Advertisement
ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಅಸಹಾಯಕರು, ನಿರ್ಗತಿಕರು, ಬಡವರು ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವು ಅಸಹಾಯಕರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಎಲ್ಲೋ ಕೆಲವರಿಗೆ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಎಲ್ಲಾದರೂ ಒಂದು ಕಡೆ ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು.
ಪ್ರಶಾಂತ್‌ ಬೀಚಿ ಅಂಕಣ ನಿಮ್ಮ ಓದಿಗೆ.

 

ಉಪದೇಶ ಕೊಡುವವರಲ್ಲಿ ಅಹಂಕಾರ ಮತ್ತು ಧಿಮಾಕು ಗುಪ್ತಗಾಮಿನಿಯಾಗಿ ಸಂಚರಿಸುತ್ತಿರುತ್ತಾಳೆ. ಕೆಲವು ಸಲ ಗೋಚರಿಸಿದರೆ ಇನ್ನೂ ಕೆಲವು ಸಲ ಮರಿಚಿಕೆಯಾಗಿಯೆ ಉಳಿದುಬಿಡುತ್ತಾಳೆ. ಹಣ ಮಾಡಿರುವ ಒಂದೇ ಕಾರಣಕ್ಕೆ ತಾನು ಪ್ರತಿಯೊಬ್ಬರಿಗೂ ಮಾದರಿ ಅಥವ ಉಪದೇಶಕೊಡಲು ಅರ್ಹವ್ಯಕ್ತಿ ಎಂದು ನಂಬಿರುತ್ತಾರೆ, ವಿಪರ್ಯಾಸವೇನೆಂದರೆ ನಮ್ಮ ಜಗತ್ತು ಕೂಡ ಹಣ ಮಾಡಿರುವ ವ್ಯಕ್ತಿಯನ್ನು ಸಾಧಕ ಅಥವ ಜೀವನದಲ್ಲಿ ಯಶಸ್ಸು ಹೊಂದಿರುವ ವ್ಯಕ್ತಿ ಎಂದು ಬಿಂಬಿಸುತ್ತದೆ. ಹಾಗಾಗಿ ಹಣವಂತ ಮಾಡುವ ಪ್ರತಿಯೊಂದು ಕೆಲಸವೂ ಶ್ರೇಷ್ಟವಾಗಿ ಕಾಣುತ್ತದೆ.

ಅಸಹಾಯಕರಿಗೆ, ನಿರ್ಗತಿಕರಿಗೆ, ಬಡವರಿಗೆ ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವು ಅಸಹಾಯಕರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಎಲ್ಲೋ ಕೆಲವರಿಗೆ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಎಲ್ಲಾದರೂ ಒಂದು ಕಡೆ ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು.

ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ, ಬೇಸಾಯದಿಂದ ಬಸವಳಿದ ಹುಡುಗ ಬೆಂಗಳೂರಿಗೆ ಬಂದಿದ್ದ. ಎಲ್ಲಾದರೂ ಕೆಲಸ ಸಿಗುತ್ತದೆ, ನಗರದಲ್ಲಿ ಹಣ ಸಂಪಾದಿಸಬಹುದು ಎನ್ನುವುದು ಅವನ ನಂಬಿಕೆಯಾಗಿತ್ತು. ಗೊತ್ತು ಗುರಿ ಇಲ್ಲದ ಹುಡುಗನಿಗೆ ರೈಲ್ವೆ ನಿಲ್ದಾಣವೆ ಮಲಗಲು ಸಿಕ್ಕ ಜಾಗ. ಹೊಟ್ಟೆಗೆ ಹಿಟ್ಟಿಲ್ಲ, ಮಾಡಲು ಕೆಲಸವಿಲ್ಲ. ಎರಡು ದಿನದ ಹಸಿವಿನ ನಂತರ ಭಿಕ್ಷೆ ಬೇಡುವುದು ಅಭ್ಯಾಸವಾಗಿತ್ತು. ಮೈ ಕೈ ಗಟ್ಟಿಯಿದ್ದ ಹುಡುಗನನ್ನು ನೋಡಿ ಭಿಕ್ಷೆ ಹಾಕುವ ಬದಲು ಎಲ್ಲರೂ ಹೇಳುತ್ತಿದ್ದುದು, ‘ನಿನಗೇನು ದಾಡಿ ದುಡಿದು ತಿನ್ನುವುದಕ್ಕಾಗುವುದಿಲ್ಲವೆ?ʼ. ನಿಜ, ಆದರೆ ಕೆಲಸ ಕೇಳಿದಲ್ಲೆಲ್ಲಾ ಇವನನ್ನು ಬೈದು ಓಡಿಸಿದರೆ ಹೊರತು, ದುಡಿಮೆಗೆ ದಾರಿ ಕಾಣಿಸಲಿಲ್ಲ. ಹಸಿವೆ ತಾಳಲಾರದೆ, ಬೈಗುಳ ಕೇಳಲಾಗದೆ ಬದುಕೆ ಬೇಡವೆಂದು ಜೀವ ಕಳೆದುಕೊಂಡ. ಮಹಾನಗರ ಪಾಲಿಕೆಯವರು ದೇಹವನ್ನು ನೀರಿನಿಂದ ಹೊರತೆಗೆದು ಬಾಲಕನ ಆತ್ಮಹತ್ಯೆ ಎಂದು ತಿಳಿಸಿದರು. ಪತ್ರಿಕೆಯ ಜಾಗ ತುಂಬಿಸಲು ಕಾಯುತ್ತಿದ್ದ ಕೆಲವು ದುರಹಂಕಾರಿ ಪತ್ರಕರ್ತರು ಬರೆದದ್ದು ಹೀಗೆ. “ಜಗತ್ತನ್ನು ಎದುರಿಸಲು ಆಗದ ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಷ್ಟಗಳನ್ನು ಎದುರಿಸಿ ಬದುಕಬೇಕು. ಸಾಯುವುದೊಂದೆ ದಾರಿಯಲ್ಲ”. ಹೀಗೆ ತಮ್ಮ ಉಪದೇಶವನ್ನು ಅರ್ಧ ಪುಟಗಳಷ್ಟು ತುಂಬಿಸಿದ್ದರು. ಅದೇ ಪತ್ರಿಕಾ ಕಚೇರಿಯಲ್ಲಿ ಕೆಲಸ ಕೊಡಿ ಎಂದು ಬೇಡಿ, ಅದರ ಮುಂದೆಯ ಭಿಕ್ಷೆ ಬೇಡಿದ್ದು ಆ ಹುಡುಗನಿಗೆ ಮಾತ್ರ ಗೊತ್ತಿತ್ತು.

ವಿಪರ್ಯಾಸವೇನೆಂದರೆ ನಮ್ಮ ಜಗತ್ತು ಕೂಡ ಹಣ ಮಾಡಿರುವ ವ್ಯಕ್ತಿಯನ್ನು ಸಾಧಕ ಅಥವ ಜೀವನದಲ್ಲಿ ಯಶಸ್ಸು ಹೊಂದಿರುವ ವ್ಯಕ್ತಿ ಎಂದು ಬಿಂಬಿಸುತ್ತದೆ. ಹಾಗಾಗಿ ಹಣವಂತ ಮಾಡುವ ಪ್ರತಿಯೊಂದು ಕೆಲಸವೂ ಶ್ರೇಷ್ಟವಾಗಿ ಕಾಣುತ್ತದೆ.

ಅದೇ ರೀತಿಯ ಅವಕಾಶವಂಚಿಗ ಹುಡುಗನೊಬ್ಬ, ತನಗೆ ಸಿಗಬೇಕಿದ್ದ ಸೌಲಭ್ಯ ಸಿಗುತ್ತಿಲ್ಲ ಎಂದು ದೂರು ಕೊಡಲು ಬೆಂಗಳೂರಿಗೆ ಬಂದಿದ್ದ. ವಿದ್ಯಾವಂತನಾಗಿದ್ದವನು, ರೈತರಿಗೆ ಸಿಗಬೇಕಿದ್ದ ಸೌಲಭ್ಯ ಸಿಗುತ್ತಿಲ್ಲ ಎಂದು ವಿಚಾರಿಸಲು ಬಂದಾಗ ಅವನಿಗೆ ಬೈದು ಕಳಿಸಿದರು ಸರ್ಕಾರಿ ಅಧಿಕಾರಿಗಳು. ಅವರ ವಿರುದ್ಧ ಹೋರಾಡಲು ರೈತರನ್ನು ಒಗ್ಗೂಡಿಸಿ ಧರಣಿ ಮಾಡಿದಾಗ, ಹಿಡಿದು ಜೈಲಿಗೆ ಅಟ್ಟಿದರು. ನ್ಯಾಯಾಲಯದಲ್ಲಿ ಅವನ ತಪ್ಪಿಲ್ಲದಿದ್ದರೂ ಶಿಕ್ಷೆಗೆ ಗುರಿಯಾಗಿ ಎರಡು ತಿಂಗಳ ಜೈಲುವಾಸ. ಹಣವಿಲ್ಲದಿದ್ದ ಕಾರಣ ನ್ಯಾಯವೂ ಅವನಿಂದ ದೂರವಾಗಿತ್ತು. ಸರ್ಕಾರದ ವಿರುದ್ಧ ಹೋರಾಡಲು ಶಕ್ತಿ ಇಲ್ಲದೆ ಅವನಂತೆ ವಂಚಿತರ ಗುಂಪು ಮಾಡಿಕೊಂಡು ಹೋರಾಡಿದಾಗ ಸಿಕ್ಕ ಹೆಸರೆ ನಕ್ಸಲ್. ಯಾವ ಹುಡುಗನಿಗೆ ನಕ್ಸಲ್ ಎನ್ನವ ಹೆಸರೇ ಗೊತ್ತಿಲ್ಲವೋ, ಆ ಹುಡುಗನ ನ್ಯಾಯಯುತ ಒತ್ತಾಯಕ್ಕೆ ನಮ್ಮ ಸಮಾಜ ನೀಡಿದ ಕೊಡುಗೆ ಸಾವು. ಇಂಕಿನಿಂದ ಪೇಪರ್ ಮೇಲೆ ಬೇದಿ ಮಾಡಿಕೊಳ್ಳುವ ಪತ್ರಿಕಾ ವರದಿಗಾರರು ಬರೆದಿದ್ದು ಅದನ್ನೆ, “ಹೋರಾಟ ನ್ಯಾಯಯುತವಾಗಿರಬೇಕು, ಸಂವಿಧಾನಾತ್ಮಕವಾಗಿರಬೇಕು, ಅದು ಬಿಟ್ಟು ನಕ್ಸಲ್ ಆಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಮೇಲು.” ಒಂದು ಪುಟದ ಉಪದೇಶ. ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಿಂದು ತೇಗುತ್ತಿರುವ ಜನ ನಾಯಕರ ಬಗ್ಗೆ ಲೇಖನ ಯಾವ ಪತ್ರಿಕೆಗೆ ಬರೆದುಕಳಿಸಿದ್ದನೊ, ಅದೇ ಪತ್ರಿಕೆಯವರು ಆ ಲೇಖನವನ್ನು ಪ್ರಕಟಿಸದೆ ಅವನ ಸಾವಿನ ಬಗ್ಗೆ ಪುಟಗಟ್ಟಲೆ ಬರೆದಿದ್ದರು.

ಇದೆಲ್ಲಾ ಕಥೆ, ಇಂತಹ ಸಂಗತಿಗಳು ಇಂದಿನ ದಿನಗಳಲ್ಲಿ ನಡೆಯುವುದಿಲ್ಲ ಎನ್ನುವ ಹೊಟ್ಟೆ ತುಂಬಿದ ಜನರಿಗೆ ಈ ಕಷ್ಟಗಳ ಅರಿವೇ ಇರುವುದಿಲ್ಲ. ಇಂದಿಗೂ ಕೂಡ ಸಹಾಯ ಕೇಳಿ ಬರುವ ಬಡ ಮಧ್ಯಮ ವರ್ಗದವರಿಗೆ ಹಣವಂತರು ಕೆಲಸ ಅಥವ ಸಹಾಯ ಮಾಡುವ ಬದಲು ಉಪದೇಶ ಕೊಡುತ್ತಾರೆ. ಪ್ರಪಂಚದ ಪ್ರತೀ ಹೆಜ್ಜೆಯಲ್ಲೂ ಹಣವಂತರೆ ಗೆಲ್ಲುತ್ತಾರೆ. ತೋರಿಸಲು ಅಲ್ಲೊಂದು ಇಲ್ಲೊಂದು ವಂಚಿತರಿಗೆ ಸಿಕ್ಕ ಗೌರವವನ್ನು ಇಟ್ಟಿರುತ್ತಾರೆ.

ಆಫ಼್ಘಾನಿಸ್ಥಾನದಿಂದ ಬಂದಿದ್ದ ಒಬ್ಬ ಹುಡುಗ ಸಿಕ್ಕಿದ್ದ. ಅವನ ತಂದೆ ಸರ್ಕಾರಿ ಉದ್ಯಮಿ, ಕಳೆದು ಹತ್ತು ವರ್ಷಗಳಿಂದ ಅವರ ತಂದೆ ಮತ್ತು ಗೆಳೆಯರು ಆಫ಼್ಘಾನಿಸ್ಥಾನವನ್ನು ಸುಂದರ ದೇಶವನ್ನಾಗಿಸಲು ಶ್ರಮಿಸಿದ್ದಾರೆ. ಅವರ ಜನ ನಾಯಕ (ಸಂಸದ) ಅವರಿಗೆಲ್ಲಾ ಒಳ್ಳೆಯ ಪ್ರೊತ್ಸಾಹ ಕೊಟ್ಟು ಕೆಲಸ ಮಾಡಿಸಿದ್ದಾನೆ. ನಗರದ ಶಾಲೆಗಳು ಮತ್ತು ಮಸೀದಿಗಳನ್ನು ಅಭಿವೃದ್ಧಿಪಡಿಸಲು ಲಕ್ಷಾಂತರ ಡಾಲರ್ ಹಣ ಪಡೆದು ತನ್ನ ಆಸ್ತಿಯನ್ನು ವೃದ್ಧಿಸಿಕೊಂಡಿದ್ದಾನೆ. ಸರ್ಕಾರಿ ನೌಕರರು, ತಮ್ಮ ದೇಶಕ್ಕಾಗಿ ಮತ್ತು ಮುಂದಿನ ಪೀಳಿಗೆಗಾಗಿ ಸಂಬಳಕ್ಕಿಂತ ಜಾಸ್ತಿ ಕೆಲಸ ಮಾಡಿ ವಿದೇಶದ ಹಣ ತಮ್ಮ ದೇಶಕ್ಕೆ ಹರಿಯುವಂತೆ ಮಾಡಿದ್ದಾರೆ. ಕಳೆದೆರಡು ವಾರದಿಂದ ನಡೆಯುತ್ತಿರುವ ತಾಲಿಬಾನರ ಅತಿಕ್ರಮಣದ ನಂತರ ಆ ಜನ ನಾಯಕ (ಸಂಸದ) ಹೇಗೋ ದೇಶಬಿಟ್ಟು ಓಡಿ ಹೋಗಿದ್ದಾನೆ. ಲಕ್ಷಾಂತರ ಡಾಲರ್ ಹೊತ್ತ ಅವನು ಪ್ರಪಂಚದ ಇನ್ಯಾವುದೋ ದೇಶದಲ್ಲಿ ಸುಖವಾಗಿದ್ದಾನೆ. ಅವನಿಗಾಗಿ, ಆಫ಼್ಘಾನಿಸ್ಥಾನಕ್ಕಾಗಿ ಶ್ರಮಿಸಿದ ಸರ್ಕಾರಿ ನೌಕರರು ತಾಲಿಬಾನರ ಗುಂಡಿಗೆ ಬಲಿಯಾಗಿ ಜೀವ ಕಳೆದುಕೊಂಡಿದ್ದಾರೆ.

ತಂದೆಯ ಜೊತೆಗೆ ಪರಿವಾರದ ಎಲ್ಲರನ್ನು ಕಳೆದುಕೊಂಡ ಯುವಕ ಕಣ್ಣೀರಿಡುತ್ತಿದ್ದಾನೆ. ಓದಲು ನಾನು ದೇಶ ಬಿಟ್ಟು ಬಂದೆ. ದೇಶಕ್ಕಾಗಿ ದುಡಿದ ನಮ್ಮ ತಂದೆ ಹಾಗು ಅವರಂತ ಅನೇಕರು ಜೀವ ಕಳೆದುಕೊಂಡರು. ಜನರ ದುಡ್ಡನ್ನು ತಿಂದ ಸಂಸದರು ಸೌಖ್ಯವಾಗಿ ಇನ್ನೇಲ್ಲೊ ಬದುಕುತ್ತಿದ್ದರೆ. ಈ ಪ್ರಪಂಚ ಹಣವಂತರಿಗೆ ಮಾತ್ರ ಎಂದು ಕಣ್ಣಲ್ಲಿ ನೀರುತುಂಬಿಕೊಂಡ ಹುಡುಗನಿಗೆ ಗೊತ್ತು ಅದರ ನೋವು.
ನೊಂದವರಿಗೆ, ವಂಚಿತರಿಗೆ, ಸಂತೈಸಿ ದಾರಿ ತೋರಿಸಬೇಕೆ ಹೊರತು ಕೇವಲ ಒಣ ಉಪದೇಶವಲ್ಲ.

About The Author

ಪ್ರಶಾಂತ್‌ ಬೀಚಿ

ಪ್ರಶಾಂತ್‌ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ