ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಲೇಖನಗಳು ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ.
ನಾರಾಯಣ ಯಾಜಿ ಹೊಸ ಕೃತಿ “ಧವಳ ಧಾರಿಣಿ”ಗೆ ಹರೀಶ್ ಕೇರ ಬರಹ
ನಮ್ಮ ಹಿಂದಿನ ಕಾವ್ಯಗಳ ಅಲಂಕಾರಿಕರಿಗೆ ‘ವ್ಯುತ್ಪತ್ತಿʼ ಎಂಬುದರ ಮೇಲೆ ತೀರದ ವ್ಯಾಮೋಹ. ‘ವ್ಯುತ್ಪತ್ತಿʼ ಎಂದರೆ ಬಗೆಬಗೆಯ ಶಾಸ್ತ್ರಗಳು, ಕಾವ್ಯಗಳು, ಪುರಾಣಗಳ ಪರಿಚಯ, ಓದು. ಅದರಿಂದ ಬೆಳಗಿಬಂದ ಒಂದು ಬಗೆಯ ಪ್ರತಿಭೆ. ಕಾವ್ಯದ ರಚನೆಗೆ ಪ್ರತಿಭಾಶಕ್ತಿ, ಅಭ್ಯಾಸಗಳ ಜೊತೆಗೆ ವ್ಯುತ್ಪತ್ತಿಯೂ ಇರಬೇಕು ಎಂಬುದು ಮಮ್ಮಟ, ದಂಡಿ ಮೊದಲಾದವರ ಅಭಿಮತ. ಇಲ್ಲಿ ವ್ಯುತ್ಪತ್ತಿ ಎಂದರೆ ಅಪಾರ ಓದು, ಅನುಭವದಿಂದ ಸಂಪಾದಿಸಿದ ತಿಳಿವು, ಆದರೆ ಪ್ರತಿಭೆಯ ಜೊತೆಗೂಡಿದಾಗ ಅದು ಮಳೆಗಾಲದ ಮೋಡದಂತೆ ಮಿಂಚನ್ನು ಸೃಷ್ಟಿಸುತ್ತದೆ. ವಾಸ್ತವದಲ್ಲಿ ಮೋಡದಲ್ಲಿ ಮಿಂಚು ಅಂದರೆ ಬೆಂಕಿಯಿಲ್ಲ. ಅಲ್ಲಿರುವುದು ನೀರು. ಆದರೆ ನೀರು, ಗಾಳಿ, ಚಲನೆ ಎಲ್ಲದರ ಪರಿಪಾಕದಿಂದ ಅದು ಮಿಂಚನ್ನು ಸೃಷ್ಟಿಸುತ್ತದೆ.
ಸದ್ಯ ಕಾವ್ಯ ಎಂಬುದರ ಅರ್ಥವನ್ನು ಎಲ್ಲ ಬಗೆಯ ಸಾಹಿತ್ಯ ಎಂಬುದಕ್ಕೆ ವಿಸ್ತರಿಸಿಕೊಂಡರೆ ಈ ವ್ಯುತ್ಪತ್ತಿಯ ವ್ಯಾಪ್ತಿಯನ್ನು ನಾವು ನಾರಾಯಣ ಯಾಜಿ ಅವರಲ್ಲಿ ಕಾಣಬಹುದು. ಅವರಲ್ಲಿ ಪುರಾಣಗಳಿಂದ ಪಾಶ್ಚಾತ್ಯ ಸಾಹಿತ್ಯದವರೆಗೆ, ವೇದಗಳಿಂದ ವೇದಾಂತದವರೆಗೆ, ಕಾವ್ಯಗಳಿಂದ ಬ್ಯಾಂಕಿಂಗ್‌ನವರೆಗೆ, ಬುದ್ಧಜಾತಕದಿಂದ ಭಗವದ್ಗೀತೆಯವರೆಗೆ ಗಳಿಸಿಕೊಂಡ ತಿಳಿವಿನ ಅಗಾಧತೆಯಿದೆ. ಅವರು ಬರೆಯಲು ಕುಳಿತುಕೊಂಡಾಗ ಇದೆಲ್ಲವೂ ಸೇರಿ ಧವಳ (ಆಕಾಶ) ಧಾರಿಣಿ (ಭೂಮಿ)ಗಳ ನಡುವಿನ ಮೋಡದ ಮಿಂಚಾಗುತ್ತದೆ.
ಮೊದಲಿಗೇ ಇರುವ ‘ನಿರ್ವಿಕಲ್ಪ ಉಪಾಸನೆಯ ಮಾರ್ಗ- ಗಣಪತಿʼ ಬರಹದಲ್ಲಿ ಇದು ಎದ್ದು ಕಾಣಿಸುತ್ತದೆ. ಗಣಪತಿ-ವಿನಾಯಕನ ಕುರಿತು ಮಾತನಾಡಹೊರಡುವ ಈ ಲೇಖನವು ಜಗತ್ತಿನ ಎಲ್ಲ ಸಮುದಾಯಗಳಲ್ಲಿ ಬಲವಾಗಿ ಬೇರುಬಿಟ್ಟಿರುವ ಮೂರ್ತಿಪೂಜೆಯ ಪರಿಕಲ್ಪನೆ, ಬೈಬಲ್‌ನಲ್ಲಿ ಬರುವ ಮೂರ್ತಿಪೂಜೆಯ ಖಂಡನೆ, ಜಾಗತಿಕ ಸಂಸ್ಕೃತಿಗಳ ಅಧ್ಯಯನಕ್ಕೆ ನೆರವಾಗುವ ಮೂರ್ತಿಶಿಲ್ಪಗಳು, ಗಣೇಶನ ಕುರಿತು ನಡೆದಿರುವ ವೈದಿಕ- ಅವೈದಿಕ ಚರ್ಚೆಗಳು, ಶಂಕರಾಚಾರ್ಯರು ಜಾರಿಗೆ ತಂದ ಪಂಚಾಯತನ ಪೂಜಾ ಪದ್ಧತಿ, ಮೂರ್ತಿಪೂಜೆಯ ಮೂಲಕ ನಿರ್ವಿಕಲ್ಪ ಬ್ರಹ್ಮದ ತಿಳಿವಿನತ್ತ ಸಾಗುವ ಬಗೆ, ಜ್ಞಾನಕಾಂಡ ಇತ್ಯಾದಿಗಳ ಮೂಲಕ ಒಂದು ‘ಗ್ರ್ಯಾಂಡ್ ರೈಡ್ʼ ನೀಡುತ್ತದೆ. ಇದು ಗಣಪತಿಯ ಶಿಲ್ಪ, ದೇಶಕಾಲ ಸ್ವರೂಪ, ಮೂಲಕಲ್ಪನೆ ಇತ್ಯಾದಿಗಳ ಮೂಲಕ ಬೆನಕೋಪಾಸನೆಯ ತಾತ್ವಿಕ ಭಿತ್ತಿಯನ್ನು ಓದುಗನಲ್ಲಿ ಮೂಡಿಸುವ ರೀತಿ. ಒಂದು ವಿಚಾರವನ್ನು ಎತ್ತಿಕೊಂಡರೆ ಅದರ ಮೂಲಚೂಲಗಳನ್ನು ಆದ್ಯಂತವಾಗಿ ಅನ್ವೇಷಿಸಿ ಓದುಗನ ಮುಂದಿಟ್ಟು ‘ಯಥೇಚ್ಛಸಿ ತಥಾ ಕುರುʼ- ನಿನ್ನ ಅಭಿಪ್ರಾಯ ನೀನೇ ರೂಪಿಸಿಕೋ- ಎನ್ನುವ ಮಾರ್ಗ ಯಾಜಿಯವರದು.
ಇದೇ ಪ್ರಮೇಯವನ್ನು ಇತರ ಹಲವು ಬರಹಗಳಿಗೂ ವಿಸ್ತರಿಸಬಹುದು. ಉದಾಹರಣೆಗೆ ಕೃಷ್ಣಾವತಾರದ ಬಗ್ಗೆ ಬರೆದಿರುವ ಬರಹವು ಆರಂಭದಿಂದಲೇ ಪುತಿನ ಅವರ ಗೋಕುಲ ನಿರ್ಗಮನವನ್ನೂ ನಂತರ ಅಡಿಗರ ‘ರಾಮನವಮಿಯ ದಿವಸʼ ಕವನವನ್ನೂ ನೆನಪಿಸುತ್ತದೆ; ಜೊತೆಗೆ ಶ್ರೀರಾಮ ತನ್ನ ಬಗ್ಗೆಯೇ ಹೇಳಿಕೊಂಡ ‘ಆತ್ಮಾನಂ ಮಾನುಷಂ ಮನ್ಯೇʼ ಎಂಬುದು ಹಾಗೂ ಆದಿಕವಿ ವಾಲ್ಮೀಕಿ ಆತನಲ್ಲಿ ಹದಿನಾರು ಸುಗುಣಗಳಿರುವ ಪುರುಷೋತ್ತಮತ್ವವನ್ನು ಕಾಣಲು ನಡೆಸಿದ ಪ್ರಯತ್ನವೂ ನೆನಪಾಗುತ್ತದೆ. ಕೃಷ್ಣನ ಕಾಲದ ಸಾಮಾಜಿಕ- ರಾಜಕೀಯ ಸ್ಥಿತಿಗತಿ, ರಾಸಲೀಲೆಯ ಆಧ್ಯಾತ್ಮಿಕ ಭಾವ, ಇವೆಲ್ಲವುಗಳು ಹಿನ್ನೆಲೆಯಲ್ಲಿ ಬಂದು ನಿಲ್ಲುತ್ತವೆ. ಅಂದರೆ ಬರಹವೊಂದು ತಾತ್ವಿಕ ಭಾವಭಿತ್ತಿಯಾಗಿ ಒದಗುವುದಕ್ಕೆ ಬೇಕಾದ ಅಂಗೋಪಾಂಗಗಳು ಯಾಜಿಯವರಲ್ಲಿ ತ್ರಾಸವಿಲ್ಲದೆ ಒದಗಿಬರುತ್ತವೆ.
ನಾವು ಇಂದು ಮರೆತೇಬಿಟ್ಟಿರುವ ಪರಿಕಲ್ಪನೆಗಳಲ್ಲಿ ‘ಬಹುಶ್ರುತʼ ಎಂಬುದೂ ಒಂದು. ಹಿಂದಿನ ಕಾಲದ ಪುತಿನ, ಎಎನ್ ಮೂರ್ತಿರಾವ್, ಕುವೆಂಪು ಮೊದಲಾದವರ ಪ್ರಬಂಧಗಳನ್ನು ಓದುವಾಗ ಈ ಬಹುಶ್ರುತತ್ವ ಅವರಲ್ಲಿ ಇರುವುದು ನಮಗೆ ಗೊತ್ತಾಗುತ್ತಿತ್ತು. ಬಹು ಮೂಲಗಳಿಂದ ಜ್ಞಾನವನ್ನು ಕ್ರೋಢೀಕರಿಸಿಕೊಂಡ, ಮತ್ತು ಅದನ್ನು ಸೂಕ್ತ ಕಾಲದಲ್ಲಿ ಕೇಳುಗ- ಓದುಗರಿಗೆ ಮನಕ್ಕೆ ಹೊಗುವಂತೆ ರಸವತ್ತಾಗಿ ನೀಡಬಲ್ಲ ವ್ಯಕ್ತಿತ್ವ. ನಾರಾಯಣ ಯಾಜಿ ಅವರಲ್ಲಿ ಇಂಥ ಬಹುಶ್ರುತತ್ವವನ್ನು ನಾವು ಕಾಣಬಹುದು. ‘ಗೌತಮ ಬುದ್ಧʼನ ಬಗ್ಗೆ ಬರೆಯುತ್ತ, ಧಮ್ಮಪದದ ಪಕ್ಕಿಣಕ ವಗ್ಗದಲ್ಲಿ ಬರುವ ಗೌತಮನ ಶ್ರಾವಕರ ಗುಣಗಳನ್ನೂ ಭಗವದ್ಗೀತೆಯಲ್ಲಿ ತಿಳಿಸಲಾಗಿರುವ ಸ್ಥಿತಪ್ರಜ್ಞನ ಗುಣಗಳನ್ನೂ ಅಕ್ಕಪಕ್ಕದಲ್ಲಿಟ್ಟು ನೋಡುವುದನ್ನು ಗಮನಿಸಬಹುದು. ಹಾಗೇ ‘ಕಾಳಿದಾಸನ ಅಭಿಜ್ಞಾನʼ ಬರಹದಲ್ಲಿ ಆತನ ಶಾಕುಂತಲ ನಾಟಕದ ಲಕ್ಷಣವನ್ನು, ಮಹಾಭಾರತದ ಮೂಲಕತೆಯನ್ನು ಹಾಗೂ ಪಾಶ್ಚಾತ್ಯ ವಿದ್ವಾಂಸ ಆರ್ಥರ್ ಬೆರ್ರಿಡೇಲ್ ಕೀತ್ ವೈದರ್ಭೀ ಶೈಲಿಯ ಬಗ್ಗೆ ನೀಡಿದ ಟಿಪ್ಪಣಿಗಳನ್ನು ಜೊತೆಯಾಗಿಟ್ಟು ವಿಶ್ಲೇಷಿಸುವುದನ್ನು ಗಮನಿಸಬಹುದು. ಇಲ್ಲಿ ಯಾಜಿಯವರ ಓದಿನ ವ್ಯಾಪ್ತಿವಿಸ್ತಾರಗಳು ನಮಗೆ ಅರಿವಾಗುತ್ತವೆ.
ಆ ಮೂಲಕ ಗೊತ್ತಾಗುವುದೆಂದರೆ, ಲೇಖಕರು ತಕ್ಷಣ ರಂಜಿಸುವ ಮಾತುಗಳನ್ನು ಬರೆದು ವಿರಮಿಸುವುದರಲ್ಲಿ ಆಸಕ್ತರಲ್ಲ. ‘ಅಲ್ಪವಾದುದರಲ್ಲಿ ಸುಖವಿಲ್ಲ, ಭೌಮವಾದುದೇ ಸುಖʼ (ಯೋ ವೈ ಭೂಮಾ ತತ್ಸುಖಂ, ನಾಲ್ಪೇ ಸುಖಮಸ್ತಿ) ಎಂಬ ಛಾಂದೋಗ್ಯೋಪನಿಷತ್ತಿನ ಮಾತಿನಲ್ಲಿ ಯಾಜಿಯವರಿಗೆ ಅಚಂಚಲ ವಿಶ್ವಾಸ. ಓದಿ ಮುಗಿಸಿದ ಕೂಡಲೇ ಮಂಜಿನಂತೆ ಕರಗಿಹೋಗುವ ವಾಕ್ಯಗಳ ಬದಲು, ತುಸುಕಾಲ ನೆನಪಿನಲ್ಲಿ ಉಳಿಯುವ ವಿಚಾರಗಳು. ಮನರಂಜಿಸುವ ಗದ್ಯದ ಬದಲು ವಿಚಾರವೊಂದರ ವಿಶ್ವಾತ್ಮಕ ಆಯಾಮವನ್ನು ಹುಡುಕುವ ರಚನೆಗಳು ಎಂದು ಇವನ್ನು ಗ್ರಹಿಸಬಹುದು. ಅದರ ಜೊತೆಗೇ ‘ಯೋ ವೈ ಭೂಮಾ ತದಮೃತಂ, ಯದಲ್ಪಂ ತನ್‌ಮರ್ತ್ಯಂʼ ಎಂಬ ಎಚ್ಚರ ಕೂಡ ಅವರಿಗೆ ಇದೆ. ಅಂದರೆ ಅಮೃತವು ಸಿಗುವುದು ಅಪರಂಪಾರವಾದ ಭೂಮ ಅಥವಾ ಭವ್ಯತೆಯಲ್ಲಿ. ಹೀಗಾಗಿ ಯಾಜಿಯವರ ಬರಹಗಳು ಅಸೀಮಿತ ಭೌಮತೆಯ ಅವಕಾಶದಲ್ಲಿ ಯಾನ ಹೊರಡುತ್ತವೆ. ಈ ಕೃತಿಯ ಎಲ್ಲ ಬರಹಗಳಲ್ಲೂ ಇದನ್ನು ಗಮನಿಸಬಹುದು.
ಆದರೆ ಯಾಜಿಯವರ ಬರವಣಿಗೆಯ ಪ್ರಧಾನ ಒಲವು ಇರುವುದು ಪುರಾಣ ಹಾಗೂ ಉಪನಿಷತ್ತುಗಳಲ್ಲಿ ಎನ್ನಬಹುದು. ಇವರ ಮೊದಲ ಕೃತಿ ‘ನೆಲಮುಗಿಲುʼ ಉಪನಿಷತ್ತುಗಳ ಕುರಿತು ಗಾಢವಾದ ಹಲವು ಬರಹಗಳನ್ನು ಹೊಂದಿದೆ. ಈ ಕೃತಿಯಲ್ಲಿ ಅಂಥ ಕೆಲವು ಬರಹಗಳಿವೆ. ಉಪನಿಷತ್ತುಗಳ ಜ್ಞಾನದ ಸ್ವಾರಸ್ಯ ಎಲ್ಲಿದೆ ಎಂದರೆ ಭೌಮಾನುಭೂತಿ ಅಥವಾ ಬ್ರಹ್ಮಾನುಭೂತಿಯನ್ನು ತಿಳಿಯಾದ ಮಾತುಗಳಲ್ಲಿ ಶಿಷ್ಯರಿಗೆ ವಿವರಿಸುವುದರಲ್ಲಿ. ಶಬ್ದದಲ್ಲಿ ವಸ್ತುವಿಲ್ಲ; ಆದರೆ ಶಬ್ದದಲ್ಲಿ ಅರ್ಥವಿದೆ. ಅರ್ಥವನ್ನು ಶಬ್ದ ಹಿಂಬಾಲಿಸುತ್ತದೆ, ಋಷಿಗಳಲ್ಲಿ ಅರ್ಥವೇ ಶಬ್ದವನ್ನು ಹಿಂಬಾಲಿಸುತ್ತದೆ ಎನ್ನುವಾಗ ಈ ಶಬ್ದದ ಸೀಮೆಯೂ ಅಸೀಮತೆಯೂ ನಮಗೆ ಅರ್ಥವಾಗಬೇಕು. ಉಪನಿಷತ್ತು ಹೀಗೆ ದ್ವಂದ್ವಮಯವಾದ ನಿರ್ದ್ವಂದ್ವವನ್ನು ಹಿಡಿಯುವ, ನಮ್ಮ ಪರಂಪರೆಗೇ ವಿಶಿಷ್ಟವಾದ ಒಂದು ಕ್ರಮ. ಅದನ್ನು ಯಾಜಿಯವರು ಸ್ವಾರಸ್ಯಕರ ಹಾಗೂ ಸಂಗ್ರಹ ರೂಪದಲ್ಲಿ ನಮ್ಮ ಮುಂದೆ ಇಡುತ್ತಾರೆ. ಉಪನಿಷತ್ತಿನ ‘ನೇತಿʼ ಕ್ರಮವನ್ನು ಅವರು ವಿವರಿಸುವ ಸರಳವಾದ ರೀತಿಯಲ್ಲಿ ಇದನ್ನು ಗಮನಿಸಬಹುದು.
ಜತೆಗೆ ಉಪನಿಷತ್ತು- ಪುರಾಣದ ಕೆಲವು ಪಾತ್ರಗಳ ಜೊತೆಗೂ ಅವರು ಒಡನಾಡಿದ್ದಾರೆ. ದೇವಕಿ, ಸುವರ್ಚಲೆ, ಮುದ್ಗಲಾನಿ, ರಂತಿದೇವ ಮೊದಲಾದವರ ಬಗ್ಗೆ ಇರುವ ಲೇಖನಗಳಲ್ಲಿ ಯಾಜಿಯವರ ವ್ಯುತ್ಪತ್ತಿಯ ಜೊತೆಗೆ ಪಾತ್ರಚಿತ್ರಣದ ಸಾಮರ್ಥ್ಯವೂ ಕೆಲಸ ಮಾಡಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಇತರರಿಗೆ ಇಲ್ಲದ ಗುಣವಿಶೇಷವೊಂದು ಯಾಜಿಯವರಿಗೆ ಇದೆ. ಅದೇನೆಂದರೆ ಅವರು ಯಕ್ಷಗಾನ ತಾಳಮದ್ದಳೆಯ ಪಳಗಿದ ಅರ್ಥಧಾರಿ. ಇಲ್ಲಿ ಅರ್ಥಧಾರಿಯು ಪ್ರಸಂಗಕೃತಿಗೂ ಕತೆಗೂ ನಿಷ್ಠನಾಗಿದ್ದರೂ ಅದರೊಳಗಿದ್ದುಕೊಂಡೇ ಸಾಕಷ್ಟು ಈಜಾಡುವ, ತನ್ನ ವರ್ತನೆ ಸ್ವಭಾವಗಳಿಗೆ ಸ್ವತಂತ್ರ ವ್ಯಾಖ್ಯೆಗಳನ್ನು ರೂಪಿಸಿಕೊಳ್ಳುವ ಅಪಾರ ಅವಕಾಶವಿದೆ. ಹೀಗೆ ಸೃಷ್ಟಿಯಾಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಯಾಜಿಯವರು ಇಡೀ ಕತೆಗೇ ಹೊಸದೊಂದು ಆಯಾಮವನ್ನು ಸೃಷ್ಟಿಸುತ್ತಾರೆ. ಇಲ್ಲಿ ವರ್ತನಾವಿಶ್ಲೇಷಣೆಯ ಜೊತೆಗೆ, ಭಾವನಾತ್ಮಕ ನೆಲೆಯಲ್ಲೂ ಅರ್ಥಧಾರಿ ಕೆಲಸ ಮಾಡಬೇಕಾಗುತ್ತದೆ. ವಿನಾಯಕ, ಶ್ರೀರಾಮ, ಕೃಷ್ಣರ ಚಿತ್ರಣದಲ್ಲೂ ಇದನ್ನು ನೋಡಬಹುದು.
ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಲೇಖನಗಳು ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ.
“ಧರ್ಮ ಮತ್ತು ರಾಜಕೀಯ ಗುರಿಸಾಧನೆ ಒಂದನ್ನೊಂದು ಬಿಟ್ಟಿರದ ಗಾಂಧೀಜಿ”ಯೇ ಅವರ ಬರಹದ ಚರಮಲಕ್ಷ್ಯ. ಇದನ್ನೇ ಶಾಸ್ತ್ರಿಯವರಿಗೂ ವಿಸ್ತರಿಸಿಕೊಳ್ಳಬಹುದು.
ಇಲ್ಲಿರುವ ಎಲ್ಲ ಬರಹಗಳೂ ಮೊದಲು ಅಂಕಣವಾಗಿ ಪ್ರಕಟವಾದಂಥವು. ಅಂಕಣ ಬರಹಗಳಿಗೆ ಒಂದು ಸಾಂದರ್ಭಿಕತೆ ಇರಬೇಕಾದುದು ಅನಿವಾರ್ಯ. ಇಲ್ಲೂ ಇದೆ. ಬಹಳಷ್ಟು ಸಲ ಈ ಸಾಂದರ್ಭಿಕತೆ ಬರಹದ ಸೀಮಿತತೆಗೆ ಕಾರಣವಾಗಿಬಿಡುತ್ತದೆ. ಆದರೆ ಇಲ್ಲಿ ಹಾಗಾಗಿಲ್ಲ. ಇವು ಹಲವು ವರ್ಷ ಬಿಟ್ಟು ಓದಿದರೂ ಸಕಾಲಿಕ, ಸಮಕಾಲೀನ ಆಗುವಂತಿವೆ. ಇದು ಕೂಡ ಇವುಗಳ ಈ ಕೃತಿಯ ಸಾರ್ವಕಾಲಿಕತೆಗೆ ಕಾರಣವಾಗಿರುವ ಇನ್ನೊಂದು ಅಂಶ. ಡೆಡ್‌ಲೈನ್‌ನೊಳಗೆ ಏನೋ ಒಂದನ್ನು ಬರೆದು ಪಾರಾಗಬಯಸುವ ‘ಸಲೀಸು ಅಂಕಣಕಾರʼರ ಗುಣ ಇಲ್ಲಿನ ಬರಹಗಳಲ್ಲಿ ಇಲ್ಲ. ನಾನು ಕೂಡ ವಿಸ್ತಾರವಾಗಿರುವ ಇಲ್ಲಿನ ಲೇಖನಗಳನ್ನು ಪತ್ರಿಕಾ ಅಂಕಣದ ಶಬ್ದಮಿತಿಗೆ ಒಗ್ಗಿಸಲು ಹೆಣಗಾಡಿದ್ದು ನೆನಪಾಗುತ್ತದೆ. ಯಾಕೆಂದರೆ ಸ್ವಾರಸ್ಯ ಕೆಡದಂತೆ ಇವುಗಳ ವಾಕ್ಯಗಳಿಗೆ ಕತ್ತರಿ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಅದು ಇವುಗಳ ಶಕ್ತಿ. ಯಾಜಿಯವರು ಇಂಥ ಇನ್ನಷ್ಟು ಕೃತಿಗಳ ಮೂಲಕ ನಮ್ಮ ಅರಿವಿನ ಸೀಮೆಯನ್ನು ವಿಸ್ತರಿಸಲಿ.
(ಕೃತಿ: ಧವಳ ಧಾರಿಣಿ, ಲೇಖಕರು: ನಾರಾಯಣ ಯಾಜಿ, ಪ್ರಕಾಶಕರು: ಯಾಜಿ ಪ್ರಕಾಶನ, ಬೆಲೆ: 220/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ