Advertisement
“ಬುವಿಯೆ ತಾಯಿ, ಬಾನು ತಂದೆ” ಕವಿತೆ ಇಂದಿನ ಕಾವ್ಯ ಕುಸುಮ

“ಬುವಿಯೆ ತಾಯಿ, ಬಾನು ತಂದೆ” ಕವಿತೆ ಇಂದಿನ ಕಾವ್ಯ ಕುಸುಮ

‘ಚಿದಂಬರ’ ಎಂದು ಗುರುತಿಸಿಕೊಂಡ ಚಿದಂಬರ ಕೃಷ್ಣ ರಾವ್ ದೀಕ್ಷಿತ್ ಅವರು ಹುಟ್ಟಿದ್ದು ಜುಲೈ ೧೪, ೧೯೨೨ರಲ್ಲಿ ದೇವಿ ಹೊಸೂರು ಎಂಬ ಊರಿನಲ್ಲಿ. ಕರ್ನಾಟಕ ಕಾಲೇಜಿನಲ್ಲಿ ತಮ್ಮ ಎಂ.ಎ.ಪದವಿಯನ್ನು ಪೂರೈಸಿ ಉಪನ್ಯಾಸಕರಾಗಿದ್ದರು. ಮುಂಬೆಳಗು, ಸೆರೆಯಾಳು ಇವರ ಕವನ ಸಂಕಲನಗಳು, ಪುತ್ರೋತ್ಸವ ಸಣ್ಣ ಕತೆಗಳ ಸಂಗ್ರಹ ಕೃತಿ. ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದು ನಿವೃತ್ತರಾದವರು. ಅವರು ಬರೆದ ‘ಬುವಿಯೆ ತಾಯಿ, ಬಾನು ತಂದೆ’ ಕವನವು ಇಂದಿನ ಕಾವ್ಯ ಮಾಲೆಯ ಕುಸುಮ

ಬುವಿಯೆ ತಾಯಿ, ಬಾನು ತಂದೆ

ಬುವಿಯೆ ತಾಯಿ, ಬಾನು ತಂದೆ, ನಿಮಗೆ ವಂದನೆ!
ನಿಮ್ಮ ತೊಡೆಯ ಹಾಸಲಾಡಿ ಹಾಡಬಂದೆನೆ ॥ ಪಲ್ಲ॥


ಇಳೆಯ ಒಡಲ ಬ್ರಹ್ಮವೆನಗೆ ರೂಪವಿತ್ತಿತೊ,
ಮುಗಿಲದೊರೆಯ ನೀಲಿಕೊಡೆಯು ನೆಳಲನಿತ್ತಿತೊ,
ಈ ಅನಂತ ತೊಟ್ಟಿಲೆನಗೆ ನಿದ್ದೆಕೊಟ್ಟಿತೊ,
ಬಿಸಿಲು, ಬೈಗು, ಮೋಡ, ಚುಕ್ಕೆ ಚಟ್ಟು ಕಟ್ಟಿತೊ.


ಹಾಲು ಮೆಯ್ಯ ಹಣ್ಣಿನಂಥ ಮೊಲೆಯ ಕುಡಿದೆನು
ನಿನ್ನ ಚಲುವ ಮುದ್ದುಮೊಗವ ತುಟಿಗೆ ಹಿಡಿದೆನು
ಗೋಲು ತಿರೆಗೆ ಪಣವ ಹಚ್ಚಿ ನಡೆದೆ ನಡೆದೆನು
ಮುನ್ನು ಎಲ್ಲು ನಿಲವು ಇರದೆ ತೊಡೆಗೆ ಇಳಿದೆನು.


ಅಯ್ಯ! ನೆಲಕೆ ಮಳೆಯನಿಳಿಸಿ ಸುಧೆಯ ಸುರಿದಿಹೆ
ಜೀವದೊಳಗೆ ಭಾವ ಮೊಳಿಸಿ ಬಗೆಯ ಕರೆದಿಹೆ
ಸೂರ್ಯ ಚಂದ್ರ ಕಣ್ಣತೆರೆದು ಬೆಳಕ ನೆರೆದಿಹೆ
ಏಳುಬಣ್ಣ ರಸದ ಖುಷಿಯ ಯೋಗ ಮೆರೆದಿಹೆ.


ವಿವಿಧ ಲೋಕಗಳಿಗೆ ಸಾಗಿ ನೋಡಲಿರುವೆನೆ
ನಾಕ-ಮರ್ತ್ಯ, ಯಕ್ಷ ಸೃಷ್ಟಿ ಎಲ್ಲ ಅಲೆವೆನೆ
ಬಾಳಿನುಸಿರು ಬಯಲ ತುಂಬಿ ಗಾಳಿ ತರುವೆನೆ
ಕಡಲ ಸೆರಗ ಎದೆಗೆ ಹೊಚ್ಚಿ ತೊಡೆಗೆ ಬರುವೆನೆ.


ಬಲ್ಲೆತಾಯಿ ನಿನ್ನ ಹಿರಿಮೆ, ನಲಿವು ಕೊಡಲಿದೆ
ಅಲ್ಲೊ ತಂದೆ, ನಿನ್ನ ಒಲುಮೆ ಎಲ್ಲಿ ಬಿಡಲಿದೆ?
ಕಂದನನ್ನು ನೆವುಳಿತೆವುಳಿ ಹರಸೆ, ” ಮಂಗಳ ‘
ದನಿಯ ವೀಣೆ ಮಿಡಿಯಬಂತು, ಇಂಥ ಜೋಗುಳ !
ಬುವಿಯೆ ತಾಯಿ, ಬಾನು ತಂದೆ ನಿಮಗೆ ವಂದನೆ !
ನಿಮ್ಮ ತೊಡೆಯ ಹಾಸಲಾಡಿ, ಹಾಡಬಂದೆನೆ ॥

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ