆ. ಆಗ ಬೈಕುಗಳೂ ಊರಿನಲ್ಲಿ ಐದು ಆರೋ ಇದ್ದವಷ್ಟೇ!

ಆಗ ನನಗೆ ಬುಗುರಿ ಆಡಿಸೋಕೂ ಸಹ ಬರುತ್ತಿರಲಿಲ್ಲ. ಬುಗುರಿಯ ಸುತ್ತ ಸೆಣಬಿನ ದಾರ ಸುತ್ತಿ ಕೈಯಿಂದ ಕೆಳಗೆ ತಿರುಗಿಸಲು ಬಿಟ್ಟರೂ ಅದು ಆಡದೇ ಇದ್ದುದು ಮನಸಿಗೆ ನೋವು ತರಿಸುತ್ತಿತ್ತು. ಎಷ್ಟೋ ಬಾರಿ ಪ್ರಯತ್ನ ಪಟ್ಟರೂ ಇದು ಸಾಧ್ಯವಾಗಿರಲಿಲ್ಲ. ಮನೆಯ ಓಣಿಯ ಬೇರೆ ಹುಡುಗರು ಗೋಲಿ ಆಡುತ್ತಿದ್ದುದರಿಂದ ಮನಸ್ಸು ಅತ್ತ ವಾಲಿ ಅಲ್ಲೂ ಸಹ ದೂರದ ಗೋಲಿಗಳನ್ನು ಗುರಿ ಇಟ್ಟು ಹೊಡೆಯುವುದರಲ್ಲೂ ವಿಫಲನಾಗಿ ಅದನ್ನೂ ಕೈಬಿಟ್ಟೆ. ಕೆಲ ಹುಡುಗರು ಬೆಂಕಿಪೊಟ್ಟಣ, ಸಿಗರೇಟು ಪ್ಯಾಕುಗಳನ್ನು ಸಂಗ್ರಹಿಸಿ ಅವುಗಳಿಂದ ‘ಪಟ್ಟು’ ಎಂದು ಕರೆಯಲ್ಪಡುತ್ತಿದ್ದ ವಿಶೇಷ ಆಟಿಕೆಗಳನ್ನು ಮಾಡುತ್ತಿದ್ದರು. (ಇಲ್ಲಿ ಪಟ್ಟು ಎಂದರೆ ಸಿಗರೇಟು ಪ್ಯಾಕಿನ ಪೇಪರಿನಿಂದ ಒಂದು ಚೌಕಾಕಾರದ ರಚನೆಯ ಆಟಿಕೆ) ಈ ಪಟ್ಟುಗಳಿಗೆ ಐದು, ಹತ್ತು ಎಂದು ಬೆಲೆ ಕಟ್ಟಿಕೊಳ್ಳುತ್ತಿದ್ದರು. ಆಗ ಗೋಲ್ಡನ್ ಸಿಗರೇಟು ಕಲರ್ ಪ್ಯಾಕಿನಿಂದ ಮಾಡುತ್ತಿದ್ದ ಪಟ್ಟಿಗೆ ವಿಶೇಷ ಬೆಲೆ ಇರುತ್ತಿತ್ತು. ಇವನ್ನು ಸಂಗ್ರಹಿಸಿ ತೂರೋ ಮುಚ್ಚೋ ಆಟ ಆಡುತ್ತಿದ್ದರು. ಅಂದ್ರೆ ಒಬ್ಬನು ಕಾಯಿನ್ ತೂರಿ ಕೈನಲ್ಲಿ ಮುಚ್ಚಿ ಮತ್ತೊಬ್ಬನು ಅದನ್ನು ಹೆಡ್ಡೋ, ಟೈಲೋ ಎಂದು ಹೇಳಬೇಕಾಗಿತ್ತು. ಇಲ್ಲಿ ಹಣದ ಬದಲು ಪಟ್ಟುಗಳನ್ನು ಬಾಜಿಯಾಗಿ ಕಟ್ಟುತ್ತಿದ್ದರು. ಗೆದ್ದವರು ಅವನ್ನು ತೆಗೆದುಕೊಂಡು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಮಂಜಣ್ಣ ಅಂತಾ ಪಕ್ಕದ ಮನೆಯ ಸೀನಿಯರ್ ಒಬ್ಬ ಹೆಚ್ಚು ಪಟ್ಟುಗಳನ್ನು ಇಟ್ಟುಕೊಂಡು ತೋರಿಸುತ್ತಿದ್ದುದು ನನಗೂ ಸಹ ಪಟ್ಟುಗಳನ್ನು ಸಂಗ್ರಹಿಸಲು ಪ್ರೇರೇಪಿಸಿತ್ತು. ಇದಕ್ಕೆ ಗಣೇಶಜ್ಜನ ಅಂಗಡಿಯ ಹತ್ತಿರ ಹೋಗಿ ಎಸೆದ ಸಿಗರೇಟಿನ ಪ್ಯಾಕು ಬೆಂಕಿಪೊಟ್ಟಣಕ್ಕೆ ಹುಡುಕುತ್ತಿದ್ದೆ. ಸಿಕ್ಕದ್ದನ್ನು ಜೋಪಾನವಾಗಿರಿಸಿಕೊಂಡು ಇಟ್ಟುಕೊಳ್ಳುತ್ತಿದ್ದೆ. ಒಮ್ಮೆ ಅಜ್ಜನ‌ ಕೈಗೆ ಸಿಕ್ಕಿಬಿದ್ದು ನಾ ಹಾಳಾಗಿ ಬಿಡುತ್ತೇನೆಂದು ತಿಳಿದು ಈ ಹುಡುಗರ ಸಹವಾಸ ಕೆಲಕಾಲ ಬಿಡಿಸಲೆಂದು ನನ್ನನ್ನು ಹುಟ್ಟೂರಿಗೆ ಕಳಿಸಿದರು.

ನಮ್ಮಜ್ಜಿ‌ ಗುಣಗಳ ಗಣಿಯಾಗಿದ್ದರು‌. ಬಡ ಬಗ್ಗರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು. ‘ಊಟ ಹಾಕಿದ ಮನೆ ಹಾಳಾಗೋಲ್ಲ, ಗೊಬ್ಬರ ಹಾಕಿದ ಹೊಲ ಹಾಳಾಗೋಲ್ಲ’ ಎಂಬಂತೆ ಅವರು ಹಸಿವು ಅಂತ ಬಂದವರಿಗೆ ಹಾಗೆಯೇ ಕಳಿಸಿದ್ದು ಇಲ್ಲ. ಮಾತಿನಲ್ಲಿ ಒರಟಂತೆ ಕಂಡರೂ ಮನಸ್ಸು ಮಾತ್ರ ಹೂವಿನಂತೆ ಮೃದು ಆಗಿತ್ತು. ಇವರ ಕೈ ತುತ್ತು ತಿನ್ನುವುದೆಂದರೆ ನನಗೆ ತುಂಬಾ ಖುಷಿ ತರಿಸುತ್ತಿತ್ತು.

ನಮ್ಮ ಮನೆಯಲ್ಲೋ ರಾಗಿ ಮುದ್ದೆ ಊಟ ಇರುತ್ತಿತ್ತು. ಅದು ಕಪ್ಪಾಗಿ ಇರುತ್ತಿದ್ದರಿಂದ ಉಣ್ಣೋಕೆ ಅಳುತ್ತಿದ್ದೆ. ಅಜ್ಜಿ‌ ಮನೆಯಲ್ಲಿ ಜೋಳದ ಮುದ್ದೆ ಬೆಳ್ಳಗೆ ಇರುತ್ತಿದ್ದರಿಂದ ಅದನ್ನು ಉಣ್ಣುತ್ತಿದ್ದೆ‌. ಒಮ್ಮೆ ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಕಕ್ಕಸ್ಸು ಕಪ್ಪಾದಾಗ ಬಹಳ ಬೇಸರವಾಗಿ ಮತ್ತೆ ಅಮ್ಮ ಉಣಿಸೋಕೆ ಬಂದಾಗ ಬಾಯೇ ತೆರೆಯದೇ ಊಟ ಮಾಡೋಕೆ ಹಠ ಮಾಡಿದ್ದೆ. ಅನ್ನಕ್ಕೆ ತತ್ವಾರ ಇದ್ದ ಕಾಲವದು. ಇದ್ದ ಮುದ್ದೆಯನ್ನೇ ಉಣಿಸೋಕೆ ಅಮ್ಮ, ‘ರಾಜ್ ಕುಮಾರ್ ಊಟ ಮಾಡೋದು ಇದನ್ನೇ’ ಎಂದು ಹೇಳಿದಾಗ ನಾನು ಆಶ್ಚರ್ಯದಿಂದ ‘ಹೌದಾ?’ ಎಂದು ಕೇಳಿ ರಾಗಿ ಮುದ್ದೆ ತಿನ್ನುತ್ತಿದ್ದೆ. ನಂಗೆ ಆಗ ವರನಟ ರಾಜ್ ಕುಮಾರ್ ತುಂಬಾ ಇಷ್ಟ ಆಗುತ್ತಿದ್ದರು. ಅಜ್ಜಿ ಮನೆಯಷ್ಟು ಸಕಲ ಸೌಕರ್ಯಗಳು ನನಗೆ ನನ್ನೂರಲ್ಲಿ ಸಿಗದ ಕಾರಣ ಮತ್ತೆ ವಾಪಾಸ್ಸು ಅಜ್ಜನ ಜೊತೆಯಲ್ಲಿ ಅವರ ಮನೆಗೆ ಹೋದೆ.
ಮಾರನೇ ವರ್ಷ ಶಾಲೆಗೆ ಸೇರಿದೆ.

ಆಗ ಒಂದನೇ ಕ್ಲಾಸಿಗೆ ರುದ್ರಪ್ಪ ಮೇಷ್ಟ್ರು ಇದ್ದರು. ನನ್ನ ನೆನಪಿನ ಪ್ರಕಾರ ಆಗ ಕನ್ನಡ ಮತ್ತು ಗಣಿತ ಪುಸ್ತಕಗಳು ಮಾತ್ರ ಇದ್ದವು. ಮೂರನೇ ತರಗತಿಗೆ ಸಮಾಜ ಇರುತ್ತಿತ್ತು. ಕನ್ನಡದಲ್ಲಿ ಅಕ್ಷರಾಭ್ಯಾಸವನ್ನು ಸ್ಲೇಟಿನಲ್ಲಿ‌ ಮಾಡಿಸುತ್ತಿದ್ದರು. ಕನ್ನಡ ಪುಸ್ತಕದಲ್ಲಿ ‘ಕಮಲ, ಲಂಗ, ಕಮಲಳ ಲಂಗ ಜಳಜಳ’ ಅನ್ನೋ ಪಾಠವಿತ್ತು. ‘ಈಶ, ಗಣಪ, ಈಶನ ಮಗ ಗಣಪ’ ಎಂಬ ಪಾಠವೂ ಇತ್ತು. ಗಣಿತದಲ್ಲಿ ಬರೀ ಸಂಖ್ಯೆಗಳು, ಮಗ್ಗಿ, ಚಿಕ್ಕ ಚಿಕ್ಕ ಕೂಡುವ, ಕಳೆಯುವ ಲೆಕ್ಕಗಳು ಇರುತ್ತಿದ್ದವು. ಈ ಎಲ್ಲವನ್ನು ರುದ್ರಪ್ಪ ಮೇಷ್ಟ್ರು ಒಬ್ಬರೇ ಮಾಡುತ್ತಿದ್ದರು. ಮಧ್ಯಾಹ್ನದ ನಂತರ ಕಾಗುಣಿತವನ್ನು ‘ಕ ತಲೆಗಟ್ಟು ಕ, ಕ ತಲೆಗಟ್ಟಿನ ದೀರ್ಘ ಕಾ…’ ಎಂದು ಕ್ಲಾಸ್ ಲೀಡರ್ ಒಬ್ಬ ಒಂಥರಾ ವಿಶೇಷರಾಗದಲ್ಲಿ ಹೇಳಿಕೊಡುತ್ತಿದ್ದನು. ನಾವೂ ಸಹ ಅದೇ ರಾಗದಲ್ಲಿ ಹೇಳುತ್ತಿದ್ದೆವು. ಮಗ್ಗಿಯ ‘ಎರಡೊಂದ್ಲೆರಡು ಎರಡೆರಡ್ಲೇ ನಾಕು’ ಎಂಬ ಮತ್ತೊಂದು ರಾಗ ನಮ್ಮ ಕಿವಿ ಮೇಲೆ ಅಪ್ಪಳಿಸಿ ನಾವೂ ಅದೇ ರೀತಿ ಹೇಳುತ್ತಿದ್ದೆವು.

ನಮ್ಮ ಮೇಷ್ಟ್ರು ಕುರ್ಚಿ‌ ಮೇಲೆ ಕುಳಿತು, ಟೇಬಲ್ ಮೇಲೆ ಕೈಯೂರಿ ಗದ್ದಕ್ಕೆ ಕೈಯನ್ನು ಆಧಾರ ಕೊಟ್ಟು ಕುಳಿತಿರುತ್ತಿದ್ದರು. ಯಾರಾದ್ರೂ ಸರಿಯಾಗಿ ಹೇಳದೇ ಇದ್ದಾಗ ಕೋಲಿನಿಂದ ಚೆನ್ನಾಗಿ ಬಾರಿಸುತ್ತಿದ್ದರು. ಬೋರ್ಡ್ ಮೇಲೆ ಬರೆದ ಕಾಗುಣಿತವನ್ನು ಉದ್ದನೆಯ ಕೋಲು ಹಿಡಿದುಕೊಂಡು ಉಚ್ಚಾರಕ್ಕೆ ತಕ್ಕಂತಹ ಅಕ್ಷರದ ಮೇಲೆ ಕೋಲು ಇಡುತ್ತಾ ಒಬ್ಬರು ಓದೋದು, ಉಳಿದವರು ಜೋರಾಗಿ ಕೂಗಿ ಹೇಳುವುದು ದಿನಾಲು ನಡೆಯುತ್ತಿತ್ತು. ನೋಟ್ ಬುಕ್ಕಿಲ್ಲ, ಪೆನ್ಸಿಲ್ ಇಲ್ಲ, ಪೆನ್ನೂ ಇಲ್ಲ. ಸ್ಲೇಟ್ ಮೇಲೆ ಬರೆದು ಜೋಪಾನವಾಗಿ ತಂದು ಮೇಷ್ಟ್ರು ಕೈಯಾಗೆ ರೈಟ್ ಹಾಕಿಸಿಕೊಂಡರೆ ಮುಗೀತು. ಈಗಿನಂತಹ ಡಿಸೈನ್ ಬ್ಯಾಗುಗಳನ್ನು ಯಾರೂ ತರುತ್ತಿರಲಿಲ್ಲ. ಉಳ್ಳವರು ಆಗ ಬಟ್ಟೆಯಲ್ಲಿ ಹೊಲಿದಿರುತ್ತಿದ್ದ ಬ್ಯಾಗು ತಂದರೆ, ಕೆಲವರು ಬಟ್ಟೆ ಅಂಗಡಿಯಲ್ಲಿ ಕೊಡುತ್ತಿದ್ದ ಪ್ಲಾಸ್ಟಿಕ್ ಕೈಚೀಲ ತರುತ್ತಿದ್ದರು. ಇನ್ನೂ ಕೆಲವರು ಬರಿಗೈಲಿ ಪುಸ್ತಕ ಹಿಡಿದುಕೊಂಡು ಬರುತ್ತಿದ್ದರು.

ಸಂಜೆ ಆಯ್ತು ಎಂದರೆ ‘ಜೂಟು ಮುಟ್ಟಾಟ’ ಎಂಬ ಆಟ ಆಡುತ್ತಿದ್ದೆವು. ಶಾಲೆಯಲ್ಲಿ‌ ಏಳರಿಂದ ಎಂಟು ಜನ‌ ಮೇಷ್ಟ್ರು ಇದ್ದರೂ ಒಂದು ಮತ್ತು ಎರಡನೇ ತರಗತಿಗೆ ರುದ್ರಪ್ಪ ಮೇಷ್ಟ್ರು ಫಿಕ್ಸ್ ಆಗಿದ್ದರು. ನಮಗೆ ಕಚ್ಚೆ ಹಾಕಿದ್ದ ಮೇಷ್ಟ್ರಿಗಿಂತ ಅಪ್ಪರ್ ಕ್ಲಾಸಿಗೆ ಪಾಠ ಮಾಡುತ್ತಿದ್ದ ಪ್ಯಾಂಟು ಹಾಕ್ತಿದ್ದ ಮೇಷ್ಟ್ರುಗಳೇಕೆ ನಮಗೆ ಪಾಠ ಮಾಡೋಕೆ ಬರೋಲ್ಲ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಕಲಿಯುವ‌ ಅಂಶಗಳು, ವಿಷಯಗಳು ಕಮ್ಮಿ ಇದ್ದದ್ದರಿಂದಲೋ ಏನೋ ನಾವು ಮಗ್ಗಿಯನ್ನು ಇಪ್ಪತ್ತರವರೆಗೆ ಕಲಿತು ಬಿಟ್ಟಿದ್ದೆವು. ಕಾಗುಣಿತ, ಒತ್ತಕ್ಷರಗಳು, ಕೂಡುವ ಮತ್ತು ಕಳೆಯುವ ಲೆಕ್ಕ ಇವುಗಳ ಜೊತೆಗೆ ‘ಪಾಡ್ಯ, ಬಿದಿಗೆ, ತದಿಗೆ, ಚೌತಿ… ಇವನ್ನೂ ಹೇಳಲು ಕಲಿತಿದ್ದೆವು. ಆಗ ಚೆನ್ನಾಗಿ ಓದದವರನ್ನು ಫೇಲ್ ಮಾಡುವ ಅವಕಾಶ ಇತ್ತು. ಇದು ಮಕ್ಕಳಲ್ಲಿ‌ ಭಯ ಹುಟ್ಟಿಸಿ‌, ಚೂರಾದರೂ ಓದಬೇಕು ಎಂಬ ಭಾವನೆ ಮೂಡಿಸುತ್ತಿತ್ತು‌. ಮನೆಯಲ್ಲಿ ಓದು ಎಂದು ಒತ್ತಡ ಹಾಕುವವರ ಸಂಖ್ಯೆ ಕಮ್ಮಿ ಇತ್ತು. ಟ್ಯೂಷನ್ ಅಂತೂ ಮೊದಲೇ ಇರಲಿಲ್ಲ. ಇಂತಹ ಕಾಲದಲ್ಲಿ ಕಲಿಸೋ ವಿಷಯದಲ್ಲಿ ರಾಜಿಯಾಗದೇ ನಮಗೆಲ್ಲಾ ಚೆನ್ನಾಗಿ ಕಲಿಸಿದ ರುದ್ರಪ್ಪ ಮೇಷ್ಟ್ರು ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. ವೀರೇಶ್ ಬಿ.ಎಸ್

    ಬಹಳ ಸೊಗಸಾಗಿ ಮೂಡಿಬಂದಿದೆ ಗೌಡ್ರೆ..ಹಳೆಯ ನೆನಪುಗಳು ಮತ್ತೆ ಮರುಕಳಿಸುವಂತೆ ಮಾಡಿದ್ದಕ್ಕೆ ಧನ್ಯವಾದ. ಶುಭವಾಗಲಿ💐

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ