Advertisement
ಭೂಮ್ತಾಯಿ ಮ್ಯಾಗ್ಳ ಗಿಡ ಗಂಟಿ ಬುಟ್ರೆ ದಿಷ್ಟಿ ನಿವಾಳ್ಸೋದೇ ದೊಡ್ಡ ಮದ್ದು: ಸುಮಾ ಸತೀಶ್ ಸರಣಿ

ಭೂಮ್ತಾಯಿ ಮ್ಯಾಗ್ಳ ಗಿಡ ಗಂಟಿ ಬುಟ್ರೆ ದಿಷ್ಟಿ ನಿವಾಳ್ಸೋದೇ ದೊಡ್ಡ ಮದ್ದು: ಸುಮಾ ಸತೀಶ್ ಸರಣಿ

ನಾವು ಉಣ್ಣಾವಾಗ ಒಂದು ಕಡಿಕ್ಕೆ ಕುಂತು ಉಂಡು, ಗೋಮೆ ಇಕ್ಕಿ ಎದ್ದೇಳ್ ಬೇಕು. ಅದ್ ಬುಟ್ಟಿ ಓಡಾಡೋ ಜಾಗದಾಗೆ ಉಂಡ್ರೆ, ತಟ್ಟೆಗ್ಳಾಗಿಂದ ಮುಸ್ರೆ ಪಸ್ರೆ ಚೆಲ್ಲಾಕಿಲ್ವೇ? ಅದುನ್ನ ಯಾರಾನಾ ತುಳುದ್ರೆ ಕಾಲ ರಂಜು ಆಗ್ತೈತೆ ಅಂತಿದ್ರು. ಭೂಮ್ತಾಯಿ ಕೊಡಾ ಅನ್ನವಾ ಅಂಗೆ ಮರ್ವಾದೆ ಇಲ್ದಂಗೆ ಚೆಲ್ಲೀರೆ, ಅದ್ನ ತುಳ್ದು ಪಳ್ದು ಮಾಡೀರೆ ನಮ್ಗೆ ಒಳ್ಳೇದಾಯ್ತೈತೆ? ಅಂಬೋರು. ಇದೂ ಒಂತರಾ ದಿಟವೇಯಾ. ಕಿಲೀನ್ ಆಗಿರ್ಬೇಕು ಅಂಬ್ತ ಪಾಠ ಹೇಳ್ತೈತೆ. ಭೂಮ್ತಾಯಿ ಕೊಡಾ ಪ್ರಸಾದ್ವ ಚೆಲ್ಬಾರ್ದು ಅಂತ್ಲೂ ಹೇಳ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಮದ್ದುಗಳ ಕುರಿತ ಬರಹ ನಿಮ್ಮ ಓದಿಗೆ

ಜರಾ ಗಿರಾ, ವಾಂತಿ ಭೇದಿ, ಕೆಮ್ಮು ಕಫ, ಸೀತ ಗೀತ ಏನೇ ಬಂದ್ರೂನೂವೇ ಬ್ಯಾಗ್ನೇ ಆಸ್ಪತ್ರೇಗೆ ಓಯ್ತಾ ಇರ್ಲಿಲ್ಲ. ಮನೆ ಮದ್ದು ಎಲ್ಲಾನೂವೇ ಮಾಡುದ್ ಮ್ಯಾಗೇನೇ ಆಸ್ಪತ್ರೆ ಮಕಾ ಕಾಣ್ತಿದ್ದಿದ್ದು. ಆಮ್ಯಾಲೂ ಹೋಗ್ದಿದ್ರೆ ಇನ್ನಾ‌ ಜೋರು ಜೋರು ಮನೆ ಮದ್ದು ಮಂತ್ರ ಅಂತ್ರಗ್ಳೆ ಗತಿ‌ ಆಗ್ತಿದ್ವು.

ಭೇದಿ ಕಿತ್ಕಂಡ್ರೆ ಒಂದು ಆಗ್ದಿದ್ರೆ ಒಂದು

ದೊಡ್ಡೋರ್ಗೆ ಭೇದಿ ಆದ್ರೆ ಒಂದು ಚಮಚ ಮೆಂತ್ಯಾನೋ, ಸಾಸಿವೇನೋ ಅಂಗೈಯಾಗೆ ಆಕ್ಕಂಡು ಒಂದು ಲೋಟ ನೀರು ಮಜ್ಜಿಗೇ ಜೊತ್ಯಾಗೆ ನುಂಗಿದ್ರೆ ಆತು. ಮಜ್ಜಿಗೆ ಅನ್ನ‌‌ ಮಾತ್ರ ಕೊಟ್ಟು ಹೊಟ್ಟೆ ವಸಿ ಕಾಲಿ ಬುಟ್ರೆ ಎಲ್ಲಾ ಸರೋಯ್ತೈತೆ, ಹಾಳೂಮೂಳೂ ಬಾಯಾಡ್ದೆ ವಸಿ ಸುಮ್ಕಿರಿ ಅಂಬ್ತ ಗದರಿಕೊಣೋರು ನಮ್ ಹಿರೇರು. ಭೇದಿ ಆದ್ರೆ ಈ ಪಾಡು. ಇನ್ನಾ ಆಗ್ದೇ ಹೋದ್ರೆ ಇನ್ನೊಂದು ಪಾಡು.

ಭೇದಿ ಆಗ್ದೇ ಹೋದ್ರೆ ಒಂದು ಚಮಚ ಹಳ್ಳೆಣ್ಣೆ ಬಿಸಿ ಮಾಡಿ ಕುಡಿಸಿದ್ರೆ ಆತು. ಇಲ್ಲಾಂದ್ರೆ ಜಾಪಾಳದ ಮಾತ್ರೆ ಹಾಕ್ತಿದ್ರು. ಹೊಟ್ಟೆ ನೋವಿಗೆ ಹೊಕ್ಕುಳಿಗೆ ತುಪ್ಪ ಬಳಿಯಾರು. ಬಿಸಿ ನೀರ್ಗೆ ತುಪ್ಪ ಹಾಕಿ ಕುಡಿಸಾರು.

ಎಳೇಕೂಸಿನ ಔಷ್ದಿ

ಎಳೆ ಕೂಸಿಗೇ ಬ್ಯಾರೆ ರಕಮು. ಗಂಧದ ಕಲ್ಲಿನ ಮ್ಯಾಗೆ ಹಾಲ್ನಾಗೆ ಜಾಕಾಯಿ, ಭಜೆ, ಕರಕ್ಕಾಯಿ ತೇದು ಒಳಲೇ ಒಳಿಕ್ಕಾಕಿ ವಸಿ ಹಾಲು ಹಾಕಿ‌ ಕುಡ್ಸಾರು. ಆಗ ಭೇದಿ ನಿಲ್ಲಾದು.

ಅಂಡಿಗೆ ಸೋಪು ಹೊಸೆದು

ಕೂಸುಗ್ಳು ಭೇದಿ ಆಗ್ದೆ ಹೊಟ್ಟೆ ನೋವಿಗೆ ಮುಲುಕುತ್ತಿದ್ದರೆ, ಹೊಟ್ಟೆ ಮುಟ್ಟಿ‌ನೋಡಿ, ಗಟ್ಟಿ ಅದೆ ಅನ್ ಕಂಡು, ಇಳ್ಳೇದೆಲೆ ತಕಂಡು ದೀಪದ ಮ್ಯಾಗಿಟ್ಟು ವಸಿನೇ ವಸಿ ಬಿಸಿ ಮಾಡಿ ಹೊಕ್ಕುಳ ‌ಮ್ಯಾಲೆ ಹಾಕೋರು. ಹೊಟ್ಟೆ ಮೆತ್ತಗಾಗಿ, ಒಳಗಿರೋದು ಆಚೆ ಬರೋದು. ಅಂಗೂ ಬರ್ಲಿಲ್ಲಾ ಅಂದ್ರೆ ನಮ್ಮಜ್ಜಿ ಇನ್ನೊಂದು ಕೆಲ್ಸಾ ಮಾಡೋರು. ಸೋಪಿನ್ ತುಂಡು ತಕಂಡು ಅಂಗೈಯಾಗಿಟ್ಟು ಹೊಸೆಯೋರು. ಅದು ಮೆತ್ತಗಾದ್ ಮ್ಯಾಲೆ ಉದ್ದುಕ್ಕೆ ಬತ್ತಿ ತರ ನಲ್ಸೋರು.(ಹೊಸೆಯೋದು) ಅದುನ್ನ ಮಕ್ಕಳ ಅಂಡಿನ ತಾವ ಇಟ್ಟು‌ ಸೊಲ್ಪ ಒಳೀಕ್ಕೆ ನುಗ್ಗಿಸೋರು. ಮುಲ ಮುಲ ಆಗಿ ಮಕ್ಳು‌ ಅತ್ರೂ ಸೈತ ಒಳಗೆ ಗಟ್ಟಿಯಾಗಿರೋ ಕಕ್ಕ ಸೋಪಿನ್ ದೆಸ್ಯಾಗೆ ಮೆತ್ತಗಾಗಿ ಸಲೀಸಾಗಿ ಆಚಿಕ್ಕೆ ಬರೋದು. ಅದ್ಕೂ ಮದ್ಲು ಅಂಡಿಗೆ ವಸಿ ಹಳ್ಳೆಣ್ಣೆ ಸುತ ಸವರೋರು. ಸಲೀಸಾಗಿ ಜಾರ್ಕಂಡು ಬತ್ತದೆ ಅಂತಾವ. ಅಳ್ತಿರೋ ಮಕ್ಳು ಹೊಟ್ಟೆ ಹಗುರಾದ್ ಮ್ಯಾಗೆ ಕೇಕೆ ಹಾಕ್ಕಂಡು ಕುಣಿಯೋವು. ಇಂತಾವೆಲ್ಲಾ ಅಜ್ಜಿದೀರ ಬತ್ತಳಿಕೇನಾಗೆ ದಂಡಿಯಾಗಿದ್ವೋ. ಮಕ್ಳು ಆರೋಗ್ಯವಾಗಿರ್ಲಿ ಅಂಬ್ತಾವ ದಿಸ ಬಿಟ್ಟು ದಿಸ( ದಿವ್ಸ) ಭಜೆ, ಜಾಕಾಯಿ, ಜಾಪತ್ರೆ, ಕರಕ್ಕಾಯಿ, ಲವಂಗ, ಖರ್ಜೂರದ ಬೀಜ, ಹುಣಿಸೇಬೀಜ, ಇನ್ನಾ ಯಾತ್ಯಾತರದೋ ನಾಕೈದು ಪದಾರ್ಥ ಹಾಲ್ನಾಗೆ ತೇದು ಒಳಲೇನಾಗೆ ಕುಡಿಸ್ತಿದ್ರು. ಜೀರ್ಣಸಕ್ತಿ ಸೆಂದಾಗಾಗ್ಲಿ, ಹೊಟ್ಟೆ ಉಬ್ಬರ ಇದ್ರೆ ಕಮ್ಮಿ ಆಗ್ಲಿ ಅಂತಾವ ಇದುನ್ನ ಮಾಡೋರು. ತೆಳ್ಳಗೆ ರಾಗಿ ಸರಿ ಮಾಡಿ ನಾಕೈದು ತಿಂಗ್ಳ ಮಗೀಗೆ ವಸಿ ವಸಿ ಒಳಲೇ ಒಳಿಗೆ ಹಾಕಿ ಕುಡಿಸೋರು. ಮಕ್ಳು ಗಟ್ಟಿಯಾಗಿ ಬೆಳೀತವೆ ಅಂಬ್ತ ನಂಬಿದ್ರು.

ಬಿಟ್ಟೂ ಬಿಟ್ಟು ‌ಜರ ಬಂದ್ರೆ

ಮಕ್ಳುಗೆ ಜರ‌ ಬಿಟ್ಟೂ ಬಿಟ್ಟು ಬರ್ತಾಲೇ ಇದ್ರೆ ಇದುನ್ನ ಮಾಡೋರು. ನೆಲುಕ್ಕೆ ಬಿಳೇ ಬಟ್ಟೆ ಹಾಸಿ, ಅದ್ರಾಗೆ ಅರ್ಸಣ ಕುಂಕ್ಮ ಹಾಕಿ ಕಕ್ಕೆ ಸೊಪ್ಪು ಹಾಸಿ (ಇದು ನೋಡಾಕೆ ಅಲಸಂದೆ ಗಿಡದ ಎಲೇ ತರುಕ್ಕೇ ಅನ್ಸುದ್ರೂ, ಮರದಾಗೆ ಬಿಡತಿತ್ತು. ಕಕ್ಕೆ ಸೊಪ್ಪು ಅಂಬ್ತಿದ್ವಿ. ಎಲೆ ವಸಿ ದೊಡ್ಡದಾಗಿರ್ತಿತ್ತು. ನಮ್ ಕಡೆ ತೆಲುಗಿನಾಗೆ ಕಕ್ಕಾಕು ಅಂಬ್ತಿದ್ವಿ. ಈ ಕಕ್ಕೆ ಎಲೇನಾ ನಮ್ ಕದಿರಪ್ಪನ ಪರಿಷೇನಾಗೆ ಬೂತಪ್ಪಗಳು ಕೈಯಾಗೆ ಇಟ್ಕಂಡು ಕುಣೀತಿದ್ರು.) ಮುತ್ತಿನ ಜೋಳ(ಮುಸುಕಿನ್ ಜೋಳ ಅಲ್ಲ ಬಿಳೇ ಜೋಳ)ದಾಗೆ ಅರಳು ಮಾಡಿ ಅದ್ನೂ ಬಟ್ಟೆ ಮ್ಯಾಗಾಕಿ ಅದ್ರ ಮ್ಯಾಗೆ ಮಕ್ಳನ್ನ ಮನುಗಿಸ್ತಿದ್ರು. ಇಂಗೇ ಮೂರೊತ್ತೋ ಐದೊತ್ತೋ ಮನುಗಿಸಿದ್ರೆ ಜರ ಓಡೋಯ್ತದೆ ಅಂಬ್ತ ಹಿರೀಕ್ರು ಯೋಳ್ತಿದ್ರು. ಆಗ ಬರೇ ಇದುನ್ನೇ ಮಾಡ್ತಿದ್ರು.

ಈಗ ಮಕ್ಳ ಇಸ್ಯದಾಗೆ ಯಾರೂ ಯಾಮಾರಲ್ಲ. ಡಾಕುಟ್ರ ತಾವ್ಲೂ ಹೋಗ್ತಾರೆ. ಇವುನ್ನೂ ಮಾಡೇ ಮಾಡ್ತಾರೆ. ಅತ್ಲಾಗೆ ಡಾಕುಟ್ರ ಮ್ಯಾಗೂ ನಂಬ್ಕೆ. ಇತ್ಲಾಗೆ ಹಿರೇರ ಮಾತಿನ್ ಮ್ಯಾಗೂ ಭಯ.‌ ಭಯ, ನಂಬ್ಕೆ ಎಲ್ಡೂ ಸೇರಿ ಇಚಿತ್ರವಾದ ಮನ್ಸು ಆಡುಸ್ದಂಗೆ ಆಡ್ತಾರೆ.

ಕಣ್ಣಿಗೆ ಬಂದ್ರೆ…

ಕಣ್ಣು ಕೆಂಪುಗಾದ್ರೆ, ಪಿಸುರು ಜಾಸ್ತಿ ಬಂದು ರೆಪ್ಪೆಗ್ಳು ಒಂದುಕ್ಕೊಂದು ಅಂಟಾಕ್ಕಂಡ್ರೆ ಕಣ್ಣಿಗೆ ಬಂದೈತೆ ಅಂಬೋರು. ಮೂರು ದಿನ ಕುರಿ ಹಾಲ್ನ ತಕಾ‌ಬಂದು ಕಣ್ಣಿಗೆ ಬಿಡಾರು. ಕಣ್ಣು ಬಿಳೇ ಬಣ್ಣುಕ್ಕೆ‌ ಬಂದ್ರೆ ಸರೋಯ್ತು ಅಂಬ್ತ ಲೆಕ್ಕ. ಆಗ ಹತ್ತು ಪೈಸುಕ್ಕೋ ನಾಕಾಣೇಗೋ ಕಣ್ಣು ಟ್ಯೂಬು ಅಂತ ಬತ್ತಿತ್ತು. ಕಣ್ಣಿನ ಆಯಿಂಟುಮೆಂಟು. ಈಟೇ ಈಟಿರ್ತಿತ್ತು. ಈಗ ವಿಟಮಿನ್ ಇ ಆಯಿಲ್ ಕ್ಯಾಪ್ಸೂಲ್ ಬರಾಕಿಲ್ವೇ ಅಂಗೇಯಾ, ಆದ್ರೆ ಹಳದೀ ಬಣ್ಣವಾಗಿ ಕಂಡ್ರೂ ಕೆನೆಬಣ್ಣುದ್ದು ಇತ್ತು. ಅದ್ರ ತುದೀನ‌ ಬಿಲೇಡ್ನಾಗೆ ಕತ್ರಿಸಿ ಒಂದು ತೊಟ್ಟು ಕಣ್ಣಿಗೆ ಬಿಟ್ಕಣಾದು. ಒಂದು ಟ್ಯೂಬು ಒಂದಿನುಕ್ಕೆ ಕಾಲಿ ಆಗ್ತಿತ್ತು. ಆ ಟ್ಯೂಬ್ನೂ ತಂದು ಹಾಕ್ಕಳೀವು. ಯಾತ್ರಾಗೋ ಒಂದ್ರಾಗೆ ಒಟ್ನಾಗೆ ಕಣ್ಣಿಗೆ ಬಂದುದ್ದು ಒಂಟೋಯ್ತಿತ್ತು ಆಟೇಯಾ.

ಮುಳ್ಳು ಚುಚ್ಚೀರೆ

ಎಕ್ಕದ ಗಿಡದ ಹಾಲು ಹಾಕೋದು ಮಾಮೂಲಿ. ಮುಳ್ಳು ತೆಗ್ಯಾಕೆ ಹೋಗಿ ಗಾಯಾ ಗೀಯಾ ಆಗಿದ್ರೆ, ಮುಳ್ಳು ಇನ್ನಾ ಆಳ್ದಾಗಿದ್ರೆ, ಸೆಗಣಿ ತಕಾ ಬಂದು ದೀಪದ ಮ್ಯಾಗೆ ವಸಿ ಬಿಸಿ ಮಾಡೋರು. ಮದ್ಲೆಲ್ಲ ಒಲೆ ಉರೀ ಹಾಕ್ತಿದ್ರು. ಅದ್ರ ಮ್ಯಾಗೆ ಸೆಗಣೀಯಾ ಸುಮ್ಕೆ ಒಂದ್ ಕಿತ ಮಡಗಿ ಈಚಿಗ್ ತೆಗುದ್ರೂ ಬೆಚ್ಚಗಾಗಿ ಮೆತ್ತಗಾಗ್ತಿತ್ತು. ಈಗ ಎಣ್ಣೆ ದೀಪ ಹಚ್ಚಿಟ್ಟು ಅದ್ರ ಮ್ಯಾಗೆ ಬಿಸಿ ಮಾಡ್ಕಂತಾರೆ. ಆ ಸೆಗಣೀಯಾ ಮುಳ್ಳು ಚುಚ್ಚಿದ್ ಜಾಗ್ದ ಮ್ಯಾಗಿಟ್ಟು ಒಂದು ಬಟ್ಟೆಯಾ ಬಿಗಿಯಾಗಿ ಕಟ್ಟುದ್ರೆ ಆತು. ಕೀವುಗೂಡೋದು ತಪ್ತೈತೆ. ಕೀವು ಗೀವೆಲ್ಲಾ ಮಾಯ್ವಾಗಿ ಮುಳ್ಳು ಮ್ಯಾಲುಕ್ಕೆ ಬತ್ತೈತೆ. ಡಾಕುಟ್ರ ತಾವ ಹೋದೇಟ್ಗೆ ಕೈ ಕುಯ್ ಬೇಕು ಕಾಲ್ ಕುಯ್ ಬೇಕು ಅಂಬ್ತ ಎದುರ್ಸ್ತಾರೆ ಅಂಬೋದು ಜನ್ರ ಭಯ. ಮುಳ್ಳು ಸೇರಿರಾ ಜಾಗ ಗಟ್ಟಿಯಾಗಿ ಸಣ್ಣ ಗೆಡ್ಡೆ ತರ ಆದಾಗ ಅದೇ ಆಣಿ ಅಂಬ್ತಾರಲ್ಲ ಅದುನ್ನ ಡಾಕುಟ್ರು ಕುಯ್ದು ಬ್ಯಾಂಡೇಜ್ ಕಟ್ತಾರಲ್ಲ ಅದುಕ್ಕೆ ಬದ್ಲಿ ಇದೆಲ್ಲಾ ಉಪಾಯ್ವ ಮಾಡ್ಕಂಬಾದು.

ಗದ್ವಾಲಮ್ಮ‌- ಗೌತಲಮ್ಮ ಬಂದ್ರೆ

ಕೆನ್ನೆಗ್ಳು, ಗಡ್ಡ(ಗದ್ದ) ಆಂಜನೇಯನ ಮೂತಿ ಅಂಗೇ ಊದ್ಕಂತವೆ. ಆಗ ಗದ್ವಾಲಮ್ಮ ಗೌತಲಮ್ಮ‌ ಬಂದೌಳೆ ಅಂಬ್ತ ಅಂತಾರೆ. ಒಣಗಿದ ಸೋರೆಕಾಯಿ ತಂದು ಸಣ್ಣ ಚಕ್ಕೆ ಕತ್ತರ್ಸಿ, ನಡು‌ಮದ್ಯ ಒಂದು ತೂತು ಕೊರ್ದು, ದಾರ ಏರ್ಸಿ ಕೊಳ್ಳಿಗೆ(ಕೊರಳಿಗೆ) ನೇತಾಕ್ತಾರೆ.

ಎಮ್ಮೆ ಸೆಗಣಿ ತಂದು ಬಿಸಿ ಮಾಡಿ(ಈಗೆಲ್ಲಾ ಗ್ಯಾಸ್ ಒಲೇನಾಗೇ ಬಿಸಿ ಮಾಡ್ತಾರೆ) ಊದ್ಕಂಡಿರೋ ಜಾಗ್ದಾಗೆ ಸವುರ್ತಾರೆ.(ಸವರಿ ಗುರುತು‌ ಮಾಡುವುದು) ಆಮ್ಯಾಲೆ ಕಬ್ಬಿಣ ತಕಂಡು ನಿವಾಳಿಸ್ತಾರೆ. ಇಂಗೇ ದಿನದಾಗೆ ಐದು ಕಿತ ಮಾಡುದ್ರೆ ಎಲ್ಡು ಮೂರು ದಿನದಾಗೆ ಊತ ಇಳೀತೈತೆ ಅಂಬ್ತಾರೆ. ನಮ್ಮಜ್ಜಿ ಇದುನ್ನ ಮುಚ್ಚಾಪು ಅಂತ್ಲೂ ಅಂತಿದ್ರಪ್ಪ. ಇದ್ಕೂ ಮಂತ್ರ ಹಾಕೋರು. ಜನ ಬಂದು ಹಾಕುಸ್ಕಣಾರು.

ಮಂಡಮ್ಮ‌ ಸಣ್ಣಮ್ಮ‌ ದೊಡ್ಡಮ್ಮ

ಮಕದಾಗೆ ದದ್ದೆ ಬಂದ್ರೆ (ಅಲರ್ಜಿ ಆದ್ರೆ ನಾಕಾಣೆ, ಎಂಟಾಣೆ ಅಗ್ಲದ ಬಿಲ್ಲೆ ಅಂಗೇ ಮಕದ ಮ್ಯಾಗೆ ಅಲ್ಲಲ್ಲಿ ಊದ್ಕಂಡು ಕಡಿತ ಬತ್ತೈತಲ್ಲ ಅದು) ಮಂಡಮ್ಮ ಬಂದೌಳೆ‌ ಅಂತಿದ್ರು. ಮಕದಾಗೆ ತೊಟ್ಟು(ಗುಳ್ಳೆ) ಎದ್ರೆ, (ಚಿಕನ್ ಪಾಕ್ಸ್)ಗಾತ್ರದಾಗೆ ಸಣ್ಣದಾದ್ರೆ ಸಣ್ಣಮ್ಮ, ದೊಡ್ಡ ಗುಳ್ಳೆ ಆದ್ರೆ ದೊಡ್ಡಮ್ಮ‌ ಆಗೈತೆ ಅಂಬ್ತಿದ್ರು. ಮನ್ಯಾಗೆ ದೇವಿ ಕುಂತೌಳೆ ಅಂತಾಲೇ ನಡ್ಕಂತಿದ್ರು. ಇವು ಮೂರೂ ಬಂದೇಟ್ಗೆ ಬಾಗ್ಲು ಮುಂದೇಲೇ ಒಂದು ಗೋಣೀಚೀಲ ಹಾಕೋರು. ಚೆಂದಾಗಿ ಗಂಜಲದಾಗೆ ನೆನಿಸಿ ಹಾಕೋರು.‌ ಹೊರುಗ್ಲಿಂದ ಒಳಿಕ್ಕೆ ಬರೋರು ಅದ್ನ ಮೆಟ್ಕಂಡೇ ಬರ್ಬೇಕು. ಆಗ ದ್ಯಾವ್ರಿಗೆ(ಅಮ್ಮಂಗೆ) ಅಪಚಾರ, ಮೈಲಿಗೆ ಆಗಾಕಿಲ್ಲ ಅನ್ನೋರು. ಅಂಗಳದಾಗೇ ಕಾಲು ಕೈ ತೊಳ್ಕಂಡೇಯಾ ಒಳೀಕ್ ಬರ್ಬೇಕು. ಅಮ್ಮ‌ ಬಂದೋರು ಮನೆಯಿಂದ ಆಚಿಕ್ ಹೋಗಾಂಗಿಲ್ಲ. ಅವ್ರ ಹಾಸ್ಗೇ ದಸೀಲಿ ಬೇವುನ್ ಸೊಪ್ಪು ಹಾಸೋರು. ತಲೇ ದಸೀಲೂ ಬೇವಿನ್ ಸೊಪ್ಪು ಇರ್ತಿತ್ತು. ಸ್ನಾನುಕ್ಕೂ ಬೇವಿನ್ ಸೊಪ್ಪು. ಅದ್ರಾಗೂ ಮೂರ್ ದಿನ ಮೈಮ್ಯಾಗೆ ನೀರು ಹಾಕ್ತಿರ್ಲಿಲ್ಲ. ಆಮ್ಯಾಗೆ ಬೇವಿನ್ ಸೊಪ್ಪು ರುಬ್ಬಿ ಮೈಗೆಲ್ಲ ಬಳ್ದು, ಅಮ್ಮಂಗೆ ಶಾಂತಿ ಮಾಡಿ ನೀರು ಹಾಕೋರು. ಮಾರಮ್ಮಂಗೆ ಹರಕೆ ಹೊತ್ತು ಮಸ್ರನ್ನ (ಮೊಸರನ್ನ) ಕೊಟ್ಟು ಬರೋರು.‌

ಕಾಲ್ರಂಜು(ಕಾಲರಂಜು)

ಕಾಲುಧೂಳು ಅಂಬ್ತಾಲೂ ಕರೀತಾರೆ. ಮಕ್ಳು ದೊಡ್ಡೋರು ಎಲ್ಲಾರ್ಗೂ ಆಗ್ತೈತೆ. ಊಟ ತಿಂಡಿ ಬ್ಯಾಡ ಅನ್ಸತೈತೆ.‌ ಹೊಟ್ಟೆ ನೋವೂ ಬತ್ತೈತೆ. ಹೊಟ್ಟೆ ಉಬ್ಬರವೂ ಆಗ್ತೈತೆ. ಅದ್ ಯಾಕೆ ಅಂಗೆ ಆಗ್ತೈತೆ ಅಂಬೋದ್ಕೆ ಹಿರೀಕ್ರು ಕೊಡ್ತಿದ್ದ ಕಾರ್ಣ ಬೋ ಇಸೇಸವಾಗಿತ್ತು.

ನಾವು ಉಣ್ಣಾವಾಗ ಒಂದು ಕಡಿಕ್ಕೆ ಕುಂತು ಉಂಡು, ಗೋಮೆ ಇಕ್ಕಿ ಎದ್ದೇಳ್ ಬೇಕು. ಅದ್ ಬುಟ್ಟಿ ಓಡಾಡೋ ಜಾಗದಾಗೆ ಉಂಡ್ರೆ, ತಟ್ಟೆಗ್ಳಾಗಿಂದ ಮುಸ್ರೆ ಪಸ್ರೆ ಚೆಲ್ಲಾಕಿಲ್ವೇ? ಅದುನ್ನ ಯಾರಾನಾ ತುಳುದ್ರೆ ಕಾಲ ರಂಜು ಆಗ್ತೈತೆ ಅಂತಿದ್ರು. ಭೂಮ್ತಾಯಿ ಕೊಡಾ ಅನ್ನವಾ ಅಂಗೆ ಮರ್ವಾದೆ ಇಲ್ದಂಗೆ ಚೆಲ್ಲೀರೆ, ಅದ್ನ ತುಳ್ದು ಪಳ್ದು ಮಾಡೀರೆ ನಮ್ಗೆ ಒಳ್ಳೇದಾಯ್ತೈತೆ? ಅಂಬೋರು. ಇದೂ ಒಂತರಾ ದಿಟವೇಯಾ. ಕಿಲೀನ್ ಆಗಿರ್ಬೇಕು ಅಂಬ್ತ ಪಾಠ ಹೇಳ್ತೈತೆ. ಭೂಮ್ತಾಯಿ ಕೊಡಾ ಪ್ರಸಾದ್ವ ಚೆಲ್ಬಾರ್ದು ಅಂತ್ಲೂ ಹೇಳ್ತೈತೆ. ಸುಮ್ಕೇ ಯೋಳೀರೆ ಯಾರ್ ಕೇಳ್ತಾರೆ? ಎದುರ್ಸಿ ಅಂಗೇ ಅಂಕೇನಾಗೆ ಇಟ್ಕಣಾರು ಕಣೇಳಿ. ಓಡಾಡ್ಕಂಡು ಉಣ್ಣಬಾರ್ದು. ಒಂದು ಕಡೆ ಕುಂತು ಉಣ್ಣಬೇಕು ಅಂಬೋದ್ನ ಇಂಗೆ ಯೋಳ್ತಿದ್ರು. ಈ ಕಾಲರಂಜ್ನ ತೆಗ್ಯಾ ಸಂಗ್ತಿ ಬೇಸಾಗೈತೆ.

ಒಂದು ಅಗ್ಲ ಇರಾ ಬಟ್ಟಲಾಗೆ ಇಲ್ಲ ತಟ್ಟೇನಾಗೆ ಮುದ್ದೆಗೆ ಇಕ್ಕಿ ಮಿಕ್ಕಿರಾ ಎಸ್ರು ನೀರು ಹಾಕಿ, ಶಾಸ್ತ್ರುಕ್ಕೆ ವಸಿ ಇದ್ದಿಲು ಪುಡಿ ಹಾಕ್ಬೇಕು. ಆಗೆಲ್ಲಾ ಇದ್ಲು ಒಲೇ ಒಳ್ಗೆ ಸದಾ ಇರ್ತಿತ್ತು. ಈಗ ಕಾಲ ರಂಜು ತೆಗ್ಯಾಕೇಂತ್ಲೇ ಅಂಗಳದಾಗೆ ವಸಿ ಸಣ್ಣದಾಗೆ ಬೆಂಕಿ ಹಾಕಿ ಇದ್ಲು ಮಾಡ್ತಾರೆ. ಆಮ್ಯಾಗೆ ನಿಗಿ ನಿಗಿ ಅಂಬೋ ಕೆಂಡವೂ ಬೇಕಾಗ್ತೈತೆ. ಎಲ್ಡುಕ್ಕೂ ಆಗ್ತೈತೆ ಅಂಬ್ತ ಅಂಗೇ ಮಾಡ್ತಾರೆ. ತೀರಾ ಆಗ್ದಿದ್ರೆ ಗ್ಯಾಸ್ ಒಲೇನಾಗೇ ತೆಂಗಿನ್ ಚಿಪ್ಪು ಕಾಸಿ ಕೆಂಡ ಮಾಡ್ತಾರೆ. ಒಂದು ಸಣ್ಣ ಚೊಂಬು ತಕಂಡು ಅದ್ರಾಗೆ ನಿಗಿ ನಿಗಿ ಅಂತಿರೋ ಕೆಂಡದ ತುಂಡುಗ್ಳು ಹಾಕಿ, ಬಿಸಿ ಚೊಂಬ್ನ ಬಡಬಡಾಂತ ಮೂರು ದಪ ಮ್ಯಾಗ್ಲಿಂದ ಕೆಳ್ಗೆ ನಿವಾಳ್ಸಿ (ದಿಕ್ಕುದಿಕ್ಕಿಗೂ ತೋರ್ಸಿ ನಿವಾಳ್ಸಾದ್ರಿಂದ ತೆಲುಗಿನಾಗೆ ದಿಗದೀಸೋದು ಅಂಬ್ತಾಲೂ ಕರೀತಾರೆ) ಕೆಳ್ಗೆ ತಟ್ಟೆನೋ ಬಟ್ಲೋ ಮಡಗಿರ್ತಾರಲ್ಲಾ, ಅದ್ರಾಗೆ ರಪಕ್ಕಂತ ಗುಬುರಾಕ್ತಾರೆ. ಬಿಸಿಯಾಗಿರಾ ಕೆಂಡ ಸರ್ರಂತ ನೀರು ಹೀರ್ಕಂಡ್ರೆ, ನಿವಾಳಿಸಿದ ಅಜ್ಜಿ ನೋಡು ನಾ ಯೋಳ್ಳಿಲ್ವೇ ಕಾಲರಂಜು ಆಗೇದೇ ಅಂಬ್ತ. ಎಂಗೆ ಗಟ್ಗಟಾಂತ ನೀರು ಕುಡೀತು ನೋಡಮ್ಮಿ ಅಂಬೋರು. ನಾವೂ ದಿಟವೇ ಅನ್ ಕಂಡು ಯಪ್ಪಾ ಇನ್ನ ಮ್ಯಾಗೆ ನೆಟ್ಟುಗೆ ಅಜ್ಜಿ ಯೋಳ್ದಂಗೆ ಒಂದ್ ಕಡೆ ಕುಂತು ಉಣ್ಣೋದೇ ಸೈ ಅನ್ ಕಂತಾ ಎದ್ದೋಗೋದು.

ಉಸ್ರು ಹಿಡ್ಕಂಡ್ರೆ…

ಒನ್ನೊಂದು ಕಿತ ಇದ್ದುಕ್ಕಿದ್ದಂಗೇಯಾ ಉಸ್ರು ಸಿಗಾಕ್ಕಂಡು ನೋವಾಗ್ತೈತಲ್ಲ. ಎದ್ಯಾಗೋ, ಬೆನ್ನಾಗೋ, ಸೊಂಟದಾಗೋ ಉಸ್ರು ಹಿಡ್ಕಂಡ್ರೆ ಇಂಗೆ ಮಾಡ್ತಿದ್ರು. ಒಂದು ಸಣ್ಣ ಪಂಚಾತ್ರೆ(ಚಿಕ್ಕ ಬಾಯಿ ಇರಾ ಬಟ್ಟಲು) ತಕಂಡು ಅದ್ರ ಕಂಠಕ್ಕೆ ಹರಳೆಣ್ಣೆ ಬಳ್ಯೋರು. ಯಾವ್ ಜಾಗ್ದಾಗೆ ಉಸ್ರು ಹಿಡ್ಕಂಡೈತೆ ಅಲ್ಲೂ ವಸಿ ಹಳ್ಳೆಣ್ಣೆ ಬಿಸಿ ಮಾಡಿ ಸವರೋರು.‌ ಈಸೇ ಈಸು ಹತ್ತಿ ಚೂರು ತಕಂಡು ದೀಪುಕ್ಕೆ ಚೂರೇ ಚೂರು ತಗುಲ್ಸಿದ್ರೆ ಸಾಕು ಬೆಂಕಿ ಚರ ಚರ ಅಂಬೋದು. ತಕ್ಸುಣ ಅದ್ನ ಪಂಚಪಾತ್ರೆ ಒಳಿಗಾಕಿ ಉಸ್ರು ಹಿಡ್ಕಂಡಿರಾ ಜಾಗ್ದಾಗೆ ಗುಬುರಿಸಿದ್ರೆ ಬಿಗಿಯಾಗಿ ಹಿಡ್ಕಂತಿತ್ತು‌. ವಸಿ ಹೊತ್ತು ಅಂಗೇ ಬುಟ್ಟು ಆಮ್ಯಾಕೆ ಆ ಬಟ್ಲ ಕಿತ್ತು ತೆಗೀಬೇಕು. ಅಲ್ಲಿಗಂಟ ಅದು ಅಂಗೇ ಮೈಯಾಗೆ ಮೆತ್ತಿಕಂಡು ಇರತೈತೆ. ಮರ್ತು ಗಿರ್ತು ಸ್ಯಾನೆ ಹೊತ್ತು ಏನಾರಾ ಬಿಟ್ರೋ ಬಿಸೀ ತಗ್ಲಿ ಬೊಬ್ಬೆ ಬತ್ತವೆ. ಒನ್ನೊಂದು ಕಿತ ಅಮ್ಮಂದ್ರು ಬಟ್ಟಲು ಗುಬುರಾಕಿ ಕೆಲ್ಸದಾಗೆ ಮುಣುಗೋಗೋರು. ಆಗ ಇಂತಾವೂ ಆಗ್ತಿತ್ತು.‌ ಆಮ್ಯಾಕೆ ಆ ಮಕ್ಕಳಿಗೆ ಔಸ್ದಿ ಹಚ್ಚಿ ರಿಪೇರಿ ಮಾಡ್ತಿದ್ದಿದ್ದೂ ಅವ್ರೇಯಾ. ತಿನ್ನಾಕೇನಾರಾ ಕೊಟ್ಟು ಸುಮ್ಕಾಗಿಸ್ತಿದ್ರು ಅನ್ನಿ.

ಎಳೇಕೂಸುಗ್ಳಿಗೆ ಸಂದು ಆದ್ರೆ …

ಇದ್ನ ಬಾಲಗ್ರಹ ಅಂತ್ಲೂ ಅನ್ನೋರು. ವರ್ಸದೊಳಗಿನ ಮಕ್ಳಿಗೆ ಆಗ್ತಿತ್ತು. ವಾಂತಿ ಭೇದಿ ಆದ್ರೆ, ಜರ ಬಂದು ಕಣ್ಣು ರೆಪ್ಪೆ ಸೇಂಡ್ರಿಸಿಕೊಂಡಿದ್ರೆ (ಕಣ್ಣು ಊತ ಬಂದು ರೆಪ್ಪೆ ನಿಗುರಿದಂಗೆ‌ ನಿಂತಿದ್ರೆ) ಅವುಕ್ಕೆ ಸಂದು ಆಗೈತೆ ಅಂಬ್ತ ಲೆಕ್ಕ. ದಿಷ್ಟಿ ನಿವಾಳ್ಸಿದ್ರೆ ಸರೋಯ್ತೈತೆ ಅಂಬ್ತ ಯೋಳೋರು. ಈ ದಿಷ್ಟಿ ತೆಗ್ಯಾದೂ ಆಸು ಸಲೀಸಲ್ಲ. ಮೂರು ರಕ ಅನ್ನ ಬೇಕು. ಅನ್ನ ಬೇಯ್ಸಿ, ಮೂರು ಭಾಗ ಮಾಡ್ಬೇಕು. ಅದ್ರಾಗೆ ಒಂದುಕ್ಕೆ ಅರ್ಸಣ, ಇನ್ನೊಂದುಕ್ಕೆ ಕುಂಕ್ಮ ಕಲ್ಸೀರೆ ಎರ್ಡು ರಕ ಆಯ್ತು. ಇನ್ನೊಂದು ಕರೇ ಅನ್ನ ಬೇಕು. ಅದ್ಕೇ ವಸಿ ಇಜ್ಜಿಲು ಪುಡಿ ಹಾಕಿ ಕಲ್ಸಿದ್ರೆ ಮುಗೀತು ಕರೇ ಅನ್ವೂ ರೆಡಿ ಆಕ್ತಿತ್ತು. ಇಜ್ಜಿಲು ಇಲ್ದಿದ್ರೆ ಒಲೇಗ್ಳಾಗಿ‌ನ್ ಬೂದಿ ಆದ್ರೂ ಕಲುಸ್ತಿದ್ರು. ಮಗೂನ ಕರ್ಕೋ ಹೋಗಿ ಮೂರು ದಾರಿ ಕೂಡೋ ಕಡೆ ಕುಂಡ್ರಿಸಿ, ಅನ್ನ ನಿವಾಳ್ಸಿ ಮೂರು ದಿಕ್ಕಿಗೂ ಎಸ್ಯೋರು. ಮೂರೂ ದಿಕ್ಕಿನಾಗಿರೋ ಎಕ್ಕದ ಗಿಡ ಹುಡುಕುಡುಕಿ ಅದ್ರ ಅಡೀಕೂ ವಸಿ ಅನ್ನ ಇಕ್ಕಿ ಬರಾದು. ಇಂಗೆ ಮಾಡುದ್ರೆ ಮಗೀಗೆ ಅಮರಿಕೊಂಡಿರೋ ಬಾಲಗ್ರಹ ದಿಕ್ಕು ದೆಸೆ ಇಲ್ದೆ ಓಡೋಯ್ತೈತೆ ಅಂಬೋರು.

ಕೂಸುಗ್ಳಿಗೆ ನೆಗಡಿ ಕಫ಼ ಹತ್ತಿದ್ರೆ…

ಅರಿಶನದ ಕೊನೆ( ಕೊಂಬು), ಜಾಕಾಯಿ ಸೇರ್ಸಿ ಚೆಂದಾಗಿ ನೂರುತ್ತಿದ್ರು(ಕುಟ್ಟಿ). ಇಳ್ಳೇದೆಲೆಯ ದೀಪದಾಗೆ ಕಾಯಿಸಿ ಅದ್ರ ಮ್ಯಾಗೆ ಈ ಕುಟ್ಟಿರಾ ಪುಡಿ ಹರಡಿ ಪಣೆ(ಹಣೆ) ಮೇಲೆ ಇಭೂತಿ ತರ ಮೆತ್ತುತಿದ್ರು.‌ ದೊಡ್ಡೋರ್ಗೆ ಸ್ಯಾನೆ ತಲೆನೋವು ಬಂದ್ರೆ ಸೈತ ಇಳ್ಳೇದೆಲೆಯ ಸಣ್ಣ ತುಂಡು ಮಾಡ್ಕಂಡು, ನೀರಾಗೆ ಅದ್ದಿ ಹಣೆ ನಡುಮಧ್ಯದಾಗೆ, ಅಕ್ಕ ಪಕ್ಕದಾಗೆ ಮೆತ್ತೋರು.‌ ನೋವು ಕಮ್ಮಿ ಆದ್‌ಮೇಲೆ ಅದೇ ಉದ್ರೋಯ್ತೈತೆ ಅಂತ ನಂಬೋರು. ಆದ್ರೆ ನೀರು ಒಣಗಿ ಬಿದ್ದೋಗೋದು. ಅಷ್ಟರಾಗೆ ಇನ್ನ್ಯಾತರದೋ ಔಷ್ದಿ ಆಗ್ತಿತ್ತಲ್ಲ. ತಲೆನೋವು ಮೇಲಾಗಿರೋದು.(ವಾಸಿ) ಇನ್ನಾ ಅಂಗೇ ಇದ್ರೆ ಇನ್ನೊಂದು ‌ಕಿತ ನೀರ್ನಾಗೆ ಅದ್ದಿ ತಿರ್ಗಾ ಮೆತ್ತಿಕಣಾದು.

ಮಕ್ಳು ರಚ್ಚೆ ಹಿಡುದ್ರೆ

ಮಕ್ಳು ರಚ್ಚೆ ಹಿಡುದ್ರೆ ಕೆಂಪು ನೀರು ಅಂಬ್ತ ದಿಷ್ಟಿ ತೆಗೆಯೋರು. ಚೊಂಬಾಗೆ ನೀರು, ಸುಣ್ಣ, ಅರ್ಸಣ, ಇಳ್ಳೆದೆಲೆ ತೊಟ, ಕುಂಕ್ಮ ಹಾಕಿ ನಿವಾಳ್ಸಿ ಮೂರು ದಾರಿ ಕೂಡೋ ರಸ್ತೇನಾಗೆ ಉದ್ದೂಕೆ ಚೆಲ್ಲಿ ಬರೋರು.

ತೀರಾ ರಚ್ಚೆ ನಿಲ್ದಿದ್ರೆ, ಹೊಟ್ಟೆ ಗಿಟ್ಟೆ ನೋವಾಗಿ ಅಳ್ತಾಲೇ ಇದ್ರೆ ಇನ್ನೊಂದು ರಕಮು ಮಾಡ್ತಿದ್ರು. ಮಟ ಮಟ‌ ಮದ್ಯಾನ ಹನ್ನೆಲ್ಡು ಗಂಟೆ ಹೊತ್ನಾಗೆ ಮನೆ ಮುಂದ್ಲಾಗಡೆ ಅಷ್ಟಗಲ ಜಾಗ್ವ ಸಾರ್ಸಿ, ರಂಗೋಲಿ ಇಕ್ಕೋದು. ಅದ್ರ ಮ್ಯಾಗೆ ಮೂರು ಎಕ್ಕದೆಲೆ ಇಕ್ಕಿ ಚೊಂಬಿನಾಗೆ ಕೆಂಪು ನೀರು ಮಾಡಿ ದಿಗದೀಸಿ, ಆ ಎಲೆ ಮ್ಯಾಗೆ ಗುಬ್ರಾಕೀರೆ ಸಂಜೆಗಂಟ ಅಂಗೇ ಬಿಡ್ಬೇಕು. ಇದ್ನ ಎಳೇ ಮಕ್ಕುಳ್ಗೆ ಮಾತ್ರ ಅಲ್ಲ ದೊಡ್ಡ ಮಕ್ಳುಗೂ ಸಾಮಾನ್ಯುಕ್ಕೆ ಮಂಗಳವಾರ, ಶುಕ್ರವಾರ ಇಲ್ಲಾ ಅಮಾಸೇನಾಗೆ ಎಲ್ಲಾನಾ ಬಿದ್ದು ಗಿದ್ದು ಗಾಯ ಮಾಡ್ಕಂಡು ಬಂದ್ರೆ, ರಾತ್ರಿ ಮನಗಿರಾವಾಗ ಹಲ್ಲು ಕಡಿಯೋದು, ಮಿಟ್ಟಿ(ದಿಗಿಲು) ಬೀಳೋದು ಆದ್ರೆ ಮಾಡ್ತಿದ್ರು.

ಒಂದಿಪ್ಪತ್ತು ಪರಕೆ ಕಡ್ಡಿ ತಕಂಡು ನಿವಾಳ್ಸಿ ಆಮ್ಯಾಕೆ ಅದುಕ್ಕೆ ಬೆಂಕಿ ಹಚ್ಚಿ ಇನ್ನೊಂದು ಕಿತ ನಿವಾಳ್ಸಿ ಬಾಗಿಲ ಸಂದೀನಾಗೆ ಇಕ್ಕಿದ್ರೆ ಆ ಕಡ್ಡಿಗ್ಳು ಚಟಪಟಾಂತ ಸದ್ದು ಮಾಡ್ಕಂಡು ಉರೀತಿದ್ರೆ, ಸದ್ದು ಜಾಸ್ತಿ ಬಂದಷ್ಟೂ ದಿಷ್ಟಿ ಜಾಸ್ತಿ ಆಗೈತೆ ಅಂತ ಯೋಳೋರು. ಮೂರು ದಿಕ್ಕು ಕೂಡೋ ರಸ್ತೇನಾಗೆ ಕುಂಡ್ರಿಸಿ ಮಣ್ಣು ನಿವಾಳ್ಸಿ ಮೂರು ದಿಕ್ಕಿಗೂ ಎಸ್ದು, ನಾಯಿ ಕಣ್ಣು ನರಿ ಕಣ್ಣು ನನ್ನ ಕಣ್ಣು ನಿನ್ನ ಕಣ್ಣು ಮನೆಯೋರ್ ಕಣ್ಣು, ಊರೋರ ಕಣ್ಣು, ಗೂಬೆ ಕಣ್ಣು ದ್ರಾಬೆ ಕಣ್ಣು ಎಲ್ಲಾ ಹಾಳಾಗೋಗ್ಲಿ ಅಂತ ಯೋಳ್ಕಂಡು ಥೂ ಥೂ ಅಂತ ಮೂರು ಕಿತ ಉಗ್ದು, ಮಕ್ಕುಳ್ ಕೈಯಾಗೂ ಉಗ್ಸಿ, ಕರ್ಕಾ ಬಂದು ಮನೆ ಹೊರ್ಗೇ ಕಾಲು ತೊಳ್ಸಿ ಒಳೀಕ್ಕೆ ಹೋಗೋರು.

ನಂಜು ಮಾತ್ರೆ

ನಮ್ಮ ರುಕ್ಮಿಣಮ್ಮಜ್ಜಿ(ಅಮ್ಮಮ್ಮ) ನಂಜು ಮಾತ್ರೆ ಅಂಬ್ತ ಮಾಡೋರು. ಸ್ಯಾನೆ ಸೀತ ಆಗಿ ಕಫ಼ ಕಟ್ಟಿ ತಲೆ ಎಲ್ಲ ಭಾರವಾಗಿದ್ರೆ ಈ ನಂಜು ಮಾತ್ರೆ ಕೊಡೋರು.‌ ಮೈಯಾಗೆ ನಂಜು ಸೇರ್ಕಂಡೈತೆ. ಅದ್ನ ನಂಜಿನಾಗೇ ತೆಗೀಬೇಕು ಅಂಬ್ತ ನಂಜು ಮಾತ್ರೆ ಕೊಡಾರು. ಇದ್ನ ಮಾಡಾ ಇಧಾನ್ವೂ ನಮ್ಗೂ ಗೊತ್ತಿತ್ತು. ನಾವೂ ಅಜ್ಜಿ ಜತ್ಯಾಗೆ ಕುಂತು ಮಾಡೀವು.‌ ನಮ್ಮೂರ್ನಾಗೂ ಅಜ್ಜಿ ಮಾತ್ರೇಗೆ ಸ್ಯಾನೇ ಡಿಮಾಂಡಿತ್ತು. ದೊಡ್ಡೋರು, ಮಕ್ಳು ಎಲ್ಲಾರೂ ತಕಂಡೋಗೋರು. ಕಾಸಿಲ್ಲ, ಕಮಾಯಿಲ್ಲ. ಬಿಟ್ಟಿ ಕೊಡ್ತಿದ್ರು. ಜನುಕ್ಕೆ ಒಳ್ಳೇದಾದ್ರೆ ಸಾಕೂಂತ. ಅದ್ಕೇಯಾ ಮನೆ ಕೆಲ್ಸ ಬೊಗ್ಸೆ‌ ಮುಗ್ಸಿ ನಮ್ಮಜ್ಜಿ ಇಂಗೇ ಮಾತ್ರೆ ಔಸ್ದಿ ಅಂತ ಮಾಡಿ ಮಡಗೋರು. ಏಸು ಊರುಗ್ಳಿಗೆ ಕಳ್ಸೋರು. ತಕಂಡು ಮೇಲಾದೋರು ಅಜ್ಜಿ ಊರಿಗ್ ಬಂದಾಗ ಮನೆಗ್ ಬಂದು‌ ಮಾತಾಡ್ಸಿ, ಮಾತ್ರೆ ಈಸ್ಕಂಡು ಹೋಗೋರು. ನಾವೂ ಮನ್ಯಾಗೆ ಸಣ್ಣ ಡಬ್ಬದಾಗೇ ಮಡಿಗಿರ್ತಿದ್ವಿ. ಒಂದು ಸಣ್ಣಬಟ್ಲು ರಾಗಿಹಿಟ್ಟಿಗೆ ಒಂದು ಬೆಲ್ಲದುಂಡೆ ಅಷ್ಟು ಮುಸಾಂಬ್ರ(ಗ್ರಂಧಿಗೆ ಅಂಗಡೀಲಿ ಸಿಕ್ತೈತೆ) ಸೇರುಸ್ತಿದ್ರು. ಅದೂ ಸಾಮ್ರಾಣಿ ತರುಕ್ಕೆ ಗಟ್ಟಿ ಇರ್ತಿತ್ತು. ಅದ್ನ ಕುಟ್ಟಿ ನುಣ್ಣುಕ್ಕೆ ಪುಡಿ‌ ಮಾಡಿ ರಾಗಿ ಹಿಟ್ನಾಗೆ ಸೇರ್ಸಿ, ನಿಂಬೆರಸದಾಗೆ ಕಲಸೋರು. ರಾತ್ರಿ ಮನಗೋ ಟೇಮ್ನಾಗೆ ಬಲ್ ಗಟ್ಯಾಗಿ ಕಲ್ಸಿಕ್ಕಿದ್ರೆ, ಬೆಳಿಗ್ಗೆ ಎದ್ದು ಸಣ್ಣ ಸಣ್ಣ ಉಂಡೆ ಮಾಡಾದು.‌ ಉದ್ದಿನಬೇಳೆ ಗಾತ್ರದೋವು. ಏಸೊತ್ತು ತಕಂಬ್ತಿದ್ರೋ ಆಸು ಸಣ್ಣಗೆ ಮಾಡಾಕೆ. ಅಜ್ಜಿ ಗುಂಡೂರುಕ್ಕೆ ಮಾಡೋರು.‌ ನಾವು ಸುಮ್ಕೇ ಇಂಗನ್ನೀವು. ಅದು ಕೋಲುಕ್ಕೆ ಆಗೋದು. ಸಣ್ಣ ಬಟ್ಲು ಹಿಟ್ನಾಗೆ ಒಂದು ನೂರು ಮಾತ್ರೆ ಆಗೋವೇನೋಪ್ಪ. ಬಿಸಿ ನೀರ್ನಾಗೆ ಮಾತ್ರೆ ತಕಾಬೇಕಿತ್ತು. ಸೊಲ್ಪ ಸೀತ ಇದ್ರೆ ಎಲ್ಡೋ‌ ಮೂರೋ. ಸ್ಯಾನೆ ತಲೆ ಭಾರ‌ ಇದ್ರೆ ನಾಕು‌. ಬಾಣಂತಿ ಸನ್ನಿ ಆದ್ರೂ ಇವುನ್ನೇ‌ ಕೊಡಾರು.‌ ಬಾಣ್ತೀರ್ಗೆ ಸೀತ ಆಗ್ಬಾರದು. ಮೈ ಬೆಚ್ಚಗೇ ಇರ್ಬೇಕು.‌ ಮೈಯಾಗೆ ನಂಜು ಸೇರ್ಕಂಬಾರ್ದು. ಅದ್ಕೇಯಾ ಆಗಾಗ ನಂಜು ಮಾತ್ರೆ ಕೊಡೋರು. ಮೈ ಭಾರ ಅಂದ್ರೆ ಸಾಕು, ಮೈ ಜುಮ್ ಅಂದ್ರೂ ಸಾಕು ಮದ್ಲು ಕೊಡಾರು. ಸಣ್ಣ ಮಕ್ಳಿಗೂ ಒಳಲೇನಾಗೆ ಹಾಕಿ, ಉಗುರು ಬೆಚ್ಚಗಿನ್ ನೀರಾಗೆ ಕುಡ್ಸಾರು.

ಇಂತಾ ನೂರೆಂಟು ಮೂಢನಂಬಿಕೆಗ್ಳು, ಮನೆ ಔಸ್ದಿಗ್ಳು ಆವಾಗ ಜನ್ರನ್ನ ಕಾಯ್ತಿದ್ವು. ಮುಗ್ಧವಾಗಿ ಇವುನ್ನ ನೆಮ್ಮಿಕೊಂಡು ಸಲೀಸಾಗಿ ಬದುಕು ಮಾಡ್ಕಂಡು ಹೋಗೋರು. ಸ್ಯಾನೆ ತಿಳೀದಿರೋರು ಸರಳವಾಗೇ ಬದುಕ್ತಾರೆ. ಚಿಂತೆ ಇಲ್ದೋರ್ಗೆ ಸಂತ್ಯಾಗೂ ನಿದ್ದೆ ಅಂಬಂಗೆ ಇರ್ತಾರೆ ಅಂಬೋದಿಕ್ಕೆ ನನ್ನೂರಿನ್ ಜನ್ವೇ ಸಾಕ್ಷಿಯಾಗಿದ್ರು. ಈಗ್ಲೂ ಈ ಆಚರಣೇಗ್ಳಾಗೆ ಸುಮಾರಷ್ಟು ಮುಂದ್ವರ್ಕೊಂಡೇ ಬಂದೈತೆ‌ ಅಂಬೋದು ಗೊತ್ತಾದ್ ಮ್ಯಾಗೆ ಸೋಜ್ಗ ಅನ್ನುಸ್ತು. ಅದ್ರಾಗೂ ಎಳೇ ಮಕ್ಕುಳ್ಗೆ ಸಂಬಂಧಿಸಿದ್ದು ಮಾತ್ರ ಇವತ್ತಿಗೂ ಅಂಗೇ ಅದಾವೆ ಅಂಬೋದು.‌ ಮಕ್ಳ‌ ಮ್ಯಾಗಿನ್ ಪಿರೂತಿ ಏನ್ ಬೇಕಾರ ಮಾಡುಸ್ತೈತೆ, ಓದ್ದೋರಾದ್ರೂ ಆಟೇಯಾ, ಅರೀದೋರಾದ್ರೂ ಆಟೇಯಾ.. ಮಕ್ಕಳ ಇಸ್ಯಾ ಬಂದ್ರೆ ಎಲ್ರೂ ಒಂದೇಯಾ.

ಮುಂದಿನ್ ಕಿತ ಮಂತ್ರಗ್ಳ ಇಸ್ಯಾ ಯೋಳ್ತೀನಿ. ಎಂತಾ ರಕರಕಮು ಮಂತ್ರಗ್ಳು ಅಂತೀನಿ!!

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ