Advertisement
ಬೆಳಕಿದ್ದು ಕತ್ತಲೆಯು ಹೇಗೆ:ಅಬ್ದುಲ್ ರಶೀದ್ ಅಂಕಣ

ಬೆಳಕಿದ್ದು ಕತ್ತಲೆಯು ಹೇಗೆ:ಅಬ್ದುಲ್ ರಶೀದ್ ಅಂಕಣ

‘ಬೆಳಕೆ ಬೆಳಕಿದ್ದು ಕತ್ತಲೆಯು ತುಂಬಿತು ಹೇಗೆ?’ ಎಂಬ ಬೇಂದ್ರೆಯ ಸಾಲನ್ನು ಮೂಗಲ್ಲೇ ಹೇಳಿಕೊಂಡು ಬೈಕು ಓಡಿಸುತ್ತಿದ್ದೆ. ಎಷ್ಟೊಂದು ತರಹದ ಕತ್ತಲುಗಳು.

ಕತ್ತು ಹಿಡಿಯುವಳಂತೆ ಒಮ್ಮೆಗೇ ಬರುವ ಕತ್ತಲು, ಬಂದಾಳೋ ಬಾರಳೋ ತಂದಾಳೋ ತಾರಳೋ ಎಂಬಂತೆ ವಯ್ಯಾರ ಮಾಡುತ್ತ ಬೇಕು ಬೇಕೆಂದೇ ತಡವಾಗಿ ಬರುವ ಕತ್ತಲು, ಬರುವ ಮೊದಲು ಆಕಾಶದ ತುಂಬ ನಸುಗೆಂಪು ರತ್ನಗಂಬಳಿ ಹಾಸಿ ಅದರ ಮೇಲೆ ತನ್ನ ತುಂಬು ಯೌವನದ ಕರಿಮುಡಿ ಹರಡಿಟ್ಟು ಅದರ ಮೇಲೆ ಒರಗುವ ಕತ್ತಲು. ಬೆಳ್ಳನೆಯ ಬೆಳಕೇ ಚಂದವೆಂದುಕೊಂಡಿದ್ದರೆ ಅನುರಾಗದಲ್ಲಿ ಆಕೆಗಿಂತ ತಾನೇನೂ ಕಡಿಮೆಯಲ್ಲವೆಂಬಂತೆ ಬರುವ ಮಾಯಾವಿಯಂತಹ ಕತ್ತಲು.

ಸಂಜೆಯ ಹೊತ್ತಿಗೇ ತಲುಪಬೇಕಿದ್ದವನು ಕತ್ತಲೆಯ ಮೋಹಕ್ಕೆ ಸಿಲುಕಿ ಅಲ್ಲೇ ನಿಂತುಬಿಟ್ಟಿದ್ದೆ. ಜಾಗದ ಹೆಸರು ಮಂಚದೇವನ ಹಳ್ಳಿ. ಮಂಚದೇವನೆಂದು ಆ ಊರಿನ ದೇವರಿಗೆ ಈ ಹೆಸರು ಏಕೆ ಬಂತೆಂದೂ ಗೊತ್ತಿಲ್ಲ.ಇಲ್ಲಿ ನನಗೆ ಗೊತ್ತಿರುವವನು ಒಬ್ಬನೇ. ಈತನ ಹೆಸರು ಮುನಿರಾಜು. ಈತನಿಗೆ ನಾ ಇಟ್ಟಿರುವ ಹೆಸರು ಅಣಬೆ ಮುನಿರಾಜು. ಏಕೆಂದರೆ ಈತ ಸಿಡಿಲು ಬಡಿದ ಇರುಳುಗಳಲ್ಲಿ ಬೆಳಕಿಗೂ ಮೊದಲೇ ಎದ್ದು ಸದ್ದಿಲ್ಲದೇ ಅಣಬೆ ಹೆಕ್ಕಲು ಹೊರಡುತ್ತಾನೆ. ಒಂದು ತರಹ ದೇವತೆಯೊಂದರ ಮಂಚದ ತರಹವೇ ಸಮತಟ್ಟಾಗಿರುವ ಭೂಪ್ರದೇಶ. ಅದರ ಒಂದು ತುದಿಯಲ್ಲಿ ಶಿರದಂತೆ ಕಾಣಿಸುವ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ದೇಗುಲ. ಸಿಡಿಲು ಬಡಿದಾಗಲೆಲ್ಲ ಇಲ್ಲಿ ಭೂಮಿ ಸಣ್ಣಗೆ ಕಂಪಿಸುತ್ತದಂತೆ. ಭೂಮಿ ಕಂಪಿಸಿದಾಗ ಪುಟ್ಟಪುಟ್ಟ ದೇವತೆಯರಂತೆ ಬೆಳ್ಳಗೆ ಭೂಮಿಯಿಂದೆದ್ದು ಬರುವ ಅಣಬೆಗಳು.

ನಮ್ಮ ಮುನಿರಾಜು ಈ ಅಣಬೆಗಳನ್ನು ಹೆಕ್ಕಿ ತಂದು ರಸ್ತೆ ಬದಿಯಲ್ಲಿ ಮಾರುತ್ತಾನೆ. ಈತನಿಗೆ ಈಗ ಯಾಕೋ ನನ್ನ ಮೇಲೆ ಸಿಟ್ಟು. ‘ನಿಮ್ಮಿಂದಲೇ ಇಂಗಾಯ್ತು ಸಾರ್’ ಅಂತಾನೆ. ಅಣಬೆ ಹುಟ್ಟುವ ಕುರಿತು ಈತ ನನ್ನ ಜೊತೆ ಸ್ವಲ್ಪ ಜಾಸ್ತಿಯೇ ಮಾತಾಡಿದ್ದ. ಹಾಗೆ ಮಾತನಾಡಿದ ಮೇಲೆ ಸಿಡಿಲು ಬಂದರೂ ಅಣಬೆ ಹುಟ್ಟುತ್ತಿಲ್ಲವಂತೆ. ‘ಅವು ತುಂಬ ಸೂಕ್ಷ್ಮ ಸಾರ್, ಸಣ್ಣ ಮಾತಿಗೂ ಕೋಪ ಮಾಡ್ಕೋತವೆ. ಆಮೇಲೆ ಸಿಗೋದೇ ಇಲ್ಲ. ನೀವು ಹೋಗಿ ಸಾ. ಪ್ರಶ್ನೆ ಕೇಳಿ ಎಲ್ಲಾ ಹಾಳ್ಮಾಡ್ಬಿಟ್ರಿ’ ಎಂದು ಬೈದಿದ್ದ. `ಅಯ್ಯೋ ಮಾರಾಯ ಸಾರಿ’ ಅಂದಿದ್ದೆ.

ಅದಾದ ಮೇಲೆ ತನ್ನ ಬೈಕಲ್ಲಿ ಪೆಟ್ರೋಲ್ ಮುಗೀತು ಅಂತ ಇನ್ಯಾರದ್ದೋ ಬೈಕಿನ ಹಿಂದೆ ಖಾಲಿ ಬಾಟ್ಲಿ ಹಿಡ್ಕೊಂಡು ಪೆಟ್ರೋಲ್ ತರಕ್ಕೆ ಹೋಗುವಾಗ ಅವನ ಕಣ್ಣೊಳಕ್ಕೆ ಒಂದು ಚಿಟ್ಟೆ ಹೊಕ್ಕು ಅದನ್ನು ಈತ ಉಜ್ಜಲು ಹೋಗಿ ಅದು ಒಂದು ದೊಡ್ಡ ವ್ರಣವಾಗಿ ಏನು ಮಾಡಿದರೂ ಅದು ವಾಸಿಯಾಗುತ್ತಲೇ ಇಲ್ಲ. ‘ಸಾರ್ ಯಾಕೋ ನನ್ನ ನಸೀಬೇ ಸರಿ ಇಲ್ಲ.ನಿಮ್ಮನ್ನ್ಯಾಕೆ ದೂರಲಿ’ ಎಂದು ಕಣ್ಣೀರು ಹಾಕಿದ್ದ. 

ಹೊರಟು ಹೋಗುತ್ತಿರುವ ಆತನ ಒಂದು ಕಣ್ಣಿನ ಬೆಳಕು. ಹೊರಡಲು ರೆಡಿಯಾಗುತ್ತಿರುವ ಆಕಾಶದ ಕೊನೆ ಕೊನೆ ಹೊತ್ತಿನ ಬೆಳಕು. ಮುನಿರಾಜು ಒಂದೊಂದು ಸಲ ಅಣಬೆ ಹಿಡಿದುಕೊಂಡು ಕಾಯುವ ಬೂರುಗ ಮರದ ಬುಡ. ಆ ಬೂರುಗ ಮರದ ಟೊಂಗೆ ಟೊಂಗೆಗಳಲ್ಲಿ ತೂಗುತ್ತಿರುವ ಹೆಜ್ಜೇನು ಗೂಡುಗಳು. ಹೆದ್ದಾರಿಯ ತಲೆಯನ್ನು ಸವರುತ್ತಿರುವಂತೆ ಬಾಗಿರುವ ಈ ಬೂರುಗದ ಮೇಲೆಯೇ ಅದು ಯಾಕೆ ಇಷ್ಟೊಂದು ಹೆಜ್ಜೇನುಗಳು ಬಂದು ಕೂತಿವೆಯೋ ನನಗಂತೂ ಇನ್ನೂ ಅರ್ಥವಾಗಿಲ್ಲ. ಈ ಸಲದ ಯಮನಂತಹ ಚಳಿಗೆ ಎಲೆಗಳನ್ನೆಲ್ಲ ಉದುರಿಸಿ ನಿಂತಿರುವ ರಕ್ಕಸನಂತಹ ಬೂರುಗದಮರ. ಟೊಂಗೆಟೊಂಗೆಗಳಲ್ಲಿ ಅರಳುತ್ತ ಬೀಳುತ್ತ ನಿಂತಿರುವ ಕಡುಗೆಂಪು ಬೂರುಗದ ಹೂವುಗಳು. ಕತ್ತಲಾಗುತ್ತಿರುವ ಹೊತ್ತಿನಲ್ಲಿ ಕರಿಬಂಡೆಯಂತೆ ಸುಮ್ಮನೆ ಮರವನ್ನು ಅಪ್ಪಿಕೊಂಡಿರುವ ಹೆಜ್ಜೇನು ಸಂಸಾರಗಳು. ಮರದ ಹೂಕೊಂಬೆಗಳ ನಡುವಿಂದ ಮಿನುಗಲು ತೊಡಗಿರುವ ಸಂಜೆ ನಕ್ಷತ್ರಗಳು.

ಗರುಡ ಹಕ್ಕಿಗಳೆರೆಡು ಆ ಸಂಜೆಯಲ್ಲೂ ಅದೇನು ಮೈಥುನವೋ ಜಗಳವೋ ಎಂದು ಗೊತ್ತಾಗದ ಹಾಗೆ ಕಾದಾಡಲು ತೊಡಗಿದ್ದವು. ಕಡ್ಡಿಕಡ್ಡಿಗಳನ್ನು ಪೋಣಿಸಿ ಗೂಡುಕಟ್ಟಲು ಹೆಣಗುತ್ತಿರುವ ಹೆಣ್ಣು ಗರುಡದ ಮೇಲೆ ಗಂಡು ಗರುಡ ಎರಗುತ್ತಿತ್ತು. ವ್ಯಗ್ರಗೊಂಡ ಹೆಣ್ಣು ಗರುಡ ಚೀರುತ್ತ ಅದನ್ನು ಓಡಿಸಲು ಹವಣಿಸುತ್ತಿತ್ತು. ಮೊದಲೇ ಕೆಂಪಗಿರುವ ಹೂಗಳ ಮೇಲೆ ದಾಂಗುಡಿಯಿಡುತ್ತಿರುವ ಸಂಜೆಗೆಂಪಿನ ರಂಗು. ಮುನಿಸಿಕೊಂಡಂತೆ ದೂರ ಹೋದ ಗಂಡು ಹಕ್ಕಿ ಒಂಟಿ ಗೆಲ್ಲೊಂದರಲ್ಲಿ ಕುಳಿತು ವೃಥಾ ಗೊಣಗುತ್ತಿತ್ತು. ಹೆಣ್ಣಿಗೆ ಮನೆವಾರ್ತೆಯ ಧಾವಂತ. ಗಂಡಿಗೆ ಮೈಥುನದ ಅವಸರ. ಹಕ್ಕಿಗಳಲ್ಲೂ, ಇರುವೆಗಳಲ್ಲೂ, ಮನುಷ್ಯರಲ್ಲೂ, ಬಹುಶಃ ದೇವದೇವತೆಯರಲ್ಲೂ ಹೀಗೇ ಇರುವ ಸಂಸಾರ ರಥ. ಬಹುಶ: ಇಂತಹದೇ ಏನೋ ಒಂದರಲ್ಲಿ ಸಿಲುಕಿಕೊಂಡಿರುವ ಅಣಬೆ ಮುನಿರಾಜು. ಇನ್ನು ಈ ಕತ್ತಲಲ್ಲಿ ಇಲ್ಲಿ ಬರಲಾರೆ ಎಂದು ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಮುಂದಕ್ಕೆ ಹೊರಟೆ.

(ಫೋಟೋಗಳೂ ಲೇಖಕರವು)

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

1 Comment

  1. Saharsh

    I am getting tears seeing your photos. I love Burga mara in my life because it attracts lots of bees

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ